ಭಾವಮೂಲ

ಭಾವನೆಗಳ ವಿಷಯಕ್ಕೆ ಬಂದಾಗ ಮನಸ್ಸನ್ನು ತಲೆ ಎನ್ನುವುದೋ, ಹೃದಯ ಎನ್ನುವುದೋ ಎಂಬ ಗೊಂದಲ. ವಿಚಾರ ಮಾಡುವಾಗ, ಯೋಚಿಸುವಾಗ ಭಾವನೆಗಳು ಉಂಟಾಗುತ್ತವೆ. ವಿಚಾರ ಮಾಡುವುದು, ಆಲೋಚಿಸುವುದು ತಲೆ ಎಂದು ಒಂದು ಸಾಂಪ್ರದಾಯಿಕ ಗ್ರಹಿಕೆ. ಹಾಗೆಯೇ ಭಾವನೆ ಎಂದಾಗ ಹೃದಯ ಎನ್ನುವುದು ಇನ್ನೊಂದು ರೂಢಿಯಲ್ಲಿರುವ ಮತ್ತೊಂದು ರೂಪಕ.
ಮನಸ್ಸೇ ಭಾವಿಸುವುದು ಮತ್ತು ಮನಸ್ಸೇ ವಿಚಾರಿಸುವುದು ಅಥವಾ ಆಲೋಚಿಸುವುದು. ಅದು ತಲೆಯೂ ಅಲ್ಲ, ಹೃದಯವೂ ಅಲ್ಲ. ವಿಚಾರ ಎನ್ನುವುದು ತಾರ್ಕಿಕವಾದದ್ದು ಎಂದು ತಲೆಗೂ, ಭಾವುಕವಾದ ಅನುಭವ ಎಂದು ಹೃದಯಕ್ಕೂ ಹೋಲಿಸಿಕೊಂಡಿರುವುದು ಬಹು ಕಾಲದ ರೂಪಕ ಪರಂಪರೆ.
ಭಾವನೆಗಳಿಗೆ ‘ಇದು ಇಂತಹದ್ದು’ ಎಂದು ತನ್ನ ಅರಿವಿನ ಆಧಾರದಲ್ಲಿ ಮೌಲ್ಯಮಾಡಿ ಒಂದು ಹಣೆಪಟ್ಟಿ ಕಟ್ಟುವುದೂ ಮನಸ್ಸೇ. ವಿವಿಧ ಸನ್ನಿವೇಶಗಳಲ್ಲಿ, ಪ್ರಸಂಗಗಳಲ್ಲಿ ತನಗಾಗುವ ವಿವಿಧ ಅನುಭವಗಳನ್ನು ಮನಸ್ಸು ತೂಗಿ ಅದಕ್ಕೊಂದು ಲೇಬಲ್ ಹಚ್ಚುತ್ತದೆ. ಉದಾಹರಣೆಗೆ ಒಬ್ಬರಿಗೆ ನಾಯಿಯೊಂದು ಎದುರಾದಾಗ ತನಗೆ ಹಿಂದೆ ಆಗಿರುವ ಯಾವುದೋ ಅನುಭವದ ಆಧಾರದಲ್ಲೋ ಅಥವಾ ಮಾಹಿತಿಯ ಆಧಾರದಲ್ಲೋ ‘ಅದು ಕಚ್ಚುತ್ತದೆ’ ಎಂದು ಭಯವನ್ನು ಭಾವಿಸುವುದು. ಅದೇ ರೀತಿಯಲ್ಲಿ ಮತ್ತೊಬ್ಬರು ಅಂತಹದ್ದೇ ನಾಯಿಯೊಂದು ಎದುರಾದಾಗ ‘ಎಷ್ಟು ಚೆನ್ನಾಗಿದೆ!’ ಎಂದು ಅದರಿಂದ ಸಂತೋಷವನ್ನು ಭಾವಿಸುವುದು. ಆದರೆ ನಾಯಿ ಎಂಬುದು ಅವರಲ್ಲಿ ಹುಟ್ಟುವ ಭಾವನೆಗೆ ಕಾರಣವಲ್ಲ. ತಮಗೆ ಆಗಿರುವ ಅನುಭವ ಅಥವಾ ಮಾಹಿತಿಯ ಪ್ರಕಾರದಲ್ಲಿ ಪಡೆದಿರುವ ಅರಿವಿನ ಅನುಸಾರವಾಗಿ ತಾವು ಎದುರಾಗುವ ಪ್ರಸಂಗ ಅಥವಾ ಸನ್ನಿವೇಶದಿಂದ ಪಡೆಯಬಹುದಾದ ಭಾವನೆಯನ್ನು ಪೂರ್ವನಿರ್ಧಾರಿತವಾಗಿ ಒಂದು ಲೇಬಲ್ ಹಚ್ಚಿದ್ದು ಆ ಪ್ರಕಾರವಾದ ಭಾವನೆಯನ್ನು ಹೊಂದುತ್ತಾರೆ. ಒಬ್ಬನೇ ವ್ಯಕ್ತಿ ಒಬ್ಬರಲ್ಲಿ ಆತಂಕವನ್ನೂ, ಮತ್ತೊಬ್ಬರಲ್ಲಿ ಆನಂದವನ್ನೂ, ಮಗದೊಬ್ಬರಲ್ಲಿ ಅನುಮಾನವನ್ನೂ, ಇನ್ನೊಬ್ಬರಲ್ಲಿ ಅಸಹನೆಯನ್ನೂ ಹುಟ್ಟಿಸಬಲ್ಲ. ಈ ಎಲ್ಲಾ ಭಾವನೆಗಳೂ ಆಯಾ ವ್ಯಕ್ತಿಯ ಪೂರ್ವಾನುಭವದ ಮೇಲೆ ಅಥವಾ ಪಡೆದಿರುವ ಮಾಹಿತಿಯನ್ನು ಅವಲಂಬಿಸಿರುತ್ತವೆ. ಇದೊಂದು ಅರಿವಿನ ಮೌಲ್ಯಮಾಪನ (ಅogಟಿiಣive ಚಿಠಿಠಿಡಿಚಿisಚಿಟ).
ಇನ್ನೂ ಕೆಲವು ಬಗೆಯ ಭಾವನೆಗಳು ವಿವಿಧ ಸನ್ನಿವೇಶಗಳಲ್ಲಿ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಅವಲಂಬಿಸಿರುತ್ತವೆ. ಯಾವ ವಿಷಯಕ್ಕೆ ಹೃದಯದ ಬಡಿತ ಹೆಚ್ಚುವುದು? ಯಾವ ಸನ್ನಿವೇಶದಲ್ಲಿ ದೇಹ ಬೆವರಲಾರಂಭಿಸುವುದು? ಯಾವಾಗ ನಮ್ಮ ದೇಹದ ಸ್ನಾಯುಗಳಲ್ಲಿ ಬಿಗಿತ ಉಂಟಾಗುವುದು? ಯಾವಾಗ ಕೈ ಕಾಲುಗಳು ನಡುಗಲಾರಂಭಿಸುವುದು? ಗಮನಿಸಿ; ಇವೂ ಕೂಡಾ ಭಾವನೆಗಳಿಂದಲೇ ಉಂಟಾಗುವುದು.
ಹಾಗೆಯೇ ಮುಖಭಾವದಿಂದ, ಧ್ವನಿಯ ಏರಿಳಿತದಿಂದ ಹಾಗೆಯೇ ಕೈಗಳಿಂದಲೋ ಅಥವಾ ದೇಹದ ಭಂಗಿಯಿಂದಲೂ ಕೂಡಾ ಭಾವನೆಗಳನ್ನು ಗುರುತಿಸಬಹುದು.
ಇನ್ನು ವಿಷಯಾಧಾರಿತವಾಗಿ ಕೋಪ, ದುಃಖ, ಸಂತೋಷ ಹುಟ್ಟುವುದೂ ಕೂಡ ಉಂಟು.
ಒಟ್ಟಾರೆ ಭಾವನೆಗಳು ಹುಟ್ಟಲು, ಅವನ್ನು ಪ್ರದರ್ಶಿಸಲು ವಿವಿಧ ಆಯಾಮಗಳು ಮತ್ತು ಕಾರಣಗಳಿರುತ್ತವೆ.
ಮನಶಾಸ್ತ್ರಜ್ಞರು ಈ ಭಾವನೆಗಳನ್ನು ವಿಷಯಾಧಾರಿತವಾಗಿ ಗ್ರಹಿಸಲು ಮತ್ತು ಅಧ್ಯಯನ ಮಾಡಲು ನೋಡಿದರೆ, ತತ್ವಜ್ಞಾನಿಗಳು ಮತ್ತೊಂದು ಬಗೆಯಲ್ಲಿ ನೋಡುವರು. ಭಾವನೆಗಳನ್ನು ಅವೈಚಾರಿಕ ಎಂದೂ, ತಾರ್ಕಿಕ ಶಕ್ತಿಯನ್ನು ಅಥವಾ ವಿವೇಚಿಸುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ ಎಂದೂ ಕೆಲವು ತತ್ವಜ್ಞಾನಿಗಳು ಭಾವಿಸಿ ಅದನ್ನು ನಿರ್ಲಕ್ಷಿಸಲು ಅಥವಾ ಅದನ್ನು ಬಲಗೊಳಿಸುವ ಅಗತ್ಯವಿಲ್ಲ ಎಂದು ಹೇಳಿರುವುದು ಉಂಟು. ಎಮೋಶನಲ್ ಫೂಲ್ ಎಂದಿರುವುದು ಇಂಥವರೇ. ಎಮೋಶನ್ ಆಗಬೇಡ, ಪ್ರಾಕ್ಟಿಕಲ್ ಆಗಿ ಯೋಚನೆ ಮಾಡು ಎಂದು ತಾರ್ಕಿಕ ಮತ್ತು ಪ್ರಾಯೋಗಿಕ ಆಯಾಮದಲ್ಲೇ ನೋಡುವುದು ಹೆಚ್ಚು ಲಾಭದಾಯಕ ಮತ್ತು ವಿವೇಕಪೂರ್ಣವಾಗಿರುವುದು ಎಂದೂ ಭಾವಿಸುವರು. ಆದರೆ ಅರಿಸ್ಟಾಟಲ್ ರೀತಿಯ ತತ್ವಜ್ಞಾನಿಗಳು ಈ ಭಾವನೆಗಳು ಮನುಷ್ಯನ ಅವಿಭಾಜ್ಯ ಅಂಶವಾಗಿದ್ದು, ಅದು ವ್ಯಕ್ತಿಯ ಚಾರಿತ್ರ್ಯವನ್ನು ನಿರ್ಮಿಸುವುದರಲ್ಲಿ ಮಹತ್ತರ ಪಾತ್ರವಹಿಸುತ್ತದೆ ಎಂದೂ ಭಾವಿಸುವರು.
ಆದರೆ ಮನಶಾಸ್ತ್ರಜ್ಞರು ಅಥವಾ ಮನೋವಿಜ್ಞಾನಿಗಳು ಇದನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಲು ಯತ್ನಿಸಿದರು. ಭಾವನೆಗಳ ಮೂಲ, ಅದು ಹುಟ್ಟುವ ಬಗೆ, ಕಾರಣ, ತನ್ನನ್ನು ತಾನು ಪ್ರದರ್ಶಿಸಿಕೊಳ್ಳುವ ರೀತಿ, ಅವನ್ನು ನಿಯಂತ್ರಿಸುವ ಅಥವಾ ನಿರ್ವಹಿಸುವ ಬಗೆಯೇ ಮೊದಲಾದ ಅಂಶಗಳ ಕುರಿತಾಗಿ ಅಧ್ಯಯನಗಳನ್ನು ಮಾಡಿದರು.
ಜರ್ಮನಿಯ ಮನೋವಿಜ್ಞಾನಿ ಜೇಮ್ಸ್ ಲಾಂಗ ನಮ್ಮ ಶರೀರ ಪ್ರತಿಕ್ರಿಯಿಸುವ ರೀತಿಯಿಂದ ಭಾವನೆಗಳು ಉಂಟಾಗುತ್ತದೆ ಎಂದು ಪ್ರತಿಪಾದಿಸಿದರು. ಅವರ ಅಧ್ಯಯನ ಹೇಳುವುದೇನೆಂದರೆ, ಒಂದು ಸನ್ನಿವೇಶವನ್ನು ಎದುರಾಗುತ್ತೇವೆ. ಆ ಸನ್ನಿವೇಶದಲ್ಲಿ ನಮ್ಮ ದೇಹ ಪ್ರತಿಕ್ರಿಯಿಸುತ್ತದೆ. ನಮ್ಮ ಮೆದುಳು ಆ ಪ್ರತಿಕ್ರಿಯೆಯನ್ನು ಹೀಗೆ ಎಂದು ವ್ಯಾಖ್ಯಾನಿಸುತ್ತದೆ. ಆ ಮೆದುಳಿನಲ್ಲಿ ನಡೆದ ಚಟುವಟಿಕೆಯ ಫಲವಾಗಿ ನಮ್ಮಲ್ಲಿ ಒಂದು ಅನುಭವ ಉಂಟಾಗುತ್ತದೆ. ಆ ಅನುಭವವೇ ನಮ್ಮ ‘ಭಾವನೆ’.
ಜನರೆಲ್ಲಾ ನೆರೆದಿರುವಂತಹ ಒಂದು ಸಭೆಗೆ ಹೋಗುತ್ತೇವೆ ಎಂದಿಟ್ಟುಕೊಳ್ಳಿ. ಆ ಸಭೆಯ ಗಾಂಭೀರ್ಯ ನಮ್ಮ ಹೊಟ್ಟೆಯಲ್ಲಿ ಹಿಸುಕಿದಂತೆ ಆಗುತ್ತದೆ. ಕಂಕುಳಲ್ಲಿ ಬೆವರುತ್ತದೆ. ಕಿಬ್ಬೊಟ್ಟೆಯಲ್ಲಿ ಹಿಂಡಿದಂತೆ ಆಗುತ್ತದೆ. ನರ್ವಸ್‌ನೆಸ್ ಅಂತೀವಲ್ಲಾ ಅದು. ನಮ್ಮಲ್ಲಿ ಕಂಪನ ಉಂಟಾಗುತ್ತದೆ. ಹಾಗೆಯೇ ಇನ್ನೊಂದು ರೀತಿಯಲ್ಲಿಯೂ ಆಗಬಹುದು. ಶುಭ ಸುದ್ದಿ ಬಂದಾಗ ನಮ್ಮ ಮುಖದಲ್ಲಿ ನಗೆ ಮೂಡುತ್ತದೆ. ನಮ್ಮಲ್ಲಿ ಬಿಗಿಯಾಗಿರುವ ಸ್ನಾಯುಗಳು ಸಡಿಲಗೊಳ್ಳುತ್ತವೆ. ನಮ್ಮ ಎದೆಯಲ್ಲಿ ಭಾರವಾದ ಅನುಭವ ಇರದೇ ಹಗುರವಾಗಿರುವುದನ್ನು ಅನುಭವಿಸುತ್ತೇವೆ.
ಆದರೆ ಜೇಮ್ಸ್ ಲಾಂಗನ ಪ್ರತಿಪಾದನೆಯನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಾಗುವುದಿಲ್ಲ. ಏಕೆಂದರೆ ಹೊಟ್ಟೆಯಲ್ಲಿ ಕಿವುಚಿದಂತೆಯೋ ಅಥವಾ ಕಿಬ್ಬೊಟ್ಟೆಯಲ್ಲಿ ಹಿಂಡಿದಂತೆಯೋ ಆಗುವುದರಿಂದ ಒಂದೇ ಬಗೆಯ ಭಾವನೆಗಳೇನೂ ಉಂಟಾಗುವುದಿಲ್ಲ. ಅಷ್ಟೇ ಅಲ್ಲದೆ ವ್ಯಕ್ತಿಯ ಮನಸ್ಥಿತಿಯ ಆಧಾರದಲ್ಲಿ, ಪರಿಸ್ಥಿತಿ ಮತ್ತು ಪರಿಸರವು ಇರುವ ರೀತಿಯಲ್ಲಿ, ಇತರ ವ್ಯಕ್ತಿಗಳು ಹೇಗೆ ತಮ್ಮ ಪ್ರತಿಕ್ರಿಯೆಯನ್ನು ನೀಡುವರು ಎನ್ನುವ ಆಧಾರದಲ್ಲಿಯೂ ಕೂಡಾ ನಿಮ್ಮ ಭಾವನೆಗಳು ನಿರ್ಧರಿತವಾಗುತ್ತದೆ. ಬರಿಯ ಶಾರೀರಿಕ ಪ್ರತಿಕ್ರಿಯೆಗಳಿಂದ ಭಾವನೆ ಇಂತಹದ್ದೇ ಎಂದೋ ಅಥವಾ ಅದರಿಂದಲೇ ಭಾವನೆಗಳು ಉಂಟಾಗುತ್ತವೆ ಎಂದೋ ನಿರ್ಧರಿಸಲಾಗದು.
ಒಟ್ಟಿನಲ್ಲಿ ಭಾವನೆಗಳ ಹುಟ್ಟು, ಇರವು ಮತ್ತು ಪ್ರತಿಕ್ರಿಯೆಗಳ ವಿಷಯಗಳಲ್ಲಿ ದೇಹದಲ್ಲಿ ಉಂಟಾಗುವ ಬದಲಾವಣೆಯೂ ಒಂದು ಭಾಗವಷ್ಟೇ. ಆದರೆ ಅದೇ ಕಾರಣ ಮತ್ತು ಅದರಿಂದಲೇ ಪರಿಣಾಮ ಎನ್ನಲಾಗದು ಅಷ್ಟೇ.