ಅಮಾನುಷ ತಂತ್ರ
ಸಾವಿರಾರು ವರ್ಷಗಳಿಂದ ಈ ಮನುಷ್ಯ ಸಮಾಜದಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಅಥವಾ ಒಂದು ಸಮೂಹ ಮತ್ತೊಂದು ಸಮೂಹವನ್ನು ತನ್ನ ಸಾಮಾನ್ಯ ಮಾನುಷ ಮಟ್ಟಕ್ಕಿಂತ ಮೇಲೇರಿಸುವ ಅಥವಾ ಮೇಲೇರಿಸಿಕೊಳ್ಳುವ ಅತಿಮಾನುಷ ತಂತ್ರಗಾರಿಕೆ ಅಥವಾ ಕೆಳಗಿಳಿಸುವ ಅಮಾನುಷ ತಂತ್ರಗಾರಿಕೆ ರೂಢಿಯಲ್ಲಿದೆ.
ವಿವಿಧ ದೇಶಗಳಲ್ಲಿ ವಿವಿಧ ವ್ಯಕ್ತಿಗಳ ಮತ್ತು ಸಮೂಹಗಳ ನಡುವೆ ವಿವಿಧ ಕಾರಣಗಳಿಂದ ಈ ತಂತ್ರಗಾರಿಕೆಯು ತಲೆದೋರಿರುತ್ತವೆ. ಸಾಮಾಜಿಕ ಶ್ರೇಣಿ, ಸಾಂಸ್ಕೃತಿಕ ಅಧಿಕಾರ, ಜನಾಂಗೀಯ ಶ್ರೇಷ್ಠತೆ, ವಾಣಿಜ್ಯ ಲೋಭ, ಅಧಿಕಾರ ದಾಹ, ಆಹಾರ ಅಥವಾ ವಸತಿ ಕೊರತೆ, ಭೂಮಿ ವಿಸ್ತರಣೆ, ನೆಲೆವೀಡಿನ ಅಭದ್ರತೆ; ಹೀಗೆ ಯಾವುದಾದರೂ ನೆಪವಾಗಿರಬಹುದು.
ಆದರೆ ಸಾಧಾರಣ ಮೂಲದಿಂದ ಗುರುತಿಸುವುದಾದರೆ ಅದು ಆತ್ಮರತಿ ಅಥವಾ ಸ್ವಪ್ರೇಮ (ನಾರ್ಸಿಸಂ) ಮತ್ತು ಸಾಮೂಹಿಕವಾಗಿ ಗುರುತಿಸುವುದಾದರೆ ಅದು ಸಂಕಲಿತ ಸ್ವಪ್ರೇಮ (ಕಲೆಕ್ಟಿವ್ ನಾರ್ಸಿಸಂ). ಇದೇ ಮುಂದುವರಿದು ಬಿರುಸಾದಂತೆ ಮತ್ತು ಪೆಡಸಾದಂತೆ ಕೋಮುವಾದ ಅಥವಾ ಟ್ರೈಬಲಿಸಂ ಆಗುವುದು.
ಒಟ್ಟಾರೆ ಮನುಷ್ಯರ ಒಂದು ಸಮೂಹ ತಮ್ಮ ಸಹಜ ಮತ್ತು ಸರಳವಾಗಿರುವ ಮಾನುಷಮಟ್ಟಕ್ಕಿಂತ ಇನ್ನೊಂದು ಸಮೂಹವನ್ನು ಹೀನಗೊಳಿಸುವುದೇ ಅಥವಾ ಕೀಳಾಗಿ ಕಾಣುವುದೇ ಅಥವಾ ಕೀಳಾಗಿ ನಡೆಸಿಕೊಳ್ಳುವುದೇ ಮಾನಸಿಕವಾದ ಅಮಾ ನುಷ ಪ್ರಕ್ರಿಯೆ ಎಂದು ಎನಿಸಿಕೊಳ್ಳುತ್ತದೆ.
ವ್ಯಕ್ತಿ ಅಥವಾ ಸಮೂಹವನ್ನು ಸಾಮಾನ್ಯ ಮನುಷ್ಯರ ಮಟ್ಟಕ್ಕಿಂತ ಮೇಲಕ್ಕೇರಿಸುವುದು ಅತಿಮಾನುಷವೆನಿಸುತ್ತದೆ. ಭಾರತವೂ ಸೇರಿದಂತೆ ಭೂಮಿಯ ವಿವಿಧ ದೇಶ ಮತ್ತು ಸಂಸ್ಕೃತಿಗಳಲ್ಲಿ ಅತಿಮಾನುಷತ್ವದ ಅಥವಾ ಸೂಪರ್ ಹ್ಯೂಮನ್ ಪ್ರತಿಪಾದನೆ ಅಂದಿನಿಂದ ಇಂದಿನವರೆಗೂ ಆಗುತ್ತಲೇ ಬಂದಿದೆ. ಅದೊಂದು ಬಗೆಯದಾದರೆ ಮತ್ತೊಂದು ತಮ್ಮಂತೆಯೇ ಇರುವ ಇತರರನ್ನು ಮಾನುಷೋಪಚಾರಕ್ಕೆ ಹೊರತಾಗಿ ಕಾಣುವುದು ಅಮಾನುಷತ್ವವಾಗಿದೆ. ಅತಿಮಾನುಷತ್ವ ಮತ್ತು ಅಮಾನುಷತ್ವ; ಈ ಎರಡೂ ಬಗೆಯ ಮಾನಸಿಕ ಸಮಸ್ಯೆಗಳಿಂದಾಗಿ ದೌರ್ಜನ್ಯ, ಕ್ರೌರ್ಯ, ಅತಿಕ್ರಮಣ, ಮಾನವ ಹಕ್ಕಿನ ಉಲ್ಲಂಘನೆ, ಯುದ್ಧಗಳು, ಅಪರಾಧಗಳು ಮತ್ತು ನರಮೇಧಗಳನ್ನು (ಜೆನೋಸೈಡ್) ನಾವು ಮನುಷ್ಯನ ಇತಿಹಾಸದಲ್ಲಿ ಕಂಡಿದ್ದೇವೆ ಮತ್ತು ಕಾಣುತ್ತಿದ್ದೇವೆ.
ಒಂದು ಸಮೂಹವು ಮತ್ತೊಂದು ಸಮೂಹದ ಮಾನವ ಹಕ್ಕನ್ನು ಉಲ್ಲಂಘನೆ ಮಾಡುವುದು ಮತ್ತು ನೈತಿಕವಾಗಿ ಯಾವ ಹೊಣೆಗಾರಿಕೆಯನ್ನೂ ಹೊರದೇ ಇರುವುದೇ ಅಮಾನುಷ ಮನಸ್ಥಿತಿಯಾಗುತ್ತದೆ. ವೈಯಕ್ತಿಕವಾಗಿ, ಖಾಸಗಿಯಾಗಿ ಮತ್ತು ಲೌಕಿಕವಾಗಿ ಯಾವುದೇ ಸಂಘರ್ಷ ಅಥವಾ ಮನಸ್ತಾಪವಿರದಿದ್ದರೂ ಯಾವುದೋ ಒಂದು ಜನಾಂಗದ, ಜಾತಿಯ, ಧರ್ಮದ, ಸಂಸ್ಕೃತಿಯ, ದೇಶದ, ಭಾಷೆಯ ಜನರನ್ನು ಅಥವಾ ವ್ಯಕ್ತಿಯನ್ನು ಕಂಡಾಗ ಬೇಸರ, ಕೋಪ, ಅಸಹನೆ ಉಂಟಾಯಿತೆಂದರೆ, ಪರಕೀಯರನ್ನಾಗಿ ಕಾಣುತ್ತಿದ್ದಾರೆಂದರೆ ಆ ವ್ಯಕ್ತಿಯಲ್ಲಿ ಅಮಾನುಷತ್ವದ ಬೀಜವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಮಾನುಷತ್ವದ ಮೂಲ ಭಾವನೆಯೇ ಪರಕೀಯತೆ. ಇವ ನಮ್ಮವ ಎಂದು ಅನಿಸುವುದೇ ಇಲ್ಲ.
ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು ಎಂಬಂತೆ ಪರಕೀಯರನ್ನಾಗಿ ಕಾಣುತ್ತಾ ಅವರು ಮಾಡುವುದರಲ್ಲಿ ದೋಷವನ್ನು ಹುಡುಕುವುದು, ಕೆಡುಕು ಮಾಡುವಂತೆ ಪ್ರೇರೇಪಿಸುವುದು, ಅವರು ಕೆಡುಕು ಮಾಡಿದಾಗ ಅವರಿಗೆ ಶಿಕ್ಷೆ ನೀಡಲಾಗುವುದು ಎಂದು ಸಂತೋಷ ಪಡುವುದು, ಅವರು ಒಳಿತನ್ನೇ ಮಾಡಿದರೂ ಅದರಲ್ಲಿ ಹುಳುಕನ್ನು ಕಾಣುವುದು ಅಥವಾ ಅದನ್ನು ಮಾಡೇ ಇಲ್ಲ ಎಂಬಂತೆ ನಿರ್ಲಕ್ಷಿಸುವುದು ಅಥವಾ ಅದು ಅವರ ಸ್ವಾರ್ಥ ಸಾಧನೆಗೆ ಎಂದು ಅನುಮಾನಿಸಿ ಅಪಮಾನಿಸುವುದು; ಇವೆಲ್ಲವೂ ಅಮಾನುಷತ್ವದ ರೋಗ ಲಕ್ಷಣಗಳೇ.
ತಾವು ಪರಕೀಯರು ಎಂದು ಭಾವಿಸಿರುವವರನ್ನು ಕೆರಳಿಸಿ ಅವರಿಗೆ ಯುದ್ಧಾಹ್ವಾನ ನೀಡುವುದು ಮತ್ತು ಸಂಘರ್ಷಗಳಿಗೆ ತೊಡಗುವಂತೆ ಮಾಡುವುದು ಅಮಾನುಷ ತಂತ್ರದ ಒಂದು ಸಾಮಾನ್ಯ ಲಕ್ಷಣ.
ಎರಡು ಉದಾಹರಣೆಗಳನ್ನು ಗಮನಿಸುವುದಾದರೆ ಜರ್ಮನಿಯಲ್ಲಿ ಯಹೂದಿಗಳನ್ನು ನಾಝಿಗಳು ನೋಡುತ್ತಿದ್ದ ಬಗೆ, ಹಾಗೆಯೇ ರುವಾಂಡಾದಲ್ಲಿ ತುತ್ಸಿಗಳನ್ನು ಹುಟುಗಳು ಪರಿಗಣಿಸುತ್ತಿದ್ದ ಬಗೆ ಬಹು ದೊಡ್ಡ ನರಮೇಧಕ್ಕೆ ಕಾರಣವಾಯಿತು.
ಸುದೀರ್ಘವಾದ ಸಂಘರ್ಷಗಳು ಸಾಮೂಹಿಕ ಮತ್ತು ಸಾಮುದಾಯಿಕ ಸಂಬಂಧಗಳನ್ನು ದುರ್ಬಲಗೊಳಿಸುವುದು ಮಾತ್ರವಲ್ಲದೇ ಸಾಂಪ್ರದಾಯಿಕ ವೈರತ್ವವನ್ನು ಬೆಳೆಸುತ್ತದೆ. ಇದು ಆಯಾ ಸಮುದಾಯದ ಗುರುತಿನಿಂದಲೇ ವ್ಯಕ್ತಿ ಮತ್ತು ಸಮೂಹಗಳನ್ನು ಮಾನಸಿಕವಾಗಿ ದ್ವೇಷಿಸುವುದನ್ನು ರೂಢಿಸಿಕೊಳ್ಳುತ್ತಾರೆ. ಮಾನಸಿಕವಾಗಿ ಅಂತರವನ್ನು ಕಾಪಾಡಿಕೊಳ್ಳುವುದು, ಭಾವನಾತ್ಮಕವಾಗಿ ಕನಲುವುದು, ದೈಹಿಕವಾಗಿ ಸಂಘರ್ಷಕ್ಕೆ ಇಳಿಯುವುದು ಅಮಾನುಷತ್ವದ ಮುಂದುವರಿದ ಲಕ್ಷಣಗಳು.
ಅಮಾನುಷ ತಂತ್ರವು ಹಕ್ಕು ಮತ್ತು ಅಧಿಕಾರವನ್ನು ಸ್ಥಾಪಿಸಲು ತಮ್ಮ ಜನಸಂಖ್ಯೆಯ ಗಾತ್ರದಲ್ಲಿ, ಅಧಿಕಾರದಲ್ಲಿ, ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಕೊಳ್ಳುವುದರಲ್ಲಿ ಆಸಕ್ತಿಯನ್ನು ಹೊಂದುತ್ತದೆ. ಯಾಕೆಂದರೆ ತಾನು ಯಾವಾಗಲೂ ಮೇಲರಿಮೆಯಲ್ಲಿ ಮೆರೆಯು ತ್ತಿದ್ದು, ತಾನು ಹೊರಗಿ ಟ್ಟಿರುವ ಸಮೂಹವು ಕೀಳರಿಮೆಯಲ್ಲಿ ಬಳಲುವಂತೆ ಮಾಡುವುದು ಅದರ ಗುರಿಯಾಗುತ್ತದೆ. ದುಷ್ಟರೆಂದೋ, ಅನೈತಿಕರಾದವರೆಂದೋ, ಕೇಡಿಗಳೆಂದೋ, ಅಪರಾಧಿಗಳೆಂದೋ ಹಣೆಪಟ್ಟಿ ಹಚ್ಚಿ ಅವರನ್ನು ತಮ್ಮ ಅಧೀನವಾಗಿಸಿಕೊಳ್ಳುವುದಕ್ಕೆ ಅಥವಾ ಭಯದಲ್ಲಿ ಇರಿಸಿಕೊಳ್ಳುವುದಕ್ಕೆ ಮತ್ತು ಅವರನ್ನು ನರಳುವಂತೆ ಮಾಡಲು ಹಾತೊರೆಯುತ್ತಿರುತ್ತಾರೆ. ತಮ್ಮ ಸಮೂಹದಿಂದ ಹೊರಗಿಟ್ಟಿರುವ ಅವರ ಸ್ವಾತಂತ್ರ್ಯವನ್ನು ಹೇಗಾದರೂ ಕಸಿಯುವಂತಹ ಮತ್ತು ಅವರು ತಮ್ಮ ಏಳ್ಗೆಯನ್ನು ಕಾಣದಿರುವಂತೆ ಸದಾ ಒತ್ತಡ ಮತ್ತು ಆತಂಕದಲ್ಲಿರುವಂತೆ ಮಾಡುವಂತಹ ಹುನ್ನಾರಗಳೂ ಕೂಡಾ ಅಮಾನುಷ ತಂತ್ರವೇ ಆಗಿರುತ್ತದೆ.
ಈ ಮಾನುಷ ಜಗತ್ತಿನ ಸಾಮಾನ್ಯ ನೈತಿಕ ಒಡಂಬಡಿಕೆಯಂತೆ ಎಲ್ಲಾ ಮನುಷ್ಯರೂ ಮೂಲಭೂತ ಗೌರವಕ್ಕೆ ಅರ್ಹರು ಮತ್ತು ಎಲ್ಲರೂ ಮಾನವ ಘನತೆಯನ್ನು ಹೊಂದಿದ್ದಾರೆ. ಯಾರೂ ಯಾರ ಮಾನವ ಹಕ್ಕುಗಳನ್ನು ಉಲ್ಲಂಘಿಸುವಂತೆ ನಡೆದುಕೊಳ್ಳಬಾರದು. ಯಾವುದೇ ಅಮಾಯಕ ಮನುಷ್ಯನನ್ನು ಕೊಲ್ಲಬಾರದು, ಅತ್ಯಾಚಾರ ಮಾಡಬಾರದು, ಮೋಸಗೊಳಿಸಬಾರದು ಮತ್ತು ಹಿಂಸಿಸಬಾರದು ಎಂದಿದೆ. ಅಷ್ಟೇ ಅಲ್ಲದೆ ಅಂತರ್‌ರಾಷ್ಟ್ರೀಯ ಕಾನೂನು ಹೇಳುವಂತೆ ಒಬ್ಬರು ಮತ್ತೊಬ್ಬರನ್ನು ಸರಿಯಾಗಿಯೂ, ನ್ಯಾಯಯುತವಾಗಿಯೂ, ಗೌರವ ಮತ್ತು ಆದರದಿಂದಲೂ ನಡೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಆಹಾರ, ಆರೋಗ್ಯ, ಆಶ್ರಯ, ಭದ್ರತೆ, ಶಿಕ್ಷಣ, ಕುಟುಂಬ, ಸಂಗಾತಿ, ಸಂತಾನ, ಶ್ರದ್ಧಾ ನಂಬಿಕೆಗಳ ಪರಿಪಾಲನೆಯೇ ಮೊದಲಾದ ಅವರ ಮೂಲಭೂತ ಸೌಕರ್ಯಗಳನ್ನು ಹೊಂದುವ ಹಕ್ಕಿದೆ. ಮುಖ್ಯವಾಗಿ ಇವನ್ನು ಹೊಂದಲು ಪ್ರತಿಯೊಬ್ಬನಿಗೂ ಆಯ್ಕೆಯ ಸ್ವಾತಂತ್ರ್ಯ ಕೂಡಾ ಇದೆ. ಆದರೆ ಮಾನಸಿಕವಾಗಿ ಹೊಂದಿರುವ ಅಮಾನುಷ ತಂತ್ರದ ಸಾಧನೆಯಾಗಿ ತಮ್ಮ ಎದುರಾಳಿಯ ಈ ಎಲ್ಲಾ ಹಕ್ಕುಗಳನ್ನೂ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಮಾನವ ಹಕ್ಕನ್ನು ಉಲ್ಲಂಘಿಸುವುದು ಮತ್ತು ಎದುರಾಳಿಯ ಖಾಸಗಿ ಮತ್ತು ಸಾಮಾಜಿಕ ವಲಯದಲ್ಲಿ ಅತಿಕ್ರಮ ಪ್ರವೇಶಿಸುವುದು ಅಮಾನುಷ ವ್ಯಕ್ತಿ ಅಥವಾ ಸಮೂಹಗಳ ಒಂದು ಸಾಮಾನ್ಯ ತಂತ್ರವಾಗಿರುತ್ತದೆ. ತಮ್ಮ ಅಧೀನಕ್ಕೆ ಒಳಪಡಿಸಿಕೊಂಡು ಎಂತಾ ಮಟ್ಟದ ಕ್ರೌರ್ಯ ಮತ್ತು ಅನುಚಿತ ದೌರ್ಜನ್ಯವನ್ನು ಮಾಡುವುದಕ್ಕೂ ಹೇಸದಂತಹ ವ್ಯಸನಿಗಳಾಗಿರುತ್ತಾರೆ.
ಒಟ್ಟಾರೆ ಈ ಮಾನಸಿಕವಾಗಿ ರೋಗಗ್ರಸ್ತವಾಗಿರುವ ಈ ಅಮಾನುಷ ತಂತ್ರವು ವ್ಯಕ್ತಿ ವ್ಯಕ್ತಿಗಳಲ್ಲಿ ಮತ್ತು ಸಮೂಹ ಸಮೂಹಗಳಲ್ಲಿ ಕೂಡಾ ಕಾಣಬಹುದು. ಇಂತಹವೆಲ್ಲಾ ನಮ್ಮಲ್ಲಿ ಅಥವಾ ನಮ್ಮ ಸಮಾಜದಲ್ಲಿ ಕಾಣುತ್ತಿಲ್ಲ, ನಾವು ಸುಭಗರು ಎಂದು ನಟಿಸಿದರೆ, ನಿಶ್ಚಯವಾಗಿ ಅದು ಆತ್ಮವಂಚನೆಯಲ್ಲದೆ ಬೇರೇನೂ ಅಲ್ಲ.