2023: ಇಸ್ರೋಗೆ ಹೆಗ್ಗುರುತಾದ ವರ್ಷ
Photo: PTI
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇಸ್ರೋ) ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಾಗಿದೆ. ಭಾರತ ಸೇರಿದಂತೆ ಇಡೀ ಮನುಕುಲಕ್ಕೆ ಬಾಹ್ಯಾಕಾಶದ ಪ್ರಯೋಜನಗಳನ್ನು ಸಂಪಾದಿಸಲು ಕಂಕಣಬದ್ಧವಾಗಿದೆ. ವಿಜ್ಞಾನ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಇಸ್ರೋ, ಜಗತ್ತಿನ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದೆ. ಇದು ಭಾರತ ಸರಕಾರದ ಬಾಹ್ಯಾಕಾಶ ಇಲಾಖೆಯ ಪ್ರಮುಖ ಘಟಕವಾಗಿದೆ. ಭಾರತೀಯ ಬಾಹ್ಯಾಕಾಶ ಇಲಾಖೆಯು ತನ್ನ ಬಾಹ್ಯಾಕಾಶ ಕಾರ್ಯಕ್ರಮವನ್ನು ಪ್ರಾಥಮಿಕವಾಗಿ ಇಸ್ರೋದ ವಿವಿಧ ಕೇಂದ್ರಗಳು ಅಥವಾ ಘಟಕಗಳ ಮೂಲಕ ಕಾರ್ಯಗತಗೊಳಿಸುತ್ತದೆ. 1962ರಲ್ಲಿ ಭಾರತ ಸರಕಾರದಿಂದ ಸ್ಥಾಪಿಸಲ್ಪಟ್ಟ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನೆ ಸಮಿತಿ(ಇನ್ಕಾಸ್ಪರ್) ಹಾಗೂ ಡಾ. ವಿಕ್ರಮ ಸಾರಾಭಾಯ್ ಅವರ ಕಲ್ಪನೆಯಂತೆ ಆಗಸ್ಟ್ 15, 1969ರಂದು ಇಸ್ರೋ ರಚನೆಯಾಯಿತು. ಇಸ್ರೋದ 54 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ 2023 ತುಂಬಾ ಹೆಮ್ಮೆಯ ಹಾಗೂ ಹೆಗ್ಗುರುತು ಮೂಡಿದ ವರ್ಷ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ 2023ರಲ್ಲಿ ಇಡೀ ಜಗತ್ತು ಇಸ್ರೋವನ್ನು ಶ್ಲಾಘಿಸಿದೆ. ಜಗತ್ತಿನ ಶ್ಲಾಘನೆಗೆ ಕಾರಣವೇನೆಂದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಅದೇ ಚಂದ್ರಯಾನ-3ರ ಯಶಸ್ವಿ ಹಾಗೂ ಸೂರ್ಯನತ್ತ ಭಾರತದ ಪ್ರಯಾಣ. ಇಸ್ರೋದ ಪ್ರಯಾಣದಲ್ಲಿ ಈ ವರ್ಷ ದೊಡ್ಡ ಮೈಲಿಗಲ್ಲು ಆಗಿದೆ. ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದೂ ತೀರಾ ಕಡಿಮೆ ಖರ್ಚಿನಲ್ಲಿ ಎಂಬುದು ಮತ್ತೊಂದು ಹೆಗ್ಗಳಿಕೆ. ಇದರ ಜೊತೆಗೆ ಇದೇ ವರ್ಷ ಸೂರ್ಯನನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ನೌಕೆಯನ್ನು ಕಳಿಸಿರುವುದು ಇನ್ನೊಂದು ಪ್ರಯತ್ನಕ್ಕೆ ಬರೆದ ಮುನ್ನುಡಿಯಾಗಿದೆ. 2023ರಲ್ಲಿ ಇಸ್ರೋ ಮಾಡಿದ ಸಾಧನೆಗಳ ಪಟ್ಟಿ ಈ ಕೆಳಗಿನಂತಿದೆ.
ಇಸ್ರೋ-ಮೈಕ್ರೋಸಾಫ್ಟ್ ಸಹಯೋಗ
ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್ ಅಪ್ಗಳ ಬೆಳವಣಿಗೆಗೆ ಉತ್ತೇಜನ ನೀಡಲು ಮತ್ತು ತಂತ್ರಜ್ಞಾನ ಪರಿಕರಗಳು ಮತ್ತು ಪ್ಲಾಟ್ಫಾರ್ಮ್ಗಳು, ಮಾರ್ಗದರ್ಶನ ಮತ್ತು ಮಾರುಕಟ್ಟೆಗೆ ಬೆಂಬಲದೊಂದಿಗೆ ಅವುಗಳನ್ನು ಸಶಕ್ತಗೊಳಿಸುವ ತಿಳಿವಳಿಕೆ ಒಪ್ಪಂದಕ್ಕೆ ಇಸ್ರೋ ಮತ್ತು ಮೈಕ್ರೋಸಾಫ್ಟ್ಗಳು ಒಪ್ಪಿಕೊಂಡು ಜನವರಿ 5, 2023ರಂದು ಸಹಿ ಹಾಕಿದವು. ಭಾರತದಲ್ಲಿನ ಅತ್ಯಂತ ಭರವಸೆಯ ಬಾಹ್ಯಾಕಾಶ ತಂತ್ರಜ್ಞಾನದ ಆವಿಷ್ಕಾರಕರು ಮತ್ತು ಉದ್ಯಮಿಗಳ ಮಾರುಕಟ್ಟೆ ಸಾಮರ್ಥ್ಯವನ್ನು ಬಳಸಿಕೊಳ್ಳುವ ಇಸ್ರೋದ ದೃಷ್ಟಿಯನ್ನು ಬಲಪಡಿಸುವುದು ಸಹಯೋಗದ ಗುರಿಯಾಗಿದೆ.
ಎಸ್.ಎಸ್.ಎಲ್.ವಿ-ಡಿ2
ಸಣ್ಣ ಉಪಗ್ರಹ ಉಡಾವಣಾ ವಾಹನದ (ಎಸ್.ಎಸ್.ಎಲ್.ವಿ) ಇಸ್ರೋದ ಅತ್ಯಂತ ಚಿಕ್ಕ ಉಡಾವಣಾ ವಾಹನವಾಗಿದೆ. ಎಸ್.ಎಸ್.ಎಲ್.ವಿ-ಡಿ2 ಅಥವಾ ಇಒಎಸ್-07 ಹೆಸರಿನ ಮಿಷನ್ನ್ನು 10ನೇ ಫೆಬ್ರವರಿ 2023ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್ನಿಂದ ಉಡಾವಣೆ ಮಾಡಲಾಯಿತು. ಆಗಸ್ಟ್ 7, 2022ರಂದು ಉಡ್ಡಯನಗೊಂಡಿದ್ದ ಎಸ್.ಎಸ್.ಎಲ್.ವಿ-1ರ ಮಿಷನ್ ಅದರ ಪೇಲೋಡ್ಗಳನ್ನು ಉದ್ದೇಶಿತ ಕಕ್ಷೆಯಲ್ಲಿ ಇರಿಸಲು ವಿಫಲವಾಗಿತ್ತು. ಇದನ್ನು ನಿರ್ದಿಷ್ಟ ಕಕ್ಷೆಗೆ ಇರಿಸಲು ಎಸ್.ಎಸ್.ಎಲ್.ವಿ-ಡಿ2 ಮಿಷನ್ ಕಳಿಸಲಾಗಿತ್ತು. ಇದು ತನಗೆ ವಹಿಸಿದ ಕೆಲಸವನ್ನು ನಿಖರವಾಗಿ ಮಾಡಿ, ವಿಫಲಗೊಂಡಿದ್ದ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಇಸ್ರೋ ಈ ಹಿಂದೆ ಬಳಸಿದ್ದ ಪಿ.ಎಸ್.ಎಲ್.ವಿ. ಹಾಗೂ ಜಿ.ಎಸ್.ಎಲ್.ವಿ.ಗಳ ಸುಧಾರಿತ ರೂಪವಾಗಿ ಎಸ್.ಎಸ್.ಎಲ್.ವಿ.ಯನ್ನು ಅಭಿವೃದ್ಧಿಪಡಿಸಿದೆ. ಜಾಗತಿಕ ಸಣ್ಣ ಉಪಗ್ರಹ ಉಡಾವಣಾ ಸೇವೆಗಳ ಮಾರುಕಟ್ಟೆ ಯನ್ನು ಪೂರೈಸಲು ಎಸ್.ಎಸ್.ಎಲ್.ವಿ. ತಕ್ಕುದಾಗಿದೆ.
ಸ್ವಾಯತ್ತ ಲ್ಯಾಂಡಿಂಗ್ ಮೆಷಿನ್
2023ರಲ್ಲಿ ಇಸ್ರೋ ನಡೆಸಿದ ಮತ್ತೊಂದು ಯಶಸ್ವಿ ಪ್ರಯೋಗ ಎಂದರೆ ಸ್ವಾಯತ್ತ ಲ್ಯಾಂಡಿಂಗ್ ಮೆಷಿನ್. ಇದು ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಮೂಲಮಾದರಿಯಾಗಿದ್ದು, ಸ್ವಾಯತ್ತ ಲ್ಯಾಂಡಿಂಗ್ ಮೆಷಿನ್ ಆಗಿದೆ. ಎಪ್ರಿಲ್ 2, 2023ರಂದು ಈ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ. ಇದನ್ನು ರಕ್ಷಣಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ವಾಯುಪಡೆಗಳ ಸಹಯೋಗದೊಂದಿಗೆ ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ನಲ್ಲಿ ಪರೀಕ್ಷೆ ನಡೆಸಲಾಯಿತು
ಚಂದ್ರಯಾನ-3
2023ರಲ್ಲಿ ಇಸ್ರೋಗೆ ಹೆಚ್ಚು ಮನ್ನಣೆ ತಂದುಕೊಟ್ಟ ಯಶಸ್ವಿ ಉಡ್ಡಯನವೆಂದರೆ ಚಂದ್ರಯಾನ-3 ಆಗಿದೆ. ಜುಲೈ 14, 2023ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನಗೊಂಡು ಚಂದ್ರನ ಕಡೆಗೆ ಪ್ರಯಾಣ ಬೆಳೆಸಿತ್ತು. 41 ದಿನಗಳ ಪ್ರಯಾಣದ ನಂತರ ಅಂದರೆ ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯು ಯಶಸ್ವಿಯಾಗಿ ಇಳಿದಿತ್ತು. ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶವಾಗಿದೆ ಮತ್ತು ಅಮೆರಿಕದ ನಂತರ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ ನಾಲ್ಕನೇ ದೇಶವಾಗಿದೆ. ರಶ್ಯ ಮತ್ತು ಚೀನಾಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಪ್ರಯತ್ನಿಸಿ ವಿಫಲವಾಗಿದ್ದನ್ನು ಮತ್ತು ಭಾರತವು ಇದನ್ನು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಚಂದ್ರನ ದಕ್ಷಿಣ ಧ್ರುವವು ಅನೇಕ ವೈಜ್ಞಾನಿಕ ರಹಸ್ಯಗಳು ಮತ್ತು ಕಾಸ್ಮಿಕ್ ರಹಸ್ಯಗಳ ನಿಧಿಯಾಗಿದೆ. ಈ ಪ್ರದೇಶವು ಭೂಮಿಯ ವೈವಿಧ್ಯತೆಯನ್ನು ಹೋಲುತ್ತದೆಯಾದ್ದರಿಂದ, ಅದನ್ನು ಅನ್ವೇಷಿಸುವುದರಿಂದ ವಿಜ್ಞಾನಿಗಳು ಶತಕೋಟಿ ವರ್ಷಗಳ ಹಿಂದೆ ಭೂಮಿಯು ಹೇಗಿತ್ತು ಮತ್ತು ಭವಿಷ್ಯದಲ್ಲಿ ಚಂದ್ರನನ್ನು ವಸಾಹತುವನ್ನಾಗಿ ಮಾಡಲು ಸಾಧ್ಯವಾದರೆ ಅದರ ಒಳನೋಟಗಳನ್ನು ಪಡೆಯಲು ಈ ಪ್ರಯತ್ನವು ಪೂರಕ ಮಾಹಿತಿ ನೀಡಲಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯ ಉಷ್ಣ ವರ್ತನೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದರೆ, ಪ್ರಜ್ಞಾನ್ ರೋವರ್ ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈ ಪ್ರದೇಶದಲ್ಲಿ ಸಲ್ಫರ್ ಇರುವಿಕೆಯನ್ನು ದೃಢಪಡಿಸಿತು. ಸದ್ಯಕ್ಕೆ ನಿದ್ರೆಗೆ ಜಾರಿದ ವಿಕ್ರಮ್ ಮತ್ತು ಪ್ರಜ್ಞಾನ್ಗಳನ್ನು ಸ್ವಿಚ್ ಆಫ್ ಮಾಡಲಾಗಿದೆ.
ಆದಿತ್ಯ-ಎಲ್1
ಇಸ್ರೋದ 2023ರ ಮತ್ತೊಂದು ಸಾಧನೆ ಎಂದರೆ ಆದಿತ್ಯ-ಎಲ್1 ಉಡಾವಣೆ. ಸೆಪ್ಟಂಬರ್ 2, 2023ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿ-ಎಕ್ಸ್ಎಲ್ ರಾಕೆಟ್ನಲ್ಲಿ ಆದಿತ್ಯ-ಎಲ್1 ಉಡಾವಣೆಗೊಂಡಿತು. ಸೂರ್ಯನ ಕಡೆಗೆ ಹೊರಟ ಆದಿತ್ಯ-ಎಲ್1ರ ಪ್ರಯಾಣವು ಅತ್ಯಂತ ಸಂಕೀರ್ಣವಾಗಿದ್ದು, ಅನೇಕ ಹಂತಗಳನ್ನು ಒಳಗೊಂಡಿರುತ್ತದೆ. ಉಡಾವಣೆಯಿಂದ ಸುಮಾರು 125 ದಿನಗಳ ನಂತರ ಬಾಹ್ಯಾಕಾಶ ನೌಕೆ ತನ್ನ ಅಂತಿಮ ಗಮ್ಯಸ್ಥಾನವನ್ನು ತಲುಪುತ್ತದೆ. ನಮ್ಮ ಸೌರವ್ಯೆಹದ ಏಕೈಕ ನಕ್ಷತ್ರವಾದ ಸೂರ್ಯನನ್ನು ಅರ್ಥಮಾಡಿಕೊಳ್ಳುವುದು ಮತ್ತು ವಿಜ್ಞಾನಿಗಳಿಗೆ ಕ್ಷೀರಪಥ ನಕ್ಷತ್ರಪುಂಜದ ಇತರ ನಕ್ಷತ್ರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡುವುದು ಆದಿತ್ಯ-ಎಲ್1 ಉದ್ದೇಶವಾಗಿದೆ. ಸೌರ ವಾತಾವರಣದ ವಿವಿಧ ಪದರಗಳಲ್ಲಿ ಸಂಭವಿಸುವ ಕಾರ್ಯವಿಧಾನಗಳು, ಕರೋನಲ್ ಮಾಸ್ ಎಜೆಕ್ಷನ್ಗಳು ಮತ್ತು ಸೌರ ಜ್ವಾಲೆಗಳ ಡೈನಾಮಿಕ್ಸ್, ಕರೋನಲ್ ಪ್ಲಾಸ್ಮಾದ ಸಂಯೋಜನೆ, ನೈಜ ಸಮಯದಲ್ಲಿ ಬಾಹ್ಯಾಕಾಶ ಹವಾಮಾನದ ಮೇಲೆ ಸೌರ ಚಟುವಟಿಕೆಗಳ ಪರಿಣಾಮ ಮತ್ತು ಸೌರ ಮಾರುತಗಳ ಶಕ್ತಿ ಕುರಿತು ಆದಿತ್ಯ-ಎಲ್1 ಅಧ್ಯಯನ ಮಾಡುತ್ತದೆ.
ಇವು 2023ರಲ್ಲಿ ಇಸ್ರೋ ಕೈಗೊಂಡ ಕೆಲವು ಮಹತ್ವದ ಕಾರ್ಯಾಚರಣೆಗಳು. ಇವುಗಳಲ್ಲದೇ ಇನ್ನೂ ಕೆಲವು ಕಾರ್ಯಾಚರಣೆಗಳನ್ನು ಇಸ್ರೋ ನಡೆಸಿದೆ. ಮುಂದೆಯೂ ನಡೆಸುತ್ತದೆ. ಒಟ್ಟಾರೆ ಇಸ್ರೋದ ಪಾಲಿಗೆ 2023 ಒಂದು ಐತಿಹಾಸಿಕ ಹೆಗ್ಗುರುತಾಗಿದೆ.