ಚಂದ್ರನಲ್ಲೊಂದು ಸುರಂಗ
ಚಂದ್ರನಲ್ಲಿ ಗುಹೆಗಳಿಗಾಗಿ ಹುಡುಕಾಟ?
ನಿನ್ನೆ ಅಂದರೆ ಜುಲೈ 20ರಂದು ಚಂದ್ರ ತನ್ನ ದಿನವನ್ನು ಆಚರಿಸಿಕೊಂಡ. ಜಗತ್ತಿನ ನಾನಾ ದೇಶಗಳ ಖಗೋಳ ಪ್ರಿಯರು, ಚಂದ್ರನ ಅಭಿಮಾನಿಗಳು ಸಡಗರ ಸಂಭ್ರಮದಿಂದ ಚಂದ್ರ ದಿನವನ್ನು ಆಚರಿಸಿದರು. ಅಪೋಲೊ 11ರ ಚಂದ್ರನ ಕಾರ್ಯಾಚರಣೆಯ ಭಾಗವಾಗಿ ಚಂದ್ರನ ಮೇಲೆ ಮೊದಲ ಬಾರಿಗೆ ಮಾನವರು ಇಳಿದ ವಾರ್ಷಿಕೋತ್ಸವವನ್ನು ‘ಅಂತರ್‌ರಾಷ್ಟ್ರೀಯ ಚಂದ್ರ ದಿನ’ವನ್ನಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆ ಯು 2021ರಲ್ಲಿ ಬಾಹ್ಯಾಕಾಶದ ಶಾಂತಿಯುತ ಬಳಕೆಗಳಲ್ಲಿ ಅಂತರ್‌ರಾಷ್ಟ್ರೀಯ ಸಹಕಾರ ಎಂಬ ನಿರ್ಣಯದಲ್ಲಿ ಜುಲೈ 20ನ್ನು ಅಂತರ್‌ರಾಷ್ಟ್ರೀಯ ಚಂದ್ರನ ದಿನವೆಂದು ಘೋಷಿಸಿದೆ.
1959ರಲ್ಲಿ ರಶ್ಯ ದೇಶವು ಲೂನಾ-1 ನೌಕೆಯನ್ನು ಚಂದ್ರನಲ್ಲಿಗೆ ಕಳಿಸಿದ ನಂತರ ಅಮೆರಿಕವು ಜಿದ್ದಾಜಿದ್ದಿಗೆ ಬಿದ್ದು 1961ರಲ್ಲಿ ಅಪೋಲೊ-11 ಯೋಜನೆಯನ್ನು ಪ್ರಾರಂಭಿಸಿತು. ಅಂತಿಮವಾಗಿ 1969ರ ಜುಲೈ 20ರಂದು, ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಎಡ್ವಿನ್ ಬುಝ್ ಆಲ್ಡ್ರಿನ್ ಚಂದ್ರನ ಮೇಲೆ ಇಳಿದಿದ್ದರು. ಆ ದಿನದ ನೆನಪಿಗಾಗಿ ಜುಲೈ 20 ಅನ್ನು ‘ಅಂತರ್‌ರಾಷ್ಟ್ರೀಯ ಚಂದ್ರನ ದಿನ’ವೆಂದು ಘೋಷಿಸಲಾಯಿತು. ಮೊದಲ ಬಾರಿಗೆ ಜುಲೈ 20, 2022 ರಂದು ಚಂದ್ರ ದಿನವನ್ನು ಆಚರಿಸಲಾಯಿತು.
ಅಪೋಲೊ-11ರ ಯಶಸ್ವಿ ಪ್ರಯಾಣದ ನಂತರ ಅನೇಕ ದೇಶಗಳು ಚಂದ್ರನತ್ತ ನೋಟ ಹರಿಸಿದವು. ತಾವು ಅಲ್ಲಿಗೆ ಹೋಗಿ ಬರಬೇಕೆಂದು ಪ್ರಯತ್ನಿಸತೊಡಗಿದವು. ಈ ಪ್ರಯತ್ನದಲ್ಲಿ ಭಾರತವಂತೂ ಹಿಂದೆ ಬೀಳಲೇ ಇಲ್ಲ. 2008ರಲ್ಲಿ ಚಂದ್ರಯಾನ-1, 2019ರಲ್ಲಿ ಚಂದ್ರಯಾನ-2 ಮತ್ತು 2023ರಲ್ಲಿ ಚಂದ್ರಯಾನ-3 ಯೋಜನೆ ಕೈಗೊಂಡಿತ್ತು. ಇದುವರೆಗೂ ಯಾವ ದೇಶವೂ ತಲುಪಲಾಗದ ಚಂದ್ರನ ಇನ್ನೊಂದು ಮುಖದಲ್ಲಿ ಅಂದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಚಂದ್ರಯಾನ-3 ರ ವಿಕ್ರಮ್ ಹೆಸರಿನ ಲ್ಯಾಂಡರ್ ಮತ್ತು ಪ್ರಘ್ಯಾನ್ ರೋವರ್ ಇಳಿದು ಮಹತ್ತರ ಮಾಹಿತಿಗಳನ್ನು ಭೂಮಿಗೆ ರವಾನಿಸಿದ್ದವು. ಇಲ್ಲಿಯವರೆಗಿನ ಚೀನಾ, ಭಾರತ, ರಶ್ಯ ಮತ್ತು ಅಮೆರಿಕಗಳು ಚಂದ್ರನ ಮೇಲೆ ನೌಕೆ ಇಳಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಇತ್ತೀಚೆಗೆ ಅಂದರೆ ಜೂನ್ 1, 2024ರಲ್ಲಿ ಚೀನಾದ ಚಾಂಗ್-6 ನೌಕೆಯು ಚಂದ್ರನ ದಕ್ಷಿಣ ಪ್ರದೇಶದ ಎಟಕಿನ್ ಬೇಸಿನ್ ತಲುಪಿ, ಅಲ್ಲಿಂದ 1,935.3 ಗ್ರಾಂ ತೂಕದ ಮಣ್ಣಿನ ಮಾದರಿಯನ್ನು ಸಂಗ್ರಹಿಸಿಕೊಂಡು ಜೂನ್ 6, 2024ರಂದು ಭೂಮಿಗೆ ಹಿಂದಿರುಗಿದೆ. ಹೀಗೆ ಚಂದ್ರನ ನೆಲೆಯ ವಿವಿಧ ಭಾಗಗಳ ಅಧ್ಯಯನ ನಿರಂತರವಾಗಿ ನಡೆಯುತ್ತಲೇ ಇದೆ.
ಇಂತಹ ಅಧ್ಯಯನಕ್ಕೆ ಕಳೆದ ವಾರದಲ್ಲಿ ಇನ್ನೊಂದು ಮಹತ್ವದ ಅಂಶ ಸೇರ್ಪಡೆಯಾಗಿದೆ. ಅದೇನೆಂದರೆ ಚಂದ್ರನಲ್ಲಿ ಸುರಂಗ ಮತ್ತು ಗುಹೆ ಪತ್ತೆಯಾಗಿದೆ. ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಎಡ್ವಿನ್ ಬುಝ್ ಆಲ್ಡ್ರಿನ್ ಚಂದ್ರನ ಮೇಲೆ ಇಳಿದಿದ್ದ ಪ್ರದೇಶವಾದ ಮೇರ್ ಟ್ರಾಂಕ್ವಿಲ್ಲಿಟಾಟಿಸ್ ಸಮೀಪ ಈ ಗುಹೆ ಪತ್ತೆಯಾಗಿದೆ.
ನಾಸಾದ ಲೂನಾರ್ ರಿಕಾನೈಸೆನ್ಸ್ ಆರ್ಬಿಟರ್ ಸಂಗ್ರಹಿಸಿದ ರಾಡಾರ್ ಮಾಹಿತಿ ವಿಶ್ಲೇಷಣೆಯ ಪ್ರಕಾರ ಚಂದ್ರನ ಮೇರ್ ಟ್ರಾಂಕ್ವಿಲ್ಲಿಟಾಟಿಸ್ ಪ್ರದೇಶದಲ್ಲಿ ಆಳವಾದ ಹೊಂಡವು 45 ಮೀಟರ್ ಅಗಲ ಮತ್ತು 80 ಮೀಟರ್ ಉದ್ದದ ಗುಹೆಯನ್ನು ಸೃಷ್ಟಿಸಿದೆ ಎಂದು ಬಹಿರಂಗಪಡಿಸಿದೆ. ಈ ಗುಹೆಯು 14 ಟೆನಿಸ್ ಕೋರ್ಟ್‌ಗಳಷ್ಟು ವಿಸ್ತಾರವಾಗಿದೆ ಮತ್ತು ಗುಹೆಯು ಮೇಲ್ಮೈಯಿಂದ ಸುಮಾರು 150 ಮೀಟರ್ ಆಳದಲ್ಲಿದೆ.
ಚಂದ್ರನ ಹೊಂಡಗಳು ಜ್ವಾಲಾಮುಖಿ ಸ್ಫೋಟಗಳಿಂದ ರೂಪುಗೊಂಡ ಭೌಗೋಳಿಕ ರಚನೆಗಳಾಗಿವೆ. ಕಡಿದಾದ ಗೋಡೆಗಳೊಂದಿಗೆ ಬೃಹತ್ ತಗ್ಗುಗಳನ್ನು ಸೃಷ್ಟಿಸುತ್ತವೆ. ಈ ಹೊಂಡಗಳು ಕುಳಿಗಳಿಂದ ಭಿನ್ನವಾಗಿರುತ್ತವೆ. ಅವುಗಳು ಚಪ್ಪಟೆ ತಳ ಅಥವಾ ಬೌಲ್ ಆಕಾರದಲ್ಲಿರುತ್ತವೆ. ಜ್ವಾಲಾಮುಖಿ ಗುಹೆಯ ಕೊಳವೆಯ ಮೇಲ್ಛಾವಣಿಯು ಕುಸಿದಾಗ, ಅದು ಚಂದ್ರನ ಪಿಟ್ ಎಂದು ಕರೆಯಲ್ಪಡುವ ಆಂತರಿಕ ಶೂನ್ಯವನ್ನು ಬಹಿರಂಗಪಡಿಸುತ್ತದೆ. ಇದುವರೆಗೂ ಚಂದ್ರನ ಮೇಲೆ ಕನಿಷ್ಠ 200 ಹೊಂಡಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಕೆಲವನ್ನು ಸ್ಕೈಲೈಟ್‌ಗಳು ಎಂದು ಕರೆಯಲಾಗುತ್ತದೆ. ಲಾವಾ ಕ್ಷೇತ್ರಗಳಲ್ಲಿ ಕಂಡುಬರುವ ಇಂತಹ ಹೊಂಡಗಳು ಭೂಗತ ಲಾವಾ ಗುಹೆಗಳಿಗೆ ಪ್ರವೇಶ ದ್ವಾರಗಳಾಗಿರಬಹುದು.
ಸಂಶೋಧಕರು ಲೂನಾರ್ ರಿಕಾನೈಸೆನ್ಸ್ ಆರ್ಬಿಟರ್ ಮಿಷನ್‌ನ ಭಾಗವಾಗಿ 2010ರಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಹೊಸ ಸಿಗ್ನಲ್ ಪ್ರೊಸೆಸಿಂಗ್ ತಂತ್ರಗಳೊಂದಿಗೆ ಮರು ವಿಶ್ಲೇಷಿಸಿ ಚಂದ್ರನಲ್ಲಿ ಭೂಗತ ಗುಹೆಗಳಿವೆ ಎಂದು ಸೂಚಿಸಿದ್ದಾರೆ. ಈ ಸಂಶೋಧನೆಯು ವಿಜ್ಞಾನ ಮತ್ತು ಪರಿಶೋಧನೆಗಾಗಿ ಮೂಲಭೂತ ಪ್ರಶ್ನೆಗಳನ್ನು ಪರಿಹರಿಸಲು ಚಂದ್ರನ ರಾಡಾರ್ ಮಾಹಿತಿಯನ್ನು ಹೇಗೆ ನವೀನ ರೀತಿಯಲ್ಲಿ ಬಳಸಬಹುದು ಮತ್ತು ಚಂದ್ರನ ದೂರದ ಸಂವೇದನೆಯ ಮಾಹಿತಿ ಸಂಗ್ರಹಿಸುವುದನ್ನು ಮುಂದುವರಿಸುವುದು ಎಷ್ಟು ನಿರ್ಣಾಯಕವಾಗಿದೆ ಎಂಬುದನ್ನು ತೋರಿಸುತ್ತದೆ.
ಚಂದ್ರನಲ್ಲಿ ಕಂಡುಬಂದಿರುವ ಗುಹೆಗಳಿಂದ ಏನು ಪ್ರಯೋಜನ ಎಂಬ ಪ್ರಶ್ನೆಯೂ ಮೂಡುತ್ತದೆ. ಈ ಆವಿಷ್ಕಾರದ ಪರಿಣಾಮಗಳು ತುಂಬಾ ಮಹತ್ವದ್ದಾಗಿವೆ. ಏಕೆಂದರೆ ಇದು ಚಂದ್ರನ ಭೂವೈಜ್ಞಾನಿಕ ಇತಿಹಾಸದ ಒಂದು ನೋಟವನ್ನು ಒದಗಿಸುತ್ತದೆ ಮತ್ತು ಭವಿಷ್ಯದ ಚಂದ್ರನ ಕಾರ್ಯಾಚರಣೆಗಳಿಗೆ ಸಂಭಾವ್ಯ ಸುರಕ್ಷಿತ ಸ್ಥಳಗಳನ್ನು ಒದಗಿಸುತ್ತದೆ. ಪ್ರಾಚೀನ ಲಾವಾ ಹರಿವಿನಿಂದ ರೂಪುಗೊಂಡ ಈ ಸುರಂಗಗಳು ನೈಸರ್ಗಿಕ ಆಶ್ರಯಗಳಾಗಿ ಕಾರ್ಯನಿರ್ವಹಿಸುತ್ತವೆ. ಚಂದ್ರನ ಕಠಿಣ ಹವಾಮಾನ ಪರಿಸ್ಥಿತಿಗಳಿಂದ ಗಗನಯಾತ್ರಿಗಳನ್ನು ರಕ್ಷಿಸುತ್ತವೆ.
ಈ ಸುರಂಗಗಳ ಉಪಸ್ಥಿತಿಯು ಚಂದ್ರನ ನೆಲೆಗಳ ಅಭಿವೃದ್ಧಿಗೆ ಭರವಸೆಯ ಅವಕಾಶಗಳನ್ನು ನೀಡುತ್ತದೆ. ಚಂದ್ರನ ಮೇಲ್ಮೈ 127 ಡಿಗ್ರಿ ಸೆಲ್ಸಿಯಸ್‌ನಿಂದ -173 ಡಿಗ್ರಿ ಸೆಲ್ಸಿಯಸ್‌ವರೆಗಿನ ತಾಪಮಾನದೊಂದಿಗೆ ಕಠಿಣ ಪರಿಸ್ಥಿತಿಗಳು ಮತ್ತು ಕಾಸ್ಮಿಕ್ ಮತ್ತು ಸೌರ ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ದೀರ್ಘಾವಧಿಯ ಮಾನವ ಚಟುವಟಿಕೆಗೆ ತೊಂದರೆಯಾಗುತ್ತದೆ. ಈಗ ಪತ್ತೆಯಾಗಿರುವ ಸುರಂಗಗಳು ಚಂದ್ರನ ವಿಪರೀತ ಹವಾಮಾನ ಪರಿಸ್ಥಿತಿಗಳ ವಿರುದ್ಧ ನೈಸರ್ಗಿಕ ಸಂರಕ್ಷಣೆಯನ್ನು ಒದಗಿಸುತ್ತವೆ. ಮಾನವ ವಾಸಕ್ಕೆ ಸ್ಥಿರವಾದ ವಾತಾವರಣವನ್ನು ನೀಡುತ್ತವೆ.
ಹೊಸದಾಗಿ ಪತ್ತೆಯಾದ ಗುಹೆಯು ಚಂದ್ರನ ಮೇಲೆ ಮಾನವ ನೆಲೆಗೆ ಸೂಕ್ತವಾದ ಸ್ಥಳವಾಗಿದೆ. ಮಾನವರು ಈ ಲಾವಾ ಟ್ಯೂಬ್‌ಗಳ ರಕ್ಷಣೆಯನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಈ ಚಂದ್ರನ ಹೊಂಡಗಳಲ್ಲಿ ವಾಸಿಸಬಹುದು. ಆದರೂ ಗುಹೆಯ ಆಳ ಮತ್ತು ರಚನೆಯು ಪ್ರಸಕ್ತ ವಾಸಕ್ಕೆ ಸವಾಲುಗಳನ್ನು ಹೊಂದಿದೆ. ಉದಾಹರಣೆಗೆ ಗಗನಯಾತ್ರಿಗಳು ಸುರಂಗದ ಮೂಲಕ ಗುಹೆ ಪ್ರವೇಶಿಸಲು ಲಿಫ್ಟ್‌ಗಳಂತಹ ಸುಧಾರಿತ ತಂತ್ರಜ್ಞಾನವನ್ನು ಬಳಸಬೇಕಾಗುತ್ತದೆ. ಏಕೆಂದರೆ ಗುಹೆಗಳು ಮೇಲ್ಮೈಯಿಂದ ಆಳದಲ್ಲಿವೆ. ಈ ಸವಾಲುಗಳು ಚಂದ್ರನ ಸುರಂಗಗಳನ್ನು ಮಾನವ ವಾಸಕ್ಕೆ ಕಾರ್ಯಸಾಧ್ಯವಾಗುವಂತೆ ಮಾಡಲು ನವೀನ ಪರಿಹಾರಗಳು ಮತ್ತು ಸುಧಾರಿತ ಇಂಜಿನಿಯರಿಂಗ್‌ನ ಅಗತ್ಯವನ್ನು ಎತ್ತಿ ತೋರಿಸುತ್ತವೆ. ಚಂದ್ರನ ಪರಿಶೋಧನೆಗಾಗಿ ಆವಾಸಸ್ಥಾನಗಳನ್ನು ನಿರ್ಮಿಸುವುದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಸವಾಲಿನದ್ದಾಗಿದೆ. ಪ್ರಸಕ್ತ ಪತ್ತೆಯಾಗಿರುವ ಗುಹೆಗಳು ಒಂದಿಷ್ಟು ಸುರಕ್ಷತೆಯ ಆಶಾಭಾವವನ್ನು ನೀಡಬಹುದಾದರೂ, ಅದರ ಕುಸಿತವನ್ನು ತಡೆಗಟ್ಟಲು ಗುಹೆಯ ಗೋಡೆಗಳನ್ನು ಬಲಪಡಿಸುವ ಸಂಭಾವ್ಯ ಅಗತ್ಯವನ್ನು ಸಂಶೋಧಕರ ತಂಡವು ಹೇಳಿದೆ.
ಚಂದ್ರನ ಸುರಂಗಗಳ ಅಧ್ಯಯನವು ಚಂದ್ರನ ಮೇಲೆ ಮಾನವ ವಾಸಕ್ಕೆ ಅನುಕೂಲವಾಗುವ ಭರವಸೆಯನ್ನು ಹೊಂದಿದೆ. ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಭೂವೈಜ್ಞಾನಿಕ ದಾಖಲೆಗಳನ್ನು ಅಧ್ಯಯನ ಮಾಡಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ಈ ಸುರಂಗಗಳೊಳಗಿನ ಬಂಡೆಗಳು ಚಂದ್ರನ ಇತಿಹಾಸ ಮತ್ತು ನಮ್ಮ ಸೌರವ್ಯೆಹದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಬಹುದು. ಗುಹೆಗಳಲ್ಲಿನ ಮಾಹಿತಿಯು ಬಾಹ್ಯಾಕಾಶ ಹವಾಮಾನದ ಸವೆತದ ಪರಿಣಾಮಗಳಿಂದ ತೊಂದರೆಗೆ ಒಳಗಾಗಿರುವುದಿಲ್ಲ.
ಪ್ರಸಕ್ತ ಗುಹೆಗಳು ಅಪೋಲೊ-11ರ ಲ್ಯಾಂಡಿಂಗ್ ಸ್ಥಳದಿಂದ ಕೇವಲ 400 ಕಿಲೋಮೀಟರ್ ಸಮೀಪದಲ್ಲಿ ಪತ್ತೆಯಾಗಿವೆ. ಇಟಲಿಯ ಟ್ರೆಂಟೊ ವಿಶ್ವವಿದ್ಯಾನಿಲಯದ ನೇತೃತ್ವದಲ್ಲಿ ಅಂತರ್‌ರಾಷ್ಟ್ರೀಯ ವಿಜ್ಞಾನಿಗಳ ತಂಡವು ಚಂದ್ರನ ಗುಹೆಗಳ ಸಂಶೋಧನೆಯನ್ನು ಮಾಡಿದ್ದು ಅಧ್ಯಯನವನ್ನು ಪ್ರಕಟಿಸಿದೆ.