ಪರಿಸರ ಸಮಸ್ಯೆಗಳಿಗೆ ಪರಿಹಾರವಾಗುವ ಕರಗುವ ಪ್ಲಾಸ್ಟಿಕ್
ಐಡಾ ತಂಡವು ತಯಾರಿಸಿದ ಪ್ಲಾಸ್ಟಿಕ್ ಸಾಗರದ ನೀರಿನಲ್ಲಿ ಕೆಲವೇ ಗಂಟೆಗಳಲ್ಲಿ ಕರಗಲು ಪ್ರಾರಂಭಿಸುತ್ತದೆ. ಮಣ್ಣಿನಲ್ಲಿ ಕರಗಲು 10 ದಿನಗಳಿಗಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಜೊತೆಗೆ ಮಣ್ಣನ್ನು ಫಲವತ್ತಾಗಿಸಲು ಸಹಾಯ ಮಾಡುತ್ತವೆ. ಅಲ್ಲದೆ ಈ ಪ್ಲಾಸ್ಟಿಕ್ ವಿಷಕಾರಿಯಲ್ಲ, ದಹ್ಯವಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ವಿಘಟನೆ ವೇಳೆಯಲ್ಲಿ ಯಾವುದೇ ಇಂಗಾಲದ ಡೈಆಕ್ಸೈಡ್ ನ್ನು ಹೊರಸೂಸುವುದಿಲ್ಲ.
ಇಂದು ಪ್ಲಾಸ್ಟಿಕ್ ನ ಬಳಕೆ ಮಿತಿಮೀರಿದೆ. ಕೈಚೀಲದಿಂದ ಹಿಡಿದು ವಾಹನಗಳ ಬಿಡಿ ಭಾಗಗಳು, ವೈದ್ಯಕೀಯ ಸಾಧನಗಳವರೆಗೆ ಅನೇಕ ರೀತಿಯಲ್ಲಿ ಬಳಕೆಯಾಗುತ್ತಿರುವ ಪ್ಲಾಸ್ಟಿಕ್ ಎಲ್ಲೆಡೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಇದನ್ನು ಮಣಿಸಲು ಸಾಧ್ಯವಿಲ್ಲವೇನೋ ಎನ್ನುವ ಹಂತಕ್ಕೆ ಅದರ ಸಮಸ್ಯೆ ಭೂತಾಕಾರವಾಗಿ ಬೆಳೆದು ನಿಂತಿದೆ. ಅಂತೆಯೇ ಈ ಸಮಸ್ಯೆಯನ್ನು ಮೆಟ್ಟಿ ನಿಲ್ಲುವ ಪ್ರಯತ್ನಗಳು ಕೂಡಾ ನಿಂತಿಲ್ಲ.
ಒಟ್ಟು ಪ್ಲಾಸ್ಟಿಕ್ ನ ಶೇ. 10ಕ್ಕಿಂತ ಕಡಿಮೆ ಮಾತ್ರ ಮರುಬಳಕೆ ಮಾಡಲಾಗುತ್ತದೆ. ಉಳಿದ ಪ್ಲಾಸ್ಟಿಕ್ ಪರಿಸರ ವ್ಯವಸ್ಥೆಗಳ ಮೇಲೆ ನಾಶವನ್ನು ಉಂಟುಮಾಡುತ್ತದೆ. ವಿವಿಧ ರೀತಿಯಲ್ಲಿ ಪರಿಸರ ಸೇರಿದ ಪ್ಲಾಸ್ಟಿಕ್ ವಾತಾವರಣ ವಿವಿಧ ಪ್ರಕ್ರಿಯೆಗಳಿಂದ ಮೈಕ್ರೋಪ್ಲಾಸ್ಟಿಕ್ ಆಗಿ ಪರಿವರ್ತನೆಗೊಂಡು ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಇಂತಹ ಮೈಕ್ರೋಪ್ಲಾಸ್ಟಿಕ್ ಜಲ, ನೆಲ, ವಾಯು ಎಲ್ಲೆಡೆ ಸೇರಿಕೊಂಡಿವೆ. ಅಲ್ಲದೆ ಮಾನವರು, ಜಲಚರ ಜೀವಿಗಳು ಸೇರಿದಂತೆ ಇನ್ನಿತರ ಜೀವಿಗಳ ರಕ್ತದಲ್ಲೂ ಸೇರಿಕೊಂಡಿದೆ.
ಪ್ಲಾಸ್ಟಿಕ್ಗೆ ಪರ್ಯಾಯಗಳನ್ನು ತರುವ ಪ್ರಯತ್ನದಲ್ಲಿ ವಿಜ್ಞಾನಿಗಳು ಮತ್ತು ತಂತ್ರಜ್ಞರು ಹಿಂದೆ ಬಿದ್ದಿಲ್ಲ. ಅನೇಕ ಪರ್ಯಾಯಗಳನ್ನು ಮಾರುಕಟ್ಟೆಗೆ ತರುವ ಪ್ರಯತ್ನ ನಿರಂತರವಾಗಿ ನಡೆದೇ ಇದೆ. ಆದರೆ ಎಲ್ಲಾ ಪ್ರಯತ್ನಗಳು ಆಮೆ ವೇಗದಲ್ಲಿವೆ. ಪ್ರಸಕ್ತ ಒಂದು ತಂಡವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈಗಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ತಿನ್ನುವ ಬ್ಯಾಕ್ಟೀರಿಯಾಗಳನ್ನು ಸೃಷ್ಟಿಸಿದೆ. ಜಪಾನ್ನ ರಿಕೆನ್ ಸೆಂಟರ್ ಫಾರ್ ಎಮರ್ಜೆಂಟ್ ಮ್ಯಾಟರ್ ಸೈನ್ಸ್ನ ಸಂಶೋಧಕರು ಪ್ಲಾಸ್ಟಿಕ್ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ. ಟಕುಜೊ ಐಡಾ ನೇತೃತ್ವದ ತಂಡವು ಬಲವಾದ, ಬಹುರೂಪಿಯಾಗಿ ಬಳಕೆಯಾಗುವ ಮತ್ತು ಜೈವಿಕ ವಿಘಟನೀಯ ಪ್ಲಾಸ್ಟಿಕ್ ಅನ್ನು ಅಭಿವೃದ್ಧಿಪಡಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಇವರು ತಯಾರಿಸಿದ ಪ್ಲಾಸ್ಟಿಕ್ ಸಮುದ್ರದ ನೀರಿನಲ್ಲೂ ಕರಗುತ್ತದೆ.
ಟಕುಜೊ ಐಡಾ ನೇತೃತ್ವದ ತಂಡವು ಪ್ಲಾಸ್ಟಿಕ್ ತಿನ್ನುವ ಬ್ಯಾಕ್ಟೀರಿಯಾದ ಮೇಲೆ ಹೆಚ್ಚು ಕೆಲಸ ಮಾಡುತ್ತಿವೆ. ಪ್ಲಾಸ್ಟಿಕ್ ವಿಘಟನೆ ಮಾಡುವಲ್ಲಿ ಬ್ಯಾಕ್ಟೀರಿಯಾಗಳ ಪಾತ್ರ ಮಹತ್ವದ್ದು. ಈ ಬ್ಯಾಕ್ಟೀರಿಯಾಗಳು ಪ್ಲಾಸ್ಟಿಕ್ನ್ನು ವಿಘಟಿಸುವ ಮೂಲಕ ಪರಿಸರದಿಂದ ಪ್ಲಾಸ್ಟಿಕ್ನ್ನು ನಿರ್ಮೂಲ ಮಾಡಲು ಸಹಾಯ ಮಾಡುತ್ತವೆ.
ಈಗಾಗಲೇ ಕೆಲವು ಜೈವಿಕ ವಿಘಟನೀಯ ಪ್ಲಾಸ್ಟಿಕ್ಗಳು ಅಸ್ತಿತ್ವದಲ್ಲಿದ್ದರೂ, ಅವು ಸಾಮಾನ್ಯವಾಗಿ ಸಮುದ್ರ ಪರಿಸರದಲ್ಲಿ ಸುಲಭವಾಗಿ ಕರಗುವುದಿಲ್ಲ. ಉದಾಹರಣೆಗೆ ಪಾಲಿಲ್ಯಾಕ್ಟಿಕ್ ಆಮ್ಲವು ವ್ಯಾಪಕವಾಗಿ ಬಳಸಲಾಗುವ ಜೈವಿಕ ವಿಘಟನೀಯ ಪ್ಲಾಸ್ಟಿಕ್. ಇದು ಸಮುದ್ರದ ನೀರಿನಲ್ಲಿ ಕರಗುವುದಿಲ್ಲ. ಬದಲಾಗಿ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಈ ಮಿತಿಯು ಎಲ್ಲಾ ಪರಿಸರದಲ್ಲಿ ಸಮರ್ಥನೀಯ ಮತ್ತು ಪರಿಣಾಮಕಾರಿ ಕರಗುವ ವಸ್ತುಗಳನ್ನು ಹುಡುಕಲು ಟಕುಜೊ ಐಡಾ ನೇತೃತ್ವದ ತಂಡದ ವಿಜ್ಞಾನಿಗಳನ್ನು ಪ್ರೇರೇಪಿಸಿದೆ.
ಐಡಾ ಮತ್ತು ಅವನ ತಂಡವು ಪ್ಲಾಸ್ಟಿಕ್ನ್ನು ಸುಲಭವಾಗಿ ಕರಗಿಸಲು ಸೂಪರ್ಮಾಲಿಕ್ಯುಲರ್ ಕೆಮಿಸ್ಟ್ರಿಯನ್ನು ಬಳಸಿಕೊಂಡಿದೆ. ಸೂಪರ್ಮಾಲಿಕ್ಯುಲರ್ ಪ್ಲಾಸ್ಟಿಕ್ಗಳಲ್ಲಿನ ಅಣು ಬಂಧಗಳನ್ನು ಕಡಿಮೆ ಮಾಡುವ ಸ್ವಭಾವವು, ಅವುಗಳನ್ನು ದುರ್ಬಲ ಮತ್ತು ಅಸ್ಥಿರಗೊಳಿಸುತ್ತದೆ. ಹಾಗಾಗಿ ಪ್ಲಾಸ್ಟಿಕ್ ಸುಲಭವಾಗಿ ಎಲ್ಲಾ ಪರಿಸರದಲ್ಲಿ ಕರಗುತ್ತದೆ. ಅವರು ಸಾಲ್ಟ್ ಬ್ರಿಡ್ಜ್ಗಳೆಂದು ಕರೆಯಲ್ಪಡುವ ರಿವರ್ಸಿಬಲ್ ಪರಸ್ಪರ ಕ್ರಿಯೆಗಳಿಂದ ಬಂಧವಾದ ಪಾಲಿಮರ್ ಅನ್ನು ರಚಿಸಿದರು. ಈ ಉಪ ಸಂಯೋಜಿತ ರಚನೆಗಳು ಪ್ಲಾಸ್ಟಿಕ್ಗೆ ಅದರ ಶಕ್ತಿ ಮತ್ತು ನಮ್ಯತೆಯನ್ನು ನೀಡುತ್ತವೆ. ಜೊತೆಗೆ ಪ್ಲಾಸ್ಟಿಕ್ಗೆ ವಿಶಿಷ್ಟವಾದ ದುರ್ಬಲತೆಯನ್ನು ನೀಡುತ್ತದೆ. ಅದು ಉಪ್ಪು ನೀರು. ಸಮುದ್ರದ ನೀರಿನಲ್ಲಿ ಕಂಡುಬರುವ ವಿದ್ಯುದ್ವಿಚ್ಛೇದ್ಯಗಳಿಗೆ ಒಡ್ಡಿಕೊಂಡಾಗ, ಪ್ಲಾಸ್ಟಿಕ್ ಅದರ ಘಟಕ ಅಣುಗಳಾಗಿ ಕರಗಲು ಅನುವು ಮಾಡಿಕೊಡುತ್ತದೆ.
ಸಂಶೋಧಕರು ಎರಡು ಅಯಾನಿಕ್ ಮೊನೊಮರ್ಗಳನ್ನು ಸಂಯೋಜಿಸುವ ಮೂಲಕ ಈ ಪ್ರಗತಿಯನ್ನು ಸಾಧಿಸಿದ್ದಾರೆ. ಒಂದು ಸೋಡಿಯಂ ಹೆಕ್ಸಾಮೆಟಾಫಾಸ್ಫೇಟ್. ಇದು ಆಹಾರ ಸುರಕ್ಷಿತ ಸಂಯುಕ್ತ. ಇನ್ನೊಂದು ಗ್ವಾನಿಡಿನಿಯಮ್. ಇದು ಅಯಾನ್ ಆಧಾರಿತ ಮಾನೋಮರ್. ಉತ್ಪಾದನೆಯ ಸಮಯದಲ್ಲಿ ಇವೆರಡನ್ನೂ ಸೇರಿಸಿ ಸೋಡಿಯಂ ಸಲ್ಫೇಟ್ ಉಪಉತ್ಪನ್ನವನ್ನು ತೆಗೆದುಹಾಕಿದಾಗ ಸ್ಥಿರವಾದ ಮತ್ತು ಅಚ್ಚು ಮಾಡಬಹುದಾದ ವಸ್ತುವನ್ನು ರೂಪಿಸುತ್ತವೆ. ಇಲ್ಲಿ ಸಂಸ್ಕರಣಾ ಹಂತ ತುಂಬಾ ಮಹತ್ವದ್ದು. ಈ ಸಂಸ್ಕರಣಾ ಹಂತವಿಲ್ಲದೆ ಪರಿಣಾಮಕಾರಿಯಾದ ವಸ್ತುವು ಬಳಕೆಗೆ ಸೂಕ್ತವಲ್ಲ. ಸರಿಯಾಗಿ ಸಂಸ್ಕರಿಸಿದಾಗ ಒಣಗಿದ ಪ್ಲಾಸ್ಟಿಕ್ನ್ನು ಅಲ್ಕೈಲ್ ಎಸ್ಪಿ2 ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ಇದು ಸಾಂಪ್ರದಾಯಿಕ ಪ್ಲಾಸ್ಟಿಕ್ಗಳಿಗೆ ಹೋಲಿಸಬಹುದಾದ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತದೆ. ಇದು ಸಾಗರದಲ್ಲಿ ಸುರಕ್ಷಿತವಾಗಿ ಕರಗುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಇದನ್ನು ವಿವಿಧ ಅನ್ವಯಿಕಗಳಿಗೆ ಬಳಸಬಹುದಾಗಿದೆ ಎಂದು ತಂಡವು ಹೇಳಿದೆ.
ಐಡಾ ತಂಡವು ತಯಾರಿಸಿದ ಪ್ಲಾಸ್ಟಿಕ್ ಸಾಗರದ ನೀರಿನಲ್ಲಿ ಕೆಲವೇ ಗಂಟೆಗಳಲ್ಲಿ ಕರಗಲು ಪ್ರಾರಂಭಿಸುತ್ತದೆ. ಮಣ್ಣಿನಲ್ಲಿ ಕರಗಲು 10 ದಿನಗಳಿಗಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಜೊತೆಗೆ ಮಣ್ಣನ್ನು ಫಲವತ್ತಾಗಿಸಲು ಸಹಾಯ ಮಾಡುತ್ತವೆ. ಅಲ್ಲದೆ ಈ ಪ್ಲಾಸ್ಟಿಕ್ ವಿಷಕಾರಿಯಲ್ಲ, ದಹ್ಯವಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ವಿಘಟನೆ ವೇಳೆಯಲ್ಲಿ ಯಾವುದೇ ಇಂಗಾಲದ ಡೈಆಕ್ಸೈಡ್ನ್ನು ಹೊರಸೂಸುವುದಿಲ್ಲ. ಇತರ ಥರ್ಮೋಪ್ಲಾಸ್ಟಿಕ್ಗಳಂತೆಯೇ 120 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನದಲ್ಲಿ ಇದನ್ನು ಮರುರೂಪಿಸಬಹುದು. ಇದು 3ಡಿ ಮುದ್ರಣ, ವೈದ್ಯಕೀಯ ಸಾಧನಗಳು ಮತ್ತು ಗ್ರಾಹಕ ಸರಕುಗಳಂತಹ ಕೈಗಾರಿಕೆಗಳಿಗೆ ಸೂಕ್ತವಾಗಿದೆ.
ತಂಡವು ರೂಪಿಸಿದ ಪ್ಲಾಸ್ಟಿಕ್ ಉಪ್ಪು ನೀರಿನಲ್ಲಿ ಕರಗಿದಾಗ, ಪ್ಲಾಸ್ಟಿಕ್ನ ಘಟಕಗಳನ್ನು ಮರುಬಳಕೆ ಮಾಡಬಹುದು ಎಂಬುದು ಪರೀಕ್ಷೆಗಳಿಂದ ಸಾಬೀತಾಗಿದೆ. ವಿವಿಧ ಹಂತದ ಪರೀಕ್ಷೆಗಳಲ್ಲಿ ತಂಡವು ಶೇ.91ರಷ್ಟು ಹೆಕ್ಸಾಮೆಟಾಫಾಸ್ಫೇಟ್ ಮತ್ತು ಶೇಕಡಾ 82ರಷ್ಟು ಗ್ವಾನಿಡಿನಿಯಮ್ ಮೊನೊಮರ್ಗಳನ್ನು ಮರುಪಡೆಯಿತು. ಈ ಸಮರ್ಥ ಮರುಬಳಕೆ ಪ್ರಕ್ರಿಯೆಯು ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ.
ಪ್ಲಾಸ್ಟಿಕ್ ಮಾಲಿನ್ಯವು ನಮ್ಮ ಕಾಲದ ಅತ್ಯಂತ ದೊಡ್ಡ ಪರಿಸರ ಸಮಸ್ಯೆಗಳಲ್ಲಿ ಒಂದಾಗಿದೆ. ಅದನ್ನು ಪರಿಹರಿಸಲು ನವೀನ ಪರಿಹಾರಗಳ ಅಗತ್ಯವಿದೆ. ನಾವು ಪ್ರತೀ ವರ್ಷ ಸುಮಾರು 11 ಮಿಲಿಯನ್ ಮೆಟ್ರಿಕ್ ಟನ್ನಷ್ಟು ಪ್ಲಾಸ್ಟಿಕ್ನ್ನು ನಮ್ಮ ಸಾಗರಗಳಿಗೆ ಎಸೆಯುತ್ತೇವೆ. ಪ್ರಸಕ್ತ ಐಡಾ ತಂಡವು ರೂಪಿಸಿದ ಪ್ಲಾಸ್ಟಿಕ್ ಜಗತ್ತಿನ ಎಲ್ಲೆಡೆ ದೊರೆಯುವಂತಾದರೆ ಸಾಗರಗಳಿಗೆ ಸೇರುವ ಪ್ಲಾಸ್ಟಿಕ್ ತ್ಯಾಜ್ಯದ ಹೊರೆಯನ್ನು ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ಐಡಾ ಮತ್ತು ಅವರ ತಂಡವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇದರಿಂದ ಹೆಚ್ಚು ಸಮರ್ಥನೀಯ ವಸ್ತುಗಳಿಗೆ ನಾವು ವೈಜ್ಞಾನಿಕ ಅಡಿಪಾಯವನ್ನು ಹೊಂದಿದ್ದೇವೆ ಎಂಬ ಸೂಚನೆ ದೊರೆತಿದೆ.