ಶೌಚಾಲಯದ ಮಹತ್ವ ಸಾರಿದ ಟಾಯ್ಲೆಟ್ ಮ್ಯಾನ್
ಇಂದು ವಿಶ್ವ ಶೌಚಾಲಯ ಜಾಗೃತಿ ದಿನ
ನಾವಿಂದು ಯಾವುದೇ ಪಟ್ಟಣ ಅಥವಾ ನಗರಕ್ಕೆ ಹೋದಾಗ ಬಸ್ ನಿಲ್ದಾಣ/ರೈಲು ನಿಲ್ದಾಣದಲ್ಲಿ ಕಾಣುವ ಸಾರ್ವತ್ರಿಕ ಸ್ಥಳವೆಂದರೆ ‘ಸುಲಭ ಶೌಚಾಲಯ’. ಸುಲಭ ಶೌಚಾಲಯದ ಪರಿಕಲ್ಪನೆ ಭಾರತದಲ್ಲಿ ಜಾರಿಗೆ ಬಂದದ್ದು 1970ರ ದಶಕದಲ್ಲಿ. ಡಾ. ಬಿಂದೇಶ್ವರ್ ಪಾಠಕ್ ಅವರು ಮೊದಲು ಈ ಪರಿಕಲ್ಪನೆಯನ್ನು ಜಾರಿಗೆ ತಂದರು. ಡಾ. ಬಿಂದೇಶ್ವರ್ ಪಾಠಕ್ ಅವರು ಬಿಹಾರದ ವೈಶಾಲಿ ಜಿಲ್ಲೆಯ ರಾಮ್‌ಪುರ ಬಾಘೇಲ್ ಗ್ರಾಮದವರು. ಪಾಠಕ್ ಅವರು ಒಬ್ಬ ದೂರದೃಷ್ಟಿಯ ಸಮಾಜಶಾಸ್ತ್ರಜ್ಞ ಮತ್ತು ಸಾಮಾಜಿಕ ಉದ್ಯಮಿಯಾಗಿದ್ದರು. ಭಾರತ ಮತ್ತು ಇತರ ದೇಶಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಲು ‘ಸುಲಭ್ ಇಂಟರ್‌ನ್ಯಾಶನಲ್’ ಸಂಸ್ಥೆಯನ್ನು ಸ್ಥಾಪಿಸಿದರು.
ಮಹಾತ್ಮಾ ಗಾಂಧಿಯವರ ವಿಚಾರಗಳಿಂದ ಪ್ರೇರಿತರಾಗಿದ್ದ ಪಾಠಕ್ ಅವರು ಸುಲಭ ಶೌಚಾಲಯ ಎಂಬ ನವೀನ ಮತ್ತು ಕಡಿಮೆ ವೆಚ್ಚದ ಶೌಚಾಲಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಅದುವರೆಗೂ ಚಾಲ್ತಿಯಲ್ಲಿದ್ದ ಕೈಗಳಿಂದ ಸ್ವಚ್ಛಗೊಳಿಸುವ ಅಂದರೆ ಕೈಗಳಿಂದ ಗುಂಡಿಯಲ್ಲಿನ ಮಲವನ್ನು ಎತ್ತಿ ಹಾಕುವ ವ್ಯವಸ್ಥೆಯ ಬದಲು ಸ್ವಯಂಚಾಲಿತವಾಗಿ ಗುಂಡಿಯಲ್ಲಿ ಮಲ ಸಂಗ್ರಹವಾಗುವ ವ್ಯವಸ್ಥೆ ಅಭಿವೃದ್ಧಿಗೊಳಿಸಿದರು. ಹೀಗೆ ಸಂಗ್ರಹವಾದ ಮಲವನ್ನು ಗುಂಡಿಯಲ್ಲಿಯೇ ಒಣಗಿಸಲು ಪರ್ಯಾಯ ಗುಂಡಿ ವ್ಯವಸ್ಥೆಯನ್ನು ಅಂದರೆ ಜೋಡಿ ಗುಂಡಿ ವ್ಯವಸ್ಥೆಯನ್ನು ಪಾಠಕ್ ಅಭಿವೃದ್ಧಿಗೊಳಿಸಿದರು. ಒಂದು ಗುಂಡಿ ತುಂಬಿದ ನಂತರ ಅದನ್ನು ಮುಚ್ಚಿ ಇನ್ನೊಂದು ಗುಂಡಿಗೆ ಮಲವನ್ನು ಹರಿಸುವ ವ್ಯವಸ್ಥೆ ಜಾರಿಗೆ ತಂದರು. ಇದು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹೆಚ್ಚು ಪ್ರಸಿದ್ಧಿ ಪಡೆಯಿತು. ಅದಕ್ಕಿಂತ ಮುಖ್ಯವಾಗಿ ಶೌಚಗುಂಡಿ ಸ್ವಚ್ಛಗೊಳಿಸಬೇಕಾಗಿದ್ದ ಬಹುತೇಕ ಕುಟುಂಬಗಳ ಪಾಲಿಗೆ ಈ ವ್ಯವಸ್ಥೆ ವರವಾಗಿ ಪರಿಣಮಿಸಿತು.
ಬಿಂದೇಶ್ವರ್ ಪಾಠಕ್ ಅವರು ರೂಪಿಸಿದ ನವೀನ ಶೌಚಾಲಯ ವ್ಯವಸ್ಥೆಯು ಸುಲಭ್ ಇಂಟರ್‌ನ್ಯಾಷನಲ್ ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು. ಈ ಸಂಸ್ಥೆಯು ಇಂದು ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ತನ್ನ ಸೇವಾವಲಯವನ್ನು ವಿಸ್ತರಿಸಿದೆ. ಮುಖ್ಯವಾಗಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ನೇಪಾಳ, ಇಥಿಯೋಪಿಯಾ, ಘಾನಾ, ಮಡಗಾಸ್ಕರ್, ಮೊಜಾಂಬಿಕ್, ನೈಜೀರಿಯಾ, ದಕ್ಷಿಣ ಆಫ್ರಿಕಾ ಮತ್ತು ಜಾಂಬಿಯಾ ಮುಂತಾದ ಇತರ ದೇಶಗಳಿಗೆ ವಿಸ್ತರಿಸಿದೆ.
ರೋಗಗಳನ್ನು ತಡೆಗಟ್ಟಲು ಮತ್ತು ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸ್ವಚ್ಛತೆ ಮತ್ತು ನೈರ್ಮಲ್ಯ ಅತ್ಯಗತ್ಯ. ಆದರೆ ಭಾರತದಲ್ಲಿ ಬಹುತೇಕ ಜನರು ಸುರಕ್ಷಿತ ನೈರ್ಮಲ್ಯ ಸೌಲಭ್ಯಗಳಿಗೆ ಪ್ರವೇಶವನ್ನು ಹೊಂದಿಲ್ಲ ಮತ್ತು ಬಯಲು ಮಲವಿಸರ್ಜನೆಯನ್ನು ಮಾಡುತ್ತಾರೆ, ಇದು ಅವರ ಆರೋಗ್ಯ ಮತ್ತು ಪರಿಸರಕ್ಕೆ ಗಂಭೀರ ಅಪಾಯವನ್ನು ಉಂಟುಮಾಡುತ್ತದೆ ಎಂಬುದನ್ನು ಗಮನಿಸಿದ ಪಾಠಕ್ ಅವರು ಪ್ರತೀ ಮನೆಗೂ ಸುಲಭ ಶೌಚಾಲಯ ವ್ಯವಸ್ಥೆಯನ್ನು ಪರಿಚಯಿಸಿದರು. 2004ರಲ್ಲಿ ಜಾರಿಗೆ ಬಂದ ‘ಸ್ವಚ್ಛ ಭಾರತ ಮಿಷನ್’ ಇವರ ಧ್ಯೇಯೋದ್ಧೇಶಗಳಿಗೆ ಪೂರಕವಾಗಿ ಕಾರ್ಯಾರಂಭ ಮಾಡಿತು.
ಬಿಂದೇಶ್ವರ್ ಪಾಠಕ್ ಅವರು ಶೌಚಾಲಯಗಳ ಬಳಕೆ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಭಾರತದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕಾಗಿ ಸಾಮೂಹಿಕ ಆಂದೋಲನವನ್ನು ಪ್ರಾರಂಭಿಸಿದರು. ಅವರು ತಮ್ಮ ಪ್ರಚಾರದಲ್ಲಿ ಭಾಗವಹಿಸಲು ಸಮುದಾಯಗಳು, ಸ್ಥಳೀಯ ಸರಕಾರಗಳು, ಎನ್‌ಜಿಒಗಳು, ಮಾಧ್ಯಮಗಳು, ಸೆಲೆಬ್ರಿಟಿಗಳು, ಧಾರ್ಮಿಕ ಮುಖಂಡರು ಮುಂತಾದವರನ್ನು ಸಜ್ಜುಗೊಳಿಸಿದರು.
ಡಾ. ಪಾಠಕ್ ಅವರು ನಗರ ಕೊಳೆಗೇರಿಗಳು, ಗ್ರಾಮೀಣ ಪ್ರದೇಶಗಳು, ಶಾಲೆಗಳು, ರೈಲು ನಿಲ್ದಾಣಗಳು, ಬಸ್ ಟರ್ಮಿನಲ್‌ಗಳು, ಮಾರುಕಟ್ಟೆಗಳು ಹೀಗೆ ಹೆಚ್ಚು ಜನ ಸಂದಣಿ ಇರುವ ಸ್ಥಳಗಳಲ್ಲಿ ವಿವಿಧ ಅಗತ್ಯತೆಗಳನ್ನು ಪೂರೈಸುವ ವಿವಿಧ ಮಾದರಿಯ ಸಾರ್ವಜನಿಕ ಶೌಚಾಲಯಗಳನ್ನು ಅಭಿವೃದ್ಧಿಪಡಿಸಿದರು. ಪಾಠಕ್ ಅವರ ಕೆಲಸವು ಭಾರತದಲ್ಲಿ ಲಕ್ಷಾಂತರ ಜನರ ಆರೋಗ್ಯ ಮತ್ತು ನೈರ್ಮಲ್ಯ ಅಭ್ಯಾಸಗಳನ್ನು ಸುಧಾರಿಸಿತು. ಬಯಲು ಶೌಚದಿಂದ ಹರಡುತ್ತಿದ್ದ ಅತಿಸಾರ, ಕಾಲರಾ, ಟೈಫಾಯಿಡ್ ಮುಂತಾದ ರೋಗಗಳ ಸಂಭವವನ್ನು ಕಡಿಮೆ ಮಾಡಿತು.
ಬಿಂದೇಶ್ವರ್ ಪಾಠಕ್ ಅವರು ಶೌಚಾಲಯ ವ್ಯವಸ್ಥೆಯನ್ನು ಜೈವಿಕ ಅನಿಲ ಸ್ಥಾವರಗಳಿಗೆ ಜೋಡಿಸುವ ಮಾರ್ಗವನ್ನು ಆವಿಷ್ಕರಿಸಿದರು. ಇದು ಮಾನವ ಮಲವಿಸರ್ಜನೆಯಿಂದ ಜೈವಿಕ ಅನಿಲ ಮತ್ತು ಜೈವಿಕ ಗೊಬ್ಬರವನ್ನು ಉತ್ಪಾದಿಸಬಹುದು ಎಂಬುದನ್ನು ತೋರಿಸಿತು. ಅವರು ಸ್ಥಳ ಮತ್ತು ಸಂಪನ್ಮೂಲಗಳ ಲಭ್ಯತೆಗೆ ಅನುಗುಣವಾಗಿ ಸ್ಥಿರ ಗುಮ್ಮಟ, ತೇಲುವ ಡ್ರಮ್, ಬಲೂನ್ ಮಾದರಿ ಮುಂತಾದ ವಿವಿಧ ರೀತಿಯ ಜೈವಿಕ ಅನಿಲ ಸ್ಥಾವರಗಳನ್ನು ವಿನ್ಯಾಸಗೊಳಿಸಿದರು ಮತ್ತು ಸ್ಥಾಪಿಸಿದರು. ಜೈವಿಕ ಅನಿಲದ ಬಳಕೆಯಿಂದ ಬೆಳಕು ಮತ್ತು ವಿದ್ಯುತ್ ಉತ್ಪಾದನೆಯನ್ನು ಪ್ರದರ್ಶಿಸಿದರು. ಮನೆಗಳು, ಸಂಸ್ಥೆಗಳು ಮತ್ತು ಕೈಗಾರಿಕೆಗಳು ಜೈವಿಕ ಅನಿಲ ಘಟಕ ಅಳವಡಿಕೆಯನ್ನು ಉತ್ತೇಜಿಸಿದರು. ಮಣ್ಣಿನ ಫಲವತ್ತತೆ ಮತ್ತು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು ಜೈವಿಕ ಗೊಬ್ಬರದ ಬಳಕೆಯನ್ನು ಅವರು ಪ್ರತಿಪಾದಿಸಿದರು. ಡಾ. ಪಾಠಕ್ ಅವರ ಕೆಲಸವು ತ್ಯಾಜ್ಯವನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುವಲ್ಲಿ ಸಹಾಯ ಮಾಡಿತು. ಇದು ಶಕ್ತಿ ಮತ್ತು ರಸಗೊಬ್ಬರದ ಸಾಂಪ್ರದಾಯಿಕ ಮೂಲಗಳಿಗೆ ಶುದ್ಧ ಮತ್ತು ಸಮರ್ಥನೀಯ ಪರ್ಯಾಯವನ್ನು ಒದಗಿಸುತ್ತದೆ.
ಪಾಠಕ್ ಅವರ ಶೌಚಾಲಯ ತಂತ್ರಜ್ಞಾನವು ಜೈವಿಕ ಅನಿಲ ಸ್ಥಾವರಗಳನ್ನು ಸ್ಥಾಪಿಸುವ ಮೂಲಕ ದ್ರವ ಮತ್ತು ಘನ ತ್ಯಾಜ್ಯ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಬಹುದೆಂದು ತೋರಿಸಿತು. ಪಾಠಕ್ ಅವರು ಸಾರ್ವಜನಿಕ ಶೌಚಾಲಯಗಳು ಮತ್ತು ಇತರ ಮೂಲಗಳಿಂದ ಸಂಗ್ರಹಿಸಿದ ಘನತ್ಯಾಜ್ಯದಿಂದ ಜೈವಿಕ ಅನಿಲ ಮತ್ತು ಜೈವಿಕ ಗೊಬ್ಬರವಾಗಿ ಪರಿವರ್ತಿಸುವ ವ್ಯವಸ್ಥೆಯನ್ನು ಸಹ ರೂಪಿಸಿದರು. ಉಳಿದ ಘನತ್ಯಾಜ್ಯವನ್ನು ಮತ್ತಷ್ಟು ಮಿಶ್ರಗೊಬ್ಬರ ಅಥವಾ ವರ್ಮಿಕಾಂಪೋಸ್ಟ್ ಆಗಿ ಸಂಸ್ಕರಿಸಬಹುದು ಅಥವಾ ಇಟ್ಟಿಗೆಗಳು ಅಥವಾ ಹೆಂಚುಗಳನ್ನು ತಯಾರಿಸಲು ಬಳಸಬಹುದು ಎಂಬುದನ್ನು ತೋರಿಸಿಕೊಟ್ಟರು.
ಪಾಠಕ್ ಅವರು ತಮ್ಮ ವಿವಿಧ ಉಪಕ್ರಮಗಳ ಮೂಲಕ ವಿವಿಧ ಧರ್ಮಗಳು, ಜಾತಿಗಳು, ಸಂಸ್ಕೃತಿಗಳು ಮತ್ತು ಪ್ರದೇಶಗಳ ಜನರಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸಿದರು. ಅವರು ರೂಪಿಸಿದ ಶೌಚಾಲಯ ವ್ಯವಸ್ಥೆಗಳು, ಜೈವಿಕ ಅನಿಲ ಸ್ಥಾವರಗಳು, ಸಾರ್ವಜನಿಕ ಸ್ನಾನಗೃಹಗಳು ಮುಂತಾದ ಸೇವೆಗಳು ಜನರಲ್ಲಿ ಸಹೋದರತೆ ಮತ್ತು ಒಗ್ಗಟ್ಟಿನ ಮನೋಭಾವವನ್ನು ಬೆಳೆಸಿದವು. ಅವರು ‘ಟಾಯ್ಲೆಟ್ ಮ್ಯಾನ್ ಆಫ್ ಇಂಡಿಯಾ’ ಎಂದೇ ಖ್ಯಾತಿ ಗಳಿಸಿದರು.
ಡಾ. ಬಿಂದೇಶ್ವರ್ ಪಾಠಕ್ ದೂರದೃಷ್ಟಿಯ ಸಮಾಜಶಾಸ್ತ್ರಜ್ಞ ಮತ್ತು ಸಾಮಾಜಿಕ ಬದಲಾವಣೆಯ ಹರಿಕಾರರಾಗಿ, ಅದರಲ್ಲೂ ಮುಖ್ಯವಾಗಿ ಶೌಚಾಲಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣರಾದರು. ಅವರು ರೂಪಿಸಿದ ಶೌಚಾಲಯ ವ್ಯವಸ್ಥೆಯಿಂದ ಇಂದು ಲಕ್ಷಾಂತರ ಮಹಿಳೆಯರು ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗಿದೆ. ಮಹಿಳೆಯರು ಕತ್ತಲೆಯಲ್ಲಿಯೇ ಶೌಚಕ್ಕೆ ಹೋಗಿ ತಮ್ಮ ಜೀವನವನ್ನು ತೊಂದರೆಗೆ ಒಡ್ಡಿಕೊಳ್ಳಬೇಕಿದ್ದ ಪರಿಸ್ಥಿತಿ ಇಂದು ಬದಲಾಗಿದೆ. ಪಾಠಕ್ ಅವರು ರೂಪಿಸಿದ ಶೌಚಾಲಯ ವ್ಯವಸ್ಥೆಯು ಮಹಿಳೆಯರು ಅಪರಾಧ, ಹಾವು ಕಡಿತ ಮತ್ತು ಪ್ರಾಣಿಗಳ ದಾಳಿಗೆ ಒಡ್ಡಿಕೊಳ್ಳುವ ಅಪಾಯಗಳನ್ನು ತಪ್ಪಿಸಿತು. ಇದರಿಂದ ಮಹಿಳೆಯರು ಮತ್ತು ಮಕ್ಕಳು ಆರೋಗ್ಯಯುತ ಹಾಗೂ ನೆಮ್ಮದಿ ಜೀವನ ನಡೆಸಲು ಪಾಠಕ್ ಅವರು ಕಾರಣೀಭೂತರಾಗಿದ್ದಾರೆ ಎಂದರೆ ಉತ್ಪ್ರೇಕ್ಷೆಯಲ್ಲ. ಇಂತಹ ಮಹಾನ್ ಸೇವಕ ಆಗಸ್ಟ್ 15, 2023ರಂದು 80ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನಿಧನರಾದರು. ರಾಜ್ಯ, ರಾಷ್ಟ್ರ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಆದರೂ ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಶೌಚ ಜೀವಂತವಾಗಿದೆ. ಸರಕಾರಗಳು ಕಟ್ಟಿಸಿದ ಶೌಚಗೃಹಗಳು ಶೌಚ ಹೊರತುಪಡಿಸಿ ಬೇರೆ ಚಟುವಟಿಕೆಗಳಿಗೆ ಬಳಕೆಯಾಗುತ್ತಿವೆ. ಬಯಲು ಶೌಚದಿಂದ ಅನಾರೋಗ್ಯ ವಾತಾವರಣ ಉಂಟಾಗುತ್ತದೆ ಎಂಬ ಅರಿವು ಇನ್ನೂ ಮೂಡುತ್ತಿಲ್ಲ. ಪ್ರತೀ ಗ್ರಾಮ ಪಂಚಾಯತ್‌ಗಳು ಶಕ್ತಿ ಮೀರಿ ಶೌಚಾಲಯಗಳನ್ನು ನಿರ್ಮಿಸಿದವು. ಆದರೆ ಅವುಗಳ ಮೇಲುಸ್ತುವಾರಿ ಮಾಡುವಲ್ಲಿ ಹಾಗೂ ಬಳಕೆಯ ಖಾತ್ರಿ ಮಾಡುವಲ್ಲಿ ಸೋತವು.
ಬಯಲು ಶೌಚವು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಬಹಳ ಮುಖ್ಯವಾಗಿ ಬಯಲು ಶೌಚದಿಂದ ತೆರೆದ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಬಯಲು ಶೌಚದಿಂದ ಇನ್ನಷ್ಟು ಬ್ಯಾಕ್ಟೀರಿಯಾಗಳು ಮತ್ತು ರೋಗಾಣುಗಳು ಒಬ್ಬರಿಂದ ಇತರರಿಗೆ ಸುಲಭವಾಗಿ ಹರಡುತ್ತವೆ. ಇದರಿಂದ ಕಾಲರಾ, ಟೈಫಾಯಿಡ್, ಆಮಶಂಕೆಯಂತಹ ರೋಗಗಳು ಉಲ್ಬಣಗೊಳ್ಳುತ್ತವೆ. ಇವುಗಳನ್ನು ವಾಸಿ ಮಾಡಿಕೊಳ್ಳಲು ಹೆಚ್ಚು ಹಣ ವ್ಯಯ ಮಾಡಬೇಕಾಗುತ್ತದೆ. ಅಲ್ಲದೆ ಬಯಲು ಮಲವಿಸರ್ಜನೆಯು ಮಕ್ಕಳ ಅಪೌಷ್ಟಿಕತೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಶೌಚಾಲಯಗಳ ಬಳಕೆ ಅನಿವಾರ್ಯ. ವಿಶ್ವ ಶೌಚಾಲಯ ದಿನದ ಈ ನೆನಪಿನಲ್ಲಿ ಶೌಚಾಲಯ ಬಳಕೆಯನ್ನು ಉತ್ತೇಜಿಸೋಣ ಮತ್ತು ಬಳಸೋಣ.