ಬೂದ ವಲಯ

ಮನಸ್ಸಿಗೆ ಮೇಲಿಂದ ಮೇಲೆ ಆಗುವ ಪ್ರಭಾವ, ಪ್ರಚೋದನೆ, ಪ್ರಲೋಭನೆಗಳು, ಆನುವಂಶೀಯ ಗುಣಗಳು, ಸ್ವಾಭಾವಿಕವಾಗಿ ಬೇರೂರಿರುವ ಅಂಶಗಳು ಮತ್ತು ಆಗಿರುವ ರೂಢಿಯಲ್ಲಿ ವಿರಮಿಸಿರುವಂತಹ ಗುಣಗಳೆಲ್ಲವೂ ಅದರ ಆರೋಗ್ಯ ಮತ್ತು ಅನಾರೋಗ್ಯದ ವಿಷಯವನ್ನು ನಿರ್ಧರಿಸುತ್ತವೆ. ಆದರೆ ಆರೋಗ್ಯವಾಗಿರುವುದು ನಮ್ಮ ಹಕ್ಕು, ಅನಿವಾರ್ಯ ಮತ್ತು ಪ್ರಯತ್ನದಿಂದ ಆಗುವಂತಹುದು.
ರೋಗ ವಕ್ಕರಿಸುವುದು ಅನಪೇಕ್ಷಿತವಾಗಿ, ಅನಿರೀಕ್ಷಿತವಾಗಿ ಮತ್ತು ಅನಾ ಹ್ವಾನಿತವಾಗಿ. ಕರೆಯದೇ ಇದ್ದರೂ, ಬಯಸದೇ ಇದ್ದರೂ ಬಂದು ಕಾಡುವ ಸಂಗತಿ ರೋಗಗಳು ಅಥವಾ ಸಮಸ್ಯೆಗಳು. ಇದು ಮನಸ್ಸಿನ ಮತ್ತು ದೇಹದ ವಿಷಯದಲ್ಲಾದರೂ ನಿಜವೇ. ಎಷ್ಟೋ ಸಲ ಆರೋಗ್ಯಕ್ಕಾಗಿ ಪ್ರಯತ್ನ ಮತ್ತು ಶ್ರಮ ಪಡಲಾರದ ಆಲಸ್ಯದ ಗುಣವು ಅನಾರೋಗ್ಯಕರವಾದ ಸ್ಥಿತಿಯೊಂದಿಗೇ ಹೊಂದಾಣಿಕೆ ಮಾಡಿಕೊಂಡು, ಅದೇ ಸ್ಥಿತಿ ಮತ್ತು ಪರಿಸ್ಥಿತಿಯಲ್ಲೇ ವಿರಮಿಸಿಕೊಳ್ಳುವ ಹಾಗೆ ಮನಸ್ಥಿತಿಯನ್ನು ರೂಪುಗೊಳಿಸಿಕೊಂಡುಬಿಡುತ್ತಾರೆ.
ನಮ್ಮ ಸುತ್ತಮುತ್ತ ನೋಡುವ ಸಾಮಾಜಿಕ ವಾತಾವರಣದಲ್ಲಿ ಬಡತನ, ಕೊಳಕುತನ, ಇಕ್ಕಟ್ಟು, ಕೊರತೆ ಮತ್ತು ಒಲ್ಲದ ಹಾಗೂ ಒಗ್ಗದ ಪರಿಸ್ಥಿತಿಯೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿರುತ್ತಾರೆ. ಅವರು ತಾವಿರುವ ಸ್ಥಿತಿಯನ್ನೇ ದೂಷಿಸಿಕೊಂಡು, ಇದು ತಮ್ಮ ಕರ್ಮ ಅಥವಾ ವಿಧಿ ಎಂದುಕೊಂಡು, ನಮ್ಮನ್ನು ಈ ಸ್ಥಿತಿಗೆ ಅವರ್ಯಾರೋ ತಂದಿದ್ದಾರೆ ಎಂದು ವ್ಯವಸ್ಥೆಯನ್ನೋ ಅಥವಾ ವ್ಯಕ್ತಿಗಳನ್ನೋ ದೂರಿಕೊಂಡು, ಆ ಮೂಲಕವೇ ತೃಪ್ತಿ ಪಡುತ್ತಾ, ಅದರಿಂದ ಹೊರಗೆ ಬರುವ ಪ್ರಯತ್ನವನ್ನೇ ಮಾಡುವುದಿಲ್ಲ. ಏಕೆಂದರೆ ಈ ಪ್ರಯತ್ನ ಶ್ರಮವನ್ನು ಬೇಡುತ್ತದೆ ಮತ್ತು ರೂಢಿಯಾಗಿರುವುದಕ್ಕಿಂತ ಭಿನ್ನವಾದ ದಿಕ್ಕು ಮತ್ತು ಚಲನೆಗೆ ಒಗ್ಗಿಕೊಳ್ಳಬೇಕಾಗುತ್ತದೆ. ಇಂತಹ ಹೊಸ ಪ್ರಯತ್ನದ ಶ್ರಮದಿಂದ ಪಾರಾಗಲು ಅವರು ದೂರಿಕೊಂಡು, ದೂಷಿಸಿಕೊಂಡು, ಹೆಣಗಿಕೊಂಡು, ಪರದಾಡಿಕೊಂಡೇ ಇದ್ದುಬಿಡುತ್ತಾರೆ.
ಇದೇ ವಿಷಯವು ಮಾನಸಿಕ ಆರೋಗ್ಯದ ವಿಷಯದಲ್ಲಿಯೂ ಕೂಡಾ ಅನ್ವಯವಾಗುತ್ತದೆ. ತಮ್ಮ ಭಾವನಾತ್ಮಕ ತೊಳಲಾಟ, ಮಾನಸಿಕ ಸ್ಥಿತಿ, ಬದುಕಿನ ರೀತಿಯನ್ನು ಗಮನಿಸಿಕೊಂಡು, ಅದಕ್ಕೆ ಅಗತ್ಯವಿರುವ ಪ್ರಯತ್ನವನ್ನು ಮಾಡುವ ಬದಲು ಅದಕ್ಕೇ ಒಗ್ಗಿಕೊಂಡು ಹೋಗುವುದು ಒಂದು ವ್ಯಸನ ಅಥವಾ ಚಾಳಿ.
ಮನಸ್ತಾಪ ಅಥವಾ ಒಡಕಿರುವ ಸಂಬಂಧಗಳಲ್ಲಿ ಕಾರಣಗಳನ್ನು ಗುರುತಿಸಿಕೊಂಡು, ಅವುಗಳನ್ನು ಸ್ಪಷ್ಟವಾಗಿ ಗ್ರಹಿಸಿ, ಅದನ್ನು ಸರಿಪಡಿಸಿಕೊಳ್ಳಲು ಬೇಕಾದ ಪ್ರಯತ್ನವನ್ನು ಮಾಡುವ ಬದಲು ಪರ್ಯಾಯವನ್ನು ನೋಡುವುದೋ ಅಥವಾ ದೂರುತ್ತಾ, ಸ್ವಮರುಕವನ್ನು ಪಡುತ್ತಾ, ಅದೇ ಮನಸ್ಥಿತಿ ಮತ್ತು ಪರಿಸ್ಥಿತಿಯಲ್ಲಿ ವಿರಮಿಸುತ್ತಾ ತೃಪ್ತಿಪಟ್ಟುಕೊಳ್ಳುವುದು ಒಂದು ವ್ಯಸನ ಅಥವಾ ಚಾಳಿ. ವ್ಯಕ್ತಿಗಳು ಚಾಳಿಯಲ್ಲಿಯೇ ವಿರಮಿಸುವುದೇಕೆಂದರೆ, ರೂಢಿಯಾಗಿರುವುದರಲ್ಲಿ ಮುಂದುವರಿಯುವುದು ಸರಾಗ ಮತ್ತು ಸುಲಭ. ಹೊಸ ರೂಢಿ ಎಂದರೆ ಶ್ರಮವನ್ನು ಬೇಡುತ್ತದೆ. ಹಾಗೆಯೇ ಎಷ್ಟೋ ಸಲ ನಮ್ಮ ನೋವಿಗೆ, ತೊಂದರೆಗಳಿಗೆ ಮತ್ತು ಸಮಸ್ಯೆಗಳಿಗೆ ನಾವು ಯಾವುದೋ ವ್ಯವಸ್ಥೆಯನ್ನು ಅಥವಾ ವ್ಯಕ್ತಿಯನ್ನು ದೂರುತ್ತಿರುತ್ತೇವೆ. ಹಾಗೆ ದೂಷಿಸುವ ಬದಲು ಅರಿಯುತ್ತಾ ಹೋದರೆ ಅದಕ್ಕೆ ಕಾರಣ ನಾವೇ ಎಂದು ಬೊಟ್ಟು ಮಾಡಿಕೊಳ್ಳಬೇಕಾಗುವುದು. ಇಷ್ಟೂ ಕಾಲ ನಾನು ಮಾಡಿರುವ ದೂರು ಮತ್ತು ದೂಷಣೆ ವಿನಾಕಾರಣವಾದದ್ದು, ನಾನೇ ಇದಕ್ಕೆ ಕಾರಣ ಎಂದು ಅಪರಾಧಿ ಸ್ಥಾನದಲ್ಲಿ ನಿಲ್ಲಲು ನನ್ನ ಮನಸ್ಸು ಒಪ್ಪುವುದಿಲ್ಲ.
ಕುಟುಂಬ, ಸಮಾಜ, ಧಾರ್ಮಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳು ಒಳ್ಳೆಯ ಮತ್ತು ಕೆಟ್ಟ ಎಂಬ ಎರಡು ನಿರ್ದಿಷ್ಟ ವಲಯಗಳನ್ನು ಮತ್ತು ಸ್ಥಾನಗಳನ್ನು ಗುರುತಿಸಿದ್ದು ಯಾವುದಾದರೂ ಒಂದರಲ್ಲಿ ಹೊಂದಿಸಿಕೊಳ್ಳಲು ಅಥವಾ ಅಡಕವಾಗಲು ಅಥವಾ ಆಗಿಸಿಕೊಳ್ಳಲು ಮನಸ್ಸು ಪ್ರಯತ್ನಪಡುತ್ತಿರುತ್ತದೆ. ಸ್ವರ್ಗ ಮತ್ತು ನರಕದ ಎರಡು ವೈಪರೀತ್ಯದ ಪರಿಕಲ್ಪನೆಗಳಂತೆ! ಆದರೆ ಒಳ್ಳೆಯ ಮತ್ತು ಕೆಟ್ಟ ಎಂಬ ಎರಡು ವಲಯಗಳು ಬೆಳಕು ಮತ್ತು ಕತ್ತಲೆಯಂತೆ ಇರುವ ಬದಲು ಕತ್ತಲೆ ಮತ್ತು ಬೆಳಕು ಎರಡೂ ಬೆರೆತಿರುವ ಬಹುದೊಡ್ಡ ನಡುವಲಯವೂ ಇರುತ್ತದೆ. ಇದನ್ನು ಕಪ್ಪು ಮತ್ತು ಬಿಳುಪಿನ ನಡುವಿನ ಬೂದವಲಯ ಅಥವಾ ಗ್ರೇ ಏರಿಯಾ ಎನ್ನಬಹುದು.
ನಾವಿರುವ ಜಗತ್ತು ಮತ್ತು ನಮಗಿರುವ ಮನಸ್ಸು ನಿರ್ದಿಷ್ಟವಾದ ಸ್ವರ್ಗವೋ ಅಥವಾ ನರಕವೋ, ಪಾಪವೋ, ಪುಣ್ಯವೋ, ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ಗಡಿಯುಳ್ಳ ಚೌಕಟ್ಟಿನದಲ್ಲ! ಬೂದವಲಯದ್ದು. ವ್ಯಕ್ತಿಗಳು ಈ ಬೂದವಲಯದ ಅರಿವಿಲ್ಲದೇ ತಮ್ಮನ್ನು ಕೆಟ್ಟ ಸ್ಥಾನದಲ್ಲಿ ಇರಿಸಿಕೊಂಡು ಖಂಡಿಸಿಕೊಳ್ಳಲು ಬಯಸದೇ ಸದಾ ಒಳ್ಳೆಯ ಸ್ಥಾನದಲ್ಲಿಟ್ಟುಕೊಂಡು ಮನ್ನಣೆ ಮತ್ತು ಮರುಕ ಬಯಸುವ ಕಾರಣದಿಂದ ತಮಗೇ ಅರಿವಿಲ್ಲದಂತೆ ತಮ್ಮನ್ನು ಶಿಕ್ಷಿಸಿಕೊಳ್ಳುತ್ತಿರುತ್ತಾರೆ. ಜಗತ್ತು ಮತ್ತು ಮನಸ್ಸು ಬೂದವಲಯದ್ದು. ಅದು ಎಂದಿಗೂ ಕಪ್ಪು ಮತ್ತು ಬಿಳಿಯೆಂಬ ನಿರ್ದಿಷ್ಟ ತೀರ್ಮಾನಗಳಿಗೆ ಒಗ್ಗದ್ದು.
ಪಾಪ ಮತ್ತು ಪುಣ್ಯ ಅಥವಾ ಸ್ವರ್ಗ ಮತ್ತು ನರಕ ಅಥವಾ ಒಳ್ಳೆಯ ಮತ್ತು ಕೆಟ್ಟ ಎಂಬ ಅಸಾಧ್ಯದ ಮಾನದಂಡಗಳನ್ನು ಬೆನ್ನಟ್ಟುವುದರಲ್ಲಿಯೇ ಮನಸ್ಸು ಮತ್ತು ವ್ಯವಸ್ಥೆಗಳು ವೃಥಾ ಬಳಲುತ್ತದೆ.
ಒಳ್ಳೆಯ ಮತ್ತು ಕೆಟ್ಟ ಎಂಬ ಎರಡು ತೀರ್ಮಾನಗಳಿಂದ ಹೊರತಾಗಿ ಬೂದವಲಯವನ್ನು ಗಮನಿಸಿರುವುದರಲ್ಲಿ, ಅದನ್ನು ಒಪ್ಪಿಕೊಳ್ಳುವುದರಲ್ಲಿ ಮತ್ತು ಅದರ ಕುರಿತಾಗಿ ಕೆಲಸ ಮಾಡುವುದರಲ್ಲಿ ಮನಸ್ಸಿನ ಆರೋಗ್ಯವಿರುವುದು. ಬೂದವಲಯದ ಅರಿವು ಇಲ್ಲದಿರಲು ಅಥವಾ ಒಪ್ಪದೇ ಇರುವಾಗ ಎಷ್ಟೋ ವಿಷಯಗಳ ಉತ್ತರದಾಯಿತ್ವವನ್ನೂ ಮತ್ತು ಹೊಣೆಗಾರಿಕೆಯನ್ನೂ ವ್ಯಕ್ತಿಗಳು ಒಪ್ಪಿಕೊಳ್ಳದೇ ಹೋಗುತ್ತಾರೆ.