ಕಾಡ್ಗಿಚ್ಚು ಬುದ್ಧಿಮಾಂದ್ಯತೆಗೆ ಕಾರಣವಾಗುತ್ತದೆಯೇ?
ನಿತ್ಯವೂ ಕೆಲಸಕ್ಕಾಗಿ ಬೈಕ್‌ನಲ್ಲಿ ಓಡಾಡುವುದು ಅನಿವಾರ್ಯವಾಗಿದೆ. ಕಳೆದ ಒಂದು ತಿಂಗಳಿಂದ ರಸ್ತೆಯ ಮೇಲೆ ಬೈಕ್ ಓಡಿಸಲು ತುಂಬಾ ಕಷ್ಟವಾಗುತ್ತಿದೆ. ರಸ್ತೆ ಪಕ್ಕದ ಕಾಲುದಾರಿಯೇ ಬೈಕ್‌ನ ರಸ್ತೆಯಾಗಿದೆ. ಹಾಗೆಂದು ರಸ್ತೆ ಸರಿ ಇಲ್ಲ ಅಂದುಕೊಳ್ಳಬೇಡಿ. ರಸ್ತೆಯೇನೋ ಚೆನ್ನಾಗಿದೆ. ಆದರೆ ರಸ್ತೆ ತುಂಬಾ ಧಾನ್ಯಗಳದ್ದೇ ಕಾರುಬಾರು. ಮೆಕ್ಕೆಜೋಳ, ಸಜ್ಜೆ ಇನ್ನಿತರ ಧಾನ್ಯಗಳು ರಸ್ತೆಯನ್ನು ಆವರಿಸಿಕೊಂಡಿವೆ. ಬಹುತೇಕ ವಾಹನಗಳು ರಸ್ತೆ ಮೇಲೆ ಓಡುವ ಬದಲು ಪಕ್ಕದ ಕಾಲು ಹಾದಿಯಲ್ಲೇ ಚಲಿಸುತ್ತವೆ. ರಸ್ತೆಗಳು ಈಗ ಒಕ್ಕಣೆ ಕಣಗಳಾಗಿವೆ. ಒಕ್ಕಣೆಯಾದ ನಂತರ ಉಳಿಯುವ ಕಸ ಅಲ್ಲಿಯೇ ರಾಶಿ ರಾಶಿಯಾಗಿ ಬಿದ್ದಿರುತ್ತದೆ. ಹೀಗೆ ರಾಶಿಯಾಗಿ ಬಿದ್ದ ಕಸಕ್ಕೆ ಯಾರಾದರೂ ಒಂದು ದಿನ ಅದಕ್ಕೆ ಅಗ್ನಿಯ ಸ್ಪರ್ಶ ನೀಡುತ್ತಾರೆ. ಹೀಗೆ ಅಗ್ನಿಗೆ ಆಹುತಿಯಾಗುವ ಕಸ ದಿನವಿಡೀ ಹೊಗೆ ಉಗುಳುತ್ತಲೇ ಇರುತ್ತದೆ.
ಇಂತಹ ಹೊಗೆಯ ವಾತಾವರಣದಲ್ಲಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋಗುವುದು ತುಂಬಾ ಅಪಾಯಕಾರಿ. ಎದುರಿಗೆ ಬರುವ ವಾಹನಗಳು ಕಾಣದೇ ಅಪಘಾತಗಳಾಗುವ ಸಂಭವ ಹೆಚ್ಚಿರುತ್ತದೆ. ಅಲ್ಲದೆ ಹೊಗೆಯು ಬೈಕ್ ಸವಾರರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಹೊಗೆಯ ವಾತಾವರಣವನ್ನು ಕೇವಲ ಕೆಲವೇ ನಿಮಿಷಗಳಲ್ಲಿ ದಾಟಬಹುದಾದರೂ, ಅದು ತೊಂದರೆಯನ್ನುಂಟು ಮಾಡುತ್ತದೆ. ಅದರ ಘಾಟು ಮೂಗಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಹೊಗೆಯಿಂದ ಕಣ್ಣುಗಳಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಧೂಳಿನ ಸಣ್ಣ ಸಣ್ಣ ಕಣಗಳು ಚರ್ಮದ ತುರಿಕೆಗೆ ಕಾರಣವಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಹಾದು ಹೋಗುವ ಸವಾರರಿಗೆ ಇಷ್ಟೊಂದು ತೊಂದರೆಯಾಗುತ್ತದೆ ಎನ್ನುವುದಾದರೆ ಅಂತಹ ವಾತಾವರಣದಲ್ಲಿ ದಿನವಿಡೀ ಕೆಲಸ ಮಾಡುವ ಕಾರ್ಮಿಕರಿಗೆ ಇನ್ನೆಷ್ಟು ತೊಂದರೆಗಳಾಗಬಹುದು ಯೋಚಿಸಿ ನೋಡಿ.
ಸಣ್ಣ ಪ್ರಮಾಣದ ಹೊಗೆಯಿಂದ ಇಷ್ಟೊಂದು ತೊಂದರೆಗಳಿವೆ ಎನ್ನುವುದಾದರೆ ಕಾಡ್ಗಿಚ್ಚಿನಂತಹ ಅಧಿಕ ಹೊಗೆಯ ವಾತಾವರಣ ಇನ್ನೆಷ್ಟು ತೊಂದರೆಗೆ ಕಾರಣವಾಗಬಹುದು ಅಲ್ಲವೇ? ಇತ್ತೀಚಿನ ವರ್ಷಗಳಲ್ಲಿ ಅನವಶ್ಯಕ ಕಾರಣಗಳಿಂದ ಕಾಡ್ಗಿಚ್ಚು ಪ್ರಕರಣಗಳು ಹೆಚ್ಚುತ್ತಿವೆ. ಕಾಡ್ಗಿಚ್ಚಿನಿಂದ ಕೇವಲ ಕಾಡು ಮಾತ್ರ ನಾಶವಾಗುತ್ತಿಲ್ಲ. ಬಹುತೇಕ ಪ್ರಾಣಿಗಳ ಜೀವನವೂ ನಾಶವಾಗುತ್ತಿದೆ. ಕಾಡ್ಗಿಚ್ಚಿಗೆ ಸಿಲುಕಿದ ಅನೇಕ ಪ್ರಾಣಿಗಳು ಜೀವಂತವಾಗಿ ಸುಟ್ಟು ಹೋಗುತ್ತವೆ. ಇನ್ನು ಕೆಲವು ಜೀವಿಗಳು ಕಾಡ್ಗಿಚ್ಚಿನಿಂದ ಉಂಟಾದ ಹೊಗೆಯನ್ನು ಸೇವಿಸಿ ಸಾವನ್ನಪ್ಪುತ್ತಿವೆ. ಕಾಡ್ಗಿಚ್ಚಿನ ಹೊಗೆ ಶ್ವಾಸಕೋಶಕ್ಕೆ ಅತ್ಯಂತ ಹಾನಿಕಾರಕವಾಗಿದೆ. ವಿಶೇಷವಾಗಿ ಮಕ್ಕಳು, ಹಿರಿಯ ವಯಸ್ಕರು ಮತ್ತು ಅಸ್ತಮಾ ಮತ್ತು ಬ್ರಾಂಕೈಟಿಸ್‌ನಂತಹ ದೀರ್ಘಕಾಲದ ಉಸಿರಾಟದ ತೊಂದರೆ ಇರುವವರಿಗೆ, ಹೃದಯ ಕಾಯಿಲೆ ಮತ್ತು ಮಧುಮೇಹ ಇರುವವರಿಗೆ ತುಂಬಾ ತೊಂದರೆಯನ್ನುಂಟು ಮಾಡುತ್ತದೆ. ಕಾಡಿನ ಪ್ರದೇಶಗಳಲ್ಲಿ ವಾಸಿಸದಿದ್ದರೂ, ಕಾಡ್ಗಿಚ್ಚಿನ ಹೊಗೆಯು ಎಲ್ಲರನ್ನೂ ಬಾಧಿಸುತ್ತದೆ.
ಕಾಡ್ಗಿಚ್ಚಿನ ಹೊಗೆಯಲ್ಲಿ ಕಂಡುಬರುವ ಮಾಲಿನ್ಯಕಾರಕಗಳು ಗಾಳಿಯಲ್ಲಿ ಸೇರಿಕೊಂಡು ವಾಯುಮಾಲಿನ್ಯಕ್ಕೆ ಕಾರಣವಾಗುತ್ತವೆ. ಈ ಮಾಲಿನ್ಯಕಾರಕಗಳು ತುಂಬಾ ಚಿಕ್ಕದಾಗಿರುತ್ತವೆ. ಕಾಡ್ಗಿಚ್ಚಿನ ಹೊಗೆಯಲ್ಲಿರುವ ಮಾಲಿನ್ಯಕಾರಕಗಳು ನಮ್ಮ ಕೂದಲಿನ ವ್ಯಾಸದ ಮೂರನೇ ಒಂದು ಭಾಗಕ್ಕಿಂತ ದೊಡ್ಡದಾಗಿರುವುದಿಲ್ಲ. ಈ ಕಣಗಳು ತುಂಬಾ ಚಿಕ್ಕದಾಗಿರುವುದರಿಂದ ಶ್ವಾಸಕೋಶದೊಳಗೆ ಸುಲಭವಾಗಿ ನುಸುಳುತ್ತವೆ. ಕಣಗಳ ಮಾಲಿನ್ಯವು ಆಸ್ತಮಾ, ಹೃದಯಾಘಾತಗಳು ಮತ್ತು ಪಾರ್ಶ್ವವಾಯುಗಳನ್ನು ಪ್ರಚೋದಿಸುತ್ತದೆ. ಕೆಲವು ವೇಳೆ ಪ್ರಾಣಾಂತಿಕವಾಗಲೂಬಹುದು. ಕ್ಯಾಲಿಫೋರ್ನಿಯಾದ ಮಕ್ಕಳಲ್ಲಿ ನಡೆಸಿದ ಅಧ್ಯಯನಗಳು, ಕಾಡ್ಗಿಚ್ಚಿನ ವಿಷ ಗಾಳಿಯು ಮಕ್ಕಳಲ್ಲಿ ಕೆಮ್ಮು, ಉಬ್ಬಸ, ಬ್ರಾಂಕೈಟಿಸ್, ಶೀತಗಳು ಮತ್ತು ಉಸಿರಾಟದ ತೊಂದರೆಗಳಿಗೆ, ವಿಶೇಷವಾಗಿ ಆಸ್ತಮಾ ಕಾಯಿಲೆಗೆ ಕಾರಣವಾಗುತ್ತದೆ ಎಂದು ತಿಳಿಸಿವೆ.
ಕಾಡ್ಗಿಚ್ಚಿನ ಹೊಗೆಯಿಂದ ಮತ್ತೊಂದು ಅಪಾಯವೆಂದರೆ ಕಾರ್ಬನ್ ಮಾನಾಕ್ಸೈಡ್ ಬೆಂಕಿಯ ಹೊಗೆಯಾಡುವ ಹಂತಗಳಲ್ಲಿ ಮತ್ತು ಬೆಂಕಿಯ ಸಮೀಪದಲ್ಲಿ ಅತ್ಯಂತ ಸಾಮಾನ್ಯವಾದ ಬಣ್ಣರಹಿತ, ವಾಸನೆಯಿಲ್ಲದ ಅನಿಲವಾಗಿದ್ದು, ಇದನ್ನು ಉಸಿರಾಡುವುದರಿಂದ ದೇಹದ ಅಂಗಗಳು ಮತ್ತು ಅಂಗಾಂಶಗಳಿಗೆ ಆಮ್ಲಜನಕದ ವಿತರಣೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ತಲೆನೋವು, ವಾಕರಿಕೆ, ತಲೆತಿರುಗುವಿಕೆ ಮತ್ತು ಅಕಾಲಿಕ ಮರಣಕ್ಕೆ ಕಾರಣವಾಗಬಹುದು. ಕಾಡ್ಗಿಚ್ಚುಗಳು ನೈಟ್ರೋಜನ್ ಆಕ್ಸೈಡ್‌ನಂತಹ ಅನೇಕ ಅಪಾಯಕಾರಿ ವಾಯು ಮಾಲಿನ್ಯಕಾರಕಗಳನ್ನು ಒಳಗೊಂಡಿರುತ್ತವೆ.
ಇತ್ತೀಚೆಗೆ ನಡೆದ ಸಂಶೋಧನೆಯೊಂದು ಕಾಡ್ಗಿಚ್ಚಿನ ಹೊಗೆಯು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸಬಹುದು ಎಂದು ತಿಳಿಸಿರುವುದು ಕಳವಳಕಾರಿಯಾಗಿದೆ. ಮಿಚಿಗನ್ ವಿಶ್ವವಿದ್ಯಾನಿಲಯದ ಸಂಶೋಧನೆಯು, ಕಾಡ್ಗಿಚ್ಚು ಮತ್ತು ಕೃಷಿ ತ್ಯಾಜ್ಯ ದಹನದ ಮಾಲಿನ್ಯವನ್ನು ಅನುಭವಿಸಿದ ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದ ಬುದ್ಧಿಮಾಂದ್ಯತೆ ಕಂಡುಬಂದಿದೆ ಎಂದು ತಿಳಿಸಿದೆ. ಕಾಡ್ಗಿಚ್ಚಿನ ಹೊಗೆಯು ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‌ನ ಇಂಟರ್ನಲ್ ಮೆಡಿಸಿನ್ ಜರ್ನಲ್‌ನಲ್ಲಿ (ಸೆಪ್ಟಂಬರ್ ೨೦೨೩) ಪ್ರಕಟವಾದ ಮಿಚಿಗನ್ ವಿಶ್ವವಿದ್ಯಾನಿಲಯದ ಅಧ್ಯಯನವು ಸುಮಾರು ೩೦,೦೦೦ ಅಮೆರಿಕದ ವಯಸ್ಕರಲ್ಲಿ ಬುದ್ಧಿಮಾಂದ್ಯತೆಯ ಹರಡುವಿಕೆಯನ್ನು ಪತ್ತೆ ಮಾಡಿದೆ. ಎರಡು ದಶಕಗಳಿಂದ ಪ್ರಮುಖ ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯಲ್ಲಿ ಸಂಗ್ರಹಿಸಲಾದ ದತ್ತಾಂಶವನ್ನು ಬಳಸಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಹೆಚ್ಚು ಮಾಲಿನ್ಯವನ್ನು ಹೊಂದಿರುವ ಸ್ಥಳಗಳಲ್ಲಿ ಬುದ್ಧಿಮಾಂದ್ಯತೆಯ ದರ ಹೆಚ್ಚಾಗಿರುವುದನ್ನು ತಂಡವು ವರದಿ ಮಾಡಿದೆ. ಮಾಲಿನ್ಯಕಾರಕ ಗಾಳಿಗೆ ಒಡ್ಡಿಕೊಳ್ಳುವುದರಿಂದ ಆಲ್‌ಝೈಮರ್ ಕಾಯಿಲೆ ಮತ್ತು ಇತರ ರೀತಿಯ ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು ಎಂಬುದನ್ನು ಸಂಶೋಧನಾ ತಂಡವು ಎತ್ತಿ ಹಿಡಿದಿದೆ. ಸಾವಿನ ವಿವಿಧ ಕಾರಣಗಳಲ್ಲಿ ಬುದ್ಧಿಮಾಂದ್ಯತೆಯು ಏಳನೇ ಪ್ರಮುಖ ಕಾರಣವಾಗಿದೆ ಮತ್ತು ವಯಸ್ಕರಲ್ಲಿ ಅಂಗವೈಕಲ್ಯದಿಂದಾದ ಅವಲಂಬನೆಯ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರಪಂಚದಾದ್ಯಂತ ೫೫ ಮಿಲಿಯನ್‌ಗಿಂತಲೂ ಹೆಚ್ಚು ಜನರು ವಿವಿಧ ರೀತಿಯ ಬುದ್ಧಿಮಾಂದ್ಯ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಮಿಚಿಗನ್ ವಿಶ್ವವಿದ್ಯಾನಿಲಯದ ಅಧ್ಯಯನವು ಕಾಡ್ಗಿಚ್ಚಿನ ಹೊಗೆಯೊಂದಿಗೆ ಸಂಬಂಧಿಸಿರುವ ದೀರ್ಘಾವಧಿಯ ಆರೋಗ್ಯ ತೊಡಕುಗಳನ್ನು ಗಂಭೀರವಾಗಿ ಪರಿಗಣಿಸಿದೆ. ಕಾಡ್ಗಿಚ್ಚಿನ ಹೊಗೆಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶ, ಹೃದಯರಕ್ತನಾಳದ ಮತ್ತು ಕಣ್ಣಿನ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಯನ್ನು ಸಂಶೋಧನೆಯು ತೋರಿಸಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಮಧುಮೇಹದಂತಹ ಕಾಯಿಲೆಯಿಂದ ಬಳಲುವವರಲ್ಲಿ ಬುದ್ಧಿಮಾಂದ್ಯತೆಯು ಹೆಚ್ಚು ಪರಿಣಾಮ ಬೀರಲಿದೆ ಎಂದು ಸಂಶೋಧನೆ ತಿಳಿಸಿದೆ. ಕಾಡ್ಗಿಚ್ಚಿನ ಹೊಗೆಗೆ ಆರಂಭಿಕ ಒಡ್ಡಿಕೊಳ್ಳುವಿಕೆಯು ಮಕ್ಕಳ ಜೀನ್‌ಗಳನ್ನು ಬದಲಾಯಿಸಬಹುದು, ಅವರ ನರ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗಳ ಬೆಳವಣಿಗೆಯನ್ನು ಸಂಕೀರ್ಣಗೊಳಿಸುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ.
ಜಾಗತಿಕ ತಾಪಮಾನ ಹೆಚ್ಚುತ್ತಿರುವ ದಿನಗಳಲ್ಲಿ ಕಾಡ್ಗಿಚ್ಚು ಸಹ ಆರೋಗ್ಯದ ಅಪಾಯಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹಾಗಾಗಿ ಕಾಡ್ಗಿಚ್ಚಿನಿಂದ ಆದಷ್ಟೂ ದೂರ ಇರಲೇಬೇಕು ಮತ್ತು ಕಾಡ್ಗಿಚ್ಚು ಉಂಟಾಗದಂತೆ ಎಚ್ಚರಿಕೆ ವಹಿಸಲೇಬೇಕಾಗಿದೆ.