ತ್ಯಾಜ್ಯ ವಿಲೇವಾರಿಗೆ ಬದ್ಧರಾದ ವಿಹಾನ್ ಮತ್ತು ನವ್ ಸಹೋದರರು
ತ್ಯಾಜ್ಯ ಆಯುವವರನ್ನು ತುಚ್ಛವಾಗಿ ಕಾಣುತ್ತಿರುವ ಇಂದಿನ ದಿನಗಳಲ್ಲಿ ತ್ಯಾಜ್ಯದಿಂದಲೇ ಬದುಕು ಕಟ್ಟಿಕೊಳ್ಳಲು ಹೊರಟ ಸಹೋದರರು ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಇವರು ನೀಡಿದ ಶಿಕ್ಷಣದಿಂದ ಪ್ರೇರಿತರಾದ ಕೆಲವರಿಗೆ ಉದ್ಯೋಗವನ್ನು ನೀಡಿದ್ದಾರೆ. ನೌಕರರಿಂದ ಸ್ವೀಕರಿಸಿದ ತ್ಯಾಜ್ಯವನ್ನು ಗೋದಾಮಿಗೆ ಕೊಂಡೊಯ್ದು ಅಲ್ಲಿ ಪ್ರತ್ಯೇಕಿಸುತ್ತಾರೆ. ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಅಗತ್ಯ ಇರುವವರಿಗೆ ನೀಡುತ್ತಾರೆ. ಇದರಿಂದ ಪರಿಸರಕ್ಕೆ ಆಗಬಹುದಾದ ಹಾನಿಯನ್ನು ತಪ್ಪಿಸುತ್ತಾರೆ.
ನಾವೆಲ್ಲ ಚಿಕ್ಕವರಿದ್ದಾಗ ತ್ಯಾಜ್ಯ ವಿಲೇವಾರಿ ಅಂದರೆ ಏನೆಂದು ಗೊತ್ತಿರಲೇ ಇಲ್ಲ. ಏಕೆಂದರೆ ನಮ್ಮ
ಹೊಳಗುಂದಿ ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಆಗ ಅದೊಂದು ಸಮಸ್ಯೆಯಾಗಿರಲೇ ಇಲ್ಲ. ಈಗ ಪ್ರತೀ ಹಳ್ಳಿಯಲ್ಲೂ ತ್ಯಾಜ್ಯ ವಿಲೇವಾರಿಗಾಗಿ ಸ್ಥಳೀಯ ಸರಕಾರದಿಂದ ವಾಹನ ವ್ಯವಸ್ಥೆ ಮಾಡಲಾಗಿದೆ. ಆಗ ಮನೆಯ ಕಸವನ್ನು ಸಮೀಪದ ತಿಪ್ಪೆಗೆ ಸುರಿದು ಬರುವುದು ಒಂದು ಕೆಲಸವಾಗಿತ್ತು. ಸ್ವಂತ ತಿಪ್ಪೆ ಇದ್ದವರು ತಮ್ಮ ಮನೆಯ ಕಸವನ್ನು ತಮ್ಮ ತಿಪ್ಪೆಗೆ ಹಾಕುತ್ತಿದ್ದರು. ಆಗ ಎಲ್ಲವೂ ಹಸಿ ಕಸವೇ ಆಗಿತ್ತು. ಅಂದರೆ ಕೊಳೆಯುವಂತಹ ಕಸವಾಗಿತ್ತು. ಈಗಿನಂತೆ ಕೊಳೆಯಲಾರದ ಕಸ ಇರುತ್ತಿರಲಿಲ್ಲ.
ಇನ್ನು ಕಸದ ವಿಲೇವಾರಿ ಬಗ್ಗೆ ಯಾರಿಗೂ ಅಷ್ಟೊಂದು ತಿಳಿವಳಿಕೆಯೂ ಇರಲಿಲ್ಲ. ಏಕೆಂದರೆ ಅದೊಂದು ಸಮಸ್ಯೆಯಾಗಿರಲಿಲ್ಲ. ಕಳೆದ ಎರಡು ದಶಕಗಳಿಂದ ಇತ್ತೀಚೆಗೆ ಮನೆ ಕಸದ ಜೊತೆಗೆ ಪ್ಲಾಸ್ಟಿಕ್ ಹಾಗೂ ಇನ್ನಿತರ ಕೊಳೆಯಲಾರದ ತ್ಯಾಜ್ಯ ಸೇರಿದ ನಂತರವೇ ಅದರ ಸಮಸ್ಯೆ ಗಂಭೀರ ಸ್ವರೂಪ ತಾಳಿತು. ಈಗ ಪ್ರತಿಯೊಂದು ಕುಟುಂಬವೂ ಮತ್ತು ಮನೆಯ ಪ್ರತೀ ಸದಸ್ಯರೂ ತ್ಯಾಜ್ಯ ವಿಲೇವಾರಿ ತಿಳಿದುಕೊಂಡಿದ್ದಾರೆ. ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಕೆಲ ತರಗತಿಗಳಲ್ಲಿ ತ್ಯಾಜ್ಯ ವಿಲೇವಾರಿ ಕುರಿತ ಪಾಠಗಳನ್ನು ಅಳವಡಿಸಲಾಗಿದೆ. ಆ ಮೂಲಕವೂ ಶಾಲಾ ವಯಸ್ಸಿನ ಮಕ್ಕಳಲ್ಲಿ ತ್ಯಾಜ್ಯ ವಿಲೇವಾರಿಯ ಮಹತ್ವ ತಿಳಿಸಲಾಗುತ್ತದೆ.
ಬಹುತೇಕ ಮಕ್ಕಳ ಪ್ರಕಾರ, ತರಗತಿಯಲ್ಲಿನ ಪಾಠ ಕೇವಲ ಪರೀಕ್ಷೆಗೆ ಎಂಬಂತಾಗಿದೆ. ಅದನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವ ಮಕ್ಕಳು ತುಂಬಾ ಕಡಿಮೆ. ಆದರೆ ಕೆಲವೇ ಕೆಲವರು ತರಗತಿಯಲ್ಲಿನ ಪಾಠವನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇಡೀ ಜಗತ್ತಿಗೆ ಮಾದರಿಯಾದ ಉದಾಹರಣೆಗಳಿವೆ. ಅಂತಹ ಉದಾಹರಣೆ ಎಂದರೆ ದಿಲ್ಲಿ ನಿವಾಸಿಗಳಾದ ವಿಹಾನ್ ಮತ್ತು ನವ್ ಅಗರ್ವಾಲ್ ಸಹೋದರರು. 2017ರಲ್ಲಿ ದಿಲ್ಲಿ ಬಳಿಯ ಗಾಜಿಪುರದ ತ್ಯಾಜ್ಯ ಘಟಕದಲ್ಲಿ ಉಂಟಾದ ಬೆಂಕಿ ಅನಾಹುತದ ಸುದ್ದಿಗಳು ಮಾಧ್ಯಮಗಳಲ್ಲಿ ಭಿತ್ತರವಾದವು. ಇದನ್ನು ಗಮನಿಸಿದ ವಿಹಾನ್ ಮತ್ತು ನವ್ ಸಹೋದರರು ಈ ಕುರಿತು ಗಂಭೀರವಾಗಿ ಯೋಚಿಸಿದರು. ಆಗಿನ್ನೂ ಅವರಿಗೆ ಕ್ರಮವಾಗಿ 14 ಮತ್ತು 11 ವರ್ಷ ವಯಸ್ಸಾಗಿತ್ತು.
ವಾಹನಗಳ ಹೊಗೆ ಅಂದರೆ ಪಳೆಯುಳಿಕೆ ಇಂಧನಗಳಿಂದ ವಾಯು ಮಾಲಿನ್ಯ ಉಂಟಾಗುತ್ತದೆ ಎಂಬುದನ್ನು ಶಾಲೆಗಳಲ್ಲಿ ಕಲಿಸಲಾಗುತ್ತದೆ. ಗಾಜಿಪುರದ ಘಟನೆಯ ನಂತರ ಶೇ. 30-40ರಷ್ಟು ವಾಯುಮಾಲಿನ್ಯವು ತ್ಯಾಜ್ಯ ಘಟಕಗಳಿಂದ ಉಂಟಾಗುತ್ತದೆ ಎಂಬುದನ್ನು ಅಗರ್ವಾಲ್ ಸಹೋದರರು ಗಮನಿಸಿದರು. ತ್ಯಾಜ್ಯ ವಿಲೇವಾರಿ ವಿಧಾನಗಳು ಮತ್ತು ಅವುಗಳ ಸ್ವರೂಪದ ಬಗ್ಗೆ ಅಧ್ಯಯನ ನಡೆಸಿದರು. ನಂತರ ಈ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥಿತ ರೂಪ ನೀಡಬೇಕೆಂದು ನಿರ್ಧರಿಸಿದರು. ಅದರ ಪರಿಣಾಮವಾಗಿ 2019ರಲ್ಲಿ ಒನ್ ಸ್ಟೆಪ್ ಗ್ರೀನರ್ ಹೆಸರಿನ ತ್ಯಾಜ್ಯ ನಿರ್ವಹಣಾ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಸಂಸ್ಥೆಯಿಂದ ತ್ಯಾಜ್ಯ ಶಿಕ್ಷಣ ಮತ್ತು ಸಾಮಾಜಿಕ ಅಭಿಯಾನಗಳ ಮೂಲಕ ಶೂನ್ಯ ವೇಸ್ಟ್ ಭವಿಷ್ಯದ ಕಡೆಗೆ ಹೆಜ್ಜೆ ಹಾಕಿದರು.
ಒನ್ ಸ್ಟೆಪ್ ಗ್ರೀನರ್ನ ಪ್ರಮುಖ ಕಾರ್ಯವು ತ್ಯಾಜ್ಯ ನಿರ್ವಹಣೆಯ ಸುತ್ತ ಸುತ್ತುತ್ತದೆ. ತಮ್ಮ ಜನವಸತಿ ಪ್ರದೇಶಗಳ ಕುಟುಂಬಗಳಿಂದ ತ್ಯಾಜ್ಯವನ್ನು ಆರ್ದ್ರ, ಒಣ ಮತ್ತು ಅಪಾಯಕಾರಿ ಎಂದು ವಿವಿಧ ವರ್ಗಗಳಾಗಿ ವಿಂಗಡಿಸುತ್ತಾರೆ. ಅದಕ್ಕಾಗಿ ಸ್ವಂತ ಇಲೆಕ್ಟ್ರಿಕ್ ಟ್ರಕ್ ಹೊಂದಿದ್ದಾರೆ. ಮನೆಮನೆಗೆ ತೆರಳಿ ಬೇರ್ಪಡಿಸಿದ ಒಣ ತ್ಯಾಜ್ಯವನ್ನು ತೆಗೆದುಕೊಳ್ಳುತ್ತಾರೆ. ಅದರಲ್ಲಿ ಬಾಟಲಿಗಳು, ಕ್ಯಾನ್ಗಳು ಮತ್ತು ಕಾಗದದಂತಹ ಒಣ ವಸ್ತುಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಪ್ರತ್ಯೇಕವಾಗಿ ವಿಂಗಡಿಸುತ್ತಾರೆ. ಜೊತೆಗೆ ಇ-ವೇಸ್ಟ್ನ ಪರಿಕರಗಳನ್ನೂ ಸಂಗ್ರಹಿಸುತ್ತಾರೆ. ಅದರಲ್ಲಿ ವೈರ್ಗಳು, ಕೀಬೋರ್ಡ್ಗಳು, ಮೌಸ್, ಮಾನಿಟರ್ಗಳು ಮತ್ತು ಪರದೆಗಳನ್ನು ಪ್ರತ್ಯೇಕಿಸಿ ಅಗತ್ಯ ಇದ್ದವರಿಗೆ ಮರುಬಳಕೆಗೆ ಉಚಿತವಾಗಿ ನೀಡುತ್ತಾರೆ.
ಪ್ರಾರಂಭದಲ್ಲಿ ತಾಯಿಯ ಮೊಬೈಲ್ನಿಂದ ಚಾಟ್ ಮಾಡುವ ಮೂಲಕ ಅಕ್ಕಪಕ್ಕದ ಮನೆಗಳಿಂದ ತ್ಯಾಜ್ಯ ಸಂಗ್ರಹಿಸಿದರು. ಆನಂತರ ತಮ್ಮ ವಠಾರ ಮತ್ತು ಅಕ್ಕಪಕ್ಕದ ವಠಾರಗಳಿಂದ ತ್ಯಾಜ್ಯ ಸಂಗ್ರಹಿಸಿ ನಿರ್ವಹಣೆ ಮಾಡಲು ಪ್ರಾರಂಭಿಸಿದರು. ನಂತರ ತ್ಯಾಜ್ಯ ನೀಡುವವರ ಹೆಸರನ್ನು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸಿದರು. ಒಂದೂವರೆ ತಿಂಗಳಲ್ಲಿ ಸುಮಾರು ನೂರಕ್ಕೂ ಕುಟುಂಬಗಳು ನೋಂದಾಯಿಸಿಕೊಳ್ಳುವ ಮೂಲಕ ಇವರ ಚಟುವಟಿಕೆಗೆ ಕೈಜೋಡಿಸಿದರು.
ಕೇವಲ ತ್ಯಾಜ್ಯ ನಿರ್ವಹಣೆ ಇವರ ಉದ್ದೇಶವಾಗಿರಲಿಲ್ಲ. ತ್ಯಾಜ್ಯ ನಿರ್ವಹಣೆಯ ಜೊತೆಗೆ ನಗರ ಪ್ರದೇಶಗಳಲ್ಲಿ ಮರಗಳನ್ನು ನೆಡುವ ಮೂಲಕ ಹವಾಮಾನ ಬದಲಾವಣೆಯನ್ನು ಎದುರಿಸಲು ಸಕಲ ಸಿದ್ಧತೆ ನಡೆಸಿದರು. 2019ರಲ್ಲಿ ಅವರು ತಮ್ಮ ಮೊದಲ ಯೋಜನೆಯ ಭಾಗವಾಗಿ ದಿಲ್ಲಿಯಲ್ಲಿ 300 ಮರಗಳನ್ನು ನೆಟ್ಟರು. ಸಹೋದರರ ನಾಯಕತ್ವದ ಮೂಲಕ ಶಾಲಾ ಕಾಲೇಜುಗಳಲ್ಲಿ ಪರಿಸರ ಶಿಕ್ಷಣ ಯೋಜನೆಗಳನ್ನು ಕೈಗೊಂಡರು. ಇದರಿಂದ ಪರಿಸರ ಕಾಳಜಿಯ ಮಹತ್ವವನ್ನು ಬೋಧಿಸುತ್ತಾ, ಪರಿಸರ ಸಂರಕ್ಷಣೆಯ ವಿಧಾನಗಳನ್ನು ಕಾರ್ಯಗತಗೊಳಿಸುವ ಕೆಲಸದಲ್ಲಿ ಯಶಸ್ವಿಯಾದರು. ಭಾರತದಲ್ಲಿ ತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಿರುವುದರಿಂದ ಜನರಿಗೆ ತ್ಯಾಜ್ಯ ಕುರಿತುಶಿಕ್ಷಣ ನೀಡುವುದನ್ನು ಮೊದಲ ಆದ್ಯತೆಯನ್ನಾಗಿ ಪರಿಗಣಿಸಿದರು. ಅದರ ಭಾಗವಾಗಿ ಸುಮಾರು 30,000ಕ್ಕೂ ಹೆಚ್ಚು ಜನರಿಗೆ ತ್ಯಾಜ್ಯದ ಸಮಸ್ಯೆಯ ಬಗ್ಗೆ ಶಿಕ್ಷಣ ನೀಡಿದ್ದಾರೆ.
ತ್ಯಾಜ್ಯ ಆಯುವವರನ್ನು ತುಚ್ಛವಾಗಿ ಕಾಣುತ್ತಿರುವ ಇಂದಿನ ದಿನಗಳಲ್ಲಿ ತ್ಯಾಜ್ಯದಿಂದಲೇ ಬದುಕು ಕಟ್ಟಿಕೊಳ್ಳಲು ಹೊರಟ ಸಹೋದರರು ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಇವರು ನೀಡಿದ ಶಿಕ್ಷಣದಿಂದ ಪ್ರೇರಿತರಾದ ಕೆಲವರಿಗೆ ಉದ್ಯೋಗವನ್ನು ನೀಡಿದ್ದಾರೆ. ನೌಕರರಿಂದ ಸ್ವೀಕರಿಸಿದ ತ್ಯಾಜ್ಯವನ್ನು ಗೋದಾಮಿಗೆ ಕೊಂಡೊಯ್ದು ಅಲ್ಲಿ ಪ್ರತ್ಯೇಕಿಸುತ್ತಾರೆ. ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಅಗತ್ಯ ಇರುವವರಿಗೆ ನೀಡುತ್ತಾರೆ. ಇದರಿಂದ ಪರಿಸರಕ್ಕೆ ಆಗಬಹುದಾದ ಹಾನಿಯನ್ನು ತಪ್ಪಿಸುತ್ತಾರೆ.
ವಿಹಾನ್ ಮತ್ತು ನವ್ ಅಗರ್ವಾಲ್ ಸಹೋದರರು ಪ್ರಸಕ್ತ 62 ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾವು ಇದುವರೆಗೆ 4.5 ಲಕ್ಷ ಕೆಜಿ ತ್ಯಾಜ್ಯವನ್ನು ಮರುಬಳಕೆ ಮಾಡಿದ್ದೇವೆ. 3,00,000ಕ್ಕೂ ಹೆಚ್ಚು ಜನರನ್ನು ದತ್ತು ತೆಗೆದುಕೊಂಡಿದ್ದೇವೆ ಮತ್ತು ತರಬೇತಿ ನೀಡಿದ್ದೇವೆ. 16,000 ಮರಗಳನ್ನು ನೆಟ್ಟು ಉಳಿಸಿದ್ದೇವೆ. ಸುಮಾರು 3.83 ಮಿಲಿಯನ್ ಲೀಟರ್ ನೀರನ್ನು ಉಳಿಸಿದ್ದೇವೆ. 1,801 ಘನ ಮೀಟರ್ ಭೂಪ್ರದೇಶವನ್ನು ತ್ಯಾಜ್ಯದಿಂದ ಮುಕ್ತ ಮಾಡಿದ್ದೇವೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥ ವಿಹಾನ್.
ಇವರು ಇದುವರೆಗೆ 5,000 ಕೆಜಿ ಕಾಗದ, 1,800 ಕೆಜಿ ಕಾರ್ಡ್ಬೋರ್ಡ್, 500 ಕೆಜಿ ಲೋಹ, 900 ಕೆಜಿ ಪ್ಲಾಸ್ಟಿಕ್ಗಳು ಮತ್ತು 1,200 ಕೆಜಿ ಗ್ಲಾಸ್ಗಳನ್ನು ಮರುಬಳಕೆ ಮಾಡಿದ್ದಾರೆ. ಇದು 95 ಮರಗಳು, 7,000 ಲೀಟರ್ ತೈಲ, 25 ಘನ ಮೀಟರ್ ಭೂ ಪ್ರದೇಶ ಭರ್ತಿಯನ್ನು ತಪ್ಪಿಸಿದೆ. ಇದು ಸರಾಸರಿ 7,500 ಕುಟುಂಬಗಳಿಗೆ ದಿನಕ್ಕೆ 1,30,000 ಲೀಟರ್ ನೀರು ಮತ್ತು ಶಕ್ತಿ ನೀಡಲು ಸಮಾನವಾಗಿದೆ ಎಂಬುದು ಸಹೋದರರ ಅನಿಸಿಕೆ. ಭಾರತದ ಎಲ್ಲಾ ನಗರಗಳಿಗೆ ತಮ್ಮ ಕಾರ್ಯಯೋಜನೆಯನ್ನು ವಿಸ್ತರಿಸುವುದು ಅವರ ಮುಂದಿನ ಗುರಿಯಾಗಿದೆ. ಇವರ ಗುರಿ ಆದಷ್ಟು ಬೇಗನೆ ಎಲ್ಲಾ ನಗರಗಳಲ್ಲೂ ಜಾರಿಗೆ ಬರಲಿ ಮತ್ತು ಅಲ್ಲಿನ ತ್ಯಾಜ್ಯ ನಿರ್ವಹಣೆಯು ಹೊಸ ಸಾಧ್ಯತೆಗಳೊಂದಿಗೆ ಮರುಬಳಕೆಯಾಗಲಿ ಎಂಬುದೇ ನಮ್ಮ ಆಶಯ.