ಸ್ವಾಭಾವಿಕ ಜಾಗೃತಿ

ಮನಸ್ಸಿನ ಒಂದು ಮೂಲಗುಣವೆಂದರೆ ತನ್ನನ್ನು ತಾನು ಸದಾ ಕಾಲ ಉಳಿಸಿಕೊಂಡಿರುವ ಪ್ರಯತ್ನಶೀಲತೆ. ಒಳ್ಳೆಯದು, ಕೆಟ್ಟದು, ಬೇಕಾದ್ದು, ಬೇಡದ್ದು; ಈ ಬಗೆಯ ವರ್ಗೀಕರಣಗಳು ಅದಕ್ಕೆ ಇಲ್ಲ. ಸಿಗುವ ಎಲ್ಲವನ್ನೂ ಬಳಸಿಕೊಂಡು ತಾನು ಇರುತ್ತದೆ. ಆಲೋಚನೆಗಳು, ಭಾವನೆಗಳು, ವಿಚಾರಗಳು; ಅವೇನು ಒಳ್ಳೆಯವೋ, ಕೆಟ್ಟವೋ, ನೋವಿನದೋ, ನಲಿವಿನದೋ, ಕೋಪದ್ದೋ; ಅವೆಲ್ಲಾ ಮುಖ್ಯವೇ ಅಲ್ಲ. ಅದರಿಂದ ಏನು ಪರಿಣಾಮವಾಗುತ್ತದೆ ಎಂಬುದರ ಅರಿವೂ ಇಲ್ಲ. ಒಟ್ಟಾರೆ ಅಮೂರ್ತವಾಗಿರುವ ತನ್ನನ್ನು ಉಳಿಸಿಕೊಳ್ಳಲು ಒಂದು ಕಾರಣವನ್ನು ಹುಡುಕುತ್ತಿರುತ್ತದೆ. ಆ ಕಾರಣವನ್ನು ಬಳಸಿಕೊಂಡು ತಾನು ಸಜೀವವಾಗಿರಬೇಕು ಅಷ್ಟೇ! ನಾವು ಚಿಂತೆಗಳು, ಚಿಂತನೆಗಳು, ಆಲೋಚನೆಗಳು, ವಿಚಾರಗಳು, ಭಾವನೆಗಳು ಅಂತೆಲ್ಲಾ ಏನೇನು ಹೇಳುತ್ತೇವೆಯೋ ಅವೆಲ್ಲವೂ ಮನಸ್ಸು ಜೀವಂತವಾಗಿರಲು ಬೇಕಾದಂತಹ ಆಹಾರವೇ! ಅಥವಾ ಅವುಗಳ ಮೂಲಕ ತನ್ನನ್ನು ತಾನು ಅಭಿವ್ಯಕ್ತಗೊಳಿಸಿಕೊಳ್ಳುವುದು ಈ ಮನಸ್ಸು.
ಹಾಗೆಯೇ ನಮಗೆ ಇರುವ ಎಚ್ಚರಿಕೆ ಅಥವಾ ಪ್ರಜ್ಞೆ ಅಥವಾ ವಿವೇಕವೇನಿದೆಯೋ ಅದರಿಂದ ಅದು ಆಯ್ದುಕೊಳ್ಳುವ ಸಾಮರ್ಥ್ಯ ಮತ್ತು ಸಾಧ್ಯತೆಗಳು ಇರುತ್ತವೆ. ನೋವನ್ನು ಉಂಟು ಮಾಡುವುದನ್ನು ಆಯ್ದುಕೊಳ್ಳುವುದೂ ಮನಸ್ಸೇ, ನೋವಿಗೊಳಗಾಗುವುದೂ ಮನಸ್ಸೇ, ಆ ನೋವಿನಿಂದ ಬಿಡುಗಡೆ ಹೊಂದಲು ಬಯಸುವುದೂ ಮನಸ್ಸೇ, ನೆರವು ಕೇಳುವುದೂ ಮನಸ್ಸೇ, ಆ ನೆರವನ್ನು ಬಳಸಿಕೊಳ್ಳದೆಯೇ ತಪ್ಪಿಸಿಕೊಳ್ಳುವುದೂ ಮನಸ್ಸೇ ಅಥವಾ ಆ ನೆರವಿನಿಂದ ಗುಣಮುಖವಾಗುವುದೂ ಮನಸ್ಸೇ! ಇಷ್ಟರಮಟ್ಟಿಗಿನ ವಿಚಿತ್ರವಾದ ಮತ್ತು ವಿಲಕ್ಷಣವಾದ ಸ್ವಭಾವ ಈ ಮನಸ್ಸಿನದು.
ಇಂತಹ ಸಂಕೀರ್ಣಮಯವಾದ ಅರಿಮೆಯುಳ್ಳ ಒಟ್ಟಾರೆ ಮನಸ್ಸನ್ನು ನಮ್ಮದೇ ಜಾಗೃತ ಮನಸ್ಸು ಸರಿಪಡಿಸಲು ಸಾಧ್ಯ. ಸಿಕ್ಕುಗಳಿಂದ ಹೊರತರಲು ಸಾಧ್ಯ. ನಾನಾ ಕಾರಣಗಳಿಂದ ನಿರ್ಬಂಧಗಳಿಗೊಳಪಟ್ಟು, ಸಂಘರ್ಷಗಳಲ್ಲಿ ನಲುಗಿ, ಒತ್ತಡದ ಚಟುವಟಿಕೆಗಳಲ್ಲಿ ಬಳಲಿ, ಭಯಗಳಿಂದ ಬೆದರುವ ಮನಸ್ಸು ತನ್ನ ಉಳಿಯುವಿಕೆಗಾಗಿ ಹೆಣಗಾಡುತ್ತಾ ಹೈರಾಣವಾಗಿ ಜಡ್ಡು ಬೀಳುತ್ತದೆ. ರೋಗಗ್ರಸ್ತವಾಗುತ್ತದೆ. ಇದಕ್ಕಿರುವ ಒಂದೇ ಒಂದು ಪರಿಹಾರವೆಂದರೆ ಸ್ವಾಭಾವಿಕ ಜಾಗೃತಿಯನ್ನು ನಮ್ಮಲ್ಲಿ ಪುನಶ್ಚೇತನಗೊಳಿಸಿಕೊಳ್ಳುವುದು.
ಮನಸ್ಸಿನ ಆರೋಗ್ಯದ ವಿಷಯದಲ್ಲಿ ಕಾಳಜಿ ಇರುವವರು ಮರೆಯಲೇ ಬಾರದಾಗಿರುವ ಬಹುಮುಖ್ಯವಾದ ವಿಷಯವೆಂದರೆ ಸ್ವಾಭಾವಿಕ ಜಾಗೃತಿ. ನಮ್ಮೆಲ್ಲರಲ್ಲಿಯೂ ಕೂಡಾ ಸ್ವಾಭಾವಿಕ ಜಾಗೃತಿಯೊಂದು ಇದ್ದೇ ಇರುತ್ತದೆ. ಇದರ ಮುಖ್ಯ ಕೆಲಸವೆಂದರೆ ನಮ್ಮ ಮನಸ್ಸನ್ನು, ದೇಹವನ್ನು ಮತ್ತು ಭಾವನೆಗಳನ್ನೆಲ್ಲಾ ಸ್ವಾಭಾವಿಕವಾಗಿ ಗುಣಪಡಿಸುವುದು.
ಗುಣಮುಖವಾಗುವುದು ಒಂದು ಸ್ವಾಭಾವಿಕ ಅಥವಾ ನೈಸರ್ಗಿಕ ಪ್ರಕ್ರಿಯೆ. ನಮ್ಮದೇ ಮನಸ್ಸಿಗೆ ಸರಿಯಾದಂತಹ ತರಬೇತಿ ಕೊಡಬೇಕಿದೆ. ಈ ತರಬೇತಿಗೆ ಅಗತ್ಯವಿರುವ ಅಂಶಗಳೆಂದರೆ ಮೊದಲನೆಯದೇ ಜಾಗೃತಿ. ನಂತರ ವಿಶ್ರಾಂತಿ ಅಥವಾ ಹೋಗಗೊಡುವ ವಿಧಾನ. ಭಾವಕೌಶಲ್ಯ, ಕಲ್ಪಿಸಿಕೊಳ್ಳುವುದು ಅಥವಾ ಪರಿಭಾವಿಸುವುದು ಮತ್ತು ಸ್ವಮರುಕ ಅಥವಾ ತನ್ನ ಬಗ್ಗೆ ಕಾರುಣ್ಯಭಾವ. ಇವುಗಳಿಂದ ಮನಸ್ಸು ಸ್ವಾಭಾವಿಕವಾಗಿ ಗುಣಮುಖವಾಗುವ ಪ್ರಕ್ರಿಯೆಗೆ ಒಳಪಡಿಸಲಾಗುವುದು.
ಸ್ವಾಭಾವಿಕ ಜಾಗೃತಿಯ ಮೊದಲನೆಯ ಅಂಶವೆಂದರೆ ಮನಸ್ಸೇ ಸಮಸ್ಯೆಗಳನ್ನು ಸೃಷ್ಟಿಸುವುದು ಮತ್ತು ಅದೇ ಮನಸ್ಸೇ ಅದರಿಂದ ಹೊರಗೆ ಬರಲು ಹೆಣಗಾಡುವುದು ಎಂಬ ವಿಷಯ. ಎರಡನೆಯದಾಗಿ, ತಾತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿ ಮನಸ್ಸಿಗೆ ಅರಿವನ್ನು ಮತ್ತು ಅನುಭವವನ್ನು ನೀಡುವುದರ ಮೂಲಕ ಅದನ್ನು ತಂತಾನೇ ಗುಣಮುಖವಾಗುವ ಕಡೆಗೆ ಒಯ್ಯಲು ಸಾಧ್ಯ ಎಂಬುದು. ಅಂದರೆ ರೋಗವನ್ನು ಸೃಷ್ಟಿ ಮಾಡುವ ಶಕ್ತಿ ಇರುವ ಮನಸ್ಸಿಗೇ ರೋಗವನ್ನು ನಿವಾರಿಸುವ ಶಕ್ತಿ ಇದೆ ಎಂಬುದು.
ನಮ್ಮ ಆರೋಗ್ಯಕರ ಬದುಕಿಗೆ ಮನಸ್ಸೊಂದು ಕಾರಕ ಶಕ್ತಿ. ನಮ್ಮ ಮನಸ್ಸೇ ನಮ್ಮ ಅನುಭವಗಳನ್ನು, ಭಾವನೆಗಳನ್ನು ಮತ್ತು ಆಲೋಚನೆಗಳನ್ನು ಬೇರೆ ಬೇರೆ ರೀತಿಯಲ್ಲಿ ಗ್ರಹಿಸುವುದು ಮತ್ತು ವ್ಯಾಖ್ಯಾನ ಮಾಡುವುದು. ಅದೊಂದು ಪರಿಣಾಮಕಾರಿಯಾದ ಪ್ರಮುಖ ಶಕ್ತಿ ಎಂಬುದನ್ನು ಪುರಾತನ ಕಾಲದಿಂದ ಹಿಡಿದು ಇಂದಿನವರೆಗೂ ತತ್ವಜ್ಞಾನಿಗಳು, ದಾರ್ಶನಿಕರು ಮತ್ತು ಮನೋವಿಜ್ಞಾನಿಗಳು ಮನವರಿಕೆ ಮಾಡಿಕೊಂಡಿದ್ದು ಅದರ ಬಗ್ಗೆ ನಾನಾ ಬಗೆಯ ಸಂಶೋಧನೆಗಳನ್ನು ಮಾಡುತ್ತಾ ಬಂದಿದ್ದಾರೆ.
ಆಯಾಕಾಲದಲ್ಲಿ ಕಂಡುಕೊಂಡ ತರಬೇತಿಯ ತಂತ್ರಗಳೆಲ್ಲಾ ಬದಲಾದ ಕಾಲಘಟ್ಟಗಳಲ್ಲಿ ರೂಪಾಂತರ ಹೊಂದುತ್ತಾ ಬಂದಿವೆ. ಆದರೆ ಎಲ್ಲಾ ಕಾಲಘಟ್ಟಗಳಲ್ಲಿಯೂ, ಎಲ್ಲಾ ಸಂಶೋಧಕರು ಮತ್ತು ಅಧ್ಯಯನಕಾರರು ಒಪ್ಪಬಹುದಾದ ವಿಷಯವೆಂದರೆ ನಮ್ಮ ಮನಸ್ಸಿಗೆ ಮದ್ದನ್ನು ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ ಸ್ವಾಭಾವಿಕ ಜಾಗೃತಿಯು ಮೊದಲನೆಯ ಅಂಶ. ಅದೊಂದು ಸಾವಯವ ಪ್ರಜ್ಞೆ. ಜಗತ್ತಿನ ಪ್ರತಿಯೊಂದು ಜೀವಿಯಲ್ಲಿಯೂ ಆಂತರಿಕವಾಗಿ ಇರುವ ಪ್ರಾಥಮಿಕ ಪ್ರಜ್ಞೆ ತನ್ನರಿವು. ಈ ಸ್ವಾಭಾವಿಕ ಜಾಗೃತಿಯು ಪೂರ್ವನಿರ್ಧಾರಿತವಾಗಿರದೇ, ಪಕ್ಷಪಾತಿಯಾಗಿರದೆ ಮತ್ತು ಅಹಂಕಾರಿಯಾಗಿರದೇ ಇರುವಂತಹ ತನ್ನರಿವಿನ ಪ್ರಜ್ಞೆಯಾಗಿದ್ದರೆ ಅಲ್ಲಿಗೆ ಮನಸ್ಸಿನ ಆರೋಗ್ಯದ ಕಡೆಗೆ ಮುಖ ಮಾಡಿದ್ದೇವೆಂದೇ ಅರ್ಥ.