ಗೀಳುಗಳ ಬಗೆಗಳು
ಗೀಳು ಎಂಬುವುದು ನಾನಾ ತರಹದ್ದು. ಎಷ್ಟೋ ಜನಕ್ಕೆ ತಮಗೆ ಗೀಳಿನ ರೋಗವಿದೆ ಎಂಬ ಅರಿವೇ ಇರುವುದಿಲ್ಲ. ಮೊದಲಾಗಿ ತಮಗೆ ರೋಗವಿದೆ ಎಂದು ಒಪ್ಪಿಕೊಳ್ಳುವುದಿರಲಿ, ಮಾನಸಿಕ ರೋಗವಿದೆ ಎಂದು ಒಪ್ಪಿಕೊಳ್ಳಲು ಸುತಾರಾಂ ತಯಾರಿರುವುದಿಲ್ಲ.
ನನ್ನ ವಸ್ತುಗಳನ್ನು ಯಾರೂ ಮುಟ್ಟಲು ಬಿಡುವುದಿಲ್ಲ. ಅವುಗಳನ್ನು ಹೇಗಿಟ್ಟಿರಬೇಕೋ ಹಾಗೇ ಇಟ್ಟಿರಬೇಕು. ಯಾರಾದರೂ ಅದನ್ನು ಸ್ವಲ್ಪ ಹಾಗೆ ಹೀಗೆ ಇಟ್ಟುಬಿಟ್ಟರೆ ಮುಗೀತು, ಸಿಕ್ಕಾಪಟ್ಟೆ ಕೋಪ ಬಂದು ಕೂಗಾಡುತ್ತಾರೆ. ತಮ್ಮ ವಸ್ತುಗಳನ್ನಿರಲಿ ಮನೆಯಿಡೀ ಹಾಗೇ ಇರಬೇಕೆಂದು ಬಯಸುತ್ತಾರೆ. ತಮ್ಮ ಹಾಗೆ ಅಚ್ಚುಕಟ್ಟು ಇಲ್ಲದವರನ್ನು ಕಂಡರಂತೂ ಅವರಿಗೆ ವಿಪರೀತಿ ಅಸಹನೆ. ಇದನ್ನು ತಾವು ಅಚ್ಚುಕಟ್ಟು, ಶಿಸ್ತು, ಒಪ್ಪ, ಓರಣ ಅಂತೆಲ್ಲಾ ಅಂದುಕೊಳ್ಳುತ್ತಾರೆ. ಶಿಸ್ತಿನಲ್ಲಿ ಅಚ್ಚುಕಟ್ಟಾಗಿ ಇರುವುದು ಬೇರೆ, ಗೀಳಿಗೊಳಗಾಗಿ ವರ್ತಿಸುವುದು ಬೇರೆ.
ಅಚ್ಚುಕಟ್ಟಾಗಿ ಶಿಸ್ತಿನಲ್ಲಿ ವಸ್ತುಗಳನ್ನು ಇಟ್ಟುಕೊಳ್ಳುವವರ ಕಾರಣ, ಅದರಿಂದ ವಸ್ತುಗಳ ಬಳಕೆಗೆ ಅನುಕೂಲವಾಗುವುದು ಎಂದು. ಆದರೆ ಗೀಳಿಗರ ಕತೆ ಹಾಗಲ್ಲ. ಅವರಿಗೆ ಬೇಕಾದಂತೆ ಇಡದೇ ಹೋದರೆ ಅವರಿಗೆ ಕೋಪ ಬರುತ್ತದೆ, ಆತಂಕವಾಗುತ್ತದೆ, ವಿಪರೀತ ಅಸಹನೆಯಾಗುತ್ತದೆ. ತಮಗೆ ಆಗುವ ಆತಂಕ ಮತ್ತು ಅಸಹನೆಯನ್ನು ನಿವಾರಿಸಿಕೊಳ್ಳಲು ಅವರು ಅಚ್ಚುಕಟ್ಟಾಗಿ ಇಡಲು ಬಯಸುವುದು. ಅವರು ಪದೇ ಪದೇ ಹೇಳುತ್ತಾರೆ ಕೂಡಾ, ‘‘ನನಗೆ ನಾನಿಟ್ಟಂಗೆ ಇರಲಿಲ್ಲಾಂದ್ರೆ ಒಂದು ಥರಾ ಆಗತ್ತೆ, ಸಹಿಸಕ್ಕೆ ಆಗಲ್ಲ, ಕೋಪ ಬರತ್ತೆ’’ ಅಂತ. ಆಗ ನಾವು ತಿಳಿಯಬಹುದು ಅವರಿಗೆ ಗೀಳಿನ ಸಮಸ್ಯೆ ಇದೆ ಅಂತ.
ಸಾಮಾನ್ಯವಾಗಿ ಅಚ್ಚುಕಟ್ಟಾಗಿ ಇಡುವವರಿಗೆ ತಮ್ಮ ವಸ್ತುಗಳನ್ನು ಹಾಗಿಟ್ಟುಕೊಳ್ಳುವುದು ರೂಢಿಯಾಗಿರುತ್ತದೆ. ಒಂದು ವೇಳೆ ಇಡುವ ರೀತಿಯನ್ನು ಬದಲಿಸಬೇಕೆಂದರೆ ಅವರೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ತಾವಿಟ್ಟಂತೆ ಇಲ್ಲ ಎಂದು ಭಾವೋದ್ರೇಕಕ್ಕೆ ಒಳಗಾಗುವುದಿಲ್ಲ. ಮೊತ್ತ ಮೊದಲಾಗಿ ಕಿರಿಕಿರಿ ಮಾಡಿಕೊಳ್ಳುವುದಿಲ್ಲ. ಒಂದು ವೇಳೆ ಕೆಲಸದ ಒತ್ತಡದಲ್ಲಿ ಸರಿಯಾಗಿ ಇಡಲು ಸಾಧ್ಯವಾಗದೇ ಹೋದರೆ ಏನೋ ಕಳೆದುಕೊಂಡವರಂತೆ ಆಡುವುದಿಲ್ಲ.
ಆದರೆ ಗೀಳುಗೇಡಿತನವಿರುವವರು ಒಂದೇ ತರಹವೇ ಇಡುತ್ತಿರುತ್ತಾರೆ. ಅವರಲ್ಲಿ ಬದಲಾವಣೆ ಇರುವುದಿಲ್ಲ. ಆತಂಕಕ್ಕೆ ಒಳಗಾಗುವುದು, ಬೇಸರ ಮಾಡಿಕೊಳ್ಳುವುದು, ಭಾವೋದ್ರೇಕಕ್ಕೆ ಒಳಗಾಗುವುದು; ಇಂತಹವೆಲ್ಲಾ ಆಗುತ್ತಿರುತ್ತದೆ. ಕಿರಿಕಿರಿ ಮಾಡಿಕೊಳ್ಳುತ್ತಾರೆ. ಏನೋ ಕಳೆದುಕೊಂಡವರಂತೆ ಆಡುತ್ತಿರುತ್ತಾರೆ. ತಾವು ಹಾಗೆ ಇಡದೇ ಹೋದರೆ ಏನೋ ಆಗಿಬಿಡುತ್ತದೆ ಎಂಬ ಭಯವಿರುವವರಂತೆ ತೋರುತ್ತಾರೆ. ಅದು ಆರ್ಡರಿಂಗ್ ಒಸಿಡಿ.
ಅದೇ ರೀತಿಯಲ್ಲಿ ಪದೇ ಪದೇ ಪರೀಕ್ಷಿಸುವ ಗೀಳು. ಬೀಗ ಹಾಕಿರುವುದನ್ನು ಅಥವಾ ಸ್ವಿಚ್ ಆಫ್ ಮಾಡಿರುವುದನ್ನು, ಲೆಕ್ಕ ಮಾಡಿರುವುದನ್ನು; ಹೀಗೆ ಪದೇ ಪದೇ ಪರೀಕ್ಷಿಸುತ್ತಿರುತ್ತಾರೆ. ಬೆಂಕಿ ಹೊತ್ತಿಕೊಂಡುಬಿಟ್ಟರೆ, ಕಳ್ಳ ನುಗ್ಗಿಬಿಟ್ಟರೆ, ಇನ್ನೇನಾದರೂ ಹೆಚ್ಚೂ ಕಡಿಮೆ ಆಗಿಬಿಟ್ಟರೆ ಅಂತ ಅವರ ಭಯ. ಇದು ಚೆಕ್ಕಿಂಗ್ ಓಸಿಡಿ.
ಮತ್ತೂ ಕೆಲವರಿಗೆ ಅಶುದ್ಧತೆಯ ಭಯ, ಅಶುದ್ಧತೆಯ ಕಾರಣದಿಂದ ಕೀಟಾಣುಗಳು ನಮ್ಮಲ್ಲಿ ವಕ್ಕರಿಸಿಕೊಂಡು, ಸೋಂಕೇನಾದರೂ ತಗಲಿಬಿಟ್ಟೀತೆಂಬ ಭಯ. ಕೆಲವು ವಸ್ತುಗಳನ್ನು, ಪ್ರಾಣಿ, ಕೀಟಗಳನ್ನು, ಮನುಷ್ಯರನ್ನೂ ಕೂಡಾ ಮುಟ್ಟಲಾರರು. ಕೆಲವರು ರಸ್ತೆಯಲ್ಲಿ ಅದೂ ಇದೂ ಮುಟ್ಟಿದರೆ ಅಥವಾ ಯಾವುದಾದರೂ ಪ್ರಾಣಿ ತಗಲಿದರೆ ಅಥವಾ ಮಡಿ ಅಂತ ವಸ್ತುಗಳನ್ನು ಮತ್ತು ಮನುಷ್ಯರನ್ನು ಸ್ಪರ್ಶಿಸಲಾರರು. ಸ್ನಾನ ಮಾಡಿದ ಮೇಲೆ ಹಾಸಿಗೆಯ ಮೇಲೆ ಹೋಗಲಾರರು ಅಥವಾ ಹಾಸಿಗೆಯಿಂದ ಎದ್ದ ಮೇಲೆ ದೇವರ ಕೋಣೆಗೋ ಅಥವಾ ಅಡುಗೆ ಮನೆಗೋ ಹೋಗಲಾರರು. ಅವರಿಗೆ ಅವೆಲ್ಲಾ ಅಸಹ್ಯ ಎನಿಸುತ್ತದೆ. ಅಶುದ್ಧತೆಯ ಭಯದಿಂದ ಮುಟ್ಟಲಾರೆ ಎನ್ನುವ ಯಾವುದೇ ರೀತಿಯ ಮನಸ್ಥಿತಿಯಾಗಲಿ ಅದು ಕಂಟಾಮಿನೇಶನ್ ಒಸಿಡಿ ರೋಗದಿಂದ ಬಳಲುತ್ತಿದ್ದಾರೆ ಎಂದು ತಿಳಿಯಬಹುದು.
ಕೆಲವರಿಗಂತೂ ಬೇಡಾ ಬೇಡಾ ಅಂತಂದರೂ ಬೇಡದೇ ಇರುವ ಆಲೋಚನೆಗಳೇ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ. ಕೆಲವಂತೂ ಬರೀ ಕೆಟ್ಟ ಕೆಟ್ಟ ಆಲೋಚನೆಗಳೇ ಬರುತ್ತಿರುತ್ತವೆ. ಬರುತ್ತಿರುವ ಬಸ್ಸಿಗೆ ಅಡ್ಡ ಹೋಗಿ ಎಲ್ಲಿ ತಮಗೆ ತಾವೇ ಹಾನಿ ಮಾಡಿಕೊಳ್ಳುವೆನೋ ಅಥವಾ ಎತ್ತರದ ಸ್ಥಳದಲ್ಲಿ ನಿಂತಿರುವ ತಮ್ಮ ಪ್ರೀತಿ ಪಾತ್ರರನ್ನು ತಳ್ಳಿ ಹಾನಿ ಮಾಡುವೆನೋ ಎಂದು ಹೆದರುತ್ತಿರುತ್ತಾರೆ. ಧಾರ್ಮಿಕವಾದ ಆರಾಧನಾ ಸ್ಥಳದಲ್ಲಿ ಇತರರೊಂದಿಗೆ ಇರುವಾಗ ಎಲ್ಲಿ ತಾನು ಗಲೀಜು ಕೆಲಸ ಮಾಡಿ ಸ್ಥಳದ ಪಾವಿತ್ರ್ಯತೆ ಕೆಡಿಸಿಬಿಡ್ತೀನೋ ಅಂತ ಭಯ ಪಡುತ್ತಿರುತ್ತಾರೆ. ಒಟ್ಟಾರೆ ಅಸಹ್ಯ, ಅನುಚಿತ, ಅನಪೇಕ್ಷಿತ ಮತ್ತು ಅನಿರೀಕ್ಷಿತ ಆಲೋಚನೆಗಳು ಅತಿಕ್ರಮಿಸುತ್ತಿರುತ್ತವೆ. ಇನ್ನೂ ಕೆಲವೊಮ್ಮೆಯಂತೂ ತಾವು ನಿಯಂತ್ರಣ ತಪ್ಪಿ ಕೊಂದೇ ಬಿಟ್ಟೇನು, ಕೊಂದುಕೊಂಡುಬಿಟ್ಟೇನು ಎಂಬ ವಿಪರೀತವಾದ ಭಯದ ಆಲೋಚನೆಗಳು!
ಮತ್ತೆ ಕೆಲವರಿಗೆ ಎಷ್ಟು ಚೆನ್ನಾಗಿ ಕೆಲಸ ಮಾಡಿದರೂ ತೃಪ್ತಿಯೇ ಇರುವುದಿಲ್ಲ. ಇನ್ನೂ ಸರಿಯಾಗಿ ಮಾಡಬೇಕು, ಇನ್ನೂ ಚೆನ್ನಾಗಿ ಮಾಡಬೇಕು ಎಂದು ಒಂದೇ ಸಮನೆ ತಮ್ಮ ಕೆಲಸವನ್ನು ಮಾಡುತ್ತಿರುತ್ತಾರೆ. ಇನ್ನೂ ಕೆಲವರಿಗೆ ಬೇರೆಯವರು ಮಾಡಿದರಂತೂ ನಡೆಯುವುದೇ ಇಲ್ಲ. ತಾವೇ ಮಾಡಬೇಕು. ಅದು ಸರಿಯಿಲ್ಲ, ಇದು ಸರಿಯಿಲ್ಲ, ಇನ್ನೂ ಹೀಗೆ ಮಾಡಬೇಕಿತ್ತು. ಹಾಗೆ ಮಾಡಿದರೆ ಸರಿ ಹೋಗುತ್ತಿತ್ತು ಅಂತಾನೇ ಇರುತ್ತಾರೆ ಮತ್ತು ಮಾಡುತ್ತಲೇ ಇರುವ ಗೀಳಿನ ಸಮಸ್ಯೆ.
ಮತ್ತೆ ಕೆಲವರಿಗೆ ಅತಿಯಾಗಿ ಹೊಣೆಗಾರಿಕೆಯನ್ನು ಹೊರುವುದು. ಅವರ ರಕ್ಷಣೆಯ ಅಥವಾ ನೋಡಿಕೊಳ್ಳುವುದರ ಹೊಣೆ ನನ್ನದು ಎಂದು ವಿಪರೀತವಾಗಿ ಗಮನ ಕೊಡುತ್ತಿರುತ್ತಾರೆ. ಎಲ್ಲಿ ತಾನು ನಿರ್ಲಕ್ಷ್ಯ ಮಾಡಿಬಿಡುತ್ತೇನೋ ಎಂಬ ಭಯ. ತನ್ನಿಂದ ಲೋಪವಾಗಿಬಿಟ್ಟರೆ, ದೋಷವಾಗಿಬಿಟ್ಟರೆ ಎಂಬ ಆತಂಕ. ಮನೆಯಲ್ಲಿರುವವರನ್ನು ಮಾತ್ರ ಅಲ್ಲ, ಮನೆಗೆ ಬಂದವರನ್ನೂ ಹಾಗೆಯೇ ಗಮನಿಸಿಕೊಳ್ಳುವ ಗೀಳು. ಹೀಗೆ ಗೀಳಿನ ಆಳ ಮತ್ತು ಅಗಲ ಬಹಳ ವಿಶಾಲ. ಗೀಳಿನ ಬಗ್ಗೆ ತಿಳಿಯುವಾಗ ಅವರು ಇವರು ನೆನಪಿಗೆ ಬರುತ್ತಾರೆ. ಆದರೆ ನಮಗೆ ಎಂತಹ ಗೀಳುಗಳಿವೆಯೋ ಎಂದು ಅವಲೋಕಿಸಿಕೊಂಡರೆ ಬಹಳ ಒಳ್ಳೆಯದು.