ಪ್ರಧಾನಿ ಮೋದಿಯ ಒಂದು ದಶಕದ ವ್ಯರ್ಥನೀತಿ
ಏಳು ಹಂತದ ಚುನಾವಣೆಯು ಇನ್ನೇನು ಮುಗಿದಿದೆ. ಈಗ ಮತಗಳು ಶೈತ್ಯಾಗಾರದಲ್ಲೆಂಬಂತೆ ಭಾರತದ ಭವಿಷ್ಯವನ್ನು ನಿರ್ಧರಿಸುವತ್ತ ಮುದುಡಿ ಮಲಗಿವೆ. ಸಹಜ ಹೆರಿಗೆಯಾದರೆ ಜೂನ್ 4ರಂದು ದೇಶದ ಭವಿಷ್ಯ ಪ್ರಕಟವಾಗಲಿದೆ.
ಪ್ರಾಯಃ ಸ್ವತಂತ್ರ ಭಾರತದ ಇತಿಹಾಸದಲ್ಲೇ ಇಷ್ಟೊಂದು ದೀರ್ಘ ಆಕಳಿಕೆಯ ಚುನಾವಣೆ ನಡೆದಿರಲಿಲ್ಲ. ಅದಾದರೂ ಸಹ್ಯ. ಭಾರತದಂತಹ ವಿಭಿನ್ನ ಸಂಸ್ಕೃತಿಯ, ಭಾಷೆಯ, ಜಾತಿ-ಮತಗಳ, ಜನಾಂಗಗಳ ದೇಶದ ಜನರ ಆಶೋತ್ತರಗಳು ಅಷ್ಟೇ ಭಿನ್ನವಾಗಿರುತ್ತವೆ ಮತ್ತು ಅವನ್ನು ಒಂದು ಪಾತಳಿಯಲ್ಲಿ ಸಮದೂಗಿಸಿ ಒಯ್ಯಬೇಕಾದರೆ ಎಂಬ ಒಂದು ಪ್ರಮೇಯದೊಂದಿಗೆ ಈ ಏಳು ಸುತ್ತಿನ ಕೋಟೆಯ ರಹಸ್ಯವನ್ನು ಸಹಿಸಬಹುದು. ಆದರೆ ಈ ಚುನಾವಣೆಯ ಪೂರ್ವದಲ್ಲಿ ಮತ್ತು ವರ್ತಮಾನದಲ್ಲಿ ನಮ್ಮ ಹೆಮ್ಮೆಯ ಪ್ರಧಾನಿ ನಡೆದುಕೊಂಡ ರೀತಿ-ನೀತಿ ನಭೂತೋ. ಅದು ಒಬ್ಬ ಜನಪ್ರಿಯ ನಾಯಕನ ನಡೆನುಡಿಯಂತಿರಲಿಲ್ಲ. ಬದಲಾಗಿ ಭಯ, ಆತಂಕ, ಹತಾಶೆ ಮಡುಗಟ್ಟಿದಂತಿತ್ತು. ಪ್ರತಿಪಕ್ಷಗಳು ಆಡಳಿತ ಪಕ್ಷದ ನಡೆನುಡಿಗಳನ್ನು ಟೀಕಿಸುವುದು ಸಹಜವೇ. ಆಳುವವರೇ ಅಥವಾ ಅವರ ಅಭ್ಯರ್ಥಿಗಳೇ ಒಳ್ಳೆಯವರು ಎಂದಾದರೆ ಚುನಾವಣೆ ಯಾಕೆ? ಸ್ಪರ್ಧೆ ಯಾಕೆ? ನಾವು ನೆನಪಿಟ್ಟುಕೊಳ್ಳಬೇಕಾದದ್ದು ಭಾರತದ ಚುನಾವಣೆಗಳು ಅಭ್ಯರ್ಥಿಗಳ ನಡುವೆ ಎಂಬುದು ನೆಪಮಾತ್ರ. ಅದು ನಿಜಕ್ಕೂ ಪಕ್ಷಗಳ ನಡುವಣ ಸಮರ. (‘ಸಮರ’ ಮುಂತಾದ ಪದಗಳನ್ನು ಕ್ರೀಡೆಯಲ್ಲೂ ಮಾಧ್ಯಮಗಳು ಬಳಸುತ್ತಾವಾದ್ದರಿಂದ ಅದನ್ನು ಇಂತಹ ಗುರುತ್ವದ ಪರಿಸ್ಥಿತಿಯಲ್ಲಿ ಬಳಸುವುದು ತಪ್ಪಾಗಲಾರದೆಂದು ಅಂದುಕೊಂಡಿದ್ದೇನೆ.) ತಮ್ಮೊಲವಿನ ಪಕ್ಷವನ್ನು ಆಡಳಿತಕ್ಕೆ ಆಯ್ಕೆ ಮಾಡುವ ಚುನಾವಣೆ. ದೇಶದ ಭವಿಷ್ಯದ ಬಗ್ಗೆ ನಿರ್ಣಯ ಕೊಡುವುದಿದ್ದರೆ ಅದೂ ಪಕ್ಷಗಳ ಮುಖಾಂತರವೇ. ಇದರಲ್ಲಿ ಸ್ವಾರ್ಥ, ಲಾಭ, ಸ್ವಪಕ್ಷಪಾತ, ದ್ವೇಷ ಮುಂತಾದವು ಸಹಜವಾಗಿಯೇ ಮನೆಮಾಡಿರುತ್ತವೆ. ಇದನ್ನು ಮೀರಿದ ‘ಇವರು ನಮ್ಮವರು’ ಎಂಬ ಭಾವವಂತೂ ಎಲ್ಲ ಸಾಮಾಜಿಕ ಪ್ರಜ್ಞೆಯನ್ನೂ, ದೇಶ-ಕಾಲದ ಒಳಿತನ್ನೂ ಮರೆಯುತ್ತವೆ. ಇಂತಹ ಭಾವನೆಗಳ ಪ್ರಕಟಣೆಗೆ ಉಪಾಧಿಯಾಗುವುದು ನಮ್ಮ ವಾಸ್ತವ, ನೈಜ ಸಮಸ್ಯೆಗಳಲ್ಲ, ಬದಲಿಗೆ ಅಮೂರ್ತವಾಗಿರಬೇಕಾಗಿದ್ದ ಜಾತಿ, ಮತಗಳು. ಒಂದೇ ಜಾತಿಯ ಸ್ಪರ್ಧಿಗಳಿದ್ದಲ್ಲಿ ಮಾತ್ರ ಪಕ್ಷದ/ಗಳ ಬಲಾಬಲವು ವ್ಯಕ್ತವಾಗುತ್ತದೆ. ಅಭ್ಯರ್ಥಿಗಳ ಗುಣಾವಗುಣಗಳು ಪಕ್ಷಪ್ರೀತಿಯ ನೆಲೆಯಲ್ಲೇ ಅಳತೆಗೊಳ್ಳುವುದರಿಂದ ಆತನ/ಆಕೆಯ ವೈಯಕ್ತಿಕ ಯೋಗ್ಯತೆ ಮುಖ್ಯವಾಗುವುದೇ ಇಲ್ಲ. ಜೈಲಿನಲ್ಲಿರುವವರು/ಜೈಲಿನಲ್ಲಿರಬೇಕಾದವರು ಚುನಾವಣೆಯಲ್ಲಿ ಸ್ಪರ್ಧಿಸುವ ದೌರ್ಭಾಗ್ಯ ದೇಶದ ಮತದಾರರದ್ದು.
ಕಳೆದ ಹತ್ತು ವರ್ಷಗಳ ಆಡಳಿತ (ಅಥವಾ ದುರಾಡಳಿತ) ಜನರ ವಿಶ್ಲೇಷಣೆಗೆ ಒಳಗಾಗುತ್ತದೆಯೆಂದು ತಿಳಿದರೆ ತಪ್ಪಾದೀತು. ಏಕೆಂದರೆ ಜನರು ಭಾವನೆ ಮತ್ತು ವಿಚಾರದ ನಡುವಣ ಸಂಘರ್ಷದಲ್ಲಿ ಭಾವನೆಯನ್ನಷ್ಟೇ ಮತವಾಗಿ ಪರಿವರ್ತಿಸುತ್ತಾರೆ. ಇಂತಹ ಮನಸ್ಥಿತಿಗೆ ಶಿಕ್ಷಣ ಅಥವಾ ಅದರ ಅಭಾವವು ಯಾವ ಪ್ರಭಾವವನ್ನೂ ಬೀರುವುದಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಪ್ರಧಾನಿಯ ಮನೋಧರ್ಮ ಹೇಗಿರಬೇಕಾಗಿತ್ತು ಮತ್ತು ಹೇಗಿತ್ತು ಮತ್ತು ಹೇಗೆ ಮುಂದುವರಿಯುತ್ತಿದೆ?
ಹೇಳಿ ಕೇಳಿ ಮೋದಿ ಭಾರತೀಯ ಜನತಾಪಕ್ಷದ ನಾಯಕರು. ಅದು ಅತೀ ಮತೀಯವಾದದಿಂದ ಮೂಲಭೂತವಾದದ ವರೆಗೆ ತನ್ನ ಸಿದ್ಧಾಂತವನ್ನು ಒಪ್ಪಿಕೊಳ್ಳದ ಎಲ್ಲರನ್ನೂ ಅನ್ಯರು, ಪರಕೀಯರು, ಭ್ರಷ್ಟರು ಮತ್ತು ಕೆಲವೊಮ್ಮೆ ‘ದೇಶದ್ರೋಹಿಗಳು’ ಎಂದು ಪರಿಗಣಿಸುವ ಪಕ್ಷ. ಚುನಾವಣಾ ತಂತ್ರದ ಮತ್ತು ಆಗಿನ ಪರಿಸ್ಥಿತಿಯ ಸೂಕ್ಷ್ಮತೆಯ ಭಾಗವಾಗಿ ಅದು ‘ಭಾರತೀಯ’ ಎಂಬ ಪದವನ್ನು ಪಕ್ಷದ ಹೆಸರಿಗೆ ಬಳಸಿತು. ಈಗೇನಾದರೂ ಅದು ಅಸ್ತಿತ್ವಕ್ಕೆ ಬರುವುದಾಗಿದ್ದರೆ ಅದು ‘ಹಿಂದೂ’ ಎಂಬ ಅತೀ ಮತೀಯವಾದ ಪದವನ್ನೇ ಬಳಸುತ್ತಿತ್ತೇನೋ? ಅಷ್ಟರ ಮಟ್ಟಿಗೆ ಅದು ಬದಲಾಗಿದೆ. ಆದರೂ ನೆನಪಿಸಬಹುದಾದರೆ ಭಾರತದ ಹಿಂದಿನ ಪ್ರಧಾನಿ ಮತ್ತು ಭಾರತೀಯ ಜನತಾಪಕ್ಷದ ನಾಯಕರಾಗಿದ್ದ ಅಟಲ್‌ಬಿಹಾರಿ ವಾಜಪೇಯಿಯವರ ಅಧಿಕಾರಾವಧಿಯನ್ನು ನೆನಪಿಸಬಹುದು. ತನ್ನ ಹುದ್ದೆಯ ಹಾಗೂ ಸಂಸತ್ತಿನ ಘನತೆಯನ್ನು ಇಳಿಸಲು ಪ್ರಜ್ಞಾಪೂರ್ವಕವಾಗಿ ಯಾವ ಪ್ರಯತ್ನವನ್ನೂ ಮಾಡಲಿಲ್ಲವೆಂಬುದು ಅವರ ಉದಾರವಾದಿ ನೀತಿಯ ಅಥವಾ ರಾಜಕಾರಣದ ತಂತ್ರವಾಗಿ ಒಂದು ಭಾಗವಾಗಿದ್ದಿರಬಹುದು. ಅವರ ಕಾಲದಲ್ಲಿ ಭಾರತವು ‘ವಿಶ್ವಗುರು’ ಬಿಡಿ, ವಿಶ್ವಪ್ರಸಿದ್ಧವಾಗಲೂ ಹೆಚ್ಚಿನ ಪ್ರಯತ್ನವನ್ನೇನೂ ಮಾಡಿರಲಿಲ್ಲ. ಅಯೋಧ್ಯೆಯ ರಾಮಮಂದಿರ ವಿವಾದದಲ್ಲಿ ಬಾಬರಿ ಮಸೀದಿಯು ಧ್ವಂಸವಾದಾಗ ಬಹಿರಂಗವಾಗಿಯೇ ತನ್ನ ಅಸಮಾಧಾನವನ್ನು, ನಿರಾಶೆಯನ್ನು ತೋಡಿಕೊಂಡರು; ಗುಜರಾತಿನಲ್ಲಿ ಮೋದಿ ಮುಖ್ಯಮಂತ್ರಿಯಾಗಿದ್ದಾಗ ನಡೆದ ಹತ್ಯಾಕಾಂಡವನ್ನು (ನ್ಯಾಯಾಲಯಗಳ ತೀರ್ಪಿನ ಪರಿಣಾಮವಾಗಿ ಇದರಲ್ಲಿ ಯಾರ ಪಾಲು ಎಷ್ಟು ಎಂಬುದು ಈಗ ಅಸಂಗತ) ವಾಜಪೇಯಿ ಖಂಡಿಸಿದರು. ‘ರಾಜಧರ್ಮ’ವನ್ನು ಪಾಲಿಸಲು ಮೋದಿಗೆ ಕರೆಕೊಟ್ಟರು. ಕಾಶ್ಮೀರದ ರಾಜಕೀಯ ನಾಯಕಿ ಮುಫ್ತಿ ಮೆಹಬೂಬ ಅವರ ಅಪಹರಣವಾದಾಗ ಅವರು ಇನ್ನೊಂದು ಪಕ್ಷದವರಾಗಿದ್ದರೂ ಭಯೋತ್ಪಾದಕರನ್ನು ವಿನಿಮಯವಾಗಿ ಬಿಡುಗಡೆಗೊಳಿಸಿ ಈ ನಾಯಕಿಯನ್ನು ಬಿಡುಗಡೆಗೊಳಿಸಿದರು. ತಾತ್ವಿಕ ಭಿನ್ನಾಭಿಪ್ರಾಯಗಳಿದ್ದಾಗಲೂ ಸಂಸತ್ತಿನಲ್ಲಿ ಗಾಂಧಿ-ನೆಹರೂರನ್ನು ಇನ್ನೊಂದು ಪಕ್ಷದ ಪ್ರತಿನಿಧಿಗಳಂತೆ ಕಾಣದೆ ದೇಶದ ಸ್ವಾತಂತ್ರ್ಯಕ್ಕೆ, ಸ್ವತಂತ್ರ ಭಾರತದ ಏಳಿಗೆಗೆ ತನ್ನ ಮೆಚ್ಚುಗೆ, ಗೌರವಗಳನ್ನು ವ್ಯಕ್ತಪಡಿಸಿದರು. ಇಂದಿರಾ ಗಾಂಧಿಯವರಿಂದ ತುರ್ತುಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾದರೂ ಅದನ್ನು ದ್ವೇಷವಾಗಿ ಪರಿವರ್ತಿಸದೆ ಭವಿಷ್ಯಕ್ಕೆ ಎಚ್ಚರಿಕೆಯಾಗಿ ಮಾತ್ರ ಪರಿಗಣಿಸಿದರು. ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದಾಗಲೂ ಗುಣಾವಗುಣಗಳನ್ನು ನಡೆನುಡಿಗಳಲ್ಲಿ ವ್ಯಕ್ತಪಡಿಸಿದರು. ಆಡಳಿತ ಮಾಡುವವರ ಮತ್ತು ಪ್ರತಿಪಕ್ಷಗಳ ನಡತೆ, ನಡವಳಿಕೆ, ಹೊಣೆಗಾರಿಕೆ ಹೇಗೆ ಭಿನ್ನವಾಗಿರುತ್ತದೆ ಮತ್ತು ಭಿನ್ನವಾಗಿರಬೇಕು, ಪ್ರತಿಪಕ್ಷ ರಾಜಕಾರಣ ಬೇರೆ, ಆಡಳಿತ ರಾಜಕಾರಣ ಬೇರೆ ಎಂಬುದನ್ನು ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಎಲ್ಲೆಯೊಳಗೆ ಸಹನೆಯಿಂದಲೇ ಹೇಳಿದರು. ಇಷ್ಟಾದರೂ ಅವರನ್ನು ಈ ದೇಶದ ಜನತೆ ಬಹಳ ಕಾಲ ಸಹಿಸದಾಯಿತು. ಇದಕ್ಕೆ ಕಾರಣವೆಂದರೆ ಅವರ ಮೂಗಿನಡಿಯೇ ಮೋದಿಯಂತಹ ಅಸಹನಾಶೀಲ, ವೈಯಕ್ತಿಕ ಪ್ರತಿಷ್ಠೆಯ, ಮೂಲಭೂತ ಮತ್ತು ಉಗ್ರ ಹಿಂದುತ್ವವಾದದ ಹಿಂದೂಗಳು ತಮ್ಮ ಹೆಡೆಯನ್ನು ಎಲ್ಲೆಡೆ ಹಬ್ಬಲು ಅವಕಾಶಮಾಡಿಕೊಟ್ಟದ್ದು. ಇದರಿಂದಾಗಿ ‘ಭಾರತವು ಎಲ್ಲೆಡೆ ಪ್ರಕಾಶಿಸುತ್ತಿದೆ’ ಎಂಬ ವಾಜಪೇಯಿ ಘೋಷಣೆ ಪ್ರಕಾಶಮಾನವಾಗದೆ, ಉರಿಯದೆ ನಂದಿತು. 2004ರಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದಿದ್ದರೆ ಅದರಲ್ಲಿ ವಾಜಪೇಯಿ ಪಾತ್ರ ಸಾಕಷ್ಟಿತ್ತು. ಅವರು ಅವರದೇ ಪಕ್ಷದಲ್ಲಿ ‘ನಮ್ಮೊಡನಿದ್ದೂ ನಮ್ಮಂತಾಗದೆ’ ಉಳಿದರು.
ವಾಜಪೇಯಿಯವರ ಉತ್ತರಾಧಿಕಾರಿಯಂತಿದ್ದ ಮತ್ತು 1990ರ ದಶಕಕ್ಕೆ ಪೂರ್ವದಲ್ಲಿ ‘ಹತ್ತರೊಟ್ಟಿಗೆ ಹನ್ನೊಂದು’ ಪಕ್ಷವಾಗಿದ್ದ ಅಧಿಕಾರ ಕಾರಣವಾಗಿ ಸೌಮ್ಯಹಿಂದೂವಾದದ ಭಾರತೀಯ ಜನತಾ ಪಕ್ಷವನ್ನು ಸೋಮನಾಥ-ಅಯೋಧ್ಯೆ ರಥಯಾತ್ರೆಯ ಮೂಲಕ ಉಗ್ರಹಿಂದುತ್ವಕ್ಕೆ ಪರಿವರ್ತಿಸಿ ಉದ್ದೇಶಪೂರ್ವಕವಾಗಿಯೋ ಅನುದ್ದೇಶಿತವಾಗಿಯೋ ಒಂದರ್ಥದಲ್ಲಿ ದೇಶಕ್ಕೆ ಮತೀಯ ಕಿಚ್ಚುಹಚ್ಚಿದ ಅಡ್ವಾಣಿಯವರು ಜಿನ್ನಾ ಅವರನ್ನು ‘ಜಾತ್ಯತೀತ’ ಎಂದು ಹೇಳಿದ ಕಾರಣಕ್ಕೆ ತಮ್ಮ ಪಕ್ಷಾಧ್ಯಕ್ಷತೆ ಮಾತ್ರವಲ್ಲ, ರಾಜಕೀಯ ಭವಿಷ್ಯವನ್ನೇ ಕಳೆದುಕೊಂಡರು. ಮೋದಿಯ ರಾಜಧರ್ಮದ ಸಂದರ್ಭದಲ್ಲಿ ವಾಜಪೇಯಿಯವರ ಅಭಿಮತಕ್ಕೆ ಭಿನ್ನವಾಗಿ ಮೋದಿಯ ಪರವಾಗಿ ನಿಂತು ಮೋದಿಯ ಅಧಿಕಾರವನ್ನು ಉಳಿಸಿಕೊಂಡರು. ಆದರೆ ಅಡ್ವಾಣಿಯವರ ಅರಗಿಣಿಯಾಗಿದ್ದ ಮೋದಿ 2014ರ ಚುನಾವಣೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರಾದಾಗಲೇ ಅವರಿಗೆ ಪ್ರತಿಪಕ್ಷಗಳಿಗಿಂತಲೂ ತನ್ನ ಪಕ್ಷದ ಪ್ರತಿಸ್ಪರ್ಧಿಗಳನ್ನು ದೂರವಿಡುವುದು ಮುಖ್ಯವಾಗಿತ್ತು. ಪ್ರಧಾನಿಯಾದ ಬಳಿಕ ತನಗಿದ್ದ ಯಾವ ಅವಕಾಶವನ್ನೂ ಕಳೆದುಕೊಳ್ಳದೆ, ಅಡ್ವಾಣಿಯವರನ್ನು ಹದ್ದಾಗಿ ಕುಕ್ಕಿದ್ದು ಮಾತ್ರವಲ್ಲ ಅವರ ಸಮಕಾಲೀನರಾದ ಮುರಳೀ ಮನೋಹರ ಜೋಶಿ, ಜಸ್ವಂತ್ ಸಿಂಗ್ ಮುಂತಾದ ಹಿರಿಯ ನಾಯಕರನ್ನು ‘ಮಾರ್ಗದರ್ಶಿ ಮಂಡಳಿ’ಯೆಂಬ ವೃದ್ಧಾಶ್ರಮಕ್ಕೆ ಸೇರಿಸಿದರು. ವಾಸ್ತವದ ನೆಲೆಯಲ್ಲಿ ಪ್ರತಿಪಕ್ಷಗಳೂ ಸೇರಿದಂತೆ ಪಕ್ಷಾತೀತವಾಗಿ ದೇಶ ಅಡ್ವಾಣಿಯವರು ರಾಷ್ಟ್ರಪತಿಯಾಗಬಹುದೆಂಬ ನಿರೀಕ್ಷೆಯನ್ನು ಹೊಂದಿದ್ದರೆ ಮೋದಿ ತನ್ನ ವಿಧೇಯರಾಗಿದ್ದವರೊಬ್ಬರನ್ನು ಆ ಹುದ್ದೆಗೆ ಆರಿಸಿ ಅಡ್ವಾಣಿಯವರನ್ನು ಲೆಕ್ಕಕ್ಕಿಲ್ಲ(Peಡಿsoಟಿಚಿ ಟಿoಟಿ-ಉಡಿಚಿಣಚಿ)ವಾಗಿಸಿದರು. ಅಲ್ಲಿಗೆ ಭಾರತೀಯ ಜನತಾ ಪಕ್ಷದ ಹಳೆಯ ಪರಂಪರೆ ನಶಿಸಿಹೋಯಿತು.
ಭಾರತೀಯ ಜನತಾ ಪಕ್ಷದ ಇತರ ನಾಯಕರನ್ನೇ ಮುಖ್ಯವಾಗಿ ವಾಜಪೇಯಿಯವರ ಸೀಮಿತ ಸಾಧನೆಯನ್ನು ಹೇಳಿದ್ದರ ಉದ್ದೇಶವೇ ಮೋದಿಯನ್ನು ಇತರರೊಂದಿಗೆ ಹೋಲಿಸಲಾಗದು ಎಂಬುದಕ್ಕಾಗಿ.
ಇದರೊಂದಿಗೇ ಆ ತನಕ ಭಾರತೀಯ ಜನತಾ ಪಕ್ಷದ ಸೂತ್ರಧಾರಿಯಾಗಿದ್ದ ಸಂಘಪರಿವಾರವು ತನ್ನ ರಾಜಕೀಯ ಹಿಡಿತವನ್ನು ಮೋದಿಯ ಕೈಗೆ ನೀಡಿತು. ‘ಹಿಂದುತ್ವ’ವನ್ನು ಬಲಪಡಿಸುವ ತನ್ನ ಇರಾದೆಯನ್ನು ಮೋದಿ ಪೂರೈಸುವುದಾದರೆ ಅವರ ಕೈಯಲ್ಲಿ ಸೂತ್ರವನ್ನು ನೀಡಿದರೆ ತಪ್ಪೇನು ಎಂಬ ಸಂಘಪರಿವಾರದ ನಿಲುವು ಈ ಹತ್ತು ವರ್ಷಗಳಲ್ಲಿ ಅದಕ್ಕೇ ಮುಳುವಾಗುತ್ತಿದೆ. ಹಿಂದುತ್ವವನ್ನು ಪ್ರಚುರಪಡಿಸುವ ಮೋದಿಯ ನಿಲುವು ಸಂಘಕ್ಕೆ ಪ್ರಿಯವಾದಾಗಲೂ ಅದು ತನ್ನ ನಿಯಂತ್ರಣಕ್ಕೊಳಪಡುತ್ತದೆಂದು ಭಾವಿಸಿದ ಸಂಘಪರಿವಾರವು ಈಗ ಪೋಷಕ ಪಾತ್ರಕ್ಕೆ ಸೀಮಿತವಾಗಿದೆ. ಬಹಿರಂಗವಾಗಿ ತನ್ನ ಅಸಮಾಧಾನವನ್ನು ಹೇಳಿಕೊಳ್ಳದಿದ್ದರೂ (ಒಪ್ಪಿಕೊಳ್ಳದಿದ್ದರೂ) ಈ ಬಾರಿಯ ಚುನಾವಣೆಯಲ್ಲಿ ಸಂಘಪರಿವಾರವು ಸಕ್ರಿಯವಾಗಿರಲಿಲ್ಲವೆಂಬುದು ಸ್ಪಷ್ಟ. ದೇಶದ ಆರ್ಥಿಕ-ರಾಜಕೀಯ ಬದಲಾವಣೆಯಲ್ಲಿ (ಬೆಳವಣಿಗೆಯಲ್ಲಿ ಅಲ್ಲ) ಮೋದಿಯವರ ನಡೆನುಡಿಯನ್ನು 2014ರಿಂದ ಇಲ್ಲಿಯ ವರೆಗೆ ಒರೆಗೆ ಹಚ್ಚಿದ ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ (ಇವರು ದೇಶದ ಹಣಕಾಸು ಸಚಿವರೂ ಭಾರತೀಯ ಜನತಾಪಕ್ಷದ ಹಿರಿಯ ನಾಯಕಿಯೂ ಆಗಿರುವ ನಿರ್ಮಲಾ ಸೀತಾರಾಮನ್ ಅವರ ಪತಿ!), ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ ರಾಜನ್ ಮುಂತಾದ ತಜ್ಞರು ಮೋದಿಯ ವ್ಯಕ್ತಿಗತ ತಪ್ಪುಹಾದಿಯ ಹೆಜ್ಜೆಗಳನ್ನು ಗುರುತಿಸಿದ್ದಾರೆ.
ಹತ್ತುವರ್ಷಗಳ ಕಾಲ ನಾಯಕನಾಗಿರುವ ಒಬ್ಬ ರಾಜಕಾರಣಿ ತನ್ನ ಸಾಧನೆಗಳನ್ನೂ, ವೈಫಲ್ಯಗಳನ್ನೂ ಪ್ರಾಂಜಲವಾಗಿ ಹೇಳಿಕೊಳ್ಳಬೇಕು. ತನ್ನ ಅಧಿಕಾರಾವಧಿಯಲ್ಲಿ ಆಗಿರುವ ಪ್ರಮಾದಗಳನ್ನು ಹೇಳಿಕೊಂಡರೆ ಅವಮಾನವೇನೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಆಳುವವರು ಸತ್ಯದಂತೆ ಬತ್ತಲೆ ನಿಲ್ಲುವುದೆಂದರೆ ಇದೇ. ಪ್ರತಿಪಕ್ಷಗಳ ಟೀಕೆಯನ್ನೂ ತನ್ನ ಸಾಧನೆಗಳನ್ನೂ ಹೋಲಿಸಿ ಆಯ್ಕೆಮಾಡಿ ಎಂದು ಹೇಳುವ ಸಾಮರ್ಥ್ಯ ಜನನಾಯಕನಿಗಿರಬೇಕು. ಆದರೆ ದೇಶದ ದುರದೃಷ್ಟ: ಮೋದಿ ತನ್ನ ಹತ್ತುವರ್ಷಗಳ ಸಾಧನೆಯನ್ನು ಹೇಳಲೇ ಇಲ್ಲ; ಪೂರ್ವಸೂರಿಗಳನ್ನು ಹಳಿಯುವುದರಲ್ಲೇ ಕಾಲಕಳೆದರು. ತನ್ನ ಬಗ್ಗೆ ಹೇಳಿಕೊಳ್ಳುವಾಗ ತನ್ನ ಪಕ್ಷವನ್ನೂ ಮರೆತರು. ಮೋದಿಗಾಗಿ ಮತನೀಡಿ; ಭಾಜಪವನ್ನು ಮರೆತುಬಿಡಿ ಎಂದೂ ಸೂಚಿಸಿದರು. ಮೋದಿಯ ಮೌನಕ್ಕೆ ಬೇರೆ ಅರ್ಥವಿಲ್ಲ; ಹೇಳುವ, ಹೇಳಿಕೊಳ್ಳುವ, ಸಾಧನೆಯನ್ನು ಮಾಡಿಲ್ಲವೆಂದೇ ನಾವು ತಿಳಿಯಬೇಕು. ನೋಟು ಅಮಾನ್ಯೀಕರಣ, ಕೊರೋನವನ್ನು ನಿಭಾಯಿಸಿದ ರೀತಿ, ಪ್ರತಿಪಕ್ಷಗಳನ್ನೂ, ಸ್ವಪಕ್ಷದ ಇತರ ಹಿರಿ-ಕಿರಿಯ ನಾಯಕರನ್ನೂ ಕಡೆಗಣಿಸಿದ ಅಪಕ್ವ ನೀತಿ, ಭ್ರಷ್ಟಾಚಾರವನ್ನು ನಿಗ್ರಹಿಸುವ ಮಾತನಾಡುತ್ತಲೇ ತಮ್ಮ ನಿಯಂತ್ರಣದ ಕೇಂದ್ರ ತನಿಖಾ ಸಂಸ್ಥೆಗಳ (ಇವೀಗ ನಗೆಪಾಟಲಾಗಿವೆ) ಮೂಲಕ ಬೆದರಿಸಿ, ಪುಸಲಾಯಿಸಿ, ಎಲ್ಲ ಪಕ್ಷಗಳ ಭ್ರಷ್ಟರನ್ನು ತಮ್ಮ ಪಕ್ಷಕ್ಕೆ ತಂದು ಅವರನ್ನು ಶುದ್ಧೀಕರಿಸಿದ್ದು, ಚುನಾವಣಾ ಆಯೋಗದ ಮೂಲಕ ತಾರತಮ್ಯವನ್ನು ಬಹಿರಂಗವಾಗಿಯೇ ಮೆರವಣಿಗೆ ಮಾಡಿಸಿದ್ದು, ಇವು ಇತಿಹಾಸದಲ್ಲಿ ಮೋದಿಗೆ ಮಾತ್ರವಲ್ಲ ಅವರ ಪಕ್ಷಪ್ರಮುಖರಿಗೂ ಅಧೀನ ಸಂಸ್ಥೆಗಳಿಗೂ ಅಧಿಕಾರಿಗಳಿಗೂ ಕೀರ್ತಿತರದು. ಇವೆಲ್ಲವನ್ನೂ ಮೀರಿಸಿದ ಅತಿರೇಕವೆಂದರೆ ಚುನಾವಣೆಯ ಪ್ರಚಾರದಲ್ಲಿ ದೇಶವನ್ನು ಅಡ್ಡಾನೀಟಾ ವಿಭಜಿಸುವ ಪ್ರಚೋದನಕಾರೀ ಮಾತುಗಳನ್ನು ಹೇಳಿದ್ದು, ಶಾಂತಿಯನ್ನು ಕದಡುವ ಎಲ್ಲೆಯನ್ನು ಮೀರಿದ್ದು. ಜಾತಿ, ಮತ, ಧರ್ಮಗಳು ರಾಜಕೀಯದಿಂದ ಹೊರಗಿರಬೇಕಾದ್ದು. ಆದರೆ ಮೋದಿ ರಾಜಕೀಯದಲ್ಲಿ ಅವನ್ನು ಗರ್ಭಗುಡಿಯಲ್ಲಿರಿಸಿ ಪೂಜಿಸಲಾಗುತ್ತಿದೆ. ಸಂವಿಧಾನವನ್ನು ಗೌರವಯತವಾಗಿ ಬಳಸಬೇಕು; ಪ್ರಧಾನಿಯ ಮಾತೆಂದರೆ ಜನರಿಂದ ಮಾತೂ, ಮಾತಿನ ವಿಚಾರವೂ ಆರಾಧನೆಗೊಳ್ಳುವಂತಿರಬೇಕು. ಆದರೆ ಇವನ್ನು ಅಂಧಭಕ್ತರೂ ಭ್ರಷ್ಟರೂ ಮಾತ್ರವೇ ಸಂತೋಷಿಸುವಂತಿದೆ.
ದೇಶದ ಜನತೆ ಇವನ್ನೆಲ್ಲ ಹೇಗೆ ನೋಡಿದ್ದಾರೆಂಬುದನ್ನು ಜೂನ್ 4ನೇ ದಿನ ಹೇಳಲಿದೆ. ಮನುಷ್ಯ ಒಬ್ಬ ರಾಜಕೀಯ ಪ್ರಾಣಿಯಾಗಿದ್ದಾನೆ. ಅವನ ಪಾತ್ರದಲ್ಲಿ ಪ್ರಜಾಪ್ರಭುತ್ವವೆಂಬ ಕಾಡು ಮತ್ತು ಸಂವಿಧಾನವೆಂಬ ಬೇಲಿ ಹೇಗೆ ಉಳಿಯುತ್ತದೆಯೆಂಬುದನ್ನು ಕಾದು ನೋಡಬೇಕಾಗಿದೆ.