ಪಂಜರದ ಪಕ್ಷಿಗಳು
ಒಂದು ಮಕ್ಕಳ ಕವಿತೆಯು ‘‘ನಾನು ಪಂಜರದ ಪಕ್ಷಿ, ನನಗೆ ಇನ್ನಾರು ಗತಿ, ಕೇಳಬಯಸುವಿಯೇನು ನನ್ನ ಕತೆಯ?’’ ಎಂದು ಆರಂಭವಾಗುತ್ತದೆ. ಅದು ತನ್ನಿಚ್ಛೆಗೆ ವಿರುದ್ಧವಾಗಿ ಸ್ವಾತಂತ್ರ್ಯವನ್ನು ಕಳೆದುಕೊಂಡು ಪಂಜರದಲ್ಲಿ ಬಂಧಿತವಾದ ಒಂದು ಪಕ್ಷಿಯ ಕತೆ. ಅದು ಪಾರಾಯಿತೇ ಇಲ್ಲವೇ ಗೊತ್ತಿಲ್ಲ; ಏಕೆಂದರೆ ಕವಿತೆಯ ಕೊನೆ ನೆನಪಾಗುವುದಿಲ್ಲ. ಪಂಜರವು ಬಂಗಾರದ್ದಾದರೂ ಪಂಜರವೇ, ಕಬ್ಬಿಣ, ಕೊನೆಗೆ ಮರದ್ದಾದರೂ ಪಂಜರ ಪಂಜರವೇ. ಅದು ಒಡೆಯನ ಸ್ಥಾನಮಾನವನ್ನು ಅವಲಂಬಿಸಿರುತ್ತದೆ. ಬಂಧನ ಎಂದಿದ್ದರೂ ಬಂಧನವೇ. ಪಂಜರದೊಳಗಿದ್ದೂ ತನ್ನಿಷ್ಟಕ್ಕೆ ವಿರುದ್ಧವಾಗಿ ಬಂಧಿತವಾಗುವುದು ಬೇರೆ; ಸ್ವಯಿಚ್ಛೆಯಿಂದಲೇ ಊಳಿಗದ ಆಳಾಗಿ ಬಂಧನವನ್ನು ಇಷ್ಟಪಟ್ಟು ಅನುಭವಿಸಿಕೊಂಡು ತನಗಿಷ್ಟವಿಲ್ಲದೆಯೂ ತನ್ನೊಡೆಯನನ್ನು ಸಂಪ್ರೀತನನ್ನಾಗಿಸಲು ಪರರನ್ನು ಹಿಂಸಿಸುವುದು ಬೇರೆ. ಇಂತಹ ಬಾಡಿಗೆ ಬಂಟರು, ಗುಲಾಮರು ಕಾನೂನಿನಲ್ಲಿ ಸ್ಥಾನಮಾನವನ್ನು ಹೊಂದಿದರಂತೂ ಬಲಿಪಶುವಿನ, ಶೋಷಿತನ ಪಾಡು ದಯನೀಯ.
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ನೀಡುವ ಆದೇಶದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ‘Caged Bird’ ಅಥವಾ ‘ಪಂಜರದ ಪಕ್ಷಿ’ ಎಂಬ ಪದವನ್ನು ಬಳಸಿ, ಸಿಬಿಐ ಎಂದು ಪ್ರಸಿದ್ಧವಾಗಿರುವ ಕೇಂದ್ರ ತನಿಖಾ ಮಂಡಳಿಯು ಕೇಂದ್ರ ಸರಕಾರದ ಊಳಿಗದಲ್ಲಿದ್ದ, ಅಧೀನಕ್ಕಿದ್ದ ಮಾತ್ರಕ್ಕೆ ಕೇಂದ್ರದ ಪಂಜರದಲ್ಲಿರುವ ಹಕ್ಕಿಯಾಗಿರಬಾರದೆಂಬ ಎಚ್ಚರಿಕೆಯನ್ನು ನೀಡಿದೆ. ಇಂತಹ ಟೀಕೆಗಳು ಬಹಳ ಕಾಲದಲ್ಲಿದ್ದರೂ ಈಗ ಕೇಂದ್ರ ಸರಕಾರವು ಸಿಬಿಐ ಮತ್ತಿತರ ಕೇಂದ್ರಾಧೀನ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿರುವುದು ಬಹಿರಂಗವಾಗಿ ಕಾಣಿಸುತ್ತಿರುವುದರಿಂದ ಚರ್ಚೆಯು ಮೇಲ್ಮೈಗೆ ಬಂದಿದೆ. ಕೆಲವೇ ಸಮಯದ ಹಿಂದೆ ಸರ್ವೋಚ್ಚ ನ್ಯಾಯಾಲಯವು ‘ಈ.ಡಿ.’ ಎಂದು ಬಳಕೆಯಲ್ಲಿ ಪ್ರಸಿದ್ಧವಾಗಿರುವ ‘ಜಾರಿ ನಿರ್ದೇಶನಾಲಯ’ ಕುರಿತೂ ಇದೇ ರೀತಿಯ ಟೀಕೆಯನ್ನು ಮಾಡಿತ್ತು. ಕೇಂದ್ರ ಸರಕಾರವು ತನ್ನನ್ನು ಟೀಕಿಸುವ, ವಿರೋಧಿಸುವ, ರಾಜಕಾರಣಿಗಳನ್ನು, ಸಂಸ್ಥೆಗಳನ್ನು, (ಇತರರನ್ನೂ) ಈ ಮತ್ತು ‘ಎನ್‌ಐಎ’ ಎನ್ನುವ ಕೇಂದ್ರ ತನಿಖಾ ದಳ, ಆಯಕರ ಇಲಾಖೆ ಮುಂತಾದ ಇಂತಹ ಕೇಂದ್ರ ಇಲಾಖೆಗಳ ಮೂಲಕ ಭ್ರಷ್ಟಾಚಾರವನ್ನು ನಿಯಂತ್ರಿಸುವ ನೆಪದಲ್ಲಿ ಬೆದರಿಸುವ, ಅನಗತ್ಯವಾಗಿ ದಂಡಿಸುವ, ಶಕ್ತಿ ಪ್ರಯೋಗದ ಕಾಯಕದಲ್ಲಿ ತೊಡಗಿದೆ. ಅನೇಕರು ಇದಕ್ಕೆ ತುತ್ತಾಗಿ ನಲುಗಿದ್ದಾರೆ. ಕೆಲವು ಮಂದಿ ಸದ್ದಿಲ್ಲದೆ ಆಡಳಿತಪಕ್ಷಕ್ಕೆ ಶರಣಾಗಿ ಮುಂದಿನ ದಂಡನೆಯಿಂದ ಪಾರಾಗಿದ್ದಾರೆ.
ಪ್ರಾಣಿ-ಪಕ್ಷಿಗಳನ್ನು ಅವರ ಸುಖಕ್ಕಾಗಿ ಯಾರೂ ತಂದು ಸಾಕುವುದಿಲ್ಲ. ಅವೆಲ್ಲ ನಮ್ಮ ಸುಖಕ್ಕೆ, ಪ್ರತಿಷ್ಠೆಗೆ ಮತ್ತು ಅನುಕೂಲಕ್ಕೆ. ಅಂಗರಕ್ಷಕರೂ ಹೀಗೆಯೇ. ಅವರ ಪ್ರಾಣವನ್ನು ತೆತ್ತು ಒಡೆಯನನ್ನು ರಕ್ಷಿಸಬೇಕೆಂಬ ಆಣತಿಯ ಆಳುಗಳು. ಗಡಿಯ ಸೈನಿಕರು? ಅವರೂ ಅಷ್ಟೇ: ಗಡಿಯನ್ನು ಕಾದು ವೈರಿಗಳು ಒಳಗೆ ನುಸುಳದಂತೆ ಮತ್ತು ಹೋರಾಟ ಅನಿವಾರ್ಯವಾದರೆ ತಮ್ಮ ಜೀವವನ್ನು ಮುಡಿಪಾಗಿಟ್ಟು ದೇಶವನ್ನು ಕಾಯುವವರು. ಉಳಿದ ಮೀಸಲು/ಭದ್ರತಾಪಡೆಗಳು, ಪೊಲೀಸರು, ದೇಶದ ಆಂತರಿಕ ಭದ್ರತೆಯನ್ನು ಕಾಪಾಡುವುದಕ್ಕಾಗಿ ಮತ್ತು ಕಾನೂನು ಹಾಗೂ ಸುವ್ಯವಸ್ಥೆಗಾಗಿ ನೇಮಿಸಲ್ಪಟ್ಟವರು.
ಇವರೆಲ್ಲರೂ ಮನುಷ್ಯರೇ. ಆದ್ದರಿಂದ ಮನುಷ್ಯ ಸಹಜ ಲೋಪದೋಷ ಗಳು ಇದ್ದೇ ಇರಬೇಕಾದವರು. ಆದರೂ ಕರ್ತವ್ಯನಿಷ್ಠೆಯೆದುರು ಯಾರೂ ಯಾವುದೂ ಸಮನಲ್ಲ ಎಂದು ದುಡಿಯಬೇಕಾದವರು. ತಮಗೆ ಆದೇಶವನ್ನು ನೀಡುವವರು ದಕ್ಷರಾದರೆ, ಪ್ರಾಮಾಣಿಕರಾದರೆ ಇಂತಹ ಎಲ್ಲ ವ್ಯವಸ್ಥೆಗಳೂ ಸರಿಯಾಗಿರುತ್ತವೆ. ತಲೆಗೆ ಮಲಿನ ನೀರು ಸುರಿದು ಕಾಲಿಗಿಳಿಯುವಾಗ ಅದು ಪರಿಶುದ್ಧವಾಗಿರಬೇಕೆಂದು ಬಯಸುವುದು ತಪ್ಪು. ಯಥಾ ರಾಜಾ ತಥಾ ಪ್ರಜಾ!
ದೇಶದಲ್ಲಿ ಕಾನೂನಿನ ರಕ್ಷಣೆಗಾಗಿ, ವ್ಯಾವಹಾರಿಕ, ದಂಡನೀಯ, ಆರ್ಥಿಕ ಅಪರಾಧಗಳನ್ನು ತನಿಖೆಮಾಡುವುದಕ್ಕಾಗಿ ಬೇರೆಬೇರೆ ವ್ಯವಸ್ಥೆಗಳಿರುತ್ತವೆ. ಆದರೆ ಭಾರತವು ಒಂದು ಒಕ್ಕೂಟ ವ್ಯವಸ್ಥೆಯ ಪ್ರಜಾತಂತ್ರ ಮತ್ತು ಅದಕ್ಕನುಗುಣವಾದ ಆಡಳಿತವನ್ನು ಹೊಂದಿರಬೇಕೆಂದು ಅಪೇಕ್ಷಿಸಲಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರವೊಂದೇ ಎಲ್ಲವನ್ನೂ ಹತೋಟಿಯಲ್ಲಿಟ್ಟುಕೊಳ್ಳಲಾಗದು. ದಕ್ಷತೆಯೆಂದರೆ ಕೇಂದ್ರಕ್ಕಷ್ಟೇ ಇದೆಯೆಂದು ನಿರೀಕ್ಷಿಸಲಾಗದು. ರಾಜ್ಯಗಳೂ ಅಷ್ಟೇ ಪರಿಣಾಮಕಾರಿಯಾಗಿ ಅಥವಾ ಅದಕ್ಕೂ ಮಿಕ್ಕಿ ಆಡಳಿತ ನಿರ್ವಹಣೆಯನ್ನು ಮಾಡಲು ಶಕ್ತವೆಂಬುದು ಗಮನಾರ್ಹ. ದೇಶದ ಪರವಾಗಿ ಜಗತ್ತಿನಲ್ಲಿ ವ್ಯವಹರಿಸುವುದು ಮತ್ತು ರಾಜ್ಯಗಳನ್ನು ಪರಸ್ಪರ ಒಗ್ಗೂಡಿಸಿಕೊಂಡು ಹೋಗುವ ಹಿರಿಯಣ್ಣತನವನ್ನಷ್ಟೇ, ಕೇಂದ್ರವೆಂದು ಸಾಮಾನ್ಯವಾಗಿ ಹೇಳುವ ಒಕ್ಕೂಟ (ಇದನ್ನು ಸಂವಿಧಾನದ ಸರಕಾರಿ ಕನ್ನಡಾನುವಾದದಲ್ಲಿ ‘ಸಂಘ’ವೆಂದು ನಮೂದಿಸಲಾಗಿದೆ!) ಸರಕಾರವು ಮಾಡಿಕೊಂಡು ಹೋಗಬೇಕಾಗಿದೆ. ಇವು ಸಂವಿಧಾನದ 246ನೇ ವಿಧಿಗೆ ಒಳಪಟ್ಟು ಏಳನೆಯ ಅನುಸೂಚಿಯಲ್ಲಿ ನಮೂದಿಸಿದ ಸಂಘಪಟ್ಟಿಯಲ್ಲಿ, ರಾಜ್ಯಪಟ್ಟಿಯಲ್ಲಿ ಹಾಗೂ ಎರಡನ್ನೂ ಒಳಗೊಂಡ ಸಮವರ್ತಿ ಪಟ್ಟಿಯಲ್ಲಿಯೂ ಇರುತ್ತವೆ. ಇದರಿಂದಾಗಿ ಭದ್ರತಾ ವ್ಯವಸ್ಥೆಯು ರಾಷ್ಟ್ರೀಯ ಮತ್ತು ರಾಜ್ಯಮಟ್ಟದಲ್ಲಿರುತ್ತವೆ. ಆದರೆ ಇವೆಲ್ಲವೂ ನ್ಯಾಯಾಲಯಗಳಲ್ಲಿ ಅಂತಿಮ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.
ಸಾಮಾನ್ಯವಾಗಿ ಯಾವುದೇ ತನಿಖೆಯ ಪ್ರಾರಂಭದ ಹಂತದಲ್ಲಿ ನ್ಯಾಯಾಲಯಗಳು ಪ್ರಕರಣಗಳನ್ನು ಆರೋಪದ ಗಂಭೀರತೆಯ ಆಧಾರದಲ್ಲಿ ಗಮನಿಸುತ್ತವೆಯೇ ಹೊರತು ಅವುಗಳನ್ನು ಆಳವಾಗಿ ಪರಿಶೀಲಿಸಲು ತೊಡಗುವುದಿಲ್ಲ. ಇದು ಅನಿವಾರ್ಯವೂ ಹೌದು. ಆಡಳಿತದ ವ್ಯವಸ್ಥೆಯೇ ಮಾಡಿದ ಆರೋಪಗಳನ್ನು ಆರಂಭದಲ್ಲೇ ಹೊಸಕಿಹಾಕಬೇಕಾದರೆ ಅಲ್ಲಿ ಸಾಕಷ್ಟು ಪ್ರಮಾದಗಳು ಮೇಲ್ನೋಟಕ್ಕೇ ಕಾಣಬೇಕು. ಇದಕ್ಕಾಗಿ ನ್ಯಾಯಾಲಯಗಳು ಆರಂಭದ ಅನುಕೂಲವನ್ನು ವಾದಿಗೆ ಅಥವಾ ತನಿಖಾ ತಂಡಗಳಿಗೆ ನೀಡುತ್ತವೆ; ಆರೋಪಿ ಅಥವಾ ಪ್ರತಿವಾದಿಗಲ್ಲ. ಈ ಸಾಧ್ಯತೆಯ ಮತ್ತು ಪರಿಸ್ಥಿತಿಯ ಅನುಕೂಲವನ್ನು ಆಡಳಿತ ಮತ್ತದರ ತನಿಖಾ ತಂಡಗಳು ಸದುಪಯೋಗ ಮಾಡಿಕೊಳ್ಳುತ್ತವೆ. ಪರಿಣಾಮವಾಗಿ ನಿರಪರಾಧಿಯೂ ಸತ್ಯ, ನ್ಯಾಯ, ಧರ್ಮ, ಕಾನೂನಿನ ಅಗ್ನಿಪರಿಕ್ಷೆಯಲ್ಲಿ ತೇರ್ಗಡೆಯಾಗಿ ಪರಿಶುದ್ಧತೆಯ ದೃಢೀಕರಣವನ್ನು ಹೊತ್ತು ಹೊರಬರಬೇಕಾದರೆ ಸಾಕಷ್ಟು ವೇಳೆ ಹಿಡಿಯುತ್ತದೆ. ಇಂದು ನಡೆಯುವ ಕಾನೂನು ವ್ಯವಹರಣೆಯನ್ನು ಗಮನಿಸಿದರೆ ಬಂಧನದಿಂದ ಜಾಮೀನು ಪಡೆದುಕೊಂಡು ಹೊರಬರುವ ಹೊತ್ತಿಗೆ ಆರೋಪಿ ತನ್ನತನವನ್ನೇ ಕಳೆದುಕೊಳ್ಳುವ ಸಾಧ್ಯತೆಯಿದೆ. ಬಂಧನ, ಅವಮಾನ ಇವನ್ನು ಕಳೆದುಕೊಂಡು ಹೊರಬರುವ ತನಕದ ಆತನ ಅವಸ್ಥೆಯನ್ನು ಪರಿಹರಿಸಲು ಸಾಧ್ಯವೇ ಇಲ್ಲದ ಸ್ಥಿತಿ ನಮ್ಮ ವ್ಯವಸ್ಥೆಯಲ್ಲಿದೆ. ಕೆಲವಾರು ಪ್ರಕರಣಗಳಲ್ಲಿ ನ್ಯಾಯಾಲಯಗಳು ವಿತ್ತೀಯ ಪರಿಹಾರವನ್ನು ನೀಡಿದರೂ ಅದು ಈ ನೋವನ್ನು ಪರಿಹರಿಸಲಾರದು. ಇದನ್ನು ಪಾರಂಪರಿಕವಾದ ವಿಧಿಬರಹವೆಂದು ಹೇಳಿ ದಾಟುವುದೇ ಸುಖ. ಇದು ಜಾಗತಿಕ ವಿದ್ಯಮಾನ. ಸಮಾಜವು ಗೌರವಿಸುವ ಮತ್ತು ನೆನಪಿಡುವ ಅನೇಕ ಮಹಾನುಭಾವರು ಇಂತಹ ನರಕಯಾತನೆಯನ್ನು ಅನುಭವಿಸಿ ಬಂದವರೇ.
ನ್ಯಾಯಾಲಯಗಳಿಲ್ಲದಿದ್ದರೆ ಏನಾಗುತ್ತಿತ್ತು? ಅವಿದ್ದರೂ ಅಷ್ಟೇ. ಸಮಕಾಲೀನವಾಗಿ ಹೇಳುವುದಾದರೆ, ರಶ್ಯ, ಚೀನಾ, ಉತ್ತರ ಕೊರಿಯಾ, ಮ್ಯಾನ್ಮಾರ್ ಮುಂತಾದ ದೇಶಗಳಲ್ಲಿರುವ ಕಬ್ಬಿಣದ ಪರದೆಯ ಪರಿಸ್ಥಿತಿ ಎಲ್ಲಕಡೆ ಇರುತ್ತಿತ್ತು. ಆದರೆ ಪ್ರಜಾಪ್ರಭುತ್ವವೆಂದು ಹೇಳಿಕೊಳ್ಳುವ ಇತರ ದೇಶಗಳಲ್ಲಿಯೂ ಈ ಪರಿಯ ತೊಳಲಾಟವು ಕಾನೂನಿನ ಮೂಲಕ ಜಾರಿಯಲ್ಲಿದೆ. ಅಮೆರಿಕವಾಗಲಿ, ಭಾರತವಾಗಲಿ, ನೆರೆಯ ಪಾಕಿಸ್ತಾನವಾಗಲಿ, ಬಾಂಗ್ಲಾದೇಶವಾಗಲಿ ಇಂತಹ ಅಕ್ರಮಗಳನ್ನು ಕಾನೂನಿನ ಹೆಸರಿನಲ್ಲಿ ಪ್ರಯೋಗಿಸುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಯಾರೂ ಇದಕ್ಕೆ ಹೊರತಲ್ಲ. ಸಿದ್ದೀಕಿ ಕಪ್ಪನ್ ಬಂಧನಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ನ್ಯಾಯಾಲಯಗಳು ಸಮಾನವಾಗಿ, ಸಮತೂಕವಾಗಿ ಈ ವಿಚಾರವನ್ನು ಗಮನಿಸುತ್ತವೆಯೆಂದನ್ನಿಸುವುದಿಲ್ಲ. ಎಲ್ಲೋ ಬೆಳ್ಳಿ ಗೆರೆಯಂತೆ ನ್ಯಾಯಾಲಯಗಳು ಒಂದಾನೊಂದು ಪ್ರಸಂಗದಲ್ಲಿ (ಕೇಜ್ರಿವಾಲ್, ಸಿಸೋಡಿಯಾ, ಸಾಯಿಬಾಬಾ ಮುಂತಾದ ಪ್ರಕರಣಗಳಲ್ಲಿ) ತೀವ್ರವಾಗಿ ಟೀಕಿಸಿದಾಗ ಪ್ರಜೆಗಳು ತಮಗೇ ಮುಕ್ತಿ ಸಿಕ್ಕಂತೆ ಸಂತೋಷಿಸುತ್ತಾರೆ.
ರಾಜ್ಯದ ಪೊಲೀಸರು ನಡೆಸುವ ತನಿಖೆಯನ್ನು ರಾಜ್ಯಗಳೇ ಕೇಂದ್ರ ತನಿಖಾ ಮಂಡಳಿಗೆ ವಹಿಸಬಹುದಾಗಿದೆ. ಕೇಂದ್ರ-ರಾಜ್ಯ ಎರಡೂ ಕಡೆ ಒಂದೇ ರಾಜಕೀಯ ಪಕ್ಷದ ಆಡಳಿತವಿರುವಲ್ಲಿ ಸಮಸ್ಯೆಯಿಲ್ಲ. ಅದು ಆರೋಪಿಯ ಅದೃಷ್ಟ-ದುರದೃಷ್ಟವನ್ನವಲಂಬಿಸುತ್ತದೆ. ಡಬಲ್ ಇಂಜಿನ್ ಎಂದು ಕರೆಯಲ್ಪಡುವ ಇಂತಹ ಜೋಡಿ ಸರಕಾರದ ಆಡಳಿತ ಬದಲಾದಾಗ ಹೊಸದಾಗಿ ಅನುಮತಿಯನ್ನು ಇಂತಹ ಸರಕಾರಗಳು ನೀಡುವುದಿಲ್ಲ. ಇನ್ನು ಕೆಲವು ಕಡೆ ಕೇಂದ್ರದಲ್ಲಿ ಒಂದು ಸರಕಾರವಿದ್ದರೆ ರಾಜ್ಯದಲ್ಲಿ ಅದನ್ನೊಪ್ಪದ ಇನ್ನೊಂದು ರಾಜಕೀಯ ಪಕ್ಷದ ಆಡಳಿತವಿರುತ್ತದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರವು ಒಪ್ಪದ ಹೊರತು ಯಾವುದೇ ಪ್ರಕರಣವನ್ನು ಕೇಂದ್ರ ತನಿಖಾ ಮಂಡಳಿಗೆ ವಹಿಸಲಾಗುವುದಿಲ್ಲ. ಆದರೆ ಡಬಲ್ ಇಂಜಿನ್ ರಾಜ್ಯ ಸರಕಾರ ನೀಡಿದ ಅನುಮತಿಯ ಅಧಿಕಾರವನ್ನು ಆನಂತರ ಬಂದ ಪ್ರತಿಪಕ್ಷದ ಸರಕಾರ ಮುಂದುವರಿಸಬೇಕಾಗಿಲ್ಲ. ಆದರೆ ಯಾವುದೇ ವೈಯಕ್ತಿಕ ಪ್ರಸಂಗದಲ್ಲಿ ನೀಡಿದ ಅನುಮತಿಯನ್ನು ಆನಂತರ ಬಂದ ಸರಕಾರ ಹಿಂದಕ್ಕೆ ಪಡೆಯಬಹುದೇ ಎಂಬುದು ಇನ್ನೂ ಸ್ಪಷ್ಟವಿಲ್ಲ. ಕರ್ನಾಟಕ ಸರಕಾರ ಡಿ.ಕೆ. ಶಿವಕುಮಾರ್ ಪ್ರಕರಣದಲ್ಲಿ ಇಂತಹ ಅನುಮತಿಯನ್ನು ಹಿಂದಕ್ಕೆ ಪಡೆದಿದೆ. ಇದನ್ನು ಪ್ರಶ್ನಿಸಲಾದ ಅರ್ಜಿಯೊಂದನ್ನು ರಾಜ್ಯ ಉಚ್ಚನ್ಯಾಯಾಲಯವು ತಾಂತ್ರಿಕ ಕಾರಣಗಳ ಆಧಾರದಲ್ಲಿ ವಜಾಮಾಡಿದ್ದರೂ ಇದರ ಭವಿಷ್ಯವನ್ನು ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ಕಾದು ನೋಡಬೇಕಾಗಿದೆ.
ನ್ಯಾಯಾಲಯಗಳು ಅನೇಕ ಬಾರಿ ಪ್ರಕರಣಗಳನ್ನು ಮಾಮೂಲು ಪೊಲೀಸ್ ವ್ಯವಸ್ಥೆಯಿಂದ ಸಿಬಿಐಗೆ ವರ್ಗಾಯಿಸುತ್ತವೆ. ಆದರೆ ಅಲ್ಲೂ ನ್ಯಾಯದ ಖಾತ್ರಿಯಿಲ್ಲ. ಇದೇ ಡಿಎನ್‌ಎಯ ಅಧಿಕಾರಿಗಳು ಅಲ್ಲೂ ಇದ್ದಾರೆ. ಸಿಬಿಐ ಹೆಚ್ಚು ದಕ್ಷವೆಂದು ಭಾವಿಸಲಾಗದು. ಸಮಸ್ಯೆಯಿರುವುದು ಸಾಂಸ್ಥಿಕ ಉಪಟಳದಲ್ಲಿ. ಸಿಬಿಐಯಲ್ಲಿರುವ ಅಧಿಕಾರಿಗಳೇನೂ ಆ ಇಲಾಖೆಗಾಗಿ ಆಕಾಶದಿಂದ ಉದುರಿಬಿದ್ದವರಲ್ಲ. ಅವರು ಇದೇ ಸಮಾಜದ, ಇದೇ ವ್ಯವಸ್ಥೆಯ ಶಿಶುಗಳು. ಸಾಮಾನ್ಯವಾಗಿ ರಾಜ್ಯದ ಪೊಲೀಸ್ ದಳದ ಅಧಿಕಾರಿಗಳೇ ಸಿಬಿಐಯಲ್ಲಿ ನೇಮಕವಾಗುತ್ತಾರೆ. ಆಗ ಅವರು ತಮ್ಮ ರಾಜ್ಯ ಸಹೋದ್ಯೋಗಿಗಳನ್ನೇ ಬಂಧಿಸಬಹುದು. ಇದು ಅಧಿಕಾರದ ಪ್ರಶ್ನೆಯೇ ಹೊರತು ದಕ್ಷತೆಯದ್ದಲ್ಲ; ಪ್ರಾಮಾಣಿಕತೆಯದ್ದೂ ಅಲ್ಲ. ನ್ಯಾಯಾಲಯಗಳು ಇದನ್ನು ಗಮನಿಸಿದಂತಿಲ್ಲ. ಸಿಬಿಐಯನ್ನು 24 ಕ್ಯಾರೆಟ್ ಎಂದೂ ಉಳಿದವು ಗಿಲಿಟೆಂದೂ ತಿಳಿಯುವುದರ ಹಿಂದೆ ಪರಿಣಾಮಕಾರೀ ತರ್ಕವಿಲ್ಲ. ನ್ಯಾಯಾಲಯಗಳು ರಾಜ್ಯ ಪೊಲೀಸ್ ವ್ಯವಸ್ಥೆಯನ್ನು ರಾಜ್ಯ ಸರಕಾರದ ಅಡಿಯಾಳೆಂದು ಭಾವಿಸುವಾಗ ಸಿಬಿಐಯನ್ನು ಕೇಂದ್ರದ ಅಡಿಯಾಳೆಂದು ಭಾವಿಸಬೇಕಲ್ಲವೇ? ಅವನ್ನು ಸ್ವತಂತ್ರವೆಂದು ಭಾವಿಸಲು ಮತ್ತು ಅಲ್ಲಿ ಅಪ್ಪಟ ನ್ಯಾಯ ಸಿಗುತ್ತದೆಂದು ಭಾವಿಸುವುದು ತಪ್ಪಲ್ಲವೇ? ವ್ಯವಸ್ಥೆಯ ದೋಷಗಳಲ್ಲಿ ಇದೂ ಒಂದು.
ರಾಜ್ಯದ ಪೊಲೀಸ್ ವ್ಯವಸ್ಥೆಯಲ್ಲಿಯೂ ಇಂತಹ ಪರಿಸ್ಥಿತಿಯಿದೆ. ಸಾಮಾನ್ಯ ಪೊಲೀಸ್ ಅಧಿಕಾರಿಗಳು ಲೋಕಾಯುಕ್ತ ಇಲಾಖೆಗೆ ವರ್ಗಾವಣೆಗೊಂಡಾಗ ಅವರಿಗೆ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವ, ಬಂಧಿಸುವ ಅಧಿಕಾರ ಪ್ರಾಪ್ತವಾಗುತ್ತದೆ. ಅವರು ಮತ್ತೆ ಸಾಮಾನ್ಯ ಪೊಲೀಸ್ ಇಲಾಖೆಗೆ ಬಂದಾಗ ಅವರೇ ಈ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳಬಾರದೆಂದೇನಿಲ್ಲ! ಸಿಬಿಐ ಕೇಂದ್ರದ ಇತರ ಇಲಾಖೆಯ (ಈ.ಡಿ., ಆಯಕರ, ಎನ್‌ಐಎ ಮುಂತಾದ) ಉದ್ಯೋಗಿಗಳನ್ನು ದಸ್ತಗಿರಿಮಾಡಿದ್ದಿದೆ.
ಆದ್ದರಿಂದ ಪ್ರಾಮಾಣಿಕತೆ ಮತ್ತು ದಕ್ಷತೆಯಿಲ್ಲದಿದ್ದರೆ ಇವು ಯಾವ ಸುಧಾರಣೆಯನ್ನೂ ತರಲು ಸಾಧ್ಯವಿಲ್ಲ. ಏಕೆಂದರೆ ಆಳುವವರಿಗೆ ದೇಶೋದ್ಧಾರಕ್ಕಿಂತಲೂ ತಮ್ಮ ಚುನಾವಣೆಯ ಭವಿಷ್ಯವೇ ಮುಖ್ಯ. ರಾಜಕೀಯದ ಕೊಳಕು ವ್ಯವಸ್ಥೆಯಲ್ಲಿ ಅವರಿಗೆ ಬೇಕಾಗುವುದು ಊಳಿಗದ ಆಳುಗಳು, ಬಾಡಿಗೆಬಂಟರು, ವಿವೇಚನಾರಹಿತ ಕಟ್ಟಪ್ಪಗಳು. ಈಗ ದೇಶದಲ್ಲಿ ನಡೆಯುವ ಅಕ್ರಮಗಳಲ್ಲಿ ರಾಜಕಾರಣಿಗಳು ಮುಖ್ಯಗಾಯಕ ರಾದರೆ ಅಧಿಕಾರಶಾಹಿ ಪಕ್ಕವಾದ್ಯ ಪ್ರವೀಣರು. ಅಂತಹವರನ್ನೇ ಆರಿಸಿ ಸಿಬಿಐಗೆ ತರಿಸಿಕೊಂಡು ಅಧಿಕಾರದ ದುರುಪಯೋಗಕ್ಕೆ ಬಳಸಿಕೊಳ್ಳುತ್ತಾರೆ. ಅಧಿಕಾರಿಗಳೂ ಅಷ್ಟೇ ಆಡಳಿತ ಬದಲಾದರೆ ಏನಾಗಬಹುದೆಂಬುದನ್ನು ಯೋಚಿಸುವುದಿಲ್ಲ. ಇಂದಿನ ದಿನ ಅವರದ್ದು. ಭವಿಷ್ಯ ಅದೃಷ್ಟದ್ದು.
ಪಂಜರದ ಪಕ್ಷಿಯೆಂದರೆ ಅಮೆರಿಕದಂತಹ ದೇಶದಲ್ಲಿ ಶೋಷಣೆ ಗೊಳಗಾದ ಜನರು. ಸ್ವತಂತ್ರ ಹಕ್ಕಿಗಳೆಂದರೆ ಬಿಳಿಯರು. ನಮ್ಮಲ್ಲಿ ಮಾತ್ರ ಪ್ರಜಾತಂತ್ರದ ವೈಪರೀತ್ಯದಿಂದಾಗಿ ಈ ಹೋಲಿಕೆಯು ಸಿಬಿಐಯಂತಹ ಘನಸಂಸ್ಥೆಗೆ ಅಂಟಿಕೊಂಡಿದೆ. ಅದನ್ನು ತೊಳೆದುಕೊಳ್ಳಲು ಕಷ್ಟವಿದೆ. ಏಕೆಂದರೆ ಈ ದೇಶದಲ್ಲಿ ಹೆಚ್ಚಿನವರು ಭ್ರಷ್ಟಭಾರತೀಯರು.