ವಿಚಲಿತವಾಗುವುದೇಕೆ?
ಮನಸ್ಸು ವಿಚಲಿತಗೊಂಡಾಗ ಅಥವಾ ಗೊಂದಲಕ್ಕೆ ಒಳಗಾದಾಗ ಏನು ಮಾಡುವುದೆಂದು ತಿಳಿಯದೆ ತನ್ನ ಅಸಹಾಯಕತೆಯನ್ನು ಯಾವುದೋ ಒಂದು ರೂಪದಲ್ಲಿ ಹೊರಗೆ ಹಾಕುತ್ತದೆ.
ಮನೆಯಲ್ಲಿ ಗಂಡ ಅಥವಾ ಹೆಂಡತಿ ಅಥವಾ ಸೋದರ, ಸೋದರಿ, ಮಕ್ಕಳು, ತಂದೆ-ತಾಯಿ ಅಥವಾ ಯಾವುದೇ ಒಂದೇ ಸೂರಿನಡಿ ಜೊತೆಗೆ ಬಾಳುತ್ತಿರುವ ವ್ಯಕ್ತಿಗಳಾಗಲಿ, ಕೆಲಸ ಮಾಡುವ ಕಡೆಯಲ್ಲಾಗಲಿ ನಮ್ಮ ಬಗ್ಗೆ ಅಸಹನೆಯನ್ನು ಮತ್ತು ಆವೇಶವನ್ನು ತೋರಿಸುತ್ತಿದ್ದಾರೆಂದರೆ ಅವರಿಗೆ ನಮ್ಮ ಸಹಾಯಕ್ಕಾಗಿ ಆರ್ತನಾದ ಮಾಡುತ್ತಿದ್ದಾರೆಂದೇ ತಿಳಿದುಕೊಳ್ಳಿ. ಹಾಗೆಯೇ ನಾವೂ ಇನ್ನೊಬ್ಬರ ಮೇಲೆ ಹಾರಾಡುತ್ತಿದ್ದೇವೆಂದರೆ, ಅಸಹಾಯಕತೆಯಿಂದ, ಹತಾಶೆಯಿಂದ ಮಾಡುತ್ತಿರುವ ನಮ್ಮ ಗೋಳಾಟವೆಂದೇ ಭಾವಿಸೋಣ.
ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ, ನನ್ನನ್ನು ಗಮನಿಸಿಕೊಳ್ಳುವುದೇ ಇಲ್ಲ, ನಾನು ನಿರೀಕ್ಷಿಸಿದಂತೆ ಆತ ಅಥವಾ ಆಕೆ ಇಲ್ಲ, ನಮ್ಮಿಬ್ಬರ ನಡುವೆ ಹೊಂದಾಣಿಕೆ ಇಲ್ಲ ಎಂದು ಹೇಳುವ ಎಲ್ಲಾ ವಾಕ್ಯಗಳೂ ಆರ್ತನಾದವೇ ಆಗಿರುತ್ತದೆ. ತಾನು ದುರ್ಬಲ ಅಥವಾ ಸಹಾಯಕ್ಕಾಗಿ ಬೇಡುವವನು ಎಂಬುದನ್ನು ಪ್ರದರ್ಶಿಸುವುದಕ್ಕೆ ಪಡುವ ಸಂಕೋಚವು ಅಹಂಕಾರವನ್ನು ಮುಂದೆ ತಂದು ಇನ್ನೊಬ್ಬ ವ್ಯಕ್ತಿಯನ್ನು ದೂರುತ್ತದೆ.
ಮನಸ್ಸು ಹೀಗೆ ವಿಚಲಿತಗೊಳ್ಳಲು ಕಾರಣಗಳು ಇಲ್ಲದಿಲ್ಲ.
ಅಡಗಿರುವ ಆಸೆಗಳನ್ನು ಸ್ಪಷ್ಟವಾಗಿ ಪ್ರಕಟಿಸಿರುವುದಿಲ್ಲ. ತಮ್ಮ ಹಿತಾಸಕ್ತಿಯನ್ನು ನೋಡಿಕೊಳ್ಳಲು ತಕ್ಕನಾದ ಗುಣಗಳನ್ನು ವ್ಯಕ್ತಿಯಲ್ಲಿ ಎದುರು ನೋಡುತ್ತಿರುತ್ತಾರೆ. ತಮ್ಮ ನಿರೀಕ್ಷೆ ಮತ್ತು ಅಪೇಕ್ಷೆಗಳಿಗೆ ತಕ್ಕಂತೆ ಅವರು ನಡೆದುಕೊಳ್ಳದಿರುವಾಗ ಅಥವಾ ಸಂಗತಿಗಳು ಜರುಗದಿದ್ದಾಗ ಮನಸ್ಸು ವಿಚಲಿತಗೊಳ್ಳುತ್ತದೆ. ಮನಸ್ಸು ತಾನು ತೃಪ್ತಿಗೊಳ್ಳದಿರುವಾಗ ಕನಲುತ್ತದೆ, ವಿಚಲಿತಗೊಳ್ಳುತ್ತದೆ. ಮನಸ್ಸನ್ನು ಶಾಂತವಾಗಿರಿಸುವ ಮುಖ್ಯ ಸಂಪನ್ಮೂಲವೆಂದರೆ, ಅದು ತೃಪ್ತಿ. ತನ್ನ ಬಯಕೆಗಳು ತೃಪ್ತಿಗೊಳ್ಳುವುದಿಲ್ಲ ಎಂಬ ಸುಳಿವುಗಳು ಸಿಕ್ಕಾಗ, ಅದು ತನ್ನ ತೃಪ್ತಿ ತನಗೆ ದಕ್ಕದೇ ಹೋಗುತ್ತದೆ ಎಂಬ ಭಯದಲ್ಲಿ ವ್ಯಗ್ರವಾಗುತ್ತದೆ. ಉಗ್ರವಾಗಿ ಆಕ್ರಮಣ ಮಾಡುತ್ತದೆ. ಹಾಗೆ ಮಾಡುವ ದಾಳಿಯನ್ನೂ ಕೂಡಾ ತನ್ನ ತೃಪ್ತಿಗನುಸಾರವಾಗಿ ಮಾಡಲು ಸಾಧ್ಯವಾಗದೆ ಹೋಗುವುದರಿಂದ ಅದು ಮತ್ತಷ್ಟು ಕನಲುತ್ತದೆ, ವಿಚಲಿತಗೊಳ್ಳುತ್ತದೆ.
‘‘ಕೊಂದು ಹಾಕಿಬಿಡುವಷ್ಟು ಕೋಪ ಬರುತ್ತದೆ’’ ಎಂದು ಯಾರಾದರೂ ಹೇಳಿದರೆ ಅದು ಬರಿಯ ಬಾಯಿಯ ಮಾತಲ್ಲ. ಮನಸ್ಸಿನ ಆಕ್ರೋಶವೇ! ಆದರೆ ಮನಸ್ಸಿನ ಆ ಆಕ್ರೋಶವನ್ನು ತೃಪ್ತಿಪಡಿಸಿಕೊಳ್ಳಲೂ ಸಾಧ್ಯವಾಗದಂತಹ ಸಾಮಾಜಿಕ ವ್ಯವಸ್ಥೆಯ ಅರಿವೂ ಇರುವುದರಿಂದ ವಿಚಲಿತವಾಗುವುದು ಏನೇನೂ ಆಶ್ಚರ್ಯವಲ್ಲ.
ಬಹಳಷ್ಟು ವ್ಯಕ್ತಿಗಳಿಗೆ ತಮ್ಮ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ಎದುರಿಗಿರುವ ವ್ಯಕ್ತಿಗಳಿಗೆ ತಲುಪಿಸಲು ಸರಿಯಾದ ಮಾರ್ಗ ತಿಳಿದಿರುವುದಿಲ್ಲ. ಸಂವಹನದ ಮುನ್ನವೇ ಕಾಡುವ ನಿರಾಕರಣೆಯ ಅಥವಾ ವೈಫಲ್ಯದ ಭಯವಿರಬಹುದು, ತಾನು ಅದಕ್ಕೆ ಅರ್ಹನೋ ಇಲ್ಲವೋ ಎಂಬ ಹಿಂಜರಿಕೆ ಇರಬಹುದು, ತನ್ನ ಆಸೆಗೆ ತಕ್ಕನಾದ ವ್ಯಕ್ತಿತ್ವ ತನ್ನದಲ್ಲ ಎಂಬ ಗುಟ್ಟಾಗಿರುವ ಕೀಳರಿಮೆ ಇರಬಹುದು ಅಥವಾ ಅದನ್ನು ಸರಿಯಾದ ಪದಗಳಲ್ಲಿ ವ್ಯಕ್ತಪಡಿಸಲು ಪದಸಂಪತ್ತು ಇಲ್ಲದಿರಬಹುದು. ಒಟ್ಟಾರೆ ಸಂವಹನವೇ ನಡೆಯದು. ಎಷ್ಟೋ ಜನ ಕೂಗಾಡುವುದು, ಮುನಿಸಿಕೊಳ್ಳುವುದು, ವ್ಯಕ್ತಿಗಳನ್ನು ತಿರಸ್ಕರಿಸಿ ಹೊರಟುಬಿಡುವುದು ತಮ್ಮಲ್ಲಿರುವ ಪದ ಸಂಪತ್ತಿನ ಕೊರತೆಯಿಂದ. ಅವರ ವಿಚಾರಗಳನ್ನು, ಭಾವನೆಗಳನ್ನು ಸೂಕ್ತಪದಗಳಲ್ಲಿ, ವಾಕ್ಯಗಳಲ್ಲಿ ಅಭಿವ್ಯಕ್ತಪಡಿಸಲು ತಿಳಿದಿರುವುದಿಲ್ಲ. ಇಂತಹ ಹಲವು ಕಾರಣಗಳು ವ್ಯಕ್ತಿಯಲ್ಲಿ ಅಸಹನೆಯನ್ನು ಹುಟ್ಟುಹಾಕುತ್ತದೆ. ತಾನು ಅಸಹಾಯಕ ಎಂಬ ಭಾವ ಉಂಟಾದಷ್ಟು ಅಸಹನೆ ಉಂಟಾಗುತ್ತದೆ. ಎಷ್ಟೋ ಜನ ಅಳುವ ಬದಲು ಕೂಗಾಡುತ್ತಾರೆ ಮತ್ತು ಜಗಳವಾಡುತ್ತಾರೆ.
ತಮ್ಮಲ್ಲಿ ಸಂಪನ್ಮೂಲವಿದ್ದಲ್ಲಿ ಆತ್ಮವಿಶ್ವಾಸವಿರುತ್ತದೆ. ಅದು ಯಾವುದೇ ಸಂಪನ್ಮೂಲವಾಗಿರಬಹುದು. ಆರ್ಥಿಕ, ವೈಚಾರಿಕ, ಶೈಕ್ಷಣಿಕ, ನೈತಿಕ, ತಾತ್ವಿಕ, ಜನ ಸಂಪರ್ಕ; ಹೀಗೆ ನಾನಾ ಬಗೆಯ ಸಂಪನ್ಮೂಲಗಳಿಗೆ ಮನಸ್ಸು ಅವಲಂಬಿತವಾಗಿರುತ್ತದೆ. ತನ್ನ ಅಸ್ತಿತ್ವಕ್ಕೆ ಆಧಾರ ಎಂದು ನಂಬಿರುತ್ತದೆ. ಹೀಗೆ ತನ್ನ ಸಂಪನ್ಮೂಲಗಳು ಎಂದು ಯಾವುದನ್ನು ಗುರುತಿಸಿಕೊಂಡಿರುತ್ತದೆಯೋ ಅದನ್ನು ಆಧರಿಸಿಕೊಂಡು ತನ್ನ ವಿಚಲಿತಗೊಂಡಿರುವ ಸ್ಥಿತಿಯನ್ನು ಸರಿಪಡಿಸಿಕೊಳ್ಳಲು ಸಾಧ್ಯ. ಇದ್ಯಾವ ಸಂಪನ್ಮೂಲಗಳನ್ನೂ ಹೊಂದಿರದೇ ಇರುವ ಸ್ಥಿತಿ ತನ್ನದು ಎಂದು ಮನಸ್ಸಿಗೆ ಭಾಸವಾದರೆ ಅದು ಕನಲುತ್ತದೆ, ವಿಚಲಿತಗೊಳ್ಳುತ್ತದೆ.
ಒಂದು ಕೈಗೆ ಪೆಟ್ಟಾದರೆ ಮತ್ತೊಂದು ಕೈ ಅದನ್ನು ತಟ್ಟನೆ ಹಿಡಿದುಕೊಳ್ಳುವಂತೆ ಅಥವಾ ಸಮಾಧಾನಿಸುವಂತೆ ಅಥವಾ ನೆರವಾಗುವಂತೆ ಮನಸ್ಸಿಗೂ ಒಂದು ಆಸರೆ ಬೇಕು. ಅದೇನೆಂದರೆ ನಮ್ಮದೇ ಬಾಧಿತ ಆಲೋಚನೆಗಳನ್ನು ನಮ್ಮದೇ ಭರವಸೆಯ ಆಲೋಚನೆಗಳು ಸಮಾಧಾನ ಮಾಡುವುದು. ಮನಸ್ಸಿನ ಈ ರೀತಿಯ ಸ್ವಭಾವವೇ ಅದರ ಒಂದು ವಿಶೇಷತೆ.
ತನ್ನನ್ನು ತಾನೇ ಸಮಾಧಾನ ಪಡಿಸಿಕೊಳ್ಳುವುದಕ್ಕಾಗಿಯೇ ಅನೇಕ ಸಾಂತ್ವನದ ತಂತ್ರಗಳಿವೆ. ಇಂತಹ ಸಾಂತ್ವನದ ತಂತ್ರಗಳನ್ನು ನಮ್ಮದೇ ಮನಸ್ಸು ವಿಚಲಿತಗೊಂಡಾಗಲೂ ಬಳಸಬಹುದು, ಹಾಗೆಯೇ ಅದರ ಬಗ್ಗೆ ಅರಿವು ಇಲ್ಲದಂತಹ ಇತರ ಸಹಜೀವಿಗಳಿಗೂ ನೆರವಾಗಬಹುದು.