ಸ್ತನ ಕ್ಯಾನ್ಸರ್: ಹಿಂಜರಿಕೆ ಬೇಡ, ಅರಿವು ಇರಲಿ
ಮೂವತ್ತನಾಲ್ಕು ವಯಸ್ಸಿನ ಸುಮಗೆ(ಹೆಸರು ಬದಲಿಸಿದೆ) ಮೂರು ತಿಂಗಳ ಮಗು ಇದೆ. ಆದರೆ ತನ್ನ ಮಗುವಿಗೆ ತನ್ನ ಮೊಲೆ ಹಾಲು ಕುಡಿಸಲು ಆಗುತ್ತಿಲ್ಲ. ಅದಕ್ಕಾಗಿ ಅವರು ದುಬಾರಿ ಹಣ ನೀಡಿ ಮೊಲೆ ಹಾಲು ಕುಡಿಸಲು ಬಾಡಿಗೆ ತಾಯಿಯನ್ನು ಪಡೆದಿದ್ದಾರೆ. ಒಂದೆಡೆ ಮಗುವನ್ನು ಉಳಿಸಿಕೊಳ್ಳಲು ಇದು ಅನಿವಾರ್ಯವಾದರೂ, ಇನ್ನೊಂದೆಡೆ ಆ ಮಗುವಿನ ಭವಿಷ್ಯದ ದೃಷ್ಟಿಯಿಂದಲೂ ಒಳ್ಳೆಯದು. ಇದು ಕೇವಲ ಸುಮಳ ಪರಿಸ್ಥಿತಿ ಮಾತ್ರವಲ್ಲ. ಭಾರತದಲ್ಲಿ ಅನೇಕ ತಾಯಂದಿರ ಸಂಕಷ್ಟವೂ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್ ಒಂದು ಗಂಭೀರ ಸಮಸ್ಯೆಯಾಗುತ್ತಿರುವುದು ದುರಂತ ಎನಿಸಿದೆ.
ಸ್ತನ್ಯಪಾನ ಪ್ರತಿಯೊಬ್ಬ ಮಾನವ ಜೀವಿಯ ಮೊದಲ ಆಹಾರ. ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ತನ್ಯಪಾನಕ್ಕೂ ಕುತ್ತು ಬರುತ್ತಿರುವುದು ಆತಂಕ ತಂದಿದೆ. ಆಧುನಿಕ ಜೀವನಶೈಲಿಯು ಹಲವಾರು ಆತಂಕಗಳನ್ನು ಸೃಷ್ಟಿಮಾಡಿದೆ. ಅದರಲ್ಲಿ ಸ್ತನ್ಯಪಾನವೂ ಒಂದು. ನಮ್ಮ ಆಹಾರ ಪದ್ಧತಿಗೂ ಮತ್ತು ಜೀವನಶೈಲಿಗೂ ಹೊಂದಾಣಿಕೆ ತಪ್ಪಿದೆ. ಅದರ ಪರಿಣಾಮವಾಗಿ ಅನೇಕ ಜಾಡ್ಯಗಳು ನಮ್ಮನ್ನು ಅಂಟಿಕೊಳ್ಳತೊಡಗಿವೆ.
ಕ್ಯಾನ್ಸರ್ ಎಂಬ ಹೆಸರೇ ಒಂದು ರೀತಿಯಲ್ಲಿ ಭಯಾನಕ. ಅದರಲ್ಲೂ ಸ್ತನ ಕ್ಯಾನ್ಸರ್ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಅಧಿಕಗೊಳ್ಳುತ್ತಿರುವುದರ ಹಿಂದೆ ನಮ್ಮ ಜೀವನಶೈಲಿಯ ತಪ್ಪುಗಳು ಅಡಗಿವೆ. ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಬಿಡುಗಡೆ ಮಾಡಿದ ವರದಿಯ ಪ್ರಕಾರ ಸ್ತನ ಕ್ಯಾನ್ಸರ್ ನಗರ ಕೇಂದ್ರಿತವಾಗಿರುವುದು ತಿಳಿದುಬರುತ್ತದೆ. ಅಂದರೆ ಗ್ರಾಮೀಣ ನಿವಾಸಿಗಳಿಗಿಂತ ನಗರ ವಾಸಿಗಳಲ್ಲಿ ಹೆಚ್ಚು ಸ್ತನ ಕ್ಯಾನ್ಸರ್ ಕಂಡುಬರುತ್ತಿರುವುದು ಕಳವಳಕಾರಿಯಾಗಿದೆ. ಈ ವರದಿ ಗಮನಿಸಿದರೆ ಆರೋಗ್ಯದ ಕಾಳಜಿಗಿಂತ ಜೀವನಶೈಲಿ ಹೆಚ್ಚು ಪ್ರಭಾವ ಬೀರಿರುವುದನ್ನು ಗಮನಿಸಬಹುದು.
ಪ್ರತಿಯೊಬ್ಬರೂ ತಮ್ಮ 25ನೇ ವಯಸ್ಸಿನಿಂದ ಪ್ರತೀ ತಿಂಗಳು ತಮ್ಮ ಸ್ತನಗಳನ್ನು ಸ್ವಯಂ ಪರೀಕ್ಷೆ ಮತ್ತು 40ನೇ ವಯಸ್ಸಿನಿಂದ ಪ್ರತೀ ವರ್ಷ ಮ್ಯಾಮೊಗ್ರಫಿ ಸ್ಕ್ರೀನಿಂಗ್‌ಗೆ ತಜ್ಞ ವೈದ್ಯರು ಸೂಚಿಸುತ್ತಾರೆ. ಸ್ತನ ಕ್ಯಾನ್ಸರ್ ಕೇವಲ ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತದೆ ಎಂಬುದು ತಪ್ಪು ಕಲ್ಪನೆ. ಶೇಕಡಾ 0.5ರಿಂದ ಶೇಕಡಾ 1ರಷ್ಟು ಸ್ತನ ಕ್ಯಾನ್ಸರ್ ಪುರುಷರಲ್ಲಿ ಕಂಡುಬರುತ್ತದೆ. 2022ರಲ್ಲಿ ಜಾಗತಿಕವಾಗಿ 6,70,000 ಜನರು ಸ್ತನ ಕ್ಯಾನ್ಸರ್‌ನಿಂದ ಸಾವಿಗೀಡಾಗಿದ್ದಾರೆ. 2022ರಲ್ಲಿ 185 ದೇಶಗಳಲ್ಲಿ 157 ದೇಶಗಳ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ ಎಂದು ತಿಳಿದುಬಂದಿದೆ.
ಹೆಚ್ಚುತ್ತಿರುವ ಸ್ಥೂಲಕಾಯತೆ, ಮಿತಿಮೀರಿದ ಆಲ್ಕೋಹಾಲ್ ಸೇವನೆ, ಆನುವಂಶೀಯತೆ, ಚಿಕ್ಕ ವಯಸ್ಸಿನಲ್ಲಿ ಮೈನೆರೆಯುವುದು, ವಯಸ್ಸಾದ ನಂತರ ಋತುಬಂಧನಕ್ಕೊಳಗಾಗುವುದು, ಹಾರ್ಮೊನ್ ಚಿಕಿತ್ಸೆಯ ವೈಪರೀತ್ಯ ಹಾಗೂ ಲಿಂಗ ಬದಲಾವಣೆಯಂತಹ ಕೆಲ ಕಾರಣಗಳಿಂದ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಇವುಗಳ ಜೊತೆಗೆ ಬಹಳ ಮುಖ್ಯವಾಗಿ ದೈಹಿಕ ಶ್ರಮ ಇಲ್ಲದ ಕೆಲಸಗಳು ಸಹ ಸ್ತನ ಕ್ಯಾನ್ಸರ್‌ಗೆ ಕಾರಣವಾಗಿವೆ. ಅಲ್ಲದೆ ಉತ್ತಮ ಜೀವನಶೈಲಿ ಅನುಕರಣೆಯಿಂದಾಗಿ ಫ್ಯಾಶನ್ ಲೋಕಕ್ಕೆ ನಮ್ಮನ್ನು ನಾವು ಅರ್ಪಿಸಿಕೊಂಡಿದ್ದೇವೆ. ಫ್ಯಾಶನ್ ಅನುಕರಣೆಯ ಭಾಗವಾಗಿ ಧರಿಸುವ ಅಗ್ಗದ ಹಾಗೂ ಕಡಿಮೆ ಗುಣಮಟ್ಟದ ಬಟ್ಟೆಗಳೂ ಸ್ತನ ಕ್ಯಾನ್ಸರ್‌ಗೆ ಕಾರಣವಾಗಿವೆ.
ಸ್ತನ ಕ್ಯಾನ್ಸರ್‌ನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಾಕಷ್ಟು ಅವಕಾಶವಿದೆ. ಆದರೆ ಅದರ ಲಕ್ಷಣಗಳನ್ನು ಪತ್ತೆ ಹಚ್ಚುವಲ್ಲಿ ಬಹುತೇಕ ಮಹಿಳೆಯರು ಹಿಂಜರಿಯುತ್ತಿದ್ದಾರೆ. ಬಹುತೇಕ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಪತ್ತೆ ಮಾಡಿಕೊಳ್ಳುವ ಪ್ರಾಥಮಿಕ ವಿಧಾನಗಳು ತಿಳಿದಿಲ್ಲದ ಕಾರಣ ಹಿಂಜರಿಕೆ ಸಹಜವಾಗಿದೆ.
ಸ್ತನ ಕ್ಯಾನ್ಸರ್ ಒಂದು ಸಾಮಾನ್ಯ ಕಾಯಿಲೆಯಾಗಿದ್ದು, ಅಸಹಜ ಸ್ತನ ಕೋಶಗಳು ನಿಯಂತ್ರಣದಿಂದ ಹೊರಬರುತ್ತವೆ ಮತ್ತು ಗೆಡ್ಡೆಗಳನ್ನು ರೂಪಿಸುತ್ತವೆ. ಇದನ್ನು ಗಮನಿಸದೆ ಬಿಟ್ಟರೆ ಗೆಡ್ಡೆಗಳು ದೇಹದಾದ್ಯಂತ ಹರಡಿ ಮಾರಣಾಂತಿಕವಾಗಬಹುದು. ಇಂತಹ ಗೆಡ್ಡೆಗಳನ್ನು ನಿರ್ಲಕ್ಷಿಸದೆ ಕಾಲಕಾಲಕ್ಕೆ ಪರೀಕ್ಷಿಸಿಕೊಳ್ಳುತ್ತಿರಬೇಕು. ಅವುಗಳ ಗಾತ್ರದಲ್ಲಿ ಬದಲಾವಣೆಗಳು ಆಗುತ್ತಿದ್ದರೆ ತಪ್ಪದೇ ವೈದ್ಯರ ಮಾರ್ಗದರ್ಶನ ಪಡೆಯಬೇಕು. ಪ್ರಾಥಮಿಕ ಹಂತದಲ್ಲಿ ಇಂತಹ ಕ್ಯಾನ್ಸರ್‌ನ್ನು ಸುಲಭವಾಗಿ ತಡೆಯಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಸ್ತನ ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡಬಹುದು ಮತ್ತು ಇತರ ರೋಗಲಕ್ಷಣಗಳನ್ನು ಪ್ರಚೋದಿಸಬಹುದು. ಹಾಗಾಗಿ ಹರಡುವಿಕೆಯ ಅತ್ಯಂತ ಸಾಮಾನ್ಯವಾದ ಮೊದಲ ಪತ್ತೆಹಚ್ಚಬಹುದಾದ ತಾಣವೆಂದರೆ ತೋಳಿನ ಕೆಳಗಿರುವ(ಕಂಕುಳಲ್ಲಿರುವ) ದುಗ್ಧರಸ ಗ್ರಂಥಿಗಳು. ಕಾಲಾನಂತರದಲ್ಲಿ ಕ್ಯಾನ್ಸರ್ ಕೋಶಗಳು ಶ್ವಾಸಕೋಶಗಳು, ಯಕೃತ್ತು, ಮೆದುಳು ಮತ್ತು ಮೂಳೆಗಳು ಸೇರಿದಂತೆ ಇತರ ಅಂಗಗಳಿಗೆ ಹರಡಬಹುದು. ನಂತರ ಅವು ಮೂಳೆ ನೋವು ಅಥವಾ ತಲೆನೋವುಗಳಂತಹ ಹೊಸ ಕ್ಯಾನ್ಸರ್ ಸಂಬಂಧಿತ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯು ಸ್ತನ ಕ್ಯಾನ್ಸರ್‌ಗೆ ಸಾಕಷ್ಟು ಚಿಕಿತ್ಸೆಗಳಿವೆ. ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೇಡಿಯೊಥೆರಪಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆರಂಭಿಕ ಹಂತದ ಸ್ತನ ಕ್ಯಾನ್ಸರ್‌ನ್ನು ರೇಡಿಯೋ ಥೆರಪಿಯಿಂದ ತಡೆಯಬಹುದು. ನಂತರದ ಹಂತದ ಕ್ಯಾನ್ಸರ್‌ಗಳೊಂದಿಗೆ ಸ್ತನಛೇದನವನ್ನು ನಡೆಸಿದಾಗಲೂ ರೇಡಿಯೊಥೆರಪಿ ಕ್ಯಾನ್ಸರ್ ಮರುಕಳಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ತನ ಕ್ಯಾನ್ಸರ್‌ನ ಮುಂದುವರಿದ ಹಂತಗಳಲ್ಲಿ, ಕೆಲವು ಸಂದರ್ಭಗಳಲ್ಲಿ, ರೇಡಿಯೊ ಥೆರಪಿ ಚಿಕಿತ್ಸೆಯು ಸಾಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಭಾರತದಲ್ಲಿ ಪ್ರತೀ 4 ನಿಮಿಷಕ್ಕೆ ಒಬ್ಬ ಮಹಿಳೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಮತ್ತು 8 ನಿಮಿಷಕ್ಕೆ ಒಬ್ಬ ಮಹಿಳೆ ಸ್ತನ ಕ್ಯಾನ್ಸರ್‌ನಿಂದ ಸಾಯುತ್ತಾಳೆ. 2018ರಲ್ಲಿ ಭಾರತದಲ್ಲಿ ಅಂದಾಜು 1,62,468 ಮಹಿಳೆಯರು ಸ್ತನ ಕ್ಯಾನ್ಸರ್ ಪೀಡಿತರಾಗಿದ್ದರು. 2018ರಲ್ಲಿ ಭಾರತದಲ್ಲಿ 87,090 ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು. ಇದು ಆ ವರ್ಷದಲ್ಲಿ ವಿಶ್ವದ ಎರಡನೇ ಸ್ಥಾನದಲ್ಲಿತ್ತು.
ಪ್ರಸ್ತುತ ಐಸಿಎಂಆರ್ ಬಿಡುಗಡೆ ಮಾಡಿದ ಸ್ತನ ಕ್ಯಾನ್ಸರ್ ಅಧ್ಯಯನದ ವರದಿಯ ಪ್ರಕಾರ ಭಾರತದ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ತೆಲಂಗಾಣ, ತಮಿಳುನಾಡು, ದಿಲ್ಲಿ ನಂತರದ ಸ್ಥಾನದಲ್ಲಿವೆ. ವರದಿಯ ಸಾರಾಂಶದ ಪ್ರಕಾರ 2025ರ ವೇಳೆಗೆ ಈ ಪ್ರಮಾಣ ಗಣನೀಯವಾಗಿ ಏರಿಕೆಯಾಗಲಿದೆಯಂತೆ. ಹಾಗಾಗಿ ಈ ಕುರಿತು ಎಲ್ಲಡೆ ಗಂಭೀರ ಚಿಂತನೆಗಳು ಅಗತ್ಯ.
ಇತರ ಕ್ಯಾನ್ಸರ್‌ನಂತೆ ಸ್ತನ ಕ್ಯಾನ್ಸರ್ ತೀವ್ರ ಅಪಾಯಕಾರಿಯಲ್ಲದಿದ್ದರೂ ನಿರ್ಲಕ್ಷ್ಯ ಮಾಡುವಂತಿಲ್ಲ. ಸಕಾಲದಲ್ಲಿ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ಪಡೆಯುವುದೊಂದೇ ಸುಲಭ ಮಾರ್ಗ. ಸ್ತನ ಕ್ಯಾನ್ಸರ್ ಪತ್ತೆ ಮಾಡಲು ನೆಪಗಳನ್ನು ಹೇಳಿಕೊಳ್ಳದೇ ಮುಕ್ತವಾಗಿ ಪರೀಕ್ಷೆಗೆ ಮುಂದಾಗಬೇಕು. ಅಲ್ಲದೆ ವಯಸ್ಸಿನ ತಾರತಮ್ಯ ಬಿಟ್ಟು ಪರೀಕ್ಷೆಗೆ ಒಳಗಾಗಬೇಕು. ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಮುಂದುವರಿಸಬೇಕು.