ಅಂತರಿಕ್ಷದ ಅಲೆಮಾರಿಗಳಲ್ಲಿ ಸಂಪನ್ಮೂಲಗಳ ಗಣಿಗಾರಿಕೆ
ಇಂದು ಅಂತರ್‌ರಾಷ್ಟ್ರೀಯ ಕ್ಷುದ್ರಗ್ರಹಗಳ ದಿನ
ಮೋಡಗಳಿಲ್ಲದ ರಾತ್ರಿ ಆಗಸ ನೋಡುವುದೇ ಒಂದು ಸೊಗಸು. ನಮ್ಮ ಸೌರವ್ಯೆಹದಲ್ಲಿ ಅನೇಕ ಕುತೂಹಲಕಾರಿ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ. ಹಗಲಿನಲ್ಲಿ ಸೂರ್ಯನ ಪ್ರಖರವಾದ ಬೆಳಕು ಇರುವುದರಿಂದ ಇಂತಹ ವಿದ್ಯಮಾನಗಳನ್ನು ನೋಡಲಾಗುವುದಿಲ್ಲ. ರಾತ್ರಿಯಾದರೆ ಇಂತಹ ಎಲ್ಲಾ ವಿದ್ಯಮಾನಗಳನ್ನು ಬರಿಗಣ್ಣಿನಿಂದ ನೋಡಬಹುದು. ಅವುಗಳ ಹಿಂದಿರುವ ವಿಜ್ಞಾನವನ್ನು ತಿಳಿಯಬಹುದು ಅಲ್ಲವೇ? ಈಗ ನಾವು ಅಂತರಿಕ್ಷದ ಅಲೆಮಾರಿಗಳು ಮತ್ತು ಅವುಗಳ ಸಂಪನ್ಮೂಲ ಗಣಿಗಾರಿಕೆ ಬಗ್ಗೆ ಒಂದಿಷ್ಟು ಚರ್ಚಿಸೋಣ.
ಅಂತರಿಕ್ಷದ ಅಡ್ಡದಿಡ್ಡಿಯಾಗಿ ಅಲೆದಾಡುವ ಕಲ್ಲುಗಳೇ ಅಂತರಿಕ್ಷದ ಅಲೆಮಾರಿಗಳು. ನಮ್ಮ ಅಂತರಿಕ್ಷದಲ್ಲಿ ತೇಲಾಡುವ ಸಾವಿರಾರು ಸಂಖ್ಯೆಯ ಕಲ್ಲುಗಳಿವೆ. ಈ ಕಲ್ಲುಗಳು ಭೂಮಿ ಮತ್ತು ಇನ್ನಿತರ ಗ್ರಹಗಳ ಸುತ್ತ ತಿರುಗುತ್ತಲೇ ಇವೆ. ಅವುಗಳಲ್ಲಿ ಕೆಲವು ಕಲ್ಲುಗಳು ಭೂಮಿಯ ಮೇಲೆ ಬೀಳುತ್ತವೆ. ಹೀಗೆ ಬಿದ್ದ ಬಾಹ್ಯಾಕಾಶದ ಕಲ್ಲುಗಳೆಲ್ಲಿ? ಎಂಬ ಪ್ರಶ್ನೆ ಮೂಡುವುದು ಸಹಜ. ಅವು ಭೂಮಿಯನ್ನು ತಲುಪುವ ಮೊದಲೇ ಆಕಾಶದಲ್ಲಿಯೇ ಉರಿದು ಬೂದಿಯಾಗುತ್ತವೆ. ರಾತ್ರಿಯ ಆಕಾಶದಲ್ಲಿ ಹಠಾತ್ತನೇ ಪ್ರಜ್ವಲಿಸುವ ವಸ್ತುವೊಂದು ಭೂಮಿಯ ಕಡೆಗೆ ವೇಗವಾಗಿ ಬರುವುದನ್ನು ನೀವು ನೋಡಿರಬಹುದು. ಇದೇ ಕ್ಷುದ್ರಗ್ರಹ.
ಚಿಕ್ಕ ಗ್ರಹಗಳಂತಿರುವ ಆಕಾಶಕಾಯಗಳೇ ಕ್ಷುದ್ರಗಹಗಳು. ಇವುಗಳನ್ನು ಬಾಹ್ಯಾಕಾಶದ ಕಲ್ಲುಗಳು ಅಥವಾ ಅಂತರಿಕ್ಷದ ಅಲೆಮಾರಿಗಳು ಎನ್ನುತ್ತಾರೆ. ಕ್ಷುದ್ರಗ್ರಹಗಳು ಸೌರವ್ಯೆಹ ನಿರ್ಮಾಣದ ನಂತರದ ಶೇಷ ವಸ್ತುಗಳನ್ನು ಪ್ರತಿನಿಧಿಸುತ್ತವೆ. ಅವು ಮಂಗಳ ಮತ್ತು ಗುರು ಗ್ರಹಗಳ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರೀಕೃತಗೊಂಡಿವೆ. ಗಾತ್ರದಲ್ಲಿ 10 ಮೀಟರ್‌ನಿಂದ 1,000 ಕಿ.ಮೀ. ಅಗಲ ಹೊಂದಿವೆ. 1801ರಲ್ಲಿ ಮೊತ್ತಮೊದಲಿಗೆ ಇಟಲಿಯ ಪಿಯಜ್ಜಿ ಎಂಬ ಖಗೋಳಶಾಸ್ತ್ರಜ್ಞನು ಸಿರಿಸ್ ಎಂಬ ಕ್ಷುದ್ರಗ್ರಹವನ್ನು ಕಂಡುಹಿಡಿದನು. ಇದು ಎಲ್ಲ ಕ್ಷುದ್ರ ಗ್ರಹಗಳಲ್ಲೇ ಅತ್ಯಂತ ದೊಡ್ಡ ಕ್ಷುದ್ರಗ್ರಹ. ವಿಜ್ಞಾನಿಗಳು ಇಂದಿನವರೆಗೆ ಸುಮಾರು 7,000 ಕ್ಷುದ್ರ ಗ್ರಹಗಳನ್ನು ಗುರುತಿಸಿರುವರು. ಇತ್ತೀಚಿನ ಅಂದಾಜಿನ ಪ್ರಕಾರ ಸೂರ್ಯನ ಸುತ್ತ ತಿರುಗುವ ಕ್ಷುದ್ರ ಗ್ರಹಗಳ ಸಂಖ್ಯೆ ಸುಮಾರು 40,000ಕ್ಕಿಂತ ಹೆಚ್ಚಾಗಿದೆ.
ಉಂಡಾಡಿ ಗುಂಡನಂತೆ ಸ್ವತಂತ್ರವಾಗಿ ತಿರುಗಾಡಿಕೊಂಡಿರುವ ಕ್ಷುದ್ರಗ್ರಹಗಳಿಗೆ ಗ್ರಹಗಳಂತೆ ನಿರ್ದಿಷ್ಟ ಕಕ್ಷೆಯಿಲ್ಲ. ಎಲ್ಲೆಂದರಲ್ಲಿ ಅಂಡಲೆಯುವ ಅಲೆಮಾರಿ ಕ್ಷುದ್ರಗ್ರಹಗಳು ಯಾವ ಆಕಾಶಕಾಯವನ್ನಾದರೂ ಢಿಕ್ಕಿ ಹೊಡೆಯಬಹುದು. ಹಾಗೆಯೇ ಭೂಮಿಗೂ ಢಿಕ್ಕಿ ಹೊಡೆಯಬಹುದು. ಸೌರವ್ಯೆಹ ನಿರ್ಮಾಣಗೊಂಡಾಗಿನಿಂದ ಇಂದಿನವರೆಗೂ ಕ್ಷುದ್ರಗ್ರಹಗಳು ಭೂಮಿಗೆ ಢಿಕ್ಕಿ ಹೊಡೆಯುತ್ತಲೇ ಇವೆ. ಲಕ್ಷಾಂತರ ವರ್ಷಗಳ ಹಿಂದೆ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿದ್ದರಿಂದ ಡೈನೋಸಾರ್‌ಗಳ ನಾಶವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಜೂನ್ 30, 1908ರಲ್ಲಿ ಸೈಬೀರಿಯಾದ ತುಂಗುಸ್ಕಾ ಪ್ರದೇಶದಲ್ಲಿ 40 ಮೀಟರ್ ವಿಸ್ತಾರದ ಕ್ಷುದ್ರಗ್ರಹವೊಂದು ಅಪ್ಪಳಿಸಿತು. ಇದರ ಪ್ರಭಾವ ಎಷ್ಟಿತ್ತೆಂದರೆ ಲಂಡನ್ ನಗರದಷ್ಟು ಕಾಡು ಪ್ರದೇಶವು ನಾಶವಾಯಿತು.
ಅದೇನೇ ಇರಲಿ, ಅಂತರಿಕ್ಷದ ಅಲೆಮಾರಿಗಳು ಅಪಾರವಾದ ಸಂಪತ್ತನ್ನು ಹೊಂದಿವೆ. ಈ ಸಂಪತ್ತನ್ನು ಭೂಮಿಗೆ ತರಲು ಸಾಧ್ಯವಿದೆ. 16-ಸೈಕಿ ಎಂಬ ಕ್ಷುದ್ರಗ್ರಹವು ಅಪಾರ ಮೌಲ್ಯದ ಚಿನ್ನವನ್ನು ಹೊಂದಿದ್ದು, ಇದನ್ನು ಭೂಮಿಗೆ ತಂದು ಪ್ರತಿಯೊಬ್ಬರಿಗೆ ಹಂಚಿದರೆ ಒಬ್ಬೊಬ್ಬರಿಗೆ ಸಿಗುವ ಚಿನ್ನದ ಇದರ ಮೌಲ್ಯ 771 ಕೋಟಿ ರೂ.!. ಹೀಗೆ ಬೇರೆ ಬೇರೆ ಕ್ಷುದ್ರಗ್ರಹಳಲ್ಲಿ ಬೇರೆ ಬೇರೆ ಸಂಪನ್ಮೂಲಗಳು ಅಡಕವಾಗಿವೆ. ಭೂಮಿಯ ಸಮೀಪ ಬರುವ ಅನೇಕ ಕ್ಷುದ್ರಗ್ರಹಗಳಲ್ಲಿ ಟ್ರಿಲಿಯನ್‌ಗಟ್ಟಲೆ ಮೌಲ್ಯದ ಖನಿಜಗಳು ಮತ್ತು ಲೋಹಗಳು ಅಡಗಿವೆ ಎಂದು ಆರಂಭಿಕ ಪುರಾವೆಗಳು ಸೂಚಿಸಿವೆ.
ಸಂಪನ್ಮೂಲಗಳ ಆಧಾರದ ಮೇಲೆ ಕ್ಷುದ್ರಗ್ರಹಗಳನ್ನು ಸಿ-ವರ್ಗ, ಎಸ್-ವರ್ಗ ಮತ್ತು ಎಂ-ವರ್ಗ ಎಂದು ಮೂರು ವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಶೇ. 75ಕ್ಕಿಂತ ಹೆಚ್ಚು ಕ್ಷುದ್ರಗ್ರಹಗಳು ಸಿ-ವರ್ಗದಲ್ಲಿದ್ದು, ಅವುಗಳಲ್ಲಿ ಅಪಾರ ಪ್ರಮಾಣದ ಹೈಡ್ರೋಜನ್, ಹೀಲಿಯಂ ಇರುತ್ತದೆ. ಶೇ. 17ರಷ್ಟು ಕ್ಷುದ್ರಗಳು ಎಸ್-ವರ್ಗದಲ್ಲಿದ್ದು, ಇವುಗಳಲ್ಲಿ ನಿಕ್ಕಲ್, ಕಬ್ಬಿಣ ಮತ್ತು ಮೆಗ್ನೀಸಿಯಮ್ ನಿಕ್ಷೇಪಗಳಿವೆ. ಎಂ-ವರ್ಗದ ಕ್ಷುದ್ರಗ್ರಹಗಳು ಅಲ್ಪ ಪ್ರಮಾಣದಲ್ಲಿದ್ದು ಅವು ನಿಕ್ಕಲ್ ಮತ್ತು ಕಬ್ಬಿಣವನ್ನು ಹೊಂದಿರುತ್ತವೆ.
ಕ್ಷುದ್ರಗ್ರಹಗಳ ಕುರಿತು ಪೂರ್ಣ ಪ್ರಮಾಣದ ಅಧ್ಯಯನವನ್ನು ಮಾಡಲು ಯಾವುದೇ ಮಾನವಸಹಿತ ಮಿಷನ್ ಕಳಿಸಲು ಇದುವರೆಗೂ ಸಾಧ್ಯವಾಗಿಲ್ಲ. ಖಗೋಳಶಾಸ್ತ್ರಜ್ಞರು ಟೆಲಿಸ್ಕೋಪಿಕ್ ಸ್ಪೆಕ್ಟ್ರೋಸ್ಕೋಪಿಯನ್ನು ಬಳಸಿ ಕ್ಷುದ್ರಗ್ರಹದ ಮೇಲ್ಮೈಯಿಂದ ಪ್ರತಿಫಲಿಸುವ ಬೆಳಕನ್ನು ವಿಶ್ಲೇಷಿಸಿ ಅಲ್ಲಿ ಏನಿರಬಹುದೆಂದು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಟೆಲಿಸ್ಕೋಪಿಕ್ ಸ್ಪೆಕ್ಟ್ರೋಸ್ಕೋಪಿ ಅಧ್ಯಯನದ ಆಧಾರದ ಮೇಲೆ ಕ್ಷುದ್ರಗ್ರಹಗಳಲ್ಲಿ ಕಬ್ಬಿಣ, ನಿಕ್ಕಲ್ ಮತ್ತು ಮೆಗ್ನೀಸಿಯಮ್ ಜೊತೆಗೆ, ಕೆಲವು ಕ್ಷುದ್ರಗ್ರಹಗಳಲ್ಲಿ ನೀರು, ಆಮ್ಲಜನಕ, ಚಿನ್ನ ಮತ್ತು ಪ್ಲಾಟಿನಂ ಸಹ ಅಸ್ತಿತ್ವದಲ್ಲಿದೆ ಎಂದು ಪತ್ತೆ ಹಚ್ಚಿದ್ದಾರೆ.
ಒಂದು ಕಿಲೋಮೀಟರ್ ವ್ಯಾಸವನ್ನು ಹೊಂದಿರುವ ಕ್ಷುದ್ರಗ್ರಹವು ಸುಮಾರು ಎರಡು ಬಿಲಿಯನ್ ಟನ್‌ಗಳಷ್ಟು ದ್ರವ್ಯರಾಶಿಯನ್ನು ಹೊಂದಿರುತ್ತದೆ. ಸೌರವ್ಯೆಹದಲ್ಲಿ ಈ ಗಾತ್ರದ ಒಂದು ಮಿಲಿಯನ್ ಕ್ಷುದ್ರಗ್ರಹಗಳಿವೆ. ಇಷ್ಟು ಕ್ಷುದ್ರಗ್ರಹಗಳಲ್ಲಿನ ಖನಿಜ ಸಂಪತ್ತನ್ನು ಭೂಮಿಗೆ ತರುವುದು ಹೇಗೆ ಎಂಬ ಕುರಿತು ಚಿಂತನೆಗಳು ನಡೆಯುತ್ತಿವೆ.
ಕ್ಷುದ್ರಗ್ರಹ ಗಣಿಗಾರಿಕೆ ಕಾರ್ಯಾಚರಣೆಗಳು ಭೂಮಿಗೆ ಮತ್ತು ಇತರ ಗ್ರಹಗಳಲ್ಲಿರುವ ಅದರ ವಸಾಹತುಗಳಿಗೆ ವಸ್ತುಗಳ ಸಮೃದ್ಧಿಯನ್ನು ಹೇಗೆ ಪೂರೈಸುತ್ತವೆ, ಕ್ಷುದ್ರಗ್ರಹ ಗಣಿಗಾರಿಕೆ ಹೇಗಿರುತ್ತದೆ ಎಂದು ಖಚಿತವಾಗಿ ಯಾರಿಗೂ ತಿಳಿದಿಲ್ಲ. ಆದರೆ ಕೆಲವು ಊಹೆಗಳಿವೆ. ಯಂತ್ರೋಪಕರಣಗಳು ಸೌರಶಕ್ತಿ ಚಾಲಿತವಾಗಿರುತ್ತವೆ. ಇದು ಬಾಹ್ಯಾಕಾಶ ನೌಕೆಯ ಮೂಲಕ ಕ್ಷುದ್ರಗ್ರಹಕ್ಕೆ ಸಾಗಿಸಬೇಕಾದ ಇಂಧನದ ಅಗತ್ಯವನ್ನು ಕಡಿಮೆ ಮಾಡುತ್ತದೆ. ಕ್ಷುದ್ರಗ್ರಹಕ್ಕೆ ಕಳಿಸುವ ಉಪಕರಣವು ಹಗುರವಾಗಿರಬೇಕು. ಗಣಿಗಾರಿಕೆಗೆ ಸಿಬ್ಬಂದಿ ಬದಲಿಗೆ ರೋಬೋಟಿಕ್ ಉಪಕರಣಗಳಿರುತ್ತವೆ. ಬಹುತೇಕ ಕ್ಷುದ್ರಗ್ರಹಗಳು ಗುರುತ್ವಾಕರ್ಷಣೆಯನ್ನು ಹೊಂದಿಲ್ಲ ಅಥವಾ ಕಡಿಮೆ ಗುರುತ್ವಾಕರ್ಷಣೆ ಹೊಂದಿವೆ. ಆದ್ದರಿಂದ ಗಣಿಗಾರಿಕೆ ಉಪಕರಣಗಳು ಮತ್ತು ಅದನ್ನು ನಿರ್ವಹಿಸುವ ಗಗನಯಾತ್ರಿ ಅಥವಾ ಗಣಿಗಾರರು ನೆಲಕ್ಕೆ ಲಂಗರು ಹಾಕಲು ಗ್ರ್ಯಾಪಲ್‌ಗಳನ್ನು ಬಳಸಬೇಕಾಗುತ್ತದೆ. ಹೀಗೆ ವಿವಿಧ ಊಹೆಗಳಿವೆ.
ಕ್ಷುದ್ರಗ್ರಹ ಗಣಿಗಾರಿಕೆಯು ತನ್ನದೇ ಆದ ಪರಿಸರ ಸಮಸ್ಯೆಗಳನ್ನು ಹೊಂದಿದೆ. ಅದನ್ನು ನಿಯಂತ್ರಿಸಲು ಪ್ರಸಕ್ತ ಯಾವುದೇ ಕಾನೂನು ಚೌಕಟ್ಟು ಇಲ್ಲ. 1967ರ ಬಾಹ್ಯಾಕಾಶ ಒಪ್ಪಂದದ ಪ್ರಕಾರ ಯಾವ ದೇಶವೂ ಬಾಹ್ಯಾಕಾಶದಲ್ಲಿ ಭೂಪ್ರದೇಶವನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಆದಾಗ್ಯೂ ಈ ಒಪ್ಪಂದವು ಚಂದ್ರನ ಚಟುವಟಿಕೆಗಳ ಸುತ್ತಲೂ ಸುರಕ್ಷತಾ ವಲಯಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ. ಆದರೆ ಕ್ಷುದ್ರಗಳ ಒಡೆತನವು ಯಾರೊಬ್ಬರ ಸ್ವತ್ತೂ ಅಲ್ಲ. ಸದ್ಯಕ್ಕೆ ಯಾರು ಬೇಕಾದರೂ ಅಲ್ಲಿ ಗಣಿಗಾರಿಕೆ ಮಾಡಬಹುದು. ಕೆಲವು ದೇಶಗಳಿಗೆ ಸಾಮರ್ಥ್ಯವಿದ್ದರೂ, ಸದ್ಯಕ್ಕೆ ಬಾಹ್ಯಾಕಾಶ ಗಣಿಗಾರಿಕೆ ಆರ್ಥಿಕವಾಗಿ ಅಪಾಯಕಾರಿಯಾಗಿದೆ. ಅದರ ಭವಿಷ್ಯವು ಕೆಲವು ಖನಿಜಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಮೇಲೆ ಅವಲಂಬಿತವಾಗಿದೆ. ಪ್ಲಾನೆಟರಿ ರಿಸೋರ್ಸಸ್ ಮತ್ತು ಡೀಪ್ ಸ್ಪೇಸ್ ಇಂಡಸ್ಟ್ರೀಸ್‌ನಂತಹ ಕೆಲವು ದೈತ್ಯ ಕಂಪೆನಿಗಳು 2020ರ ವೇಳೆಗೆ ಕ್ಷುದ್ರಗ್ರಹಗಳಲ್ಲಿ ಗಣಿಗಾರಿಕೆ ಮಾಡುವುದಾಗಿ ಧೈರ್ಯದಿಂದ ಹೇಳಿಕೊಂಡಿದ್ದವು. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಸ್ಪಷ್ಟವಾಗಿದೆ. ಕ್ಷುದ್ರಗ್ರಹಗಳ ಕುರಿತು ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲದೆ ಅಲ್ಲಿನ ಖನಿಜ ಸಂಪನ್ಮೂಲಗಳನ್ನು ಗಣಿಗಾರಿಕೆ ಮಾಡುವುದು ಎಷ್ಟು ಕಷ್ಟವೋ ಅದನ್ನು ಭೂಮಿಗೆ ರವಾನಿಸುವುದು ಇನ್ನಷ್ಟು ಕಷ್ಟಕರವಾಗಿದೆ. ಆದರೆ ಇದು ಸಾಧ್ಯವೇ ಇಲ್ಲ ಎನ್ನುವಂತಿಲ್ಲ. ಈಗಾಗಲೇ ನಾಸಾವು ಸಣ್ಣ ಪ್ರಮಾಣದ ಚಂದ್ರನ ರೆಗೊಲಿತ್ ಹೊರತೆಗೆಯಲು ನಾಲ್ಕು ಕಂಪೆನಿಗಳಿಗೆ ಒಪ್ಪಂದ ನೀಡಿದೆ. ಇದನ್ನು ಬಾಹ್ಯಾಕಾಶ ಗಣಿಗಾರಿಕೆ ಯುಗದ ಆರಂಭ ಎನ್ನಬಹುದು. ಮುಂದಿನ ವರ್ಷಗಳಲ್ಲಿ ಕ್ಷುದ್ರಗ್ರಹಗಳ ಗಣಿಗಾರಿಕೆಯ ಸಂಪತ್ತು ಭೂಮಿಗೆ ಬಂದರೆ ಅಚ್ಚರಿಪಡಬೇಕಾಗಿಲ್ಲ. ಅಲ್ಲಿಯವರೆಗೂ ಕಾದು ನೋಡಬೇಕಿದೆ.
ಇತ್ತೀಚಿನ ವರ್ಷಗಳಲ್ಲಿ ಕ್ಷುದ್ರಗ್ರಹಗಳ ಚಲನೆಯ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಕ್ಷುದ್ರಗ್ರಹಗಳ ಅಧ್ಯಯನ ಒಂದು ಹೊಸ ಶಾಖೆಯಾಗಿ ಬೆಳೆದಿದೆ. ಹವ್ಯಾಸಿಗಳೇ ಹೆಚ್ಚಾಗಿ ಪಾಲ್ಗೊಳ್ಳುತ್ತಿರುವ ಈ ಚಟುವಟಿಕೆಯಲ್ಲಿ ತಾಳ್ಮೆಯಿಂದ ಸೂಕ್ಷ್ಮ ಕಾಯಗಳನ್ನು ಅಭ್ಯಸಿಸಲಾಗುತ್ತದೆ. ಇದಕ್ಕೆ ‘ನೀಟ್’ (ನಿಯರ್ ಅರ್ತ್ ಆಸ್ಟರಾಯ್ಡ್ ಟ್ರಾಕಿಂಗ್) ಎಂಬ ಹೆಸರಿದೆ. ಇಂದಿನ ಸುಧಾರಿತ ತಂತ್ರಜ್ಞಾನದಿಂದ ಕ್ಷುದ್ರಗ್ರಹಗಳು ಭೂಮಿಯನ್ನಪ್ಪಳಿಸದಂತೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕ್ಷುದ್ರಗ್ರಹಗಳ ಕುರಿತ ಮಾಹಿತಿಯನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್ 30ನ್ನು ಅಂತರ್‌ರಾಷ್ಟ್ರೀಯ ಕ್ಷುದ್ರಗ್ರಹ ದಿನವನ್ನಾಗಿ ಆಚರಿಸಲಾಗುತ್ತದೆ. 2015ರಿಂದ ಪ್ರಾರಂಭವಾದ ಈ ದಿನಾಚರಣೆಯಲ್ಲಿ ಕ್ಷುದ್ರಗ್ರಹಗಳ ಕುರಿತ ಉಪನ್ಯಾಸಗಳು, ಚರ್ಚೆಗಳು ಮತ್ತು ಸಂಗೀತ ಕಚೇರಿಗಳಂತಹ ಚಟುವಟಿಕೆಗಳನ್ನು ಆಚರಿಸಲಾಗುತ್ತದೆ. ಕ್ಷುದ್ರಗ್ರಹಗಳ ಕುರಿತ ಜಾಗೃತಿ ಮೂಡಿಸಲಾಗುತ್ತದೆ. ಕ್ಷುದ್ರಗ್ರಹಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇದು ಸಹಾಯಕವಾಗಿದೆ. ಅಂತರ್‌ರಾಷ್ಟ್ರೀಯ ಕ್ಷುದ್ರಗ್ರಹ ದಿನವು ಆಕಾಶ ಮತ್ತು ನಮ್ಮ ಸುತ್ತಲಿನ ನಕ್ಷತ್ರಪುಂಜದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಜನರನ್ನು ಪ್ರೇರೇಪಿಸುತ್ತದೆ. 1908ರಲ್ಲಿ ಸೈಬೀರಿಯಾದ ತುಂಗುಸ್ಕಾದಲ್ಲಿ ಕ್ಷುದ್ರಗ್ರಹ ಬಿದ್ದ ನೆನಪಿಗಾಗಿ, ಪ್ರತಿವರ್ಷ ಜೂನ್ 30ರಂದು ಅಂತರ್‌ರಾಷ್ಟ್ರೀಯ ಕ್ಷುದ್ರಗ್ರಹ ದಿನವನ್ನು ಆಚರಿಸಲಾಗುತ್ತದೆ.