ವೆರಿಯರ್ ಎಲ್ವಿನ್ ಮತ್ತು ಈಶಾನ್ಯ ರಾಜ್ಯಗಳ ಕುರಿತ ಸತ್ಯ
ಮೇತಿಂಗಳ ಮೊದಲ ವಾರದಲ್ಲಿ ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಭುಗಿಲೆದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಚಾರ ಹರಿದಾಡತೊಡಗಿತು. ‘ನೆಹರೂ ಅವರು ವೆರಿಯರ್ ಎಲ್ವಿನ್ ಅವರೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದರು. ಈ ಒಪ್ಪಂದದ ಪ್ರಕಾರ, ಹಿಂದೂ ಸಾಧುಗಳು ನಾಗಾಲ್ಯಾಂಡ್ ಪ್ರವೇಶಿಸುವುದನ್ನು ನಿಷೇಧಿಸಲಾಯಿತು. ಫಲಿತಾಂಶ: ನೆಹರೂ ಆಳ್ವಿಕೆಯಲ್ಲಿ ನಾಗಾಲ್ಯಾಂಡ್ ಕ್ರೈಸ್ತ ಬಹುಸಂಖ್ಯಾತರ ನೆಲೆಯಾಯಿತು. ಇಂದು, ನಾಗಾಲ್ಯಾಂಡ್ ಶೇ.೮೮ ಕ್ರಿಶ್ಚಿಯನ್ನರನ್ನು ಹೊಂದಿದೆ’ ಎಂಬ ಆ ವಿಚಾರದ ಬಗ್ಗೆ ಹಲವು ಪ್ರಶ್ನೆಗಳು ಬಂದವು.
ನಾನು ೧೯೯೯ರಲ್ಲಿ ವೆರಿಯರ್ ಎಲ್ವಿನ್ ಅವರ ಜೀವನ ಚರಿತ್ರೆಯನ್ನು ಪ್ರಕಟಿಸಿದಾಗಿನಿಂದಲೂ ನನಗೆ ಇದರ ಬಗ್ಗೆ ಪತ್ರ ಬರೆಯುತ್ತಲೇ ಇದ್ದವರಿದ್ದರು. ಸ್ವಾತಂತ್ರ್ಯದ ನಂತರ ನಾಗಾ ದಂಗೆಯಿಂದಾಗಿ ಜನರ ಮುಕ್ತ ಪ್ರವೇಶವನ್ನು ತಡೆಯಲಾಯಿತೇ ಹೊರತು, ನಾಗಾಲ್ಯಾಂಡ್ ಅಥವಾ ಇನ್ನಾವುದರ ಬಗ್ಗೆ ಯಾವುದೇ ‘ನೆಹರೂ-ಎಲ್ವಿನ್ ಒಪ್ಪಂದ’ ಇರಲಿಲ್ಲ ಎಂದು ನಾನು ಉತ್ತರಿಸಿದ್ದಿದೆ. ನೆಹರೂ ಮತ್ತು ಎಲ್ವಿನ್ ಹುಟ್ಟುವ ಮುಂಚೆಯೇ ೧೮೭೦ರ ದಶಕದಿಂದಲೂ ಕ್ರಿಶ್ಚಿಯನ್ ಮಿಷನರಿಗಳು ನಾಗಾ ಬೆಟ್ಟಗಳಲ್ಲಿ ಸಕ್ರಿಯವಾಗಿದ್ದರು ಎಂಬುದನ್ನು ನಾನು ಗಮನಿಸಿದ್ದೇನೆ. ವಾಸ್ತವವಾಗಿ, ಎಲ್ವಿನ್ ಕ್ರಿಶ್ಚಿಯನ್ ಮಿಷನರಿಗಳು ಮತ್ತು ಆರೆಸ್ಸೆಸ್ ಎರಡನ್ನೂ ನಂಬಿದ್ದವರಲ್ಲ. ಬುಡಕಟ್ಟು ಜನಾಂಗದವರು ತಮ್ಮ ಸ್ವಂತ ನಂಬಿಕೆ ಮತ್ತು ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕೇ ಹೊರತು ಹಿಂದೂ ಅಥವಾ ಕ್ರಿಶ್ಚಿಯನ್ ಆಗಬಾರದು ಎಂದು ಎಲ್ವಿನ್ ಬಯಸಿದ್ದರು ಎಂಬ ಮಾತನ್ನೂ ನಾನು ಹೇಳಿದ್ದಿದೆ.
ನಾನು ಸಾಮಾನ್ಯವಾಗಿ ವಾಟ್ಸ್‌ಆ್ಯಪ್ ಸುಳ್ಳುಸುದ್ದಿಗಳ ವಿಚಾರಕ್ಕಾಗಿ ಈ ಸಾರ್ವಜನಿಕ ವೇದಿಕೆಯನ್ನು ಬಳಸುವುದಿಲ್ಲ. ಏಕೆಂದರೆ ಅದರಿಂದ ಹೆಚ್ಚೇನನ್ನೂ ಮಾಡಿದಂತಾಗುವುದಿಲ್ಲ. ಆದರೆ ಇಲ್ಲಿ ಅದನ್ನು ಪ್ರಸ್ತಾಪಿಸುತ್ತಿರುವುದು ಮೂರು ಕಾರಣಗಳಿಗಾಗಿ. ಮೊದಲನೆಯದು, ವೆರಿಯರ್ ಎಲ್ವಿನ್ ಬಗ್ಗೆ ಎಲ್ಲಾ ರೀತಿಯ ಸುಳ್ಳುಗಳನ್ನು ಆನ್‌ಲೈನ್ ಜಗತ್ತು ಹರಡುತ್ತಲೇ ಇದೆ. ನೆಹರೂ ಜೊತೆಗಿನ ಇಲ್ಲದ ಒಪ್ಪಂದದ ವಿಚಾರವಷ್ಟೇ ಅಲ್ಲ, ಈಶಾನ್ಯ ಭಾರತದಾದ್ಯಂತ ಕ್ರಿಶ್ಚಿಯನ್ ಧರ್ಮ ಪ್ರಚಾರದಲ್ಲಿ ಎಲ್ವಿನ್ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಅದೇ ಕೆಲವು ರೀತಿಯಲ್ಲಿ ಮಣಿಪುರದ ಬಹುತೇಕ ಹಿಂದೂ ಮೈತೈಗಳು ಮತ್ತು ಬಹುತೇಕ ಕ್ರಿಶ್ಚಿಯನ್ ಕುಕಿಗಳ ನಡುವಿನ ಸದ್ಯದ ಸಂಘರ್ಷಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಎರಡನೆಯ ಕಾರಣವೆಂದರೆ, ಎಲ್ವಿನ್ ಮರಣಾನಂತರದ ರಾಕ್ಷಸೀ ಪ್ರವೃತ್ತಿ ಹಿಂದೂ ಬಲಪಂಥೀಯ ಪಡೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಅಸ್ಸಾಮ್‌ನ ಮುಖ್ಯಮಂತ್ರಿ ಮತ್ತು ಈಶಾನ್ಯದ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿಯ ಪ್ರಮುಖ ವ್ಯಕ್ತಿ ಎನ್ನಿಸಿರುವ ಹಿಮಂತ ಬಿಸ್ವಾ ಶರ್ಮಾ ಸಹ ಅನುಸರಿಸುತ್ತಾರೆ. ಮೂರನೆಯ ಕಾರಣವೆಂದರೆ, ಹಿಂದುತ್ವವನ್ನು ಹೊರತುಪಡಿಸಿ ಎಲ್ಲಾ ನಂಬಿಕೆಗಳನ್ನು ದ್ವೇಷಿಸುವ ಬಿಜೆಪಿ ಧೋರಣೆಗೆ ವಿರುದ್ಧವಾಗಿ, ಎಲ್ವಿನ್ ಅವರು ಬುಡಕಟ್ಟು ಸಂಸ್ಕೃತಿ ಕುರಿತ ತಮ್ಮ ಆಳವಾದ ಸಹಾನುಭೂತಿಯ ಕಾರಣದಿಂದಾಗಿ ತಮ್ಮದೇ ಆದ ಕ್ರಿಶ್ಚಿಯನ್ ಧರ್ಮವನ್ನೂ ತಿರಸ್ಕರಿಸುವಷ್ಟು ಮುಕ್ತ ಮನಸ್ಸಿನವರಾಗಿದ್ದರು.
ನಾನೀಗ ಎಲ್ವಿನ್ ವಿರುದ್ಧದ ಶರ್ಮಾ ಆರೋಪಗಳ ವಿಚಾರಕ್ಕೆ ಬರುತ್ತೇನೆ. ಅದಕ್ಕೂ ಮೊದಲು ನಾನು ಬರೆದ ಎಲ್ವಿನ್ ಜೀವನ ಚರಿತ್ರೆಯ ಬಗ್ಗೆ ಸಂಕ್ಷಿಪ್ತವಾಗಿ ಅದನ್ನು ಓದಿರದವರಿಗಾಗಿ ಹೇಳುತ್ತೇನೆ. (Savaging the Civilized: Verrier Elwin, His Tribals and India ಎಂಬ ಈ ಕೃತಿ ೨೦೧೧ರಲ್ಲಿ ಎರಡನೇ, ಪರಿಷ್ಕೃತ ಆವೃತ್ತಿಯಾಗಿ ಪ್ರಕಟಗೊಂಡಿದ್ದು, ಈಗಲೂ ಲಭ್ಯವಿದೆ.) ೧೯೦೨ರಲ್ಲಿ ಜನಿಸಿದ ವೆರಿಯರ್ ಎಲ್ವಿನ್ ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣ ಪಡೆದರು. ಅವರು ಭಾರತಕ್ಕೆ ಬಂದದ್ದು ೧೯೨೭ರಲ್ಲಿ. ಕ್ರಿಶ್ಚಿಯನ್ ಧರ್ಮವನ್ನು ಇಲ್ಲಿ ಪ್ರಚುರಪಡಿಸುವುದೇ ಉದ್ದೇಶವಾಗಿತ್ತಾದರೂ, ಮಹಾತ್ಮಾ ಗಾಂಧಿ ಮತ್ತು ಅವರ ವಲಯದಿಂದ ಪ್ರೇರಿತರಾದ ಎಲ್ವಿನ್, ಚರ್ಚ್ ತೊರೆದು ಮಧ್ಯಭಾರತದ ಆದಿವಾಸಿಗಳ ನಡುವೆ ಕೆಲಸ ಮಾಡಲು ಪ್ರಾರಂಭಿಸಿದರು. ೧೯೩೦ ಮತ್ತು ೧೯೪೦ರ ದಶಕದಲ್ಲಿ ಅವರು ಬುಡಕಟ್ಟು ಜೀವನ, ಜಾನಪದ ಮತ್ತು ಕಲೆಯ ಮೇಲೆ ಪ್ರವರ್ತಕ ಜನಾಂಗಶಾಸ್ತ್ರವನ್ನು ಸರಣಿಯಾಗಿ ಬರೆದರು.
ಸ್ವಾತಂತ್ರ್ಯದ ನಂತರ ಎಲ್ವಿನ್ ಭಾರತೀಯ ಪ್ರಜೆಯಾದರು. ೧೯೫೪ರಲ್ಲಿ ಅವರು ಈಶಾನ್ಯ ಗಡಿ ಪ್ರಾಂತ ಅಥವಾ ಎನ್‌ಇಎಫ್‌ಎಗೆ (ಅರುಣಾಚಲ ಪ್ರದೇಶವನ್ನು ಆಗ ಕರೆಯುತ್ತಿದ್ದುದು ಹಾಗೆ) ಮಾನವಶಾಸ್ತ್ರದ ಸಲಹೆಗಾರರಾಗಿ ನೇಮಕಗೊಂಡರು. ಈ ಪ್ರದೇಶ ಭಾರತ ಮತ್ತು ಚೀನಾದ ನಡುವಿನ ಗಡಿಪ್ರದೇಶದಲ್ಲಿದ್ದು, ಭೂಪಟದ ಭಾಗವಾಗದೆ, ಆಡಳಿತಕ್ಕೆ ಒಳಪಡದೆ ಉಳಿದಿತ್ತು. ಬ್ರಿಟಿಷ್ ರಾಜ್ ವಾಸ್ತವಿಕವಾಗಿ ಅಲ್ಲಿ ಅಸ್ತಿತ್ವದಲ್ಲೇ ಇದ್ದಿರಲಿಲ್ಲ. ಎಲ್ವಿನ್ ಅವರ ಜನಾಂಗೀಯ ಪರಿಣತಿ ಅಲ್ಲಿ ವಾಸಿಸುವ ವಿವಿಧ ಬುಡಕಟ್ಟು ಸಮುದಾಯಗಳೊಂದಿಗೆ ಸಂಪರ್ಕಗೊಳ್ಳಲು ಸರಕಾರಕ್ಕೆ ನೆರವಾಗಲಿದೆ ಎಂದು ಆಶಿಸಲಾಗಿತ್ತು.
ಸ್ವಲ್ಪ ಮಟ್ಟಿಗೆ ಅದು ಸಾಧ್ಯವೂ ಆಯಿತು. ಈಶಾನ್ಯ ರಾಜ್ಯಗಳಲ್ಲಿ ಅರುಣಾಚಲದಲ್ಲಿ ಮಾತ್ರ ಯಾವುದೇ ದೊಡ್ಡ ದಂಗೆಯಿಲ್ಲದಿರುವ ಒಂದು ಕಾರಣವೆಂದರೆ, ಎಲ್ವಿನ್ ಮತ್ತು ಅವರ ಸಹೋದ್ಯೋಗಿಗಳು ಭೂಮಿ ಮತ್ತು ಅರಣ್ಯಗಳ ವಿಚಾರದಲ್ಲಿ ಬುಡಕಟ್ಟು ಹಕ್ಕುಗಳನ್ನು ರಕ್ಷಿಸಲು, ವಿವಿಧ ಬುಡಕಟ್ಟುಗಳ ನಡುವೆ ಹಿಂದಿಯನ್ನು ಸಂಪರ್ಕ ಭಾಷೆಯಾಗಿಸಲು ಮತ್ತು ಹಿಂದೂ ಮತ್ತು ಕ್ರಿಶ್ಚಿಯನ್ ಮಿಷನರಿಗಳನ್ನು ಹೊರಗಿಡಲು ಶ್ರಮಿಸಿದ್ದರು.
ಜವಾಹರಲಾಲ್ ನೆಹರೂ ಮರಣ ಹೊಂದುವುದಕ್ಕೆ ಕೆಲ ತಿಂಗಳುಗಳ ಮೊದಲು ಫೆಬ್ರವರಿ ೧೯೬೪ರಲ್ಲಿ ವೆರಿಯರ್ ಎಲ್ವಿನ್ ನಿಧನರಾದರು. ಸುಮಾರು ಆರು ದಶಕಗಳ ನಂತರ ೨೦೨೩ರ ಆಗಸ್ಟ್ ೧೧ರಂದು, ಅಸ್ಸಾಮ್ ಮುಖ್ಯಮಂತ್ರಿ ಹೊಸದಿಲ್ಲಿಯ ಪತ್ರಿಕೆಯೊಂದರಲ್ಲಿ ಪ್ರಕಟಿಸಿದ ಸಹಿಯಿರುವ ಲೇಖನದಲ್ಲಿನ ವಾದ ಹೀಗಿತ್ತು: ‘ಪಂಡಿತ್ ನೆಹರೂ ಅವರು ಯುರೋಪಿಯನ್ ಮೂಲದ ವ್ಯಕ್ತಿಯನ್ನು ಈಶಾನ್ಯದಲ್ಲಿ ತಮ್ಮ ಮೊದಲ ಸಲಹೆಗಾರರನ್ನಾಗಿ ನೇಮಿಸಿದ್ದರು. ರಾಜ್ಯದಲ್ಲಿ ತೈಲ ಸಿಕ್ಕಿದ್ದರೂ ಅಸ್ಸಾಮ್‌ಗೆ ತೈಲ ಸಂಸ್ಕರಣಾಗಾರವನ್ನು ನಿರಾಕರಿಸಲು ಅವರೇ ನೆಹರೂಗೆ ಸಲಹೆ ನೀಡಿದರೆ? ಗೋಪಿನಾಥ್ ಬೊರ್ಡೊಲೊಯ್ ಅವರಿಗೆ ಭಾರತ ರತ್ನವನ್ನು ನಿರಾಕರಿಸುವುದಕ್ಕೂ ಅವರ ಸಲಹೆಯೇ ಕಾರಣವಾಯಿತೆ?’
ಲೇಖನದಲ್ಲಿ ‘ಯುರೋಪಿಯನ್ ಮೂಲದ ವ್ಯಕ್ತಿ’ ಯಾರೆಂಬುದನ್ನು ಉಲ್ಲೇಖಿಸಿರಲಿಲ್ಲ. ಅದಕ್ಕೂ ಮೂರು ದಿನಗಳ ಹಿಂದೆ ಅವರು ಮಾಡಿದ್ದ ಟ್ವೀಟ್‌ನಲ್ಲಿ ಸ್ವಲ್ಪದರಲ್ಲಿಯೇ ಹೀಗೆ ಹೇಳಲಾಗಿತ್ತು: ‘ಪಂಡಿತ್ ನೆಹರೂ ಅವರು ಈಶಾನ್ಯ ವ್ಯವಹಾರಗಳ ಬಗ್ಗೆ ಸರಕಾರಕ್ಕೆ ಸಲಹೆ ನೀಡಲು ಯುರೋಪಿಯನ್ ಮೂಲದ ವೆರಿಯರ್ ಎಲ್ವಿನ್ ಅವರನ್ನು ನೇಮಿಸಿದ್ದರು. ಕಾಂಗ್ರೆಸ್‌ನ ಪ್ರಮಾದಗಳು ಅಲ್ಲಿಂದಲೇ ಶುರುವಾದವು.’
ಕೆಲವು ನಿಜಾಂಶಗಳನ್ನು ಇಲ್ಲಿ ಹೇಳಬೇಕಿದೆ. ನಿಜವಾಗಿ, ವೆರಿಯರ್ ಎಲ್ವಿನ್ ಅವರು ಎನ್‌ಇಎಫ್‌ಎಗೆ ಮಾತ್ರ ಸಲಹೆಗಾರರಾಗಿದ್ದರು; ಈಶಾನ್ಯದ ಯಾವುದೇ ಭಾಗದ ಆಡಳಿತದಲ್ಲಿ ಅವರು ಯಾವುದೇ ಪಾತ್ರವನ್ನು ವಹಿಸಿರಲಿಲ್ಲ. ನಾಗಾಲ್ಯಾಂಡ್, ಮಣಿಪುರ ವಿಚಾರಗಳಲ್ಲಿಯೂ ಅವರಿರಲಿಲ್ಲ. ಇನ್ನು ಅಸ್ಸಾಮ್ ವಿಚಾರದಲ್ಲಂತೂ ಅವರ ಪಾತ್ರ ಏನೇನೂ ಇರಲಿಲ್ಲ. ಆದರೆ ಇಲ್ಲಿ ಅಸ್ಸಾಮ್ ಮುಖ್ಯಮಂತ್ರಿ, ಅಸ್ಸಾಮ್‌ಗೆ ತೈಲ ಸಂಸ್ಕರಣಾಗಾರವನ್ನು ಎಲ್ವಿನ್ ನಿರಾಕರಿಸಿದರು, ಗೋಪಿನಾಥ್ ಬೊರ್ಡೊಲೊಯ್ ಅವರಿಗೆ ಭಾರತರತ್ನ ಕೊಡದಿರಲು ಕಾರಣರಾದರು ಮತ್ತು ಈಶಾನ್ಯದಲ್ಲಿನ (ಬಿಜೆಪಿ ಈಗ ಕಾಂಗ್ರೆಸ್ ವಿರುದ್ಧ ಆರೋಪಿಸುತ್ತಿರುವ) ಎಲ್ಲ ಪ್ರಮಾದಗಳಿಗೂ ಎಲ್ವಿನ್ ಅವರೇ ಮೂಲ ಕಾರಣ ಎಂದು ಹೇಳುತ್ತಿದ್ದಾರೆ.
ನಿಜಾಂಶ ಪರಿಶೀಲನೆಯ ಜೊತೆಗೇ ಸಂದರ್ಭದ ಪರಿಶೀಲನೆ ಇಲ್ಲಿ ಇನ್ನೂ ಹೆಚ್ಚು ಮುಖ್ಯ. ಅಸ್ಸಾಮ್ ಸಿಎಂ ಮತ್ತು ಹಿಂದೂ ಬಲಪಂಥೀಯರ ಈ ಇತಿಹಾಸದ ವಿದ್ಯಮಾನಗಳ ಕುರಿತ ವಾಟ್ಸ್‌ಆ್ಯಪ್ ಆರೋಪಗಳು ಮೂಲಭೂತವಾಗಿ ಸಿನಿಕತನದವು ಮತ್ತು ಬಹುಶಃ ದುರುದ್ದೇಶಪೂರಿತ. ಈಶಾನ್ಯದ ಕುರಿತ ಚರ್ಚೆಯನ್ನು ಪ್ರಸಕ್ತ ವಿದ್ಯಮಾನಗಳನ್ನು ಮರೆಮಾಚುವುದಕ್ಕಾಗಿ ಹಿಂದಕ್ಕೆ ಒಯ್ಯುವ ಪ್ರಯತ್ನ. ಮೂರು ತಿಂಗಳಿಗೂ ಹೆಚ್ಚು ಕಾಲದಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಜನಾಂಗೀಯ ಸಂಘರ್ಷಕ್ಕೆ ಯಾವುದೇ ಪರಿಹಾರವಿಲ್ಲವೇನೋ ಎಂಬಂತೆ ತೋರುತ್ತಿದೆ. ಈ ನಡುವೆಯೇ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿಯೂ ಇದರ ಚಿಂತಾಜನಕ ಪರಿಣಾಮಗಳು ಕಾಣಿಸುತ್ತಿವೆ.
ಮಣಿಪುರದಲ್ಲಿನ ಹಿಂಸಾಚಾರ ಮತ್ತು ಸಂಕಷ್ಟದ ಹೊಣೆಗಾರಿಕೆ ಮತ್ತು ಒಟ್ಟಾರೆಯಾಗಿ ಈಶಾನ್ಯದಲ್ಲಿ ಹೆಚ್ಚುತ್ತಿರುವ ದುರ್ಬಲ ಪರಿಸ್ಥಿತಿ ಸಂಪೂರ್ಣವಾಗಿ ಡಬಲ್ ಇಂಜಿನ್ ಸರಕಾರದ್ದೇ ಆಗಿದೆ. ಕಳೆದ ಹಲವು ವರ್ಷಗಳಿಂದ ರಾಜ್ಯ ಮತ್ತು ಕೇಂದ್ರದಲ್ಲಿ ಇರುವುದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ರಕ್ತಸಿಕ್ತ ಸಂಘರ್ಷವನ್ನು ತಡೆಯುವಲ್ಲಿ ವಿಫಲವಾದ ಮೂವರು ವ್ಯಕ್ತಿಗಳು ಮಣಿಪುರ ಮುಖ್ಯಮಂತ್ರಿ, ಕೇಂದ್ರ ಗೃಹ ಸಚಿವ ಮತ್ತು ಪ್ರಧಾನ ಮಂತ್ರಿ. ಈ ಪ್ರದೇಶದ ಆಡಳಿತ ಪಕ್ಷದ ‘ಟ್ರಬಲ್‌ಶೂಟರ್’ ಆಗಿ ಅಸ್ಸಾಮ್ ಮುಖ್ಯಮಂತ್ರಿ ಆರೋಪಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಮಣಿಪುರದಲ್ಲಿ ಸಂಭವಿಸಿದ ದುರಂತದ ಹೊಣೆಗಾರಿಕೆಯಿಂದ ತನ್ನನ್ನು ಮತ್ತು ತನ್ನ ಪಕ್ಷವನ್ನು ರಕ್ಷಿಸಲು ಅಸ್ಸಾಮ್ ಸಿಎಂ ಈಗ ಎಂದೋ ಮರಣಿಸಿದವರ ಬಗ್ಗೆ ಮತ್ತು ಎಷ್ಟೋ ಹಿಂದಿನ ಕಾಲದ ಬಗ್ಗೆ ಮಾತನಾಡಲು ಹೊರಟಿದ್ದಾರೆ. ಇದು ಅವರಿಗಿಂತ ಮೇಲಿರುವವರು ಮಾಡುತ್ತಿರುವುದರ ಅನುಕರಣೆಯೇ ಆಗಿದೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಕೂಡ ಇಂಥ ಗತಕಾಲದ ವಿಚಾರಗಳ ಕುರಿತ ಆರೋಪಗಳನ್ನೇ ಮಾಡುತ್ತಿರುತ್ತಾರೆ. ಅವರ ಸರಕಾರ ನಾಗರಿಕ ಸ್ವಾತಂತ್ರ್ಯವನ್ನು ನಿಗ್ರಹಿಸುತ್ತಿರುವ ಆರೋಪ ಬಂದ ಕೂಡಲೇ, ಅವರು ಇಂದಿರಾ ಗಾಂಧಿ ಮತ್ತು ೧೯೭೫ರ ತುರ್ತು ಪರಿಸ್ಥಿತಿಯ ವಿಚಾರ ಎತ್ತುತ್ತಾರೆ. ಭಾರತದ ಭೂಪ್ರದೇಶದ ಮೇಲೆ ಚೀನಾ ದೊಡ್ಡ ಪ್ರಮಾಣದ ಆಕ್ರಮಣಗಳನ್ನು ಮಾಡಿರುವುದರ ಬಗ್ಗೆ ನಿರಾಕರಿಸಲಾಗದ ಪುರಾವೆಗಳನ್ನು ಮುಂದಿಟ್ಟ ತಕ್ಷಣ, ಅವರು ಜವಾಹರಲಾಲ್ ನೆಹರೂ ಮತ್ತು ೧೯೬೨ರ ಯುದ್ಧದ ವಿಚಾರ ತೆಗೆಯುತ್ತಾರೆ.
ನಾನು ಕಾಂಗ್ರೆಸಿಗನಲ್ಲ. ಹಾಗಾಗಿ ಆ ಪಕ್ಷದ ಹಿಂದಿನ ಪ್ರಧಾನಿಗಳ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೂ, ವೆರಿಯರ್ ಎಲ್ವಿನ್ ಅವರ ಜೀವನ ಚರಿತ್ರೆಕಾರನಾಗಿ, ಅವರು ಮರಣಾನಂತರದಲ್ಲಿ ಜನರ ತಪ್ಪು ಆರೋಪಗಳಿಗೆ ತುತ್ತಾಗುತ್ತಿರುವಾಗ ಮೌನವಾಗಿರಲು ಸಾಧ್ಯವಿಲ್ಲ. ಆರೋಪಿಸುತ್ತಿರುವವರ ಧರ್ಮಾಂಧತೆ ಮತ್ತು ಅನ್ಯದ್ವೇಷ ಅವರಿಗೆ ಎಲ್ವಿನ್ ಅವರನ್ನು ಅರ್ಥ ಮಾಡಿಕೊಳ್ಳಲು ಬಿಡುತ್ತಿಲ್ಲ. ಒಬ್ಬ ಕ್ರಿಶ್ಚಿಯನ್ ಹೇಗೆ ತನ್ನ ಚರ್ಚ್ ತೊರೆದು ಧಾರ್ಮಿಕ ಬಹುತ್ವವನ್ನು ಸ್ವೀಕರಿಸಬಹುದು ಅಥವಾ ಒಬ್ಬ ವಿದೇಶಿ ವ್ಯಕ್ತಿ ಹೇಗೆ ತನ್ನದೇ ದೇಶವೆಂದು ಭಾವಿಸಿ ಈ ದೇಶಕ್ಕೆ ಅಪಾರ ಕೊಡುಗೆ ನೀಡಬಹುದು ಎಂಬುದನ್ನು ಹೊಗಳಿದ್ದಂತೂ ತೀರಾ ಕಡಿಮೆ.
ಸ್ಪಷ್ಟವಾಗಿ ಹೇಳುವುದಾದರೆ, ವೆರಿಯರ್ ಎಲ್ವಿನ್ ಪರಿಪೂರ್ಣರೇನೂ ಆಗಿರಲಿಲ್ಲ. ಅವರು ತನ್ನ ಜನರ ಬಗ್ಗೆ ವಿಪರೀತ ರಮ್ಯ ಭಾವನೆ ಹೊಂದಿದ್ದಿರಬಹುದು. ಗೊಂಡ ಮಹಿಳೆಯೊಂದಿಗಿನ ಅವರ ಮೊದಲ ಮದುವೆಯ ವೈಫಲ್ಯಕ್ಕೆ ಅವರೇ ಹೆಚ್ಚಾಗಿ ಜವಾಬ್ದಾರರಾಗಿದ್ದರು (ಅವರ ಎರಡನೇ ಮದುವೆ ಕೂಡ ಆದಿವಾಸಿಯೊಂದಿಗೇ ಆಗಿದ್ದರೂ, ಹೆಚ್ಚು ಯಶಸ್ವಿಯಾಯಿತು). ಆದರೂ ಅವರ ಕೆಲಸ ಮತ್ತು ಪರಂಪರೆ ಶಾಶ್ವತ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಮಧ್ಯಭಾರತದಲ್ಲಿನ ಬುಡಕಟ್ಟು ಜೀವನದ ಕುರಿತ ಅವರ ಅಧ್ಯಯನಗಳ ಬರವಣಿಗೆ ಸೊಗಸಾಗಿದೆ ಮತ್ತು ಸೂಕ್ಷ್ಮ ನೋಟಗಳಿವೆ. ಅವರ ಪುಸ್ತಕ ‘A Philosophy for NEFA’ ಬುಡಕಟ್ಟು ಜನಾಂಗದವರನ್ನು ಅವರ ಭೂಮಿ ಮತ್ತು ಕಾಡುಗಳನ್ನು ಕಸಿದುಕೊಳ್ಳದೆ ಅಥವಾ ಅವರ ಸಂಸ್ಕೃತಿಯ ಬಗ್ಗೆ ನಾಚಿಕೆಪಡದೆ ಅವರ ಭೌತಿಕ ಜೀವನವನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತ ಸೂಕ್ತ ಮಾರ್ಗದರ್ಶಿಯಾಗಿ ಉಳಿದಿದೆ.
ಪುಸ್ತಕಗಳು ಮತ್ತು ವಾಟ್ಸ್‌ಆ್ಯಪ್ ಫಾರ್ವರ್ಡ್‌ಗಳಿಗಾಗಿ ಸಮಯವಿರುವವರು ನಾನು ಬರೆದ ಜೀವನ ಚರಿತ್ರೆ ಅಥವಾ ಎಲ್ವಿನ್ ಅವರ ಸ್ವಂತ ಕೃತಿಗಳನ್ನು ಓದಬಹುದು. ಹಿಂದೂ ಬಲಪಂಥೀಯರಿಂದ ತಪ್ಪಾಗಿ ನಿಂದಿಸಲ್ಪಟ್ಟ ವಿದ್ವಾಂಸ ಮತ್ತು ಸರಕಾರಿ ಕೆಲಸದಲ್ಲಿದ್ದವನೊಬ್ಬನ ಭಾರತದ ಕುರಿತ ಬದ್ಧತೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಾಧ್ಯ. ಏನೇ ಇರಲಿ, ಎಲ್ವಿನ್ ಅವರ ದೇಶವಾಸಿಗಳಾಗಿರುವ ಸಮಕಾಲೀನರ ಮೂರು ತೀರ್ಮಾನಗಳೊಂದಿಗೆ ನಾನು ಈ ಅಂಕಣವನ್ನು ಕೊನೆಗೊಳಿಸುತ್ತೇನೆ. ಪ್ರತಿಷ್ಠಿತ ಮಾನವಶಾಸ್ತ್ರಜ್ಞ ಎಸ್.ಸಿ.ದುಬೆ ಬರೆಯುತ್ತಾರೆ: ‘ಎಲ್ವಿನ್ ರೂಕ್ಷ ತಂತ್ರಜ್ಞರಲ್ಲ; ಅವರು ಕವಿ, ಕಲಾವಿದ ಮತ್ತು ದಾರ್ಶನಿಕರಾಗಿದ್ದರು. ಅವರು ತಮ್ಮ ವೈಯಕ್ತಿಕ ಪ್ರಯತ್ನದಿಂದ ದೇಶದ ಅನೇಕ ದುಬಾರಿ ಸಿಬ್ಬಂದಿ ಮತ್ತು ದೊಡ್ಡ ಸಂಶೋಧನಾ ಸಂಸ್ಥೆಗಳಿಗಿಂತಲೂ ಹೆಚ್ಚು ಮತ್ತು ಉತ್ತಮವಾದ ಕೆಲಸವನ್ನು ಮಾಡಿದರು.’ ಎಲ್ವಿನ್ ಅವರ ಮರಣದ ನಂತರ ಅಮೃತ ಬಝಾರ್ ಪತ್ರಿಕೆಯ ಸಂಪಾದಕೀಯ, ‘ಭಾರತ ತನ್ನ ಅತ್ಯಂತ ಪ್ರಖ್ಯಾತ ಮಾನವಶಾಸ್ತ್ರಜ್ಞರನ್ನು ಮಾತ್ರವಲ್ಲದೆ ಈ ದೇಶವನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದ ಮತ್ತು ಅದರ ಜನರೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಂಡಿದ್ದ ಉದಾರವಾದಿ ಮನಸ್ಸಿನ ಆಂಗ್ಲರಲ್ಲಿ ಇನ್ನೊಬ್ಬರನ್ನು ಮತ್ತು ಬಹುಶಃ ಕೊನೆಯವರನ್ನು ಕಳೆದುಕೊಂಡಿದೆ’ ಎಂದು ಹೇಳಿತ್ತು. ಮತ್ತು ಈ ಕೋಲ್ಕತಾ ಪತ್ರಿಕೆಯ ಅದೇ ಸಂಚಿಕೆಯಲ್ಲಿ ಪ್ರಸಿದ್ಧ ಬಂಗಾಳಿ ರಂಗ ಕಂಪೆನಿಯಾದ ಲಿಟಲ್ ಥಿಯೇಟರ್ ಗ್ರೂಪ್‌ನ ಸಿಬ್ಬಂದಿ ನೀಡಿದ್ದ ಶ್ರದ್ಧಾಂಜಲಿ ಮಾತು ಹೀಗಿತ್ತು: ‘ಭಾರತೀಯರ ಅತ್ಯುತ್ತಮವಾದುದೆಲ್ಲವೂ ಆಗಿದ್ದ ಡಾ.ವೆರಿಯರ್ ಎಲ್ವಿನ್ ನೆನಪಿನಲ್ಲಿ.’