ಅವನತಿಯ ಅಂಚಿನಲ್ಲಿ ಮ್ಯಾಂಗ್ರೋವ್ ಕಾಡುಗಳು
ಬಿಸಿಲ ತಾಪ ದಿನದಿನಕ್ಕೆ ಹೆಚ್ಚುತ್ತಲೇ ಇದೆ. ಮಧ್ಯಾಹ್ನದ ವೇಳೆ ತಂಪಿನ ತಾಣಗಳತ್ತ ಚಿತ್ತ ಹರಿಯುತ್ತದೆ. ಮನಸ್ಸಿಗೆ ಮುದ ನೀಡುವ ನೆರಳಿಗಾಗಿ ಜೀವ ಹಪಹಪಿಸುತ್ತಿರುತ್ತದೆ. ಇಂತಹ ಸಮಯದಲ್ಲಿ ಮಾತ್ರ ನಮಗೆ ಮರಗಳ ಮಹತ್ವ ಏನು ಎಂಬುದು ಅರ್ಥವಾಗುತ್ತದೆ. ಆಗ ಮಾತ್ರ ಗಿಡಮರಗಳನ್ನು ಬೆಳೆಸಬೇಕೆಂಬ ಔದಾರ್ಯ ಮೂಡುತ್ತದೆ. ಬೇಸಿಗೆ ಮುಗಿದು ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಮರನೆಡುವ ಕಾರ್ಯ ಅಲ್ಲಿಗೇ ನಿಂತುಬಿಡುತ್ತದೆ. ಮರಗಿಡ ನೆಡುವ ಕಾರ್ಯ ಪುನಃ ನೆನಪಾಗುವುದು ಮುಂದಿನ ಬೇಸಿಗೆಯಲ್ಲಿ. ಇದು ಒಂದು ರೀತಿಯ ವಿಷವರ್ತುಲದ ಜೀವನ. ಅಗತ್ಯವಿದ್ದಾಗ ಮಾತ್ರ ನೆನಪಿಸಿಕೊಂಡು ಅಗತ್ಯ ತೀರಿದ ಬಳಿಕ ನದಿ ದಾಟಿಸಿದ ಅಂಬಿಗನನ್ನು ಮರೆತಂತೆ.
ಹೌದು, ನಾವೀಗ ನದಿ ದಾಟಿಸಿದ ಅಂಬಿಗನನ್ನೇ ಮರೆತಿದ್ದೇವೆ. ಅಂದರೆ ಭೂಮಿಯನ್ನು ತಂಪಾಗಿರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾದ ಮ್ಯಾಂಗ್ರೋವ್‌ಗಳನ್ನೇ ಮರೆತಿದ್ದೇವೆ. ಐಒಪಿ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಮ್ಯಾಂಗ್ರೋವ್‌ಗಳ ಮಹತ್ವ ಮತ್ತು ನಾವು ಅವುಗಳನ್ನು ಕಡೆಗಣಿಸಿದ್ದರ ಪರಿಣಾಮವನ್ನು ಎತ್ತಿ ತೋರಿಸುತ್ತದೆ. ಅಧ್ಯಯನದ ಪ್ರಕಾರ ಮ್ಯಾಂಗ್ರೋವ್ ಕಾಡುಗಳಲ್ಲಿನ ಇಂಗಾಲದ ಸ್ಟಾಕ್‌ಗಳ ಅವನತಿಯಿಂದಾಗಿ ವಾರ್ಷಿಕ ಇಂಗಾಲದ ಹೊರಸೂಸುವಿಕೆಯ ಪ್ರಮಾಣವು ಈ ಶತಮಾನದ ಅಂತ್ಯದ ವೇಳೆಗೆ ಸುಮಾರು ಶೇ. 50ರಷ್ಟು ಏರಿಕೆಯಾಗಲಿದೆ ಎಂದು ಊಹಿಸಲಾಗಿದೆ. ದಕ್ಷಿಣ ಭಾರತ, ಆಗ್ನೇಯ ಚೀನಾ, ಸಿಂಗಾಪುರ ಮತ್ತು ಪೂರ್ವ ಆಸ್ಟ್ರೇಲಿಯದಂತಹ ಪ್ರದೇಶಗಳಲ್ಲಿನ ಮ್ಯಾಂಗ್ರೋವ್‌ಗಳು ವಿಶೇಷವಾಗಿ ಪರಿಣಾಮವನ್ನು ಎದುರಿಸಲಿವೆ.
ಭೂಮಿ ಮತ್ತು ಸಮುದ್ರವನ್ನು ಸುತ್ತುವರಿದ ಮತ್ತು ಜೀವನದಿಂದ ತುಂಬಿರುವ ಮ್ಯಾಂಗ್ರೋವ್ ಕಾಡುಗಳು ಆರೋಗ್ಯಕರ ಕರಾವಳಿ ಪರಿಸರ ವ್ಯವಸ್ಥೆಗಳಿಗೆ ಪ್ರಮುಖವಾಗಿವೆ. ಮ್ಯಾಂಗ್ರೋವ್ ಕಾಡುಗಳು ಭೂಮಿಯ ಮೇಲ್ಮೈಯ ಶೇ. 0.1ರಷ್ಟನ್ನು ಆವರಿಸಿವೆ. ಅವು ಪಕ್ಷಿಗಳು, ಮೀನುಗಳು, ಅಕಶೇರುಕಗಳು, ಸಸ್ತನಿಗಳು ಮತ್ತು ಸಸ್ಯಗಳಂತಹ ವಿಶಾಲವಾದ ವನ್ಯಜೀವಿಗಳಿಗೆ ಆವಾಸಸ್ಥಾನ ಮತ್ತು ಆಶ್ರಯವನ್ನು ಒದಗಿಸುತ್ತದೆ. ಜಾಗತಿಕ ಹವಾಮಾನ ಸ್ಥಿರತೆಯನ್ನು ನಿಯಂತ್ರಿಸುವಲ್ಲಿ ಮ್ಯಾಂಗ್ರೋವ್‌ಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮ್ಯಾಂಗ್ರೋವ್‌ಗಳು ತಮ್ಮ ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲವನ್ನು ಸಂಗ್ರಹಿಸುತ್ತವೆ. ಜಾಗತಿಕ ಮಟ್ಟದಲ್ಲಿ ಇಂಗಾಲದ ಚಕ್ರವನ್ನು ನಿಯಂತ್ರಿಸಲು ಮ್ಯಾಂಗ್ರೋವ್‌ಗಳು ಅತ್ಯಗತ್ಯ.
ಇತ್ತೀಚಿನ ಮಾನವ ಅಭಿವೃದ್ಧಿಯು ಈ ಇಂಗಾಲದ ದಾಸ್ತಾನುಗಳ ಅವನತಿಗೆ ಕಾರಣವಾಗಿದೆ. ಕಳೆದ 20 ವರ್ಷಗಳಲ್ಲಿ ಮ್ಯಾಂಗ್ರೋವ್ ಕಾಡುಗಳನ್ನು ಕೃಷಿ, ಜಲಚರ ಸಾಕಣೆ ಮತ್ತು ನಗರ ಭೂ ನಿರ್ವಹಣೆಯಿಂದ ಬದಲಾಯಿಸಲಾಗಿದೆ. ಇದರ ಪರಿಣಾಮವಾಗಿ ಜಾಗತಿಕ ಮ್ಯಾಂಗ್ರೋವ್‌ಗಳಲ್ಲಿ ಇಂಗಾಲದ ಸಂಗ್ರಹಣೆಯು 158.4 ಮಿಲಿಯನ್ ಟನ್‌ಗಳಷ್ಟು ಇಳಿಕೆಗೆ ಕಾರಣವಾಯಿತು. ಜನಸಂಖ್ಯಾ ಸಾಂದ್ರತೆಯು ಮ್ಯಾಂಗ್ರೋವ್ ಕಾಡುಗಳ ನಾಶಕ್ಕೆ ಕಾರಣವಾಗುತ್ತಿದೆ. ಜನನಿಬಿಡ ಪ್ರದೇಶಗಳ ಬಳಿ ಮ್ಯಾಂಗ್ರೋವ್ ಮಣ್ಣಿನಲ್ಲಿ ಸಂಗ್ರಹವಾಗಿರುವ ಇಂಗಾಲವು ಪ್ರತ್ಯೇಕ ಮ್ಯಾಂಗ್ರೋವ್ ಕಾಡುಗಳಿಗಿಂತ ಶೇ. 37 ಕಡಿಮೆ ಎಂದು ಅಂದಾಜಿಸಲಾಗಿದೆ. ಅದೇ ಸಮಯದಲ್ಲಿ ಮ್ಯಾಂಗ್ರೋವ್ ನಷ್ಟದಿಂದ ಇಂಗಾಲದ ಹೊರಸೂಸುವಿಕೆಯ ವಾರ್ಷಿಕ ದರವು ಪ್ರಸಕ್ತ 7.0 ಟೆರಾಗ್ರಾಮ್‌ಗಳು ಎಂದು ಅಂದಾಜಿಸಲಾಗಿದೆ.
ಮ್ಯಾಂಗ್ರೋವ್‌ಗಳು ಅಪಾಯಕಾರಿ ವೇಗದಲ್ಲಿ ಕಣ್ಮರೆಯಾಗುತ್ತಿವೆ. 20ನೇ ಶತಮಾನದ ಕೊನೆಯಲ್ಲಿ ಪ್ರಪಂಚದ ಮ್ಯಾಂಗ್ರೋವ್ ಕಾಡುಗಳಲ್ಲಿ 50 ಪ್ರತಿಶತಕ್ಕಿಂತಲೂ ಕಡಿಮೆಯಿತ್ತು ಮತ್ತು ಉಳಿದಿರುವ ಅರ್ಧದಷ್ಟು ಕಳಪೆ ಸ್ಥಿತಿಯಲ್ಲಿವೆ. ಮ್ಯಾಂಗ್ರೋವ್ ಕಾಡುಗಳು ವಿಶ್ವದ ಅತ್ಯಂತ ಅಪಾಯಕಾರಿ ಆವಾಸಸ್ಥಾನಗಳಲ್ಲಿ ಸೇರಿವೆ. ಮ್ಯಾಂಗ್ರೋವ್ ನಷ್ಟವು ಜಗತ್ತಿನಾದ್ಯಂತ ಅತಿರೇಕವಾಗಿದೆ. ಥಾಯ್ಲೆಂಡ್ ತನ್ನ ಮ್ಯಾಂಗ್ರೋವ್‌ಗಳ ಶೇ. 84ರಷ್ಟನ್ನು ಕಳೆದುಕೊಂಡಿದೆ. ಅದರಂತೆ ಐವರಿ ಕೋಸ್ಟ್, ಗಿನಿಯಾ-ಬಿಸ್ಸೌ, ತಾಂಜಾನಿಯಾ, ಮೆಕ್ಸಿಕೊ, ಪನಾಮ, ಮಲೇಶ್ಯ, ಮ್ಯಾನ್ಮಾರ್, ಪಾಕಿಸ್ತಾನ ಮತ್ತು ಫಿಲಿಪ್ಪೀನ್ಸ್ ತಲಾ ಶೇ. 60ಕ್ಕಿಂತ ಹೆಚ್ಚು ಕಳೆದುಕೊಂಡಿವೆ.
ವೇಗವಾಗಿ ವಿಸ್ತರಿಸುತ್ತಿರುವ ಸಿಗಡಿ ಅಕ್ವಾಕಲ್ಚರ್ ಉದ್ಯಮವು ಪ್ರಪಂಚದ ಮ್ಯಾಂಗ್ರೋವ್ ಕಾಡುಗಳಿಗೆ ಅತಿ ದೊಡ್ಡ ಅಪಾಯ ತಂದಿದೆ. ಲಕ್ಷಾಂತರ ಎಕರೆಗಳಲ್ಲಿ ಸಿಗಡಿಗಳನ್ನು ಸಂಗ್ರಹಿಸಲು ಕೃತಕ ಕೊಳಗಳಿಗೆ ಸ್ಥಳಾವಕಾಶ ಕಲ್ಪಿಸಲು ಸೊಂಪಾಗಿ ಬೆಳೆದಿದ್ದ ಜೌಗು ಪ್ರದೇಶಗಳನ್ನು ತೆರವುಗೊಳಿಸಲಾಗಿದೆ. ಸಿಗಡಿ ಕೊಳಗಳಿಗೆ ಅಗಾಧ ಪ್ರಮಾಣದ ಸಿಹಿನೀರು ಮತ್ತು ಸಮುದ್ರದ ನೀರನ್ನು ಪೂರೈಸಲು ಕಾಲುವೆಗಳನ್ನು ಅಗೆಯಲಾಗುತ್ತದೆ. ಈ ನೀರಿನ ತಿರುವುಗಳು ನೀರಿನ ನೈಸರ್ಗಿಕ ಹರಿವನ್ನು ಬದಲಾಯಿಸುತ್ತವೆ. ಇದು ಸುತ್ತಮುತ್ತಲಿನ ಮ್ಯಾಂಗ್ರೋವ್‌ಗಳ ಪರಿಸರ ವ್ಯವಸ್ಥೆಗಳಿಗೆ ಹಾನಿಯನ್ನುಂಟುಮಾಡುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರವಾಸೋದ್ಯಮ ಸಹ ಮ್ಯಾಂಗ್ರೋವ್‌ಗಳ ಅವನತಿಗೆ ಕಾರಣವಾಗುತ್ತಿದೆ. ಪ್ರವಾಸೋದ್ಯಮದಿಂದ ಕಸ, ಒಳಚರಂಡಿ, ಶಬ್ದ, ಹೊಗೆ, ಬೆಳಕಿನ ಕೃತಕ ದೀಪಗಳಿಂದ ಮ್ಯಾಂಗ್ರೋವ್‌ಗಳ ಸುತ್ತಮುತ್ತಲಿನ ಪರಿಸರ ವ್ಯವಸ್ಥೆಗಳಿಗೆ ಹಾನಿಯಾಗುತ್ತಿದೆ. ಪ್ರವಾಸೋದ್ಯಮದಿಂದ ಪಾದಚಾರಿ ಮಾರ್ಗಗಳು ವಿಸ್ತರಿಸುತ್ತಿವೆ. ಇದರಿಂದ ಹುಲ್ಲುಗಾವಲು ಮಾಯವಾಗುತ್ತಿದೆ. ಮಾನವ ಚಟುವಟಿಕೆಗಳಿಂದ ಅಲ್ಲಲ್ಲಿ ಮ್ಯಾಂಗ್ರೋವ್ ಕಾಡುಗಳು ಬೆಂಕಿಗೆ ತುತ್ತಾಗುತ್ತಿವೆ. ಹೀಗೆ ಮಾನವ ಚಟುವಟಿಕೆಗಳಿಂದ ನೈಸರ್ಗಿಕ ಮ್ಯಾಂಗ್ರೋವ್ ತಾಣಗಳಿಗೆ ತೊಂದರೆಯಾಗುತ್ತಿದೆ.
ಅಲ್ಲದೆ ಕೃಷಿ ವಿಸ್ತರಿಸುತ್ತಿರುವ ಕೃಷಿ ಚಟುವಟಿಕೆಗಳೂ ಸಹ ಮ್ಯಾಂಗ್ರೋವ್ ನಾಶಕ್ಕೆ ಕಾರಣವಾಗಿವೆ. ಹೆಚ್ಚುತ್ತಿರುವ ಭತ್ತದ ಗದ್ದೆಗಳು, ರಬ್ಬರ್ ಮರಗಳು, ತಾಳೆಎಣ್ಣೆ ತೋಟಗಳು ಮತ್ತು ಇತರ ರೀತಿಯ ಕೃಷಿಯ ವಿಸ್ತರಣೆಗೆ ಸಾವಿರಾರು ಎಕರೆ ಮ್ಯಾಂಗ್ರೋವ್ ಅರಣ್ಯವನ್ನು ನಾಶಪಡಿಸಲಾಗಿದೆ. ರೈತರು ಬಳಸುವ ರಸಗೊಬ್ಬರಗಳು ಮತ್ತು ರಾಸಾಯನಿಕಗಳಲ್ಲಿನ ಮಾಲಿನ್ಯಕಾರಕಗಳು ಮ್ಯಾಂಗ್ರೋವ್‌ಗೆ ಮಾರಕವಾಗಿವೆ. ಇದರ ಜಲಮಾರ್ಗ ಮತ್ತು ನೀರಾವರಿಗಾಗಿ ಜಲಸಂಪನ್ಮೂಲಗಳನ್ನು ಬಳಸುವುದರಿಂದ ಮ್ಯಾಂಗ್ರೋವ್ ಕಾಡುಗಳು ಅವನತಿಯತ್ತ ಸಾಗಿವೆ.
ನೈಸರ್ಗಿಕ ಸಂಪತ್ತಿನಿಂದ ಕೂಡಿದ್ದ ಕರಾವಳಿಗಳು ಈಗ ಶ್ರೀಮಂತಿಕೆಯ ಅಬ್ಬರದಲ್ಲಿ ಸೊರಗುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಹೆಚ್ಚುತ್ತಿರುವ ಬಂದರುಗಳು, ಹಡಗುಕಟ್ಟೆಗಳು, ಹೋಟೆಲ್‌ಗಳು, ಗಾಲ್ಫ್ ಕೋರ್ಸ್‌ಗಳು, ಕನ್ವೆನ್ಶನ್ ಹಾಲ್‌ಗಳು ಹೀಗೆ ಹಲವು ರೂಪಗಳಲ್ಲಿ ಕರಾವಳಿಯ ಸೊಬಗು ಕರಗುತ್ತಿದೆ. ಇದರ ಜೊತೆಗೆ ಮ್ಯಾಂಗ್ರೋವ್ ಕಾಡುಗಳೂ ಸಹ ಕರಗುತ್ತಿವೆ. ಜೌಗು ಪ್ರದೇಶಗಳಿಂದ ಕೂಡಿದ್ದ ತಾಣಗಳು ಈಗ ಕಾಂಕ್ರಿಟ್ ಕಾಡಿನಿಂದ ತುಂಬಿಕೊಳ್ಳುತ್ತಿವೆ. ಅಭಿವೃದ್ಧಿಯ ಜೊತೆಗೆ ಮಾಲಿನ್ಯಕಾರಕಗಳು ಮ್ಯಾಂಗ್ರೋವ್‌ಗಳನ್ನು ಹಾನಿಗೊಳಿಸುತ್ತಿವೆ.
ಹೀಗೆ ವಿವಿಧ ಕಾರಣಗಳಿಂದ ಕರಗುತ್ತಿರುವ ಮ್ಯಾಂಗ್ರೋವ್‌ಗಳನ್ನು ರಕ್ಷಿಸದೆ ಹೋದರೆ ಭವಿಷ್ಯವಂತೂ ತುಂಬಾ ಕರಾಳವಾಗುತ್ತಿದೆ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಲೇಬೇಕಿದೆ. ಈಗಿರುವ ಮ್ಯಾಂಗ್ರೋವ್‌ಗಳು ನಾಶವಾಗದಂತೆ ಕಾಪಾಡಬೇಕಾದರೆ ಮೊದಲು ಮ್ಯಾಂಗ್ರೋವ್‌ಗಳ ಮೇಲಿನ ಮಾನವ ಹಸ್ತಕ್ಷೇಪ ನಿಲ್ಲಿಸಬೇಕಿದೆ. ಹೊಸದಾಗಿ ಮ್ಯಾಂಗ್ರೋವ್ ಕಾಡುಗಳನ್ನು ಬೆಳೆಸುವ ಕಾರ್ಯ ಮೊದಲಾಗಬೇಕಿದೆ. ಇಡೀ ಪರಿಸರಕ್ಕೆ ಮಾರಕವಾದ ಏಕಮುಖ ಪ್ಲಾಸ್ಟಿಕ್ ಬಳಕೆಯನ್ನು ನಿರ್ಬಂಧಿಸಬೇಕಿದೆ. ಮ್ಯಾಂಗ್ರೋವ್ ಪ್ರದೇಶಗಳ ಬಳಿ ಕಟ್ಟಡ ನಿರ್ಮಾಣದಂತಹ ಕಾಂಕ್ರಿಟ್ ಕಾಡು ನಿರ್ಮಾಣವನ್ನು ತಪ್ಪಿಸಬೇಕಿದೆ. ಒಮ್ಮೆ ಮಾನವ ಹಸ್ತಕ್ಷೇಪದಿಂದ ಮ್ಯಾಂಗ್ರೋವ್ ನಾಶವಾದರೆ ಪುನಃ ಅದನ್ನು ನಿರ್ಮಿಸುವುದು ತುಂಬಾ ಕಷ್ಟದಾಯಕ. ಅದಕ್ಕಾಗಿ ಮ್ಯಾಂಗ್ರೋವ್‌ಗಳು ನಾಶವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಆಗಬೇಕಿದೆ.