ಮರೆತುಹೋಯಿತೇ ಮಣ್ಣಿನ ಮೊರೆತ!
ಮಾನವ ಇಂದು ಎಲ್ಲಾ ಕ್ಷೇತ್ರಗಳಲ್ಲೂ ವಿಕಾಸ ಹೊಂದುತ್ತಾ ಸಾಗಿದ್ದಾನೆ. ವಿಕಾಸದ ವಿಷಯದಲ್ಲಿ ಮಾನವ ನಿರ್ಮಿತ ಶಬ್ದವು ಇತ್ತೀಚಿನ ವಿದ್ಯಮಾನವಾಗಿದೆ. ಇಂದು ಎಲ್ಲೆಡೆ ವಿವಿಧ ರೀತಿಯ ಶಬ್ದ ಸದ್ದು ಮಾಡುತ್ತಲೇ ಇದೆ. ಪಟಾಕಿ ಶಬ್ದದಿಂದ ಹಿಡಿದು, ಅಣುಬಾಂಬಿನವರೆಗೆ, ಸೈಕಲ್ ಶಬ್ದದಿಂದ ವಿಮಾನದವರೆಗೆ, ಕಸಬರಿಕೆಯಿಂದ ಕುಕರ್ ವಿಶಲ್‌ವರೆಗೆ, ಶಾಲಾ ಬೆಲ್‌ನಿಂದ ಕಾರ್ಖಾನೆ ಸೈರನ್‌ವರೆಗೆ ಅನೇಕ ರೀತಿಯ ಶಬ್ದಗಳು ನಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ. ಶಬ್ದ ಕೇಳದ ಸನ್ನಿವೇಶವಿಲ್ಲ ಎಂದರೆ ತಪ್ಪಿಲ್ಲ. ದಿನದ ಇಪ್ಪತ್ತನಾಲ್ಕು ಗಂಟೆಯಲ್ಲೂ ವಿವಿಧ ಶಬ್ದಗಳನ್ನು ಕೇಳುತ್ತೇವೆ. ರಾತ್ರಿ ಮಲಗಿದಾಗಲೂ ಸಹ ಅನೇಕ ಕ್ರಿಮಿ ಕೀಟಗಳ ಸದ್ದು ಕೇಳುತ್ತಲೇ ಇರುತ್ತದೆ. ಆದರೆ ನಮ್ಮ ಭವಿಷ್ಯಕ್ಕೆ ಯಾವುದು ಮುಖ್ಯವೋ ಅದರ ಶಬ್ದ ಮಾತ್ರ ಕೇಳುತ್ತಲೇ ಇಲ್ಲ.
ಭೂಗ್ರಹದ ಕಾಲು ಭಾಗವನ್ನು ಆವರಿಸಿದ ನೆಲದ ಧ್ವನಿಯು ನಮಗಿಂದು ಕೇಳದಾಗಿದೆ. ಅದರಲ್ಲೂ ಮುಖ್ಯವಾಗಿ ನೆಲದ ಮೇಲು ಹೊದಿಕೆಯನ್ನು ಆವರಿಸಿದ ಮಣ್ಣಿನ ಧ್ವನಿಯು ನಮಗಿಂದು ಕೇಳದಾಗಿದೆ. ವಿವಿಧ ಕಾರಣಗಳಿಗಾಗಿ ಮಣ್ಣನ್ನು ನಿತ್ಯವೂ ಬಳಸುತ್ತೇವೆ. ಆದರೆ ಅದರ ಆರ್ತನಾದ ಮಾತ್ರ ನಮ್ಮ ಕಿವಿಗೆ ಕೇಳದಾಗಿದೆ ಅಥವಾ ನಾವು ಜಾಣ ಕಿವುಡರಾಗಿದ್ದೇವೆ. ಮಣ್ಣಿನ ಮೊರೆತವನ್ನು ಆಲಿಸಲಾರದಷ್ಟು ಸೋಮಾರಿಗಳಾಗಿದ್ದೇವೆ. ಭವಿಷ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ.
ಎಲ್ಲಾ ಶಬ್ದವನ್ನು ಕೇಳಿದ ನಾವು ಮಣ್ಣು ಶಬ್ದವನ್ನು ಉಂಟು ಮಾಡುತ್ತದೆಯೇ? ಎಂದು ಕೇಳುವ ಸಂದರ್ಭವೇ ಹೆಚ್ಚು. ಏಕೆಂದರೆ ಬಹುತೇಕರು ಮಣ್ಣಿನ ಶಬ್ದವನ್ನು ಇದುವರೆಗೂ ಆಲಿಸಿಲ್ಲ. ಆದರೆ ಆಸ್ಟ್ರೇಲಿಯದ ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದ ಪರಿಸರಶಾಸ್ತ್ರಜ್ಞರು ಮಣ್ಣಿನ ಶಬ್ದವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದಲ್ಲಿನ ಪರಿಸರ-ಅಕೌಸ್ಟಿಕ್ ಅಧ್ಯಯನಗಳು ಆರೋಗ್ಯಕರ ಮಣ್ಣು ಹೆಚ್ಚು ಸಂಕೀರ್ಣವಾದ ಧ್ವನಿದೃಶ್ಯಗಳನ್ನು ಹೊಂದಿವೆ ಎಂದು ಸೂಚಿಸುತ್ತದೆ. ಈ ಅಧ್ಯಯನವು ಪರಿಸರ ಮರುಸ್ಥಾಪನೆಗಾಗಿ ಒಂದು ಹೊಸ ಸಾಧನವನ್ನು ಸೂಚಿಸುತ್ತದೆ.
ಅಕೌಸ್ಟಿಕ್ ಪರಿಸರ ವಿಜ್ಞಾನವನ್ನು ಕೆಲವೊಮ್ಮೆ ಇಕೋಕೌಸ್ಟಿಕ್ಸ್ ಅಥವಾ ಸೌಂಡ್‌ಸ್ಕೇಪ್ ಸ್ಟಡೀಸ್ ಎಂದು ಕರೆಯಲಾಗುತ್ತದೆ. ಇದು ಮಾನವರು ಮತ್ತು ಪರಿಸರದ ನಡುವಿನ ಸಂಬಂಧವನ್ನು ಧ್ವನಿಯ ಮೂಲಕ ಅಧ್ಯಯನ ಮಾಡುವ ಒಂದು ವಿಭಾಗವಾಗಿದೆ. ಅಕೌಸ್ಟಿಕ್ ಪರಿಸರ ವಿಜ್ಞಾನದ ಅಧ್ಯಯನಗಳನ್ನು 1960ರ ದಶಕದ ಉತ್ತರಾರ್ಧದಲ್ಲಿ ಸಂಗೀತಗಾರ, ಸಂಯೋಜಕ ಮತ್ತು ಸೈಮನ್ ಫ್ರೇಸರ್ ವಿಶ್ವವಿದ್ಯಾನಿಲಯದಲ್ಲಿ (ವ್ಯಾಂಕೋವರ್, ಬ್ರಿಟಿಷ್ ಕೊಲಂಬಿಯಾ, ಕೆನಡಾ) ಸಂವಹನ ಅಧ್ಯಯನದ ಮಾಜಿ ಪ್ರಾಧ್ಯಾಪಕ ಆರ್. ಮುರ್ರೆ ಸ್ಕಾಫರ್ ಅವರು ಪ್ರಾರಂಭಿಸಿದರು.
ಸೌಂಡ್‌ಸ್ಕೇಪ್ ಪ್ರಾಜೆಕ್ಟ್ ಮೂಲ ತಂಡವು ಬ್ಯಾರಿ ಟ್ರುಯಾಕ್ಸ್ ಮತ್ತು ಹಿಲ್ಡೆಗಾರ್ಡ್ ವೆಸ್ಟರ್‌ಕ್ಯಾಂಪ್, ಬ್ರೂಸ್ ಡೇವಿಸ್ ಮತ್ತು ಪೀಟರ್ ಹ್ಯೂಸ್, ಇತರರನ್ನು ಒಳಗೊಂಡಿತ್ತು. ತಂಡವು ನಿರ್ಮಿಸಿದ ಮೊದಲ ಅಧ್ಯಯನವನ್ನು ‘ದಿ ವ್ಯಾಂಕೋವರ್ ಸೌಂಡ್‌ಸ್ಕೇಪ್’ ಎಂದು ಹೆಸರಿಸಲಾಯಿತು. ಈ ನವೀನ ಅಧ್ಯಯನವು ವಿಶ್ವದಾ ದ್ಯಂತ ಸಂಶೋಧಕರು ಮತ್ತು ಕಲಾವಿದರ ಆಸಕ್ತಿಯನ್ನು ಹೆಚ್ಚಿಸಿತು. ಅಕೌಸ್ಟಿಕ್ ಪರಿಸರ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಯನ್ನು ಸೃಷ್ಟಿಸಿತು. 1993ರಲ್ಲಿ ಸಕ್ರಿಯವಾಗಿರುವ ಅಂತರ್‌ರಾಷ್ಟ್ರೀಯ ಅಕೌಸ್ಟಿಕ್ ಪರಿಸರ ಸಮುದಾಯದ ಸದಸ್ಯರು ಅಕೌಸ್ಟಿಕ್ ಇಕಾಲಜಿಗಾಗಿ ವಿಶ್ವ ವೇದಿಕೆಯನ್ನು ರಚಿಸಿದರು.
ಅಕೌಸ್ಟಿಕ್ ಪರಿಸರ ವಿಜ್ಞಾನವು ಹವಾಮಾನದಲ್ಲಿನ ಬದಲಾವಣೆಗಳು ಅಥವಾ ಇತರ ಪರಿಸರ ಬದಲಾವಣೆಗಳ ಬಗ್ಗೆ ತಿಳುವಳಿಕೆ ನೀಡುತ್ತದೆ. ನಾವು ಪ್ರತಿದಿನ ಪಕ್ಷಿ, ಕಾರು, ವಿಮಾನ, ಗಾಳಿ, ನೀರು ಮುಂತಾದ ಶಬ್ದಗಳನ್ನು ಗುರುತಿಸುತ್ತೇವೆ. ಆದರೆ ನಾವು ಆ ಶಬ್ದಗಳನ್ನು ಒಂದು ನೆಟ್‌ವರ್ಕ್‌ನಂತೆ ಕೇಳುವುದಿಲ್ಲ. ಅಕೌಸ್ಟಿಕ್ಸ್ ಎನ್ನುವುದು ಭೌತಶಾಸ್ತ್ರದ ಒಂದು ಶಾಖೆಯಾಗಿದ್ದು ಅದು ಕಂಪನ, ಧ್ವನಿ, ಅಲ್ಟ್ರಾಸೌಂಡ್ ಮತ್ತು ಇನ್‌ಫ್ರಾಸೌಂಡ್‌ನಂತಹ ವಿಷಯಗಳನ್ನು ಒಳಗೊಂಡಂತೆ ಅನಿಲಗಳು, ದ್ರವಗಳು ಮತ್ತು ಘನವಸ್ತುಗಳಲ್ಲಿನ ಯಾಂತ್ರಿಕ ತರಂಗಗಳ ಅಧ್ಯಯನದೊಂದಿಗೆ ವ್ಯವಹರಿಸುತ್ತದೆ. ಅಕೌಸ್ಟಿಕ್ ಇಕಾಲಜಿ ಎಂಬುದು ಪರಿಸರ ವಿಜ್ಞಾನದ ಶಬ್ದಗಳ ಅಧ್ಯಯನದ ಜಾಲ ವ್ಯವಸ್ಥೆಯಾಗಿದೆ. ಅಕೌಸ್ಟಿಕ್ ಪರಿಸರ ವಿಜ್ಞಾನವು ಧ್ವನಿದೃಶ್ಯವನ್ನು ನಿರೂಪಿಸುವ ವಿವಿಧ ಕ್ಷೇತ್ರಗಳಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ. ಅಕೌಸ್ಟಿಕ್ ಪರಿಸರ ವಿಜ್ಞಾನವು ಬಯೋಫೋನಿ (ಪ್ರಾಣಿಗಳ ಮೂಲಗಳಿಂದ ಹೊರಹೊಮ್ಮುವ ಶಬ್ದಗಳ ಅಧ್ಯಯನ), ಜಿಯೋಫೋನಿ (ಭೂಮಿಯ ನೈಸರ್ಗಿಕ ಪ್ರಕ್ರಿಯೆಗಳಿಂದ ಹುಟ್ಟುವ ಶಬ್ದಗಳ ಅಧ್ಯಯನ) ಮತ್ತು ಆಂಥ್ರೋಫೋನಿ (ಮಾನವ ನಿರ್ಮಿತ ಮೂಲಗಳಿಂದ ಉಂಟಾದ ಶಬ್ದಗಳ ಅಧ್ಯಯನ) ಮೂಲಕ ನಡೆಯುತ್ತದೆ.
ನಿತ್ಯವೂ ಪರಿಸರದಲ್ಲಿ ಅನೇಕ ಶಬ್ದಗಳು ನಮ್ಮ ಕಿವಿಗೆ ಕೇಳುತ್ತವೆ. ಆದರೆ ಮಣ್ಣಿನಲ್ಲಿ ನಡೆಯುವ ಜೀವಜಾಲಗಳ ಶಬ್ದ ನಮಗೆ ಕೇಳುವುದಿಲ್ಲ. ಇಂತಹ ಶಬ್ದವನ್ನು ಕೇಳಿಸಿಕೊಳ್ಳುವಷ್ಟು ವ್ಯವಧಾನವೂ ನಮಗಿಲ್ಲದಾಗಿದೆ. ಏಕೆಂದರೆ ಆರೋಗ್ಯಕರ ಮಣ್ಣಿನ ಧ್ವನಿ ಮಾನವನ ಕಿವಿಗಳಿಗೆ ಕೇಳಿಸುವುದಿಲ್ಲ. ಅಲ್ಲದೆ ಅದನ್ನು ಕೇಳಲು ಅಗತ್ಯ ಸಾಧನಗಳು ಲಭ್ಯವಿಲ್ಲ ಎನ್ನುವುದು ನಮ್ಮ ಸಿದ್ಧ ಉತ್ತರವಾಗಿದೆ.
ನೈಸರ್ಗಿಕ ಪ್ರಪಂಚವು ನಮಗೆ ನೀಡುವ ಅನೇಕ ಶಬ್ದಗಳಿವೆ.ಅದನ್ನು ನಾವು ಕೇಳಲು ಅವಕಾಶವನ್ನು ಪಡೆಯುವುದಿಲ್ಲ ಅಥವಾ ನಾವು ಅವುಗಳನ್ನು ಕೇಳಲು ಸಾಧ್ಯವಾಗದಷ್ಟು ಶಾಂತವಾಗಿರುತ್ತವೆ. ಉದಾಹರಣೆಗೆ, ಇರುವೆಗಳು ತಮ್ಮ ಕಾಲುಗಳನ್ನು ಕೆರೆದುಕೊಳ್ಳುವ ಮೂಲಕ ಪರಸ್ಪರ ಸಂವಹನ ನಡೆಸುವ ಶಬ್ದವು ನಮ್ಮ ಜೀವಿತಾವಧಿಯಲ್ಲಿ ಕೇಳುವುದನ್ನು ಬಿಡಿ ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ.
ಸಾಯುತ್ತಿರುವ ಪೈನ್ ಕಾಡುಗಳಂತಹ ನೈಸರ್ಗಿಕ ವಿನಾಶವನ್ನು ನಾವು ಇಂದು ಎದುರಿಸುತ್ತಿರುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಂಶೋಧಕರು ಅಕೌಸ್ಟಿಕ್ ಪರಿಸರ ವಿಜ್ಞಾನವನ್ನು ಬಳಸುತ್ತಿದ್ದಾರೆ. ಕೆಲವು ದಶಕಗಳಿಂದ ಪಶ್ಚಿಮ ಅಮೆರಿಕದಾದ್ಯಂತ ಪೈನ್ ಮರಗಳು ತೊಗಟೆ ಜೀರುಂಡೆಗಳಿಂದ ನಿಧಾನವಾಗಿ ಕಡಿಮೆಯಾಗಿದೆ. ಜಾಗತಿಕ ತಾಪಮಾನ ಮತ್ತು ಹೆಚ್ಚಿದ ತಾಪಮಾನದಿಂದಾಗಿ ತೊಗಟೆ ಜೀರುಂಡೆಗಳ ಸಂಖ್ಯೆಯು ಹತ್ತು ಪಟ್ಟು ಹೆಚ್ಚಾಗಿದೆ.
ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದ ಪರಿಸರಶಾಸ್ತ್ರಜ್ಞರು ಅಸ್ತವ್ಯಸ್ತವಾಗಿರುವ ಸೌಂಡ್‌ಸ್ಕೇಪ್ ಮಿಶ್ರಣದ ವಿಶೇಷ ಧ್ವನಿಮುದ್ರಣಗಳನ್ನು ಮಾಡಿದ್ದಾರೆ. ಮಣ್ಣಿನ ಅಕೌಸ್ಟಿಕ್ಸ್ ಮಣ್ಣಿನಲ್ಲಿರುವ ಸಣ್ಣ ಜೀವಂತ ಪ್ರಾಣಿಗಳು ಉತ್ಪತ್ತಿ ಮಾಡುವ ವೈವಿಧ್ಯದ ಶಬ್ದಗಳ ಅಳತೆಯಾಗಿದೆ ಎಂದು ಅವರ ಸಂಶೋಧನೆಯು ತೋರಿಸುತ್ತದೆ. ಮಣ್ಣಿನಲ್ಲಿರುವ ಜೀವಂತ ಪ್ರಾಣಿಗಳು ಚಲಿಸುವಾಗ ಮತ್ತು ಅವು ಪರಿಸರದೊಂದಿಗೆ ಸಂವಹನ ನಡೆಸುವಾಗ ಶಬ್ದಗಳನ್ನು ರಚಿಸುತ್ತದೆ. ಈ ಶಬ್ದಗಳನ್ನು ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದ ಪರಿಸರಶಾಸ್ತ್ರಜ್ಞರು ರೆಕಾರ್ಡ್ ಮಾಡಿಕೊಂಡಿದ್ದಾರೆ.
ಪ್ರಪಂಚದ ಶೇ.75ರಷ್ಟು ಮಣ್ಣು ಹಾಳಾಗುತ್ತಿದೆ. ಇಲ್ಲಿ ಕೇವಲ ಮಣ್ಣು ಮಾತ್ರ ಹಾಳಾಗುತ್ತಿಲ್ಲ. ಮಣ್ಣಿನ ಭೂಗತದಲ್ಲಿ ವಾಸಿಸುವ ಜೀವಂತ ಜೀವಿಗಳ ಸಮುದಾಯದ ಭವಿಷ್ಯವೂ ಕಮರುತ್ತಿದೆ. ಅದನ್ನು ಮರುಸ್ಥಾಪಿಸುವ ಮೂಲಕ ಮಣ್ಣಿನ ಮೊರೆತವನ್ನು ಕೇಳಿಸಿಕೊಳ್ಳುವ ಅಗತ್ಯವಿದೆ. ಮಣ್ಣಿನ ಜೀವವೈವಿಧ್ಯವನ್ನು ಮರುಸ್ಥಾಪಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು ಮುಖ್ಯವಾಗಿದೆ. ಮಣ್ಣಿನ ಜೀವವೈವಿಧ್ಯವನ್ನು ಪತ್ತೆಹಚ್ಚಲು ಮತ್ತು ಮೇಲ್ವಿಚಾರಣೆ ಮಾಡಲು ‘ಪರಿಸರ-ಅಕೌಸ್ಟಿಕ್ಸ್’ ಒಂದು ಭರವಸೆಯ ಸಾಧನವಾಗಿ ಹೊರಹೊಮ್ಮುತ್ತಿದೆ. ಅಕೌಸ್ಟಿಕ್‌ನ ಸಂಕೀರ್ಣತೆ ಮತ್ತು ವೈವಿಧ್ಯವು ಮಣ್ಣಿನ ಜೀವಿಗಳ ಸಮೃದ್ಧಿ ಮತ್ತು ಶ್ರೀಮಂತಿಕೆಯೊಂದಿಗೆ ಅರ್ಥಮಾಡಿಕೊಳ್ಳಲು ಅನುಕೂಲವಾಗಿದೆ. ಅಕೌಸ್ಟಿಕ್ ಸಂಕೀರ್ಣತೆ ಮತ್ತು ಮಾದರಿಗಳ ವೈವಿಧ್ಯವು ಮಣ್ಣಿನ ಜೀವಿಗಳ ಸಮೃದ್ಧಿಯೊಂದಿಗೆ ಸಂಬಂಧಿಸಿದೆ. ಅಕೌಸ್ಟಿಕ್ ಇಕಾಲಜಿಯು ಮಣ್ಣಿನಲ್ಲಿರುವ ಎರೆಹುಳಗಳು, ಜೀರುಂಡೆಗಳು, ಇರುವೆಗಳು, ಜೇಡಗಳು ಮತ್ತು ಮಣ್ಣಿನ ಆರೋಗ್ಯದ ಸ್ಪಷ್ಟ ಪ್ರತಿಬಿಂಬವಾಗಿದೆ.
ನಮ್ಮ ಭೂಗ್ರಹದ ವೈವಿಧ್ಯಮಯ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಹೆಚ್ಚು ಪರಿಣಾಮಕಾರಿಯಾದ ಮಣ್ಣಿನ ಜೀವವೈವಿಧ್ಯದ ಮೇಲ್ವಿಚಾರಣಾ ವಿಧಾನಗಳ ಜಾಗತಿಕ ಅಗತ್ಯವನ್ನು ಪರಿಹರಿಸುವಲ್ಲಿ ಈ ತಂತ್ರಜ್ಞಾನವು ಭರವಸೆಯನ್ನು ಹೊಂದಿದೆ. ಇಂದು ನಮ್ಮ ಜಗತ್ತನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ವಿಭಿನ್ನ ಅಂಶಗಳನ್ನು ಅಂದರೆ ಪರಿಸರದ ವಿಭಿನ್ನ ಸಂಸ್ಕೃತಿಗಳು ಮತ್ತು ಜೀವ ಸಮುದಾಯಗಳನ್ನು ಅರ್ಥಮಾಡಿಕೊಳ್ಳಲು ಅಕೌಸ್ಟಿಕ್ ಇಕಾಲಜಿಯು ಅವಕಾಶ ನೀಡುತ್ತದೆ. ಮಣ್ಣಿನಲ್ಲಿರುವ ಜೀವಿಗಳ ಧ್ವನಿಗಳನ್ನು ಆಲಿಸುವ ಮೂಲಕ ಅಲ್ಲಿನ ಜೀವನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಾವು ತಿಳಿದಿರುವಂತೆ ಮಾನವರು ಮತ್ತು ನೈಸರ್ಗಿಕ ಪ್ರಪಂಚದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು, ಜನರು ಮತ್ತು ಜಗತ್ತು ಹೇಗೆ ಬದಲಾಗಿದೆ ಎಂಬುದರ ಕುರಿತು ಉತ್ತಮ ಒಳನೋಟವನ್ನು ಪಡೆಯಲು ಅಕೌಸ್ಟಿಕ್ ಇಕಾಲಜಿ ನಮಗೆ ಸಹಾಯ ಮಾಡುತ್ತದೆ. ಆ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚು ಜಾಗೃತಿಯನ್ನು ಮೂಡಿಸುತ್ತದೆ. ನಮಗಿಷ್ಟವಾದ ಹಾಡು ಅಥವಾ ಟ್ಯೂನನ್ನು ಪದೇ ಪದೇ ಆಲಿಸಿ ಆನಂದಿಸುವಂತೆ ಮಣ್ಣಿನಲ್ಲಿರುವ ಅಕೌಸ್ಟಿಕ್ ಧ್ವನಿಯನ್ನು ಆಲಿಸುವ ಮೂಲಕ ಭವಿಷ್ಯದ ಜೀವನವನ್ನು ಗಟ್ಟಿಗೊಳಿಸಬಹುದಾಗಿದೆ ಅಲ್ಲವೇ?