ಬೆಂಗಳೂರಿನ ಕೆರೆಗಳಿಗೆ ಮರುಜೀವ ನೀಡಿದ ಆನಂದ್ ಮಲ್ಲಿಗವಾಡ್
ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಎದ್ದಿದೆ. ಎಲ್ಲೆಲ್ಲೂ ಟ್ಯಾಂಕರ್‌ಗಳ ಅಬ್ಬರ ಜೋರಾಗಿದೆ. ಉಳ್ಳವರು ಬೋರ್‌ವೆಲ್ ಹಾಕಿಸಿಕೊಂಡರೆ, ಬಡ ಮತ್ತು ಮಧ್ಯಮ ವರ್ಗದವರಿಗೆ ಕೆರೆಯ ನೀರೇ ಗತಿ ಎನ್ನುವಂತಾಗಿದೆ ಸ್ಥಿತಿ. ಈ ವರ್ಷ ಮಳೆಯ ಜೂಜಾಟದಿಂದ ಬೆಂಗಳೂರಿನಲ್ಲಿ ಕೆರೆಗಳಲ್ಲಿ ನೀರಿನ ಸಂಗ್ರಹಕ್ಕೂ ತತ್ವಾರ ಬಂದೊದಗಿದೆ. ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ.
ಭಾರತದ ಸಿಲಿಕಾನ್ ವ್ಯಾಲಿ ಎಂಬ ಅಭಿದಾನ ಹೊತ್ತ ಬೆಂಗಳೂರಿಗೆ ಈಗಿರುವ ಸಂಪನ್ಮೂಲಗಳಿಂದ ನೀರಿನ ಅಗತ್ಯತೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಒಂದು ಕಾಲದಲ್ಲಿ ನೂರಾರು ಕೆರೆಗಳನ್ನು ಹೊಂದಿದ್ದ ಬೆಂಗಳೂರಿನಲ್ಲಿ ಇಂದು ಕೆರೆಗಳನ್ನು ಹುಡುಕಬೇಕಾಗಿದೆ. ಕೆಲವು ದಾಖಲೆಗಳ ಪ್ರಕಾರ ಬೆಂಗಳೂರಿನಲ್ಲಿ 1,850 ಕೆರೆಗಳಿದ್ದು, ಈ ಪೈಕಿ ಕೇವಲ 465 ಕೆರೆಗಳು ಮಾತ್ರ ಉಳಿದಿವೆ ಮತ್ತು ಅವುಗಳಲ್ಲಿ ಕೇವಲ ಶೇ. 10ರಷ್ಟು ಕೆರೆಗಳಲ್ಲಿ ಮಾತ್ರ ಶುದ್ಧ ನೀರು ಇದೆ.
ನಗರೀಕರಣದ ಭರಾಟೆಯಲ್ಲಿ ಹೆಚ್ಚಿನ ಕೆರೆಗಳೆಲ್ಲ ಮಾಯವಾದವು. ಮಹಾನಗರ ಪಾಲಿಕೆಯ ಕಸ ತುಂಬುವ ಕಸದ ತೊಟ್ಟಿಗಳಾದವು. ಕೆಲವು ಕೆರೆಗಳು ಒತ್ತುವರಿಯಾಗಿ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿದವು. ಕೆಲವು ಕೆರೆಗಳು ಬಸ್ ನಿಲ್ದಾಣಗಳಾದರೆ, ಇನ್ನು ಕೆಲವು ಆಟದ ಮೈದಾನಗಳಾದವು. ಹೀಗೆ ವಿವಿಧ ಕಾರಣಗಳಿಂದ ಕೆರೆಗಳೆಲ್ಲ ಮಾಯವಾಗುತ್ತಾ ಬಂದ ಪರಿಣಾಮ ಇಂದು ಬೆಂಗಳೂರಿನಲ್ಲಿ ಜಲಕ್ಷಾಮ ಉಂಟಾಗಿದೆ.
ನಗರದ ಅನೇಕ ನಿವಾಸಿಗಳು ಈಗಾಗಲೇ ದೂರದಿಂದ ಟ್ರಕ್ ಮೂಲಕ ದುಬಾರಿ ನೀರನ್ನು ಅವಲಂಬಿಸಿದ್ದಾರೆ. ಹವಾಮಾನ ಬದಲಾವಣೆಯು ಜಾಗತಿಕ ತಾಪಮಾನವನ್ನು ಹೆಚ್ಚಿಸುವುದರಿಂದ ನೀರಿನ ಸಮಸ್ಯೆಯು ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ನಗರದ ನೀರು, ಪರಿಸರ, ಭೂಮಿ ಮತ್ತು ಜೀವನೋಪಾಯಗಳ (ವೆಲ್) ಸಂಶೋಧನಾ ಕೇಂದ್ರದ ಪ್ರಕಾರ, ಬೆಂಗಳೂರಿನ ಅರ್ಧಕ್ಕಿಂತ ಹೆಚ್ಚು ಕೊಳವೆಬಾವಿಗಳ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿಯತೊಡಗಿದೆ. ಇದರಿಂದ ಇನ್ನಷ್ಟು ನೀರಿನ ಸಮಸ್ಯೆ ಹೆಚ್ಚಲಿದೆ.
ಬೆಂಗಳೂರು ಈಗ ದಿನಕ್ಕೆ ಸುಮಾರು 66.25 ಕೋಟಿ ಲೀಟರ್‌ಗಳಷ್ಟು ನೀರಿನ ಕೊರತೆಯನ್ನು ಎದುರಿಸುತ್ತಿದೆ. 2030ರ ಅಂತ್ಯದ ವೇಳೆಗೆ ಈ ಪ್ರಮಾಣ ದ್ವಿಗುಣಗೊಳ್ಳುವ ಸಾಧ್ಯತೆಯಿದೆ. ಅದಕ್ಕಾಗಿ ಬೆಂಗಳೂರಿನಂತಹ ವಿಶಾಲವಾದ ನಗರದ ಜಲಸಮಸ್ಯೆಗೆ ಕೆರೆಗಳ ಪುನಶ್ಚೇತನ ಒಂದೇ ಶಾಶ್ವತ ಪರಿಹಾರ ಎಂಬುದು ಕೆಲವೇ ಕೆಲವರಿಗೆ ಅರ್ಥವಾಯಿತು. ಆದರೆ ಪುನಶ್ಚೇತನಗೊಳಿಸುವವರು ಯಾರು? ಎಂಬ ಪ್ರಶ್ನೆ ಎದುರಾಗುತ್ತದೆ. ನಮ್ಮ ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು ಎಂಬುದನ್ನು ಮನಗಂಡ ಆನಂದ್ ಮಲ್ಲಿಗವಾಡ್ ಎಂಬವರು ಕೆರೆಗಳ ಪುನಶ್ಚೇತನ ಕಾರ್ಯಕ್ಕೆ ಮುಂದಾದರು.
ಮೂಲತಃ ಕೊಪ್ಪಳ ಜಿಲ್ಲೆಯ ಕರಮುಡಿ ಗ್ರಾಮದವರಾದ ಆನಂದ್ ಮಲ್ಲಿಗವಾಡ್ ಅವರು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದವರು. ಮೆಕ್ಯಾನಿಕಲ್ ಇಂಜಿನಿಯರ್ ಆದ ಆನಂದ್ ಮಲ್ಲಿಗವಾಡ್ ಅವರು ಭಾರತದ ದೊಡ್ಡ ವಾಹನ ಬಿಡಿಭಾಗಗಳ ತಯಾರಕ ಕಂಪೆನಿಯಾದ ಸನ್ಸೆರಾದಲ್ಲಿ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದರು. ಬೆಂಗಳೂರಿನ ಜಲ ಸಮಸ್ಯೆಗಳ ಕುರಿತ ಪತ್ರಿಕಾ ವರದಿಯೊಂದು ಆನಂದ್ ಅವರನ್ನು ಚಿಂತೆಗೀಡುಮಾಡಿತು. ಈ ಸಮಸ್ಯೆಗೆ ಏನಾದರೂ ಒಂದು ಪರಿಹಾರ ಹುಡುಕಬೇಕು ಎನ್ನುವ ವಿಚಾರದಲ್ಲಿ ಹಾಳುಬಿದ್ದ ಕೆರೆಗಳು ಅವರ ಕಣ್ಣಿಗೆ ಬಿದ್ದವು. ಸಹದ್ಯೋಗಿಗಳ ಸಹಾಯದಿಂದ ತಮ್ಮ ಕಂಪೆನಿಯ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕ್ಯಾಲಸನಹಳ್ಳಿ ಕೆರೆ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಿದರು.
ಯೋಜನೆಗೆ ಕಂಪೆನಿಯು ಸಿ.ಎಸ್.ಆರ್. ನಿಧಿಯಿಂದ ಒಂದುಕೋಟಿ ರೂ. ಮಂಜೂರು ಮಾಡಿತು. ಯಂತ್ರಗಳು ಹಾಗೂ ಕಾರ್ಮಿಕರ ನೆರವಿನಿಂದ ಕೆರೆಯಲ್ಲಿದ್ದ ಅಪಾರ ಪ್ರಮಾಣದ ಮಣ್ಣು, ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಅನ್ನು ತೆಗೆದುಹಾಕಿದರು. ಅದರ ತಡೆಗೋಡೆಗಳನ್ನು ಭದ್ರಗೊಳಿಸಿದರು. ಕೆರೆಯ ಒಳಗಿನ ಭಾಗದಲ್ಲಿ ಅಗೆದ ಮಣ್ಣಿನಿಂದ ಐದು ಕೃತಕ ದ್ವೀಪಗಳನ್ನು ನಿರ್ಮಿಸಿ ಅದರಲ್ಲಿ ಕೆಲವು ಗಿಡಗಳನ್ನು ನೆಟ್ಟರು. ಮಳೆಗಾಲಕ್ಕೂ ಮುಂಚೆ ಎಲ್ಲಾ ಕಾರ್ಯವು ಮುಕ್ತಾಯವಾಯಿತು. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಕೆರೆಯಲ್ಲಿ ನೀರು ಸಂಗ್ರಹಗೊಳ್ಳತೊಡಗಿತು. ಆರು ತಿಂಗಳ ನಂತರ ಕೆರೆಯಲ್ಲಿ ಬಾತುಕೋಳಿಗಳು ಹಾಗೂ ವಲಸೆ ಹಕ್ಕಿಗಳ ಕಲರವ ಹೆಚ್ಚಿತು. ಕೆರೆ ನೀರಿನಲ್ಲಿ ದೋಣಿ ವಿಹಾರ ಪ್ರಾರಂಭವಾಯಿತು. ಅಲ್ಲಲ್ಲಿ ನಿರ್ಮಿಸಿದ್ದ ಕೃತಕ ದ್ವೀಪಗಳಲ್ಲಿ ನೆಟ್ಟ ಗಿಡಗಳು ಕ್ರಮೇಣವಾಗಿ ಮರಗಳಾದವು. ಪಕ್ಷಿಗಳು ಮರಗಳಲ್ಲಿ ವಾಸಮಾಡತೊಡಗಿದವು. ಕೆರೆಯ ಸುತ್ತಲೂ ನಿರ್ಮಿಸಿದ ಪಾದಚಾರಿ ರಸ್ತೆಯು ವಾಕಿಂಗ್ ಹಾಗೂ ಜಾಗಿಂಗ್ ತಾಣವಾಯಿತು. ಈಗ ಆ ಕೆರೆ ಸಂಪೂರ್ಣವಾಗಿ ಸುಂದರ ಹಾಗೂ ಸ್ವಚ್ಛ ಪರಿಸರ ತಾಣವಾಗಿದೆ.
ಮೊದಲ ಯಶಸ್ಸಿನ ನಂತರದ ವರ್ಷಗಳಲ್ಲಿ ಆನಂದ್ ಮಲ್ಲಿಗವಾಡ್ ಅವರು ಬೆಂಗಳೂರಿನಲ್ಲಿ 35ಕ್ಕೂ ಹೆಚ್ಚು ಕೆರೆಗಳನ್ನು ಪುನಶ್ಚೇತನಗೊಳಿಸಿದ್ದಾರೆ. ಆ ಮೂಲಕ ಸುಮಾರು 40.13 ಕೋಟಿ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಪುನಃಸ್ಥಾಪಿಸಿದ್ದಾರೆ. ಕೆರೆಗಳಿಂದ ಈ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವು ಸಹ ಏರಿಕೆಯಾಗಿದೆ ಎಂದು ಸರಕಾರಿ ಅಂತರ್ಜಲ ನಿರ್ದೇಶನಾಲಯ ತಿಳಿಸಿದೆ.
‘ರಿಡ್ಜ್ ಟು ರಿವರ್’ ಎಂದು ಕರೆಯಲ್ಪಡುವ ಚೋಳರ ಕಾಲದ ಜಲಸಂಗ್ರಹಣಾ ವಿಧಾನವನ್ನು ಬಳಸಿಕೊಂಡ ಆನಂದ್ ಅವರು ಮಣ್ಣಿನ ಗೋಡೆಗಳನ್ನು ಕ್ಯಾಸ್ಕೇಡಿಂಗ್ ಆಕಾರದಲ್ಲಿ ನಿರ್ಮಿಸಿದರು. ಮಳೆಗಾಲದಲ್ಲಿ ಮಳೆ ನೀರಿನೊಂದಿಗೆ ಹರಿದು ಬರುವ ಚರಂಡಿ ತ್ಯಾಜ್ಯ ಕೆರೆಯ ನೀರಿಗೆ ಸೇರುವುದನ್ನು ತಪ್ಪಿಸುವ ಸಲುವಾಗಿ ಅಲ್ಲಲ್ಲಿ ಕೆಲವು ಕಿರು ಕೆರೆಗಳನ್ನು ನಿರ್ಮಿಸಿದರು. ಮೊದಲ ಹಂತದಲ್ಲಿ ತ್ಯಾಜ್ಯವನ್ನು ತಡೆಯುವ ವ್ಯವಸ್ಥೆ ಇದಾಗಿದೆ. ಜೊತೆಗೆ ಕೆರೆಗೆ ಹೂಳು ಸೇರುವುದನ್ನು ಇದು ನಿಯಂತ್ರಿಸುತ್ತದೆ ಎಂಬುದು ಆನಂದ್ ಅವರ ಜಲಸಂರಕ್ಷಣ ಅಧ್ಯಯನದ ಸಾರ.
ಮಲ್ಲಿಗವಾಡ್ ಅವರು 2025ರ ವೇಳೆಗೆ ಬೆಂಗಳೂರಿನ 45 ಕೆರೆಗಳನ್ನು ಪುನಶ್ಚೇತನಗೊಳಿಸುವ ಗುರಿಯನ್ನು ಹೊಂದಿದ್ದಾರೆ. ಈಗಾಗಲೇ ನಂಜಾಪುರ ಕೆರೆ, ಕ್ಯಾಲಸನಹಳ್ಳಿ ಕೆರೆ, ವಾಬಸಂದ್ರ ಕೆರೆ, ಬಿಂಗಿಪುರ ಕೆರೆ, ಕೋನಸಂದ್ರ ಕೆರೆ, ಗವಿ ಕೆರೆ, ಮಾಣೆ ಕೆರೆ, ಹಾಡೋಸಿದ್ದಾಪುರ ಕೆರೆ, ಚಿಕ್ಕನಾಗಮಂಗಲ ಕೆರೆ ಸೇರಿದಂತೆ ಒಟ್ಟು 35ಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಆ ಗುರಿಯನ್ನು ತಲುಪುವ ನಿರೀಕ್ಷೆಯಿದೆ. ಆನಂದ್ ಅವರ ಈ ಕಾರ್ಯ ಅಷ್ಟೊಂದು ಸುಲಭದ್ದಲ್ಲ. ಏಕೆಂದರೆ ಈಗಾಗಲೇ ಅನೇಕ ಕೆರೆಗಳು ಉಳ್ಳವರ ಪಾಲಾಗಿದ್ದವು. ಕೆಲವು ಕೆರೆಗಳು ಆಟದ ಮೈದಾನಗಳಾಗಿದ್ದವು. ಅಂತಹ ಕೆರೆಗಳನ್ನು ಪುನಶ್ಚೇತನಗೊಳಿಸುವಾಗ ಸಹಜವಾಗಿಯೇ ಅಡೆತಡೆಗಳನ್ನು ಎದುರಿಸಬೇಕಾಯಿತು. ಕೆಲವು ಕಡೆಗಳಲ್ಲಿ ಅವರ ಮೇಲೆ ಹಲ್ಲೆಗಳೂ ನಡೆದಿವೆ. ಇವೆಲ್ಲವನ್ನೂ ಸಹಿಸಿಕೊಂಡು ಕೆರೆಗಳ ಅಭಿವೃದ್ಧಿಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಆನಂದ್ ಮಲ್ಲಿಗವಾಡ್ ಅವರು ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಜಲಸಂಕ್ಷಣೆ ಕುರಿತು ಅವರಿಗಿರುವ ಬದ್ಧತೆ, ಕಾಳಜಿ ಇಂದು ಎಲ್ಲರಲ್ಲೂ ಬರಬೇಕಾಗಿದೆ. ಭೂಮಿಯ ಶ್ವಾಸಕೋಶಗಳಾದ ಕೆರೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕಿದೆ. ನಿಮ್ಮ ಬಳಿ ಹಣವಿದ್ದರೆ ಅದನ್ನು ಕೆರೆಗಳಿಗೆ ಖರ್ಚು ಮಾಡುವುದು ಉತ್ತಮ. ದಶಕಗಳ ನಂತರ ಅದು ನಿಮಗೆ ಸೇವೆ ಸಲ್ಲಿಸುತ್ತದೆ ಎಂದು ಹೇಳುವ ಮಲ್ಲಿಗವಾಡ್ ಅವರಲ್ಲಿ ಸಾಮಾಜಿಕ ಕಳಕಳಿ ಇದೆ. ಜಲದ ಅರಿವು ಇದೆ. ನೆಲದ ಋಣ ತೀರಿಸುವ ತವಕ ಇದೆ.
ಮಲ್ಲಿಗವಾಡ್ ಅವರು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೆ ಕರ್ನಾಟಕ ಸೇರಿದಂತೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಹಾಗೂ ಇತರ ಒಂಭತ್ತು ರಾಜ್ಯಗಳ ಒಟ್ಟು 80ಕ್ಕೂ ಹೆಚ್ಚು ಕೆರೆಗಳನ್ನು ಪುನಶ್ಚೇತನಗೊಳಿಸಲು ಶ್ರಮಿಸಿದ್ದಾರೆ. ಅವರು ಪುನಶ್ಚೇತನಗೊಳಿಸಿದ ಎಲ್ಲಾ ಕೆರೆಗಳು ಸಮೃದ್ಧ ನೀರಿನ ಆಗರಗಳಾಗಿವೆ. ಮಲ್ಲಿಗವಾಡ್ ಅವರ ಯಶಸ್ಸು ಅವರನ್ನು ಭಾರತದಾದ್ಯಂತ ಹೆಚ್ಚು ಬೇಡಿಕೆಯ ಜಲಸಂರಕ್ಷಣಾ ತಜ್ಞರನ್ನಾಗಿ ಮಾಡಿದೆ. ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿಶ್ವದ ಕೆಲವು ರಾಷ್ಟ್ರಗಳು ಅವರನ್ನು ಕರೆಸಿಕೊಂಡು ಅಲ್ಲಿಯೂ ಜಲಸಂರಕ್ಷಣಾ ಕಾರ್ಯಕ್ಕೆ ತೊಡಗಿಸಿಕೊಂಡಿವೆ.
ಒಮ್ಮೆ ಕೊಳಚೆ ಮತ್ತು ಕಸದ ಭಂಡಾರವಾಗಿದ್ದ ಬೆಂಗಳೂರಿನ ಕೆರೆಗಳು ಈಗ ನೂರಾರು ವಲಸೆ ಹಕ್ಕಿಗಳನ್ನು ಸ್ವಾಗತಿಸುತ್ತದೆ ಮತ್ತು ಹಲವಾರು ವಿಧದ ಸ್ಥಳೀಯ ಸಸ್ಯ ಪ್ರಭೇದಗಳು ಮತ್ತು ಆಯುರ್ವೇದ ಸಸ್ಯಗಳನ್ನು ಪೋಷಿಸುತ್ತದೆ. ಕೆಲವು ಕೆರೆಗಳು ಜಲವಿಹಾರ ತಾಣಗಳಾಗಿವೆ. ಹಾಳು ತೊಟ್ಟಿಗಳಂತಾಗಿದ್ದ ಕೆರೆಗಳು ಇಂದು ವಿವಿಧ ಚಟುವಟಿಕೆಗಳಿಂದ ಆನಂದ್ ನೀಡುವ ತಾಣಗಳಾಗಿವೆ. ಮಲ್ಲಿಗವಾಡ್‌ರಂತಹ ನೂರಾರು ಕಾರ್ಯಕರ್ತರ ಶ್ರಮ ಈಗ ಸಾಕಾರಗೊಂಡಿದೆ. ಇಂತಹ ಇನ್ನಷ್ಟು ಕೆರೆಗಳು ಪುನಶ್ಚೇತನಗೊಳ್ಳುವ ಮೂಲಕ ಜಲದ ಅರಿವು ಎಲ್ಲರಲ್ಲೂ ಮೂಡಲಿ.