ಫುಕುಷಿಮ ತ್ಯಾಜ್ಯ ನೀರು ಬಿಡುಗಡೆ ಸುರಕ್ಷಿತವೇ?

2011ರಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪವು ಜಪಾನ್‌ನಲ್ಲಿ ಸುನಾಮಿಯನ್ನುಂಟು ಮಾಡಿತ್ತು. ಇದು ಅಲ್ಲಿನ ಫುಕುಷಿಮ ಡೈಚಿ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಿತ್ತು. ಭೂಕಂಪದ ನಂತರ ವಿದ್ಯುತ್ ಕೇಂದ್ರವು ಸ್ಫೋಟಗೊಂಡಿತು ಮತ್ತು ನಂತರದ ಸುನಾಮಿಯು ಕರಾವಳಿ ಸ್ಥಾವರವನ್ನು ದುರ್ಬಲಗೊಳಿಸಿತ್ತು. ರಿಯಾಕ್ಟರ್ ಕೋರ್‌ಗಳನ್ನು ಹೆಚ್ಚು ಬಿಸಿಮಾಡಿತು. ಪರಿಸರದ ಮೇಲಾಗುವ ಹಾನಿಯನ್ನು ತಪ್ಪಿಸಲು ಅಂದಿನಿಂದ 1.3 ಮಿಲಿಯನ್ ಕ್ಯೂಬಿಕ್ ಮೀಟರ್‌ಗಿಂತಲೂ ಹೆಚ್ಚು ಸಮುದ್ರದ ನೀರನ್ನು ಹಾನಿಗೊಳಗಾದ ಕೋರ್‌ಗಳ ಮೇಲೆ ಸಿಂಪಡಿಸಲಾಯಿತು. ಇದರಿಂದ ರಿಯಾಕ್ಟರ್‌ಗಳು ಅಧಿಕ ಬಿಸಿಯಾಗುವುದನ್ನು ತಪ್ಪಿಸಲಾಯಿತು. ಆ ಮೂಲಕ ರೇಡಿಯೊನ್ಯೂಕ್ಲೈಡ್‌ಗಳು ಎಂದು ಕರೆಯಲ್ಪಡುವ 64 ಬಗೆಯ ವಿಕಿರಣಶೀಲ ಅಂಶಗಳು ಪರಿಸರಕ್ಕೆ ಸೇರುವುದನ್ನು ತಡೆಯಲಾಯಿತು.
ಟ್ರಿಟಿಯಮ್ ಸೇರಿದಂತೆ ಕಾರ್ಬನ್, ಅಯೋಡಿನ್, ಸೀಸಿಯಮ್, ಸ್ಟ್ರಾಂಷಿಯಂ, ಕೋಬಾಲ್ಟ್ ಮತ್ತು ಹೈಡ್ರೋಜನ್‌ನಂತಹ ವಿಷಕಾರಿ ಅನಿಲಗಳು ಈ ದುರಂತದಿಂದ ಹೊರಸೂಸುವುದನ್ನು ತಡೆಯಲು ಶ್ರಮಿಸಲಾಯಿತು. ಇವು ಮಾನವನ ಆರೋಗ್ಯಕ್ಕೆ ಅಪಾಯವನ್ನು ಉಂಟುಮಾಡುತ್ತವೆ. ವಿಕಿರಣಶೀಲ ಅಂಶವನ್ನು ಕಡಿಮೆ ಮಾಡಲು ನೀರನ್ನು ಬಳಸಿಕೊಳ್ಳಲಾಯಿತು. ಅದಕ್ಕಾಗಿ ಘಟಕದಲ್ಲಿ 1,000 ಕ್ಕೂ ಹೆಚ್ಚು ಸ್ಟೇನ್‌ಲೆಸ್ ಸ್ಟೀಲ್ ಟ್ಯಾಂಕ್‌ಗಳನ್ನು ಅಳವಡಿಸಲಾಯಿತು. ಅದರಲ್ಲಿ ವಿಕಿರಣಶೀಲ ನೀರನ್ನು ಸಂಗ್ರಹಿಸಲಾಯಿತು. ವಿದ್ಯುತ್ ಸ್ಥಾವರದ ವಿಕಿರಣಶೀಲತೆಯನ್ನು ನಿಯಂತ್ರಣದಲ್ಲಿಡಲು ಟೋಕಿಯೊ ಇಲೆಕ್ಟ್ರಿಕ್ ಪವರ್ ಕಂಪೆನಿ (ಟಿಇಪಿಸಿಒ) ಶ್ರಮಿಸಿತು. ಹೀಗೆ ಸಂಗ್ರಹವಾದ ಕಲುಷಿತ ನೀರನ್ನು ಸಂಸ್ಕರಿಸಲು ಸುಧಾರಿತ ದ್ರವ ಸಂಸ್ಕರಣಾ ವ್ಯವಸ್ಥೆ (ಎಎಲ್‌ಪಿಎಸ್) ಎಂದು ಕರೆಯಲಾಗುತ್ತದೆ. ಟಿಇಪಿಸಿಒ ಹೇಳುವಂತೆ ಕಲುಷಿತ ನೀರು ಇಂಗುವಿಕೆ, ಹೊರಹೀರುವಿಕೆ ಮತ್ತು ಭೌತಿಕ ಶೋಧನೆಯಂತಹ ಐದು ಸಂಸ್ಕರಣಾ ಹಂತಗಳಿಗೆ ಒಳಗಾಗುತ್ತದೆ. ಎಎಲ್‌ಪಿಎಸ್ ಪ್ರಕ್ರಿಯೆಯು 64 ರೇಡಿಯೊನ್ಯೂಕ್ಲೈಡ್‌ಗಳಲ್ಲಿ 62 ರೇಡಿಯೊನ್ಯೂಕ್ಲೈಡ್‌ಗಳನ್ನು ತೆಗೆದುಹಾಕುತ್ತದೆ. ಆದರೆ ಆ ಪ್ರಕ್ರಿಯೆಯು ಕಾರ್ಬನ್-14 ಮತ್ತು ಟ್ರಿಟಿಯಮ್ ಅನ್ನು ತೆಗೆದುಹಾಕುವುದಿಲ್ಲ.
ಟಿಇಪಿಸಿಒ ಹೇಳುವಂತೆ ಟ್ರಿಟಿಯಮ್‌ನ ಸಾಂದ್ರತೆಯು ಪ್ರತೀ ಲೀಟರ್‌ಗೆ ಸುಮಾರು 1,500 ಬೆಕ್ವೆರೆಲ್ (ಬೆಕ್ವೆರೆಲ್ ಅಥವಾ Bq ಆಟಿ ವಿಕಿರಣಶೀಲತೆಯ ಘಟಕ ಅಳತೆ)ಗಿಂತ ಕಡಿಮೆ ಇರಬೇಕು. ಇದು ಕುಡಿಯುವ ನೀರಿಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿದ 10,000 Bq/Lನ ಶಿಫಾರಸು ಮಿತಿಗಿಂತ ಕಡಿಮೆಯಾಗಿದೆ. ಟ್ರಿಟಿಯಮ್ ಒಳಗೊಂಡ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುಗಡೆ ಮಾಡಿದರೆ ಅದು ಸಮುದ್ರದ ತಳಮಟ್ಟಕ್ಕೆ ಇಳಿಯುತ್ತದೆ ಎಂದು ಕಂಪೆನಿ ಸೂಚಿಸುತ್ತದೆ. ಪ್ರಸ್ತುತ ನಿಗದಿಪಡಿಸಿದ ನಿಯಮಗಳನ್ವಯ ಟ್ಯಾಂಕ್‌ಗಳಲ್ಲಿನ ಕಾರ್ಬನ್-14 ಮೇಲಿನ ಮಿತಿಯ ಸುಮಾರು ಶೇ. 2ರಷ್ಟು ಸಾಂದ್ರತೆಯನ್ನು ಹೊಂದಿದೆ ಎಂದು ಟಿಇಪಿಸಿಒ ಹೇಳುತ್ತದೆ.
12 ವರ್ಷಗಳಿಂದ ಸಂಗ್ರಹವಾದ ಇಂತಹ ತ್ಯಾಜ್ಯ ನೀರನ್ನು ಪೆಸಿಫಿಕ್ ಮಹಾಸಾಗರಕ್ಕೆ ಬಿಡುವ ಯೋಜನೆ ರೂಪಿತವಾಗಿದೆ. ಸಾಗರದ ಸುತ್ತಲಿನ ರಾಷ್ಟ್ರಗಳಿಗೆ ಇದು ಉಂಟುಮಾಡುವ ಅಪಾಯವು ಬಹುಶಃ ನಗಣ್ಯವಾಗಿರುತ್ತದೆ ಎಂದು ಯು.ಕೆ. ಪೋರ್ಟ್‌ಸ್ಮೌತ್ ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನಿ ಜಿಮ್ ಸ್ಮಿತ್ ಹೇಳುತ್ತಾರೆ. ಸಂಸ್ಕರಿಸಿದ ನೀರನ್ನು ಸ್ಥಳದಲ್ಲೇ ಇಟ್ಟುಕೊಳ್ಳುವುದರಿಂದ ಹೆಚ್ಚಿನ ಅಪಾಯ ಉಂಟಾಗುತ್ತದೆ ಎಂದು ಅವರು ವಾದಿಸುತ್ತಾರೆ. ಇದು ಮತ್ತೊಂದು ಭೂಕಂಪ ಅಥವಾ ಟೈಫೂನ್‌ನ ಅಪಾಯಕ್ಕೆ ಕಾರಣವಾಗಬಹುದು ಎಂದು ಹೇಳುತ್ತಾರೆ. ದಕ್ಷಿಣ ಕೊರಿಯಾದಂತಹ ರಾಷ್ಟ್ರಗಳು ಸಂಸ್ಕರಿತ ತ್ಯಾಜ್ಯ ನೀರು ಸಾಗರ ಪರಿಸರದ ಮೇಲೆ ಅನ್ವೇಷಿಸದ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಕಳವಳ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ದೇಶದ ನಿಯೋಗವು ಮೇ ತಿಂಗಳಲ್ಲಿ ಫುಕುಷಿಮ ಪ್ರದೇಶಕ್ಕೆ ಭೇಟಿ ನೀಡಿತ್ತು. ಕಳೆದ ವರ್ಷ ವರ್ಜೀನಿಯಾದ ಹೆರಂಡನ್‌ನಲ್ಲಿರುವ ಅಮೆರಿಕದ ನ್ಯಾಷನಲ್ ಅಸೋಸಿಯೇಷನ್ ಆಫ್ ಮೆರೈನ್ ಲ್ಯಾಬೊರೇಟರೀಸ್ ಸಹ ಯೋಜಿತ ಬಿಡುಗಡೆಗೆ ತನ್ನ ವಿರೋಧವನ್ನು ವ್ಯಕ್ತಪಡಿಸಿತು. ‘‘ಜಪಾನ್‌ನ ಸುರಕ್ಷತೆಯ ಪ್ರತಿಪಾದನೆಯನ್ನು ಬೆಂಬಲಿಸುವ ಮತ್ತು ನಿಖರವಾದ ವೈಜ್ಞಾನಿಕ ಮಾಹಿತಿಯ ಕೊರತೆಯಿದೆ’’ ಎಂದು ಹೇಳಿದೆ. ಪೆಸಿಫಿಕ್‌ಗೆ ನೀರು ಬಿಡುವುದನ್ನು ಮರುಪರಿಶೀಲಿಸುವಂತೆ ಜಪಾನ್‌ಗೆ ಫಿಲಿಪೈನ್ ಸರಕಾರವೂ ಕರೆ ನೀಡಿತ್ತು.
ಹಲವಾರು ರಾಷ್ಟ್ರಗಳು ಮತ್ತು ಅಂತರ್‌ರಾಷ್ಟ್ರೀಯ ಗುಂಪುಗಳ ಕಳವಳಗಳ ಹೊರತಾಗಿಯೂ, ಜಪಾನ್‌ನ ಫುಕುಷಿಮ ಡೈಚಿ ಪರಮಾಣು ವಿದ್ಯುತ್ ಸ್ಥಾವರದ ಕರಗುವಿಕೆಯಿಂದ ಕಲುಷಿತಗೊಂಡ ನೀರನ್ನು ಪೆಸಿಫಿಕ್ ಮಹಾಸಾಗರಕ್ಕೆ ಬಿಡುಗಡೆ ಮಾಡುವ ಯೋಜನೆ ಈಗ ಇಡೀ ಜಗತ್ತಿನ ಗಮನ ಸೆಳೆದಿದೆ. ಈ ವರ್ಷದಿಂದ ಪ್ರಾರಂಭವಾಗುವ ಈ ಯೋಜನೆ ಮುಂದಿನ 30 ವರ್ಷಗಳವರೆಗೆ ಮುಂದುವರಿಯುತ್ತದೆ. ಜಪಾನ್ ಕರಾವಳಿಯಿಂದ ಒಂದು ಕಿಲೋಮೀಟರ್ ವಿಸ್ತರಿಸುವ ಪೈಪ್‌ಲೈನ್ ಮೂಲಕ ವಿದ್ಯುತ್ ಘಟಕದ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾದ ಸಂಸ್ಕರಿಸಿದ ನೀರನ್ನು ಸಾಗರಕ್ಕೆ ನಿಧಾನವಾಗಿ ಬಿಡುಗಡೆ ಮಾಡುತ್ತದೆ. ಆದರೆ ಪೆಸಿಫಿಕ್ ಪ್ರದೇಶದಾದ್ಯಂತ ಸಮುದ್ರ ಪರಿಸರ ಮತ್ತು ಮಾನವರಿಗೆ ಈ ನೀರು ಎಷ್ಟು ಸುರಕ್ಷಿತವಾಗಿದೆ? ಎಂಬುದೇ ಪ್ರಸಕ್ತ ಚರ್ಚೆಗೆ ಗ್ರಾಸವಾಗಿದೆ.
ಟ್ರಿಟಿಯಮ್ β-ವಿಕಿರಣದ ಹೊರಸೂಸುವಿಕೆಯಾಗಿದೆ. ಟ್ರಿಟಿಯಮ್ ದುರ್ಬಲವಾಗಿದ್ದರೂ ಅದು ಅಯಾನೀಕರಿಸುವ ವಿಕಿರಣವನ್ನು ಹೊರಸೂಸುತ್ತದೆ. ಅದು ಡಿ.ಎನ್.ಎ.ಗೆ ಹಾನಿ ಮಾಡುತ್ತದೆ. ಆದರೆ ಮಾನವ ಚರ್ಮವು ಅಯಾನೀಕರಿಸುವ ವಿಕಿರಣವನ್ನು ಭಾಗಶಃ ನಿರ್ಬಂಧಿಸುತ್ತದೆ. ಇದು ಮಾನವನ ಜೀವಕೋಶಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ರಿಚ್ಮಂಡ್ ಹೇಳುತ್ತಾರೆ.
ಆಸ್ಟ್ರೇಲಿಯ, ಫಿಜಿ, ಪಪುವಾ ನ್ಯೂಗಿನಿಯಾ ಮತ್ತು ಫ್ರೆಂಚ್ ಪಾಲಿನೇಷಿಯಾ ಸೇರಿದಂತೆ 18 ಪೆಸಿಫಿಕ್ ರಾಷ್ಟ್ರಗಳನ್ನು ಒಳಗೊಂಡಿರುವ ಅಂತರ್ ಸರಕಾರಿ ಸಂಸ್ಥೆಯಾದ ಪೆಸಿಫಿಕ್ ಐಲ್ಯಾಂಡ್ಸ್ ಫೋರಮ್‌ಗೆ ಸಲಹೆ ನೀಡುವ ಸಮಿತಿಯಲ್ಲಿರುವ ಐದು ವಿಜ್ಞಾನಿಗಳಲ್ಲಿ ರಿಚ್‌ಮಂಡ್ ಒಬ್ಬರು. ಅವರು ಟಿಇಪಿಸಿಒ ಮತ್ತು ಜಪಾನೀಸ್ ಸರಕಾರವು ಒದಗಿಸಿದ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿದ್ದಾರೆ ಮತ್ತು ಫುಕುಷಿಮ ಪ್ರದೇಶಕ್ಕೂ ಭೇಟಿ ನೀಡಿದ್ದಾರೆ. ಪೈಪ್‌ಲೈನ್ ನೀರನ್ನು ಹೊರಹಾಕುವ 3 ಕಿಲೋಮೀಟರ್ ಸುತ್ತಮುತ್ತಲ ಪ್ರದೇಶದಲ್ಲಿ ಮೀನುಗಾರಿಕೆಯನ್ನು ನಡೆಸಲಾಗುವುದಿಲ್ಲ ಎಂದು ಟಿಇಪಿಸಿಒ ಹೇಳುತ್ತದೆ. ಆದರೆ ದೊಡ್ಡ ಜೀವಿಗಳು ಸಣ್ಣ ಕಲುಷಿತವಾದ ಜೀವಿಗಳನ್ನು ಆಹಾರಕ್ಕಾಗಿ ತಿನ್ನುವುದರಿಂದ ಟ್ರಿಟಿಯಮ್ ಆಹಾರದ ಜಾಲದಲ್ಲಿ ಸೇರಬಹುದು ಎಂದು ರಿಚ್ಮಂಡ್ ಎಚ್ಚರಿಸಿದ್ದಾರೆ.
ಟೋಕಿಯೊ ವಿಶ್ವವಿದ್ಯಾನಿಲಯದ ವಾಯುಮಂಡಲ ಮತ್ತು ಸಾಗರ ಸಂಶೋಧನಾ ಸಂಸ್ಥೆಯ ಸಮುದ್ರಶಾಸ್ತ್ರಜ್ಞ ಮತ್ತು ಸಮುದ್ರ ರಸಾಯನಶಾಸ್ತ್ರಜ್ಞ ಶಿಗೆಯೋಶಿ ಒಟೊಸಾಕಾ ಅವರ ಹೇಳಿಕೆಯೂ ಸಹ ರಿಚ್ಮಂಡ್ ಅವರ ಹೇಳಿಕೆಗೆ ಪೂರಕವಾಗಿದೆ. ಸಾವಯವವಾಗಿ ಬಂಧಿಸಲ್ಪಟ್ಟ ಟ್ರಿಟಿಯಮ್ ರೂಪವು ಮೀನು ಮತ್ತು ಸಮುದ್ರ ಜೀವಿಗಳಲ್ಲಿ ಸಂಗ್ರಹವಾಗಬಹುದು ಎಂದು ಶಿಗೆಯೋಶಿ ಒಟೊಸಾಕಾ ಹೇಳುತ್ತಾರೆ. ಸಾಗರ ಜೀವನದಲ್ಲಿ ರೇಡಿಯೊನ್ಯೂಕ್ಲ್ಲೈಡ್‌ಗಳ ಜೈವಿಕ ಶೇಖರಣೆಯ ಸಂಭಾವ್ಯತೆಯ ಬಗ್ಗೆ ಅಂತರ್‌ರಾಷ್ಟ್ರೀಯ ಸಂಶೋಧನೆಯು ತನಿಖೆ ನಡೆಸುತ್ತಿದೆ ಮತ್ತು ಸುನಾಮಿಯ ಸಮಯದಲ್ಲಿ ಆಕಸ್ಮಿಕವಾಗಿ ಕಲುಷಿತ ನೀರನ್ನು ಬಿಡುಗಡೆ ಮಾಡಿದ ನಂತರ ಫುಕುಷಿಮದ ಸುತ್ತಮುತ್ತಲಿನ ನೀರಿನಲ್ಲಿ ಈಗಾಗಲೇ ಏನಾಯಿತು ಎಂದು ಅವರು ಹೇಳುತ್ತಾರೆ.
‘‘ಈ ರೇಡಿಯೊನ್ಯೂಕ್ಲ್ಲೈಡ್‌ಗಳ ದೀರ್ಘಕಾಲೀನ ಪರಿಸರ ಪ್ರಭಾವವನ್ನು ಮೌಲ್ಯಮಾಪನ ಮಾಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ’’ ಎಂದು ಒಟೊಸಾಕಾ ಹೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಸಮುದ್ರ ಜೀವಿಗಳ ದೇಹದಲ್ಲಿನ ಟ್ರಿಟಿಯಮ್ ಸಾಂದ್ರತೆಯು ಒಂದು ನಿರ್ದಿಷ್ಟ ಅವಧಿಯ ನಂತರ ಸಮತೋಲನವನ್ನು ತಲುಪುತ್ತದೆ ಮತ್ತು ವಾಸಿಸುವ ಪರಿಸರದಲ್ಲಿನ ಸಾಂದ್ರತೆಯನ್ನು ಮೀರುವುದಿಲ್ಲ ಎಂದು ನಾವು ದೃಢಪಡಿಸಿದ್ದೇವೆ ಎಂದು ಟಿಇಪಿಸಿಒನ ವಕ್ತಾರರು ಹೇಳಿದ್ದಾರೆ. ಜೀವಿಯು ಸಂಸ್ಕರಿಸದ ಸಮುದ್ರದ ನೀರಿಗೆ ಹಿಂತಿರುಗಿದ ನಂತರ ಟ್ರಿಟಿಯಮ್ ಸಾಂದ್ರತೆಯು ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ ಎಂಬುದು ಟಿಇಪಿಸಿಒ ಹೇಳಿದೆ.
ಒಂದು ವೇಳೆ ಫುಕುಷಿಮದಲ್ಲಿನ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವ ಯೋಜನೆಯು ಯಶಸ್ವಿಯಾದರೆ, ವಿವಿಧ ಪರಮಾಣು ವಿದ್ಯುತ್ ಕೇಂದ್ರಗಳಲ್ಲಿನ ತ್ಯಾಜ್ಯ ನೀರು ಸೇರಿದಂತೆ ಇತರ ಕೈಗಾರಿಕೆಗಳ ತ್ಯಾಜ್ಯ ನೀರೂ ಸಹ ಸಮುದ್ರ ಸೇರಬಹುದು. ಹೀಗೆ ಎಲ್ಲಾ ಕೈಗಾರಿಕಾ ತ್ಯಾಜ್ಯಗಳು ಸಮುದ್ರ ಸೇರುತ್ತಾ ಹೋದರೆ ಸಮುದ್ರವು ತನ್ನ ಸ್ವಾಭಾವಿಕತೆಯನ್ನು ಕಳೆದುಕೊಂಡು ಸಂಪೂರ್ಣ ತ್ಯಾಜ್ಯಮಯವಾಗುವ ದಿನಗಳು ದೂರವಿಲ್ಲ. ಈಗಾಗಲೇ ಪ್ಲಾಸ್ಟಿಕ್ ತ್ಯಾಜ್ಯವು ಸಮುದ್ರ ಪರಸರವನ್ನು ಒಂದಿಷ್ಟು ಹಾಳು ಮಾಡಿದೆ. ಇದಕ್ಕೆ ಕೈಗಾರಿಕೆಗಳ ತ್ಯಾಜ್ಯವೂ ಸೇರಿದರೆ ಸಮುದ್ರ ಜೀವಿಗಳ ಗತಿಯೇನು? ಅವುಗಳನ್ನು ಆಹಾರಕ್ಕಾಗಿ ಬಳಸುವ ಮಾನವರ ಗತಿಯೇನು? ಎಂಬುದರ ಕುರಿತು ಗಂಭೀರವಾಗಿ ಚಿಂತಿಸಬೇಕಿದೆ