ನಾಸ್ತಿಕ ಮದ
ದೇವರಿಲ್ಲ ಎನ್ನುವವನಿಗೆ ಸಾಕಷ್ಟು ಅಧ್ಯಯನಗಳಿರಬೇಕು, ಅರಿವಿರಬೇಕು, ಧೈರ್ಯವಿರಬೇಕು, ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವದ ಚಿಂತನೆಗಳು ಮತ್ತು ಅದರೊಂದಿಗೆ ವಿಕಾಸವಾಗುತ್ತಾ ಪ್ರಗತಿಪರವಾಗುವಂತಹ ಮುಕ್ತಮನವಿರಬೇಕು. ಆದರೆ ಆಸ್ತಿಕನಾಗಿರಲು ಬರೀ ಮೂಢನಂಬಿಕೆ ಇದ್ದರೆ ಸಾಕು. ಹೀಗೆಲ್ಲಾ ಅನ್ನುತ್ತಾರಲ್ಲಾ, ಇದು ನಾಸ್ತಿಕ ಮದ.
ನಾಸ್ತಿಕರು ದೇವರನ್ನು ಅಲ್ಲಗಳೆಯುವುದರ ಬಗ್ಗೆ ಬೇಕಾದಂತಹ ಮಾಹಿತಿ ಮತ್ತು ತಿಳುವಳಿಕೆ ಪಡೆಯುವವರು, ದೇವರ ಅಸ್ತಿತ್ವ ಎನ್ನುವುದು ನಿರಾಧಾರ ಎನ್ನುವುದರ ಬಗ್ಗೆ ತಾರ್ಕಿಕ ಚಿಂತನೆಗಳನ್ನು ಮಾಡುವವರು, ವೈಜ್ಞಾನಿಕ ಮತ್ತು ವೈಚಾರಿಕ ಕಾರಣಗಳನ್ನು ಹುಡುಕುವವರು ದೇವರನ್ನು ನಂಬುವ ಜನರ ಮನಸ್ಥಿತಿ, ಸಾಮಾಜಿಕ ಪರಿಸ್ಥಿತಿ, ಅನಿವಾರ್ಯತೆ ಮತ್ತು ಭರವಸೆಗಳ ಮೂಲವನ್ನು ಗುರುತಿಸುವುದರಲ್ಲಿ ಸೂಕ್ಷ್ಮತೆಯನ್ನು, ಸಂವೇದನೆಯನ್ನು ಕಳೆದುಕೊಳ್ಳುವುದು ಒಂದು ಆಶ್ಚರ್ಯದ ವಿಷಯ.
ಬುದ್ಧಿಜೀವಿ ಅಥವಾ ವಿಚಾರವಾದಿಗಳೆನಿಸಿಕೊಂಡವರು ಆಸ್ತಿಕರನ್ನು ಮೂಢರು ಅಥವಾ ಅಜ್ಞಾನಿಗಳು ಎಂದು ಕರೆಯುವುದಷ್ಟೇ ಅಲ್ಲದೇ ಜರಿಯುವುದರ ಮೂಲಕ ತಾವಷ್ಟೇ ಅರಿವಿನ ಮಾರ್ಗದರ್ಶಿಗಳು ಎನ್ನುವ ಭ್ರಮೆಯಲ್ಲಿದ್ದಾರೇನೋ ಎನಿಸುತ್ತದೆ. ಬಹಳ ಮುಖ್ಯವಾಗಿ ಯಾವುದೇ ಒಂದು ಶ್ರದ್ಧಾ ನಂಬುಗೆಯ ವ್ಯವಸ್ಥೆಯು ಸಮಾಜೋ-ಸಾಂಸ್ಕೃತಿಕ ಚರಿತ್ರೆ, ಮಾನವಶಾಸ್ತ್ರೀಯ ಬೆಳವಣಿಗೆಯ ಹಿನ್ನೆಲೆಯನ್ನು ಹೊಂದಿರುತ್ತದೆ. ಅದರೊಟ್ಟಿಗೆ ಆ ವ್ಯವಸ್ಥೆಯಲ್ಲಿರುವ ಆಸ್ತಿಕರ ಮಾನಸಿಕ ಮತ್ತು ಭಾವನಾತ್ಮಕ ಕಾರಣಗಳ ಬಗ್ಗೆ ಸೂಕ್ಷ್ಮತೆಯನ್ನೂ ಮತ್ತು ಸಂವೇದನಾಶೀಲತೆಯನ್ನೂ ಬೆಳೆಸಿಕೊಳ್ಳಬೇಕಾಗುತ್ತದೆ.
ದೇವರು ಎಂಬ ಪರಿಕಲ್ಪನೆಯು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದ್ದಲ್ಲದೆ, ಜನರ ಮಾನಸಿಕ ಆರೋಗ್ಯವನ್ನು, ನೈತಿಕತೆಯ ಪರಿಪಾಲನೆ, ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸಲು ಕೂಡಾ ಸಮಾಜೋಧಾರ್ಮಿಕ ನಾಯಕರು ದೇವರನ್ನು ಮುಂದಿಟ್ಟಿದ್ದಾರೆ. ಅದರೊಟ್ಟಿಗೆ ದೇವರನ್ನು ಕಾಣುವ, ಆರಾಧಿಸುವ ಬಗೆಗಳನ್ನೂ ಕೂಡಾ ಬದಲಾಯಿಸುತ್ತಾ ಬಂದಿದ್ದಾರೆ. ಸಮಾಜಗಳು ಒಂದು ಕಾಲಘಟ್ಟದಿಂದ ಮತ್ತೊಂದು ಕಾಲಘಟ್ಟಕ್ಕೆ ಪ್ರಯಾಣಿಸುವಾಗ ದೇವರ ಪರಿಕಲ್ಪನೆಗಳು ಜನ ಸಂಕಲಿತ ಮನಸ್ಥಿತಿಯ ಆಧಾರದಲ್ಲಿ ಮತ್ತು ಸಮಾಜೋ-ಧಾರ್ಮಿಕ ಆಂದೋಲನದಲ್ಲಿ ಬದಲಾಗುತ್ತಲೇ ಬಂದಿವೆ.
ಆದರೆ ಮುಗ್ಧರೂ ಮತ್ತು ಭಾವುಕ ಭರವಸೆಯಲ್ಲಿ ಬದುಕನ್ನು ಕಂಡುಕೊಳ್ಳುವ ಜನರನ್ನು ದೇವರ, ಧರ್ಮದ ಮತ್ತು ಆಚರಣೆಯ ನೆಪದಿಂದ ಶೋಷಣೆ ಮಾಡುತ್ತಾ, ಅವರ ಮಾನಸಿಕ ದುರ್ಬಲತೆಯನ್ನು ಮತ್ತು ಸನ್ನಿವೇಶಗಳ ಕಾರಣದಿಂದ ಬಲಹೀನವಾಗಿರುವ ಜೀವಗಳನ್ನು ತಮ್ಮ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಾ ದೌರ್ಜನ್ಯ ಮಾಡುವವರು ಒಂದು ಕಡೆಯಾದರೆ, ಮತ್ತೊಂದು ಕಡೆ ನಾಸ್ತಿಕ ವಿಚಾರವಾದಿಗಳು ಕಠೋರವಾಗಿ ಮೌಢ್ಯಾಚರಣೆಗಳು ಎಂದು ಅವರನ್ನು ಖಂಡಿಸುತ್ತಾ, ಅಣಕ ಮಾಡುತ್ತಾ ಮತ್ತೂ ಮುಂದುವರಿದು ಅವಹೇಳನ ಮಾಡುವುದನ್ನೂ ಕೂಡಾ ಗಮನಿಸಬಹುದಾಗಿದೆ.
ಮನಶಾಸ್ತ್ರೀಯವಾಗಿ ಆಸ್ತಿಕರ ವಿಷಯದಲ್ಲಿ ನಾಸ್ತಿಕರ ಸಮಸ್ಯೆಗಳನ್ನು ಗುರುತಿಸಬಹುದು. ಭಾವಕೌಶಲ್ಯದ (ಎಮೋಶನಲ್ ಇಂಟಲಿಜೆನ್ಸ್) ಕೊರತೆಯಿಂದ ಮುಗ್ಧ ಆಸ್ತಿಕರ ಭಾವುಕತೆಯ ತಮ್ಮ ಬದುಕಿಗಾಗಿ ಆಧರಿಸುವ ವಿಶ್ವಾಸದ ತಂತುಗಳನ್ನು ನಾಸ್ತಿಕರು ಗುರುತಿಸದೇ ಹೋಗುವರು.
ಆಸ್ತಿಕರ ಸುಪ್ತ ಮನಸ್ಸಿನಲ್ಲಿ ಬೇರುಬಿಟ್ಟಿರುವ ಭಯ, ಆತಂಕ ಮತ್ತು ಭರವಸೆಗಳ ಅಸಹಾಯಕತೆಯ ತೀವ್ರತೆಯನ್ನು ಗುರುತಿಸಲು ನಾಸ್ತಿಕರಿಗೆ ಸಹಾನುಭೂತಿಯ (ಎಂಪತಿ) ಅಗತ್ಯತೆ ಇರುತ್ತದೆ. ಆಸ್ತಿಕರ ಭಯ, ಆತಂಕ ಮತ್ತು ಅಸಹಾಯಕತೆಗಳಿಗೆ ಪರ್ಯಾಯವೊದಗಿಸುವ ಸಾಧ್ಯತೆಗಳನ್ನು ಗುರುತಿಸದೇ ಒಮ್ಮಿಂದೊಮ್ಮೆಲೇ ಆಕ್ರಮಣಕಾರಿಯಾಗಿ ಅವರನ್ನು ಖಂಡಿಸುವುದು ಅವರ ಸಂವೇದನಾ ಶೂನ್ಯತೆ.
ಸಾಮುದಾಯಿಕವಾಗಿ ವ್ಯಕ್ತಿ ಮತ್ತು ಸಮೂಹಗಳು ಗುರುತಿಸಿಕೊಳ್ಳುವುದರಲ್ಲಿ ಜಾತಿ, ಧರ್ಮವೇ ಮೊದಲಾದ ಪರಿಕಲ್ಪನೆಗಳಿಗೆ ಮೊರೆ ಹೋಗುತ್ತಾರೆ. ಅವು ಅವರ ಜೀವನಕ್ಕೆ ಸಾಮಾಜಿಕವಾಗಿ ಭದ್ರತೆ ಮತ್ತು ವ್ಯಕ್ತಿಗತವಾಗಿ ಬೆಂಬಲವನ್ನು ಹೊಂದಿರುವ ಭಾವವನ್ನು ಹೊಂದಿರುತ್ತಾರೆ. ಇದು ಸಾಮಾಜಿಕ ಗುರುತಿನ ಸಿದ್ಧಾಂತದ (ಸೋಶಿಯಲ್ ಐಡೆಂಟಿಟಿ ಥಿಯರಿ) ಭಾಗವಾಗಿರುತ್ತದೆ. ತಾವು ಅಥವಾ ತಾನು ಅದರೊಟ್ಟಿಗೆ ಗುರುತಿಸಿಕೊಳ್ಳುವುದರಿಂದ ಮತ್ತು ಅದರ ಭಾಗವಾಗಿ ತಾನಿರುವುದರಿಂದ ಒಬ್ಬೊಂಟಿಯಾಗಿ ಜನಾರಣ್ಯದಲ್ಲಿ ಕಳೆದು ಹೋಗುವುದಿಲ್ಲ ಎಂಬ ಭಾವ. ಹಾಗಾಗಿ ಅವರು ಆ ಸಾಮಾಜಿಕ ಸಮೂಹದ ನಿರ್ದೇಶನದಂತೆ ದೇವರನ್ನು ಒಪ್ಪಿರುತ್ತಾರೆ.
ಸ್ವಿಸ್ ಮನಶಾಸ್ತ್ರಜ್ಞ ಕಾರ್ಲ್ ಯುಂಗ್ ಹೇಳುವಂತೆ ದೇವರನ್ನು ತಂದೆ, ತಾಯಿ, ನಾಯಕ ಅಥವಾ ಮರಳು ಮಾಡುವ ಮೋಡಿಗಾರನಾಗಿ ನಾನಾ ರೀತಿಯ ಪಾತ್ರಗಳಲ್ಲಿ ನೋಡುವ ಸಂಕಲಿತ ಅಪ್ರಜ್ಞಾವಸ್ಥೆಯನ್ನು ಹೊಂದಿರುತ್ತಾರೆ. ಈ ಕಲೆಕ್ಟಿವ್ ಅನ್ಕಾಂಶಸ್ ಅಥವಾ ಸಂಕಲಿತ ಅಪ್ರಜ್ಞಾವಸ್ಥೆಯು ಪೀಳಿಗೆಯಿಂದ ಪೀಳಿಗೆಗೆ ದಾಟಿಸಿಕೊಂಡು ಬಂದಿರುವ ಅನುಭವಗಳ, ಅರಿವಿನ ಮತ್ತು ಪರಿಕಲ್ಪನೆಗಳ ನೆನಪಿನ ಮೊತ್ತವಾಗಿದ್ದು ಅದು ಸಮುದಾಯಗಳಲ್ಲಿರುವ ವ್ಯಕ್ತಿಗಳ ಮಾನಸಿಕ ಪದರಗಳಲ್ಲಿ ಕೆಲಸ ಮಾಡುತ್ತಿರುತ್ತದೆ. ಅಷ್ಟೇ ಅಲ್ಲದೆ ವ್ಯಕ್ತಿಗತವಾದ ಅಪ್ರಜ್ಞಾವಸ್ಥೆಯೂ ಕೂಡ ಸಂಕಲಿತವಾದ ಅಪ್ರಜ್ಞಾವಸ್ಥೆಯೊಂದಿಗೆ ಬೆಸೆದುಕೊಂಡಿರುತ್ತದೆ. ಹಾಗಾಗಿ ಆಸ್ತಿಕರಾಗುವುದು ಮಾನಸಿಕವಾಗಿ, ಭಾವನಾತ್ಮಕವಾಗಿ, ಸಮಾಜೋ-ಸಾಂಸ್ಕೃತಿಕವಾಗಿ ಬಹಳ ಸಹಜವಾದದ್ದು.
ಅಬ್ರಹಾಂ ಮಾಸ್ಲೋ ಅವರ ಕ್ರಮಾನುಗತ ಸಿದ್ಧಾಂತವನ್ನು ಗಮನಿಸಿದರೆ, ಆದಿಮ ಕಾಲದಿಂದ ಮನುಷ್ಯ ತನ್ನ ಅಗತ್ಯಗಳನ್ನು ಆದ್ಯತೆಗಳ ಅನುಸಾರವಾಗಿ ಕ್ರಮಗೊಳಿಸಿಕೊಂಡಿದ್ದಾನೆ. ಅದರಂತೆ ಅವನ ಮೂಲಭೂತ ಅಗತ್ಯಗಳಾದ ಆಹಾರ, ನೀರು, ಆಶ್ರಯ, ನಿದ್ರೆ ಮತ್ತು ಭದ್ರತೆ ಇವುಗಳನ್ನು ಆದಿಮ ಕಾಲದ ಮನುಷ್ಯ ಹೊಂದುತ್ತಿದ್ದದ್ದು ಅವೆಲ್ಲವನ್ನೂ ಸೃಷ್ಟಿಸಿರುವ ದೇವರಿಂದ. ನಂತರ ಅದನ್ನು ಹೊಂದಲು ದೇವರು ವಿಧಿಸಿದ ಕೆಲಸ ಮಾಡಬೇಕಾಯಿತು. ಅವನ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಂಡ ಬಳಿಕ ಅವನ ಮನಸ್ಸಿಗೆ ಭಾವನಾತ್ಮಕವಾದ ಶಾಂತಿ, ನೆಮ್ಮದಿ ಬೇಕಿತ್ತು. ಅದಕ್ಕಾಗಿ ಪ್ರೇಮ, ಪ್ರೀತಿ, ವಾತ್ಸಲ್ಯ, ಅನುಬಂಧ, ಸಂಬಂಧಗಳನ್ನೆಲ್ಲಾ ತನ್ನೊಟ್ಟಿಗೆ ಇರುವವರೊಂದಿಗೆ ಗುರುತಿಸಿಕೊಂಡ. ಅದು ತನ್ನವರೊಟ್ಟಿಗೆ ಸಾಧಿಸಲಾಗದೆ ಹೋದಾಗ ಅವನಿಗೆ ಆಪದ್ಬಾಂಧವನಾಗಿ ಅವನ್ನು ಒದಗಿಸುತ್ತಿದ್ದದ್ದು ದೇವರ ಪರಿಕಲ್ಪನೆ. ಮನುಷ್ಯರ ಮೇಲಿನ ಪ್ರೀತಿ ದೇವರ ಮೇಲಿನ ಭಕ್ತಿಯಾಯಿತು. ಆ ದೇವರು ತಾಯಿಯಂತೆ, ತಂದೆಯಂತೆ ಇವರಿಗೆ ವಾತ್ಸಲ್ಯವನ್ನು ತೋರುವನೆಂಬ ಭಾವದಿಂದ ತನ್ನ ಜೀವಕ್ಕೆ ಸಾಂತ್ವನ ಪಡೆದುಕೊಳ್ಳುತ್ತಿದ್ದ.
ಒಟ್ಟಾರೆ ಮನುಷ್ಯನ ಲೌಕಿಕ, ಮಾನಸಿಕ ಮತ್ತು ಭಾವನಾತ್ಮಕದ ಅಗತ್ಯವಾಗಿ ದೇವರ ಪರಿಕಲ್ಪನೆ ರೂಪುಗೊಂಡಿದ್ದು, ಅದನ್ನು ಮನುಷ್ಯ ಅಪ್ಪಿಕೊಳ್ಳುವುದು ಸಹಜವೇ ಆಗಿದೆ. ವ್ಯಕ್ತಿಯು ತನ್ನ ಜೀವ ಮತ್ತು ಜೀವನದ ಮೂಲಭೂತವಾದ ಲೌಕಿಕ ಮತ್ತು ಮಾನಸಿಕ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಅವರ ಹಕ್ಕು ಮತ್ತು ಬದುಕಿನ ಘನತೆಯ ಭಾಗವೇ ಆಗಿರುತ್ತದೆ.
ಇದೇ ಸಮಾಜೋ-ಸಾಂಸ್ಕೃತಿಕ ವಾತಾವರಣದ ಸಂಕಲಿತ ಅಪ್ರಜ್ಞಾವಸ್ಥೆಯಿಂದ ಎಲ್ಲರೂ ಬಂದಿದ್ದರೂ ವಾಸ್ತವ ಮತ್ತು ದೈವಿಕ ವಿಷಯಗಳಲ್ಲಿರುವ ವೈರುಧ್ಯಗಳನ್ನು ಗುರುತಿಸುವುದರಿಂದ, ಧಾರ್ಮಿಕಾಚರಣೆಗಳು ವಾಸ್ತವದ ಬದುಕಲ್ಲಿ ಅಸಂಬದ್ಧವಾಗುವುದನ್ನು ಅನುಭವಿಸುವುದರಿಂದ, ವೈಜ್ಞಾನಿಕ ಮತ್ತು ವೈಚಾರಿಕವಾಗಿ ಭಿನ್ನ ನೆಲೆಗಟ್ಟುಗಳಿಂದ ಆಲೋಚನೆ, ಅಧ್ಯಯನ ಮಾಡುತ್ತಾ ಅರಿವನ್ನು ಪಡೆದುಕೊಳ್ಳುವುದರಿಂದ, ದೇವರ ಮೇಲಿನ ಭಕ್ತಿ ಮತ್ತು ಶ್ರದ್ಧೆಗಳು ಫಲ ಕೊಡದೇ ಹೋಗುವುದರಿಂದ, ದೇವರು ಮತ್ತು ಧರ್ಮಗಳ ನೆಪದಲ್ಲಿ ಜನ ಸಾಮಾನ್ಯರ ಮೇಲೆ ಮಾಡುವ ಶೋಷಣೆಗಳನ್ನು ಗುರುತಿಸುವುದರಿಂದ, ಭಕ್ತಿ, ಶ್ರದ್ಧೆ ಮತ್ತು ವಿಶ್ವಾಸಗಳಿಗೆ ಹೊರತಾಗಿ ದೇವರು ಮತ್ತು ಧರ್ಮಗಳನ್ನು ರಾಜಕೀಯ, ವಾಣಿಜ್ಯವೇ ಮೊದಲಾದವುಗಳಿಗೆ ಬಳಸಿಕೊಳ್ಳುವುದನ್ನು ಗುರುತಿಸಿ ಅವನ್ನು ಖಂಡಿಸುವುದರಿಂದ ನಾಸ್ತಿಕರಾಗಿ ಬದಲಾಗುತ್ತಾರೆ. ಆದರೆ, ಅವರು ಮಾನವಶಾಸ್ತ್ರೀಯವಾಗಿ, ಮನೋವೈಜ್ಞಾನಿಕವಾಗಿ ಮತ್ತು ಸಮಾಜೋ-ಸಾಂಸ್ಕೃತಿಕ ಚರಿತ್ರೆಯಲ್ಲಿ ಮನುಷ್ಯ ಬೆಳೆದುಬಂದಿರುವ ರೀತಿಗಳನ್ನು ಗಮನಿಸುತ್ತಾ ಆಸ್ತಿಕರನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ದೌರ್ಜನ್ಯವನ್ನು ಖಂಡಿಸಬೇಕೆಂದರೆ ಆಸ್ತಿಕರನ್ನೇ ಮೂಢರೆಂದೋ, ಅವರ ನಡವಳಿಕೆಗಳು ಮೌಢ್ಯವೆಂದೋ ಅವಹೇಳನ ಮಾಡುವ ಅಗತ್ಯವಿರುವುದಿಲ್ಲ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಸಾಮಾನ್ಯ ಜನರನ್ನು ಶೋಷಣೆ ಮಾಡುವುದು ಒಂದು ಸಾಮಾಜಿಕ ಪಿಡುಗು, ವ್ಯವಸ್ಥೆಗೆ ಅಂಟಿರುವ ರೋಗ.
ಜೀವ, ಜೀವನ ಮತ್ತು ಸಮಾಜದ ಬಗ್ಗೆ ಕಾಳಜಿ ಇರುವವರು ರೋಗದ ವಿರುದ್ಧವಾಗಿ ಹೋರಾಡಬೇಕೇ ಹೊರತು ರೋಗಿಯ ವಿರುದ್ಧ ಅಲ್ಲ.