ಭಾರತವು ಮರ್ಕ್ಯುರಿ ಹಾಟ್‌ಸ್ಪಾಟ್ ಆಗುತ್ತಿದೆಯೇ?
ತುಂಬಾ ಚೂಟಿಯಾಗಿರುವವರನ್ನು ಪಾದರಸಕ್ಕೆ ಹೋಲಿಸುವುದು ಸಾಮಾನ್ಯ. ಕಾರಣ ಇಷ್ಟೇ ಪಾದರಸವು ಒಂದು ವಿಭಿನ್ನ ಗುಣಗಳುಳ್ಳ ಧಾತುವಾಗಿದ್ದು ಹಲವು ರೂಪಗಳನ್ನು ಹೊಂದಿದೆ. ಪಾದರಸವು ಭೂಮಿಯ ಹೊರಪದರದಲ್ಲಿ ನೈಸರ್ಗಿಕವಾಗಿ ಕಂಡುಬರುವ ಅಂಶವಾಗಿದ್ದು ಅದು ಗಾಳಿ, ನೀರು ಮತ್ತು ಮಣ್ಣಿನಲ್ಲಿ ಕಂಡುಬರುತ್ತದೆ. ಇದು ಜ್ವಾಲಾಮುಖಿ ಚಟುವಟಿಕೆ, ಬಂಡೆಗಳ ಹವಾಮಾನ ಮತ್ತು ಮಾನವ ಚಟುವಟಿಕೆಯ ಪರಿಣಾಮವಾಗಿ ಪರಿಸರಕ್ಕೆ ಬಿಡುಗಡೆಯಾಗುತ್ತದೆ. ಮಾನವ ಚಟುವಟಿಕೆಯು ಪಾದರಸ ಬಿಡುಗಡೆಗೆ ಪ್ರಮುಖ ಕಾರಣವಾಗಿದೆ. ನಿರ್ದಿಷ್ಟವಾಗಿ ಕಲ್ಲಿದ್ದಲಿನ ಶಕ್ತಿ ಕೇಂದ್ರಗಳು, ತಾಪನ ಮತ್ತು ಅಡುಗೆಗಾಗಿ ಕಲ್ಲಿದ್ದಲು ಸುಡುವಿಕೆ, ಕೈಗಾರಿಕಾ ಪ್ರಕ್ರಿಯೆಗಳು, ತ್ಯಾಜ್ಯ ದಹನಕಾರಕಗಳು, ಚಿನ್ನ ಮತ್ತು ಇತರ ಲೋಹಗಳ ಗಣಿಗಾರಿಕೆಯ ಪರಿಣಾಮವಾಗಿ ಪಾದರಸವು ಪರಿಸರಕ್ಕೆ ಬಿಡುಗಡೆಯಾಗುತ್ತದೆ. ಚಿನ್ನದ ಗಣಿಗಾರಿಕೆಯು ಮಾನವಜನ್ಯ ಪಾದರಸ ಹೊರಸೂಸುವಿಕೆಯ (ಶೇ. 37.7) ಅತಿದೊಡ್ಡ ಮೂಲವಾಗಿದೆ. ನಂತರ ಕಲ್ಲಿದ್ದಲಿನ ಸ್ಥಿರ ದಹನ (ಶೇ. 21). ಗಾಳಿಯಲ್ಲಿ ಹೊರಸೂಸಲ್ಪಟ್ಟ ಪಾದರಸವು ನೀರಿನಲ್ಲಿ ಅಥವಾ ಭೂಮಿಗೆ ನೆಲೆಗೊಳ್ಳುತ್ತದೆ. ಆ ಮೂಲಕ ಜೀವಿಗಳ ದೇಹ ಸೇರುತ್ತಿರುವುದು ವಿಷಾದನೀಯ. ನಮಗೆಲ್ಲಾ ತಿಳಿದಂತೆ ಪಾದರಸವು ಅತ್ಯಂತ ವಿಷಕಾರಿ ಮತ್ತು ಅಪಾಯಕಾರಿ ವಸ್ತುವಾಗಿದ್ದು, ಅದು ಭೂಮಿ, ನೀರು, ಗಾಳಿ ಮತ್ತು ಆಹಾರ ಸರಪಳಿಯನ್ನು ತೀವ್ರವಾಗಿ ಕಲುಷಿತಗೊಳಿಸುತ್ತಿದೆ. ಪಾದರಸವು ವಿವಿಧ ರೂಪಗಳಲ್ಲಿ ಜೀವಿಗಳನ್ನು ಆವರಿಸಿಕೊಳ್ಳುತ್ತಿದೆ. ಧಾತುರೂಪದ (ಅಥವಾ ಲೋಹೀಯ), ಅಜೈವಿಕ (ಜನರು ತಮ್ಮ ಉದ್ಯೋಗದ ಮೂಲಕ ಒಡ್ಡಿಕೊಳ್ಳಬಹುದು), ಸಾವಯವ (ಉದಾಹರಣೆಗೆ, ಮಿಥೈಲ್ ಮರ್ಕ್ಯುರಿ- ಜನರು ತಮ್ಮ ಆಹಾರದ ಮೂಲಕ ಒಡ್ಡಿಕೊಳ್ಳಬಹುದು). ಪಾದರಸದ ಈ ರೂಪಗಳು ವಿಷತ್ವದ ಮಟ್ಟದಲ್ಲಿ ಮತ್ತು ನರ, ಜೀರ್ಣಕಾರಿ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗಳು ಮತ್ತು ಶ್ವಾಸಕೋಶಗಳು, ಮೂತ್ರಪಿಂಡಗಳು, ಚರ್ಮ ಮತ್ತು ಕಣ್ಣುಗಳ ಮೇಲೆ ಅವುಗಳ ಪರಿಣಾಮಗಳಲ್ಲಿ ಭಿನ್ನವಾಗಿರುತ್ತವೆ.
ಎಲ್ಲಾ ಮಾನವರು ವಿವಿಧ ಕಾರಣಗಳಿಂದ ಕೆಲವು ಮಟ್ಟದ ಪಾದರಸಕ್ಕೆ ಒಡ್ಡಿಕೊಳ್ಳುತ್ತಾರೆ. ಹೆಚ್ಚಿನ ಜನರು ಕಡಿಮೆ ಮಟ್ಟದ ಪಾದರಸಕ್ಕೆ ಒಡ್ಡಿಕೊಂಡರೆ ಕೆಲವರು ಹೆಚ್ಚಿನ ಮಟ್ಟದ ಪಾದರಸಕ್ಕೆ ಒಡ್ಡಿಕೊಳ್ಳುತ್ತಾರೆ.
ಮಿಥೈಲ್ ಮರ್ಕ್ಯುರಿಯು ಪ್ರಾಥಮಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಿಥೈಲ್ ಮರ್ಕ್ಯುರಿಗೆ ಒಡ್ಡಿಕೊಂಡ ಮಕ್ಕಳಲ್ಲಿ ಅರಿವಿನ ಚಿಂತನೆ, ಸ್ಮರಣೆ, ಗಮನ, ಭಾಷೆ ಮತ್ತು ಉತ್ತಮ ಚಲನಾತ್ಮಕತೆ ಮತ್ತು ದೃಶ್ಯ ಕೌಶಲ್ಯಗಳ ನ್ಯೂನತೆಗೆ ಕಾರಣವಾಗುತ್ತದೆ. 1932 ಮತ್ತು 1968ರ ನಡುವೆ ಜಪಾನ್‌ನ ಮಿನಮಾಟಾದಲ್ಲಿ ಪಾದರಸವು ಸಾರ್ವಜನಿಕ ಆರೋಗ್ಯದ ಮೇಲೆ ಬೀರಿದ ಪರಿಣಾಮವನ್ನು ಮರೆಯುವಂತಿಲ್ಲ. ಅಲ್ಲಿ ಅಸಿಟಿಕ್ ಆಮ್ಲವನ್ನು ಉತ್ಪಾದಿಸುವ ಕಾರ್ಖಾನೆಯು ತ್ಯಾಜ್ಯ ದ್ರವವನ್ನು ಮಿನಮಾಟಾ ಕೊಲ್ಲಿಗೆ ಬಿಡುಗಡೆ ಮಾಡಿತು. ವಿಸರ್ಜನೆಯು ಮಿಥೈಲ್ ಮರ್ಕ್ಯುರಿಯ ಹೆಚ್ಚಿನ ಸಾಂದ್ರತೆಯನ್ನು ಒಳಗೊಂಡಿತ್ತು. ಕೊಲ್ಲಿಯು ಮೀನು ಮತ್ತು ಚಿಪ್ಪುಮೀನುಗಳಿಂದ ಸಮೃದ್ಧವಾಗಿತ್ತು. ಇದು ಸ್ಥಳೀಯ ನಿವಾಸಿಗಳು ಮತ್ತು ಇತರ ಪ್ರದೇಶಗಳ ಮೀನುಗಾರರಿಗೆ ಮುಖ್ಯ ಜೀವನೋಪಾಯವನ್ನು ಒದಗಿಸಿತ್ತು. ಅನೇಕ ವರ್ಷಗಳಿಂದ, ಮೀನುಗಳು ಪಾದರಸದಿಂದ ಕಲುಷಿತಗೊಂಡಿದ್ದವು. ಅವುಗಳನ್ನು ಆಹಾರಕ್ಕಾಗಿ ಬಳಸಿದ ಜನ ಸಮುದಾಯದಲ್ಲಿ ವಿಚಿತ್ರವಾದ ರೋಗವನ್ನು ಉಂಟುಮಾಡುತ್ತಿದೆ ಎಂದು ಯಾರೂ ಅರಿತುಕೊಂಡಿರಲಿಲ್ಲ. ಕನಿಷ್ಠ 50,000ಕ್ಕೂ ಹೆಚ್ಚು ಜನರು ಸ್ವಲ್ಪಮಟ್ಟಿಗೆ ಬಾಧಿತರಾಗಿದ್ದರು. ಆದರೆ ಆನಂತರದಲ್ಲಿ 2,000ಕ್ಕೂ ಹೆಚ್ಚು ಮಿನಮಾಟಾ ಕಾಯಿಲೆಯ ಪ್ರಕರಣಗಳನ್ನು ಪ್ರಮಾಣೀಕರಿಸಲಾಯಿತು. ಮಿನಮಾಟಾ ಕಾಯಿಲೆಯು 1950ರ ದಶಕದಲ್ಲಿ ಉತ್ತುಂಗಕ್ಕೇರಿತು. ಮೆದುಳಿನ ಹಾನಿ, ಪಾರ್ಶ್ವವಾಯು, ಅಸಮಂಜಸವಾದ ಮಾತು ಮತ್ತು ಭ್ರಮೆಯಿಂದ ಬಳಲುವಂತಹ ತೀವ್ರತರವಾದ ಪ್ರಕರಣಗಳು ಬೆಳಕಿಗೆ ಬಂದವು. ಸ್ವಾಭಾವಿಕ ಮರ್ಕ್ಯುರಿ ಮತ್ತು ಮಿಥೈಲ್ ಮರ್ಕ್ಯುರಿಯು ಕೇಂದ್ರ ಮತ್ತು ಬಾಹ್ಯ ನರಗಳಿಗೆ ವಿಷಕಾರಿಯಾಗಿದೆ. ಪಾದರಸದ ಆವಿಯ ಸೇವನೆಯು ನರ, ಜೀರ್ಣಕಾರಿ ಮತ್ತು ರೋಗನಿರೋಧಕ ವ್ಯವಸ್ಥೆಗಳು, ಶ್ವಾಸಕೋಶಗಳು ಮತ್ತು ಮೂತ್ರಪಿಂಡಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು ಮತ್ತು ಮಾರಕವಾಗಬಹುದು. ಪಾದರಸದ ಅಜೈವಿಕ ಲವಣಗಳು ಚರ್ಮ, ಕಣ್ಣುಗಳು ಮತ್ತು ಜಠರಗರುಳಿನ ಪ್ರದೇಶಕ್ಕೆ ನಾಶಕಾರಿ ಮತ್ತು ಸೇವಿಸಿದರೆ ಮೂತ್ರಪಿಂಡದ ವಿಷತ್ವವನ್ನು ಉಂಟುಮಾಡಬಹುದು. ವಿವಿಧ ಪಾದರಸ ಸಂಯುಕ್ತಗಳ ಸೇವನೆ ಅಥವಾ ಚರ್ಮದ ಒಡ್ಡುವಿಕೆಯ ನಂತರ ನರವೈಜ್ಞಾನಿಕ ಮತ್ತು ನಡವಳಿಕೆಯ ಅಸ್ವಸ್ಥತೆಗಳನ್ನು ಗಮನಿಸಬಹುದು. ನಡುಕ, ನಿದ್ರಾಹೀನತೆ, ಸ್ಮರಣೆಯ ನಷ್ಟ, ನರಸ್ನಾಯುಕ(ನ್ಯೂರೋಮಸ್ಕುಲರ್) ಪರಿಣಾಮಗಳು, ತಲೆನೋವು ಮತ್ತು ಚಲನಾತ್ಮಕ ಅಪಸಾಮಾನ್ಯ ಕ್ರಿಯೆ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಲವಾರು ವರ್ಷಗಳವರೆಗೆ ಗಾಳಿಯಲ್ಲಿ 20 ್ಠಜ/ಞ3 ಅಥವಾ ಅದಕ್ಕಿಂತ ಹೆಚ್ಚಿನ ಧಾತುರೂಪದ ಪಾದರಸದ ಮಟ್ಟಕ್ಕೆ ಒಡ್ಡಿಕೊಂಡ ಕಾರ್ಮಿಕರಲ್ಲಿ ಕೇಂದ್ರ ನರಮಂಡಲದ ವಿಷತ್ವದ ಸೌಮ್ಯವಾದ ಚಿಹ್ನೆಗಳನ್ನು ಕಾಣಬಹುದು. ಮೂತ್ರದಲ್ಲಿ ಹೆಚ್ಚಿದ ಪ್ರೊಟೀನ್‌ನಿಂದ ಹಿಡಿದು ಮೂತ್ರಪಿಂಡ ವೈಫಲ್ಯದವರೆಗೆ ಮೂತ್ರಪಿಂಡದ ಪರಿಣಾಮಗಳು ವರದಿಯಾಗಿವೆ.
ಈ ಹಿನ್ನೆಲೆಯಲ್ಲಿ ಹೆಚ್ಚಿನ ದೇಶಗಳು ಪಾದರಸವನ್ನು ಹೊರಹಾಕುತ್ತಿರುವ ಸಮಯದಲ್ಲಿ, ಭಾರತವು ವಿಶ್ವದ ವಿಷಕಾರಿ ಬಂಡವಾಳದ ನಿಲುವಂಗಿಯನ್ನು ಧರಿಸಿದೆ. ಆಮದು ಮಾಡಿಕೊಳ್ಳುತ್ತಿರುವ ಧಾತುರೂಪದ ಪಾದರಸದ ಪ್ರಮಾಣ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ಅದರ ಆಮದು 1996ರಲ್ಲಿ 254 ಟನ್‌ಗಳಿಂದ 2002ರಲ್ಲಿ 531 ಟನ್‌ಗಳಿಗೆ ದ್ವಿಗುಣಗೊಂಡಿದೆ. ಪ್ರಸಕ್ತ ಭಾರತವು ಜಗತ್ತಿನ ಎರಡನೇ ಪಾದರಸ ಬಳಕೆದಾರ ಆಗಿದೆ. ಸದ್ಯಕ್ಕೆ ಭಾರತವು ಜಗತ್ತಿನಾದ್ಯಂತ ಅಪಾಯಕಾರಿ ಅಂಶದ ಅತಿದೊಡ್ಡ ಗ್ರಾಹಕವಾಗಿದೆ. ಇದನ್ನು ಹೆಗ್ಗಳಿಕೆ ಎನ್ನಬೇಕೋ? ಅಗ್ಗಳಿಕೆ ಎನ್ನಬೇಕೋ? ತಿಳಿಯದಾಗಿದೆ. ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್ (ಸಿಎಸ್‌ಇ) ಇತ್ತೀಚೆಗೆ ಪಾದರಸದ ಮಾಲಿನ್ಯದ ಕುರಿತು ಆಯೋಜಿಸಿದ್ದ ಸಮ್ಮೇಳನದಲ್ಲಿ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (ಯುಎನ್‌ಇಪಿ) ಕೆಮಿಕಲ್ಸ್ ವರ್ಕಿಂಗ್ ಗ್ರೂಪ್‌ನ ಸಹ ಅಧ್ಯಕ್ಷ ಡಾ.ಆರ್.ಸಿ. ಶ್ರೀವಾಸ್ತವ ಅವರು ಭಾರತದಲ್ಲಿ ಪಾದರಸದ ಮಾಲಿನ್ಯವು ಅಪಾಯ ಮಟ್ಟ ತಲುಪುತ್ತಿದೆ ಎಂದು ಹೇಳಿರುವುದು ದೇಶವನ್ನು ಗಲಿಬಿಲಿಗೊಳಿಸಿದೆ. ಕೈಗಾರಿಕಾ ತ್ಯಾಜ್ಯಗಳ ವಿಸರ್ಜನೆಯಿಂದಾಗಿ ವಾತಾವರಣದಲ್ಲಿ ಪಾದರಸದ ಮಟ್ಟ 0.058 ರಿಂದ 0.268 ಮಿ.ಗ್ರಾಂ/ಲೀ.ವರೆಗೆ ಹೆಚ್ಚಾಗಿರುವುದು ಆತಂಕಕಾರಿ ಎನಿಸಿದೆ. ಇದು ನಿಗದಿತ ಭಾರತೀಯ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಾದ 0.001 ಞಜ/್ಝ (ಕುಡಿಯುವ ನೀರಿಗೆ) ಮತ್ತು 0.01 ಞಜ/್ಝ
(ಕೈಗಾರಿಕಾ ತ್ಯಾಜ್ಯಗಳಿಗೆ) ಗಿಂತ ಹಲವಾರು ಪಟ್ಟು ಹೆಚ್ಚು. ‘‘ಭಾರತದಲ್ಲಿ ಪಾದರಸದ ಮಾಲಿನ್ಯವು ವಿಷವರ್ತುಲವಾಗುತ್ತಿದೆ. ಅಂತರ್ಜಲ ಮತ್ತು ಮೀನುಗಳಲ್ಲಿ ಹೆಚ್ಚಿನ ಪ್ರಮಾಣದ ಪಾದರಸವನ್ನು ಪತ್ತೆಹಚ್ಚಲಾಗಿದೆ. ಕಳೆದ ಏಳು ವರ್ಷಗಳಲ್ಲಿ ಧಾತುರೂಪದ ಪಾದರಸದ ಆಮದು ದ್ವಿಗುಣಗೊಂಡಿದೆ. ಆರ್ಗನೊಮರ್ಕ್ಯುರಿ ಸಂಯುಕ್ತಗಳ ಆಮದು 1,500 ಪಟ್ಟು ಹೆಚ್ಚಾಗಿದೆ’’ ಎಂದು ಹೊಸದಿಲ್ಲಿ ಮೂಲದ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್‌ನ ಚಂದ್ರಭೂಷಣ್ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ. 1997-1998ರಲ್ಲಿ ಯುಎಸ್‌ನಲ್ಲಿ ಪಾದರಸದ ಒಟ್ಟು ಬಳಕೆಯು 346 ಟನ್‌ಗಳಷ್ಟಿದ್ದರೆ, ಭಾರತದ್ದು 245 ಟನ್‌ಗಳಷ್ಟಿತ್ತು. ಆದರೆ ನಂತರದ ವರ್ಷಗಳಲ್ಲಿ ಭಾರತವು ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಅದರ ಬಳಕೆಯ ಮಟ್ಟವು 2002-2003ರಲ್ಲಿ 1,386 ಟನ್‌ಗಳಿಗೆ ಏರಿತು. ಪಾದರಸದ ಆಮದು ಮತ್ತು ಅದರ ಸಂಯುಕ್ತಗಳಿಗೆ ಸಂಬಂಧಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಯ ಇತ್ತೀಚಿನ ಅಂಕಿಅಂಶಗಳು ಈ ಪ್ರವೃತ್ತಿಯನ್ನು ಹೇರಳವಾಗಿ ಸ್ಪಷ್ಟಪಡಿಸುತ್ತವೆ. ಕೋಲ್ಕತಾ ಮೂಲದ ಡೈರೆಕ್ಟರೇಟ್ ಜನರಲ್ ಆಫ್ ಕಮರ್ಷಿಯಲ್ ಇಂಟೆಲಿಜೆನ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್ ಈ ಡೇಟಾವನ್ನು ಸಂಗ್ರಹಿಸಿದೆ. ಪಾದರಸ ಆಧಾರಿತ ಉತ್ಪನ್ನಗಳ ಒಳಹರಿವಿನಲ್ಲೂ ಬೆಳವಣಿಗೆ ಕಂಡುಬಂದಿದೆ. ಉದಾಹರಣೆಗೆ ಪಾದರಸದ ದೀಪಗಳ ಸಂಖ್ಯೆಯು ಗಾಬರಿಗೊಳಿಸುವ ಏರಿಕೆಯನ್ನು ದಾಖಲಿಸಿದೆ. 1996ರಲ್ಲಿ 2,100ರಷ್ಟಿದ್ದ ಮರ್ಕ್ಯುರಿ ದೀಪಗಳು 2002ರಲ್ಲಿ 0.12 ಮಿಲಿಯನ್‌ಗೆ ಹೆಚ್ಚಾದವು. ಥರ್ಮೋಸ್ಟಾಟ್‌ಗಳು ಮತ್ತು ಬಟನ್ ಸೆಲ್ ಆಮದುಗಳು ಕೂಡ ಹೆಚ್ಚಿದವು. ಇತ್ತೀಚಿನ ವರ್ಷಗಳಲ್ಲಿ ಕೈಗಾರಿಕೀಕರಣ ಮತ್ತು ಗಣಿಗಾರಿಕೆಗಳ ಪರಿಣಾಮದಿಂದ ಭಾರತದಲ್ಲಿ ಪಾದರಸ ಬಳಕೆಯಂತೂ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕದೇ ಹೋದರೆ ಇನ್ನು ಕೆಲವೇ ವರ್ಷಗಳಲ್ಲಿ ಭಾರತವು ಜಗತ್ತಿನ ಮೊದಲ ಮರ್ಕ್ಯುರಿ ಹಾಟ್‌ಸ್ಪಾಟ್ ಆಗಬಹುದು. ಭಾರತದಲ್ಲಿನ ಪ್ರಸಕ್ತ ಪರಿಸರದ ಸಂಗತಿಗಳನ್ನು ಗಮನಿಸಿದರೆ, ಮರ್ಕ್ಯುರಿ ಬಳಕೆಗೆ ಕಡಿವಾಣ ಅಗತ್ಯ ಎನಿಸದಿರದು. ಅಲ್ಲವೇ?