ಒಬ್ಬಂಟಿ ಜೀವನ
ಈಕಾಲ ಹೇಗಿದೆಯೆಂದರೆ ಯಾವುದೊಂದು ವಿಚಾರ, ಯಾವೊಬ್ಬ ಚಹರೆಯ ವ್ಯಕ್ತಿ, ಸಮಾಜ ಈ ಬಗ್ಗೆ ಬರೆದರೆ ಅದು ಜಗತ್ತಿನ 600-700 ಕೋಟಿ ಜನರ ಮಧ್ಯೆ ಯಾರೋ ಒಬ್ಬನಿಗೆ, ಅಥವಾ ಯಾವುದೋ ಸಮೂಹಕ್ಕೆ ಅನ್ವಯಿಸಿದೆಯೆಂದು ಬಗೆದು ಸಾಮಾಜಿಕ ಜಾಲತಾಣಗಳಲ್ಲಿ ಆ ಬಡಪಾಯಿ ಲೇಖಕನನ್ನು ಜಾಲಾಡುತ್ತಾರೆ. ಸಿನೆಮಾಗಳಲ್ಲಿ ಟೈಟಲ್ ಕಾರ್ಡ್ ಬರುವ ಮೊದಲು ಅದರಲ್ಲಿ ಬರುವ ಪಾತ್ರಗಳು, ಚಿತ್ರಗಳು, ಇನ್ನೂ ಏನೇನೋ ಬರೆದು ಎಲ್ಲವೂ ಕಾಲ್ಪನಿಕ ಮತ್ತು ಯಾರನ್ನೂ ಗುರಿಯಿರಿಸಿ ಚಿತ್ರಿಸಿದ್ದಲ್ಲ ಎಂಬರ್ಥದ ಒಂದು ಎಚ್ಚರಿಕೆಯೋ ಮಾಹಿತಿಯೋ ಪ್ರಕಟವಾಗುತ್ತದೆ. ಹಾಗೆ ಪ್ರತೀ ಬರಹದ ಜೊತೆಗೊಂದು ಘೋಷಣೆಯಿದ್ದರೆ ಒಳ್ಳೆಯದೆನ್ನಿಸುತ್ತದೆ. ಇಲ್ಲವಾದರೆ ಗುರಿಯಿರದೆ ಬಿಟ್ಟ ಬಾಣವೂ ಎಲ್ಲೋ ಯಾರಿಗೋ, ಯಾವುದಕ್ಕೋ ನಾಟಿದರೆ (ಮತ್ತು ಆ ವ್ಯಕ್ತಿಯು ಆ ಬಾಣದ ಗುರಿಗೆ ಅರ್ಹನಾಗಿದ್ದರೂ) ಅದರ ಪರಿಣಾಮದ ಕೇಡು ಅವನನ್ನು ಮಾತ್ರವಲ್ಲ ಅವನ ಹೆತ್ತವರನ್ನು ಮಕ್ಕಳನ್ನು ಮಾತ್ರವಲ್ಲ ಹೆಸರೇ ಸಿಕ್ಕದಷ್ಟು ದೂರದ ಪೂರ್ವಜರನ್ನೂ ಭವಿಷ್ಯದ ಪೀಳಿಗೆಯನ್ನೂ ಕಾಡೀತು. ರಾಮಾಯಣದಲ್ಲಿ ದಶರಥ ಮಹಾರಾಜನ ಕೊನೆಗಾಲದಲ್ಲಿ ಪುತ್ರವಿಯೋಗವಾಗುವುದಕ್ಕೆ ಕಾರಣವಾದದ್ದೂ ಇಂತಹ ಒಂದು ಬಾಣ. ಒಬ್ಬ ಅಮಾಯಕ ಶ್ರವಣಕುಮಾರನು ತನ್ನ ತಂದೆತಾಯಿಯರನ್ನು ಹೊತ್ತು ತೀರ್ಥಯಾತ್ರೆ ಮಾಡುತ್ತಿದ್ದಾಗ ಅವರಿಗೆ ನೀರಡಿಕೆಯಾಗಿ ಈ ಬಾಲಕನು ನೀರು ತರಲು ಬಳಿಯ ಹಳ್ಳಕ್ಕೆ ಹೋದನಂತೆ. ನೀರನ್ನು ಕುಡಿಕೆಗೆ ತುಂಬಿಸಿದಾಗ ಆದ ಸದ್ದನ್ನು ಕೇಳಿ ಇದು ಯಾವುದೋ ಕಾಡು ಪ್ರಾಣಿಯಿರಬೇಕೆಂದು ದಶರಥನು ತನ್ನ ಶಬ್ದವೇಧಿ ಚಲಾಕನ್ನು ಪ್ರದರ್ಶಿಸಿದರೆ ಅದು ಆ ಬಡಬಾಲಕನಿಗೆ ನಾಟಿ ನೋವಿನಿಂದ ಆಕ್ರಂದನ ಮಾಡಿ ಸತ್ತನಂತೆ. (ಶ್ರವಣ ಮತ್ತು ಶಬ್ದವೇಧಿ! ಎಂಥ ದಾರುಣ ಸಾಂಗತ್ಯ!) ಆಗ ದಶರಥನು ಅಲ್ಲಿಗೆ ಹೋಗಿ ಆತನ ಸಾವನ್ನು ಶೋಕಿಸಿ ಬಳಿಯಲ್ಲಿ ಕುಳಿತಿದ್ದ ವೃದ್ಧ ದಂಪತಿಯನ್ನು ಮಾತನಾಡಿಸಿ ಸಂತಾಪ ಹೇಳಿದನಂತೆ. ಆಗ ಅವರು ಅವನಿಗೂ ಅಂತ್ಯಕಾಲದಲ್ಲಿ ಮಕ್ಕಳು ಬಳಿಯಿರದಿರಲಿ ಎಂದು ಶಾಪ ನೀಡಿದರಂತೆ. ಆನಂತರ ಅವರು ಪ್ರಾಣತ್ಯಾಗ ಮಾಡಿದರೆಂಬ ಮೆಲೋಡ್ರಾಮ ಸೃಷ್ಟಿಯಾಗಿದೆ. ದಶರಥನು ಮುಂದೆ ಈ ಶಾಪವನ್ನು ಹೇಗೆ ಧನಾತ್ಮಕವಾಗಿ ಸ್ವೀಕರಿಸಿ ಹಾಗಾದರೆ ತನಗೆ ಮಕ್ಕಳಾಗುತ್ತದೆಯೆಂದು ಸಂತೋಷಿಸಿದನೆಂಬುದು ಕವಿಸಮಯ. ಎಲ್ಲಯುಗಗಳಿಗೂ ಶಾಪವೇ ಬೇಕೇನೋ? ಹೀಗೆ ಗುರಿಯಿರದೆ ಬಿಟ್ಟ ಬಾಣ ಕೆಟ್ಟದ್ದನ್ನೂ ಒಳ್ಳೆಯದನ್ನೂ ಮಾಡಬಲ್ಲುದು ಎಂಬುದು ತಾತ್ಪರ್ಯ.
ಆದ್ದರಿಂದ ಇತರರ ಮತ್ತು ಇತರ ವಿಚಾರಗಳ ಬಗ್ಗೆ ಬರೆಯುವುದಕ್ಕಿಂತ ತನ್ನ ಬಗ್ಗೆ ಬರೆದುಕೊಳ್ಳುವುದೇ ಒಳ್ಳೆಯದು ಅನ್ನಿಸುತ್ತದೆ. ಹೀಗೆ ತನ್ನ ಬಗ್ಗೆ ಬರೆಯುತ್ತಾ ಹೋದರೆ ಅದೊಂದು ಆತ್ಮಚರಿತ್ರೆಯೇ ಆಗುತ್ತದೆ. ಬಹುತೇಕ ಆತ್ಮಚರಿತ್ರೆಗಳು ಆತ್ಮಕಥೆಯಾಗಿರುತ್ತವೆ ಏಕೆಂದು ನಾನು ಯೋಚಿಸಿದ್ದಿದೆ. ಪ್ರಾಯಃ ಆತ್ಮಚರಿತ್ರೆಗಳಲ್ಲ್ ತನ್ನ ಬಗ್ಗೆ ಹೇಳಬೇಕಾದರೆ ಅದಕ್ಕೆ ಪೋಷಕ ಪಾತ್ರಗಳಿರಬೇಕು. ಇಲ್ಲವಾದರೆ ಅದೊಂದು ಏಕವ್ಯಕ್ತಿ ಪ್ರಯೋಗವಾಗುತ್ತದಲ್ಲ! ಹೀಗಾಗಿ ತನ್ನ ಸುತ್ತ ಇರುವ ವ್ಯಕ್ತಿಗಳು, ಸಮೂಹಗಳು, ವಿಚಾರಗಳು, ಕೊನೆಗೆ ಮರ-ಗಿಡ, ಪಶು-ಪಕ್ಷಿಗಳು ಹೀಗೆ ಒಟ್ಟು ಸಾವಿನ ಹೊರತು ಸಂಸಾರ ಬಂಧನದ ಎಲ್ಲ ಕಂಬಿಗಳೂ ಆತ್ಮಚರಿತ್ರೆಯಲ್ಲಿ ಭಾಗವಹಿಸುತ್ತವೆ. ಭಾಗವಹಿಸುತ್ತವೆ ಮಾತ್ರವಲ್ಲ, ಈ ‘ಆತ್ಮನ್’ ಎಂಬ ವೇದಾಂತಿಕ ವ್ಯಕ್ತಿಯ ಸುತ್ತ ಗ್ರಹಗಳಂತೆ ಸುತ್ತಬೇಕಾಗುತ್ತದೆ.
ಆತ್ಮ ಅವಿನಾಶಿ ಎಂಬ ಕಲ್ಪನೆಯಿದೆ. ಸಾವಿಲ್ಲದ(ವ)ರ ಕುರಿತು ಯಾರೂ ಬರೆಯಬಹುದು. ಅದು ಅನಾದಿ; ಅನಂತ. ಜನಕಲ್ಪನೆಯ ದೇವರ ಹಾಗೆ. ಆತ್ಮದ ಬಗ್ಗೆೆ ನಂಬಿಕೆಯಿಲ್ಲದವನೂ ಆತ್ಮಚರಿತ್ರೆಯನ್ನು ಬರೆಯುತ್ತಾನೆ ಮತ್ತು ಬರೆಯುವಾಗ ತಾನು ಬರೆದದ್ದೆಲ್ಲ ನಿಜ ಮತ್ತು ತಾನು ಎಲ್ಲರಿಗಿಂತ ಶ್ರೇಷ್ಠ ಎಂಬ ಹಾಗೆ ಬರೆಯುವುದು ಸಹಜ. ‘ತನ್ನ ಕಾವ್ಯಕೆ ತಾನ್ ಮಹಾಕವಿ ಮಣಿದಂತೆ’ ಎಂದು ಕುವೆಂಪು ಹೇಳುವಾಗ ಈ ಅಂಶ ಅವರ ತಲೆಯಲ್ಲಿತ್ತೋ ಏನೋ? ಇಲ್ಲವಾದರೆ ಅದು ಆತ್ಮಚರಿತ್ರೆ ಹೇಗಾಗುತ್ತದೆ? ಹೀಗೆ ಕಲ್ಪನೆಯ ಕುದುರೆ ಕೆನೆಯುವಾಗ ಕಥೆಗಳೂ ಸೃಷ್ಟಿಯಾಗುತ್ತವೆ.
ಕಥೆ ಎಂದ ಮೇಲೆ ಕಲ್ಪನೆ ಇನ್ನಷ್ಟು ಗರಿಗೆದರುವುದು ಸಹಜ. ಗರಿಗೆದರಿ ಹಾರುವಾಗ ಮಾರ್ಗ ವಿಶಾಲ; ಎಲ್ಲೆ ಸೀಮಾತೀತ. ಬಾನಿಗೊಂದು ಎಲ್ಲೆ ಎಲ್ಲಿದೆ? ಎಂದು ಸಿನೆಮಾ ಹಾಡಿದೆಯಲ್ಲ! ಇಂತಹ ಕಲ್ಪನೆಯ ಓಟದಲ್ಲಿ ಬರೆಯುವವನು ಅರ್ಧಸತ್ಯವನ್ನೇ ಹೇಳಬೇಕಾಗುತ್ತದೆ. ತನ್ನ ಬಗ್ಗೆ ತನ್ನ ಯೋಚನೆಗಳ ಬಗ್ಗೆ ಎಲ್ಲವನ್ನೂ ಬಿಚ್ಚಿಟ್ಟಲ್ಲಿ ರಸ್ತೆಯಲ್ಲಿ ನಡೆಯಲೂ ಸಾಧ್ಯವಾಗದು. ಅಪಾಯ ಮತ್ತು ಅವಮರ್ಯಾದೆ. ಹಾಗೆಯೆ ಎಲ್ಲವನ್ನೂ ಬಚ್ಚಿಟ್ಟಲ್ಲಿ ಅದು ತನ್ನ ಚರಿತ್ರೆ ಹೇಗಾಗುತ್ತದೆ? ಆದ್ದರಿಂದ ಅರ್ಧಸತ್ಯವು ಕ್ಷೇಮ. ಆದರೂ ಅಲ್ಲಿ ಸ್ವಹಿತಾಸಕ್ತಿ ಹೆಡೆಯೆತ್ತದೆ ಇರುವುದಿಲ್ಲ. ತಕ್ಕಡಿ ಸ್ವಲ್ಪವಾದರೂ ತನ್ನ ಕಡೆಗೆ ವಾಲದಿದ್ದರೆ ಅದು ಇನ್ನೊಬ್ಬನ ಚರಿತ್ರೆಯಾಗುವ ಸಂಭವವಿದೆ. ಆದ್ದರಿಂದ ಯಾವ ವಿಚಾರವೇ ಇರಲಿ, ಯಾವ ಸಂಗತಿಯೇ ಇರಲಿ, ಅಲ್ಲಿ ತಾನು ನಾಯಕನಾಗುವುದು ಅನಿವಾರ್ಯ. ಹೀಗೆ ಬರೆದಾಗ ಆ ಇನ್ನೊಬ್ಬ(ರು)/ಇನ್ನೊಂದು ಖಳ/ಪ್ರತಿನಾಯಕರಾಗಬೇಕಾಗುತ್ತದೆ. ತನ್ನ ಬಗ್ಗೆ ಮೌನ, ಇತರರ ಬಗ್ಗೆ ವಾಚಾಳಿತನ. ಇದು ಮನುಷ್ಯ ಕಂಡುಕೊಂಡ ಧರ್ಮ. ಇದರಿಂದಾಗಿ ಯಾವೊಬ್ಬನ ಆತ್ಮಚರಿತ್ರೆ ಆತನ ಆತ್ಮಕಥೆಯೂ ಆಗುತ್ತದೆ.
ಒಬ್ಬನ ಆತ್ಮಕಥೆಯನ್ನೋದಿ, ಕೇಳಿ, ಇನ್ನೊಬ್ಬ ಸುಮ್ಮನಿರುತ್ತಾನೆಯೇ? ಆತನೂ ತನ್ನ ಚರಿತ್ರೆಯನ್ನು ಬರೆಯುತ್ತಾನೆ. ಅಲ್ಲಿ ಆತ ನಾಯಕ, ಈತ ಖಳ/ಪ್ರತಿನಾಯಕ. ಮೂಕ ಪಕ್ಷಿಗಳು, ಪ್ರಾಣಿಗಳು, ಪ್ರಕೃತಿ ನಾವೇನು ಬರೆದರೂ ಸುಮ್ಮನಿರಬಹುದು. ಆದರೆ ಮನುಷ್ಯರು? ತೋಳಗಳಂತೆ ಈ ಆತ್ಮಚರಿತ್ರಕಾರನ ಮೇಲೆರಗಬಹುದು. ಇದು ಧೂಳು, ಕೆಸರು ಒಟ್ಟಾರೆ ಗೊಂದಲಕ್ಕೆ ಮುನ್ನುಡಿ ಬರೆದ ಹಾಗೆ. ಆದ್ದರಿಂದ ಇತರರ ಬಗ್ಗೆ ಬರೆಯದೇ ಇರಬೇಕು.
ಇವನ್ನೆಲ್ಲ ಗಮನಿಸಿದರೆ ಒಬ್ಬಂಟಿ ಜೀವನದ ಬಗ್ಗೆ ಬರೆಯಬೇಕೆನಿಸುತ್ತದೆ. ಒಬ್ಬನೇ ಮನುಷ್ಯ ಎಂದಾದರೂ ಇದ್ದನೇ? ಹಿಂದೂಪುರಾಣದನ್ವಯ ಆದಿಮಾಯೆ ಮೊದಲು ಸೃಷ್ಟಿಯಾದಳಂತೆ. ಕೈಸ್ತರಲ್ಲಿ ಆಡಮ್ ಮತ್ತು ಈವ್ ಮೊದಲು ಸೃಷ್ಟಿಯಾದರಂತೆ. ಇತರ ಧರ್ಮಗಳ ಬಗ್ಗೆ ನನಗೆ ತಿಳಿವಳಿಕೆ ಸಾಲದು. ಒಟ್ಟಾರೆ ನಿರ್ವಾತದಲ್ಲಿ, ಶೂನ್ಯದಲ್ಲಿ ಸೃಷ್ಟಿ ಆರಂಭಗೊಂಡಿತು. ಹಾಗಾಗಿ ತಾತ್ವಿಕವಾಗಿ ಒಬ್ಬನೇ ಬದುಕಬಹುದು. ಮುಂದೆ ಅದು ಬೆಳೆಯಿತು. ಶೂನ್ಯ ಹೇಗೆ ಜೊತೆಗಿರಲಿ ಎಂದು 1ನ್ನು ಸೃಷ್ಟಿಸಿಕೊಂಡಿತೋ ಮತ್ತು ಮುಂದೆ ಇತರ ಅಂಕೆಗಳು, ಅಕ್ಷರಗಳು ಹುಟ್ಟಿದವೋ ಹಾಗೆ ಎಲ್ಲವೂ.
ಒಂಟಿಯಾಗಿ ಹುಟ್ಟಿದ ಮನುಷ್ಯ ಬೆಳೆಯುತ್ತ ಸಮಾಜಜೀವಿಯಾಗು ತ್ತಾನೆ ಎನ್ನುತ್ತಾರೆ ಸಾಮಾಜಿಕ ವಿಜ್ಞಾನಿಗಳು. ಬರುವಾಗ ಒಂಟಿ, ಹೋಗುವಾಗ ಒಂಟಿ ಎನ್ನುತ್ತ್ತವೆ ಅಧ್ಯಾತ್ಮಗಳು. ಹುಟ್ಟುವಾಗ ಸ್ವತಂತ್ರ, ಮುಂದೆ ಎಲ್ಲ ಕಡೆ ಬಂಧನ ಎನ್ನುತ್ತಾರೆ ತತ್ವಜ್ಞಾನಿಗಳು. ಸೆರೆಮನೆಯಲ್ಲಿ ಒಬ್ಬನೇ ಇದ್ದವನನ್ನು ಕಾಣಲು ಒಬ್ಬ ಹೋದನಂತೆ. ಹೀಗೆ ಒಬ್ಬನೇ ಇರಲು ಬೇಸರವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ಅವನು ‘ಇಲ್ಲ, ನನ್ನಲ್ಲೇ ಮಾತನಾಡುವುದು ಖುಷಿ ಕೊಡುತ್ತದೆ, ಅಲ್ಲಿ ಯಾವ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರವೂ ಇರುವುದಿಲ್ಲ’ ಎಂದನಂತೆ. ಮುಂದುವರಿಸುತ್ತ ‘ನೀನೂ ಜೈಲಲ್ಲಿದ್ದೀಯಾ; ನಿನಗೆ ಗೊತ್ತಿಲ್ಲ. ಆದರೆ ನಿನ್ನ ಜೊತೆಗೆ ಅಸಂಖ್ಯ ಮಂದಿಯಿದ್ದಾರೆ’ ಎಂದನಂತೆ. ಹೀಗೆ ಒಬ್ಬನೆ ಆದರೂ ಜೈಲೇ; ಜೊತೆಗಿದ್ದರೂ ಜೈಲೇ. ಯಾವುದು ಸುಖ ಎಂಬುದು ಅವರವರ ನಿಲುವಿನ ಮೇಲೆ ಅವಲಂಬಿಸಿದೆ.
ಕೆಲವರು ಬದುಕಿಡೀ ಒಬ್ಬಂಟಿಯಾಗಿರುತ್ತಾರೆ. ಸಂಸಾರ ಬೇಡವೆಂಬವರು, ಸಂಸಾರ ಹೂಡದವರು, ಸಂಸಾರ ಮಾಡದವರು ಇವರೆಲ್ಲ ಇಷ್ಟಪಟ್ಟೋ ಬಲವಂತವಾಗಿಯೋ ಪರಿಸ್ಥಿತಿಯ ಕೈಗೊಂಬೆಯಾಗಿಯೋ ಒಬ್ಬಂಟಿಯಾಗಿರುತ್ತಾರೆ. ಸುಖ ಸಾಪೇಕ್ಷವಾಗಿರುವುದರಿಂದ ಅವರು ಸುಖಿಗಳೋ ದುಃಖಿಗಳೋ ಹೇಳುವುದು ಕಷ್ಟ. ನಾನು ನನ್ನ ಬಗ್ಗೆ ಹೇಳಬಹುದೇ ವಿನಾ ಇನ್ನೊಬ್ಬರ ಬಗ್ಗೆ ಹೇಳಲು ಅಶಕ್ತ. ‘ಏನು ಸುಖಿಯೋ ತಾನು ಹುಟ್ಟಿನಲಿ ಕಲಿಕೆಯಲಿ..’ ಎನ್ನುತ್ತಾರೆ. ಸಾವಿರ ಕುರಿಗಳ ಮಂದೆಗೆ ಇರುವ ಕುರುಬನೊಬ್ಬನೇ. ಆತ ಯಾರ ಜೊತೆಗೆ ಮಾತನಾಡಬೇಕು?
ಆದರೂ ನನಗೆ ಇಂಗ್ಲಿಷಿನಲ್ಲಿ ಪ್ರೀತಿಯ ಬಗ್ಗೆ ಇರುವ ಉಕ್ತಿಯೊಂದು ಈ ಸಂದರ್ಭಕ್ಕೂ ಅನ್ವಯಿಸಬಹುದೆಂದು ಅನ್ನಿಸಿದೆ. It’s better to have loved and lost than not to have loved at all! ಪ್ರೀತಿಸದೇ ಇರುವುದರಿಂದ ಪ್ರೀತಿವೈಫಲ್ಯನಾಗುವುದು ಒಳ್ಳೆಯದು! ಅದನ್ನೇ ನಾನು ಒಂಟಿಯಾಗಿರುವುದಕ್ಕಿಂತ ಜೊತೆಗೂಡಿ ಕಳೆದುಕೊಳ್ಳುವುದು ಒಳ್ಳೆಯದು ಎಂದು ಹೇಳಲಿಚ್ಛಿಸುತ್ತೇನೆ.
ಒಂದು ಉದಾಹರಣೆ ನೀಡಬಹುದು: ಮನೆಯ ಯಜಮಾನತಿ ಒಂದಷ್ಟು ದಿನ ಮಗನ ಮನೆಯಲ್ಲಿದ್ದು ಬರುತ್ತೇನೆ ಎಂದು ಗಂಡನನ್ನು ಗೃಹಬಂಧನಕ್ಕೊಳಪಡಿಸಿ ದೂರದೂರಿಗೆ ಹೋದ ಮೇಲೆ. ಆಕೆ ಬರುತ್ತಾಳೆ-ಇನ್ನೊಂದಷ್ಟು ದಿನಗಳಲ್ಲಿ. ಬಹಳ ಕಾಲ ಜೊತೆಯಲ್ಲಿ ಬದುಕಿ ಈಗ ಬಿಟ್ಟು ಇರುವುದು ಕಷ್ಟವೇ? ಹೌದು ಮತ್ತು ಅಲ್ಲ. ಎಲ್ಲ ಹೊಣೆ ಅವಳದ್ದೇ ಆದ ಮೇಲೆ ಇವನಿಗಿನ್ನೇನು ಕೆಲಸ? ತಾನಾಯಿತು ನನ್ನ ವೃತ್ತಿ, ಉದ್ಯೋಗ, ಎಂದುಕೊಂಡಿದ್ದವನಿಗೆ ಅವಳೀಗ ಹೋದದ್ದು ಹೆಚ್ಚುವರಿ ಹೊಣೆಯನ್ನು ನೀಡಿದೆ. ವೈದ್ಯರು ಹೊಟೇಲಿನಲ್ಲಿ ಊಟಮಾಡಬೇಡಿ, ಆದಷ್ಟು ಆರೋಗ್ಯವಂತ ಆಹಾರ ಸೇವಿಸಿ ಎಂದಿದ್ದಾರೆ. ಇನ್ನೊಬ್ಬರು ಅಡುಗೆ ಮಾಡಿದರೆ ಹೀಗಿರಬಹುದು; ನಾವೇ ಆದಾಗ ಸ್ವಪಾಕದಲ್ಲಿ ಇವೆಲ್ಲ ಎಲ್ಲಿರುತ್ತವೆ? ಆದರೂ ಅನಿವಾರ್ಯ. ಹಾಗಂತ ಸ್ವಲ್ಪ ವ್ಯಾಯಾಮವೂ ಉಪಯೋಗವೂ ಇದೆ. ಅವಳು ಇದ್ದಾಗ ಹೂಗಿಡಗಳೆಲ್ಲ ನಳನಳಿಸಿ ಅರಳುತ್ತಿದ್ದವು. ಈಗ ಅವು ಬಾಡಿದರೆ ಒಣಗಿದರೆ ಈತನಿಗೆ ಕಪಾಳಕ್ಕೆ ಹೊಡೆದಂತಲ್ಲವೇ? ‘ನೀನೊಬ್ಬ ನಿಷ್ಪ್ರಾಯೋಜಕ’ ಎಂದ ಹಾಗೆ. ಆದ್ದರಿಂದ ಅವಕ್ಕೆ ನೀರುಣಿಸುವುದು ಈತನ ಕೆಲಸ. ಮನೆ ಸ್ವಲ್ಪ ಒಪ್ಪ ಓರಣವಾಗಿಡುವುದೂ ಅಗತ್ಯವಲ್ಲವೇ? ದೀಪ ಬೆಳಗಬೇಕಲ್ಲವೇ? ಅವಳ ಪರವಾಗಿ ದೇವರ ಮನೆಯ ಕೆಲಸ. ಇವೆಲ್ಲ ಸೇರುವಾಗ ಬಿಡುವಿಲ್ಲ. ಈ ಪ್ರಥಮವ್ಯಕ್ತಿಯನ್ನು ಆಲಸಿಯಾಗಲು ಬಿಡದ ದಿನಚರಿಯಿಂದಾಗಿ ಈತನ ಆರೋಗ್ಯವೂ ಸುಧಾರಿಸುತ್ತದೆ.
ಇಷ್ಟೆಲ್ಲ ಕೆಲವು ದಿನಗಳ ಕಾಲ ಮಾಡಬಹುದು. ಇನ್ನುಳಿದ ಬದುಕಿಡೀ ಸಾಧ್ಯವೇ? ಯೋಚಿಸಲೂ ಸಾಧ್ಯವಿಲ್ಲ. ದೇಹದ ಎರಡು ಕಾಲುಗಳು ನಡೆವಂತೆ ಅಂದರೆ ಹಿಂದೆ-ಮುಂದೆ, ಒಮ್ಮೊಮ್ಮೆ ಶಿಸ್ತಿನಿಂದ. ಒಂದೇ ಸಾಲಿನಲ್ಲಿ ನಿಂತವರಿಗೆ ಇನ್ನು ಒಂಟಿತನದಲ್ಲಿ ಕುಂಟಲು ಸಾಧ್ಯವಿಲ್ಲ. ಗಾಢವಾಗಿ ಯೋಚಿಸಿದಾಗ ಬದುಕಿನಲ್ಲಿ ಅನೇಕರಿಗೆ ಇಂತಹ ಅನಿವಾರ್ಯ ಎದುರಾದಾಗ ಹೇಗಿದ್ದಾರು ಅನ್ನಿಸಿ ಮನಸ್ಸು ಕಂಪಿಸುತ್ತದೆ.
ಭೂಪತಿ ದುರ್ಯೋಧನ ಹನ್ನೊಂದು ಅಕ್ಷೋಹಿಣಿ ಸೇನೆಗೆ ಒಡೆಯನಾಗಿದ್ದೂ ಕುರುಕ್ಷೇತ್ರ ಯುದ್ಧದ ಕೊನೆಯ(ಹದಿನೆಂಟನೇ) ದಿನ ಒಂಟಿಯಾದನಂತೆ. ಹೋಗಲಿ, ಆತ ಕೆಟ್ಟವನು ಎಂಬ ನಂಬಿಕೆಯಿದೆ; ಆತನಿಗೆ ತಕ್ಕ ಶಾಸ್ತಿಯಾಯಿತು ಎಂದು ಅನ್ನಿಸಬಹುದು. ಆದರೆ ಗೆದ್ದ ದೊಡ್ಡಸ್ತಿಕೆಯ ಪಾಂಡವರ ಕತೆಯೇನು? ಏಳು ಅಕ್ಷೋಹಿಣಿಯ ಒಡೆಯರು ಕೊನೆಗೆ ದುಃಖಿಗಳಾದರಂತೆ. ರಾಮ-ಕೃಷ್ಣರೂ ಕೊನೆಗೆ ಒಂಟಿಗಳೇ. ಆದಿಯೇ ಅಂತ್ಯ. ಗೆದ್ದು ಸೋಲುವುದು, ಸಮೂಹದಿಂದ ಒಂಟಿತನಕ್ಕೆ ಸರಿಯುವುದು ಬಹುದೊಡ್ಡ ದುರಂತ. ನಮ್ಮ ವರ್ತಮಾನದ ಬಹುಪಾಲು ರಾಜಕಾರಣಿಗಳಂತೆ- ಅಡ್ವಾಣಿಯವರೂ ಸೇರಿ.
ಉದಾರಚರಿತರಿಗೆ ಒಂಟಿತನವಿಲ್ಲ; ಒಂಟಿತನ ಕಾಡಲು ಸಾಧ್ಯವೂ ಇಲ್ಲ. ಅವರಿಗೆ ವಿಶ್ವವೇ ಕುಟುಂಬವಂತೆ; ವಸುಧೈವ ಕುಟುಂಬಕಂ! ಹೊರಜಗತ್ತಿನ ವಿಹಾರ. ಅಂಥವರು ವಿಶ್ವಮಾನವರು. ತಾವರೆಯೆಲೆಯ ಮೇಲಿರುವ ನೀರ ಹನಿಯಂತೆ ಇರಬೇಕು; ನಿಮ್ಮೊಡನಿದ್ದೂ ನಿಮ್ಮಂತಾಗದೆ ಎಂದರೆ ಇದೇ ಇರಬಹುದೇನೋ? ಇದ್ದೂ ಇಲ್ಲದಂತೆ ಎಂದರೆ? ಯೋಚಿಸಬೇಕು. ತನ್ನೊಬ್ಬನ ಬಗ್ಗೆ ಯೋಚಿಸಲಾರಂಭಿಸಿದರೆ ಅದು ಕೊನೆಯಾಗುವುದೆಲ್ಲಿ? ಜಗತ್ತಿನ ಬಗ್ಗೆ ಯೋಚಿಸಿದರೆ? ಅದೂ ಹಾಗೆಯೇ. ಒಂಟಿತನವೂ ವಿಶ್ವಮಾನವತೆಯೇ. ಅದು ಒಳಜಗತ್ತಿನ ವಿಹಾರ.