ಆನೆ ರಕ್ಷಣೆಗೆ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ
ನಾಳೆ ವಿಶ್ವ ಆನೆಗಳ ದಿನ
`‘‘ಆನೆ ಇದ್ದರೂ ಕೋಟಿ, ಸತ್ತರೂ ಕೋಟಿ’’, ‘‘ಆನೆ ನಡೆದದ್ದೇ ದಾರಿ’’, ‘‘ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’’ ಮುಂತಾದ ಗಾದೆ ಮಾತುಗಳನ್ನು ಕೇಳಿದ್ದೇವೆ, ಸಂದರ್ಭಾನುಸಾರ ಬಳಸಿದ್ದೇವೆ. ಇವೆಲ್ಲವೂ ಆನೆಯ ಮಹತ್ವವನ್ನು ತಿಳಿಸುತ್ತವೆ. ನಮ್ಮ ಉತ್ತರ ಕರ್ನಾಟಕದ ಹೆಚ್ಚಿನ ಮಂದಿ ಆನೆಯನ್ನು ಚಿತ್ರಗಳಲ್ಲಿ ಅಥವಾ ಟಿ.ವಿ.ಗಳಲ್ಲಿ ನೋಡಿದ್ದೇ ಹೆಚ್ಚು. ನೈಜವಾದ ಆನೆಗಳನ್ನು ನೋಡಲು ಅವಕಾಶಗಳೇ ಇಲ್ಲ. ಯಾಕೆಂದರೆ ಇಲ್ಲಿ ಅಂತಹ ಅರಣ್ಯಗಳು ಇಲ್ಲ. ನಾವು ಚಿಕ್ಕವರಿದ್ದಾಗ ನಮ್ಮೂರಿಗೆ ಉಜ್ಜನಿ ಮಠದ ಆನೆ ಬರುತ್ತಿತ್ತು. ಅದು ಊರೊಳಗೆ ಬಂದಾಗಿನಿಂದ ಊರು ಬಿಟ್ಟು ಹೋಗುವವರೆಗೂ ನಾವು ಅದರ ಹಿಂದೆ ಹಿಂದೆ ಹೋಗುತ್ತಿದ್ದೆವು. ಅವಕಾಶ ಸಿಕ್ಕಾಗಲೆಲ್ಲ ಭಯದಿಂದ ಅದರ ಕಾಲುಗಳನ್ನು, ಬಾಲವನ್ನು, ಸೊಂಡಿಲನ್ನು ಮುಟ್ಟುತ್ತ ಖುಷಿಪಡುತ್ತಿದ್ದೆವು. ಆ ಮೂಲಕ ವರ್ಷಕ್ಕಾಗುವಷ್ಟು ಸಂತಸವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತಿದ್ದೆವು.
ಭಾರತದಲ್ಲಿ ಏಶ್ಯನ್ ಆನೆ (ಎಲಿಫಾಸ್ ಮ್ಯಾಕ್ಸಿಮಸ್) ವಿಶೇಷ ಸ್ಥಾನಮಾನ ಹೊಂದಿದೆ. ಆನೆಯು ಭಾರತೀಯ ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ನೀತಿಯನ್ನು ಸಂಕೇತಿಸುತ್ತದೆ. ಇದು ಶತಮಾನಗಳಿಂದ ಭಾರತದ ಧರ್ಮ, ಪುರಾಣ, ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದೆ. ಭಾರತೀಯರಿಗೆ ಆನೆಯ ರಕ್ಷಣೆ ಮತ್ತು ಉಳಿವನ್ನು ಖಾತ್ರಿಪಡಿಸಿಕೊಳ್ಳುವುದು ಅಳಿವಿನಂಚಿನಲ್ಲಿರುವ ಮತ್ತೊಂದು ಪ್ರಭೇದಗಳನ್ನು ರಕ್ಷಿಸುವುದಕ್ಕಿಂತ ಹೆಚ್ಚಿನದಾಗಿದೆ. ಹುಲಿಯನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಗೊತ್ತುಪಡಿಸಲಾಗಿದ್ದರೂ, ಹೆಚ್ಚಿನ ಭಾರತೀಯರಿಗೆ ಆನೆಯು ವಾಸ್ತವಿಕ ರಾಷ್ಟ್ರೀಯ ಪ್ರಾಣಿಯಾಗಿದೆ. ಆನೆ ಇಲ್ಲದೆ ಭಾರತವನ್ನು ಕಲ್ಪಿಸಿಕೊಳ್ಳುವುದು ತುಸು ತ್ರಾಸದಾಯಕ ಎನಿಸುತ್ತದೆ.
ಭಾರತವು ಕಾಡು ಆನೆಗಳನ್ನು ಪಳಗಿಸುವ ಆಕರ್ಷಕ ಇತಿಹಾಸವನ್ನು ಹೊಂದಿತ್ತು ಎಂಬುದಕ್ಕೆ ಐತಿಹಾಸಿಕ ಪುರಾವೆಗಳಿವೆ. ಕ್ರಿ.ಪೂ. 6000ರಲ್ಲಿನ ಸಿಂಧೂ ನಾಗರಿಕತೆಯ ಕಾಲದಲ್ಲಿನ ರಾಕ್ ಪೇಟಿಂಗ್‌ಗಳಿಂದ ಆನೆಯನ್ನು ಪಳಗಿಸುತ್ತಿದ್ದರು ಎಂಬುದು ತಿಳಿದುಬರುತ್ತದೆ. ಕ್ರಿ.ಪೂ. 2500ರಿಂದ 1500ರ ಅವಧಿಯಲ್ಲಿನ ಸಿಂಧೂ ಕಣಿವೆಯ ನಾಗರಿಕತೆಯ ಮುದ್ರೆಗಳು, ಆ ಸಮಯದಲ್ಲಿ ಭಾರತದಲ್ಲಿ ಸಾಕಿದ ಆನೆಗಳ ಉಪಸ್ಥಿತಿಯನ್ನು ಸೂಚಿಸುತ್ತವೆ. ಸುಮಾರು ಕ್ರಿ.ಪೂ. 1500ರಲ್ಲಿ ಭಾರತವನ್ನು ಪ್ರವೇಶಿಸಿದರೆಂದು ನಂಬಲಾದ ಆರ್ಯರು ಆನೆಗಳನ್ನು ಪಳಗಿಸುವ ಕಲೆಯನ್ನು ಅಳವಡಿಸಿಕೊಂಡರು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಅಂತೆಯೇ ವೇದ, ಉಪನಿಷತ್ತುಗಳಂತಹ ಪ್ರಾಚೀನ ಸಾಹಿತ್ಯಗಳಲ್ಲೂ ತರಬೇತಿ ಪಡೆದ ಆನೆಗಳ ಉಲ್ಲೇಖನಗಳನ್ನು ಗಮನಿಸಬಹುದು.
ಇನ್ನು ರಾಜ ಮಹಾರಾಜರುಗಳ ಕಾಲದಿಂದಲೂ ಆನೆಯನ್ನು ಬಳಸುತ್ತಿರುವ ಬಗ್ಗೆ ಅನೇಕ ದಾಖಲೆಗಳು ಸಿಗುತ್ತವೆ. ಸೈನ್ಯದ ಕಾರ್ಯಾಚರಣೆಯಿಂದ ಬೃಹತ್ ದೇವಾಲಯಗಳ ನಿರ್ಮಾಣದವರೆಗೆ ಅನೇಕ ಕೆಲಸಗಳಿಗೆ ಪಳಗಿಸಿದ ಆನೆಯ ಬಳಕೆ ನಡೆದಿರುವುದನ್ನು ಇತಿಹಾಸ ತಿಳಿಸುತ್ತದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಆನೆಗಳ ತಾಲೀಮು ನೋಡಿಕೊಳ್ಳುವ ಆನೆಗಳ ಮೇಲ್ವಿಚಾರಕನ ಕರ್ತವ್ಯದ ಉಲ್ಲೇಖವಿದೆ. ಇದು ರಾಜ್ಯದ ಪರಿಧಿಯಲ್ಲಿ ಆನೆ ಅಭಯಾರಣ್ಯಗಳ ಸ್ಥಾಪನೆಯನ್ನು ಸೂಚಿಸುತ್ತದೆ. ಅಭಯಾರಣ್ಯದೊಳಗೆ ಯಾರಾದರೂ ಆನೆಯನ್ನು ಕೊಂದರೆ ಮರಣದಂಡನೆ ವಿಧಿಸಲಾಗುತ್ತಿತ್ತು ಎಂಬುದು ತಿಳಿಯುತ್ತದೆ. ಅಶೋಕ ಚಕ್ರವರ್ತಿಯ ಆಳ್ವಿಕೆಯಲ್ಲಿ ಆನೆಯು ಬೌದ್ಧಧರ್ಮದ ಸಂಕೇತವಾಯಿತು. ಅಶೋಕನ ಶಾಸನಗಳು ಆನೆಗಳು ಮತ್ತು ಇತರ ಪ್ರಾಣಿಗಳ ಚಿಕಿತ್ಸೆಗಾಗಿ ಆಸ್ಪತ್ರೆಗಳ ಸ್ಥಾಪನೆಯನ್ನು ಉಲ್ಲೇಖಿಸುತ್ತವೆ. ಭಾರತದಲ್ಲಿ ಆನೆಗಳನ್ನು ಸೆರೆಹಿಡಿಯುವ ಮತ್ತು ತರಬೇತಿ ನೀಡುವ ವಿವಿಧ ವಿಧಾನಗಳ ಕುರಿತು ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ಭೇಟಿ ನೀಡಿದ್ದ ಗ್ರೀಕ್ ರಾಯಭಾರಿ ಮೆಗಾಸ್ತಾನೀಸ್ ದಾಖಲಿಸಿದ್ದಾನೆ.
ಮಾನವನು ಆನೆಗಳನ್ನು ಪಳಗಿಸಿಕೊಂಡ ಮತ್ತು ತನ್ನ ವಿವಿಧ ಕಾರ್ಯಗಳಿಗೆ ಅವುಗಳನ್ನು ಬಳಸಿಕೊಂಡ ಬಗ್ಗೆ ಸಾಕಷ್ಟು ನಿದರ್ಶನಗಳು ಇತಿಹಾಸದುದ್ದಕ್ಕೂ ದೊರೆಯುತ್ತವೆ. ಆಧುನಿಕ ಯುಗದಲ್ಲಿಯೂ ಆನೆಗಳನ್ನು ಶಿಕಾರ್ (ಬೇಟೆ)ಗಾಗಿ, ಆನೆ ಸೆರೆಹಿಡಿಯುವಿಕೆಗೆ, ಸಾರಿಗೆ ಕಾರ್ಯಾಚರಣೆಗಳು, ಪ್ರವಾಸೋದ್ಯಮ, ದೇವಾಲಯದ ಮೆರವಣಿಗೆಗಳು, ಸರ್ಕಸ್ ಪ್ರದರ್ಶನಗಳು ಮತ್ತು ಸೀಮಿತ ಪ್ರಮಾಣದಲ್ಲಿ ಕೃಷಿ ಕೆಲಸಗಳಿಗಾಗಿ ಬಳಸಲಾಗುತ್ತದೆ.
ಪುರಾತನ ಆದಿ ಮಾನವನ ಕಾಲದಿಂದ ಕಂಪ್ಯೂಟರ್ ಯುಗದವರೆಗಿನ ಕಥೆಗಳಲ್ಲಿ ಆನೆ ಮತ್ತು ಮಾನವನ ಅವಿನಾಭಾವ ಸಂಬಂಧವನ್ನು ಗಮನಿಸಬಹುದು. ಆದರೆ ಇಲ್ಲಿ ಗಮನಿಸಬೇಕಾದ ಗಂಭೀರ ಅಂಶವೆಂದರೆ ಸಂಖ್ಯೆ. ಮಾನವರ ಸಂಖ್ಯೆ ಏರುತ್ತಾ ಹೋದಂತೆ ಆನೆಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗಿದ್ದು ಮಾತ್ರ ದುರಂತಕಾರಿ. ಹಿಂದಿನ ಕಾಲದಲ್ಲಿ ಮಾನವ ಜನಸಂಖ್ಯೆ ಕಡಿಮೆ ಇದ್ದಾಗ ಕಾಡುಗಳು ಹೇರಳವಾಗಿದ್ದವು. ಆಗ ಭಾರತೀಯ ಕಾಡುಗಳು ಆನೆಗಳಿಂದ ತುಂಬಿದ್ದವು. ಇತ್ತೀಚಿನ ವರ್ಷಗಳಲ್ಲಿ ಆವಾಸಸ್ಥಾನದ ನಷ್ಟ, ಬೇಟೆಯಾಡುವುದು, ಸೆರೆಹಿಡಿಯುವುದು ಸೇರಿದಂತೆ ಇತರ ಕಾರಣಗಳಿಂದಾಗಿ ಭಾರತದಲ್ಲಿ ಆನೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
1980ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಕಾಡು ಆನೆಗಳ ಅಂದಾಜನ್ನು ಮಾಡಲಾಗಿತ್ತು. ಅದರಂತೆ ಭಾರತದಲ್ಲಿ 14,800-16,455 ಆನೆಗಳಿರಬಹುದೆಂದು ಅಂದಾಜಿಸಲಾಗಿತ್ತು. 1997 ಮತ್ತು 2000ರ ನಡುವೆ ಭಾರತದ ವಿವಿಧ ರಾಜ್ಯಗಳಲ್ಲಿ ಕಾಡು ಆನೆಗಳ ವಿವರವಾದ ಗಣತಿಯನ್ನು ಕೈಗೊಳ್ಳಲಾಯಿತು. ಗಣತಿ ಪ್ರಕಾರ ಈಶಾನ್ಯದಲ್ಲಿ (ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ ಮತ್ತು ನಾಗಾಲ್ಯಾಂಡ್) 9,401 ಆನೆಗಳು, ಪೂರ್ವದಲ್ಲಿ (ಬಿಹಾರ, ಜಾಖರ್ಂಡ್ ಮತ್ತು ಒಡಿಶಾ) 2,772, ವಾಯುವ್ಯದಲ್ಲಿ (ಉತ್ತರ ಪ್ರದೇಶ ಮತ್ತು ಉತ್ತರಾಂಚಲ್) 1,000-1,984 ಮತ್ತು ದಕ್ಷಿಣದಲ್ಲಿ (ಆಂಧ್ರ ಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡು) 14,853 ಆನೆಗಳನ್ನು ಗಣತಿ ಮಾಡಲಾಗಿತ್ತು. 2017ರಲ್ಲಿ ಪ್ರಾಜೆಕ್ಟ್ ಎಲಿಫೆಂಟಾ ವತಿಯಿಂದ ನಡೆದ ಗಣತಿಯಲ್ಲಿ 29,964 ಆನೆಗಳನ್ನು ಗಣತಿ ಮಾಡಲಾಗಿದೆ.
ಮೇಲಿನ ಅಂಕಿ-ಅಂಶಗಳನ್ನು ಗಮನಿಸಿದರೆ ಭಾರತದಲ್ಲಿ ಕಾಡು ಆನೆಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಕಾಣಬಹುದು. ಆದರೆ ಪರಿಸ್ಥಿತಿ ನಿಜವಾಗಿಯೂ ಆಶಾದಾಯಕವಾಗಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಆನೆಗಳ ಆವಾಸಸ್ಥಾನ ಮತ್ತು ಸಂಖ್ಯೆಯಲ್ಲಿ ಗಮನಾರ್ಹ ಕುಸಿತವಾಗಿದೆ. ಆನೆಗಳ ಸಂಖ್ಯೆ ಹೆಚ್ಚಿರುವ ದಕ್ಷಿಣ ರಾಜ್ಯಗಳಾದ ಕೇರಳ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿಯೂ ದಂತಕ್ಕಾಗಿ ಆನೆಗಳನ್ನು ಬೇಟೆಯಾಡುವುದು ಆನೆಗಳ ಸಂಖ್ಯೆ ಕಡಿಮೆಯಾಗಲು ಕಾರಣಗಳಾಗಿವೆ.
ಆನೆಗಳ ಸಂಖ್ಯೆಯನ್ನು ಹೆಚ್ಚಿಸಲು ಸರಕಾರವು ಅನೇಕ ಮಹತ್ವದ ಕಾರ್ಯಾಚರಣೆಗಳನ್ನು ಕೈಗೊಂಡಿದೆ. ಅದರಲ್ಲಿ ಮುಖ್ಯವಾಗಿ ಕೆಲವು ಕಡೆಗಳಲ್ಲಿ ಆನೆಗಳ ಕಾರಿಡಾರ್‌ಗಳನ್ನು ನಿರ್ಮಿಸುವ ಮೂಲಕ ಅವುಗಳಿಗೆ ಸೂಕ್ತ ರಕ್ಷಣೆ ಮತ್ತು ಆವಾಸ ಸ್ಥಾನ ಒದಗಿಸುತ್ತಿದೆ. ಆನೆಯನ್ನು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಶೆಡ್ಯೂಲ್-1 ಮತ್ತು ಭಾಗ-1ರ ಅಡಿಯಲ್ಲಿ ಸಂರಕ್ಷಣೆ ಮಾಡಲಾಗುತ್ತಿದೆ. 1994ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ಸಾರಿಗೆಗೆ ಆನೆಗಳ ಬಳಕೆಯನ್ನು ನಿಷೇಧಿಸುವ ಮೂಲಕ ಆನೆಗಳ ಸಂರಕ್ಷಣೆಗೆ ಮಹತ್ವದ ತೀರ್ಪು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಆನೆಗಳು ಕೇವಲ ಭೌಗೋಳಿಕ ಮಹತ್ವವಲ್ಲದೆ ಸಾಂಸ್ಕೃತಿಕ ಮಹತ್ವವನ್ನೂ ಹೊಂದಿವೆ. ಆನೆಗಳು ಪ್ರವಾಸೋದ್ಯಮ ಕ್ಷೇತ್ರದ ಆಯಸ್ಕಾಂತಗಳಾಗಿದ್ದು, ಅರಣ್ಯ ಪ್ರದೇಶಗಳನ್ನು ರಕ್ಷಿಸಲು ಸಹಾಯ ಮಾಡುತ್ತವೆ. ಜೀವಜಗತ್ತಿನಲ್ಲಿ ಪ್ರಮುಖ ಜೀವಿಗಳಾದ ಆನೆಗಳು ಅವು ವಾಸಿಸುವ ಪರಿಸರ ವ್ಯವಸ್ಥೆಗಳ ಜೀವವೈವಿಧ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನೈಸರ್ಗಿಕ ಆವಾಸಸ್ಥಾನದ ನಷ್ಟ ಮತ್ತು ವಿಘಟನೆಯು ಕಾಡು ಆನೆಗಳನ್ನು ಮಾನವ ವಾಸಸ್ಥಾನಗಳಿಗೆ ಹತ್ತಿರ ತರುತ್ತಿದೆ. ಅದು ಸಂಘರ್ಷಗಳನ್ನು ಹುಟ್ಟುಹಾಕಿದೆ. ವಾರ್ಷಿಕವಾಗಿ 500ಕ್ಕೂ ಹೆಚ್ಚು ಮಾನವರು ಆನೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಲಕ್ಷಾಂತರ ಮೌಲ್ಯದ ಬೆಳೆಗಳು ಮತ್ತು ಆಸ್ತಿಗಳು ಹಾನಿಗೊಳಗಾಗುತ್ತವೆ. ಘರ್ಷಣೆಯ ಪ್ರತೀಕಾರವಾಗಿ ಅನೇಕ ಆನೆಗಳು ಸಾಯುತ್ತವೆ.
ಆನೆಗಳ ಸಂರಕ್ಷಣೆಗಾಗಿ ಭಾರತದ 15 ರಾಜ್ಯಗಳಲ್ಲಿ 150 ಆನೆ ಕಾರಿಡಾರ್‌ಗಳಿವೆ. ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಿಗೆ ಹೊಂದಿಕೊಂಡಂತೆ ಒಂಭತ್ತು ಆನೆ ಕಾರಿಡಾರ್‌ಗಳಿವೆ. ಇತ್ತೀಚಿನ ವರ್ಷಗಳಲ್ಲಿ ರೈಲು ಹಳಿಗಳಲ್ಲಿ ಆನೆಗಳ ದುರಂತ ಸಾವನ್ನು ತಪ್ಪಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ತಂತ್ರಜ್ಞಾನದ ಮೊರೆ ಹೋಗುವುದು ಉತ್ತಮ ಎನಿಸುತ್ತದೆ.
ಕೆನಡಾದಲ್ಲಿ ಪ್ರಾಣಿ-ರೈಲು ಘರ್ಷಣೆಯನ್ನು ತಗ್ಗಿಸಲು ಮಿನುಗುವ ದೀಪಗಳು ಮತ್ತು ಬೆಲ್ ಶಬ್ದಗಳನ್ನು ಒಳಗೊಂಡಿರುವ ರೈಲು-ಪ್ರಚೋದಿತ ಎಚ್ಚರಿಕೆ ವ್ಯವಸ್ಥೆಗಳನ್ನು ಟ್ರ್ಯಾಕ್‌ಗಳ ಉದ್ದಕ್ಕೂ ವಿವಿಧ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ರೈಲು ಆಗಮನಕ್ಕೆ 30 ಸೆಕೆಂಡುಗಳ ಮೊದಲು ಸಕ್ರಿಯಗೊಳಿಸಲಾದ ಈ ಸಂಕೇತಗಳು, ಸಮೀಪಿಸುತ್ತಿರುವ ರೈಲುಗಳೊಂದಿಗೆ ಎಚ್ಚರಿಕೆ ಶಬ್ದಗಳನ್ನು ನೀಡುವ ಮೂಲಕ ಪ್ರಾಣಿಗಳನ್ನು ರೈಲು ಹಳಿಗಳಿಂದ ದೂರ ಸರಿಯುವಂತೆ ಮಾಡುತ್ತದೆ. ಭಾರತದಲ್ಲೂ ಇಂತಹ ವ್ಯವಸ್ಥೆಯನ್ನು ಜಾರಿಗೆ ತರುವ ಹಿನ್ನೆಲೆಯಲ್ಲಿ ‘ಗಜರಾಜ್’ ಎಂಬ ವ್ಯವಸ್ಥೆ ಜಾರಿಗೆ ತರಲಾಗಿದೆ. ಭಾರತೀಯ ರೈಲ್ವೆಯು ಆಪ್ಟಿಕಲ್ ಫೈಬರ್ ಕೇಬಲ್‌ಗಳ ಸಹಾಯದಿಂದ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದೆ. ಒಎಫ್‌ಸಿ ಕೇಬಲ್‌ಗಳು ಹಳಿಗಳಲ್ಲಿ ಹಾದುಹೋಗುವ ಆನೆಗಳನ್ನು ಜಿಯೋಫೋನಿಕ್ ಸಂವೇದಕಗಳನ್ನು ಬಳಸಿ ಮಾಹಿತಿ ನೀಡುತ್ತವೆ. ಮತ್ತು ಆನೆಗಳು ಹಳಿಗಳಿಂದ ದೂರ ಸರಿಯುವಂತೆ ದೊಡ್ಡದಾದ ಶಬ್ದವನ್ನು ಉಂಟು ಮಾಡುತ್ತವೆ. ಇದರಿಂದ ಆನೆಗಳು ರೈಲುಗಳಿಗೆ ಢಿಕ್ಕಿ ಹೊಡೆಯುವ ಪ್ರಮಾಣ ಕಡಿಮೆಯಾಗಿದೆ. ಇದನ್ನು ಇನ್ನಷ್ಟು ಉತ್ತಪಡಿಸಲು ಕೃತಕ ಬುದ್ಧಿಮತ್ತೆಯನ್ನೂ ಸಹ ಬಳಸಿಕೊಳ್ಳಲಾಗುತ್ತಿದೆ. ಆನೆಗಳನ್ನು ಉಳಿಸುವ ಪ್ರಯತ್ನದಲ್ಲಿ ಕೃತಕ ಬುದ್ಧಿಮತ್ತೆಯು ಪ್ರಬಲ ಮಿತ್ರನಾಗಿ ಹೊರಹೊಮ್ಮುತ್ತಿದೆ.
ದೈತ್ಯ ದೇಹಿಗಳಾದ ಆನೆಗಳು ಇಡೀ ವನ್ಯಜೀವಿ ಸಮುದಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ತಮ್ಮ ಸುತ್ತಲಿನ ಭೌತಿಕ ಪರಿಸರವನ್ನು ಮಾರ್ಪಡಿಸುತ್ತವೆ. ಆನೆಗಳು ವಿವಿಧ ಜೀವಿಗಳಿಗೆ ಆವಾಸಸ್ಥಾನದ ಸಂಕೀರ್ಣತೆಯನ್ನು ಹೆಚ್ಚಿಸಲು ಪರಿಸರ ವ್ಯವಸ್ಥೆಯ ಇಂಜಿನಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಅವುಗಳ ಚಟುವಟಿಕೆಗಳು ಹಲ್ಲಿಗಳಂತಹ ಸಣ್ಣ ಜೀವಿಗಳಿಗೆ ಹೊಸ ಆವಾಸಸ್ಥಾನವನ್ನು ಉತ್ಪಾದಿಸುತ್ತದೆ. ಆನೆಗಳು ಕಾಡಿನಲ್ಲಿ ಸಾಗುವಾಗ ದಟ್ಟವಾದ ಅರಣ್ಯದ ಮೇಲಾವರಣಗಳನ್ನು ತೆರೆಯುತ್ತವೆ. ಇದು ವಿವಿಧ ಸಸ್ಯ ಪ್ರಭೇದಗಳಿಗೆ ಬೆಳಕನ್ನು ಒದಗಿಸುವ ಮೂಲಕ ಸಸ್ಯವರ್ಗ ಬೆಳೆಯಲು ಅವಕಾಶ ಮಾಡಿಕೊಡುತ್ತವೆ.
ಆನೆ ಸಂರಕ್ಷಣೆ ಕೇವಲ ಆನೆಯನ್ನು ಮಾತ್ರ ಸಂರಕ್ಷಿಸುತ್ತಿಲ್ಲ. ಅದು ಇಡೀ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುತ್ತದೆ. ಆ ಮೂಲಕ ಜೀವಸಂಕುಲವನ್ನು ಸಂರಕ್ಷಿಸಿದಂತಾಗುತ್ತದೆ. ಈ ಎಲ್ಲಾ ಅಂಶಗಳನ್ನು ಗಮನಿಸುತ್ತಲೇ ಪ್ರತೀವರ್ಷದಂತೆ ಈ ವರ್ಷವೂ ಆಗಸ್ಟ್ 12ರಂದು ವಿಶ್ವ ಆನೆಗಳ ದಿನ ಬಂದಿದೆ. ‘ಪ್ರಾಗೈತಿಹಾಸಿಕ ಸೌಂದರ್ಯ, ದೇವತಾಶಾಸ್ತ್ರದ ಪ್ರಸ್ತುತತೆ ಮತ್ತು ಪರಿಸರ ಪ್ರಾಮುಖ್ಯತೆಯನ್ನು ವ್ಯಕ್ತಿಗತಗೊಳಿಸುವುದು’ ಎನ್ನುವ ಥೀಮ್‌ನೊಂದಿಗೆ ಈ ವರ್ಷದ ಆನೆಗಳ ದಿನವನ್ನು ಆಚರಿಸಲಾಗುತ್ತದೆ. ಆನೆಗಳು ಬದುಕಲು ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸುವ ಪ್ರಾಮುಖ್ಯತೆಯನ್ನು ಈ ಥೀಮ್ ಎತ್ತಿ ತೋರಿಸುತ್ತದೆ. ಆನೆಗಳು ಎದುರಿಸುವ ಅಪಾಯಗಳು ಮತ್ತು ಪರಿಸರ ವ್ಯವಸ್ಥೆಗಳಲ್ಲಿ ಅವುಗಳ ನಿರ್ಣಾಯಕ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಇದು ಹೊಂದಿದೆ. ಇದು ಕೇವಲ ಒಂದು ದಿನಕ್ಕೆ ಸೀಮಿತವಾಗದೇ ವರ್ಷವಿಡೀ ಆನೆಗಳ ದಿನವನ್ನಾಗಿ ಆಚರಿಸುವಂತಾಗಲಿ ಎಂಬುದೇ ಲೇಖನದ ಆಶಯ.