ಕೌಟುಂಬಿಕ ಕಂಟಕಗಳು
ಗಂಡ ಮತ್ತು ಹೆಂಡತಿ ಜಗಳದ ವಿಷಯದಲ್ಲಿ ಬಹುಪಾಲು ಭಾರತೀಯ ಕುಟುಂಬಗಳಲ್ಲಿ ವಿಚಿತ್ರ ಸಂಪ್ರದಾಯವಿದೆ. ಅದೆಂದರೆ ದಂಪತಿಯಲ್ಲಿ ಜಗಳವಾಗುತ್ತಿದ್ದಂತೆ ಗಂಡಿನ ಮನೆಯವರು ಗಂಡಿನ ಪರವಾಗಿ, ಹೆಣ್ಣಿನ ಕಡೆಯವರು ಹೆಣ್ಣಿನ ಪರವಾಗಿ ಸೈನ್ಯ ಕಟ್ಟುತ್ತಾ ರಣಘೋಷವನ್ನು ಮಾಡುತ್ತಾರೆ. ಅದು ಮುಂದುವರಿದಂತೆ ಗಂಡಿಗೆ ಬುದ್ಧಿ ಕಲಿಸಲು ಹೆಣ್ಣಿನ ಕಡೆಯವರು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುತ್ತಾರೆ. ಇನ್ನೂ ವಿಪರೀತಕ್ಕೆ ಹೋಗುತ್ತಾ ಕೋರ್ಟಿಗೆ ಮೊರೆ ಹೋಗುತ್ತಾರೆ. ಒಟ್ಟಾರೆ ಗಂಡಿನ ಕಡೆಯವರು ಗಂಡನ್ನು ಗೆಲ್ಲಿಸಲು ಮತ್ತು ಹೆಣ್ಣನ್ನು ಮಣಿಸಲು; ಹಾಗೆಯೇ ಹೆಣ್ಣಿನ ಕಡೆಯವರು ಹೆಣ್ಣನ್ನು ಗೆಲ್ಲಿಸಿ ಗಂಡನ್ನು ಸೋಲಿಸಲು ಭೀಷ್ಮ ಪ್ರತಿಜ್ಞೆ ಮಾಡುತ್ತಾರೆ. ಅಂತಿಮವಾಗಿ ಅವರು ಮರೆಯುವುದು ಅವರಿಬ್ಬರ ಸಂಬಂಧವನ್ನು ಸುಧಾರಿಸಲು.
ವಾಸ್ತವದಲ್ಲಿ ಗಂಡು ಮತ್ತು ಹೆಣ್ಣು ಭಿನ್ನವಾದ ಕೌಟುಂಬಿಕ ಹಿನ್ನೆಲೆಯಿಂದ, ವಂಶವಾಹಿ ಗುಣಗಳಿಂದ, ಅವರವರ ಪೋಷಕರ ತಿಳುವಳಿಕೆ ಮತ್ತು ನಡವಳಿಕೆಗಳ ಪ್ರಭಾವದಿಂದ ಬಂದಿದ್ದು ಸಹಜವಾಗಿ ಒಬ್ಬರಿಗೊಬ್ಬರು ಭಿನ್ನರೇ ಆಗಿರುತ್ತಾರೆ. ಬಿನ್ನಾಭಿಪ್ರಾಯಗಳು ಅತ್ಯಂತ ಸ್ವಾಭಾವಿಕವೇ ಆಗಿರುತ್ತದೆ. ಹಿನ್ನೆಲೆೆಗಳು, ಪ್ರಭಾವಗಳು, ಸ್ವಭಾವಗಳು ಬೇರೆ ಬೇರೆಯಾಗಿದ್ದು ಇಬ್ಬರೂ ಒಟ್ಟಾಗಿ ಭಾವನಾತ್ಮಕ ಸಂಬಂಧವನ್ನು ಬೆಸೆದುಕೊಂಡು ಬಾಳ್ವೆ ಮಾಡಲು ಸಿದ್ಧವಾಗಬೇಕಾಗುತ್ತದೆಯೇ ಹೊರತು, ತನಗೆ ತಕ್ಕಂತಹ ಅಥವಾ ಅನುರೂಪವಾದ ಅಥವಾ ಅನುಕೂಲವಾದಂತಹ ವ್ಯಕ್ತಿಯನ್ನು ತರಲು ಆಗದು. ತಮ್ಮ ಭಿನ್ನತೆಗಳ ಬಗ್ಗೆ ಅರಿವು ಮತ್ತು ಅದರೊಟ್ಟಿಗೆ ಅವರಿದ್ದಂತೆಯೇ ಪರಸ್ಪರ ಒಪ್ಪಿಕೊಳ್ಳುವ ಭಾವನಾತ್ಮಕವಾದ ಒಲವು ಸಂಬಂಧವನ್ನು ಗಟ್ಟಿಗೊಳಿಸುವುದು.
ಆದರೆ ಗಂಡ ಹೆಂಡಿರ ಜಗಳವಾದ ಕೂಡಲೇ ಅವರವರ ಮನೆಯವರು ಕೌರವರ ಪಕ್ಷ ಮತ್ತು ಪಾಂಡವರ ಪಕ್ಷ ವಹಿಸಿಕೊಂಡು ಕುರುಕ್ಷೇತ್ರ ಯುದ್ಧಕ್ಕೆ ರಣಘೋಷ ಮಾಡಿಯೇ ಬಿಡುತ್ತಾರೆ. ಗೆಲುವು ಎಂಬುದು ಅಹಂಕಾರದ ಹಸಿವೆಯಾದ್ದರಿಂದ ದಂಪತಿಯ ಸಂಘರ್ಷಕ್ಕೆ ಅಥವಾ ಮನಸ್ತಾಪಕ್ಕೆ ಕಾರಣವಾಗಿರಬಹುದಾದ ಮಾನಸಿಕ ಮತ್ತು ಭಾವನಾತ್ಮಕ ಅಂಶಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಕುಟುಂಬಗಳು ಮಾಡುವುದೇ ಇಲ್ಲ. ಇದರಿಂದಾಗಿ ಕುಟುಂಬಗಳು ದಂಪತಿಯನ್ನು ಕೂಡಿಸುವ ಬದಲು ಕಂದಕದ ಬಿರುಕನ್ನು ಇನ್ನಷ್ಟು ಹಿಗ್ಗಿಸುತ್ತಾರೆ.
ಇನ್ನು ಗಂಡ ಮತ್ತು ಹೆಂಡತಿಯ ಮನೆಗಳೆರಡಕ್ಕೂ ಸಾಮಾನ್ಯ ಮಿತ್ರರೋ, ಹಿತೈಷಿಗಳೋ ಆಗಿರುವ ವ್ಯಕ್ತಿಗಳು ವಿಶ್ವ ಯುದ್ಧವನ್ನು ತಪ್ಪಿಸಲು ಸಂಧಾನಕ್ಕೆಂದು ಬರುತ್ತಾರೆ. ಅವರದ್ದೋ ಅರಳೀಕಟ್ಟೆಯ ಮೇಲೆ ಕೂತು ಪಟೇಲ, ಗೌಡ, ಶಾನುಭೋಗ, ತಳವಾರ ಮಾಡುವಂತಹ ಪಂಚಾಯಿತಿ ತೀರ್ಮಾನ. ಹೆಂಡತಿಯಾದವಳು ಹೇಗಿರಬೇಕು, ಗಂಡನಾದವನು ಹೇಗಿರಬೇಕು ಎಂಬ ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲಿ ವಿಚಾರಿಸಿ, ವಿವೇಚಿಸಿ, ಮೇಲಿನ ಸ್ತರಗಳ ವಿವೇಕ ಹೇಳಿ ಕಳುಹಿಸುತ್ತಾರೆ.
ಗಂಡ ಹೆಂಡತಿಯ ಸಮಸ್ಯೆ ಇರುವುದು ದಾಂಪತ್ಯದ ನಿಬಂಧನೆಗಳಲ್ಲಿ ಅಲ್ಲ. ಅವರಿಬ್ಬರ ಮಾನಸಿಕ ಮತ್ತು ಭಾವನಾತ್ಮಕ ಅಂಶಗಳ ಅವ್ಯವಸ್ಥೆಯಲ್ಲಿ. ಸಂಧಾನಕಾರರು ಗಂಡ ಹೆಂಡತಿಯರಿಬ್ಬರ ವೈಯಕ್ತಿಕವಾದ ಮಾನಸಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಗುರುತಿಸಲು ವಿಫಲರಾಗಿರುತ್ತಾರೆ. ಹಲ್ಲು ನೋವು ಬಂದಾಗ ಪೈನ್ ಕಿಲ್ಲರ್ ಕೊಟ್ಟ ಹಾಗೆ. ಸಮಸ್ಯೆಯನ್ನು ಅದುಮಿಡುವರೇ ಹೊರತು ಮೂಲ ಕಾರಣವನ್ನು ಗುರುತಿಸುವುದೂ ಇಲ್ಲ, ಅವರಿಗೆ ಸರಿಪಡಿಸಲು ಸಾಧ್ಯವೂ ಇರುವುದಿಲ್ಲ.
ಪೈಪೋಟಿ, ಗೆಲ್ಲುವ ಹಟದಿಂದ ಜಿದ್ದಾಜಿದ್ದಿಗೆ ಬೀಳುವ ಇವರು ಪೊಲೀಸ್ ಮತ್ತು ಕೋರ್ಟುಗಳಿಗೆ ಮೊರೆ ಹೋಗುತ್ತಾರೆ. ಪೊಲೀಸಾಗಲಿ, ಕೋರ್ಟಾಗಲಿ ಮತ್ತದೇ ಸಾಮಾಜಿಕ ನಿಬಂಧನೆಗಳ ಅರಳೀಕಟ್ಟೆ ಪಂಚಾಯಿತಿಯನ್ನೇ ಸಮಕಾಲಿನ ರೂಪದಲ್ಲಿ ಪ್ರಸ್ತುತಪಡಿಸುತ್ತದೆ ಅಷ್ಟೇ. ಕಾನೂನು ತೊಡಕುಗಳಿಂದ ಮತ್ತು ಕಾನೂನುಗಳ ದುರುಪಯೋಗಳಿಂದ ಸಂಬಂಧಗಳು ಮತ್ತಷ್ಟು ಹಳಸುವುದು ಮಾತ್ರವಲ್ಲದೆ ವ್ಯಕ್ತಿಗತವಾದಂತಹ ಅಪಮಾನ ಮತ್ತು ನೋವುಗಳಿಂದ ಜೀವಗಳು ಮಾನಸಿಕವಾಗಿ ಮತ್ತಷ್ಟು ಒತ್ತಡಕ್ಕೆ ಒಳಗಾಗುತ್ತವೆ. ಕೋರ್ಟ್ ಮತ್ತು ಪೊಲೀಸ್ ಎಂತಹದ್ದೇ ಹೇಳಿ, ಹೆಂಗೋ ನಡೆದುಕೊಳ್ಳುವಂತೆ ಮಾಡಿದರೂ ಅದು ಹೃತ್ಪೂರ್ವಕವಾಗಿರದೇ ನಿರ್ಬಂಧಕ್ಕೆ ಒಳಪಟ್ಟಿರುವ ನಡವಳಿಕೆಗಳೇ ಆಗಿರುತ್ತವೆ. ಸಂಬಂಧಗಳು ಎನ್ನುವುದು ಪ್ರಾಮಾಣಿಕ, ಪಾರದರ್ಶಕ ಮತ್ತು ಖಾಸಗಿತನದ ಪರಿಶುದ್ಧತೆಯನ್ನು (Sanctity) ಹೊಂದಿರುವಂತಹದ್ದು. ಆದರೆ ಕುಟುಂಬಗಳ ಮತ್ತು ಕಾನೂನು ವ್ಯವಸ್ಥೆಗಳ ಮಧ್ಯ ಪ್ರವೇಶಗಳು ಖಾಸಗಿತನದ ಪರಿಶುದ್ಧತೆಯನ್ನು ಸಂಪೂರ್ಣವಾಗಿ ಕಲುಷಿತಗೊಳಿಸುತ್ತವೆ.
ಗಂಡ ಹೆಂಡತಿಯ ನಡುವೆ ಮನಸ್ತಾಪಗಳು ಬಂದಾಗ ಅವರು ಕುಟುಂಬದ ಅಕ್ಷೋಹಿಣಿ ಸೈನ್ಯವನ್ನು ಕರೆಯುವುದೋ ಅಥವಾ ಕಾನೂನು ವ್ಯವಸ್ಥೆಯ ಮೊರೆ ಹೋಗುವುದರ ಬದಲು ಕೌಟುಂಬಿಕ ಆಪ್ತ ಸಮಾಲೋಚಕರ ಬಳಿಗೆ ಹೋಗಬೇಕು.
ಏಕೆಂದರೆ ಯಾರ ಪಕ್ಷವನ್ನೂ ವಹಿಸದ ಅವರು ಇಬ್ಬರಲ್ಲೂ ಆಗುತ್ತಿರುವ ಭಾವನೆಗಳ ಸಂಘರ್ಷ ಮತ್ತು ಮಾನಸಿಕ ತುಮುಲಗಳನ್ನು ಅರಿತು ಪರಸ್ಪರರಿಗೆ ಅರ್ಥೈಸಿಕೊಳ್ಳಲು ನೆರವಾಗುತ್ತಾರೆ.
ಆಪ್ತ ಸಮಾಲೋಚಕರ ಉದ್ದೇಶ ಕಾಳಗದ ಗೆಲುವಲ್ಲದಿರುವ ಕಾರಣದಿಂದ ಪರಸ್ಪರರ ವಾದ ಪ್ರತಿವಾದಗಳ ಬೆಂಕಿಗೆ ತುಪ್ಪ ಸುರಿಯದೆ ಸಂವಾದ ನಡೆಸಲು ನೆರವಾಗುತ್ತಾರೆ. ಈ ಸಂವಹನದ ಸೇತುವೆಯಿಂದ ಪರಸ್ಪರರು ಹತ್ತಿರವಾಗಬಹುದು.
ಸಂಘರ್ಷದ ಮೂಲವನ್ನು ತಿಳಿದು, ಆ ಸಮಸ್ಯೆಯನ್ನು ಒಟ್ಟಾಗಿ ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕುಟುಂಬಗಳ ಭಾವನಾತ್ಮಕ ಪಕ್ಷಪಾತಗಳ ಮಧ್ಯ ಪ್ರವೇಶದಿಂದ ಸಂಬಂಧಗಳು ಸುಧಾರಿಸುವ ಬದಲು ಸಮಸ್ಯೆಗಳು ಮತ್ತಷ್ಟು ಸಿಕ್ಕುಸಿಕ್ಕಾಗುತ್ತವೆ.
ಸಂಬಂಧಗಳು ಎನ್ನುವುದು ಬಲವಾಗುವುದು ಒಲವಿನ ತಳಹದಿಯ ಮೇಲೆಯೇ ಹೊರತು ಒಬ್ಬರನ್ನೊಬ್ಬರು ಗೆಲ್ಲುವುದರಲ್ಲಿ ಖಂಡಿತ ಅಲ್ಲ. ಸಮಾನಾಂತರ ರೇಖೆಗಳು ಎಂದಿಗೂ ಸಂಧಿಸುವುದಿಲ್ಲ. ಇಲ್ಲಿ ಬಾಗುವುದು ಎಂದರೆ ಸೋಲುವುದಲ್ಲ, ಸಂಧಿಸಲು ಎಂಬ ಅರಿವು ಬೇಕಿದೆ.
ಮದುವೆ ಎಂಬುದು ಅಹಮಿಕೆಯ ಪೂರೈಕೆಗಲ್ಲ ಮತ್ತು ಒಬ್ಬರು ಮತ್ತೊಬ್ಬರನ್ನು ಅಧೀನಗೊಳಿಸಿಕೊಳ್ಳಲು ಖಂಡಿತ ಅಲ್ಲ. ಅದು ಇಬ್ಬರು ವ್ಯಕ್ತಿಗಳ ಮತ್ತು ಎರಡು ಕುಟುಂಬಗಳ ಭಾವನಾತ್ಮಕ ಬಂಧವನ್ನು ಬಲಗೊಳಿಸಿಕೊಂಡು ಸಂಬಂಧ ಎಂದು ಗೌರವಿಸಲು.
ಕುಟುಂಬಗಳು ಗಂಡ ಅಥವಾ ಹೆಂಡತಿಯ ಪರವಾಗಿ ಲಾಯರುಗಳಾಗಿ ವಾದಿಸುತ್ತಾ, ಪಕ್ಷಪಾತಿಗಳಾಗಿ ಸಂಬಂಧಗಳನ್ನು ಹದಗೆಡಿಸುವುದಕ್ಕಿಂತಲೂ ಇಬ್ಬರಿಗೂ ಅಪರಿಚಿತರಾಗಿರುವ ಆಪ್ತ ಸಮಾಲೋಚಕರನ್ನು ಕಾಣುವುದರಿಂದ ಬೆಸುಗೆಯ ವಿಷಯದಲ್ಲಿ ಒಂದಿಷ್ಟು ಭರವಸೆ ಕಾಣಬಹುದು.