ಸುನಾಮಿಯಿಂದ ಬದುಕು ಬೇನಾಮಿಯಾಗದಿರಲಿ!
ಇಂದು ವಿಶ್ವ ಸುನಾಮಿ ಜಾಗೃತಿ ದಿನ
ಕಳೆದ ತಿಂಗಳು ಅಂದರೆ ಸೆಪ್ಟಂಬರ್ 12ರಂದು ದೇಶದ ಎಲ್ಲಾ ಸ್ಮಾರ್ಟ್ಫೋನ್ಗಳಿಗೆ ಒಂದು ಅಲರ್ಟ್ ಮೆಸೇಜ್ ಬಂದಿತ್ತು. ಬಹುಶಃ ಅಂದು ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಮೆಸೇಜ್ನದ್ದೇ ಸುದ್ದಿ. ಎಲ್ಲರೂ ‘‘ನನಗೂ ಮೆಸೇಜ್ ಬಂತು’’, ‘‘ನಾನು ತುಂಬಾ ಗಾಬರಿಯಾದೆ’’, ‘‘ಮೊಬೈಲ್ನಲ್ಲಿ ಬಂದ ಬೀಪ್ ಸೌಂಡ್ ಕೇಳಿ ಬೆಚ್ಚಿಬಿದ್ದೆ’’, ‘‘ನನ್ನ ಮೊಬೈಲ್ಗೆ ಏನೋ ಆಯ್ತೆಂದು ಹೆದರಿದೆ’’ ಮುಂತಾದ ರೀತಿಯಲ್ಲಿ ಸ್ಕ್ರೀನ್ಶಾಟ್ ಸಮೇತ ತಮಗೆ ಅನಿಸಿದ್ದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ಆ ಮೆಸೇಜ್ನ ಸಾರಾಂಶ ಹೀಗಿತ್ತು. ‘ಭಾರತ ಸರಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕ್ಯಾಸ್ಟಿಂಗ್ ಸಿಸ್ಟಂ ಮೂಲಕ ಕಳುಹಿಸಲಾದ ಸ್ಯಾಂಪಲ್ ಟೆಸ್ಟಿಂಗ್ ಮೆಸೇಜ್ ಇದು. ಈ ಸಂದೇಶಕ್ಕೆ ಸ್ಪಂದಿಸದೆ ನಿರ್ಲಕ್ಷಿಸಿ.’ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಜಾರಿಗೆ ತರಲಾಗುತ್ತಿರುವ ಭಾರತದಾದ್ಯಂತದ ಎಮರ್ಜೆನ್ಸಿ ಅಲರ್ಟ್ ಸಿಸ್ಟಂ ಅನ್ನು ಪರೀಕ್ಷಿಸಲು ಈ ಸಂದೇಶ ಕಳುಹಿಸಲಾಗಿದೆ. ತುರ್ತು ಸಂದರ್ಭದಲ್ಲಿ ಸಕಾಲಕ್ಕೆ ಅಲರ್ಟ್ ನೀಡಲು ಮತ್ತು ಸಾರ್ವಜನಿಕ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಹಭಾಗಿತ್ವದಲ್ಲಿ ದೂರಸಂಪರ್ಕ ಇಲಾಖೆಯು ತುರ್ತು ಪರಿಸ್ಥಿತಿಗಳಲ್ಲಿ ದೇಶದ ಜನರಿಗೆ ತುರ್ತುಸಂದೇಶ ನೀಡಲು ಸೆಲ್ ಬ್ರಾಡ್ ಕ್ಯಾಸ್ಟಿಂಗ್ ಸಿಸ್ಟಂನ ಟ್ರಯಲ್ ಟೆಸ್ಟಿಂಗ್ ಅನ್ನು ಅಕ್ಟೋಬರ್ 12ರಂದು ನಡೆಸಿತ್ತು. ಧ್ವನಿ ಮತ್ತು ವೈಬ್ರೇಶನ್ನೊಂದಿಗೆ ಮೊಬೈಲ್ಗಳಿಗೆ ಪರೀಕ್ಷಾರ್ಥವಾಗಿ ಅಲರ್ಟ್ ಮೆಸೇಜ್ಗಳು ಬಂದಿದ್ದವು.
ಭೂಕಂಪ, ಭೂಕುಸಿತ, ಪ್ರವಾಹ, ಸುನಾಮಿ, ಚಂಡಮಾರುತ ಇತ್ಯಾದಿ ವಿಪತ್ತುಗಳು ಎದುರಾದಾಗ ಅಥವಾ ಎದುರಾಗುವ ಸಂಭವನೀಯತೆ ಇದ್ದಾಗ ನಿರ್ದಿಷ್ಟ ಪ್ರದೇಶಗಳಲ್ಲಿರುವ ಎಲ್ಲಾ ಜನರ ಮೊಬೈಲ್ಗಳಿಗೆ ಅಲರ್ಟ್ ಮೆಸೇಜ್ಗಳನ್ನು ಕಳುಹಿಸುವುದು ಈ ಅತ್ಯಾಧುನಿಕ ಸಿಸ್ಟಂನ ಉದ್ದೇಶ. ವಿಪತ್ತು ಸಂಭವಿಸುವ ಸ್ಥಳಗಳಲ್ಲಿನ ಜನರು ಮತ್ತು ಪ್ರವಾಸಿಗರನ್ನು ರಕ್ಷಿಸುವ ಉದ್ದೇಶದಿಂದ ಇಂತಹ ಅಲರ್ಟ್ ಮೆಸೇಜ್ ರೂಪಿಸಲಾಗಿದೆ.
ಬಹುತೇಕ ವಿಪತ್ತುಗಳು ಯಾವುದೇ ಮುನ್ಸೂಚನೆ ನೀಡದೆ ದುತ್ತೆಂದು ಎದುರಾಗುತ್ತವೆ. ಹೀಗೆ ವಿಪತ್ತುಗಳು ಎದುರಾದಾಗ ಅನೇಕ ಸಾವು ನೋವುಗಳಾಗುವುದು ಸಹಜ. ಇತರ ಎಲ್ಲಾ ವಿಪತ್ತುಗಳಿಗೆ ಹೋಲಿಸಿದರೆ ಅತ್ಯಂತ ಭೀಕರವಾದ ವಿಪತ್ತು ಎಂದರೆ ಸುನಾಮಿ. ಇದು ಕ್ಷಣ ಮಾತ್ರದಲ್ಲಿ ಅನೇಕ ಸಾವು ನೋವುಗಳಿಗೆ ಕಾರಣವಾಗಬಲ್ಲದು ಎಂಬುದನ್ನು ಈಗಾಗಲೇ ಮನಗಂಡಿದ್ದೇವೆ. ಕಳೆದ 100 ವರ್ಷಗಳಲ್ಲಿ ಸುನಾಮಿಗಳಿಂದ 2,60,000ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿದ್ದೇವೆ. 2004 ರ ಡಿಸೆಂಬರ್ 26ರಂದು ಹಿಂದೂ ಮಹಾಸಾಗರದಲ್ಲಿ ಅಪ್ಪಳಿಸಿದ ಸುನಾಮಿಯು 14 ದೇಶಗಳ 2,27,000ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಅದರಲ್ಲಿ ಭಾರತ, ಶ್ರೀಲಂಕಾ ಮತ್ತು ಥಾಯ್ಲೆಂಡ್ಗಳು ಹೆಚ್ಚು ಹಾನಿಗೊಳಗಾಗಿದ್ದವು. ಈ ಸುನಾಮಿಯಿಂದ ಕೇವಲ ಜೀವಹಾನಿಯಲ್ಲದೆ, ಆರ್ಥಿಕ ಸಂಕಷ್ಟವೂ ಉಂಟಾಗಿತ್ತು. 2004ರಲ್ಲಿ ಹಿಂದೂ ಮಹಾಸಾಗರದಲ್ಲಿ ಉಂಟಾದ ಸುನಾಮಿಯು ಸುಮಾತ್ರ ದ್ವೀಪದ ಬಳಿ ದಕ್ಷಿಣ ಕರಾವಳಿಗೆ ಅಪ್ಪಳಿಸಿತ್ತು. ಅಧಿಕೃತ ಅಂದಾಜಿನ ಪ್ರಕಾರ ಭಾರತದಲ್ಲಿ 10,749 ಜನರು ಸಾವನ್ನಪ್ಪಿದರು, 5,640 ಜನರು ಕಾಣೆಯಾದರು ಮತ್ತು ಸಾವಿರಾರು ಜನರು ನಿರಾಶ್ರಿತರಾದರು.
ಬೆಳೆಯುತ್ತಿರುವ ಪ್ರವಾಸೋದ್ಯಮ ಮತ್ತು ಕ್ಷಿಪ್ರ ನಗರೀಕರಣದ ಭಾಗವಾಗಿ ಕರಾವಳಿ ಪ್ರದೇಶಗಳು ಹೆಚ್ಚಿನ ಜನರ ಮೆಚ್ಚಿನ ತಾಣಗಳಾಗುತ್ತಿವೆ. 2030ರ ವೇಳೆಗೆ ವಿಶ್ವದ ಜನಸಂಖ್ಯೆಯ ಅಂದಾಜು ಶೇಕಡಾ 50ರಷ್ಟು ಜನರು ವಿವಿಧ ಕಾರಣಗಳಿಗಾಗಿ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ನಿರೀಕ್ಷೆಯಿದೆ. ಇವರೆಲ್ಲರೂ ಸುನಾಮಿಗಳು, ಪ್ರವಾಹಗಳು ಮತ್ತು ಚಂಡಮಾರುತಗಳಂತಹ ವಿಕೋಪಗಳಿಗೆ ಒಡ್ಡಿಕೊಳ್ಳುವ ಸಂಭವ ಹೆಚ್ಚು. ಏಕೆಂದರೆ ಸುನಾಮಿಗಳು ಉಂಟಾದಾಗ ಮೊದಲು ಕರಾವಳಿ ಪ್ರದೇಶಗಳ ಜನರು ಸಂಕಷ್ಟಕ್ಕೆ ತುತ್ತಾಗುತ್ತಾರೆ. ಇದನ್ನು ತಪ್ಪಿಸಲು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಡೆದವು.
ಸುನಾಮಿ ಜಾಗೃತಿ ಮೂಡಿಸಲು ಮತ್ತು ಅಪಾಯವನ್ನು ಕಡಿಮೆ ಮಾಡಲು ನವೀನ ವಿಧಾನಗಳನ್ನು ಹಂಚಿಕೊಳ್ಳಲು ವಿಶ್ವ ಸಂಸ್ಥೆಯು ನವೆಂಬರ್ 5ನ್ನು ‘ವಿಶ್ವ ಸುನಾಮಿ ಜಾಗೃತಿ ದಿನ’ ಎಂದು ನಿಗದಿಪಡಿಸಿದೆ. ಮಾರಣಾಂತಿಕವಾದ ನೈಸರ್ಗಿಕ ವಿಕೋಪದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಮೊದಲು ಇದನ್ನು 2015ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ನವೆಂಬರ್ 5ನ್ನು ವಿಶ್ವ ಸುನಾಮಿ ಜಾಗೃತಿ ದಿನ ಎಂದು ಅಂಗೀಕಾರ ಮಾಡಿತು. ನಂತರ 2015ನೇ ಡಿಸೆಂಬರ್ 22ರಂದು ವಿಶ್ವಸಂಸ್ಥೆಯು ಇದನ್ನು ಅನುಮೋದಿಸಿತು. ಅದರ ಭಾಗವಾಗಿ ಈ ದಿನದಂದು ವಿವಿಧ ದೇಶಗಳಲ್ಲಿ ಸುನಾಮಿ ಕುರಿತ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ. ಸುನಾಮಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳಲಾಗುತ್ತದೆ.
ಸುನಾಮಿಗಳು ಅಪರೂಪದ ಘಟನೆಗಳಾಗಿವೆ. ಅಲ್ಲದೇ ಅವು ಮಾರಣಾಂತಿಕ ಮತ್ತು ಅಪಾಯಕಾರಿ ಘಟನೆಗಳಾಗಿವೆ. ಅವು ಆರ್ಥಿಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಕೃಷಿ, ವಸತಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳನ್ನೂ ದುರ್ಬಲಗೊಳಿಸುತ್ತವೆ. ಹಾಗಾಗಿ ಇವುಗಳನ್ನು ತಪ್ಪಿಸಲು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ.
ಸುನಾಮಿ ಎಚ್ಚರಿಕೆಗಳು ಜನರನ್ನು ತಲುಪಿದಾಗ ಅಲ್ಲಿನ ಸಮುದಾಯಗಳು ಯಾವುದೇ ರೀತಿಯಲ್ಲಿ ಭಯಪಡದೆ ತಕ್ಷಣವೇ ಸ್ಥಳಾಂತರದಂತಹ ಕಾರ್ಯದಲ್ಲಿ ಭಾಗವಹಿಸಲು ಅವರಿಗೆ ಸೂಕ್ತ ಶಿಕ್ಷಣದ ಅಗತ್ಯವಿದೆ. ಪ್ರತಿಯೊಬ್ಬ ವ್ಯಕ್ತಿಯೂ ಸ್ಥಳೀಯ ಸುನಾಮಿಯ ನೈಸರ್ಗಿಕ ಎಚ್ಚರಿಕೆಯ ಸೂಚನೆಗಳನ್ನು ತಿಳಿಯುವ ಮತ್ತು ನಿಮಿಷಾರ್ಧದಲ್ಲಿ ಸಮುದ್ರದ ಅಲೆಗಳಲ್ಲಾಗುವ ಏರಿಳಿತಗಳನ್ನು ಅರ್ಥ ಮಾಡಿಕೊಳ್ಳುವ ಕೌಶಲ್ಯ ಗಳಿಸಬೇಕಾಗಿದೆ. ಇದು ತಕ್ಷಣದ ತೆರವಿಗಾಗಿ ಸ್ವಯಂ ತರಬೇತಿಯಾಗಿದೆ.
ನವೆಂಬರ್ 5ನ್ನು ವಿಶ್ವ ಸುನಾಮಿ ಜಾಗೃತಿ ದಿನವನ್ನಾಗಿ ಆಯ್ಕೆ ಮಾಡಿಕೊಳ್ಳಲು ಒಂದು ಬಲವಾದ ಕಾರಣವಿದೆ. 1854ರ ನವೆಂಬರ್ 5 ರಂದು ಜಪಾನಿನ ಕಿಯಿ ಪರ್ಯಾಯ ದ್ವೀಪದ ಹಿರೋಮುರಾ (ಈಗಿನ ವಕಯಾಮಾ ಪ್ರಾಂತ್ಯದ ಹಿರೋಕಾವಾ ಪಟ್ಟಣ) ಎಂಬ ಪುಟ್ಟ ಕರಾವಳಿ ಹಳ್ಳಿಗೆ ಸುನಾಮಿ ಅಪ್ಪಳಿಸಿತು. ಸುನಾಮಿಗೂ ಮುನ್ನ ಅಲ್ಲಿ ಭೂಕಂಪದ ಅನುಭವವಾಗಿತ್ತು. ಆಗ ಹಳ್ಳಿಯ ನಿವಾಸಿಯಾಗಿದ್ದ ಹಮಾಗುಚಿ ಗೊರ್ಯೊ ಎಂಬ ರೈತನು ಬಾವಿಯ ನೀರಿನಲ್ಲಿ ವೇಗವಾಗಿ ಉಬ್ಬರವಿಳಿತಗಳನ್ನು ಗಮನಿಸಿದ. ತಕ್ಷಣವೇ ದೊಡ್ಡ ಸುನಾಮಿ ಬರುತ್ತದೆ ಎಂದು ತರ್ಕಿಸಿದ.
ಕೂಡಲೇ ತನ್ನ ಹಳ್ಳಿಗರನ್ನು ರಕ್ಷಿಸಲು ಏನಾದರೊಂದು ಉಪಾಯ ಹೂಡಬೇಕೆಂದು ಅಲ್ಲಿಯೇ ಇದ್ದ ಭತ್ತದ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ. ಅದರಿಂದ ಎದ್ದ ಹೊಗೆಯು ಜನರಲ್ಲಿ ಗಾಬರಿಯನ್ನುಂಟು ಮಾಡಿತು ಮತ್ತು ಅವರು ತಕ್ಷಣವೇ ಅಲ್ಲಿಂದ ದೂರ ಓಡಿದರು. ಸ್ವಲ್ಪ ಸಮಯದ ನಂತರ ಸುನಾಮಿಯು ಇಡೀ ಹಳ್ಳಿಯ ಜನವಸತಿ ಪ್ರದೇಶದ ಮೇಲೆ ಅಪ್ಪಳಿಸಿ ಎಲ್ಲವನ್ನೂ ನಾಶ ಮಾಡಿತ್ತು. ಆದರೆ ಅಲ್ಲಿನ ಜನರು ಮಾತ್ರ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಈ ಘಟನೆಯ ಹಿನ್ನೆಲೆಯನ್ನು ನೆನಪಿಸಿಕೊಳ್ಳುವ ಕಾರಣಕ್ಕಾಗಿ ನವೆಂಬರ್ 5ನ್ನು ಸುನಾಮಿ ಜಾಗೃತಿ ದಿನ ಎಂದು ಘೋಷಿಸಲಾಗಿದೆ.
ಜನರ ಅಮೂಲ್ಯ ಜೀವವನ್ನು ರಕ್ಷಿಸುವ ಉದ್ದೇಶ ಹೊಂದಿದ ವಿಶ್ವ ಸುನಾಮಿ ಜಾಗೃತಿ ದಿನವು ಅರ್ಥಪೂರ್ಣವಾಗಬೇಕಾದರೆ ಸ್ಥಳೀಯರ ಸಾಂಪ್ರದಾಯಿಕ ಜ್ಞಾನ ಮತ್ತು ಅನುಭವಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗಗಳಲ್ಲಿ ವಾಸಿಸುವ ಜನರು ಇಂತಹ ಸಾಂಪ್ರದಾಯಿಕ ಮತ್ತು ಅನ್ವಯಿಕ ಜ್ಞಾನ ಬೆಳಸಿಕೊಳ್ಳುವ ಮೂಲಕ ಮುಂಬರುವ ಅನಾಹುತಗಳನ್ನು ತಪ್ಪಿಸಲು ಮುಂದಾಗಲಿ ಎಂಬುದೇ ನಮ್ಮ ಆಶಯ.