ಬಳಲಿದ ಬೇಗೆಗೆ ತಂಪೆರೆವ ಮೊರಾಕೊ ಮಾದರಿ
ವರ್ಷದಿಂದ ವರ್ಷಕ್ಕೆ ಬಿಸಿಲ ಧಗೆ ಏರುತ್ತಲೇ ಇದೆ. ಪ್ರತೀ ವರ್ಷ ಮಾರ್ಚ್ ಅಂತ್ಯಕ್ಕೆ ಪ್ರಾರಂಭವಾಗುತ್ತಿದ್ದ ಬಿಸಿಲ ಬೇಗೆ ಈ ವರ್ಷ ಮಾರ್ಚ್ ಗೇ ಪ್ರಾರಂಭವಾಗಿದೆ. ಇಲ್ಲಿಂದ ಸುಮಾರು ನೂರು ದಿನಗಳವರೆಗೂ ಅತ್ಯಧಿಕ ಬಿಸಿಲು ನಮ್ಮನ್ನಾಳಲಿದೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಪ್ರತೀ ಬೇಸಿಗೆಯಲ್ಲೂ ಕಾಡುವ ಮೂಲಭೂತ ಸಮಸ್ಯೆ ಎಂದರೆ ಕುಡಿಯುವ ನೀರು. ಅದಕ್ಕಾಗಿ ಸ್ಥಳೀಯ ಸರಕಾರಗಳಿಂದ ಹಿಡಿದು ಕೇಂದ್ರ ಸರಕಾರಗಳವರೆಗೆ ಅನೇಕ ಹಂತದ ಯೋಜನೆಗಳು, ಕಾರ್ಯಕ್ರಮಗಳು ಜಾರಿಗೆ ಬರುತ್ತವೆ. ಹೀಗೆ ಜಾರಿಗೆ ಬರುವ ಅನೇಕ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದು ತಲುಪಬೇಕಾದವರಿಗೆ ತಲುಪುವ ವೇಳೆಗೆ ಅದರ ಮೂಲಸ್ವರೂಪವೇ ಮಾಯವಾಗಿರುತ್ತದೆ. ಏಕೆಂದರೆ ಈಗ ಎಲ್ಲವೂ ಪರ್ಸೆಂಟೇಜ್ ಕಾಲ. ಎಲ್ಲಿಯವರೆಗೆ ಇದು ನಮ್ಮದು ಎಂಬ ಭಾವನೆ ಬರುವುದಿಲ್ಲವೋ ಅಲ್ಲಿಯವರೆಗೂ ಇಂತಹ ಅವಘಡಗಳು ಸಹಜ. ಆದರೆ ಇದಕ್ಕೆ ವ್ಯತಿರಿಕ್ತವಾದ ಕೆಲವು ಉದಾಹಣೆಗಳಿವೆ. ಅವು ನಮಗೆಲ್ಲಾ ಮಾದರಿ ಎನಿಸುತ್ತವೆ. ಈ ವಾರದ ಅಂಕಣದಲ್ಲಿ ಅಂತಹ ಒಂದು ಒಳ್ಳೆಯ ಮಾದರಿ ಬಗ್ಗೆ ತಿಳಿಯೋಣ.
ಮೊರಾಕೊ ಉತ್ತರ ಆಫ್ರಿಕಾದ ಒಂದು ದೇಶ. ಮೊರಾಕೊದ ಬಹುಭಾಗವು ಪ್ರಸ್ಥಭೂಮಿ ಪ್ರದೇಶವಾಗಿದೆ. ಮೊರಾಕೊ ತುಸು ವಿಭಿನ್ನ ಹವಾಮಾನ ಮತ್ತು ವಾಯುಗುಣವನ್ನು ಹೊಂದಿದೆ. ಅಲ್ಲಿನ ತೀರಪ್ರದೇಶದ ಹವಾಮಾನದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿರುವುದನ್ನು ಬಿಟ್ಟರೆ ಉಳಿದಂತೆ ಸಮಶೀತೋಷ್ಣ ವಾಯುಗುಣ ಹೊಂದಿದೆ. ಪಶ್ಚಿಮದ ಮಾರುತಗಳು ವರ್ಷದ ಬಹುಕಾಲ ಬೀಸುತ್ತಿದ್ದು ಅದು ವಾಯುಗುಣ ಬದಲಾವಣೆಗೆ ಮತ್ತು ಅನಿಯತ ಮಳೆ ಬೀಳುವುದಕ್ಕೆ ಕಾರಣವಾಗಿದೆ. 1960ರ ದಶಕದಲ್ಲಿ ಮೊರಾಕೊ ಇಡೀ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ತಾಪಮಾನ ಹೊಂದಿದ ತಾಣವಾಗಿತ್ತು. ಆದರೆ ಇಂದು ಪರಿಸ್ಥಿತಿಗಳು ತುಂಬಾ ಬದಲಾಗಿವೆ.
ಮಳೆಗಾಲದ ಅವಧಿ ನವೆಂಬರ್‌ನಿಂದ ಜನವರಿ ಅಂತ್ಯದವರೆಗೆ ಇರುತ್ತದೆ. ಕೆಲವೊಮ್ಮೆ ಮಾರ್ಚ್ ವರೆಗೂ ಮಳೆ ಬರುವುದುಂಟು. ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 20 ಸೆಂ.ಮೀ.ನಿಂದ 120 ಸೆಂ.ಮೀ.ವರೆಗೂ ಇದೆ. ಬೇರೆ ದೇಶಗಳಿಗೆ ಹೋಲಿಸಿದರೆ ಇಲ್ಲಿನ ಮಳೆ ಪ್ರಮಾಣ ಕಡಿಮೆಯೆಂದೇ ಹೇಳಬಹುದು. ಇಂತಹ ಅಪರೂಪದ ಹವಾಮಾನ ಬದಲಾವಣೆಯ ದೇಶದ ಮೆನಾ ಪ್ರಾಂತದಲ್ಲಿ ಯಶಸ್ಸಿನ ಕಥೆಯೊಂದು ತೆರೆದುಕೊಳ್ಳುತ್ತದೆ.
ನವೀಕರಿಸಬಹುದಾದ ಇಂಧನ ಯೋಜನೆ ಗಳೊಂದಿಗೆ ಜಾಗತಿಕ ತಾಪಮಾನ ಏರಿಕೆಯನ್ನು ಎದುರಿಸಲು ಮೆನಾ ಪ್ರದೇಶದಲ್ಲಿ ಜಾರಿಗೆ ಬಂದ ಯೋಜನೆಗಳು ಹೊಸ ದಾರಿ ತೋರಿಸಿವೆ. ಇತರ ಪ್ರದೇಶಗಳಿಗಿಂತ ಮೊರಾಕೊ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಹೆಚ್ಚು ಅನುಭವಿಸುತ್ತಿತ್ತು. ಅದಕ್ಕಾಗಿ ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿ ಸವಾಲನ್ನು ಸ್ವೀಕರಿಸಿತು ಮತ್ತು ಸವಾಲುಗಳನ್ನು ಎದುರಿಸಲು ತಂತ್ರಗಳ ಒಂದು ಶ್ರೇಣಿಯನ್ನು ಅಭಿವೃದ್ಧಿಪಡಿಸಿತು. ಅದು ಅನುಸರಿಸಿದ ತಂತ್ರಗಳು ಮೊರಾಕೊವನ್ನು ರೋಲ್ ಮಾಡೆಲ್ ಸ್ಥಾನಕ್ಕೆ ಕೊಂಡೊಯ್ದವು. ಅದು ಕೇವಲ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಪ್ರದೇಶದಲ್ಲಿ ಮಾತ್ರವಲ್ಲ ಬದಲಾಗಿ ಜಾಗತಿಕವಾಗಿ ಮಾದರಿ ಎನಿಸಿತು.
ಹವಾಮಾನ ಬದಲಾವಣೆಯ ಪರಿಣಾಮ ಗಳನ್ನು ತಡೆದುಕೊಳ್ಳಲು ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು ಉತ್ತೇಜಿಸಲು ಮೊರಾಕೊ ಗಮನಾರ್ಹ ಪ್ರಯತ್ನವನ್ನು ಮಾಡಿದೆ. ಅದರ ಭಾಗವಾಗಿ ಕ್ವಾರ್ಝಾಝಾಟ್‌ನಲ್ಲಿರುವ ನೂರ್ ವಿದ್ಯುತ್ ಕೇಂದ್ರವು ವಿಶ್ವದ ಅತಿದೊಡ್ಡ ಸೌರ ಯೋಜನೆಗಳಲ್ಲಿ ಒಂದಾಗಿದೆ. ಇದರ ಜೊತೆಗೆ ಗಾಳಿ ಮತ್ತು ಹೈಡ್ರಾಲಿಕ್ ಮೂಲಗಳಿಂದ ಶುದ್ಧ ಶಕ್ತಿಯನ್ನು ಒದಗಿಸುವುದನ್ನು ಸರಕಾರವು ಪ್ರೋತ್ಸಾಹಿಸಿದೆ. 2030ರ ವೇಳೆಗೆ ಮೊರಾಕೊ ತನ್ನ ಶೇ. 52ರಷ್ಟು ವಿದ್ಯುತನ್ನು ನವೀಕರಿಸಬಹುದಾದ ಶಕ್ತಿಯಿಂದ ಉತ್ಪಾದಿಸಲು ಯೋಜಿಸಿದೆ. ಅದರಲ್ಲಿ ಶೇ. 20ರಷ್ಟು ಸೌರ ಶಕ್ತಿ, ಶೇ. 20ರಷ್ಟು ಪವನಶಕ್ತಿ ಮತ್ತು ಶೇ. 12ರಷ್ಟು ಜಲವಿದ್ಯುತ್ ಶಕ್ತಿ ಯೋಜನೆಗಳಿವೆ. ಈ ಯೋಜನೆಗಳು 2030ರ ವೇಳೆಗೆ ಮೊರಾಕೊದಲ್ಲಿ ಶೇ. 42ರಷ್ಟು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ. ಉತ್ತರ ಆಫ್ರಿಕಾದ ರಾಷ್ಟ್ರವು ಡೀಸೆಲ್, ಗ್ಯಾಸೋಲಿನ್ ಮತ್ತು ತಾಪನ ತೈಲಗಳ ಮೇಲಿನ ಎಲ್ಲಾ ಸಬ್ಸಿಡಿಗಳನ್ನು ತೆಗೆದುಹಾಕಿದೆ ಮತ್ತು ಸುಸ್ಥಿರ ಜಲಚರ ಮತ್ತು ಸಾಗರ ಅಭ್ಯಾಸಗಳ ಮೇಲೆ ಕೇಂದ್ರೀಕರಿಸಲು ಪ್ರಯತ್ನಗಳನ್ನು ಮಾಡುತ್ತಿದೆ. ಅದಕ್ಕಾಗಿ ನಾಗರಿಕರನ್ನು ಶುದ್ಧ ಸಾರಿಗೆ ವಿಧಾನಗಳನ್ನು ಬಳಸಲು ಪ್ರೇರೇಪಿಸುತ್ತವೆ. ಹೆಚ್ಚುವರಿಯಾಗಿ ನೆಲ ಮತ್ತು ವಾಯು ಮಾನಿಟರಿಂಗ್ ನೆಟ್‌ವರ್ಕ್‌ಗಳು ಮತ್ತು ರಿಮೋಟ್ ಸೆನ್ಸಿಂಗ್ ಪರಿಕರಗಳನ್ನು ಸುಧಾರಿಸುವುದು ಸೇರಿದಂತೆ ಹವಾಮಾನ ವೈಪರೀತ್ಯವನ್ನು ಪತ್ತೆಹಚ್ಚಲು ಮತ್ತು ಎಚ್ಚರಿಕೆ ನೀಡಲು ಅಗತ್ಯವಿರುವ ಮೂಲಸೌಕರ್ಯವನ್ನು ಹೆಚ್ಚಿಸಲು ದೇಶವು ಕಾರ್ಯನಿರ್ವಹಿಸುತ್ತಿದೆ. ಈ ಪ್ರಯತ್ನಗಳು ಹವಾಮಾನ ಬಿಕ್ಕಟ್ಟುಗಳಿಂದ ತುಲನಾತ್ಮಕವಾಗಿ ಚೇತರಿಸಿಕೊಳ್ಳಲು ಮೊರಾಕೊವನ್ನು ಸಕ್ರಿಯಗೊಳಿಸಿವೆ.
ನೀರಿನ ನಿರ್ವಹಣೆಯನ್ನು ಉತ್ತಮಪಡಿಸಲು ಸಾಂಪ್ರದಾಯಿಕವಲ್ಲದ ನೀರಿನ ಸಂಪನ್ಮೂಲಗಳ ಬಳಕೆಯನ್ನು ಹೆಚ್ಚಿಸಲು ಮತ್ತು ನೀರಾವರಿ ವ್ಯವಸ್ಥೆಗಳನ್ನು ಆಧುನೀಕರಿಸಲು ಸರಕಾರವು ಹಲವಾರು ರಾಷ್ಟ್ರೀಯ ಕಾರ್ಯತಂತ್ರಗಳನ್ನು ಜಾರಿಗೆ ತಂದಿತು. ಉತ್ತರ ಮೆನಾದಿಂದ ಶುಷ್ಕವಾದ ದಕ್ಷಿಣ ಪ್ರದೇಶಗಳಿಗೆ ನೀರನ್ನು ಹರಿಸಲು ಅಣೆಕಟ್ಟುಗಳನ್ನು ನಿರ್ಮಿಸಲು ಹೆಚ್ಚು ಹೂಡಿಕೆ ಮಾಡಿದೆ. 1,30,000 ಹೆಕ್ಟೇರ್‌ಗಳಿಗಿಂತ ಹೆಚ್ಚು ಅರಣ್ಯ ಪ್ರದೇಶವನ್ನು ಪುನರುತ್ಪಾದಿಸಲು ಒಂದು ಪ್ರಮುಖ ಪ್ರಯತ್ನವನ್ನು ಅಳವಡಿಸಿಕೊಳ್ಳಲಾಗಿದೆ. ಇದು ಅರಣ್ಯ ಪ್ರದೇಶ ವಿಸ್ತರಣೆ ಮಾತ್ರವಲ್ಲದೆ ಸಕಲ ಜೀವಿಗಳಿಗೆ ಆಶ್ರಯ ನೀಡುವ ಯೋಜನೆಯಾಗಿದೆ.
ಪ್ರಪಂಚದ ಎಲ್ಲಾ ಪ್ರದೇಶಗಳು ಹವಾಮಾನ ಬದಲಾವಣೆಯಿಂದ ಪ್ರಭಾವಿತವಾಗಿದ್ದರೂ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಮೆನಾ ಪ್ರದೇಶದ ಸವಾಲು ವಿಶೇಷವಾಗಿ ಮಹತ್ವದ್ದು ಎನಿಸುತ್ತದೆ. ಜನಸಂಖ್ಯೆಯು ಹೆಚ್ಚಾದಂತೆ ಇತರ ಪ್ರದೇಶಗಳಿಗೆ ವಲಸೆ ಹೆಚ್ಚುತ್ತದೆ. ಆದರೆ ಮೆನಾ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೂ ವಲಸೆ ಶೂನ್ಯಕ್ಕೆ ತಲುಪಿದೆ. ಜನವಸತಿ ಪ್ರದೇಶದಲ್ಲಿ ಆರ್ಥಿಕ ಸೌಲಭ್ಯಗಳು ಹೆಚ್ಚಾಗಿರುವಾಗ ವಲಸೆ ಅನಿವಾರ್ಯವಾಗುವುದಿಲ್ಲ.
ಮೊರಾಕೊ ಈಗಾಗಲೇ ತುಲನಾತ್ಮಕವಾಗಿ ಮಹತ್ವಾಕಾಂಕ್ಷೆಯ ಹವಾಮಾನ ನೀತಿಯನ್ನು ಹೊಂದಿದೆ. ದೇಶದ ಕಾರ್ಯತಂತ್ರದ ಮೂಲಾಧಾರವು ಐತಿಹಾಸಿಕವಾಗಿ ಮೂಲಸೌಕರ್ಯ ಯೋಜನೆಗಳಾದ ಅಣೆಕಟ್ಟುಗಳು, ನೀರಿನ ಜಲಾನಯನ ಸಂಪರ್ಕಗಳು ಮತ್ತು ನೀರಾವರಿ ಸೌಲಭ್ಯಗಳನ್ನು ಹೆಚ್ಚಿಸುವುದಾಗಿದೆ. 1960ರ ದಶಕದಿಂದೀಚೆಗೆ ನಡೆದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯದಲ್ಲಿ ಹತ್ತುಪಟ್ಟು ಹೆಚ್ಚಳವಾಗಿದೆ. ಭೂಗತ ಜಲಸಂಪನ್ಮೂಲಗಳನ್ನು ಸಮರ್ಥನೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ದೇಶವು ಉದಯೋನ್ಮುಖ ಹವಾಮಾನ ಚಾಂಪಿಯನ್ ಎಂಬ ಖ್ಯಾತಿಯನ್ನು ಗಳಿಸಿದೆ.
ಇದು ಬರಗಾಲ, ನೀರಿನ ಕೊರತೆ ಮತ್ತು ಹವಾಮಾನ ಸಂಬಂಧಿತ ನೈಸರ್ಗಿಕ ವಿಪತ್ತುಗಳ ಪರಿಣಾಮಗಳನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಹೆಚ್ಚು ಸ್ಥಿತಿಸ್ಥಾಪಕ ನೀರಾವರಿ ಕೃಷಿಯ ಅಭಿವೃದ್ಧಿಯ ಹೊರತಾಗಿಯೂ, ಬರಗಾಲಗಳನ್ನು ಸಮರ್ಥವಾಗಿ ನಿರ್ವಹಿಸಿದ ಕೀರ್ತಿ ಮೊರಾಕೊಗೆ ಸಲ್ಲುತ್ತದೆ. 1960ರ ದಶಕದ ಅಂತ್ಯ ಮತ್ತು 2020ರ ನಡುವೆ ಮೊರಾಕೊ ಒಟ್ಟು 126 ಅಣೆಕಟ್ಟುಗಳನ್ನು ನಿರ್ಮಿಸಿತು. ಅದರ ಒಟ್ಟು ಸಂಗ್ರಹ ಸಾಮರ್ಥ್ಯ 2ರಿಂದ 19.1 ಶತಕೋಟಿ ಘನಅಡಿಗೆ ಹೆಚ್ಚಿತು. ಹೆಚ್ಚುವರಿಯಾಗಿ ಪುರಸಭೆಯ ನೀರು ಸರಬರಾಜು ಮತ್ತು ನೀರಾವರಿ ಅಗತ್ಯಗಳನ್ನು ಭದ್ರಪಡಿಸಿಕೊಳ್ಳಲು ದೇಶವು ಸುಮಾರು 785 ಕಿ.ಮೀ.ಗಳ 15 ನೀರಿನ ಜಲಾನಯನ ಅಂತರಸಂಪರ್ಕಗಳನ್ನು ಅಭಿವೃದ್ಧಿಪಡಿಸಿದೆ. ಪೂರಕವಾಗಿ ಮೊರಾಕೊ ನೀರಾವರಿ ವ್ಯವಸ್ಥೆಗಳ ಆಧುನೀಕರಣದಲ್ಲಿ ಹೂಡಿಕೆ ಮಾಡುವ ಮೂಲಕ ಕೃಷಿ ವಲಯದಲ್ಲಿ ನೀರಿನ ಉತ್ಪಾದಕತೆಯ ಗಮನಾರ್ಹ ಸುಧಾರಣೆಗೆ ಕಾರಣವಾಗಿದೆ.
ನೀರಾವರಿ ವ್ಯವಸ್ಥೆಗಳ ಆಧುನೀಕರಣ ಮತ್ತು ತೋಟಗಾರಿಕೆ ಉಪಕರಣಗಳಲ್ಲಿನ ಹೂಡಿಕೆಯ ಮೇಲಿನ ಸಾರ್ವಜನಿಕ ಬೆಂಬಲವು 2008 ಮತ್ತು 2018ರ ನಡುವೆ ಹನಿ ನೀರಾವರಿ ಪ್ರದೇಶಗಳನ್ನು 3.5 ಪಟ್ಟು ಹೆಚ್ಚಿಸಲು ಮೊರಾಕೊಗೆ ಅವಕಾಶ ಮಾಡಿಕೊಟ್ಟಿತು. ಆ ಅವಧಿಯಲ್ಲಿ ಕೃಷಿ ಮೌಲ್ಯದಲ್ಲಿ ಶೇ. 92ರಷ್ಟು ಕೃಷಿ ಹೆಚ್ಚಳವನ್ನು ಉತ್ತೇಜಿಸಿತು. ಆದಾಗ್ಯೂ, ಮಳೆಯಾಧಾರಿತ ಪ್ರದೇಶಗಳು ಇನ್ನೂ 80 ಪ್ರತಿಶತ ಕೃಷಿ ಭೂಮಿಯನ್ನು ಆವರಿಸಿಕೊಂಡಿವೆ. ಅದಕ್ಕಾಗಿ ನಿರ್ಮಿಸಿದ 3 ಆರ್ಥಿಕತೆಯ ಪ್ರಾಥಮಿಕ ವಲಯಗಳು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ. 13ರಷ್ಟನ್ನು ಪ್ರತಿನಿಧಿಸಿವೆ.
2021ರಲ್ಲಿ ಕೋವಿಡ್‌ನಿಂದ ಆರ್ಥಿಕ ಹಿಂಜರಿತ ಕಂಡಿದ್ದ ಮೊರಾಕೊಗೆ 2022ರ ಬರಗಾಲವು ಹಠಾತ್ ಆರ್ಥಿಕ ಕುಸಿತವನ್ನು ನೀಡಿತು. ಆದರೂ ತೀವ್ರವಾಗಿ ಚೇತರಿಸಿಕೊಂಡ ಮೊರಾಕೊ ಸರಕಾರವು ಸಾರ್ವಜನಿಕ ಹಣಕಾಸಿನ ಮೇಲೆ ರೈತರಿಗೆ ತುರ್ತು ಬೆಂಬಲವನ್ನು ನೀಡಿತು. ಪರಿಣಾಮವಾಗಿ ಅಲ್ಲಿನ ಜನ ಆರ್ಥಿಕ ಸಂಕಷ್ಟದಿಂದ ಬಹುಬೇಗನೇ ಹೊರಬರಲು ಸಾಧ್ಯವಾಯಿತು. ಹೀಗೆ ವಿವಿಧ ಉಪಕ್ರಮಗಳ ಮೂಲಕ ಇಡೀ ಪ್ರಪಂಚದ ಗಮನ ಸೆಳೆದ ಮೊರಾಕೊ ಹವಾಮಾನ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಉತ್ತಮ ಹೆಜ್ಜೆಗಳನ್ನು ಇಟ್ಟಿದೆ. ಈ ಮಾರ್ಗವು ಇನ್ನಿತರ ದೇಶಗಳಿಗೆ ಮಾದರಿಯಾಗಿದೆ. ಇಂತಹ ಉಪಯುಕ್ತ ಮಾದರಿಗಳನ್ನು ಅನುಸರಿಸುವ ಮೂಲಕ ನಾವೂ ಹವಾಮಾನ ಬಿಕ್ಕಟ್ಟನ್ನು ನಿಭಾಯಿಸಬಹುದೇ?