ಇ-ಸ್ಯಾಪ್: ಬೆಳೆ ಸಂರಕ್ಷಣೆಗೆ ಮಾಹಿತಿ ತಂತ್ರಜ್ಞಾನ
ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಬಗ್ಗೆ ಯೋಚಿಸುತ್ತಿರುವಾಗ ಥಟ್ಟನೆ ನೆನಪಾಗಿದ್ದು, ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ಇ-ಸ್ಯಾಪ್ ಎನ್ನುವ ತಂತ್ರಜ್ಞಾನ. ಹಿಂದೊಮ್ಮೆ ವೈಯಕ್ತಿಕ ಕೆಲಸದ ನಿಮಿತ್ತ ರಾಯಚೂರಿಗೆ ಹೋದಾಗ, ಅಲ್ಲಿನ ಕೃಷಿ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ ಕೀಟಶಾಸ್ತ್ರ ವಿಭಾಗದ ಸಂಶೋಧಕರಾದ ಡಾ.ಪ್ರಭುರಾಜ್ ಅವರನ್ನು ಭೇಟಿಯಾಗುವ ಅವಕಾಶ ದೊರೆತಿತ್ತು. ಡಾ.ಪ್ರಭುರಾಜ್ ಅವರು ಇ-ಸ್ಯಾಪ್‌ನ ರೂವಾರಿಗಳು ಆಗಿದ್ದರಿಂದ ಅದರ ಬಗ್ಗೆ ಸವಿವರವಾದ ಮಾಹಿತಿ ನೀಡಿದ್ದರು. ಕಳೆದ ಹನ್ನೆರಡು ವರ್ಷಗಳ ಹಿಂದೆ ಅಂದರೆ 2012ರಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿ ಪಡಿಸಿದ್ದ ಇ-ಸ್ಯಾಪ್ ಭವಿಷ್ಯದ ಕೃಷಿಯಲ್ಲಿ ಬಳಕೆಯಾಗಬಹುದಾದ ಕೃತಕ ಬುದ್ಧಿಮತ್ತೆಗೆ ನಾಂದಿ ಹಾಡಿರಬಹುದೇ ಎಂಬ ಚಿಂತನೆ ಮೂಡಿತು.
ಇ-ಸ್ಯಾಪ್ ಬೆಳೆ ಸಂರಕ್ಷಣೆಗಾಗಿ ಮಾಹಿತಿ ತಂತ್ರಜ್ಞಾನದಡಿ ಅಭಿವೃದ್ಧಿಪಡಿಸಿದ ತಂತ್ರಾಂಶ. ಕೃಷಿ ಬೆಳೆಗಳಿಗೆ ಪೀಡೆಯು ಅನೇಕ ರೀತಿಯಲ್ಲಿ ತೊಂದರೆಯನ್ನುಂಟು ಮಾಡುತ್ತದೆ. ಅದರಲ್ಲೂ ಬಹುಮುಖ್ಯವಾಗಿ ಕೀಟ/ರೋಗ, ಪೋಷಕಾಂಶಗಳ ಕೊರತೆ ಮತ್ತು ಕಳೆಯಿಂದಾಗುವ ಹಾನಿಯು ಕೃಷಿಯನ್ನು ತೀವ್ರತರದಲ್ಲಿ ಬಾಧಿಸುತ್ತಿವೆ. ಆಧುನೀಕರಣ ಹೆಚ್ಚಾದಂತೆ ಈ ಸಮಸ್ಯೆಗಳು ದ್ವಿಗುಣಗೊಳ್ಳುತ್ತಿವೆ. ಬೆಳೆಗಳಿಗೆ ಸಕಾಲದಲ್ಲಿ ನೀರೊದಗಿಸುವುದರ ನಂತರ ನಮ್ಮ ದೇಶದ ರೈತರಿಗೆ ಇರುವ ಬಹುದೊಡ್ಡ ಸವಾಲೆಂದರೆ ಪೀಡೆಗಳ ನಿರ್ವಹಣೆಯಾಗಿದೆ. ಇದಕ್ಕಾಗಿ ರೈತರ ಖರ್ಚು-ವೆಚ್ಚಗಳು ಹೆಚ್ಚುತ್ತಿವೆ. ಕೀಟ/ರೋಗಗಳ ಹಾವಳಿಯಿಂದ ಬೆಳೆ ಹಾನಿಯಾಗಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಕೃಷಿ ಬೆಳೆಗಳಿಗೆ ತಗಲುವ ರೋಗಗಳ ಪರಿಹಾರಕ್ಕಾಗಿ ಕಾಲಕಾಲಕ್ಕೆ ವಿಶ್ವವಿದ್ಯಾನಿಲಯಗಳ ಪರಿಣಿತರು, ಸಂಶೋಧನಾ ಸಂಸ್ಥೆಗಳು, ಖಾಸಗಿ ಕೃಷಿ ಸಂಬಂಧಿತ ಕಂಪೆನಿಗಳು ಮತ್ತು ಸಾಂಪ್ರದಾಯಿಕ ಪದ್ಧತಿಗಳನ್ನು ಒಳಗೊಂಡಂತೆ ಹಲವಾರು ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳುತ್ತಾ ಬಂದಿದ್ದಾರೆ. ಕೃಷಿಯಲ್ಲಿ ತೊಡಗಿಕೊಂಡವರ ತೀಕ್ಷ್ಣದೃಷ್ಟಿಯ ಕೊರತೆಯಿಂದಾಗಿ ಈ ಪರಿಹಾರ ಕ್ರಮಗಳನ್ನು ಮತ್ತು ತಂತ್ರಜ್ಞಾನಗಳನ್ನು ರೈತಾಪಿ ವರ್ಗವು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ.
ಇದರ ಜೊತೆಗೆ ಪೀಡೆ ಬಾಧೆಯಿಂದಾಗುವ ಹಾನಿಯ ಲಕ್ಷಣಗಳ ಬಗ್ಗೆ ರೈತರಿಗೆ ಸಂಪೂರ್ಣ ಜ್ಞಾನ ಇಲ್ಲದಿರುವುದರಿಂದ ಕ್ಷೇತ್ರ ಮಟ್ಟದಲ್ಲಿ ಅದರ ನಿಖರ ಗುರುತಿಸುವಿಕೆಯಲ್ಲಿ ಲೋಪದೋಷಗಳಾಗುತ್ತವೆ. ಈ ತರಹದ ಲೋಪದೋಷಗಳು ಕೇವಲ ರೈತರಿಂದ ಮಾತ್ರವಲ್ಲದೆ, ಸಂಬಂಧಿತ ಇಲಾಖೆಗಳ ವಿಸ್ತರಣಾ ಸಿಬ್ಬಂದಿಯಿಂದ ಕೂಡ ಆಗುತ್ತಿರುವುದು ಕಂಡು ಬಂದಿದೆ. ಇದರಿಂದ ಸಕಾಲಕ್ಕೆ ಆಗಬೇಕಾದ ಕೀಟ ಮತ್ತು ರೋಗಗಳ ನಿರ್ವಹಣೆ ಕಷ್ಟಸಾಧ್ಯವಾಗುತ್ತದೆ. ಅಲ್ಲದೆ ಕೃಷಿ ಬೆಳವಣಿಗೆಯ ಪಾಲುದಾರರಾದ ವಿಜ್ಞಾನಿಗಳು, ಆಡಳಿತಗಾರರು ಮತ್ತು ನೀತಿನಿರೂಪಕರ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ರೈತರ ಮತ್ತು ಕ್ಷೇತ್ರ ಮಟ್ಟದಲ್ಲಿನ ಸ್ಥಿತಿಗತಿಗಳನ್ನು ಕೀಟ/ರೋಗಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸರಿಯಾಗಿ ತಿಳಿಯಲು ವಿಫಲರಾಗಿದ್ದಾರೆ ಎಂದೇ ಹೇಳಬಹುದಾಗಿದೆ.
ಕೃಷಿಯಲ್ಲಿನ ಬೆಳವಣಿಗೆ ಮತ್ತು ಅದರ ಪಾಲುದಾರರ ಪರಸ್ಪರ ಲಾಭಕ್ಕಾಗಿ ಇವರೆಲ್ಲರನ್ನು ಏಕ ಕಾಲದಲ್ಲಿ ಒಂದೇ ಆಯಾಮದಡಿ ಸೇರಿಸುವ ಮಾಹಿತಿ ತಂತ್ರಜ್ಞಾನದ ವೇದಿಕೆಯ ಹಿನ್ನೆಲೆಯಲ್ಲಿ ರೂಪುಗೊಂಡ ವ್ಯವಸ್ಥೆಯೇ ಇ-ಸ್ಯಾಪ್. ಇದು ಮಾಹಿತಿ ತಂತ್ರಜ್ಞಾನದಡಿ ಅಭಿವೃದ್ಧಿಗೊಂಡ ಒಂದು ವಿನೂತನ ಮತ್ತು ಈ ಮೇಲೆ ಉಲ್ಲೇಖಿಸಿದ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ನಿಲ್ಲಬಲ್ಲ ತಂತ್ರಜ್ಞಾನವಾಗಿದೆ.
ಅತಿ ವೇಗವಾಗಿ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನದ ಸಹಾಯದಿಂದ ಅಭಿವೃದ್ಧಿಪಡಿಸಿದ ಇ-ಸ್ಯಾಪ್ ಕೃಷಿ ವಿಸ್ತರಣಾ ಚಟುವಟಿಕೆಗಳಲ್ಲಿ ಒಂದು ಮಹತ್ತರವಾದ ಮೈಲುಗಲ್ಲಾಗಿದೆ. ಇ-ಸ್ಯಾಪ್ ತಂತ್ರಾಂಶವು ಕೀಟ/ರೋಗ ಬಾಧೆ ಮತ್ತು ಪೋಷಕಾಂಶಗಳ ಕೊರತೆಯ ನಿರ್ವಹಣೆಯನ್ನು ಗುರಿಯಾಗಿಸಿಕೊಂಡಿದ್ದು, ಕ್ಷೇತ್ರ ಮಟ್ಟದಲ್ಲಿ ಏಕ ಕಾಲದಲ್ಲಿ ದ್ವಿಮಾರ್ಗದಲ್ಲಿ ಮಾಹಿತಿ ಪ್ರಸಾರವಾಗುವಂತಹ ಮಾಹಿತಿ ದ್ವಾರ ತೆರೆದುಕೊಳ್ಳುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಜ್ಞಾನದ ಪ್ರಧಾನ ಅಂಶವೆಂದರೆ, ಸುಲಭವಾಗಿ ಎಲ್ಲೆಡೆ ಸಾಗಿಸಬಲ್ಲ ಅಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. ಇದು ಕ್ಷೇತ್ರ ಮಟ್ಟದಲ್ಲಿನ ಬಳಕೆದಾರರಿಗೆ ಪೀಡೆ ನಿರ್ವಹಣೆಯ ಬಗ್ಗೆ ಸೂಕ್ತ ಮಾಹಿತಿ ನೀಡುತ್ತದೆ. ಮಾಹಿತಿ ಮತ್ತು ಪರಿಹಾರವನ್ನು ಯಾವುದೇ ಅಂತರ್ಜಾಲ ಸಂಪರ್ಕವಿಲ್ಲದೆ ಪಡೆಯಬಹುದಾಗಿದೆ. ಸಮೀಕ್ಷೆಯಿಂದ ಸಂಗ್ರಹವಾದ ಮಾಹಿತಿಯನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ಪ್ರಬುದ್ಧತೆಯಿಂದ ರೂಪಾಂತರಿಸಲಾಗಿದೆ.
ಹಾಗಾಗಿ ಇಲ್ಲಿನ ಮಾಹಿತಿಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ ಮತ್ತು ಭಾಷೆಗಳ ತೊಡಕುಗಳನ್ನು ಮೀರಿ ಸರಳವಾಗಿ ಬಳಸಬಹುದಾಗಿದೆ. ಈ ತಂತ್ರಾಂಶವು ಕ್ಷೇತ್ರಮಟ್ಟದಲ್ಲಿ ತ್ವರಿತ ಮತ್ತು ನೈಜ ನಿರ್ಧಾರಗಳನ್ನು ತೆಗೆದುಕೊಳ್ಳಲು ಗಣನೀಯವಾದ ಅಂತರ್‌ನಿರ್ಮಿತ ಬುದ್ಧಿಶಕ್ತಿಯನ್ನು ಹೊಂದಿದೆ. ಇದು ನಿಖರವಾದ ಸಮೀಕ್ಷೆ ಮತ್ತು ಅಂಕಿ-ಅಂಶಗಳ ಸಂಗ್ರಹಕ್ಕಾಗಿ ವೈಜ್ಞಾನಿಕವಾಗಿ ರೂಪಿಸಲ್ಪಟ್ಟ ನಿಯಮಾವಳಿಗಳನ್ನು ಹೊಂದಿದೆ. ಬೆಳೆ ಮತ್ತು ಪ್ರದೇಶಕ್ಕೆ ತಕ್ಕಂತೆ ನಿರ್ದಿಷ್ಟ ಮಾಹಿತಿಯನ್ನು ಬಹುದೂರದಿಂದಲೇ ಪರಿಷ್ಕರಿಸಲು ಸಾಧ್ಯವಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕೀಟ/ರೋಗಗಳ ನಿರ್ವಹಣೆಗೆ ಪರಿಹಾರ ನೀಡಿದ ನಂತರ, ರೈತರಿಂದ ಸಲಹೆ ಮತ್ತು ಪರಿಹಾರೋತ್ತರ ಸ್ಥಿತಿಗತಿಗಳನ್ನು ತಿಳಿಯಲು ಅನುಸರಣಾ ಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿ ಇ-ಸ್ಯಾಪ್ ತಂತ್ರಜ್ಞಾನವು ನೀತಿ ನಿರೂಪಕರಿಗೆ, ಸಂಶೋಧನೆಯಲ್ಲಿ ತೋಡಗಿರುವವರಿಗೆ ಮತ್ತು ಬಳಕೆದಾರರಿಗೆ ನೈಜ ಸಮಯದಲ್ಲಿ ಕ್ಷೇತ್ರಮಟ್ಟದಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕೊಡುತ್ತದೆ. ಈ ತಂತ್ರಜ್ಞಾನದಲ್ಲಿ ಕ್ಷೇತ್ರಮಟ್ಟದಲ್ಲಿನ ದತ್ತಾಂಶವನ್ನು ಜಿ.ಐ.ಎಸ್. ನಕ್ಷೆ, ರೇಖಾನಕ್ಷೆ, ಕೋಷ್ಟಕಗಳ ಮತ್ತು ಸಿ.ಎಸ್.ವಿ. ಕಡತ ರೂಪದಲ್ಲಿ ನೋಡಬಹುದಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಇ-ಸ್ಯಾಪ್ ಒಂದು ಬಹು ಆಯಾಮದ ರೈತೋಪಯೋಗಿ ತಂತ್ರಾಂಶವಾಗಿದೆ.
ಇ-ಸ್ಯಾಪ್ ಕ್ಷೇತ್ರಮಟ್ಟದಲ್ಲಿ ವೈವಿಧ್ಯಮಯ ಕಾರ್ಯ ವೈಖರಿ ಹೊಂದಿದೆ. ಸೂಚಿಸಿದ ಬೆಳೆಗಳಲ್ಲಿ ಕಂಡುಬರುವ ಕೀಟ/ರೋಗ/ಪೋಷಕಾಂಶಗಳ ಕೊರತೆ ಮತ್ತು ಕಳೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ. ರೈತರ ಹೊಲದಲ್ಲಿ ಪೀಡೆ ಬಾಧೆಯ ಸಮಸ್ಯೆಗಳನ್ನು ಸುಲಭವಾಗಿ ಗುರುತಿಸಲು ಮತ್ತು ಸಕಾಲದಲ್ಲಿ ಸಮಸ್ಯೆಯ ತೀವ್ರತೆಗೆ ತಕ್ಕಂತೆ ಪರಿಹಾರ ನೀಡಲು ಸಾಧ್ಯವಾಗುತ್ತದೆ.
ಕೇವಲ ರೈತರಿಗೆ ಮಾತ್ರವಲ್ಲದೆ ಕ್ಷೇತ್ರ ಮಟ್ಟದ ಬಳಕೆದಾರರಿಗೂ ಸಾಕಷ್ಟು ಅನುಕೂಲಕರ ಅಂಶಗಳನ್ನು ಹೊಂದಿದೆ. ಇ-ಸ್ಯಾಪ್ ತಂತ್ರಾಂಶಕ್ಕೆ ನೋಂದಣಿ ಮಾಡಿಕೊಂಡ ರೈತರನ್ನು ಸುಲಭವಾಗಿ ಹುಡುಕಬಹುದಾಗಿದೆ ಮತ್ತು ಜಿಪಿಎಸ್ ಸಂಪರ್ಕದ ಮೂಲಕ ಆ ಸ್ಥಳದ ಸುತ್ತಮುತ್ತಲಿನ ನೋಂದಣಿಯಾದ ಐವರು ರೈತರ ವ್ಯಕ್ತಿ ಚಿತ್ರವನ್ನು ತೋರಿಸುತ್ತದೆ. ಇದರಿಂದ ಪೀಡೆಯನ್ನು ಗುರುತಿಸುವುದು, ಪ್ರಮಾಣೀಕರಿಸುವುದು ಮತ್ತು ಪರಿಹಾರ ಒದಗಿಸುವ ಪ್ರಕ್ರಿಯೆ ಸಲೀಸಾಗುತ್ತದೆ.
ಪ್ರತಿಯೊಂದು ಪೀಡೆಬಾಧೆಗೆ ನಿರ್ದಿಷ್ಟ ಸಮೀಕ್ಷಾ ವಿಧಾನ ರೂಪಿಸಲಾಗಿದ್ದು, ಇದರಿಂದ ಪೀಡೆ ಬಾಧೆಯನ್ನು ಸರಿಯಾಗಿ ಪ್ರಮಾಣೀಕರಿಸಬಹುದಾಗಿದೆ. ಹಾನಿಯ ತೀವ್ರತೆಗೆ ತಕ್ಕ ಪರಿಹಾರ ಕ್ರಮ ರೂಪಿಸಲಾಗಿದ್ದು, ಇದು ರಾಜ್ಯ ಪರಿಣಿತರ ತಂಡದಿಂದ ಪ್ರಮಾಣೀಕರಿಸಲ್ಪಟ್ಟಿದೆ. ಪರಿಹಾರ/ಸಲಹೆಯನ್ನು ರೈತರಿಗೆ ಎಸ್ಸೆಮ್ಮೆಸ್ ಸಂದೇಶ ಕಳುಹಿಸುವ ಮೂಲಕ ಅಥವಾ ಮುದ್ರಿತ ರೂಪದಲ್ಲಿ ಕೊಡುವ ಅವಕಾಶವೂ ಇದೆ. ಇದರ ಬಳಕೆದಾರರಿಗೆ ಕೀಟ/ರೋಗ/ಪೋಷಕಾಂಶಗಳ ಕೊರತೆಯ ಬಗ್ಗೆ ಸಮರ್ಪಕ ಮಾಹಿತಿ ದೊರಕುತ್ತದೆ. ಬೆಳೆ ಸಂರಕ್ಷಣಾ ಕ್ರಮಗಳ ಸಲಹೆ ಕೊಡುವುದರ ಜೊತೆಗೆ ಬೆಳೆ ಉತ್ಪಾದಕತೆ ಅಧಿಕಗೊಳಿಸುವ ಕ್ರಮಗಳನ್ನು ಕೂಡ ಸೂಚಿತ ಬೆಳೆಗಳಿಗೆ ಅಭಿವೃದ್ಧಿಪಡಿಸಲಾಗಿದೆ. ಬಹುಸಂಖ್ಯೆಯಲ್ಲಿರುವ ಪೀಡೆ ಸಮಸ್ಯೆಗಳನ್ನು ಒಟ್ಟಿಗೆ ನಿರ್ಣಯಿಸಬಹುದಾಗಿದೆ. ಪರಿಹಾರ/ಸಲಹೆಯಿಂದ ರೈತರಿಗೆ ಆದ ಪ್ರಯೋಜನ ತಿಳಿಯಲು ಅನುಸರಣೆ ಕ್ರಮವನ್ನು ಕೂಡ ಅಳವಡಿಸಿಕೊಳ್ಳಲಾಗಿದೆ. ಗುರುತಿಸಲಾಗದ ಪೀಡೆಯ ಹಾನಿಯ ಲಕ್ಷಣಗಳುಳ್ಳ ಬೆಳೆ ಚಿತ್ರವನ್ನು ಧ್ವನಿ ಸಹಾಯದೊಂದಿಗೆ ಜಿಪಿಎಸ್ ಸಂಪರ್ಕದೊಂದಿಗೆ ಪರಿಣಿತ ತಜ್ಞರಿಗೆ ಪರಿಹಾರ ಕೋರಿ ಕ್ಷಣಮಾತ್ರದಲ್ಲಿ ಕಳುಹಿಸಿಕೊಡಬಹುದು.
ಇ-ಸ್ಯಾಪ್‌ನಿಂದ ನೀತಿನಿರೂಪಕರಿಗೆ, ಆಡಳಿತಗಾರರಿಗೆ ಮತ್ತು ಸಂಶೋಧನೆಯಲ್ಲಿ ತೊಡಗಿರುವವರಿಗೆ ಕ್ಷೇತ್ರ ಮಟ್ಟದಲ್ಲಿನ ಸ್ಥಿತಿಗತಿಗಳನ್ನು ಅರಿಯಲು ಸಹಾಯಕವಾಗಿದೆ. ಜಿ.ಐ.ಎಸ್. ತಂತ್ರಜ್ಞಾನವು ಕ್ಷೇತ್ರಮಟ್ಟದಲ್ಲಿ ಕೈಗೊಂಡ ಸಮೀಕ್ಷೆಯ ಆಧಾರದ ಮೇಲೆ ಪೀಡೆ ಬಾಧೆಯ ಸ್ಥಿತಿಗತಿಗಳನ್ನು ಅವಲೋಕಿಸುತ್ತದೆ. ಅಷ್ಟಲ್ಲದೆ, ಈ ತಂತ್ರಜ್ಞಾನದಲ್ಲಿ ಸ್ವಯಂ ಚಾಲಿತವಾಗಿ ಅಗತ್ಯಕ್ಕೆ ತಕ್ಕಂತೆ ರೇಖಾನಕ್ಷೆ ಮತ್ತು ಕೋಷ್ಟಕಗಳು ಪರಿಷ್ಕೃತಗೊಳ್ಳುತ್ತವೆ.
ಇ-ಸ್ಯಾಪ್ ತಂತ್ರಜ್ಞಾನವನ್ನು ಬೆಂಗಳೂರಿನ ತೆನೆ ಅಗ್ರಿಕಲ್ಚರಲ್ ಸೊಲ್ಯುಷನ್ಸ್ ಪ್ರವೇಟ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಕರ್ನಾಟಕದ 20 ಕೃಷಿ ಬೆಳೆಗಳಲ್ಲಿ ಕ್ಷೇತ್ರಮಟ್ಟದಲ್ಲಿ ಪ್ರಾಯೋಗಿಕ ಅಧ್ಯಯನವನ್ನು ಕೈಗೊಳ್ಳಲಾಯಿತು. ಇ-ಸ್ಯಾಪ್ ತಂತ್ರಜ್ಞಾನವು ಒಂದು ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಲಾಭದಾಯಕವಾಗಿದ್ದು, ಪ್ರಸ್ತುತ ಇ-ಸ್ಯಾಪ್ ತಂತ್ರಜ್ಞಾನವು ರಾಜ್ಯದ ಕೃಷಿ ಇಲಾಖೆಯ ಸಹಯೋಗದೊಂದಿಗೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ.
ಇ-ಸ್ಯಾಪ್ ರೈತರಿಗೆ ಸಾಕಷ್ಟು ಪ್ರಯೋಜನಕಾರಿ ಅಂಶಗಳನ್ನು ಹೊಂದಿರುವುದರ ಪರಿಣಾಮವಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ. 2018-19ನೇ ಸಾಲಿನ ವಿಶ್ವಸಂಸ್ಥೆ ಮತ್ತು ಅಂತರ್‌ರಾಷ್ಟ್ರೀಯ ದೂರಸಂವಹನ ಒಕ್ಕೂಟವು (ಐ.ಟಿ.ಯು.) ಜಿನೀವಾದಲ್ಲಿ ಆಯೋಜಿಸಿದ ಜಾಗತಿಕ ಶೃಂಗದಲ್ಲಿ ಪ್ರತಿಷ್ಠಿತ WSIS-2018 ಚಾಂಪಿಯನ್ ಅಂತರ್‌ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ಇತ್ತೀಚೆಗೆ ಕರ್ನಾಟಕ ಸರಕಾರವು ಇ-ಸ್ಯಾಪ್ ತಂತ್ರಜ್ಞಾನವನ್ನು ಎಲ್ಲೆಡೆ ವಿಸ್ತರಿಸಲು ಆಸಕ್ತಿ ವಹಿಸಿದೆ. ಅದಕ್ಕಾಗಿ ಎಲ್ಲಾ ಕೃಷಿ ವಿಶ್ವವಿದ್ಯಾನಿಲಯಗಳು ಹಾಗೂ ತೋಟಗಾರಿಕಾ ವಿಶ್ವವಿದ್ಯಾನಿಲಯಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಲೇಜುಗಳಲ್ಲಿ ಮತ್ತು ವಿಸ್ತರಣಾ ಕೇಂದ್ರಗಳಲ್ಲಿ ಇದನ್ನು ಬಳಸುವಂತೆ ಸೂಚಿಸಿದೆ. ಡಿಜಿಟಲ್ ವಿಸ್ತರಣಾ ವ್ಯವಸ್ಥೆಯಾದ ಇ-ಸ್ಯಾಪ್‌ನ್ನು ಕೃಷಿ ಮತ್ತು ತೋಟಗಾರಿಕಾ ಇಲಾಖಾ ಅಧಿಕಾರಿಗಳು ಮಾತ್ರ ಬಳಸುತ್ತಿದ್ದಾರೆ. ರೈತರು ನೇರವಾಗಿ ಇದನ್ನು ಬಳಸುವಂತಾದರೆ ಇನ್ನಷ್ಟು ಅನುಕೂಲವಾದೀತು ಅಲ್ಲವೇ?