ನೀಲಿ ರಸ್ತೆಗಳು ಗ್ರಹದ ನೀಲಿಯನ್ನು ಉಳಿಸಬಲ್ಲವೇ?
- ಆರ್.ಬಿ. ಗುರುಬಸವರಾಜ್
ಈ ನೀಲಿ ರಸ್ತೆಯು ವಾತಾವರಣದ ತಾಪಮಾನವನ್ನು ಹೀರಿಕೊಂಡು ವಾತಾವರಣಕ್ಕೆ ತಂಪು ನೀಡುತ್ತದೆ. ಡಾಂಬರ್‌ನಿಂದ ಸಾಂಪ್ರದಾಯಿಕ ರಸ್ತೆಗಳ ಕಪ್ಪು ಬಣ್ಣವು ಹೆಚ್ಚು ಶಾಖವನ್ನು ಆಕರ್ಷಿಸುತ್ತದೆ ಮತ್ತು ಹೊರಸೂಸುತ್ತದೆ ಎಂಬ ಸಂಗತಿ ಎಲ್ಲರಿಗೂ ತಿಳಿದ ವಿಷಯ. ಆದರೆ ಈಗ ಖತರ್‌ನಲ್ಲಿ ನಿರ್ಮಿತವಾದ ನೀಲಿ ರಸ್ತೆಗಳು ಡಾಂಬರ್ ರಸ್ತೆಗಿಂತ ಹೆಚ್ಚು ಉತ್ತಮವಾಗಿವೆ. ವಾತಾವರಣದ ತಾಪಮಾನವನ್ನು 15-20 ಡಿಗ್ರಿಗಳಷ್ಟು ಕಡಿಮೆ ಮಾಡುತ್ತದೆ ಎಂಬುದನ್ನು ಅಲ್ಲಿನ ತಜ್ಞರು ಕಂಡುಕೊಂಡಿದ್ದಾರೆ.
ನಮ್ಮ ಬಾಲ್ಯದಲ್ಲಿ ಪ್ಲಾಸ್ಟಿಕ್ ಹಾವಳಿ ಇರಲಿಲ್ಲ. ಈಗಿನಂತೆ ಪ್ರತೀ ಮನೆಯಲ್ಲೂ ಪ್ಲಾಸ್ಟಿಕ್ ಸಾಮಗ್ರಿಗಳಿರಲಿಲ್ಲ. ನೀರು ತರಲು ತಾಮ್ರ, ಹಿತ್ತಾಳೆ ಅಥವಾ ಕಬ್ಬಿಣ/ತಗಡಿನ ಕೊಡಗಳು ಚಾಲ್ತಿಯಲ್ಲಿದ್ದವು. ನಮ್ಮೂರಿನ (ಹೊಳಗುಂದಿ) ನಾಲ್ಕಾರು ಮನೆಗಳಲ್ಲಿ ಮಾತ್ರ ಪ್ಲಾಸ್ಟಿಕ್ ಬಕೆಟ್‌ಗಳಿದ್ದವು. ಉಳಿದಂತೆ ಎಲ್ಲರೂ ಅಲ್ಯುಮಿನಿಯಂ, ಸ್ಟೀಲ್ ಅಥವಾ ಕಬ್ಬಿಣದ ಬಕೆಟ್‌ಗಳನ್ನು ಬಳಸುತ್ತಿದ್ದರು. ಅಲ್ಲದೆ ಆಗಿನ ಪ್ಲಾಸ್ಟಿಕ್ ಬಕೆಟ್‌ಗಳು ಸೇರಿದಂತೆ ಇನ್ನಿತರ ಪ್ಲಾಸ್ಟಿಕ್ ಸಾಮಗ್ರಿಗಳು ತುಂಬಾ ಗುಣಮಟ್ಟದಿಂದ ಕೂಡಿರುತ್ತಿದ್ದವು. ಇದಕ್ಕೆ ಸಾಕ್ಷಿ ಎಂಬಂತೆ ನಮ್ಮ ತಂದೆಯವರು 1980ರಲ್ಲಿ ಆಲ್ ಇಂಡಿಯಾ ಟೂರ್ ಮಾಡುವ ವೇಳೆ ಸ್ನಾನಕ್ಕಾಗಿ ಖರೀದಿಸಿದ್ದ ಪ್ಲಾಸ್ಟಿಕ್ ಬಕೆಟ್ ಈಗಲೂ ನಮ್ಮ ಮನೆಯಲ್ಲಿದೆ. ನಿತ್ಯವೂ ಅದನ್ನು ಬಳಸುತ್ತೇವೆ. ಈಗಲೂ ಅದರ ಗುಣಮಟ್ಟ ಕಡಿಮೆಯಾಗಿಲ್ಲ, ಬಣ್ಣ ಮಾಸಿಲ್ಲ.
ಆದರೆ ಈಗಿನ ಪ್ಲಾಸ್ಟಿಕ್ ವಸ್ತುಗಳ ಗುಣಮಟ್ಟ ತುಂಬಾ ಕಳಪೆ. ಹಾಗಾಗಿ ಅವುಗಳ ಬಾಳಿಕೆಯ ಅವಧಿಯೂ ಕಡಿಮೆ. ಇಂದು ಪ್ರತೀ ಮನೆಯಲ್ಲೂ ಶೇ. 75ರಷ್ಟು ಪ್ಲಾಸ್ಟಿಕ್ ಸಾಮಗ್ರಿಗಳಿವೆ ಎಂದರೆ ಅತಿಶಯೋಕ್ತಿ ಏನಲ್ಲ. ಒಂದೆಡೆ ಪ್ಲಾಸ್ಟಿಕಾಸುರನಿಂದಾಗುವ ಅವಾಂತರಗಳು, ಇನ್ನೊಂದೆಡೆ ಜಾಗತಿಕ ತಾಪಮಾನದ ವೈಪರೀತ್ಯಗಳು. ಇವೆರಡೂ ನಿತ್ಯವೂ ಕಾಡುವ ಸಂಗತಿಗಳಾಗಿವೆ. ತಾಪಮಾನ ಏರಿಕೆಯಲ್ಲಿ ನಮ್ಮ ಜೀವನ ಶೈಲಿಯೂ ಕಾರಣವಾಗಿದೆ. ಬಹುತೇಕ ನಗರಗಳು ತಾಪಮಾನ ಕೇಂದ್ರಗಳಾಗುತ್ತಿವೆ.
ಪ್ರತೀ ನಗರವೂ ತಾಪಮಾನ ಏರಿಕೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಜಗಮಗಿಸುವ ಗಾಜುಗಳುಳ್ಳ ಬಹುಮಹಡಿ ಕಟ್ಟಡಗಳು, ಫ್ಲೈಓವರ್‌ಗಳು, ದೊಡ್ಡ ದೊಡ್ಡ ಮಾಲ್‌ಗಳು, ಹೊಗೆ ಉಗುಳುವ ವಾಹನಗಳು, ಕಾಂಕ್ರಿಟ್/ಡಾಂಬರ್ ರಸ್ತೆಗಳು, ಎಲ್ಲೆಂದರಲ್ಲಿ ತುಂಬಿ ತುಳುಕುವ ತ್ಯಾಜ್ಯಗಳು, ಮುಂತಾದವುಗಳ ಹಾವಳಿಯಿಂದ ನಗರಗಳು ಮರಗಳಿಲ್ಲದ ಕಾಂಕ್ರಿಟ್ ಕಾಡುಗಳಾಗುತ್ತಿವೆ. ಇವೆಲ್ಲದರ ಪರಿಣಾಮವಾಗಿ ಇಂದಿನ ನಗರಗಳು ಅರ್ಬನ್ ಹೀಟ್ ಐಲ್ಯಾಂಡ್‌ಗಳಾಗುತ್ತಿವೆ. ಅಂದರೆ ಪತೀ ಕ್ಷಣವೂ ತಾಪಮಾನವನ್ನು ವಾತಾವರಣಕ್ಕೆ ಬಿಡುತ್ತಲೇ ಇರುತ್ತವೆ. ಹೊಟೇಲ್‌ನ ಅಡುಗೆ ಮನೆ ಸದಾ ಬಿಸಿ ಇರುವಂತೆ ನಗರಗಳು ಸದಾ ಬ್ಯುಸಿ ಹಾಗೂ ಬಿಸಿಯಾಗಿರುತ್ತವೆ.
ನಗರಗಳಲ್ಲಿನ ಪ್ರತಿ ಕಟ್ಟಡ, ರಸ್ತೆ ಅಥವಾ ಬಯಲು ಪ್ರದೇಶಗಳು ತಾಪಮಾನವನ್ನು ಹೀರಿಕೊಳ್ಳದೆ ಎಲ್ಲವನ್ನೂ ವಾತಾವರಣಕ್ಕೆ ಬಿಟ್ಟುಕೊಡುವುದರಿಂದ ನಗರಗಳು ಅರ್ಬನ್ ಹೀಟ್ ಐಲ್ಯಾಂಡ್‌ಗಳಾಗುತ್ತಿವೆ. ಹಾಗಾಗಿ ಪ್ರತಿ ನಗರವು ಗಾಳಿ ಮತ್ತು ಗಾಳಿಯ ಹರಿವಿನ ಕೊರತೆಯಿಂದಾಗಿ ಶಾಖದ ಹೆಚ್ಚಿನ ಹೀರಿಕೊಳ್ಳುವಿಕೆ ಮತ್ತು ನಂತರದ ತಾಪಮಾನ ಹೆಚ್ಚಳವನ್ನು ಅನುಭವಿಸುವಂತಾಗುತ್ತದೆ. ಹಾಗಾಗಿ ನಗರಗಳಲ್ಲಿನ ಮೇಲ್ಮೈ ಮತ್ತು ಗಾಳಿಯ ತಾಪಮಾನದಲ್ಲಿ ಹೆಚ್ಚಳವಾಗುತ್ತಿರುವುದು ಗಮನಕ್ಕೆ ಬಾರದೆ ಇರದು. ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ 12 ಡಿಗ್ರಿ ಸೆಲ್ಸಿಯಸ್ ತಾಪಮಾನದ ವ್ಯತ್ಯಾಸವಿದೆ. ನಗರಗಳಲ್ಲಿ ಇಂತಹ ತಾಪಮಾನ ಹೆಚ್ಚಳವು ವಿಶೇಷವಾಗಿ ಮುಪ್ಪಾವಸ್ತೆಯಲ್ಲಿನ ದುರ್ಬಲ ವ್ಯಕ್ತಿಗಳಲ್ಲಿ ಶಾಖ ಸಂಬಂಧಿತ ಸಾವುಗಳಂತಹ ತೀವ್ರವಾದ ಪರಿಣಾಮಗಳನ್ನು ಉಂಟುಮಾಡಬಹುದು. ಮನೆ ಅಥವಾ ಕಚೇರಿಗಳ ಒಳಾಂಗಣವನ್ನು ತಂಪಾಗಿರಿಸಲು ಬಳಸುವ ಹವಾನಿಯಂತ್ರಿತ ವ್ಯವಸ್ಥೆಗಳೂ ತಾಪಮಾನ ಏರಿಕೆಗೆ ಕಾರಣವಾಗಿವೆ ಎಂಬ ಸತ್ಯದ ಅರಿವಿದ್ದೂ ಅವುಗಳನ್ನೇ ಬಳಸುವ ಅನಿವಾರ್ಯತೆಯಲ್ಲಿ ಬದುಕುತ್ತಿದ್ದೇವೆ. ಆದರೂ ಹಸಿರುಮನೆ ಅನಿಲವನ್ನು ಕಡಿಮೆ ಮಾಡುವ ಪ್ರಯತ್ನಗಳು ಮಾತ್ರ ನಿಂತಿಲ್ಲ.
ಹಸಿರುಮನೆ ಅನಿಲಗಳನ್ನು ತಗ್ಗಿಸಲು ಅಲ್ಲಲ್ಲಿ ಹಲವಾರು ಪ್ರಯತ್ನಗಳು ನಡೆಯುತ್ತಲೇ ಇವೆ. ಅದರಲ್ಲಿ ಬಹುಮುಖ್ಯ ಮಾರ್ಗವೆಂದರೆ ಮರಗಳನ್ನು ಬೆಳೆಸುವುದು. ಮರಗಳು ಭೂಮಿಗೆ ರಕ್ಷಾಕವಚವನ್ನು ಒದಗಿಸುತ್ತವೆ. ಹಸಿರುಮನೆ ಅನಿಲಗಳನ್ನು ಹೀರಿಕೊಂಡು ವಾತಾವರಣವನ್ನು ತಂಪಾಗಿರಿಸುತ್ತವೆ. ಆ ಮೂಲಕ ತಾಪಮಾನವನ್ನು ಕಡಿಮೆ ಮಾಡುತ್ತವೆ. ಆದರೆ ಪ್ರಸಕ್ತ ಸಂದರ್ಭದಲ್ಲಿ ಕೆಲವು ನಗರಗಳಲ್ಲಿ ಮರಗಳನ್ನು ಬೆಳೆಸಲು ಅನುಕೂಲಗಳು ಇಲ್ಲದೆ ಇರಬಹುದು. ಕೆಲವು ನಗರಗಳಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಈಗಾಗಲೇ ಇರುವ ಮರಗಳನ್ನೇ ಕಡಿದು ಹಾಕಲಾಗುತ್ತಿದೆ. ಹಾಗಾಗಿ ಮರಗಳನ್ನು ಬೆಳೆಸುವ ಬದಲು ಪರ್ಯಾಯ ಕ್ರಮಗಳ ಮೂಲಕ ತಾಪಮಾನವನ್ನು ಕಡಿಮೆ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ.
ನಗರಗಳ ಕಟ್ಟಡಗಳಾದ್ಯಂತ ಹಸಿರು ಸಸ್ಯಗಳನ್ನು ಬೆಳೆಸುವುದು ತಾಪಮಾನವನ್ನು ತಗ್ಗಿಸುವ ಮತ್ತೊಂದು ಮಾರ್ಗವಾಗಿದೆ. ಉದಾಹರಣೆಗೆ ಛಾವಣಿಗಳ ಮೇಲ್ಭಾಗದಲ್ಲಿ ಹಸಿರು ಸಸ್ಯಗಳನ್ನು ಬೆಳೆಸುವುದು ಕಟ್ಟಡಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಇದು ಹವಾನಿಯಂತ್ರಣ ವ್ಯವಸ್ಥೆಗಳ ಅತಿಯಾದ ಬಳಕೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ಹಸಿರು ಛಾವಣಿಗಳು ವಾಯು ಮಾಲಿನ್ಯಕಾರಕಗಳು ಮತ್ತು ಜೀವಾಣುಗಳನ್ನು ಹೀರಿಕೊಳ್ಳುವ ಮೂಲಕ ತಾಪಮಾನದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯಕವಾಗಿವೆ. ಇಂತಹ ಅನೇಕ ಪ್ರಯತ್ನಗಳ ನಡುವೆ ಖತರ್‌ನ ದೋಹಾ ನಗರದ ನೀಲಿ ರಸ್ತೆಗಳು ಹೆಚ್ಚು ಗಮನ ಸೆಳೆಯುತ್ತಿವೆ.
ಪ್ರಾಯೋಗಿಕ ಯೋಜನೆಯ ಭಾಗವಾಗಿ ಮೂಡಿ ಬಂದ ನೀಲಿ ರಸ್ತೆ ಪರಿಕಲ್ಪನೆಯು ಈಗ ಯಶಸ್ಸು ಕಂಡಿದೆ. ಈ ನೀಲಿ ರಸ್ತೆಗಳು ಸಾಂಪ್ರದಾಯಿಕ ಡಾಂಬರ್ ರಸ್ತೆಗಿಂತ ಹೆಚ್ಚು ಬಲಿಷ್ಠವಾಗಿದ್ದು, ಶಾಖವನ್ನು ಅಂತೆಯೇ ನೀರನ್ನು ಹೀರಿಕೊಳ್ಳುತ್ತದೆ ಎಂಬುದು ವಿಶೇಷ. ತಾಪಮಾನ ಮತ್ತು ನೀರನ್ನು ಹೀರಿಕೊಳ್ಳುವ ಮೂಲಕ ನಗರದ ತಾಪಮಾನವನ್ನು ನಿಯಂತ್ರಿಸಲು ಸಹಾಯಕವಾಗಿದೆ ಎಂಬುದು ಸಾಬೀತಾಗಿದೆ. ಖತರ್‌ನ ದೋಹಾ ನಗರ ಆಡಳಿತವು ಪ್ರಾಯೋಗಿಕ ಯೋಜನೆಯಲ್ಲಿ ನಗರದ ರಸ್ತೆಗಳನ್ನು ನೀಲಿ ಬಣ್ಣದಲ್ಲಿ ನಿರ್ಮಿಸಿದೆ. ಈ ನೀಲಿ ರಸ್ತೆಗಳು ನಮ್ಮ ಮನೆಯ ಒಳಾಂಗಣಕ್ಕಿಂತ ಹೆಚ್ಚು ಸುಂದರವಾಗಿವೆ. ಇವುಗಳ ಆಕರ್ಷಣೆಯ ಪ್ರಾಮುಖ್ಯತೆ ಕೇವಲ ಬಣ್ಣವಲ್ಲ. ಬದಲಾಗಿ ಅವುಗಳ ಬಳಕೆ ಮತ್ತು ಬಾಳಿಕೆಯ ದೃಷ್ಟಿಯಿಂದಲೂ ಹೆಚ್ಚು ಮಹತ್ವ ಪಡೆದಿವೆ. ನೀಲಿ ರಸ್ತೆಗಳ ನಿರ್ಮಾಣಕ್ಕೆ ಬಳಸಿದ ಕಚ್ಚಾ ಸಾಮಗ್ರಿಗಳೂ ಸಹ ಹೆಚ್ಚು ಮಹತ್ವ ಪಡೆದಿವೆ. ನಾವಿಂದು ಯಾವುದನ್ನು ನಮ್ಮ ಗ್ರಹದಿಂದ ದೂರವಿಡಲು ಪ್ರಯತ್ನಿಸುತ್ತಿದ್ದೆವೆಯೋ ಅದನ್ನೇ ಬಳಸಿ ರಸ್ತೆ ನಿರ್ಮಿಸಿರುವುದು ಗಮನಾರ್ಹ ಸಂಗತಿ.
ಅಂದರೆ ಇಡೀ ನಮ್ಮ ಗ್ರಹದ ತಾಪತ್ರಯಕ್ಕೆ ಕಾರಣವಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ನೀಲಿ ರಸ್ತೆ ನಿರ್ಮಿಸಲಾಗಿದೆ. ಇವೆಲ್ಲಕ್ಕಿಂತ ಇನ್ನೊಂದು ಮಹತ್ವದ ಅಂಶವೆಂದರೆ ಈ ನೀಲಿ ರಸ್ತೆಯು ವಾತಾವರಣದ ತಾಪಮಾನವನ್ನು ಹೀರಿಕೊಂಡು ವಾತಾವರಣಕ್ಕೆ ತಂಪು ನೀಡುತ್ತದೆ. ಡಾಂಬರ್‌ನಿಂದ ಸಾಂಪ್ರದಾಯಿಕ ರಸ್ತೆಗಳ ಕಪ್ಪು ಬಣ್ಣವು ಹೆಚ್ಚು ಶಾಖವನ್ನು ಆಕರ್ಷಿಸುತ್ತದೆ ಮತ್ತು ಹೊರಸೂಸುತ್ತದೆ ಎಂಬ ಸಂಗತಿ ಎಲ್ಲರಿಗೂ ತಿಳಿದ ವಿಷಯ. ಆದರೆ ಈಗ ಖತರ್‌ನಲ್ಲಿ ನಿರ್ಮಿತವಾದ ನೀಲಿ ರಸ್ತೆಗಳು ಡಾಂಬರ್ ರಸ್ತೆಗಿಂತ ಹೆಚ್ಚು ಉತ್ತಮವಾಗಿವೆ. ವಾತಾವರಣದ ತಾಪಮಾನವನ್ನು 15-20 ಡಿಗ್ರಿಗಳಷ್ಟು ಕಡಿಮೆ ಮಾಡುತ್ತದೆ ಎಂಬುದನ್ನು ಅಲ್ಲಿನ ತಜ್ಞರು ಕಂಡುಕೊಂಡಿದ್ದಾರೆ. ನೀಲಿ ರಸ್ತೆ ನಿರ್ಮಾಪಕರು ನಿರುಪಯುಕ್ತ ತ್ಯಾಜ್ಯ ಪ್ಲಾಸ್ಟಿಕ್‌ನ್ನು ಕರಗಿಸಿ ಜಲ್ಲಿಯೊಂದಿಗೆ ಮಿಶ್ರಣ ಮಾಡುವ ಮೂಲಕ ರಸ್ತೆ ನಿರ್ಮಿಸಿದ್ದಾರೆ.
ಈ ರಸ್ತೆಯು ತಾಪಮಾನವನ್ನು ಹೀರಿಕೊಳ್ಳುವ ಜೊತೆಗೆ ನೀರನ್ನು ಹೀರಿಕೊಳ್ಳುತ್ತದೆ. ಹೀಗೆ ಹೀರಿಕೊಂಡ ನೀರು ನೆಲದಡಿಯಲ್ಲಿ ಸಂಗ್ರಹಗೊಂಡು ಭೂಮಿಯನ್ನು ಹೆಚ್ಚು ತಂಪಾಗಿಡುತ್ತದೆ. ರಸ್ತೆ ಸಂಪೂರ್ಣ ರಂಧ್ರಯುಕ್ತವಾಗಿದ್ದು, ಮಳೆ ನೀರನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಇದರಿಂದ ಅಂತರ್ಜಲ ಮಟ್ಟವೂ ಏರಿಕೆಯಾಗುತ್ತದೆ. ರಸ್ತೆಯ ಮೇಲೆ ಬಿದ್ದ ನೀರನ್ನು ಸಂಗ್ರಹಿಸಿ ಬೇರೆ ಕಡೆಗೆ ವರ್ಗಾಯಿಸಲೂಬಹುದು ಎಂಬುದು ತಜ್ಞರ ಅಭಿಮತ. ಒಟ್ಟಾರೆ ಖತರ್‌ನ ದೋಹಾದಲ್ಲಿ ನಿರ್ಮಿತವಾದ ನೀಲಿ ರಸ್ತೆಯು ಭೂಗ್ರಹದ ನೀಲಿಯನ್ನು ಸಂರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಇದರಿಂದ ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆಗೂ ಒಂದು ಶಾಶ್ವತ ಪರಿಹಾರ ದೊರೆತಂತಾಗುತ್ತದೆ ಮತ್ತು ಭೂ ವಾತಾವರಣದ ತಾಪಮಾನವನ್ನು ಕಡಿಮೆ ಮಾಡಲು ಅವಕಾಶವಿದೆ. ಇಂತಹ ರಸ್ತೆಗಳು ಎಲ್ಲೆಡೆ ನಿರ್ಮಾಣವಾಗುವಂತಾಗಲಿ.