ಶನಿಗ್ರಹದ ಉಂಗುರ ಮಾಯವಾಗಲಿದೆಯೇ?
ನಮ್ಮ ಸೌರವ್ಯೆಹದಲ್ಲಿ ಅತ್ಯಂತ ಸುಂದರ ಗ್ರಹ ಎಂದರೆ ಶನಿ. ಅದರ ಸೌಂದರ್ಯ ವರ್ಧಕಗಳೆಂದರೆ ಉಂಗುರಗಳು. ಬಾಲ್ಯದಿಂದಲೂ ನನಗೆ ಶನಿಯ ಉಂಗುರಗಳ ಬಗ್ಗೆ ಕುತೂಹಲ. ಶಿಕ್ಷಕರು ಶನಿಗೆ ಉಂಗುರವಿದೆ ಎಂದು ಹೇಳಿದಾಗ ಅದು ಬೆರಳಿಗೆ ಹಾಕಿಕೊಳ್ಳುವ ಉಂಗುರದ ರೀತಿ ಇರಬಹುದು ಎಂಬ ಕಲ್ಪನೆ ಇತ್ತು. ನಂತರದ ದಿನಗಳಲ್ಲಿ ಅದು ಬೆರಳಿಗೆ ಹಾಕುವ ಉಂಗುರದಂತಿಲ್ಲ, ಬದಲಿಗೆ ಶನಿಗ್ರಹವನ್ನು ಸುತ್ತುವರಿದಿರುವ ಮೋಡದ ಪಟ್ಟಿ ಎಂಬುದು ತಿಳಿಯಿತು. ಹೀಗೆ ಖ್ಯಾತಿಗೆ ಕಾರಣವಾಗಿದ್ದ ಶನಿಯ ಉಂಗುರಗಳು ಈಗ ಸುದ್ದಿಯಲ್ಲಿವೆ. ಕೆಲ ವಾರಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ 2025ರ ವೇಳೆಗೆ ಶನಿಯ ಉಂಗುರಗಳು ಮಾಯವಾಗಲಿವೆ, ಶನಿಗೆ ಗಂಡಾಂತರವಿದೆ ಎಂಬಂತಹ ಸುದ್ದಿಗಳು ವೈರಲ್ ಆಗಿವೆ. ಇದು ನಿಜವೋ, ಸುಳ್ಳೋ ತಿಳಿಯದೇ ಅನೇಕ ಜನರು ಆತಂಕದಲ್ಲಿದ್ದಾರೆ.
ಸಣ್ಣ ದುರ್ಬೀನು ಅಥವಾ ಸಾಮಾನ್ಯ ದೂರದರ್ಶಕದಿಂದ ಕಾಣಬಹುದಾದ ಶನಿ ಗ್ರಹ ಪ್ರಥಮ ನೋಟದಲ್ಲೇ ಆಕರ್ಷಿಸುತ್ತದೆ. ಸಂಜೆ ಅಥವಾ ಸೂರ್ಯೋದಯಕ್ಕೂ ಮುಂಚೆ ಒಂದು ಸಣ್ಣ ಚುಕ್ಕೆಯಂತೆ ಕಾಣುವ ಈ ಗ್ರಹವನ್ನು ದೂರದರ್ಶಕದಲ್ಲಿ ನೋಡುವುದೇ ಒಂದು ಸೊಗಸು. ಬರಿಗಣ್ಣಿಗೆ ಚುಕ್ಕೆಯಂತೆ ಗೋಚರಿಸಿದ ಶನಿಗ್ರಹ ಗೆಲಿಲಿಯೋನನ್ನು ಆಕರ್ಷಿಸಿತು. 1610ರಲ್ಲಿ ಗೆಲಿಲಿಯೋ ದೂರದರ್ಶಕದಲ್ಲಿ ಶನಿಗ್ರಹವನ್ನು ನೋಡಿದಾಗ ಅದರ ಎರಡೂ ಬದಿಗಳಲ್ಲೂ ಏನೋ ವಿಚಿತ್ರ ವಿಸ್ತರಣೆಗಳು ಕಂಡವು. ಅದನ್ನು ಚಿತ್ರದ ಮೂಲಕ ಗೆಲಿಲಿಯೋ ದಾಖಲಿಸಿದ. 1612ರಲ್ಲಿ ಈ ವಿಸ್ತರಣೆಗಳು ಮಾಯವಾಗಿದ್ದನ್ನು ಗೆಲಿಲಿಯೋ ಗಮನಿಸಿದ ಮತ್ತು ಅವು ಪುನಃ ಕಾಣಿಸಿಕೊಳ್ಳುವ ವಿಶ್ವಾಸ ಹೊಂದಿದ್ದ. ಅವನ ಎಣಿಕೆಯಂತೆ 1616ರಲ್ಲಿ ಅವು ಕಾಣಿಸಿಕೊಂಡವು. ಅವುಗಳ ಕೂಲಂಕಶ ವೀಕ್ಷಣೆ ಮತ್ತು ಅಧ್ಯಯನಗಳಿಂದ ಅವುಗಳಿಗೆ ಉಂಗುರ ಎಂದು ಹೆಸರಿಡಲಾಯಿತು. ಈ ಉಂಗುರವು ಸಪಾಟಾಗಿದ್ದು ಅದು ಕ್ರಾಂತಿವೃತ್ತಕ್ಕೆ ಓರೆಯಾಗಿದೆ ಮತ್ತು ಗ್ರಹವನ್ನು ಎಲ್ಲಿಯೂ ಸ್ಪರ್ಶಿಸುತ್ತಿಲ್ಲ ಎಂಬುದನ್ನು ತಿಳಿಸಿದ. ಇದನ್ನು 1675ರಲ್ಲಿ ಜೆ.ಡಿ.ಕೆಸ್ಸೀನಿ ದೃಢಪಡಿಸಿದ. 16ನೇ ಶತಮಾನದಲ್ಲಿ ಪ್ರಾರಂಭವಾದ ಶನಿಗ್ರಹದ ಉಂಗುರಗಳ ಚರ್ಚೆಯು ನಿರಂತರವಾಗಿ ನಡೆಯುತ್ತಲೇ ಇತ್ತು.
1979-80ರ ಅವಧಿಯಲ್ಲಿ ಹಾರಿದ ವಾಯೇಜರ್ ನೌಕೆಗಳು ಶನಿಯ ಸಮೀಪದ ದೃಶ್ಯಗಳನ್ನು ಸೆರೆಹಿಡಿದವು. ಆ ದೃಶ್ಯಗಳಿಂದ ಶನಿಗ್ರಹದ ಉಂಗುರಗಳ ಕುರಿತ ಅಧಿಕೃತ ಮಾಹಿತಿ ಲಭ್ಯವಾಯಿತು. ಶನಿಯ ಉಂಗುರಗಳು ಸಣ್ಣ ಸಣ್ಣ ಹಿಮದ ಕಣಗಳಿಂದ ದೊಡ್ಡ ದೊಡ್ಡ ಗಾತ್ರದ ಹಿಮ ಲೇಪಿತ ಕಲ್ಲುಬಂಡೆಗಳಿಂದ ಆಗಿದೆ ಎಂಬುದು ತಿಳಿಯಿತು. ಸೂರ್ಯನ ಬೆಳಕು ಈ ಹಿಮದ ಮೇಲೆ ಬಿದ್ದಾಗ ಪ್ರತಿಫಲನ ಹೊಂದಿ ಅದು ಉಂಗುರದ ರೀತಿಯಲ್ಲಿ ಗೋಚರಿಸುತ್ತದೆ. ಉಂಗುರವು ಶನಿಯ ಸಮಭಾಜಕದ ಮೇಲೆ ನೇರವಾಗಿ ಸುತ್ತುತ್ತವೆ. ಆದ್ದರಿಂದ ಅವು ಕೂಡ ಶನಿಯ ಕಕ್ಷೆಯ ಸಮತಲಕ್ಕೆ ವಾಲುತ್ತದೆ. ಈ ಉಂಗುರವು ಮೀಟರ್‌ನಿಂದ ಕಿ.ಮೀ.ನಷ್ಟು ದಪ್ಪವಾಗಿದೆ. ಹೀಗಿದ್ದರೂ ಅದು ಮಾಯವಾಗುವುದೇಕೆ? ಎಂಬ ಪ್ರಶ್ನೆ ಕಾಡುತ್ತದೆ.
ವಾಸ್ತವದಲ್ಲಿ ಶನಿಗ್ರಹದ ಉಂಗುರವು ಮಾಯವಾಗುವುದಿಲ್ಲ. ಬದಲಿಗೆ ಕೆಲ ಸಮಯದವರೆಗೆ ನಮ್ಮ ಕಣ್ಣುಗಳಿಗೆ ಕಾಣುವುದಿಲ್ಲ ಅಷ್ಟೆ. ಇದಕ್ಕೆ ಕಾರಣವೂ ಇದೆ. ಈ ತಾತ್ಕಾಲಿಕ ಕಣ್ಮರೆಗೆ ಕಾರಣವು ಶನಿಯ ಓರೆ ಮತ್ತು ಆಪ್ಟಿಕಲ್ ಭ್ರಮೆಗೆ ಸಂಬಂಧಿಸಿದೆ. ಭೂಮಿ ತನ್ನ ಅಕ್ಷದಲ್ಲಿ 23.5 ಡಿಗ್ರಿ ಓರೆಯಾಗಿರುವಂತೆ ಶನಿಗ್ರಹವೂ ಸಹ ತನ್ನ ಅಕ್ಷದಲ್ಲಿ 26.7 ಡಿಗ್ರಿ ಓರೆಯಾಗಿದೆ. ಭೂಮಿ ತನ್ನ ಕಕ್ಷೆಯನ್ನು ಪೂರ್ಣಗೊಳಿಸಲು ಒಂದು ವರ್ಷವನ್ನು ತೆಗೆದುಕೊಳ್ಳುವಂತೆ ಶನಿಯು ತನ್ನ ಕಕ್ಷೆಯನ್ನು ಪೂರ್ಣಗೊಳಿಸಲು 29.5 ವರ್ಷಗಳನ್ನು ತೆಗೆದುಕೊಳ್ಳುತ್ತದೆ.
ಹೀಗೆ ಎರಡೂ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸುತ್ತುತ್ತಾ ಇರುವಾಗ ಪ್ರತೀ 13ರಿಂದ 15 ವರ್ಷಗಳಿಗೊಮ್ಮೆ ಕೆಲ ಸಮಯದವರೆಗೆ ನೇರವಾಗಿ ಚಲಿಸುತ್ತವೆ. ಆ ಸಮಯದಲ್ಲಿ ಶನಿಯ ಉಂಗುರಗಳ ಅಂಚು ಭೂಮಿಯೊಂದಿಗೆ ನೇರವಾಗಿರುತ್ತದೆ. ಹೆಚ್ಚಿನ ಸ್ಥಳಗಳಲ್ಲಿ ಶನಿಯ ಉಂಗುರ ತುಂಬಾ ತೆಳುವಾಗಿರುವುದರಿಂದ ಈ ಸ್ಥಾನದಲ್ಲಿ, ಅವು ಕಡಿಮೆ ಬೆಳಕನ್ನು ಪ್ರತಿಬಿಂಬಿಸುತ್ತವೆ. ಆಗ ಭೂಮಿಯಿಂದ ಅವು ಕಾಣುವುದಿಲ್ಲ. ಮಾರ್ಚ್ 2025ರ ವೇಳೆಗೆ ಶನಿಯ ಉಂಗುರಗಳು ಭೂಮಿಯಿಂದ ಗೋಚರಿಸುವುದಿಲ್ಲ. ಏಕೆಂದರೆ ಅವು ನಮ್ಮ ದೃಷ್ಟಿಗೆ ಸಂಪೂರ್ಣವಾಗಿ ನೇರದಲ್ಲಿರುತ್ತವೆ. ಶನಿ ಗ್ರಹವು ಸೂರ್ಯನ ಸುತ್ತ ಸುತ್ತುವುದನ್ನು ಮುಂದುವರಿಸುವುದರಿಂದ ಕ್ರಮೇಣವಾಗಿ ಉಂಗುರಗಳು ಗೋಚರಿಸುತ್ತವೆ.
ಈ ವಿದ್ಯಮಾನವನ್ನು ಒಂದು ಉದಾಹರಣೆ ಮೂಲಕ ಅರ್ಥೈಸಿಕೊಳ್ಳಬಹುದು. ನಾವು ಒಂದು ಆಟದ ಮೈದಾನದಲ್ಲಿದ್ದೇವೆ ಎಂದು ಭಾವಿಸಿಕೊಳ್ಳೋಣ. ಒಂದು ಸ್ಟಿಫ್ ಆಗಿರುವ ಕಾಗದವನ್ನು ಭೂಮಿಗೆ ಸಮಾಂತರದಲ್ಲಿರುವಂತೆ ನಮ್ಮ ಕಣ್ಣುಗಳ ನೇರಕ್ಕೆ ಸ್ವಲ್ಪ ದೂರದಲ್ಲಿ ಹಿಡಿಯೋಣ. ಕಾಗದದ ಅಂಚನ್ನು ಗಮನಿಸುತ್ತಾ ಮೈದಾನದಲ್ಲಿನ ಆಟಗಾರರನ್ನು ಅಥವಾ ಇನ್ನಾವುದೇ ಸ್ಥಿರ ಚಿತ್ರಣವನ್ನು ಗಮನಿಸಿದರೆ ಕಾಗದ ನಮಗೆ ಕಾಣುವುದೇ ಇಲ್ಲ. ಏಕೆಂದರೆ ಅದರ ಅಂಚು ನಮ್ಮ ಕಣ್ಣಿನ ನೇರದಲ್ಲಿರುತ್ತದೆ. ಇದೇ ರೀತಿ 2025ರಲ್ಲಿಯೂ ಶನಿಗ್ರಹದ ಉಂಗುರ ನಮ್ಮ ಕಣ್ಣಿಗೆ ಕಾಣದೇ ಅದೃಶ್ಯವಾಗಿರುತ್ತದೆ.
ಈ ವಿದ್ಯಮಾನವು ಪ್ರತೀ 13ರಿಂದ 15 ವರ್ಷಗಳಿಗೊಮ್ಮ ನಡೆಯುತ್ತದೆ. ಇದನ್ನು ರಿಂಗ್ ಪ್ಲೇನ್ ಕ್ರಾಸಿಂಗ್ ಎನ್ನಲಾಗುತ್ತದೆ. ಖಗೋಳ ವಿಜ್ಞಾನಿಗಳ ಪಾಲಿಗೆ ರಿಂಗ್ ಪ್ಲೇನ್ ಕ್ರಾಸಿಂಗ್ ಒಂದು ಅದ್ಭುತ ಅವಕಾಶ. ರಿಂಗ್ ಪ್ಲೇನ್ ಕ್ರಾಸಿಂಗ್ ಸಮಯದಲ್ಲಿಯೇ ಶನಿಯ ಉಪಗ್ರಹಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂಬುದು ಖಗೋಳ ವಿಜ್ಞಾನಿಗಳ ಅಭಿಮತ. ಇದಕ್ಕೆ ಪೂರಕ ಎಂಬಂತೆ ಈ ಹಿಂದೆ ನಡೆದ ರಿಂಗ್ ಪ್ಲೇನ್ ಕ್ರಾಸಿಂಗ್ ಸಮಯದಲ್ಲಿ ಶನಿಯ 13 ಉಪಗ್ರಹಗಳು ಪತ್ತೆಯಾಗಿವೆ. ಸದ್ಯಕ್ಕೆ ಅಂದರೆ ಜೂನ್ 8, 2023ರ ಹೊತ್ತಿಗೆ ಶನಿಗ್ರಹದ ಕಕ್ಷೆಯಲ್ಲಿ 146 ಉಪಗ್ರಹಗಳು ಪತ್ತೆಯಾಗಿವೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂಬುದು ಖಗೋಳ ವಿಜ್ಞಾನಿಗಳ ಅನಿಸಿಕೆ.
ಶನಿಯ ಉಂಗುರಗಳು ಅದೃಶ್ಯವಾಗುವಿಕೆಯು ತಾತ್ಕಾಲಿಕವಾಗಿದೆ. 2027 ಅಥವಾ 2028ರ ನಂತರ ಸಂಪೂರ್ಣವಾಗಿ ಮತ್ತು ಸ್ಪಷ್ಟವಾಗಿ ಗೋಚರಿಸುತ್ತವೆ. ಆದರೂ ಭವಿಷ್ಯದಲ್ಲಿ ಶನಿಯ ಉಂಗುರಗಳು ಸಂಪೂರ್ಣವಾಗಿ ಕಣ್ಮರೆಯಾಗುವ ಸಾಧ್ಯತೆಯಿದೆ ಎಂಬುದು ಖಗೋಳ ವಿಜ್ಞಾನಿಗಳ ಲೆಕ್ಕಾಚಾರವಾಗಿದೆ. ರಿಂಗ್ ಮಳೆ ಎಂದು ಕರೆಯಲ್ಪಡುವ ಒಂದು ವಿದ್ಯಮಾನವು ಶನಿಗ್ರಹ ಉಂಗುರ ನಷ್ಟದ ಪ್ರೇರಕ ಶಕ್ತಿಯಾಗಿದೆ. ಕಾಸ್ಮಿಕ್ ಕಿರಣಗಳಿಂದ ಉಂಗುರಗಳಲ್ಲಿನ ಹಿಮವು ಮಳೆಯಾಗಿ ಬೀಳುವುದೇ ರಿಂಗ್ ಮಳೆ. ಈ ವಿದ್ಯಮಾನದಿಂದ ಶನಿಯ ಉಂಗುರಗಳು ಪ್ರತಿ ಸೆಕೆಂಡಿಗೆ 432 ಲೀಟರ್ ಮತ್ತು 2,870 ಲೀಟರ್‌ನಷ್ಟು ನೀರನ್ನು ಕಳೆದುಕೊಳ್ಳುತ್ತಿವೆ ಅಥವಾ ಪ್ರತೀ 30 ನಿಮಿಷಗಳಿಗೊಮ್ಮೆ ಸಾಮಾನ್ಯ ಗಾತ್ರದ ಈಜುಕೊಳ ತುಂಬುವಷ್ಟು ಪ್ರಮಾಣದ ನೀರು ನಷ್ಟವಾಗುತ್ತದೆ. ಈ ವಿದ್ಯಮಾನದಿಂದ 1.5 ಕೋಟಿ ವರ್ಷಗಳಿಂದ 40 ಕೋಟಿ ವರ್ಷಗಳಲ್ಲಿ ಶನಿಯ ಉಂಗುರಗಳು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಮಾಯವಾಗಬಹುದು ಎಂಬುದು ಸದ್ಯದ ಲೆಕ್ಕಾಚಾರ. ಅದೇನೇ ಇರಲಿ ಸದ್ಯಕ್ಕಂತೂ ಶನಿಯ ಸುಂದರ ಉಂಗುರಗಳು ಸಂಪೂರ್ಣವಾಗಿ ಮಾಯವಾಗುವುದಿಲ್ಲ. ಒಂದು ವೇಳೆ ತಾತ್ಕಾಲಿಕವಾಗಿ ಮಾಯವಾದರೂ ಶನಿಯ ಹೊಸ ಉಪಗ್ರಹಗಳ ಪತ್ತೆಗೆ ಸಹಾಯಕವಾಗುತ್ತದೆ ಎಂಬುದು ಸಂತಸದ ಸಂಗತಿ.