ಮನಸ್ಸನ್ನು ನಿಗ್ರಹಿಸುವುದೇ!
ಬೇಡ ಬೇಡವೆಂದರೂ ಆಲೋಚನೆಗಳು ಬರುತ್ತಲೇ ಇರುತ್ತವೆ. ಏನು ಮಾಡಿದರೂ ನಿಯಂತ್ರಿಸಲಾಗುತ್ತಿಲ್ಲ. ನಿದ್ರೆ ಬರುತ್ತಿಲ್ಲ. ಕೆಟ್ಟ, ಕೊಳಕು, ಕ್ರೌರ್ಯ, ಭಯ ಮತ್ತು ನಕಾರಾತ್ಮಕವಾಗಿರುವ ಆಲೋಚನೆಗಳೂ ಕೂಡಾ ಬರುತ್ತಿರುತ್ತವೆ. ಏನು ಮಾಡುವುದೆಂದು ಬಹಳ ಜನರ ಸಾಮಾನ್ಯ ಪ್ರಶ್ನೆಗಳು.
ತರಬೇತಿಗೊಂಡಿರದ ಮನಸ್ಸಿಗೆ ಇದು ಸಾಮಾನ್ಯ ವಿಷಯ. ಸಮಸ್ಯೆ ಅಲ್ಲ. ಆದರೆ ಅದರಿಂದ ವ್ಯಕ್ತಿಯ ವಿಶ್ರಾಂತ ಸ್ಥಿತಿಗೆ, ಚಟುವಟಿಕೆಗಳಿಗೆ, ಸಂಬಂಧಗಳಿಗೆ ಮತ್ತು ತನ್ನದೇ ನಡೆನುಡಿಗಳಿಗೆ ತೊಡಕಾದಾಗ ಅದು ಸಮಸ್ಯೆ.
ಅಮೂರ್ತವೂ ಮತ್ತು ಯಾವುದೋ ಒಂದು ಭೌತಿಕ ಸ್ವರೂಪದಲ್ಲಿ ಇರದ ಮನಸ್ಸು ತಾನು ಜೀವಂತವಾಗಿ ಇರುವುದನ್ನು ಭಾವಿಸುವುದೇ ಆಲೋಚನೆಗಳ ಆಧಾರದಲ್ಲಿ. ಹಾಗಾಗಿ ಆಲೋಚನೆಗಳ ಹೊನಲು ಸ್ವಾಭಾವಿಕ. ಆದರೆ ಅದು ಪ್ರವಾಹವಾಗದೆ ಹೊನಲಾಗಿ ಹರಿಯುವಂತೆ ಮಾಡುವುದಷ್ಟೇ ನಮ್ಮ ಕೆಲಸ. ಅದಕ್ಕೆ ಬೇಕಾಗಿರುವುದು ತಂತ್ರಗಾರಿಕೆ. ಆ ತಂತ್ರಗಾರಿಕೆಯನ್ನು ಹೇಳಕೊಡಲೆಂದೇ ಧ್ಯಾನ, ಪ್ರಾಣಾಯಾಮ, ವ್ಯಾಯಾಮ ಮತ್ತು ಇತರ ವಿಧಾನಗಳು ಇರುವುದು.
ಸಂಪೂರ್ಣ ಆಲೋಚನೆಗಳೇ ಇಲ್ಲದ ಮನಸ್ಸನ್ನು ಹೊಂದಲಾಗದು. ಉನ್ಮತ್ತರಾಗಿರುವಾಗ ಆಲೋಚನೆಗಳು ಇರುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ ಅದು ಜಾಗೃತಿ ಚೇತನವು ಹೊರಗಿನ ವಿಷಯಗಳಿಗೆ ಗಮನ ನೀಡದೇ ಇರುವುದು ಅಷ್ಟೇ. ಆಂತರಿಕ ಮನಸ್ಸು ಅಥವಾ ಸುಪ್ತ ಚೇತನವು ಸದಾ ಜಾಗೃತವೂ ಆಗಿರುತ್ತದೆ, ಅದು ತನ್ನ ಆಲೋಚನಾ ಲಹರಿಯನ್ನು ಸೂಸುತ್ತಿರುತ್ತದೆ ಕೂಡಾ.
ಮಾದಕ ವಸ್ತುಗಳನ್ನು ಸೇವಿಸಿದಾಗ ಅವರ ಜಾಗೃತಿ ಚೇತನವು ಹೊರಗಿನ ವಿಷಯಗಳಿಗೆ ಗಮನ ಕೊಡದೇ ಮಂಪರಿನಿಂದ ಕೂಡಿರುತ್ತದೆ. ಆ ಮಂಪರನ್ನೇ ವಿಶ್ರಾಂತ ಸ್ಥಿತಿಯೆಂದೂ ಅಥವಾ ಶಾಂತ ಚಿತ್ತವೆಂದೂ ಭಾವಿಸುವುದು ಭ್ರಮೆಯಷ್ಟೇ. ನಿದ್ರೆ ಹೋಗುತ್ತಿದ್ದಾರೆಂದರೆ ಅಥವಾ ಮಂಪರಿನಲ್ಲಿ ಇದ್ದಾರೆಂದರೆ ಅವರು ಆಲೋಚನೆಗಳಿಂದ ವಿಶ್ರಾಂತರಾಗಿದ್ದಾರೆಂದಲ್ಲ. ಅವರ ಜಾಗೃತಿ ಚೇತನವು ಅವಕ್ಕೆ ಗಮನ ಕೊಡಲಾಗದಿರುವಷ್ಟು ಬಲಹೀನವಾಗಿರುತ್ತದೆ. ಇಂತಹ ಬಲಹೀನತೆಯ ಮಂಪರನ್ನು ಮಾದಕವಸ್ತುಗಳಿಂದ ಅಥವಾ ಯಾವುದೇ ಮೈಮರೆಸುವ ಚಟುವಟಿಕೆಗಳಿಂದ ಪಡೆದು ತಾನು ಹಗುರವಾದೆ ಎಂದೇನೋ ಕೆಲವರು ಭಾವಿಸುವರು. ಆದರೆ ಅವರ ಗೊಂದಲಕ್ಕೆ ಒಳಗಾಗಿರುವಂತಹ ಮನಸ್ಥಿತಿಯು ಸುಪ್ತ ಚೇತನದಲ್ಲಿ ಮೊದಲಿನಂತೆಯೇ ಇರುವುದು.
ಮನಸ್ಸನ್ನು ಹೇಗೆ ನಿಗ್ರಹಿಸುವುದು ಎಂದು ಬಹಳಷ್ಟು ಜನರು ಕೇಳುತ್ತಿರುತ್ತಾರೆ.
ನಿಗ್ರಹಿಸುವುದರಲ್ಲಿ ಆಗ್ರಹವಿರುತ್ತದೆ. ಆಗ್ರಹ ಅಥವಾ ಬಲವಂತದ ಯಾವುದೇ ಒತ್ತಡವೂ ಮನಸ್ಸನ್ನು ಶಾಂತತೆಗೆ ಒಯ್ಯುವ ದಿಕ್ಕಿನಲ್ಲಿ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಬದಲಾಗಿ ಅದರ ಸ್ಥಿತಿ ಇನ್ನೂ ಹದಗೆಡುವುದು.
ಪ್ರವಾಹದಂತೆ ಕೊಚ್ಚಿಹೋಗಲು ಹಾತೊರೆಯುತ್ತಿರುವ ಮನಸ್ಸನ್ನು ಹೊನಲನ್ನಾಗಿ ಬದಲಿಸಲು ತಂತ್ರಗಳಿವೆ. ಮೊದಲು ಮನಸ್ಸನ್ನು ನಿಗ್ರಹಿಸುತ್ತೇನೆ, ಅದನ್ನು ನನ್ನ ಅಧೀನದಲ್ಲಿ ಇಟ್ಟುಕೊಳ್ಳುತ್ತೇನೆ ಅಥವಾ ಅದನ್ನು ಬಗ್ಗಿಸುತ್ತೇನೆಂಬ ಅಧಿಕಾರ ಮತ್ತು ಆಗ್ರಹದ ಧೋರಣೆಯನ್ನೇ ಬಿಡಬೇಕಿರುವುದು.
ಮನಸ್ಸನ್ನು ನಿಗ್ರಹಿಸುವುದೂ ಅಲ್ಲ, ನಿಯಂತ್ರಿಸುವುದೂ ಅಲ್ಲ, ಬದಲಿಗೆ ತರಬೇತಿ ನೀಡುವುದು.
ಮನಸ್ಸಿನ ವಿರುದ್ಧವಾಗಿ ಬಲ ಪ್ರಯೋಗ ಮಾಡಲು ಯತ್ನಿಸಿದಷ್ಟೂ ಅದು ತನ್ನ ಬಲವನ್ನು ತೋರಿಸುತ್ತದೆ. ಸರಳವಾಗಿ ಹೇಳುವುದಾದರೆ ಅದಕ್ಕೆ ಜೋರು ಮಾಡಿದಷ್ಟೂ ಕೆರಳುತ್ತದೆ. ಹಾಗಾದರೆ ಮಾಡುವುದೇನು?
ಮೊದಲನೆಯದಾಗಿ ಮನಸ್ಸಿನ ಬಗ್ಗೆ ಏನೂ ಮಾಡುವಷ್ಟಿಲ್ಲ. ಮಾಡುವುದೇನಿದ್ದರೂ ಅದು ಆಲೋಚನೆಗಳ ಬಗ್ಗೆ.
ಸಾಕ್ಷಿ, ಮೃದು ಧೋರಣೆ, ಒಲಿಸುವುದು, ಭಯ ಪಡಿಸದಿರುವುದು, ಮಾರ್ಗ ಬದಲಿಸುವುದು, ಹೊಸ ರೂಢಿ ಮಾಡಿಸುವುದು, ಹೊಸತನದ ಆನಂದವನ್ನು ರೂಢಿಸುವುದೇ ಮೊದಲಾದ ತಂತ್ರಗಳನ್ನು ಬಳಸುವುದರಿಂದ ಮನಸ್ಸು ಉಗ್ರ ಪ್ರವಾಹವಾಗದೇ ಹದವಾದ ಹೊನಲಾಗುವುದು.
ಆಲೋಚನೆಗಳನ್ನು ಹತ್ತಿಕ್ಕುವ ಬದಲು ಸಾಕ್ಷೀಕರಿಸಬೇಕು. ಅವನ್ನು ಗಮನಿಸಿ ನೋಡಬೇಕು. ನಮ್ಮ ಆಲೋಚನೆಗಳಿಗೆ ನಾವೇ ಸಾಕ್ಷಿಯಾಗುವ ತಂತ್ರದಲ್ಲಿ ಗೆಲುವು ಸಾಧಿಸಿದರೆಂದರೆ ಮುಂದೆ ಸುಲಭ. ಹುಟ್ಟುವ ಮತ್ತು ಮುನ್ನುಗ್ಗುವ ಯಾವುದೇ ಆಲೋಚನೆಗಳಿಗೆ ಹಿನ್ನೆಲೆಗಳಿರುತ್ತವೆ. ಅವು ಉಗ್ರವಾಗಲು ಅಥವಾ ತಳಮಳಗೊಳ್ಳಲು ಕಾರಣಗಳಿರುತ್ತವೆ. ಅವುಗಳ ಹರಿಯುವಿಕೆಗೆ ಭಾವುಕವಾಗದೆ, ಹೊರಗೆ ನಿಂತು ನೋಡುವ ರೂಢಿ ಮಾಡಿಕೊಂಡರೆ ಅವುಗಳ ಕಾರಣ ಮತ್ತು ಪರಿಣಾಮಗಳನ್ನು ಕಾಣುವಷ್ಟು ದೃಷ್ಟಿ ತಿಳಿಯಾಗುತ್ತದೆ. ಸಾಕ್ಷಿಯಾಗುವುದರ ಮಹತ್ವವೇ ಇದು. ನಂತರ ಆ ಕಾರಣಗಳನ್ನು ಆಧರಿಸಿ ನಮ್ಮ ವರ್ತನೆಗಳನ್ನು ನಿರ್ಧರಿಸಬೇಕು. ಇದೇ ಆತ್ಮಸಾಕ್ಷಿ.
ನಾವು ಯಾವುದನ್ನು ಕೆಟ್ಟದು ಅಥವಾ ಒಳ್ಳೆಯದು ಎನ್ನುತ್ತೇವೆಯೋ ಅದು ಈ ಮಾನುಷ ಲೋಕ ಹಾಗೆಂದು ಹೆಸರಿಟ್ಟು ಕರೆದಿರುವುದು. ನಮ್ಮಲ್ಲಿ ಹುಟ್ಟುವ, ಹರಿಯುವ, ಒಳಿತು ಅಥವಾ ಕೆಡುಕು ಮಾಡುವ ಯಾವುದೇ ಆಲೋಚನೆಗಳೂ ನಮ್ಮಿಂದ ಹುಟ್ಟುವುದಲ್ಲ. ಅವು ಈಗಾಗಲೇ ಈ ಲೋಕದಲ್ಲಿ ಇರುವವೇ, ಅಸಂಖ್ಯಾತರಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವವೇ. ಅವು ನಮ್ಮೊಳಗೆ ಇರುವುದಕ್ಕೆ ಕಾರಣವೂ ಈ ಮಾನುಷ ಲೋಕದ ಪ್ರಭಾವವೇ!
ಅದರಿಂದಾಗಿಯೇ ಎಷ್ಟೋ ಬಾರಿ ಕೆಟ್ಟ ಆಲೋಚನೆಗಳು, ನಕಾರಾತ್ಮಕವಾಗಿರುವ ಆಲೋಚನೆಗಳು, ಕೊಳಕು ಆಲೋಚನೆಗಳು, ಕ್ರೌರ್ಯ ಮತ್ತು ಭಯದ ಆಲೋಚನೆಗಳೂ ಕೂಡಾ ಹಿಂದೆಹಿಂದೆಯೇ ಬರುತ್ತಿರುತ್ತವೆ. ಅವುಗಳೆಲ್ಲವನ್ನೂ ಸಾಕ್ಷೀಕರಿಸಬೇಕು. ನೋಡಬೇಕು. ಇದು ಒಳ್ಳೆಯದು ಅಥವಾ ಕೆಟ್ಟದು ಎಂಬ ನಿರ್ಣಯಾತ್ಮಕವಾಗಿ ಹಣೆಪಟ್ಟಿ ಹಚ್ಚದೆ ಸುಮ್ಮನೆಯೇ ಗಮನಿಸಬೇಕು. ಬದಲಾಗಿ ಇದು ನನಗೆ ಅಗತ್ಯವೇ ಅನಗತ್ಯವೇ ಎಂಬುದನ್ನು ನೋಡಬೇಕು. ಹೀಗೆ ಅದರ ಪ್ರಭಾವದಲ್ಲಿ ಸಿಕ್ಕು ಭಾವ ಪರವಶತೆಯನ್ನು ಹೊಂದದೇ ಬರಿದೇ ನೋಡುವುದರಿಂದಲೇ ಎಷ್ಟೋ ಸಮಸ್ಯೆಗಳು ಕಡಿಮೆಯಾಗುವುದು.
ನಿರ್ಣಯ, ಪೂರ್ವಾಗ್ರಹಗಳಿಲ್ಲದ, ಆಸೆ, ಭಯವಿಲ್ಲದ, ಬೇಕು, ಬೇಡ, ಒಳ್ಳೆಯದು, ಕೆಟ್ಟದು ಎನ್ನದ ನೋಡುವಿಕೆಯದು. ಅದೇ ಸಾಕ್ಷಿ. ಹೊರಗಿನ ವಿಷಯಗಳಿಗೆ ಸಾಕ್ಷಿಯಾಗುವಂತೆ ನಮ್ಮ ಬಗ್ಗೆ ನಾವೂ ಸಾಕ್ಷೀಕರಿಸಿಕೊಳ್ಳುವುದೇ ಆತ್ಮಸಾಕ್ಷಿ.
ಸಾಮಾನ್ಯವಾದ ಮಾತಿನಲ್ಲಿ ಮನಸ್ಸನ್ನು ನಿಗ್ರಹಿಸುವುದು ಎನ್ನುವುದರ ಮೊದಲ ಹೆಜ್ಜೆಯೇ ಆತ್ಮಸಾಕ್ಷಿಯನ್ನು ರೂಢಿಸಿಕೊಳ್ಳುವುದು. ಸರಿಯಾಗಿ ಹೇಳುವುದಾದರೆ, ಇದು ಮನಸ್ಸನ್ನು ತಿಳಿಗೊಳಿಸುವುದು. ನಿಗ್ರಹಿಸುವುದಲ್ಲ. ತಿಳಿಯಾಗಿದ್ದ ಕೊಳವೊಂದು ಕದಡಿದರೆ ಅದನ್ನು ಮುಟ್ಟಿ ತಟ್ಟಿ ಯಾವುದೇ ಬಲವಂತದ ಪ್ರಯೋಗಗಳಿಂದ ತಿಳಿಗೊಳಿಸಲಾಗದು. ಕದಡಿರುವ ಅಲೆಗಳು ತಂತಾನೇ ತಾಮಸವಾಗಲು ಬಿಡಬೇಕು. ಹಾಗೇ ಮನಗೊಳವೂ ತಿಳಿಯಾಗುವುದು.