ಕಾರಕ ಪ್ರೇರಕ
ಒಂದು ವಸ್ತು ತಾನು ಇರುವ ಜಾಗದಿಂದ ಸ್ಥಾನಪಲ್ಲಟ ಮಾಡಬೇಕಾದರೆ ಅಥವಾ ಮಗ್ಗುಲು ಬದಲಾಯಿಸಬೇಕೆಂದರೆ ಅದಕ್ಕೆ ಮತ್ತೊಂದರ ಶಕ್ತಿಯ ಪ್ರಯೋಗದ ಅಥವಾ ಬಾಹ್ಯ ಒತ್ತಡದ ಅಗತ್ಯ ಇರುತ್ತದೆ. ದಿನ ಬೆಳಗಾದರೆ ಕಾಣುವುದನ್ನೇ ಭೌತಶಾಸ್ತ್ರದಲ್ಲಿ ಪಾಠವಾಗಿಯೂ ಕಲಿಯುತ್ತೇವೆ.
ಹಾಗೆಯೇ ರಾಸಾಯನಿಕ ಕ್ರಿಯೆಯು ನಡೆಯುವ ಸಮಯದಲ್ಲಿ ಅಣುಗಳಲ್ಲಿನ ಪರಮಾಣು ಬಂಧಗಳು ಒಡೆಯುವುದಕ್ಕೆ, ಬೇರ್ಪಡುವುದಕ್ಕೆ ಅಥವಾ ಮರುಜೋಡಣೆ ಆಗುವ ಕೆಲಸವನ್ನು ಸರಾಗಗೊಳಿಸಲು ಅಥವಾ ವೇಗಗೊಳಿಸಲು ಅಥವಾ ಆ ಕೆಲಸ ಆಗುವುದಕ್ಕೆ ಇರುವ ಅಡೆತಡೆಯನ್ನು ನಿವಾರಿಸಲು ಯಾವುದಾದರೂ ವೇಗವರ್ಧಕ ಶಕ್ತಿ ಅಥವಾ ಪ್ರೇರಕಗಳು ಬೇಕಾಗುತ್ತವೆೆ. ಈ ವೇಗವರ್ಧಕ ಅಥವಾ ಪ್ರೇರಕ ರಾಸಾಯನಿಕ ಕ್ರಿಯೆ ನಮಗೆಲ್ಲಾ ಚೆನ್ನಾಗಿ ಪರಿಚಯವಿರುವುದೇ ಆಗಿರುತ್ತದೆ. ಉದಾಹರಣೆಗೆ ಹೇಳುವುದಾದರೆ, ಕೊಳೆಯಾಗಿರುವ ಬಟ್ಟೆಯನ್ನು ತೊಳೆಯಲು ನೀರನ್ನು ಉಪಯೋಗಿಸುತ್ತೇವೆ. ನೀರು ಮುಖ್ಯವಾದ ಸಾಧನ ಅಂದರೆ ಕಾರಕ. ಆದರೆ ನೀರಿನಿಂದಷ್ಟೇ ಕೊಳೆ ಹೋಗದು. ಹಾಗಾಗಿ ನೀರಿನ ಜೊತೆಗೆ ಸೋಪ್ ಪೌಡರ್ ಉಪಯೋಗಿಸುತ್ತೇವೆ. ಬಟ್ಟೆಯಲ್ಲಿನ ಕೊಳೆಯನ್ನು ಹೋಗಲಾಡಿಸಲು ಸೋಪಿನ ಪುಡಿ ನೀರಿನ ಜೊತೆಗೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತದೆ. ಅಣುಬಂಧ, ಅದರಲ್ಲಿನ ಪರಮಾಣು ಬಂಧ, ಆಮ್ಲಜನಕ, ಜಲಜನಕ, ಇಂಗಾಲದ ಬಂಧ; ಇಷ್ಟೆಲ್ಲಾ ತೀರಾ ರಸಾಯನ ಶಾಸ್ತ್ರದ ಅಧ್ಯಯನ ಈಗ ಸದ್ಯಕ್ಕೆ ಬೇಡ. ಬಟ್ಟೆಯಲ್ಲಿನ ಕೊಳೆ ತೊಳೆಯಲು ನೀರು ಕಾರಕ, ಸೋಪಿನ ಪುಡಿ ಪ್ರೇರಕ.
ಕಾರಕ ಅಂದರೆ ಉಂಟು ಮಾಡುವುದರ ಜೊತೆಗೆ ಮತ್ತೊಂದು ಪ್ರೇರಕಶಕ್ತಿಯಾಗಿ ಕೆಲಸ ಮಾಡುವ ಅಂಶವನ್ನು ಗಮನಕ್ಕೆ ತೆಗೆದುಕೊಳ್ಳೋಣ. ಹಾಗೆಯೇ ಮನಸ್ಸಿನ ವಿಷಯದಲ್ಲಿಯೂ ಕೂಡಾ ಕಾರಕದೊಡನೆ ಪ್ರೇರಕ ಶಕ್ತಿಗಳು ಅಥವಾ ವೇಗವರ್ಧಕ (ಕ್ಯಾಟಲಿಸ್ಟ್)ಗಳು ಕೆಲಸ ಮಾಡುತ್ತವೆ.
ಕೆಲವರು ಮದ್ಯಪಾನದಿಂದ ಮತ್ತರಾಗಿ ಕೆಟ್ಟ ಮಾತುಗಳಿಂದ ಜಗಳವಾಡುತ್ತಾರೆ. ಆಮೇಲೆ ಅಮಲಿಳಿದ ಮೇಲೆ ‘‘ಏನೋ ಕುಡಿದ ಜ್ಞಾನದಲ್ಲಿ ಬಾಯಿಗೆ ಬಂದಂತೆ ಅಂದುಬಿಟ್ಟೆ, ಬೇಜಾರು ಮಾಡಿಕೊಳ್ಳಬೇಡ’’ ಎನ್ನುತ್ತಾರೆ. ಹಾಗೆ ಕೇಳುವುದು ಕ್ಷಮೆ ಕೇಳುವುದರ ಮತ್ತೊಂದು ರೂಪವೆಂದೇ ತಿಳಿಯೋಣ. ಆದರೆ ಕುಡಿತ ಎಂಬುದರ ನಶೆಯು ಅವರಲ್ಲಿ ಹೊಸ ವಿಚಾರವನ್ನು, ಹೊಸ ಪದಗಳನ್ನು, ಹೊಸ ಭಾವನೆಯನ್ನು ಹುಟ್ಟುಹಾಕಿ ತನ್ನ ಎದುರಿನವರ ಮೇಲೆ ಪ್ರಯೋಗಿಸಿರುವುದಲ್ಲ. ಅವರಲ್ಲಿ ಮೊದಲೇ ಕಾರಕವಾಗಿ ಇದ್ದಂತಹ ಮನೋಭಾವವು ಹೊರಗೆ ಪ್ರಕಟಗೊಳ್ಳಲು ಕುಡಿತ ಎಂಬುದು ಕ್ಯಾಟಲಿಸ್ಟ್ ಅಥವಾ ಪ್ರೇರಕಶಕ್ತಿಯಾಗಿ ಕೆಲಸ ಮಾಡಿರುತ್ತದೆ ಅಷ್ಟೇ.
ಕೋಪದಲ್ಲಿ ಏನೋ ಒಂದು ಮಾತು ಹೇಳಿಬಿಟ್ಟೆ, ಬೇಜಾರು ಮಾಡಿಕೊಳ್ಳಬೇಡಿ ಎಂದು ಯಾರಾದರೂ ಹೇಳುವ ಸಂದರ್ಭದಲ್ಲಿಯೂ ಈ ವಿಷಯ ಅನ್ವರ್ಥವಾಗುತ್ತದೆ. ಅವರಲ್ಲಿ ಈಗಾಗಲೇ ಇರುವಂತಹ ಅಭಿಪ್ರಾಯ ಮತ್ತು ಧೋರಣೆಗಳನ್ನೇ ಹೊರಗೆ ಹಾಕಲು ಕೋಪ ಎಂಬ ಭಾವನೆಯು ವೇಗವರ್ಧಕವಾಗಿ ಅಥವಾ ಪ್ರೇರಕಶಕ್ತಿಯಾಗಿ ಕೆಲಸ ಮಾಡಿರುತ್ತದೆ.
ಮನಸ್ಸಿನ ಅಡಗುತಾಣದಲ್ಲಿ ಅನೇಕಾನೇಕ ಕಾರಕ ಗುಣಗಳು ಭಾವನೆಗಳ, ಬಯಕೆಗಳ, ಭಯಗಳ, ಬಂಧಗಳ ರೂಪದಲ್ಲಿ ಅಡಗಿಕೊಂಡಿದ್ದು ಆ ಕಾರಕ ಗುಣಗಳಿಗೆ ಅನುರೂಪವಾದ ಗುಣಗಳದ್ದೇ ಮಾತಿನ ರೂಪದಲ್ಲೋ, ದೃಶ್ಯದ ರೂಪದಲ್ಲೋ ಅಥವಾ ವರ್ತನೆಗಳ ರೂಪದಲ್ಲೋ ವೇಗವರ್ಧಕಗಳು ಪ್ರಚೋದನೆ ನೀಡಿದರೆ ಜಡವಾಗಿರುವ ಕಾರಕಗಳು ಚುರುಕುಗೊಳ್ಳುತ್ತವೆೆ ಮತ್ತು ಕ್ರಿಯಾಶೀಲವಾಗುತ್ತವೆ.
ಹಂಚಿಕೊಳ್ಳುವ ಕಾರಕ ಗುಣವುಳ್ಳವನಿಗೆ ನೀಡಬೇಕಾದ ಪ್ರೇರಕ ಸಂದರ್ಭ ಒದಗಿದಾಗ ಅವನು ಔದಾರ್ಯ ತೋರುತ್ತಾನೆ. ಅದೇ ರೀತಿ ವ್ಯಕ್ತಿಯಲ್ಲಿನ ಕಾರಕವಾಗಿರುವ ಕಾಮುಕಗುಣಗಳು ಕಾಮೋತ್ತೇಜಕ ಪೋರ್ನ್ ವೀಡಿಯೊಗಳನ್ನು ನೋಡಿದಾಗ ಕಾಮೋದ್ರೇಕಗೊಳ್ಳುತ್ತಾನೆ.
ಮನೋಗುಣ ಅಥವಾ ಮನೋಭಾವವೆಂಬಂತೆ ಅಡಗಿರುವ ಯಾವುದೇ ಕಾರಕ ಗುಣಗಳಿಗೆ ಹೊರಗಿನಿಂದ ಕ್ಯಾಟಲಿಸ್ಟ್ ಅಥವಾ ವೇಗವರ್ಧಕಗಳು ದೊರಕುತ್ತಿರುತ್ತವೆ. ವ್ಯಕ್ತಿಯಲ್ಲಿರುವ ಅಸಹನೆ, ಅಹಂಕಾರ, ಆಕ್ರೋಶವೇ ಮೊದಲಾದವೆಲ್ಲಾ ನಾನಾ ರೂಪಗಳಲ್ಲಿ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಪ್ರಕಟಗೊಳ್ಳುತ್ತಿದ್ದು ಅವು ಇನ್ನಿತರರಲ್ಲಿ ಅಡಗಿರುವ ಅಸಹನೆ, ಅಹಂಕಾರ ಮತ್ತು ಆಕ್ರೋಶಗಳನ್ನು ಹೊರಗೆಡವಲು ಕ್ಯಾಟಲಿಸ್ಟ್ ಆಗಿ ಕೆಲಸ ಮಾಡುತ್ತಿರುತ್ತವೆ.
ಬರಹಗಳು, ಭಾಷಣಗಳು, ಸಿನೆಮಾಗಳು, ಹಾಡುಗಳು, ನಾಟಕಗಳು ಮತ್ತು ವ್ಯಕ್ತಿಗತವಾದಂತಹ ನಡೆ, ನುಡಿಗಳೂ ಕೂಡ ಮನುಷ್ಯರ ಮನಸ್ಸಿನ ಅಣುಗಳಲ್ಲಿನ ಭಾವರೂಪದ ಪರಮಾಣುಗಳ ಬಂಧಗಳನ್ನು ಕಟ್ಟುವ, ಕೆಡವುವ, ಮರುಕಟ್ಟುವ, ಭದ್ರಪಡಿಸುವ, ದುರ್ಬಲಗೊಳಿಸುವ ನಾನಾ ರೀತಿಯ ಕೆಲಸಗಳನ್ನು ಮಾಡುತ್ತಿರುತ್ತವೆ.
ಹಾಗೆಯೇ ಅಸೂಯೆ, ಅಸಮಾಧಾನ, ಅಸಹನೆ, ಅಹಂಕಾರ, ದ್ವೇಷ, ಆಕ್ರೋಶ, ಆಗ್ರಹಗಳೆಲ್ಲದರ ಜೊತೆಗೆಯೇ ವ್ಯಕ್ತಿಯಲ್ಲಿ ಸಮಾಧಾನ, ಸಂಯಮ, ಔದಾರ್ಯ, ಪ್ರೇಮ, ಮಮತೆಗಳಂತಹ ಕಾರಕ ಗುಣಗಳೂ ಮನೋಗುಡಾಣದಲ್ಲಿ ಅಡಕವಾಗಿರುತ್ತವೆ.
ಯಾವುದೇ ವ್ಯಕ್ತಿಗಳೊಡನೆ ನಾವು ಪರಸ್ಪರ ಎದುರಾದಾಗ ನನ್ನ ನುಡಿ, ನಡೆ, ವರ್ತನೆ ಎದುರಿಗಿನ ವ್ಯಕ್ತಿಯಲ್ಲಿನ ಯಾವ ಗುಣದೊಂದಿಗೆ ಸೇರಿ ವೇಗವರ್ಧಕವಾಗಿ ಅಥವಾ ಪ್ರೇರಕಶಕ್ತಿಯಾಗಿ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಎಚ್ಚರವಹಿಸಬೇಕು. ಏಕೆಂದರೆ ಆ ಗುಣಗಳಲ್ಲಿ ಕೆಲವು ಪ್ರಬಲ, ಕೆಲವು ದುರ್ಬಲ. ಪ್ರಬಲವಾಗಿರುವ ಗುಣಗಳು ಬೇಗ ಉತ್ತೇಜಕಗೊಳ್ಳುತ್ತವೆ. ದುರ್ಬಲವಾಗಿರುವವು ಉತ್ತೇಜಿತಗೊಳ್ಳುವುದಿಲ್ಲ. ಏನೇ ಆಗಲಿ ನಮ್ಮ ನಡೆ ನುಡಿಗಳು ಎದುರಿಗಿನ ವ್ಯಕ್ತಿಗಳಲ್ಲಿ ಯಾವ ಕಾರಕ ಗುಣಗಳಿಗೆ ಕ್ಯಾಟಲಿಸ್ಟ್ ಅಥವಾ ಪ್ರೇರಕಶಕ್ತಿಗಳಾಗಿ ಕೆಲಸ ಮಾಡಬಹುದು ಎಂಬ ಎಚ್ಚರಿಕೆ ಬಂದರೆ ಸಂಘರ್ಷಗಳು ತಮ್ಮ ತೀವ್ರತೆಯನ್ನು ಕಳೆದುಕೊಳ್ಳಬಹುದು.