ಕೋಸ್ಟರಿಕಾದ ಮಾದರಿ ನಮಗೂ ವರವಾದೀತೇ?
ರೈತರ ಭವಿಷ್ಯವನ್ನು ಬದಲಿಸುವ ಕೃಷಿ ಅರಣ್ಯೀಕರಣ ಯೋಜನೆ
ಪೆಡ್ರೊ ಗಾರ್ಸಿಯಾ ಕೋಸ್ಟರಿಕಾದ ಒಬ್ಬ ರೈತ. ಪ್ರತಿದಿನ ಬೆಳಗ್ಗೆ ತನ್ನ ತೋಟಕ್ಕೆ ತೆರಳಿ ಬಿದ್ದಿರುವ ಹಣ್ಣುಗಳನ್ನು, ಕೋಕೋ ಬೀಜಗಳನ್ನು ಆರಿಸಿ ತಂದು ಮನೆಯ ವರಾಂಡದಲ್ಲಿ ಗುಡ್ಡೆ ಹಾಕುತ್ತಾನೆ. ಉಪಾಹಾರದ ನಂತರ ಪುನಃ ತೋಟಕ್ಕೆ ತೆರಳಿ ಅಲ್ಲಿನ ಮರಗಳಿಗೆ ಪಾತಿ ಮಾಡಿ, ನೀರುಣಿಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ.
57 ವರ್ಷ ವಯಸ್ಸಿನ ಗಾರ್ಸಿಯಾ ಈಶಾನ್ಯ ಕೋಸ್ಟರಿಕಾದ ಸರಪಿಕಿ ಪ್ರದೇಶದಲ್ಲಿ ತನ್ನ ಏಳು ಹೆಕ್ಟೇರ್ ಜಮೀನಿನಲ್ಲಿ 36 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡಿದ್ದಾನೆ. ಅವನ ಕೈಯಲ್ಲಿ ಈಗ ಕಾರು, ಬಂಗಲೆ, ಹಣ ಎಲ್ಲವೂ ಇದೆ. ಜೊತೆಗೆ ನೆಮ್ಮದಿಯ ಜೀವನವೂ ಇದೆ. ಅವನ ಜಮೀನು ಜಾನುವಾರುಗಳಿಗೆ ಹುಲ್ಲುಗಾವಲು ಮಾತ್ರ ಆಗಿಲ್ಲ. ವನ್ಯಜೀವಿಗಳಿಗೆ ದಟ್ಟವಾದ ಅರಣ್ಯ ಧಾಮವಾಗಿಯೂ ಮಾರ್ಪಟ್ಟಿದೆ. ತೋಟದಲ್ಲಿ ಬೆಳೆದ ವೆನಿಲ್ಲಾದ ಪರಿಮಳವು ಗಾಳಿಯ ಮೂಲಕ ಎಲ್ಲೆಡೆ ಹರಡುತ್ತದೆ. ಹಣ್ಣಿನ ಮರಗಳ ನಡುವೆ ಝೇಂಕರಿಸುವ ಹಕ್ಕಿಗಳ ಚಿಲಿಪಿಲಿ ನಿನಾದ ತೇಲಿ ಬರುತ್ತಿದೆ.
ಗಾರ್ಸಿಯಾ ಈಗ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಗಾರ್ಸಿಯಾ ಅವರ ಪ್ರಸ್ತುತ ಜೀವನ ಪರಿಸರ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ. ನಿತ್ಯವೂ ಅವರ ತೋಟಕ್ಕೆ ಕೆಲವು ಜೀವಶಾಸ್ತ್ರಜ್ಞರು ಮತ್ತು ಪರಿಸರ ವಿಜ್ಞಾನಿಗಳು ಭೇಟಿ ನೀಡುತ್ತಾರೆ. ಅವರು ನೀಡುವ ಶುಲ್ಕದಿಂದ ನಿತ್ಯವೂ ಆದಾಯ ಗಳಿಸುತ್ತಿದ್ದಾರೆ. ಇದು ಕೇವಲ ಗಾರ್ಸಿಯಾ ಒಬ್ಬನ ಕತೆಯಲ್ಲ. ಇಂತಹ ಸಾವಿರಾರು ರೈತರು ಸ್ವಂತ ಅರಣ್ಯವನ್ನು ಬೆಳೆಸುವ ಮೂಲಕ ತಮ್ಮದೇ ಆದ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಅ ಮೂಲಕ ತಮ್ಮ ಬದುಕನ್ನು ಸುಂದರಗೊಳಿಸಿಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣವಾದದ್ದು ಕೋಸ್ಟರಿಕಾದ ಪರಿಸರ ವ್ಯವಸ್ಥೆಯ ಸೇವೆಗಳು(ಪಿ.ಇ.ಎಸ್.) ಪರಿಸರ ವ್ಯವಸ್ಥೆಯ ಸೇವೆಯು ಕೋಸ್ಟಾರಿಕನ್ ಸರಕಾರದಿಂದ ನಡೆಸಲ್ಪಡುವ ಯೋಜನೆಯಾಗಿದ್ದು, ಸುಸ್ಥಿರ ಅರಣ್ಯ ಮತ್ತು ಪರಿಸರ ಸಂರಕ್ಷಣೆಯನ್ನು ಕೈಗೊಳ್ಳುವ ರೈತರಿಗೆ ಬಹುಮಾನ ನೀಡುವ ಯೋಜನೆಯಾಗಿದೆ.
ಮಧ್ಯ ಅಮೆರಿಕದ ಒಂದು ಪುಟ್ಟ ದೇಶವಾದ ಕೋಸ್ಟರಿಕಾ ಒಂದು ಕಾಲಕ್ಕೆ ಆರ್ಥಿಕ ಹಿನ್ನಡೆಯನ್ನು ಅನುಭವಿಸಿತ್ತು. ಆದರೆ ಈಗ ಇಡೀ ಪ್ರಪಂಚವೇ ಕೋಸ್ಟರಿಕಾದ ಕಡೆಗೆ ನಿಬ್ಬೆರಗಾಗಿ ನೋಡುವಂತೆ ಮಾಡಿದೆ. 1970ರ ದಶಕಕ್ಕೂ ಮೊದಲು ಕೋಸ್ಟರಿಕಾವು ಅಪಾರ ಅರಣ್ಯ ಪ್ರದೇಶವನ್ನು ಹೊಂದಿತ್ತು. ಆದರೆ 1970ರ ದಶಕದ ನಂತರ ಅತಿ ವೇಗವಾಗಿ ಅರಣ್ಯನಾಶದತ್ತ ಹೆಜ್ಜೆ ಹಾಕಿತು. 1987ರ ವೇಳೆಗೆ ಮೂರನೇ ಒಂದು ಭಾಗದಷ್ಟು ಅರಣ್ಯಪ್ರದೇಶವನ್ನು ಕಳೆದುಕೊಂಡ ಕೋಸ್ಟರಿಕಾ ಆರ್ಥಿಕ ಹಿನ್ನಡೆಯತ್ತ ಸಾಗಿತ್ತು. ಆರ್ಥಿಕ ಕುಸಿತದ ನಂತರ, ಕೋಸ್ಟರಿಕಾ ಸರಕಾರವು ದೇಶವನ್ನು ಮತ್ತೆ ನೈಸರ್ಗಿಕ ಸ್ವರ್ಗವಾಗಿ ಪರಿವರ್ತಿಸಲು ಆಮೂಲಾಗ್ರ ಕ್ರಮಗಳ ಸರಣಿ ಯೋಜನೆಗಳನ್ನು ಕೈಗೊಂಡಿತು. ಅದರ ಭಾಗವಾಗಿ 1996 ರಲ್ಲಿ ಅಧಿಕಾರಿಗಳ ಅನುಮೋದನೆಯಿಲ್ಲದೆ ಅರಣ್ಯವನ್ನು ಕಡಿಯುವುದನ್ನು ಕಾನೂನು ಬಾಹಿರಗೊಳಿಸಿತು ಮತ್ತು ಮುಂದಿನ ವರ್ಷ ಅದು ಪಿ.ಇ.ಎಸ್. ಅನ್ನು ಪರಿಚಯಿಸಿತು.
ಪಿ.ಇ.ಎಸ್. ಕೋಸ್ಟರಿಕಾ ತೆಗೆದುಕೊಂಡ ಒಂದು ಗಟ್ಟಿಯಾದ ನಿರ್ಧಾರವಾಗಿದೆ. ಇದು ಅರಣ್ಯನಾಶವನ್ನು ನಿಷೇಧಿಸುವ ಕಾನೂನನ್ನು ಅಂಗೀಕರಿಸಿತು ಮತ್ತು ಖಾಸಗಿ ವ್ಯಕ್ತಿಗಳು ಅರಣ್ಯ ಬೆಳೆಸಲು ಬೆಂಬಲ ನೀಡಿತು. ಅಂತೆಯೇ ಅರಣ್ಯಗಳು ಒದಗಿಸುವ ಪರಿಸರ ಸೇವೆಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ಅರಣ್ಯಕ್ಕೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳಲು ಫೊನಾಫಿಫೊ (ರಾಷ್ಟ್ರದ ಉದ್ಯಮ ನಿಧಿ)ಗೆ ಜವಾಬ್ದಾರಿ ನೀಡಲಾಯಿತು. ಕೃಷಿ ಜಮೀನಿನಲ್ಲಿ ಅರಣ್ಯ ಬೆಳೆಸುವ ರೈತರಿಗೆ ಉತ್ತೇಜಕಗಳನ್ನು ನೀಡುವ ಮೂಲಕ ಅವರ ಶ್ರಮಕ್ಕೆ ತಕ್ಕುದಾದ ಬೆಲೆ ನೀಡಲು ನಿರ್ಧರಿಸಲಾಯಿತು. ಅದರ ಭಾಗವಾಗಿ ಕೃಷಿ ಜಮೀನಿನಲ್ಲಿ ಬೆಳೆದ ಮರಗಳ ಮೌಲ್ಯದ ಆಧಾರದ ಮೇಲೆ ಬೆಂಬಲ ಬೆಲೆ ನೀಡುವ ಕಾರ್ಯಕ್ರಮವನ್ನು ಕೋಸ್ಟರಿಕಾ ಸರಕಾರವು ಜಾರಿಗೊಳಿಸಿತು. ಇದರಿಂದ ಕೃಷಿ ಜಮೀನಿನಲ್ಲಿ ಮರಗಳ ಪ್ರಮಾಣ ಹೆಚ್ಚಾಯಿತು.
ಅದೇ ವೇಳೆ ಕೃಷಿ ಜಮೀನಿನಲ್ಲಿ ಬೆಳೆದ ಮರಗಳನ್ನು ಕಡಿಯುವ ಮುನ್ನ ಅರಣ್ಯ ಇಲಾಖೆಯ ಅಂದರೆ ಫೊನಾಫಿಫೊದ ಪರವಾನಿಗೆಯನ್ನು ಕಡ್ಡಾಯಗೊಳಿಸಿತು. ಪರವಾನಿಗೆ ಇಲ್ಲದೆ ಮರಗಳನ್ನು ಕಡಿದರೆ ಶಿಕ್ಷೆಗೆ ಒಳಪಡಿಸುವಂತಹ ಬಲವಾದ ಕಾನೂನುಗಳನ್ನು ಜಾರಿಗೊಳಿಸಲಾಯಿತು. ಇದರಿಂದ ಮರ ಕಡಿಯುವವರ ಸಂಖ್ಯೆ ಕಡಿಮೆಯಾಯಿತು. ಒಂದು ವೇಳೆ ಪೀಠೋಪಕರಣ ತಯಾರಿಕೆಗೆ ಮರ ಅಗತ್ಯ ಎನಿಸಿದರೆ, ಸರಕಾರವೇ ಆ ಮರವನ್ನು ಖರೀದಿಸಿ ಅಗತ್ಯ ಇರುವವರಿಗೆ ಮಾರುವ ವ್ಯವಸ್ಥೆ ಜಾರಿಗೆ ಬಂದಿತು.
ಪಿ.ಇ.ಎಸ್. ಯೋಜನೆಯು ಪ್ರಾರಂಭದಲ್ಲಿ ಕೇವಲ ಶ್ರೀಮಂತ ಕೃಷಿಕರ ಸ್ವತ್ತಾಗಿತ್ತು. ಆನಂತರ ಅಲ್ಲಿನ ಸರಕಾರ ಈ ಬಗ್ಗೆ ಯೋಚಿಸಿ ಮಧ್ಯಮ ಮತ್ತು ಬಡ ಕೃಷಿಕರಿಗೂ ಯೋಜನೆಯನ್ನು ವಿಸ್ತರಿಸಿತು. ಇದರಿಂದ ಈಗ ಆಸಕ್ತಿಯುಳ್ಳ ಎಲ್ಲಾ ರೈತರೂ ಇದರ ಪ್ರಯೋಜನ ಪಡೆದುಕೊಂಡರು. ಕೃಷಿ ಜಮೀನಿನಲ್ಲಿ ತಾವು ಬೆಳೆಯುತ್ತಿದ್ದ ತೋಟಗಾರಿಕಾ ಬೆಳೆಗಳ ಜೊತೆಜೊತೆಗೆ ಅರಣ್ಯ ಇಲಾಖೆಯು ನೀಡುವ ಮರಗಳನ್ನೂ ಬೆಳೆಸಿದರು. ಅದಕ್ಕಾಗಿ ಅರಣ್ಯ ಇಲಾಖೆಯು ಪ್ರತೀ ಮರಕ್ಕೂ ಹಣದ ರೂಪದಲ್ಲಿ ಉತ್ತೇಜಕ ಬಹುಮಾನವನ್ನು ನೀಡುತ್ತಿದೆ. ಅರಣ್ಯ ರಕ್ಷಣೆ ಮಾಡಿದ್ದಕ್ಕಾಗಿ ಫೊನಾಫಿಫೊದ ಮೂಲಕ ಪ್ರತೀ ವರ್ಷಕ್ಕೆ ಹೆಕ್ಟೇರ್ಗೆ ಸುಮಾರು 54 ಸಾವಿರ ರೂಪಾಯಿಗಳನ್ನು ಪಾವತಿಸಲಾಗುತ್ತದೆ.
ಮರು ಅರಣ್ಯೀಕರಣದ ಭಾಗವಾಗಿ ಕೋಸ್ಟರಿಕಾದ ಸಣ್ಣ ಪ್ರಮಾಣದ ರೈತರು ಕೂಡಾ ಅರಣ್ಯವನ್ನು ಬೆಳೆಸುವ ಮೂಲಕ ಹಸಿರುಮನೆ ಅನಿಲದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಪ್ರಯತ್ನದಲ್ಲಿ ಪಾಲ್ಗೊಂಡರು. ಎಲ್ಲರ ಸಂಘಟಿತ ಪ್ರಯತ್ನದ ಫಲವಾಗಿ ಕೋಸ್ಟರಿಕಾ ಇಂದು ಜಗತ್ತಿನಲ್ಲಿಯೇ ಸುಂದರ ರಾಷ್ಟ್ರವಾಗಿ ಹೊರಹೊಮ್ಮಿದೆ. ಈಗ ಕೋಸ್ಟರಿಕಾವು ಜಗತ್ತಿನ ಹೆಚ್ಚು ಪರಿಸರ ಪ್ರೇಮಿಗಳು ಭೇಟಿ ನೀಡುವ ತಾಣವಾಗಿದೆ. ಪರಿಸರ ಪ್ರವಾಸೋದ್ಯಮವು ಕೋಸ್ಟರಿಕಾದ ಆರ್ಥಿಕತೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯುತ್ತಿದೆ. ಕೋಸ್ಟರಿಕಾದ ಕೃಷಿ ಅರಣ್ಯವು ಕೇವಲ ರೈತರ ಭವಿಷ್ಯವನ್ನು ಬದಲಿಸುತ್ತಿಲ್ಲ, ಅದರ ಭೂದೃಶ್ಯದ ಮುಖವನ್ನು ಸಹ ಬದಲಾಯಿಸುತ್ತಿದೆ.
ಪರಿಸರ ಪ್ರವಾಸೋದ್ಯಮ ಇಂದು ಅತೀ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಕೋಸ್ಟರಿಕಾದಂತೆ ಭಾರತವು ಸಹ ಹೆಚ್ಚಿನ ಪ್ರಮಾಣದ ಕರಾವಳಿ ಪ್ರದೇಶವನ್ನು ಹೊಂದಿರುವುದರಿಂದ ಪರಿಸರ ಪ್ರವಾಸೋದ್ಯಮವನ್ನು ಬೆಳೆಸಲು ವಿಪುಲ ಅವಕಾಶಗಳಿವೆ. ಮರು ಅರಣ್ಯೀಕರಣ ಮತ್ತು ಪರಿಸರ ಸ್ನೇಹಿ ನಡವಳಿಕೆಯನ್ನು ಪ್ರೋತ್ಸಾಹಿಸುವಲ್ಲಿ ಕೋಸ್ಟರಿಕಾದ ಪಿ.ಇ.ಎಸ್. ಕಾರ್ಯತಂತ್ರವು ಒಂದು ಮಾದರಿಯಾಗಿದೆ. ಭಾರತವು ಸಹ ಇಂತಹ ಕಾರ್ಯತಂತ್ರ ಅಳವಡಿಸಿಕೊಳ್ಳುವಂತಾದರೆ ನಮ್ಮಲ್ಲೂ ಪರಿಸರ ಪ್ರವಾಸೋದ್ಯಮ ಉತ್ತುಂಗಕ್ಕೆ ಏರೀತು.