ಶಾಶ್ವತವಾಗಿ ಹಿಮನದಿ ಕಳೆದುಕೊಂಡ ವೆನೆಜುವೆಲ
‘ವೆನೆಜುವೆಲ’ ಎಂದ ಕೂಡಲೇ ಕೆರಿಬಿಯನ್ ಕರಾವಳಿ, ಕೆರಿಬಿಯನ್ ದ್ವೀಪಗಳು, ತೈಲ ನಿಕ್ಷೇಪಗಳು, ವಿಶ್ವದ ಅತಿ ಎತ್ತರದ ಜಲಪಾತವಾದ ಏಂಜೆಲ್ ಫಾಲ್ಸ್, ದಕ್ಷಿಣ ಅಮೆರಿಕದ ಎರಡನೇ ಅತಿ ಉದ್ದದ ನದಿ ಒರಿನೊಕೊ, ಕೆಲವು ಹಿಮನದಿಗಳು ಕಣ್ಣ ಮುಂದೆ ಬರುತ್ತವೆ. ದಕ್ಷಿಣ ಅಮೆರಿಕದ ದೇಶವಾದ ವೆನೆಜುವೆಲ 2020ರ ವೇಳೆಗೆ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದ ದೇಶ ಎಂಬ ಹೆಗ್ಗಳಿಕೆ ಇತ್ತು. ವೆನೆಜುವೆಲ ವಿಶ್ವದ ಐದನೇ ಅತಿದೊಡ್ಡ ತೈಲ ರಫ್ತುದಾರ ಆಗಿದೆ. ಇಷ್ಟೆಲ್ಲಾ ಹೆಗ್ಗಳಿಕೆ ಹೊಂದಿದ ದೇಶ ಈಗ ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ವಿಶ್ವದ ಮೊದಲ ದೇಶ ಎಂದು ಗುರುತಿಸಿಕೊಂಡಿದೆ.
ನಾಲ್ಕು ವರ್ಷಗಳ ಹಿಂದೆ ಅಂದರೆ 2020ರಲ್ಲಿ, ಸಂಶೋಧಕರ ತಂಡವು ಹವಾಮಾನ ಬದಲಾವಣೆಯಿಂದಾಗಿ ವೆನೆಜುವೆಲ ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಳ್ಳುವ ಮೊದಲ ದೇಶವಾಗಲು ಸಜ್ಜಾಗಿದೆ ಎಂದು ತೀರ್ಮಾನಿಸಿ ಅಧ್ಯಯನವನ್ನು ಪ್ರಕಟಿಸಿತ್ತು. ಈ ಹಿಂದೆಯೂ ವಿಜ್ಞಾನಿಗಳು ಇದೇ ಎಚ್ಚರಿಕೆ ನೀಡಿದ್ದರು. ವೆನೆಜುವೆಲದ ದೊಡ್ಡ ಮಂಜುಗಡ್ಡೆಯ ಕೊನೆಯ ಭಾಗವು ಹಿಮನದಿ ಎಂದು ಕರೆಯಲಾಗದಷ್ಟು ಚಿಕ್ಕದಾಗಿರುವುದರಿಂದ ಅದನ್ನು ಹಿಮನದಿ ಹೆಸರಿನಿಂದ ಕೈಬಿಡಲಾಗಿದೆ ಎಂದು ಇಂಟರ್‌ನ್ಯಾಷನಲ್ ಕ್ರಯೋಸ್ಪಿಯರ್ ಕ್ಲೈಮೇಟ್ ಇನಿಶಿಯೇಟಿವ್ ತಂಡವು ಹೇಳಿದೆ.
ವೆನೆಜುವೆಲದ ಭೌಗೋಳಿಕತೆಯು ಆಂಡಿಸ್ ಪರ್ವತಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಈ ಪರ್ವತಗಳು ಸ್ಥಳೀಯ ಹವಾಮಾನದ ಮಾದರಿಗಳನ್ನು ಗಮನಾರ್ಹವಾಗಿ ಪ್ರಭಾವಿಸುತ್ತವೆ, ತೇವ, ಶುಷ್ಕ ಮತ್ತು ಶೀತದವರೆಗಿನ ವಿವಿಧ ಸೂಕ್ಷ್ಮ ಹವಾಮಾನಗಳನ್ನು ಸೃಷ್ಟಿಸುತ್ತವೆ. ಈ ಪರ್ವತಗಳಲ್ಲಿ ಕೆಲವು ಹಿಮನದಿಗಳನ್ನು ಸೃಷ್ಟಿಸಿವೆ. ಸಿಯೆರಾ ನೆವಾಡಾ ಡಿ ಮೆರಿಡಾ ಪರ್ವತ ಶ್ರೇಣಿಯಲ್ಲಿ, ವೆನೆಜುವೆಲ ಆರು ಹಿಮನದಿಗಳನ್ನು ಹೊಂದಿತ್ತು. ಅವುಗಳಲ್ಲಿ ಐದು ಹಿಮನದಿಗಳು 2011ರಲ್ಲಿ ನಶಿಸಿದವು. ಈಗ ಉಳಿದಿದ್ದ ಏಕೈಕ ಹಿಮನದಿ ಹಂಬೋಲ್ಟ್ ಕೂಡಾ ಹಿಮನದಿಗಳ ಪಟ್ಟಿಯಿಂದ ಹೊರಬಿದ್ದಿದೆ. 1953 ಮತ್ತು 2019ರ ನಡುವೆ ವೆನೆಜುವೆಲದ ಹಿಮನದಿ ವ್ಯಾಪ್ತಿಯು ಶೇ. 98ರಷ್ಟು ಕುಸಿದಿದೆ. ಈಗ ಹಂಬೋಲ್ಟ್ ಹಿಮನದಿ ಎಂದು ಪರಿಗಣಿಸಲು ತುಂಬಾ ಚಿಕ್ಕದಾಗಿದೆ ಎಂದು ವೈಜ್ಞಾನಿಕ ಸಮರ್ಥನೆ ಸಂಸ್ಥೆಯಾದ ದಿ ಇಂಟರ್‌ನ್ಯಾಷನಲ್ ಕ್ರಯೋಸ್ಪಿಯರ್ ಕ್ಲೈಮೇಟ್ ಇನಿಶಿಯೇಟಿವ್ ಹೇಳಿದೆ.
ಹಿಮನದಿ ಎಂದರೇನು? ಎಂಬುದರ ಕುರಿತು ಯಾವುದೇ ಅಧಿಕೃತ ವ್ಯಾಖ್ಯಾನವಿಲ್ಲ. ಅದು ಎಷ್ಟು ದೊಡ್ಡದಾಗಿರಬೇಕು? ಎಂಬುದಕ್ಕೆ ಯಾವುದೇ ಜಾಗತಿಕ ಮಾನದಂಡವಿಲ್ಲ. ಆದರೆ ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ ಸಾಮಾನ್ಯವಾಗಿ ಒಂದು ಹಿಮನದಿಯ ಅಂಗೀಕರಿಸಲ್ಪಟ್ಟ ಅಂಕಿ ಅಂಶವು 10 ಹೆಕ್ಟೇರ್ ಆಗಿದೆ. ಆದರೆ ಹಂಬೋಲ್ಟ್‌ನ ತೀವ್ರ ಕುಸಿತವು ಅಚ್ಚರಿ ಹುಟ್ಟಿಸಿದೆ. ಒಂದೊಮ್ಮೆ 450 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದ್ದ ಹಂಬೋಲ್ಟ್ ಈಗ ಕೇವಲ ಎರಡು ಹೆಕ್ಟೇರ್‌ಗೆ ಇಳಿದಿದೆ. ಈ ಕಾರಣದಿಂದ ವೆನೆಜುವೆಲ ಈಗ ಅಧಿಕೃತವಾಗಿ ತನ್ನ ಶಾಶ್ವತ ಹಿಮನದಿಗಳನ್ನು ಕಳೆದುಕೊಂಡಿದೆ. ಮಾನವ ನಿರ್ಮಿತ ಹವಾಮಾನ ಬದಲಾವಣೆಯ ಪರಿಣಾಮವಾಗಿ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶವಾಗಿದೆ.
1850ರಲ್ಲಿ ಕೈಗಾರಿಕಾ ಕ್ರಾಂತಿಯು ಪ್ರಾರಂಭವಾದ ನಂತರ ಪ್ರತಿ ದಶಕಕ್ಕೆ ಜಾಗತಿಕ ತಾಪಮಾನವು ಸರಾಸರಿ 0.11 ಲಿ. ಫ್ಯಾರನ್‌ಹೀಟ್ (0.06 ಲಿ. ಸೆಲ್ಸಿಯಸ್) ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಗಳು ಬೆಳೆದಂತೆಲ್ಲಾ ಈ ತಾಪಮಾನ ಹೆಚ್ಚಳವು ವೇಗವಾಗಿದೆ. 1980ರ ದಶಕದಿಂದ ತಾಪಮಾನ ಏರಿಕೆಯ ದರವು ಸರಾಸರಿಗಿಂತ ಮೂರು ಪಟ್ಟು ಹೆಚ್ಚು ವೇಗವಾಗಿದೆ.
ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದಂತೆ ಹೆಚ್ಚಿನ ದೇಶಗಳು ತಮ್ಮ ಹಿಮನದಿಗಳನ್ನು ಕಳೆದುಕೊಳ್ಳಲಿವೆ. ಇಂಡೋನೇಶ್ಯ, ಮೆಕ್ಸಿಕೋ ಮತ್ತು ಸ್ಲೊವೇನಿಯಾಗಳು ಹಿಮನದಿಗಳಿಂದ ಮುಕ್ತವಾಗಲು ನಂತರದ ಸಾಲಿನಲ್ಲಿವೆ. ಏತನ್ಮಧ್ಯೆ ಇಂಡೋನೇಶ್ಯ ಮತ್ತು ಮೆಕ್ಸಿಕೋ ಕೂಡ ದಾಖಲೆಯ ಹೆಚ್ಚಿನ ಶಾಖವನ್ನು ಅನುಭವಿಸುತ್ತಿವೆ. ಅದು ಹಿಮನದಿಗಳ ಹಿಮ್ಮೆಟ್ಟುವಿಕೆಯನ್ನು ವೇಗಗೊಳಿಸುತ್ತದೆ.
ವೆನೆಜುವೆಲದಲ್ಲಿ ಮಾತ್ರವಲ್ಲ, ಜಾಗತಿಕ ತಾಪಮಾನವು ಹೆಚ್ಚುತ್ತಿರುವವರೆಗೂ ಪ್ರಪಂಚದಾದ್ಯಂತ ಹಿಮನದಿಗಳು ತೊಂದರೆಯಲ್ಲಿರುತ್ತವೆ. ಹಿಮನದಿಗಳ ನಷ್ಟವು ಜಾಗತಿಕವಾಗಿ ಪ್ರಮುಖ ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಯಾಗಿದೆ.
ದಕ್ಷಿಣ ಅಮೆರಿಕ ಮತ್ತು ಮಧ್ಯ ಏಶ್ಯದ ಕೆಲವು ಭಾಗಗಳು ನೀರಾವರಿಗಾಗಿ ಹಿಮ ಕರಗುವ ನೀರನ್ನು ಅವಲಂಬಿಸಿವೆ. ಇನ್ನುಮುಂದೆ ಹಿಮನದಿಗಳು ಕಡಿಮೆಯಾಗುವುದರಿಂದ ಈ ಭಾಗಗಳಲ್ಲಿ ನೀರಿನ ಸಮಸ್ಯೆ ಉಂಟಾಗಲಿದೆ. ಹಿಮನದಿಗಳು ಕೃಷಿ ಮತ್ತು ಕುಡಿಯುವ ಪೂರೈಕೆಗೆ ನಿರ್ಣಾಯಕವಾಗಿದೆ. ಹಿಮನದಿಗಳ ಕುಸಿತವು ನಾರ್ವೆ, ಆಲ್ಪ್ಸ್ ಮತ್ತು ಉತ್ತರ ಅಮೆರಿಕದ ಪೆಸಿಫಿಕ್ ಸ್ಥಳಗಳಲ್ಲಿ ಜಲವಿದ್ಯುತ್ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಹಿಮನದಿ ಆಧಾರಿತ ಹರಿವು ಕಡಿಮೆಯಾಗುವುದು ಪರಿಸರೀಯವಾಗಿಯೂ ಅಪಾಯಗಳನ್ನು ತಂದೊಡ್ಡುತ್ತಿದೆ. ಸಾಲ್ಮನ್ ಮತ್ತು ಕಟ್‌ಥ್ರೋಟ್ ಟ್ರೌಟ್‌ನಂತಹ ಪ್ರಮುಖವಾದ ತಣ್ಣೀರಿನ ಆವಾಸಸ್ಥಾನಗಳಿಗೆ ಅಪಾಯವನ್ನುಂಟುಮಾಡುತ್ತದೆ. ಅವುಗಳ ಉಳಿವು ಮತ್ತು ಸಂತಾನೋತ್ಪತ್ತಿಗೆ ಅಡ್ಡಿಪಡಿಸುತ್ತದೆ. ಇದಲ್ಲದೆ ಹಿಮನದಿ ಕರಗುವ ಮಾದರಿಗಳಲ್ಲಿನ ಬದಲಾವಣೆಗಳು ಸಾಗರ ಪ್ರವಾಹಗಳು ಮತ್ತು ಬಿಸಿಗಾಳಿ ಪರಿಚಲನೆಯನ್ನು ಬದಲಾಯಿಸಬಹುದು. ಇದು ಮಾನವ ಜೀವನೋಪಾಯಕ್ಕೆ ಅಗತ್ಯವಾದ ಸಮುದ್ರ ಪರಿಸರ ವ್ಯವಸ್ಥೆಗಳು ಮತ್ತು ಮೀನುಗಾರಿಕೆಯ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ಹವಾಮಾನ ಬದಲಾವಣೆಯ ಸನ್ನಿವೇಶಗಳು ಮುಂದುವರಿದರೆ 2100ರ ವೇಳೆಗೆ ಪ್ರಪಂಚದ ಎಲ್ಲಾ ಹಿಮನದಿಗಳು ಸಂಪೂರ್ಣವಾಗಿ ನಶಿಸಲಿವೆ. ಈಗಾಗಲೇ ಪ್ರಪಂಚದಾದ್ಯಂತ ಇರುವ ಹಿಮನದಿಗಳು ವರ್ಧಿತ ವೇಗದಲ್ಲಿ ಹಿಮ್ಮೆಟ್ಟುವುದನ್ನು ಮುಂದುವರಿಸಿವೆ.
ಹಿಮಾಲಯ, ಆಲ್ಪ್ಸ್ ಮತ್ತು ಉತ್ತರ ಅಮೆರಿಕದಂತಹ ಪ್ರದೇಶಗಳಲ್ಲಿನ ಪ್ರಮುಖ ಹಿಮನದಿ ವ್ಯವಸ್ಥೆಗಳು ತಮ್ಮ ಪ್ರಸ್ತುತ ದ್ರವ್ಯರಾಶಿಯ ಶೇ. 80ಕ್ಕಿಂತ ಹೆಚ್ಚು ಕಳೆದುಕೊಳ್ಳಬಹುದು. ಇದು ಶತಕೋಟಿ ಜನರಿಗೆ ನೀರಿನ ಲಭ್ಯತೆಯ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ನದಿ ಪರಿಸರ ವ್ಯವಸ್ಥೆಗಳನ್ನು ಬದಲಾಯಿಸುತ್ತದೆ ಮತ್ತು ಸಮುದ್ರ ಮಟ್ಟವನ್ನು ಹೆಚ್ಚಿಸುತ್ತದೆ.
ಪ್ರಸಕ್ತ ವೆನೆಜುವೆಲದ ಪರಿಸ್ಥಿತಿಯು ದೊಡ್ಡ ಸಮಸ್ಯೆಗೆ ಎಚ್ಚರಿಕೆಯ ಗಂಟೆಯಾಗಿದೆ. ವ್ಯಾಪಕವಾದ ಹಿಮನದಿಯ ನಷ್ಟವು ಜಾಗತಿಕ ತಾಪಮಾನವನ್ನು ನಿಗ್ರಹಿಸಲು ದೃಢವಾದ ಹವಾಮಾನ ಕ್ರಿಯೆಯ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ. ಹಿಮನದಿಗಳು ಜೀವನೋಪಾಯ ಸೇರಿದಂತೆ ಶಕ್ತಿ, ನೀರು ಮತ್ತು ಆಹಾರ ಭದ್ರತೆಗೆ ಅಗಾಧ ಪ್ರಯೋಜನಗಳನ್ನು ಹೊಂದಿವೆ. ಹಿಮನದಿಗಳ ನಷ್ಟವು ಅನೇಕ ಪರಿಣಾಮಗಳನ್ನು ಹೊಂದಿದೆ. ಹಿಮನದಿಗಳ ನಷ್ಟವು ಸಮುದ್ರ ಮಟ್ಟ ಏರಿಕೆಗೆ ಕಾರಣವಾಗುತ್ತದೆ. ಎಲ್ಲಾ ಹಿಮನದಿಗಳು ಕರಗಿದರೆ ಸಮುದ್ರ ಮಟ್ಟವು ಸುಮಾರು 70 ಮೀಟರ್ (230 ಅಡಿ) ಏರುತ್ತದೆ. ಇದು ಪ್ರತಿ ಕರಾವಳಿ ನಗರದಲ್ಲಿ ಪ್ರವಾಹವನ್ನು ಉಂಟು ಮಾಡುತ್ತದೆ. ಹಿಮನದಿಗಳು ಮತ್ತು ಸಮುದ್ರದ ಮಂಜುಗಡ್ಡೆ ಕರಗಿದಂತೆ ಸಮುದ್ರದ ಪ್ರವಾಹಗಳು ಪ್ರಪಂಚದಾದ್ಯಂತ ಹವಾಮಾನ ಮಾದರಿಗಳನ್ನು ಅಡ್ಡಿಪಡಿಸುತ್ತವೆ. ಇದು ಮೀನುಗಾರಿಕೆ ಮತ್ತು ಕರಾವಳಿ ಸಮುದಾಯಗಳ ಮೇಲೆ ಪರಿಣಾಮ ಬೀರಬಹುದು.
ಹಿಮನದಿಗಳು ಅನೇಕ ಪ್ರಾಣಿಗಳಿಗೆ ನೆಲೆಯಾಗಿದ್ದು, ಅವುಗಳ ನಷ್ಟವು ಅನೇಕ ಜೀವಿಗಳ ಅಳಿವಿಗೆ ಕಾರಣವಾಗಬಹುದು. ಹಿಮನದಿಗಳ ಕರಗುವಿಕೆಯಿಂದ ನಿತ್ಯದ ಬಳಕೆ, ನೀರಾವರಿ ಮತ್ತು ಜಲವಿದ್ಯುತ್ ಶಕ್ತಿ ಉತ್ಪಾದನೆಗೆ ಅಗತ್ಯವಾದ ನೀರಿನ ಕೊರತೆಯನ್ನುಂಟು ಮಾಡುತ್ತದೆ. ಹಿಮನದಿಗಳ ಕರಗುವಿಕೆಯು ಪರಿಸರ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಉಂಟು ಮಾಡುತ್ತದೆ.
ಹಿಮನದಿಗಳು ಕೇವಲ ಜೈವಿಕ ಪ್ರಯೋಜನಕಾರಿಯಲ್ಲದೇ ಭೌತಿಕ ಪ್ರಯೋಜನಕಾರಿಗಳೂ ಆಗಿವೆ. ಅವು ಭೂಮಿ ಮತ್ತು ನಮ್ಮ ಸಾಗರಗಳ ಮೇಲೆ ರಕ್ಷಣಾತ್ಮಕ ಹೊದಿಕೆಯಂತೆ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಅವುಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯತೆಯಾಗಬೇಕಿದೆ.