ದೇಹಾಪಮಾನ

ಟೀಕಿಸುವ ಒಂದು ಪಾರಂಪರಿಕ ಮಾನಸಿಕ ಸಮಸ್ಯೆ ಇದೆ. ಅದೆಂದರೆ ವ್ಯಕ್ತಿಗಳನ್ನು ಅವರ ದೇಹ, ಬಣ್ಣ, ಗಾತ್ರ, ವಿಕಲತೆಗಳೇ ಮೊದಲಾದ ಅಂಶಗಳನ್ನು ಗುರಿ ಮಾಡಿಕೊಂಡು ಅಪಹಾಸ್ಯ ಮಾಡುವುದು. ಅದು ನಿಜಕ್ಕೂ ಟೀಕಿಸುವ, ಅಪಹಾಸ್ಯ ಮಾಡುವ, ಆ ಮೂಲಕ ಇನ್ನೊಬ್ಬರ ದೇಹಾಪಮಾನ ಮಾಡುವ ಗೀಳು ವಿಷಕಾರಿಯಾದದ್ದು. ಅವರು ಆಡುವ ಮಾತುಗಳು, ವಾಕ್ಯದಲ್ಲಿರುವ ಪದಗಳು ಮತ್ತು ಮಾತಾಡುವ ಬಗೆ; ಎಲ್ಲವೂ ಕೇಳುಗರಲ್ಲಿ ಮುಜುಗರ, ಅವಮಾನ, ಕೆಳಕ್ಕಿಳಿಸುವ ಮತ್ತು ಕೀಳರಿಮೆಯ ಭಾವವನ್ನು ಉಂಟು ಮಾಡುತ್ತದೆ. ಅವರಲ್ಲಿ ಆತ್ಮ ವಿಶ್ವಾಸ ಕಡಿಮೆಯಾಗುತ್ತದೆ. ತಮ್ಮ ಬಗ್ಗೆ ಯಾರು ಲಘುವಾಗಿ ಮಾತಾಡುತ್ತಾರೋ, ತಮ್ಮ ದೇಹ, ಎತ್ತರ, ವಯಸ್ಸು, ಕೂದಲು, ಬಟ್ಟೆ, ಆಹಾರ, ಆಹಾರದ ಪ್ರಮಾಣ, ಕೂರುವ ಅಥವಾ ನಿಲ್ಲುವ ಭಂಗಿ, ನಡೆಯುವ, ನುಡಿಯುವ ರೀತಿ ಮತ್ತು ಬಣ್ಣ; ಇತ್ಯಾದಿಗಳ ಬಗ್ಗೆ ನಕಾರಾತ್ಮಕವಾಗಿ ಟೀಕೆ ಮಾಡುತ್ತಾರೋ ಆ ವ್ಯಕ್ತಿಯ ಬಗ್ಗೆ ಬೇಸರವೂ ಮತ್ತು ಅನಾದರವೂ ಉಂಟಾಗುತ್ತದೆ. ಯಾವುದೇ ವ್ಯಕ್ತಿ ದೇಹಾಪಮಾನ ಮಾಡುತ್ತಿದ್ದಾರೆಂದರೆ ಅವರು ಸಂವೇದನೆ ಇಲ್ಲದ, ಸೂಕ್ಷ್ಮತೆ ಇಲ್ಲದ, ಕಾಳಜಿ ಇಲ್ಲದ, ಅಷ್ಟೇಕೆ; ಒಟ್ಟಾರೆ ಮನುಷ್ಯತ್ವವೇ ಇಲ್ಲದ ವ್ಯಕ್ತಿಯೆಂದು ಸ್ಪಷ್ಟವಾಗಿ ಹೇಳಬಹುದು.
ನೆನಪಿರಲಿ, ಈ ದೇಹಾಪಮಾನಕ್ಕೆ ಒಳಗಾಗುವ ವ್ಯಕ್ತಿಯು ಖಿನ್ನತೆ, ಆತಂಕವೇ ಮೊದಲಾದ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಆತ್ಮ ವಿಶ್ವಾಸ ಕುಂಠಿತವಾಗುತ್ತದೆ. ಇದು ತಮ್ಮ ದೇಹವನ್ನು ತಾವೇ ನಿರಾಕರಿಸುವ ಅಥವಾ ದ್ವೇಷಿಸಿಕೊಳ್ಳುವಷ್ಟರ ಮಟ್ಟಿಗೆ ಆದರೂ ಆಶ್ಚರ್ಯವಿಲ್ಲ.
ಮಗುವು ಸಣ್ಣಗಿರಲಿ, ದಪ್ಪಗಿರಲಿ ಅದು ಮುಖ್ಯವೇ ಅಲ್ಲ. ಅದು ಆರೋಗ್ಯವಾಗಿರೋದೇ ಮುಖ್ಯ. ಆನುವಂಶೀಯವಾಗಿಯೋ, ಶರೀರ ರಚನೆಯೋ ಹಾಗಿರಬಹುದು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ವೈದ್ಯರೇ ಹೇಳುತ್ತಾರೆ. ಆದರೆ ಸೌಂದರ್ಯ ಅಂದರೆ ಇಂತಹದ್ದು ಅಂತ ರೂಢಿಸಿರುವ ಜನ, ‘‘ಮಕ್ಕಳೂಂದ್ರೆ ದಪ್ಪದಪ್ಪಗೆ, ಗುಂಡುಗುಂಡಗೆ, ಬೆಳ್‌ಬೆಳ್ಳಗೆ ಇದ್ರೆ ಆ ಮಗು ಸುಂದರ!’’ ಎಂದು ಇಲ್ಲಿಂದಲೇ ಅದರ ಸೌಂದರ್ಯ ವಿಮರ್ಶೆ ಪ್ರಾರಂಭಿಸುತ್ತಾರೆ. ಇನ್ನು ಟೀಕೆಗೆ ಗುರಿಯಾದವರು ಹಿಂಜರಿಯುವರು. ಕೀಳರಿಮೆ ಹುಟ್ಟುವುದು. ಈ ಕೀಳರಿಮೆಯನ್ನೇ ಬಂಡವಾಳವಾಗಿಸಿಕೊಂಡು ಕಾಸ್ಮೆಟಿಕ್ ಕಂಪೆನಿ, ಕಪ್ಪುತ್ವಚೆಯಿಂದ ಗೌರವವರ್ಣಕ್ಕೆ ಎಂದು ಹೇಳಿದ್ದಷ್ಟೇ ಅಲ್ಲದೇ ಅದರಿಂದ ಹಾಡುವ, ಆಡುವ, ಓದುವ; ಎಲ್ಲಾ ಆತ್ಮವಿಶ್ವಾಸವೂ ಬರುವುದು ಎಂದು ಹೇಳಿಯೂಬಿಟ್ಟಿತು. ಇಷ್ಟು ದಿನಗಳಲ್ಲಿ ಕಪ್ಪು ತ್ವಚೆಯು ಕಾಂತಿಯುತವಾಗಿ ಗೌರವವರ್ಣಕ್ಕೆ ತಿರುಗುವುದು ಎಂದು ಕಪ್ಪಿನಿಂದ ಅವರು ಹೇಳುವಂತಹ ಗೌರವವರ್ಣದವರೆಗೂ ಬಣ್ಣದಲ್ಲಿ ಕಪ್ಪಿನ ಇಳಿಕೆಯ ವಿವಿಧ ಪಟ್ಟಿಗಳನ್ನೂ ಕೊಟ್ಟರು. ಈ ಉತ್ಪನ್ನವನ್ನು ಕೋಟ್ಯಂತರ ಜನ ಬಳಸಿದರು. ಈ ಸಂಗತಿಯನ್ನು ಗಮನಿಸಿ, ಅಷ್ಟು ಪ್ರಮಾಣದ ಜನರು ಕೀಳರಿಮೆಯಿಂದ ಬಳಲುತ್ತಿದ್ದರು. ತಮ್ಮದೇ ಸಹಜವಾದ ಬಣ್ಣವನ್ನು ತಾವು ನಿರಾಕರಿಸುತ್ತಿದ್ದರು.
ಹಾಗೆಯೇ ಕೂದಲು! ಕೂದಲಿನ ಕಪ್ಪು ಬಣ್ಣದಲ್ಲಿ ಯೌವನವಿದೆಯೇ! ತಲೆಗೆ ಸತತವಾಗಿ ಬಣ್ಣ ಬಳಿಯುತ್ತಾ ಅದರಿಂದ ನಾನಾಬಗೆಯ ತೊಂದರೆಗಳಾಗಿರುವುದು, ಕಣ್ಣಿನ ದೃಷ್ಟಿಯೇ ಹೋಗಿರುವುದರ ಉದಾಹರಣೆಗಳು ಬೇಕಾದಷ್ಟಿವೆ. ಗಂಡಸರಿಗಂತೂ ಕೂದಲಿಗೆ ಬಣ್ಣ ಬಳಿಯುವ ಸಮಸ್ಯೆ ತುಂಬಾ ಗಾಢವಾಗಿರುತ್ತದೆ. ಮೀಸೆಯೊಂದು ಬಣ್ಣ, ಅರೆಬರೆ ತನ್ನ ಮೂಲವನ್ನು ತೋರಿಸಲು ಗಡ್ಡದ ಬುಡದ ಬಣ್ಣ, ತಲೆಯೊಂದು ಬಣ್ಣ; ಎಲ್ಲಾ ಚೌಚೌ. ಸಹಜವಾಗಿ ಅವು ಹೇಗಿರುತ್ತವೆಯೋ ಹಾಗೆಯೇ ವಿನ್ಯಾಸ ಮಾಡಿಕೊಂಡರೆ ಅದು ನಿಜಕ್ಕೂ ಚೆನ್ನಾಗಿಯೇ ಇರುತ್ತದೆ. ಹಾಗೆಯೇ, ಮುಕ್ತವಾಗಿ ನಗಲೂ ಆಗದಂತೆ ಉಬ್ಬು ಹಲ್ಲಿನ ವ್ಯಕ್ತಿಗಳಿಗೆ ಕೀಳರಿಮೆ ಹುಟ್ಟಿಸುವ ದೇಹಾಪಮಾನಗಳಾಗುತ್ತವೆ.
ಇತರರನ್ನು ಆಡಿಕೊಳ್ಳುವುದು, ಅಪಹಾಸ್ಯ ಮಾಡುವುದು, ಅವರ ಬಣ್ಣ, ಎತ್ತರ, ಕಣ್ಣು, ಹಲ್ಲು ಇತ್ಯಾದಿಗಳನ್ನು ಗುರಿಯಾಗಿಸಿಕೊಂಡು ಅಡ್ಡಹೆಸರಿಂದ ಕರೆಯುವುದು, ಕಣ್ಣು ಕಾಣದಿರುವುದಕ್ಕೆ, ನಡೆಯುವ ಸಮಸ್ಯೆ ಇರುವವರಿಗೆ, ಕಿವಿ ಕೇಳದಿರುವುದಕ್ಕೆ, ಕುಂಟ, ಕಿವುಡ, ಮೂಗ, ಬಿಕ್ಲ ಅಂತ ಹೆಸರಿನ ಹಿಂದೆ ಮುಂದೆ ಸೇರಿಸಿ ಹೇಳುವುದು, ಕರಿಯ, ಕೆಂಚ, ಡುಮ್ಮ, ಸಣಕಲ, ಕೊಯಕಲಿ, ವಂಡ್ರೆ, ಬಾಂಡ್ಲಿ ಎಂದೆಲ್ಲಾ ಕರೆಯುವುದು; ಇವೆಲ್ಲಾ ಅಮಾನವೀಯವಾದ ಗೀಳಿನ ಪರಂಪರೆ. ಅದನ್ನು ಗುರುತಿಸಿಕೊಂಡು ಸ್ವಯಂಪ್ರೇರಣೆಯಿಂದ ಆ ರೂಢಿಯನ್ನು ಬಿಟ್ಟುಬಿಟ್ಟರೆ ಒಳ್ಳೆಯದು. ಇಲ್ಲದಿದ್ದರೆ ಅವರಿಗೇ ಗೊತ್ತಿಲ್ಲದಂತೆ ಎಷ್ಟೋ ಜನರು ಮಾನಸಿಕವಾಗಿ ನರಳುತ್ತಿರುತ್ತಾರೆ, ಭಾವನಾತ್ಮಕವಾಗಿ ಬಳಲುತ್ತಾರೆ, ಅವರು ಮಾಡಬೇಕಾದ ಕೆಲಸವನ್ನು ಮಾಡದೇ ಹೋಗುವ ಸಾಧ್ಯತೆಗಳೂ ಇರುತ್ತವೆ.
ಯಾರಿಗೂ ದೇಹಾಪಮಾನ ಮಾಡುವುದಿಲ್ಲ ಎಂಬ ಪ್ರಜ್ಞೆ ಸದಾ ಜಾಗೃತವಾಗಿರಬೇಕು. ಹಾಗೆಯೇ ನಮ್ಮ ವಿಷಯದಲ್ಲಿ ಯಾರೇ ದೇಹಾಪಮಾನ ಮಾಡಿದರೆ ಆ ಕೂಡಲೇ, ‘‘ನೀವು ಬಾಡಿ ಶೇಮ್ ಮಾಡುತ್ತಿದ್ದೀರಿ ಅಥವಾ ನನ್ನ ದೇಹಕ್ಕೆ ಅಪಮಾನಿಸುತ್ತಿದ್ದೀರಿ’’ ಎಂದು ಅವರಿಗೆ ಹೇಳಬೇಕು. ಇದು ಅವರಿಗೇ ಅರಿವಿಲ್ಲದಂತೆ, ಸೂಕ್ಷ್ಮತೆ ಇಲ್ಲದೆ ತೋರುವ ವರ್ತನೆಯ ಬಗ್ಗೆ ಅವರೇ ಎಚ್ಚೆತ್ತುಕೊಳ್ಳಲು ಸಹಕರಿಸುವುದು. ಹಾಗೆಯೇ ಯಾರೇ ನಮ್ಮ ದೇಹದ ಬಗ್ಗೆ ಏನೇ ಹೇಳಿದರೂ ಅದನ್ನು ಖಂಡಿಸಿ, ನಿರಾಕರಿಸಿ, ನಮ್ಮಲ್ಲಿ ಸಕಾರಾತ್ಮಕವಾದ ಭಾವನೆ ಇರುವಂತೆ ನೋಡಿಕೊಳ್ಳುವ ವಿಷಯದಲ್ಲಿ ಜಾಗೃತವಾಗಿಯೂ ಇರಬೇಕು. ನಮ್ಮ ದೇಹವನ್ನು ನಾವು ಪ್ರೀತಿಸಿಕೊಳ್ಳೋಣ. ನಮ್ಮ ದೇಹದ ಮೊದಲ ಆತ್ಮಸಂಗಾತಿಯೇ ನಾವು.
ಮಕ್ಕಳು ಇತರ ದೇಹಾಪಮಾನ ಮಾಡುವುದನ್ನು ದೊಡ್ದವರಿಂದಲೂ ಕಲಿಯಬಹುದು ಅಥವಾ ತಮ್ಮ ಮನೆಯಲ್ಲಿ ಮತ್ತು ಪರಿಸರದಲ್ಲಿ ಒಂದು ಮಾದರಿಯ ಜನರನ್ನೇ ನೋಡಿ ನೋಡಿ ರೂಢಿಯಾಗಿದ್ದು, ಇದ್ದಕ್ಕಿದ್ದಂತೆ ಬೇರೆ ಕಡೆ ವ್ಯತ್ಯಾಸವಾದ ದೇಹ ರಚನೆಯನ್ನು ನೋಡಿದಾಗ ಅವರಿಗೆ ತಮಾಷೆ ಎನಿಸಬಹುದು. ಅವರು ಮುಗ್ಧವಾಗಿಯೇ ತಮ್ಮ ಟೀಕೆಯನ್ನು ಅಥವಾ ಗಮನಿಸುವಿಕೆಯನ್ನು ಬಹಿರಂಗವಾಗಿ ಹೇಳಬಹುದು. ಆಗ ದೊಡ್ಡವರಾದವರು ಮಗುವಿನ ಪರವಾಗಿ ಕ್ಷಮೆಯನ್ನು ಕೇಳಿ, ಮಗುವಿಗೆ ಹಾಗೆ ಮಾತಾಡಬಾರದು ಎಂದೂ ಸ್ಪಷ್ಟವಾಗಿ ಮತ್ತು ಗಂಭೀರವಾಗಿ ಹೇಳಬೇಕು. ಇದರಿಂದ ಮಗುವಿಗೂ ಕೂಡಾ ಒಂದು ನೈತಿಕ ಪ್ರಜ್ಞೆಯು ಬೆಳೆಯುತ್ತದೆ. ಎತ್ತರವಾಗಿರುವವರಿಗೆ ಕುಳ್ಳರನ್ನು ಕಂಡರೆ ಅಸಡ್ಡೆ, ದಷ್ಟಪುಷ್ಟವಾಗಿರುವವರಿಗೆ ಸಪೂರವಾಗಿರುವವರನ್ನು ಕಂಡರೆ ತಾತ್ಸಾರ, ಬೆಳ್ಳಗಿರುವವರಿಗೆ ಕಪ್ಪಗಿರುವವರನ್ನು ಕಂಡಾಗ ಜಂಭ, ಜಾಸ್ತಿ ಅಂಕ ತೆಗೆದುಕೊಳ್ಳುವವನು ಕಡಿಮೆ ಅಂಕ ತೆಗೆದುಕೊಳ್ಳುವವನ ಕಡೆಗಣಿಸುವುದು, ವಿದ್ಯಾವಂತ ಅನಕ್ಷರಸ್ತನ ಅಪಮಾನಿಸುವುದು, ತಾನು ಬುದ್ಧಿವಂತನೆಂದು ದಡ್ಡನೆಂದು ಮತ್ತೊಬ್ಬನ ಕಂಡು ನಗುವುದು, ‘‘ನಿನಗೆ ಇಷ್ಟೂ ಗೊತ್ತಾಗಲ್ವಾ’’ ಎಂದು ಅವಹೇಳನ ಮಾಡುವುದು, ನಗರದ ವ್ಯಕ್ತಿ ಹಳ್ಳಿಯವನ ಗಮಾರ ಎಂದು ಕರೆಯುವುದು; ಇವೆಲ್ಲವೂ ಆತ್ಮರತಿಯ ಪ್ರಕಟಣೆಗಳೇ ಆಗಿರುತ್ತವೆ.