ಭೂಮಿ ಉಗಮದ ರಹಸ್ಯ ಬಿಚ್ಚಡಲಿದೆಯಾ ‘ಬೆನ್ನು’ವಿನ ಮಣ್ಣು
ನಾವು ಚಿಕ್ಕವರಿದ್ದಾಗ ಇಡೀ ದಿನ ಮಣ್ಣಿನಲ್ಲೇ ನಮ್ಮ ಆಟೋಟಗಳು ನಡೆಯುತ್ತಿದ್ದವು. ಆಟದ ವೇಳೆ ನಿತ್ಯವೂ ಮಣ್ಣಿನ ಸ್ನಾನವಾಗುತ್ತಿತ್ತು. ಗೋಲಿ ಆಡಿ ಬಂದಾಗಲಂತೂ ಅಂಗೈ ಮತ್ತು ಅಂಗಾಲುಗಳಲ್ಲಿ ಮಣ್ಣು ಮೆತ್ತಿಕೊಂಡಿರುತ್ತಿತ್ತು. ಮೆತ್ತಿದ ಮಣ್ಣನ್ನು ತೊಳೆಯಲು ಬಕೆಟ್‌ಗಟ್ಟಲೆ ನೀರು ಬೇಕಾಗುತ್ತಿತ್ತು. ಇನ್ನು ನಮ್ಮ ಓಣಿಯ ಒಂದಿಬ್ಬರು ಚಿಕ್ಕ ಹುಡುಗರು ನಿತ್ಯವೂ ಮಣ್ಣನ್ನು ತಿನ್ನುತ್ತಿದ್ದರು. ‘ಮಣ್ಣೆಂದರೆ ಬರೀ ಮಣ್ಣಲ್ಲೋ ಅಣ್ಣ, ಇದು ಬಾಳು ಬೆಳಗುವ ನಿಧಿ’ ಎನ್ನುವ ಮಾತು ಮಣ್ಣಿನ ಮಹತ್ವವನ್ನು ತಿಳಿಸುತ್ತದೆ. ಹೌದು ಮಣ್ಣು ಸಕಲ ಜೀವಿಗಳಿಗೆ ಜೀವನಾಧಾರವಾಗಿರುವಂತೆ ಅನೇಕ ಅನ್ವೇಷಣೆಗಳ ಮೂಲವೂ ಆಗಿದೆ. ಈ ಕಾರಣದಿಂದ ಬೇರೆ ಬೇರೆ ಸಂದರ್ಭಗಳಲ್ಲಿ ಮಣ್ಣನ್ನು ಪೂಜಿಸುವುದು ವಾಡಿಕೆ. ರೈತರು ಮಣ್ಣಿಗೆ ಪೂಜೆ ಸಲ್ಲಿಸಿದ ನಂತರವೇ ಬಿತ್ತನೆ ಪ್ರಾರಂಭಿಸುತ್ತಾರೆ.
ಹೀಗೆ ಮಣ್ಣಿಗೆ ಎಲ್ಲಿಲ್ಲದ ಬೆಲೆೆ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಮಾತು. ಹಾಗಿರುವಾಗ ಅಂತರಿಕ್ಷದಿಂದ ತಂದ ಮಣ್ಣಿಗೆ ಬೆಲೆ ಇರದಿದ್ದೀತೇ? ಇತ್ತೀಚೆಗೆ ಅಮೆರಿಕದ ನಾಸಾ ಸಂಸ್ಥೆಯ ಒಸಿರಿಸ್-ರೆಕ್ಸ್ ಹೆಸರಿನ ಬಾಹ್ಯಾಕಾಶ ನೌಕೆಯ ಕ್ಯಾಪ್ಸೂಲ್ ಕ್ಷುದ್ರಗ್ರಹದ ಮಣ್ಣನ್ನು ಭೂಮಿಗೆ ತಂದಿದೆ. ಇದು ಸದ್ಯಕ್ಕೆ ಇಡೀ ಜಗತ್ತಿನ ವಿಜ್ಞಾನಿಗಳಿಗೆ ಕಾತರ ಹುಟ್ಟಿಸಿದೆ. 2016ರ ಸೆಪ್ಟಂಬರ್ 8ರಂದು ಭೂಮಿಯಿಂದ ಹೊರಟಿದ್ದ ಒಸಿರಿಸ್-ರೆಕ್ಸ್ ಬಾಹ್ಯಾಕಾಶ ನೌಕೆಯು ‘ಬೆನ್ನು’ ಹೆಸರಿನ ಕ್ಷುದ್ರಗ್ರಹವನ್ನು ತಲುಪಿ, ಅದರ ಮಣ್ಣನ್ನು ಸಂಗ್ರಹಿಸಿ 2023ರ ಸೆಪ್ಟಂಬರ್ 24ರಂದು ಭೂಮಿಗೆ ಯಶಸ್ವಿಯಾಗಿ ಮರಳಿದೆ. ಪ್ರಸ್ತುತ ನೌಕೆಯು 250 ಗ್ರಾಂ ಬೆನ್ನುವಿನ ಮಣ್ಣನ್ನು ಭೂಮಿಗೆ ತಂದಿದೆ.
ಚಂದ್ರ ಮತ್ತು ಭೂಮಿಯ ಸರಳರೇಖೆಯಲ್ಲಿರುವ ಬೆನ್ನು ಕ್ಷುದ್ರಗ್ರಹವು ಸೆಪ್ಟಂಬರ್ 2183ರಲ್ಲಿ ಭೂಮಿಯ ಕಡೆಗೆ ಬರಲಿದ್ದು, ಅದು ಭೂಮಿಗೆ ಅಪ್ಪಳಿಸಲಿದೆ ಎಂಬ ಅನುಮಾನ ವಿಜ್ಞಾನಿಗಳನ್ನು ಕಾಡುತ್ತಿದೆ. ಬೆನ್ನು ಕ್ಷುದ್ರಗ್ರಹವು 500 ಅಡಿ ಎತ್ತರ ಹೊಂದಿದ್ದು, 8.7 ಕೋಟಿ ಟನ್ ತೂಕ ಹೊಂದಿದೆ. ಒಂದು ವೇಳೆ ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಹಿರೋಶಿಮಾ ಬಾಂಬ್ ದಾಳಿಯ ಭೀಕರತೆಗಿಂತ 80 ಸಾವಿರ ಪಟ್ಟು ನಾಶ ಸಂಭವಿಸಲಿದೆಯಂತೆ. ಇದರಿಂದಾಗುವ ಅನಾಹುತಗಳನ್ನು ತಪ್ಪಿಸಲು ನಾಸಾವು ‘ಬೆನ್ನು’ವಿನ ಬೆನ್ನು ಹತ್ತಿದೆ. ಒಂದು ವೇಳೆ ಬೆನ್ನು ಕ್ಷುದ್ರಗ್ರಹವು ಭೂಮಿಯತ್ತ ಧಾವಿಸಿ ಬಂದರೆ ಮಾರ್ಗ ಮಧ್ಯದಲ್ಲಿಯೇ ಅದನ್ನು ಹೊಡೆದು ಹಾಕುವ ತಂತ್ರ ರೂಪಿಸಲು ಸಿದ್ಧತೆ ನಡೆಸಿದೆ.
ಮಂಗಳ ಮತ್ತು ಗುರುಗ್ರಹದ ನಡುವೆ ಅಸಂಖ್ಯಾತ ಕ್ಷುದ್ರಗ್ರಹಗಳಿದ್ದು, ಅವು ಅನಿಯಮಿತವಾಗಿ ಅಂಡಲೆಯುತ್ತವೆ. ಮಿಲಿಯಾಂತರ ವರ್ಷಗಳ ಹಿಂದೆ ಚೂರುಚೂರಾದ ಗ್ರಹಗಳಿಂದ ಇವು ರೂಪುಗೊಂಡಿವೆ ಎಂದು ಖಗೋಳ ವಿಜ್ಞಾನಿಗಳು ಲೆಕ್ಕಾಚಾರ ಹಾಕಿದ್ದಾರೆ. ಕ್ಷುದ್ರಗ್ರಹಗಳು ಸಹ ಇತರ ಗ್ರಹಗಳಂತೆ ಸೂರ್ಯನ ಸುತ್ತ ಪರಿಭ್ರಮಿಸುತ್ತವೆ. ಆದರೆ ಗ್ರಹಗಳಂತೆ ಅವುಗಳಿಗೆ ನಿರ್ದಿಷ್ಟವಾದ ಕಕ್ಷೆ ಇಲ್ಲ. ನಿರ್ದಿಷ್ಟ ಕಕ್ಷೆ ಇಲ್ಲದಿರುವಿಕೆಯು ಅವುಗಳು ಅನ್ಯ ಗ್ರಹಗಳತ್ತ ಚಲಿಸುವಂತೆ ಮಾಡುತ್ತದೆ. ಈ ವೈಚಿತ್ರ್ಯ ಚಲನೆಯಿಂದಾಗಿ ಕೆಲವೊಮ್ಮೆ ಅವು ಭೂಮಿಯತ್ತ ಬರುವುದೂ ಉಂಟು. 1932ರಲ್ಲಿ ಅಪೊಲೋ, 1936ರಲ್ಲಿ ಅಡೋನಿನ್, 1937ರಲ್ಲಿ ಹರ್ಮಿಸ್, 1968ರಲ್ಲಿ ಇಕಾರಸ್, 1969ರಲ್ಲಿ ಇನ್ರೈಂದು ಮುಂತಾದ ಕ್ಷುದ್ರಗ್ರಹಗಳು ಭೂಮಿಯ ಸಮೀಪದಲ್ಲಿ ಹಾದು ಹೋಗಿವೆ. ಒಂದು ವೇಳೆ ಕ್ಷುದ್ರಗ್ರಹಗಳು ಭೂಮಿಯ ಗುರುತ್ವ ವಲಯವನ್ನು ಪ್ರವೇಶಿಸಿದರೆ ಅವು ಭೂಮಿಯೆಡೆಗೆ ಸೆಳೆಯಲ್ಪಟ್ಟು ವಾಯುಮಂಡಲದ ಘರ್ಷಣೆಯಿಂದ ಬಿಸಿಯಾಗಿ ಸುಟ್ಟು ಬೂದಿಯಾಗುತ್ತವೆ.
ಖಗೋಳ ವಿಜ್ಞಾನದ ಬೆಳವಣಿಗೆಯಾದಾಗಿನಿಂದಲೂ ಕ್ಷುದ್ರಗ್ರಹಗಳ ಕುರಿತ ಅಧ್ಯಯನ ಹೆಚ್ಚು ಮುನ್ನೆಲೆಗೆ ಬರತೊಡಗಿದೆ. ಏಕೆಂದರೆ ಇವುಗಳೂ ಗ್ರಹದ ಕೆಲ ಲಕ್ಷಣಗಳನ್ನು ಒಳಗೊಂಡಿರುವುದರಿಂದ ನಮ್ಮ ಸೌರವ್ಯೆಹ ರಚನೆಗೆ ಪೂರಕ ಮಾಹಿತಿಯನ್ನು ತಿಳಿಸಬಹುದು ಎಂಬ ಕಾತರ ವಿಜ್ಞಾನಿಗಳಲ್ಲಿ ಅಡಗಿದೆ. ಆ ಕಾರಣಕ್ಕಾಗಿ ಕೆಲ ಅಂತರ್‌ರಾಷ್ಟ್ರೀಯ ಖಗೋಳ ಸಂಸ್ಥೆಗಳು ಕ್ಷುದ್ರಗ್ರಹಗಳ ಅಧ್ಯಯನಕ್ಕೆ ಮುಂದಾಗಿವೆ.
ಪ್ರಸ್ತುತ ಒಸಿರಿಸ್-ರೆಕ್ಸ್ ಬಾಹ್ಯಾಕಾಶ ನೌಕೆಯು ಬೆನ್ನುವಿನ ಮಣ್ಣನ್ನು ಸಂಗ್ರಹಿಸಿ ತಂದಿರುವುದು ವಿಜ್ಞಾನಿಗಳಲ್ಲಿ ಕಾತುರತೆ ಹೆಚ್ಚಿಸಿದೆ. ಸೌರವ್ಯೆಹದ ಮೂಲವನ್ನು ಅಧ್ಯಯನ ಮಾಡಲು ಇದು ಅಭೂತಪೂರ್ವ ಅವಕಾಶವನ್ನು ನೀಡುತ್ತದೆ ಎಂಬುದು ಅವರ ಕಾತುರತೆಗೆ ಕಾರಣವಾಗಿದೆ. 4.6 ಶತಕೋಟಿ ವರ್ಷಗಳ ಹಿಂದೆ ಭೂಮಿಯು ರೂಪುಗೊಂಡ ಸಮಯದಲ್ಲಿ ಸೌರ ನೀಹಾರಿಕೆ ಹೇಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ತಿಳಿಯಲು ಅನೇಕ ವಿಜ್ಞಾನಿಗಳು ಕಾಯುತ್ತಿದ್ದಾರೆ.
ಬೆನ್ನುವಿನಿಂದ ಸಂಗ್ರಹಿಸಿದ ಮಾದರಿಗಳು ವಿಶ್ವಾದ್ಯಂತ ವಿಜ್ಞಾನಿಗಳಿಗೆ ಗ್ರಹ ರಚನೆ ಮತ್ತು ಭೂಮಿಯ ಮೇಲಿನ ಜೀವಕ್ಕೆ ಕಾರಣವಾದ ಜೀವಿಗಳು ಮತ್ತು ನೀರಿನ ಮೂಲವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಆವಿಷ್ಕಾರಗಳನ್ನು ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಮೂಲಕ ಜೀವಿಗಳ ರಕ್ಷಣೆಗೆ ಸಹಾಯ ಮಾಡುತ್ತದೆ.
ಬೆನ್ನುವಿನ ಮಾದರಿಗಳನ್ನು ಅಧ್ಯಯನ ಮಾಡುವುದರಿಂದ ಗ್ರಹದ ರಚನೆ, ಜೀವಿಗಳ ಮೂಲ ಮತ್ತು ಭೂಮಿಯ ಮೇಲಿನ ಜೀವಕ್ಕೆ ಕಾರಣವಾದ ನೀರಿನ ಬಗ್ಗೆ ಹೆಚ್ಚಿನ ತಿಳುವಳಿಕೆಗೆ ಕಾರಣವಾಗುತ್ತದೆ ಎಂದು ನಾಸಾ ವಿಜ್ಞಾನಿಗಳು ನಂಬಿದ್ದಾರೆ. ಬೆನ್ನು ತಾಂತ್ರಿಕವಾಗಿ ಭೂಮಿ ದಾಟುವ ಕಕ್ಷೆಯಲ್ಲಿದೆ. ಅಂದರೆ ಅದು ಕೇವಲ ಕ್ಷುದ್ರಗ್ರಹ ಪಟ್ಟಿಯಲ್ಲಿಯೇ ಉಳಿಯುವುದಿಲ್ಲ. ಈಗಾಗಲೇ ಅದರ ಕಕ್ಷೆಯು ಭೂಮಿಯತ್ತ ಮುಖ ಮಾಡಿದೆ. ಹೀಗಾಗಿ ಅದು ಭೂಮಿಯತ್ತ ಬರುವುದು ಖಚಿತವಾಗಿದೆ ಎಂದು ನಾಸಾದ ವಿಜ್ಞಾನಿ ಮೆಕ್‌ಕ್ಲಿಯರಿ ಹೇಳುತ್ತಾರೆ.
ಬೆನ್ನುವಿನ ಮಣ್ಣಿನ ಬೆನ್ನುಹತ್ತಲು ಕೆಲವು ಕಾರಣಗಳೂ ಇವೆ. ಅದೇನೆಂದರೆ ಮೊದಲನೆಯದಾಗಿ, ಬೆನ್ನು ಇಂಗಾಲ ಸಮೃದ್ಧ ಕ್ಷುದ್ರಗ್ರಹವಾಗಿದೆ. ಅದರ ಮೇಲ್ಮೈಯಿಂದ ಸಂಗ್ರಹಿಸಲಾದ ಕಲ್ಲುಮಣ್ಣುಗಳು ಬಹಳಷ್ಟು ಇಂಗಾಲದ ಅಂಶದಿಂದ ತುಂಬಿದ ವಸ್ತುವನ್ನು ಹೊಂದಿರುತ್ತದೆ. ದ್ರವ್ಯರಾಶಿ ದೃಷ್ಟಿಯಿಂದ ಶೇ.5-10ರಷ್ಟು ಸಮೀಪದಲ್ಲಿವೆ. ಎರಡನೆಯದಾಗಿ, ಮಾದರಿಯು ಕೆಲವು ಮಿಲಿಮೀಟರ್ ಗಾತ್ರದ ಚಿಕ್ಕ ಗಾತ್ರದ ಕಲ್ಲಿನ ಧೂಳುಗಳಾಗಿರಬಹುದು. ಮೂರನೆಯದಾಗಿ, ಅದರ ಕಾರ್ಬೊನೇಸಿಯಸ್ ರೂಪದ ಕಾರಣದಿಂದ ಮಾದರಿಯು ತುಂಬಾ ಗಾಢವಾಗಿ, ಬಹುತೇಕ ಕಪ್ಪು ಮತ್ತು ಪುಡಿಪುಡಿಯಾಗಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ನಾಲ್ಕನೆಯದಾಗಿ ಒಂದು ಸಿದ್ಧಾಂತದ ಪ್ರಕಾರ, ಪ್ರಮುಖ ರಾಸಾಯನಿಕ ಸಂಯುಕ್ತಗಳಿಂದ ತುಂಬಿದ ಕ್ಷುದ್ರಗ್ರಹಗಳ ಪ್ರಭಾವದಿಂದಾಗಿ ಭೂಮಿಯ ಮೇಲಿನ ಜೀವನವು ಪ್ರಾರಂಭವಾಯಿತು. ಅದನ್ನು ಅನುಸರಿಸಿ, ಬೆನ್ನುನ ಮಾದರಿಯು ಪ್ರೊಟೀನ್‌ಗಳ ನಿರ್ಮಾಣ ಘಟಕಗಳಾದ ಅಮೈನೋ ಆಮ್ಲಗಳ ಸಂಯುಕ್ತಗಳಂತಹ ಆಕರ್ಷಕ ಸಾವಯವ ಅಣುಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಐದನೆಯದಾಗಿ ಮಾದರಿಯು ಬೆನ್ನುವಿನಲ್ಲಿ ಇರುವ ನೀರಿನ ಪುರಾವೆಯನ್ನು ವಿವಿಧ ರೂಪಗಳಲ್ಲಿ ತೋರಿಸುತ್ತದೆ. ಆರಂಭಿಕ ಭೂಮಿಯ ಮೇಲಿನ ಘರ್ಷಣೆಯ ಸಮಯದಲ್ಲಿ ಕ್ಷುದ್ರಗ್ರಹಗಳು ಭೂಮಿಗೆ ನೀರನ್ನು ತಂದಿವೆಯೇ ಎಂದು ಕಂಡುಹಿಡಿಯಲು ವಿಜ್ಞಾನಿಗಳನ್ನು ಇದು ಶಕ್ತಗೊಳಿಸುತ್ತದೆ.
ನಾವು ಈಗ ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಆದರೂ ಸಾಧಿಸಬೇಕಾದದ್ದು ಸಾಕಷ್ಟಿದೆ. ಮುಂದಿನ 50 ವರ್ಷಗಳಲ್ಲಿ ಮಹತ್ತರ ಸಾಧನೆಗಳಾಗುವ ಸಾಧ್ಯತೆಗಳಿವೆ. ಈ ಸಾಧನೆಗಳು ನಮ್ಮ ಭವಿಷ್ಯದ ಮೈಲಿಗಲ್ಲುಗಳಾಗಬಹುದು. ಇಂತಹ ಸಾಧನೆಗಳಿಂದ ಕ್ಷುದ್ರಗ್ರಹಗಳಂತಹ ಅಂತರಿಕ್ಷದ ಅತಿಥಿಗಳ ಬಗ್ಗೆ ಸವಿವರವಾದ ಮಾಹಿತಿ ತಿಳಿಯಲು ಸಾಧ್ಯವಾಗುತ್ತದೆ ಎಂಬುದು ಎಲ್ಲರ ಆಶಯವಾಗಿದೆ. ಪ್ರಸಕ್ತ ಬೆನ್ನುವಿನಿಂದ ಸಂಗ್ರಹಿಸಿದ ಮಣ್ಣಿನ ಮಾದರಿಗಳು ಭೂಮಿಯ ಕಡೆಗೆ ಬರಬಹುದಾದ ಸಂಭಾವ್ಯ ಕ್ಷುದ್ರಗ್ರಹಗಳ ಪ್ರಕಾರಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆಯೇ ಕಾದು ನೋಡಬೇಕಿದೆ.