ಅನಂತಮೂರ್ತಿಯವರ ‘ಸಾಹಿತ್ಯ ಸಹವಾಸ’

ಈಗ ನಮ್ಮೊಡನಿಲ್ಲದ ಡಾ.ಯು.ಆರ್. ಅನಂತಮೂರ್ತಿಯವರನ್ನು ಹೊರತುಪಡಿಸಿ ಆಧುನಿಕ ಕನ್ನಡ ಸಾಹಿತ್ಯದ ಚರ್ಚೆಯೇ ಸಾಧ್ಯವಿಲ್ಲ ಎನಿಸುವಷ್ಟು ಪ್ರಭಾವಶಾಲಿ ಅವರು. ಮಾತು, ಬರೆಹ ಮಾತ್ರವಲ್ಲ ಅವರ ನಿಲುವೇ ಆಕರ್ಷಕ. ಅನಂತಮೂರ್ತಿ ಏನಾದರೂ ಹೇಳುತ್ತಾರೆಂದರೆ ಅನಂತರ ನಾವು ಅವರ ಅಭಿಪ್ರಾಯವನ್ನು ಒಪ್ಪದೇ ಇರಬಹುದು, ಆದರೆ ಆ ಕ್ಷಣಕ್ಕೆ ಅವರನ್ನು ಒಪ್ಪದಿರಲು ಸಾಧ್ಯವಿಲ್ಲ. ತನ್ನೆದುರು ಇರುವವರನ್ನು ಕೈಯ ಕಿನ್ನರಿಯಾಗಿಸುವುದರಲ್ಲಿ ಅವರು ಆಧುನಿಕ ಸಾಹಿತ್ಯ ಲೋಕದ ಮರುಳಸಿದ್ಧ.
ಬದುಕನ್ನು ಪ್ರಜ್ವಲವಾಗಿ ಮುಗಿಸಿದ ಅನಂತಮೂರ್ತಿಯವರ ಸಮಗ್ರಕ್ಕೆ ಇನ್ನು ಎಡೆಯಿಲ್ಲವೆನ್ನುವಷ್ಟರಲ್ಲಿ ಅವರ 2014ರ ಭಾಷಣ ಸರಣಿಯ 11 ಉಪನ್ಯಾಸಗಳು ಮತ್ತು ಅವರೊಡನೆ ನಡೆಸಿದ ಒಂದು ಸಂದರ್ಶನ ಈಗ ‘ಸಾಹಿತ್ಯ ಸಹವಾಸ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಸುಮಾರು 200 ಪುಟಗಳ ಈ ಕೃತಿಯನ್ನು ಅಝೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಅಹರ್ನಿಶಿ ಪ್ರಕಾಶನ ಕನ್ನಡಿಗರಿಗೊದಗಿಸಿದೆ. ಇಷ್ಟೇ ಅಲ್ಲ, ಈ ಭಾಷಣಗಳ ವೀಡಿಯೊ ಕೂಡಾ ಸ್ಕ್ಯಾನ್ ಮಾಡಬಲ್ಲ ಕ್ಯೂಆರ್ ಕೋಡ್ ಮೂಲಕ ಒದಗಿಸಲಾಗಿದೆ. ನಿಮಗೆ ಓದಬಹುದು; ಕೇಳಬಹುದು; ನೋಡಬಹುದು.
ಇಲ್ಲಿ ಕನ್ನಡ ಭಾಷೆ, ನವ್ಯ ಸಾಹಿತ್ಯ, ದಲಿತ ಸಾಹಿತ್ಯ ಎಂಬ 1, 10, 11ನೇ ಉಪನ್ಯಾಸಗಳು ಮತ್ತು 12ನೆಯ ಲೇಖನವಾಗಿ ಅಚ್ಚಾದ ಅವರ ಸಂದರ್ಶನದ ಹೊರತಾಗಿ ಉಳಿದವು ವ್ಯಕ್ತಿಗತ ಅಥವಾ ವ್ಯಕ್ತಿನೆಪವಾಗಿ ಸಾಹಿತ್ಯದ ಕುರಿತು ಅವರು ಮಾಡಿದ ಉಪನ್ಯಾಸಗಳು. ಈ ಹರಹು ಅವರ ವೈಯಕ್ತಿಕ ಪರಿಚಯದ, ಮೋಹದ, ಒಡನಾಟದ ವ್ಯಕ್ತಿಗಳದ್ದು. ಇಲ್ಲಿ ಮಾಸ್ತಿ, ಬೇಂದ್ರೆ, ಕಾರಂತ, ಕುವೆಂಪು, ಅಡಿಗ, ಲಂಕೇಶ್, ತೇಜಸ್ವಿ ಹೀಗೆ ಒಬ್ಬೊಬ್ಬರು ಒಂದೊಂದು ಉಪನ್ಯಾಸದ ವಸ್ತು/ವ್ಯಕ್ತಿ, ಕೇಂದ್ರವಾಗಿದ್ದರೆ 9ನೆಯ ಉಪನ್ಯಾಸದಲ್ಲಿ ರಾಮಾನುಜನ್, ಕಾರ್ನಾಡ್ ಮತ್ತು ಕಂಬಾರರನ್ನು ಸಾಪೇಕ್ಷವಾಗಿ ಪರಿಚಯಿಸಿ ಅವರ ಮೂಲಕ ಸಾಹಿತ್ಯದ ವಿವಿಧ ಮಜಲುಗಳ ಒಳನೋಟವಿದೆ. ಆರಂಭದಲ್ಲೇ ಹೇಳಿದಂತೆ ಇವು ನವಿರು ಓದಿನ ಬರೆಹಗಳಾಗಿ ಮೂಡಿ ಬಂದಿವೆ.
ಹಾಗೆ ನೋಡಿದರೆ ಈ ಎಂಟು ಉಪನ್ಯಾಸಗಳೂ ವ್ಯಕ್ತಿಚಿತ್ರಗಳಾಗಿ ಉಳಿಯುವುದನ್ನು ಅನಂತಮೂರ್ತಿ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ಇದಕ್ಕೂ ಕಾರಣವಿದೆ: ಇವನ್ನು ಅವರು ಮಾತನಾಡಿದ್ದಾರೆ. ಅವರ ಕೈಯಲ್ಲೇ ಇವು ಬರೆಹಗಳಾಗಿದ್ದರೆ ಮತ್ತೆ ಓದುವ, ಪರಿಷ್ಕರಿಸುವ ಪ್ರಕ್ರಿಯೆಗೊಳಗಾಗಿ ನುಡಿಗಳು ಅಸಹಜವಾಗುವ ಸಾಧ್ಯವಿತ್ತು. ಇಲ್ಲಿ ತನಗನ್ನಿಸಿದ್ದನ್ನು ಹೊಣೆಯರಿತು ಹೇಳುವಾಗ ಮಾತು ಸಹಜವಾಗಿ ನುಡಿಮುತ್ತುಗಳಂತಾಗಿವೆ. ಬರೆಹವನ್ನು ಓದುವ ಈಗಿನ ಓದುಗರಿಗೆ ಕೆಲವು ಸಂಶಯಗಳು, ಪ್ರಶ್ನೆಗಳು ಉದ್ಭವಿಸಿದರೆ ಅದನ್ನು ಉತ್ತರಿಸಲು, ಸಮರ್ಥಿಸಲು ಅವರಿಲ್ಲದಿರುವುದರಿಂದ ಓದುಗ ಈ ಮಿತಿಯಲ್ಲೇ ತನ್ನ ಅಭಿಪ್ರಾಯಗಳಿಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಈ ಕೃತಿಗೆ ಮುನ್ನುಡಿಯೆಂಬ ತೋರಣವಿಲ್ಲದಿರುವುದರಿಂದ ಅನಂತಮೂರ್ತಿಯವರ ಚಿಂತನೆಯ ಇತಿಮಿತಿಗಳನ್ನು ಹೀಗೆ ಗುರುತಿಸಿ ಎಂಬ ಸಲಹೆಯಿಲ್ಲದಿರುವುದು ಒಳ್ಳೆಯದೇ ಆಗಿದೆ.
ಇಲ್ಲಿನ ಎಲ್ಲ ಲೇಖನಗಳ ಕುರಿತು ಹೇಳಬಹುದಾದ ಒಂದು ಸಂಗತಿಯೆಂದರೆ ಅವರು ಯಾವುದೇ ಒಂದು ಅಂಶವನ್ನು ಮುಖ್ಯವಾಗಿ ಕಂಡಿಲ್ಲ. ಭಾಷೆಯ ಬಗ್ಗೆ ಹೇಳುವಾಗ ಅವರು ಜಾಗತಿಕದಿಂದ ಸ್ಥಳೀಯದ ವರೆಗೆ ಭಾಷೆಯ ಉಗಮ, ಸ್ಥಿತಿ-ಗತಿಗಳನ್ನು ಮೇಲ್ಮೈಪದರದಲ್ಲಿ ಗುರುತಿಸುತ್ತಾರೆ. ಕನ್ನಡ ಭಾಷೆಯ ಬಗ್ಗೆ ಹೇಳುವಾಗ ಅವರಿಗೆ ಇತರ ಭಾಷೆಗಳ ಬಗ್ಗೆ ತಾತ್ಸಾರವಿಲ್ಲ. ಒಂದು ಒಳ್ಳೆಯ ಕೆಲಸ ಸಿಗುವುದಕ್ಕಾದರೂ ಇಂಗ್ಲಿಷ್ ಭಾಷೆಯ ಕಲಿಕೆ ಅನಿವಾರ್ಯವೆಂಬ ಔದಾರ್ಯ ಅವರದ್ದು. ಅಭಿಮಾನಕ್ಕಾಗಿ, ಚಳವಳಿಗಾಗಿ ಕನ್ನಡವನ್ನು ಪೋಷಿಸುವ ಭ್ರಾಮಕ ಕಲ್ಪನೆ ಅವರಿಗಿಲ್ಲ. ಇದರಿಂದಾಗಿ ಕನ್ನಡವನ್ನು ಎಲ್ಲ ಭಾಷೆಗಳಂತೆಯೇ ಮತ್ತು ವಸ್ತುನಿಷ್ಠವಾಗಿ ಹೇಳುವುದಕ್ಕೆ ಅವರಿಗೆ ಸಾಧ್ಯವಾಗಿದೆ. ವಿಶ್ವಾತ್ಮಕವಾಗಿ ಮತ್ತು ಸುಬ್ಬಣ್ಣನಿಂದ ಶೆಲ್ಡನ್ ಪೊಲಾಕ್‌ವರೆಗೆ ವಿಸ್ತೃತವಾದ ಪರಿಚಯವಿರುವುದರಿಂದ ಕನ್ನಡವನ್ನು ಈ ಪ್ರಪಂಚದ ನಡುವೆ ಒಂದು ಭಾವಪ್ರಪಂಚವಾಗಿ ಗುರುತಿಸುವ ಕಡೆಗೆ ಅವರು ಗಮನ ಹರಿಸಿಲ್ಲವೆನ್ನಿಸುತ್ತದೆ. ಶ್ರೀವಿಜಯನ ಪ್ರಪಂಚವು ನಾವು ತಿಳಿದ, ಇಂದಿನ ಪ್ರಪಂಚವಲ್ಲ. ಅದು ಚಿಕ್ಕದು; ಪಂಪನ ಬನವಾಸಿಯ ಹಾಗೆ; ಅಥವಾ ಕುಮಾರವ್ಯಾಸನ ಭಾರತದ ಹಾಗೆ. (ಇಂದು ನಮ್ಮೆದುರು ಇರುವ ಪ್ರಪಂಚ ಬೇರೆ; ವಿಸ್ತಾರವಾದದ್ದು.) ಅದರಿಂದಾಚೆಗಿನ ಇಂದಿನ ಭಾಷೆಯ ಬೆಳವಣಿಗೆಗಿಂತಲೂ ಜನರ ಭೌಗೋಳಿಕ ವ್ಯಾಪ್ತಿ ಹೆಚ್ಚಾದದ್ದೇ ಕಾರಣವಿರಬಹುದು. ಕನ್ನಡ ಏಕೆ ಇತರ ರಾಜ್ಯಗಳಲ್ಲಿ ಮತ್ತು ದೇಶಗಳಲ್ಲಿ ವಿಸ್ತರಿಸಲಿಲ್ಲವೆಂಬುದಕ್ಕೆ ಇಲ್ಲಿ ಹೊಸಬೆಳಕು ಕಾಣುವುದಿಲ್ಲ. ಪ್ರಪಂಚವು ಕನ್ನಡವನ್ನು ಪಡೆಯದೇ ಹೋದದ್ದಕ್ಕೆ ಇದರಿಂದಾಗಿ ಕನ್ನಡವನ್ನೇ ಆಶ್ರಯಿಸಿರುವ ಸಾಮಾನ್ಯ ಮಂದಿಗೆ ಇಲ್ಲಿನ ಚರ್ಚೆಯ ಅನೇಕ ಅಂಶಗಳು ಪಾಶ್ಚಾತ್ಯ ದೃಷ್ಟಿಕೋನವೆಂದು ಅನ್ನಿಸಿದರೆ ಅಚ್ಚರಿಯಿಲ್ಲ.
ಇತ್ತೀಚೆಗಿನ ವರೆಗೂ ಮಾಸ್ತಿಯವರ ಪ್ರಭಾವಕ್ಕೆೊಳಗಾಗದ ಸಾಹಿತಿಗಳೇ ಇಲ್ಲವೆನ್ನುವಷ್ಟು ದೊಡ್ಡ ವ್ಯಕ್ತಿತ್ವ ಮಾಸ್ತಿಯವರದ್ದು. ಅವರ ಸಾಮರಸ್ಯದ ದೃಷ್ಟಿಕೋನ ಕೆಲವು ಬಾರಿ ಭಿನ್ನಾಭಿಪ್ರಾಯಗಳನ್ನು ಸಾಧ್ಯವಾಗಿಸುವಂಥಾದ್ದು. ಪುರಾಣಗಳ ಕುರಿತು ಆಧುನಿಕರಾಗಿ, ವಿಚಾರಪರರಾಗಿ ಕಾಣುವ ಮಾಸ್ತಿ ಇನ್ನು ಕೆಲವೆಡೆ ಸಾಂಪ್ರದಾಯಿಕ ಹಿಂದೂ, ಬ್ರಾಹ್ಮಣರಾಗಿ ತೋರಿಸಿಕೊಳ್ಳುತ್ತಾರೆ. ಅವರಿಗೆ ಇದರಲ್ಲಿ ಅಳುಕಿಲ್ಲ-ಅವರನ್ನು ಮೆಚ್ಚುವವರಿಗೂ. ಮಾಸ್ತಿಯವರ ಈ ಸದಾಚಾರ ಅನಂತಮೂರ್ತಿಯವರಿಗೆ ಹಿಡಿಸಿದೆಯೆಂದು ಅವರ ಉಪನ್ಯಾಸದಲ್ಲಿ ಸ್ಪಷ್ಟವಾಗುತ್ತದೆ.
ಬೇಂದ್ರೆ ಕನ್ನಡದ ಅದರಲ್ಲೂ ನವ್ಯಕಾಲದ ಎಲ್ಲರಿಗೂ ಅಭಿಮಾನದ ಕವಿ. ಬೇಂದ್ರೆಯವರ ಅನೇಕ ಕವಿತೆಗಳ ಬಗ್ಗೆ ಅನಂತಮೂರ್ತಿ ಬೇರೆ ಬೇರೆ ಸಂದರ್ಭಗಳಲ್ಲಿ ವಿಮರ್ಶಿಸಿದ್ದಾರೆ. ಬೇಂದ್ರೆಯವರ ಕುರಿತು ತಾನು ಹಿಂದೊಮ್ಮೆ ನೀಡಿದ ಅಭಿಪ್ರಾಯವು (‘ಅರಳುಮರಳಿಗಿಂತ ಹಿಂದಿನ ಬೇಂದ್ರೆ ಗ್ರೇಟ್ ಪೋಯೆಟ್’) ತಪ್ಪೆಂದು ಮತ್ತೊಂದು ಸಂದರ್ಭದಲ್ಲಿ ಒಪ್ಪಿಕೊಳ್ಳುವುದಕ್ಕೆ ಅನಂತಮೂರ್ತಿಯವರಿಗೆ ಮುಜುಗರವಿಲ್ಲ. ಆದರೆ ಅವರು ಹೇಳುವ ‘ಕನ್ನಡದ ಗ್ರೇಟೆಸ್ಟ್ ಕವಿ ಬೇಂದ್ರೆ’ ಎನ್ನುವಾಗ ನಾವು ಪ್ರಜ್ಞಾವಂತಿಕೆಯಿಂದ ‘ಕನ್ನಡ’ ಎಂಬ ಪದಕ್ಕೆ ಮೊದಲು ‘ಆಧುನಿಕ’ ಎಂದು ಸೇರಿಸಿಕೊಂಡು ಓದುವುದು ಒಳ್ಳೆಯದು. ಬೇಂದ್ರೆಯವರ ಬಗ್ಗೆ ಹೇಳುವಾಗ ಅನಂತಮೂರ್ತಿ ಗುರುತಿಸಿ ಹೇಳಿದ ‘ಅಂತರ್‌ರಾಷ್ಟ್ರೀಯ’ ಮತ್ತು ‘ಜಾಗತಿಕ’ ಇವುಗಳ ನಡುವಣ ವ್ಯತ್ಯಾಸ ಸಹಜವಾಗಿಯೇ ‘ಹೀ ವಾಸ್ ಎ ವರ್ಲ್ಡ್ ಸಿಟಿಝೆನ್ ನಾಟ್ ಇಂಟರ್‌ನ್ಯಾಶನಲ್’ ಎಂದು ಹೇಳಲ್ಪಟ್ಟಿದೆ.
ಕಾರಂತರ ಮೇರು ವ್ಯಕ್ತಿತ್ವವನ್ನು ಅನಂತಮೂರ್ತಿ ಇತರ ಹತ್ತಾರು ಬರೆಹಗಳಲ್ಲಿ ಹೇಳಿದ್ದು ಇಲ್ಲೂ ಅವು ಮತ್ತೆ ಬಂದಿವೆ. ಅವರು ಹೇಳುವ ‘ನಮ್ಮ ಯಾವ ದೊಡ್ಡ ಸಾಹಿತಿಯೂ ಊರಿನ ಜನರ ಕೆಲಸವನ್ನು ಹಿಡಿದುಕೊಂಡು ಪೇಟೆಗೆ ಬರುವುದನ್ನು ನಾನು ನೋಡಿರಲಿಲ್ಲ’ ಎಂಬ ಮಾತು ಕಾರಂತರನ್ನು ಮಹಾಮಾನವತಾವಾದಿಯಾಗಿ ಮತ್ತು ನಿಖರವಾಗಿ ತೋರಿಸಿದೆ. ಅನಂತಮೂರ್ತಿ ಹೀಗೆ ಹೇಳುವಾಗ ಅವರಲ್ಲಿ ಒಂದು ವಿಷಾದವೂ ವ್ಯಕ್ತವಾಗುತ್ತದೆ; ಇದು ಇತರರಲ್ಲಿ ಯಾಕಿಲ್ಲ ಎಂಬ ಪ್ರಶ್ನೆಗೆ ಅವರು ಉತ್ತರಿಸಹೋಗಿಲ್ಲ. ಕಾರಂತರ ವಿರಾಟ್ ರೂಪದ ಚಿತ್ರ ಅನಂತಮೂರ್ತಿಯವರಲ್ಲಿ ನಲಿದಾಡುತ್ತಿದ್ದುದರಿಂದಲೇ ಅವರು ಇಷ್ಟು ಪ್ರಾಂಜಲವಾಗಿ ಅಭಿವ್ಯಕ್ತಿಸುವುದಕ್ಕೆ ಸಾಧ್ಯವಾಗಿರಬೇಕು. ಕಾರಂತರ ದೃಷ್ಟಿಯಲ್ಲಿ ಆರ್ಥಿಕತೆ, ಜಾತೀಯತೆ, ಸಾಮಾಜಿಕ ಇತರ ಹುಳುಕುಗಳು ಇವೆಲ್ಲ ಹೇಗೆ ಬರೆಹದಲ್ಲಿ ಮೂಡಿವೆಯೆಂಬುದಕ್ಕೆ ಇಲ್ಲಿ ಉದಾಹರಣೆಗಳಿವೆ. ಅನಂತಮೂರ್ತಿ ‘ಟಾಗೋರ್ ಆದ ನಂತರ ಕಾರಂತರೇ ಸಾಹಿತ್ಯಪುರುಷ ಭಾರತಕ್ಕೆ’ ಎನ್ನುತ್ತಾರೆ.
ಹೀಗೆ ಬರೆದ ಅನಂತಮೂರ್ತಿ ಕುವೆಂಪುವಿನ ಬಗ್ಗೆ ಆರಂಭಿಸುವುದೇ ‘ರವೀಂದ್ರನಾಥ್ ಟಾಗೋರ್ ಬಂಗಾಳಕ್ಕೆ ಇದ್ದ ಹಾಗೆ ಕುವೆಂಪು ನಮಗೆ-ಕರ್ನಾಟಕಕ್ಕೆ’ ಎಂಬ ವಾಕ್ಯದಿಂದ. ಕಾರಂತರ ಕುರಿತ ಲೇಖನದ ಬಳಿಕ ಕುವೆಂಪು ಕುರಿತ ಲೇಖನವಿರುವುದರಿಂದ ಕಾರಂತರ ಕುರಿತು ಅನಂತಮೂರ್ತಿ ಹೇಳಿದ (ಮತ್ತು ಮೇಲೆ ಉಲ್ಲೇಖಿಸಿದ) ಮಾತುಗಳನ್ನು ನೆನಪಿಸಿದರೆ ಟಾಗೋರರ ನೈಜ ವಾರಸುದಾರರು ಕಾರಂತರೋ ಕುವೆಂಪುವೋ ಎಂಬ ಬಗ್ಗೆ ಇಲ್ಲಿ ಉತ್ತರ ಸಿಗುವುದಿಲ್ಲ. ಇಲ್ಲೇ ಒಂದು ಮಾತನ್ನು ಹೇಳಬೇಕು: ಅನಂತಮೂರ್ತಿ ವಿವಾದವನ್ನು ಮೇಲೆಳೆದುಕೊಳ್ಳುವುದಿಲ್ಲ. ಸಾಮಾನ್ಯವಾಗಿ ಎಲ್ಲ ಕಡೆ ಒಪ್ಪಿತವಾಗುವಂತಿರುತ್ತವೆ ಅವರ ಅಭಿವ್ಯಕ್ತಿ, ಅಭಿಪ್ರಾಯಗಳು. ಅವರು ಕುವೆಂಪುವನ್ನೂ ಅನುಸರಿಸುತ್ತಾರೆ; ಕಾರಂತರನ್ನೂ, ಪುತಿನ ಅವರನ್ನೂ. ಈ ವಾಕ್ಯವನ್ನು ಗಮನಿಸಿ: ‘ಇವನು ಹೋಗಿ ಒಂದು ಪೊದೆಯಲ್ಲಿ ಕೂತು ಹೇಗೆ ಶಬ್ದ ಮಾಡುತ್ತಾನೆಂದರೆ, ಒಂದು ಗಂಡುಕೋಳಿ ಹೆಣ್ಣುಕೋಳಿಯನ್ನು ಸಂಬಂಧಕ್ಕೆ ಕರೆಯುವಾಗ, ಸಂಯೋಗಕ್ಕೆ ಕರೆಯುವಾಗ..’ ಎನ್ನುತ್ತಾರೆಯೇ ಹೊರತು ‘ಸಂಭೋಗಕ್ಕೆ’ ಎಂಬ ಪದವನ್ನು ಬಳಸುವುದಿಲ್ಲ. ಈ ಪದ ಮಡಿವಂತಿಕೆ ಸಂಸ್ಕಾರದ ಲೇಖಕರಿಗಿರುವುದು ಸಹಜವೂ ಹೌದು; ಸೋಜಿಗವೂ ಹೌದು. ಅಡಿಗರ ಬಗ್ಗೆ ಅನಂತಮೂರ್ತಿ ಬಹಳಷ್ಟನ್ನು ಬರೆದಿದ್ದಾರೆ. ಅವು ಇಲ್ಲಿ ಮರುಕಳಿಸಿವೆ. ಆದರೆ ಉಪನ್ಯಾಸದ ಶೈಲಿಯು ಬಿಚ್ಚುಮನಸ್ಸಿನದ್ದಾಗಿ ಕಾಣುತ್ತದೆ. ಅಡಿಗರ ಮಾರ್ಕ್ಸಿಸ್ಟ್ ಫೇಸ್ ಬಗ್ಗೆ ಹೇಳುವಾಗ ಅವರು ಉಲ್ಲೇಖಿಸಿದ ಅಡಿಗರ ಪದ್ಯದ ‘ರಸದ ಬೀಡೊಂದನು’ ಎಂಬುದು ಮಾರ್ಕ್ಸಿಸ್ಟ್ ಫೇಸ್‌ಗೆ ಹೊರತಾದ ಉದಾರವಾದೀ ಮಧ್ಯಪಂಥವನ್ನು ಹೇಳುತ್ತಿದೆಯೇ ಎಂದನ್ನಿಸಬಹುದು.
ಪಿ. ಲಂಕೇಶ್ ಪ್ರಾಯಃ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕ್ರಾಂತಿಯೆಂಬ ಪದಪುಂಜವೇ ನಾದರೂ ಇದ್ದರೆ ಅದಕ್ಕೆ ದಾರ್ಶನಿಕರಂತೆ ಉದಿಸಿದವರು. ಅವರು ಎಂದೂ ಬಂದಣಿಕೆಯಂತೆ ಯವುದೇ ವ್ಯಕ್ತಿತ್ವಕ್ಕೆ ಅಂಟಿಕೊಂಡವರಲ್ಲವಾದ್ದರಿಂದ ಅವರನ್ನು ಒಳಗೊಳಗೇ ಮೆಚ್ಚಿಕೊಳ್ಳುವ ಭಿನ್ನ ಪಂಥದವರೂ ಅವರನ್ನು ಬಹಿರಂಗವಾಗಿ ಒಪ್ಪದೇ ಇರುತ್ತಾರೆ. ‘‘ಹಾಗಿದ್ರೂ ಚೆನ್ನಾಗಿ ಬರೆಯುತ್ತಾರೆ’’ ಎಂಬ ಒಕ್ಕಣೆಗಳೇ ಹೆಚ್ಚು. ಈ ‘ಹಾಗಿದ್ರೂ’ ಹೆಚ್ಚು ಬಾರಿ ಪುನರುಚ್ಚಾರವಾಗುತ್ತದೆ. ಅನಂತಮೂರ್ತಿ ಈ ಧಾಟಿಯಲ್ಲೇ ಲಂಕೇಶರನ್ನು ವಿವರಿಸುವುದು ಈ ಲೇಖನದ ಗೆರೆಗಳ ನಡುವೆ ಕಂಡುಬಂದರೆ ಆಶ್ಚರ್ಯವಿಲ್ಲ. ಆದರೂ ಲಂಕೇಶರನ್ನು ಅವರು ‘ಜೀನಿಯಸ್’ ಎಂದು ಹೊಗಳುವುದು ಪ್ರಾಮಾಣಿಕವಾದದ್ದೇ. ತೇಜಸ್ವಿ ಅನಂತಮೂರ್ತಿಯವರ ಓರಗೆಯವರೇ. ಆ ಕಾಲದಲ್ಲಿ ಲಂಕೇಶ್-ಅನಂತಮೂರ್ತಿ-ತೇಜಸ್ವಿ ಒಂದು ಭಿನ್ನ ಗುಣಗಳ ಆದರೆ ದೈತ್ಯ ಪ್ರತಿಭೆಯ ತ್ರಿಕೋಣಗಳು. ನ್ಯುರೋಟಿಕ್ ಮೈಂಡಿನ ಕುರಿತು, ಸಮಾಜವಾದದ ಕುರಿತು, ಮಡಿ ಮೈಲಿಗೆ ಕುರಿತು ತೇಜಸ್ವಿ ಹೇಳುವ ಬಗೆಯನ್ನು ಅನಂತಮೂರ್ತಿಯವರು ಅದ್ಭುತವಾಗಿ ಹಿಡಿದಿಡುತ್ತಾರೆ. ರಾಮಾನುಜನ್, ಕಾರ್ನಾಡ್, ಕಂಬಾರ ಇವರೊಂದಿಗಿನ ಒಡನಾಟವು ಅನಂತಮೂರ್ತಿಯವರ ಆತ್ಮೀಯ ನೆಲೆಯನ್ನು ಪರಿಚಯಿಸುತ್ತದೆ.
ನವ್ಯ ಸಾಹಿತ್ಯ ಮತ್ತು ದಲಿತ ಸಾಹಿತ್ಯ ಎಂಬ ಎರಡು ಉಪನ್ಯಾಸಗಳಲ್ಲಿ ಅನಂತಮೂರ್ತಿ ನವೋದಯದಿಂದ ನವ್ಯಕ್ಕೆ ಸಾಹಿತ್ಯ ಹೊರಳಿದ ಸಂಧಿಕಾಲವನ್ನು ಮತ್ತು ಅದು ಮುಂದುವರಿದ ರೀತಿಯನ್ನು ವಿವರಿಸುತ್ತಾರೆ. ಅವರು ಹಿಂದಿನ ಲೇಖನದಲ್ಲಿ ಪ್ರಸ್ತಾವಿಸದ ಸಾಹಿತಿಗಳು ಇಲ್ಲಿ ಉಲ್ಲೇಖಿತರಾಗಿದ್ದಾರೆ. ಎಕ್ಕುಂಡಿಯವರ ಬಗ್ಗೆ ಹೇಳುತ್ತ ಅನಂತಮೂರ್ತಿ ಹೇಳುವ ‘ಈ ರೀತಿಯ ಕಹಿಯಾದ ಸಾಲುಗಳನ್ನು ಬರೆಯುವುದನ್ನು ಕಲಿಯಬೇಕು’ ಎಂಬ ಮಾತನ್ನು ಈಗ ಪ್ರಚಲಿತವಿರುವ ಸಾಹಿತಿಗಳು ಗುಣಾತ್ಮಕವಾಗಿ ಕಂಡು ಪ್ರಾಮಾಣಿಕವಾಗಿ ವ್ಯವಹರಿಸಿದರೆ ಒಳ್ಳೆಯದು. ಅನಂತಮೂರ್ತಿ ನವ್ಯದ ಹರಿಕಾರರಲ್ಲದಿದ್ದರೂ ಅದರ ಪ್ರಮುಖರು. ನಿರಾಕರಣೆ ಮತ್ತು ಹುಡುಕಾಟದ ರೂಪಕಗಳನ್ನು ಶಕ್ತವಾಗಿ ಅಡಿಗರ ಸಂದರ್ಭದಲ್ಲೂ ಆನಂತರದವರಲ್ಲೂ ಅವರು ಕಂಡಿದ್ದಾರೆ. ಗಂಗಾಧರ ಚಿತ್ತಾಲರ ಬಗ್ಗೆ ‘ನಮ್ಮ ಕವಿಗಳಲ್ಲಿ ಯಾರೂ ನೋವಿನ ಬಗ್ಗೆ, ದುಃಖದ ಬಗ್ಗೆ ಯಾವ ಉತ್ತರವೂ ಸಿಗದ, ಯಾವ ಪರ್ಯಾಯವೂ ಇಲ್ಲದ, ಮನಸ್ಸಿಗೆ ಯಾವ ಸಮಾಧಾನವೂ ತರಲಾರದ ದುಃಖದ ಬಗ್ಗೆ ಬರೆದಿರುವ ಕವಿ ಅಂದರೆ ಗಂಗಾಧರ ಚಿತ್ತಾಲರು...’ ಎಂದು ಹೇಳುತ್ತ ‘ಹಾಗೆ ಬರೆದವರು ಮತ್ತೊಬ್ಬರಿಲ್ಲ ಅಂತ ಹೇಳಬಹುದು’ ಎನ್ನುವಾಗ ಅವರು ಬೇಂದ್ರೆಯವರನ್ನು ಮರೆತರೇ ಎಂಬ ಪ್ರಶ್ನೆ ಹುಟ್ಟಬಹುದು. ಮುಂದೆ ದಲಿತ ಸಾಹಿತ್ಯದ ಕುರಿತು ಸ್ಥೂಲವಾಗಿಯೇ ಮೌಲ್ಯಮಾಪನ ಮಾಡಿದ್ದಾರೆ. ಸಿದ್ಧಲಿಂಗಯ್ಯನವರ ಕುರಿತು ಹೇಳಿದ್ದಾರೆ; ಆದರೆ ದೇವನೂರರ ಬಗ್ಗೆ ಇನ್ನಷ್ಟು ಹೇಳಬಹುದಿತ್ತೇನೋ?
ಈ ಕೃತಿಯಲ್ಲಿ ಇನ್ನು ಕೆಲವು ಅಂಶಗಳನ್ನು ಕಾಣಬಹುದು: ಅನಂತಮೂರ್ತಿ ನವ್ಯದ, ಪರಿಸರ ಚಳವಳಿಯ ಮತ್ತು ಇನ್ನು ಅನೇಕ ಸಂದರ್ಭಗಳನ್ನು ಮೆಲುಕುಹಾಕುತ್ತ ‘ನಾನು ಶುರು ಮಾಡಿದೆ’, ಅಥವಾ ‘ನನ್ನ ನಂತರ ಅವರು ಅನುಸರಿಸಿದರು’ ಮುಂತಾಗಿ ಹೇಳುವಾಗ ಈ ‘ನಾನು’ ಯಾರನ್ನೂ ಬಿಡಲೊಲ್ಲದು ಅನ್ನಿಸುತ್ತದೆ. ಹಾಗೆಯೇ ಮಾತಿನ ಮಿತಿ ಗೊತ್ತಾಗುವುದು ಸಹಜವಾದ ಆದರೆ ‘ಅಬ್ರಪ್ಟ್’ ಆಗಿ ಕೊನೆಗೊಳಿಸುವ ವಿಧಾನದಿಂದಾಗಿ. ಇನ್ನೂ ಏನೋ ಹೇಳುತ್ತಾರೆ, ಹೇಳಬಹುದಿತ್ತು ಎಂಬಲ್ಲಿಗೆ ಪ್ರತೀ ಉಪನ್ಯಾಸವೂ ಮುಗಿಯುತ್ತದೆ. ಇದು ದೋಷವೋ ವೈಶಿಷ್ಟ್ಯವೋ ಗೊತ್ತಾಗುವುದಿಲ್ಲ. ಇದನ್ನು ಇನ್ನಷ್ಟು ವಿಷದಪಡಿಸಬೇಕಾದರೆ 1970ರ ದಶಕದಲ್ಲಿ ಬೇಂದ್ರೆಯವರು ಅವಿಭಜಿತ ದಕ್ಷಿಣಕನ್ನಡದಲ್ಲಿ ಕು.ಶಿ.ಹರಿದಾಸ ಭಟ್ಟರ ಸಾರಥ್ಯದಲ್ಲಿ ನೀಡಿದ ಹತ್ತು ಉಪನ್ಯಾಸಗಳ ಪುಸ್ತಕರೂಪವಾದ ‘ಮಾತೆಲ್ಲ ಜ್ಯೋತಿ’ ಕೃತಿಯನ್ನು ಗಮನಿಸಬಹುದು. ಸಾಪೇಕ್ಷತೆ ಯಾವತ್ತೂ ಆರೋಗ್ಯಕಾರಿ.