ಸಂವಿಧಾನ -75

ಏನೂ ಸಾಧಿಸದಿದ್ದರೂ 75 ವರ್ಷಗಳ ಬದುಕೇ ಒಬ್ಬ ವ್ಯಕ್ತಿಯ ಜೀವನದಲ್ಲಿ ದೊಡ್ಡ ಸಾಧನೆ. ಅದನ್ನು ಹಲವಾರು ರೀತಿಯಲ್ಲಿ ಆಚರಿಸಬಹುದು. ಮನುಷ್ಯ ಹುಟ್ಟುಹಬ್ಬದ ಆಚರಣೆಯಲ್ಲಿ ಸುಖ ಕಾಣುವವನಾದ್ದರಿಂದ ಅವೆಲ್ಲ ಹಳೆಯ ಫರ್ಲಾಂಗು ಕಲ್ಲಿನ ಹಾಗೆ ಚಿಕ್ಕ ಗುರುತಿನೊಂದಿಗೆ ಊರುತ್ತ, ಬೆಳ್ಳಿ, ಸುವರ್ಣ, ವಜ್ರ, ಪ್ಲಾಟಿನಂ, ಕೊನೆಗೆ ಶತಮಾನದ ಆಚರಣೆಗಳು ಭದ್ರವಾಗಿ ಊರಲ್ಪಟ್ಟ ಮೈಲಿಗಲ್ಲಿನಂತೆ ಕಾಣುತ್ತವೆ.
ಇನ್ನೊಂದಷ್ಟು ದಿನ. 2024ರ ಗಡಿ ದಾಟಿದಂತೆಲ್ಲ ಸಂವಿಧಾನವು 75 ಶಿಶಿರಗಳನ್ನು ದಾಟಿತೆಂಬುದನ್ನು ಮರೆಯುತ್ತೇವೆ. ಅವಸರದಲ್ಲಿ ಈ ಪ್ಲಾಟಿನಂ ಮೈಲಿಗಲ್ಲನ್ನು ನೆನಪುಮಾಡಿಕೊಳ್ಳಬಹುದು. ಶತಮಾನಕ್ಕಿಂತ ಕಡಿಮೆ; ವಜ್ರಕ್ಕಿಂತ ಹೆಚ್ಚು!
ಒಂದು ಮಹತ್ವದ, ಆದರೆ ಮರೆಯಬಾರದ, ಪ್ರಸಂಗದೊಂದಿಗೆ ಸಂವಿಧಾನವನ್ನು ಮೆಲುಕುಹಾಕಬಹುದು; ಸಂವಿಧಾನದ 219ನೇ ಅನುಚ್ಛೇದವು ‘‘ಉಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಂಡ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಜ್ಯದ ರಾಜ್ಯಪಾಲ ಅಥವಾ ಅವನಿಂದ ಆ ಬಗ್ಗೆ ನೇಮಕಗೊಂಡ ಇತರ ವ್ಯಕ್ತಿಯ ಮುಂದೆ ಮೂರನೆಯ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಗನುಸಾರವಾಗಿ ಪ್ರಮಾಣವಚನ ಅಥವಾ ದೃಢೀಕರಣವನ್ನು ಮಾಡತಕ್ಕುದು ಮತ್ತು ಅದಕ್ಕೆ ತನ್ನ ರುಜು ಹಾಕತಕ್ಕುದು.’’ ಎಂದು ಹೇಳುತ್ತದೆ. (ಇಂಗ್ಲಿಷಿನ ‘Judges’ ಎಂಬುದು ನ್ಯಾಯಾಧೀಶರು ಎಂದಾಗಬೇಕು; ಆಗಿದೆ. ಆದರೆ ‘Judges’ ಎಂಬುದು ನ್ಯಾಯಾಧೀಶನು ಎಂಬ, ಮತ್ತು ‘he’ ಎಂಬ ಪದವು ಅವನಿಂದ ಎಂದು ಭಾಷಾಂತರಗೊಂಡಿದೆ. ಇಂಗ್ಲಿಷಿನಲ್ಲಿ ಏಕವಚನ ಬಹುವಚನ ಪ್ರಯೋಗವು ಸಂಖ್ಯೆಯನ್ನವಲಂಬಿಸಿದರೆ ಕನ್ನಡದಲ್ಲಿ ಅದು ಮನ್ನಣೆಯನ್ನು, ಸ್ಥಾನ-ಮಾನವನ್ನು ಸೂಚಿಸುತ್ತದೆ. ಈ ದೃಷ್ಟಿಯಿಂದ ‘ನ್ಯಾಯಾಧೀಶರು’ ಮತ್ತು ‘ಅವರಿಂದ’ ಎಂದು ಭಾಷಾಂತರಗೊಳ್ಳಬೇಕಿತ್ತು; ಇರಲಿ. 3ನೇ ಅನುಸೂಚಿಯ 8ನೇ ಕ್ರಮಾಂಕದಲ್ಲಿ ಉಲ್ಲೇಖಿಸಲಾದ ನಮೂನೆಯು ಉಚ್ಚ ನ್ಯಾಯಾಲಯದ ಮುಖ್ಯ/ನ್ಯಾಯಾಧೀಶರ ಪ್ರಮಾಣವಚನವನ್ನು ತನ್ನ ಅಧಿಕೃತ ಕನ್ನಡ ಆವೃತ್ತಿಯಲ್ಲಿ ಹೀಗೆ ನಿರೂಪಿಸಿದೆ (ಇದು ಭಾರತೀಯ ಅಥವಾ ಕರ್ನಾಟಕ ಆಡಳಿತ ಸೇವೆಯ ಅನುವಾದವಾದ್ದರಿಂದ ತಪ್ಪುಗಳಿಗೆ ಕ್ಷಮೆಯಿರಲಿ!):
‘‘... ಎಂಬ ಹೆಸರಿನವನಾದ ನಾನು ...ಲ್ಲಿ (ಅಥವಾ ...ದ)ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶನಾಗಿ (ಅಥವಾ ನ್ಯಾಯಾಧೀಶನಾಗಿ) ನೇಮಕಗೊಂಡವನಾಗಿ, ಕಾನೂನು ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನಕ್ಕೆ ಸತ್ಯ, ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು ಮತ್ತು ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು ಯುಕ್ತನಾಗಿ ಮತ್ತು ಶ್ರದ್ಧಾಪೂರ್ವಕವಾಗಿ ಮತ್ತು ನನ್ನ ಸಾಮರ್ಥ್ಯ, ಜ್ಞಾನ ಮತ್ತು ವಿವೇಚನೆ ಇರುವಷ್ಟರ ಮಟ್ಟಿಗೆ ನನ್ನ ಪದದ ಕರ್ತವ್ಯಗಳನ್ನು ಭಯ ಮತ್ತು ಪಕ್ಷಪಾತ, ಮಮತೆ ಅಥವಾ ದ್ವೇಷ ಇಲ್ಲದೆಯೇ ನೆರವೇರಿಸುತ್ತೇನೆಂದು, ಸಂವಿಧಾನವನ್ನು ಮತ್ತು ಕಾನೂನನ್ನು ಎತ್ತಿಹಿಡಿಯುತ್ತೇನೆಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ/ಶ್ರದ್ಧಾಪೂರ್ವಕವಾಗಿ ದೃಢೀಕರಣ ಮಾಡುತ್ತೇನೆ’’.
ಈ ಪ್ರಮಾಣವಚನವನ್ನು ಈ ರೀತಿ ನೇಮಕಗೊಳ್ಳದವನೂ ಮಾಡಬಹುದು; ಮಾಡಬೇಕಾದು ಆತನ ಕರ್ತವ್ಯ. ಯಾವ ಪದಕ್ಕೆ (ಹುದ್ದೆಗೆ) ನೇಮಕಗೊಂಡವನೆಂಬುದು ಮುಖ್ಯವಲ್ಲ. ಅದರಲ್ಲಿ ಇರುವ/ಬರುವ ‘‘ಕಾನೂನು ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನಕ್ಕೆ ಸತ್ಯ, ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು ಮತ್ತು ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು’’ಹಾಗೂ ‘‘ನನ್ನ ಸಾಮರ್ಥ್ಯ, ಜ್ಞಾನ ಮತ್ತು ವಿವೇಚನೆ ಇರುವಷ್ಟರ ಮಟ್ಟಿಗೆ ನನ್ನ ಪದದ ಕರ್ತವ್ಯಗಳನ್ನು ಭಯ ಮತ್ತು ಪಕ್ಷಪಾತ, ಮಮತೆ ಅಥವಾ ದ್ವೇಷ ಇಲ್ಲದೆಯೇ ನೆರವೇರಿಸುತ್ತೇನೆಂದು’’ ಮತ್ತು ‘‘ಸಂವಿಧಾನವನ್ನು ಮತ್ತು ಕಾನೂನನ್ನು ಎತ್ತಿಹಿಡಿಯುತ್ತೇನೆಂದು’’ ಎಂಬ ಪದಗಳು ನೇಮಕಗೊಂಡವನ ಕರ್ತವ್ಯವನ್ನು ನಿರೂಪಿಸುತ್ತದೆ.
ಹೀಗೆ ನೇಮಕಗೊಂಡವನು ಕಾನೂನನ್ನು ತಿಳಿದುಕೊಂಡವನು ಮಾತ್ರವಲ್ಲ, ಅದರಲ್ಲಿ ಪರಿಣತ ಅಥವಾ ಅನುಭವಿ ಎಂಬುದು ಸ್ವಯಂವೇದ್ಯ. ಇಲ್ಲವಾದರೆ ನ್ಯಾಯದ ತಕ್ಕಡಿಯನ್ನು ಕಾನೂನಿನನ್ವಯ (ಅಥವಾ ಅದನ್ನು ಮೀರದೆ) ನೀಡುವುದಾದರೂ ಹೇಗೆ?
ಈಚೆಗೆ ಉತ್ತರಪ್ರದೇಶದ ಅಲ್ಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ವಿಶ್ವ ಹಿಂದೂ ಪರಿಷತ್ (ಪ್ರಾ)ಯೋಜಿಸಿದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತ ಹಿಂದೂಗಳು ಬಹುಸಂಖ್ಯಾಕರು. ಅವರು ಹೇಳಿದಂತೆ ಅಥವಾ ಆದೇಶಿಸಿದಂತೆ ಇತರರು (ಅವರು ಅಲ್ಪಸಂಖ್ಯಾಕ ಮುಸ್ಲಿಮರನ್ನು ಉದ್ದೇಶಿಸಿದ್ದರು!) ಬದುಕಬೇಕಾಗುತ್ತದೆಂದು ಹೇಳಿದರು. ಇದಕ್ಕೆ ಅವರಿಗೆ ಅಲ್ಲಿ ಕಿವಿಗಡಚಿಕ್ಕುವ ಸಂಮಾನವು ದೊರೆತಿರಬೇಕು!
ಆದರೆ ಇತರರಿಂದ ಮಾತ್ರವಲ್ಲ ಬಹುಸಂಖ್ಯಾತ ಹಿಂದೂಗಳಲ್ಲೇ ಸಾಕಷ್ಟು ಮಂದಿಯಿಂದ ಅದರಲ್ಲೂ ಸರ್ವಧರ್ಮಸಮಭಾವದ ಕಾನೂನು/ಸಂವಿಧಾನ ತಜ್ಞರಿಂದ ಟೀಕೆ ಎದುರಾಯಿತು. ಈ ನ್ಯಾಯಾಧೀಶರ ಮಾತುಗಳು ನೇರವಾಗಿ ಸಂವಿಧಾನದ ಉಲ್ಲಂಘನೆಯಾಗುತ್ತದೆಂಬ ಜನಾಭಿಪ್ರಾಯ ಮೂಡಿತು. ಸದ್ರಿ ನ್ಯಾಯಾಧೀಶರ ಹೆಸರು ಮುಖ್ಯವಲ್ಲ; ಅಗತ್ಯವೂ ಇಲ್ಲ. ಅವರು ಒಂದು ಮತೀಯ ಮನಸ್ಥಿತಿಯ ಪ್ರತಿನಿಧಿ ಅಷ್ಟೇ. ಅವರ ಹೆಸರು ಹೇಳಿದರೆ ಅವರು ಸಮಾಜದ ವಿನಾಶಕಾರೀ ಶಕ್ತಿಗಳ ಮನಸ್ಸಿನಲ್ಲಿ ಇನ್ನಷ್ಟು ಭದ್ರವಾಗಿ ತಳವೂರುತ್ತಾರೆ-ಈಗ ಖಳನಾಯಕ ನಾಥೂರಾಮ್ ಗೋಡ್ಸೆಗೆ ಸಿಕ್ಕಿದ ಪ್ರಚಾರದಂತೆ!
ಸರ್ವೋಚ್ಚ ನ್ಯಾಯಾಲಯವು ಅವರ ಮಾತುಗಳ ದೃಶ್ಯ/ಶ್ರಾವ್ಯ ದಾಖಲೆಗಳನ್ನು ಪಡೆದು ಅವರನ್ನು ಅನೌಪಚಾರಿಕ ವಿಚಾರಣೆಗೆ ಕರೆಯಿತು. ಅವರು ಸಂವಿಧಾನದ್ವಾರಾ ನೇಮಕಗೊಂಡವರಾದ್ದರಿಂದ ಅವರನ್ನು (ಇಲ್ಲಿ ಬಹುವಚನ ಮತ್ತು ಏಕವಚನದ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬಹುದು) ಸಂಸತ್ತು ಮಾತ್ರ ಪದಚ್ಯುತಿಗೊಳಿಸಬಹುದು. ಆದ್ದರಿಂದ ಸರ್ವೋಚ್ಚ ನ್ಯಾಯಾಲಯದ ಕ್ರಮವು ಅರ್ಥವಾಗುವುದಿಲ್ಲ. (ಅನುಚ್ಛೇದ 142ರಲ್ಲಿ ನ್ಯಾಯ ನೀಡಲು ಸರ್ವೋಚ್ಚ ನ್ಯಾಯಾಲಯವು ಯಾವುದೇ ಆದೇಶವನ್ನು ಅದು ಮಾಡಬಲ್ಲುದು ಎಂಬಲ್ಲಿ ಮಾತ್ರ ಇದು ಸಾಧ್ಯತೆಯನ್ನು ಪಡೆಯಬಲ್ಲುದು!) ಅವರನ್ನು ವಿಚಾರಿಸಲಾಯಿತು; ಪ್ರಾಯಃ ಸಿಕ್ಕಿಂನಂತಹ ಯಾವುದಾದರೂ ಅಮುಖ್ಯ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಬಹದು. ಆದರೆ ಇಲ್ಲೂ ಅವರಿಗೆ ಒಕ್ಕೂಟ ಸರಕಾರದ ಕೃಪಾಶ್ರಯವು ಸಿಗಬಹುದು!
ಆದರೆ ಮುಖ್ಯವಾಗಿ ಗಮನಿಸಬೇಕಾದದ್ದು ಈ ನ್ಯಾಯಾಧೀಶನ ವರ್ತನೆಯನ್ನು. (ಇಲ್ಲಿ ಅಧಿಕೃತವಾಗಿ ಸಾಂವಿಧಾನಿಕವಾದ ಏಕವಚನವನ್ನೇ ಬಳಸಿದ್ದೇನೆ.) ತನ್ನ ಪ್ರಮಾಣವನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಅದಕ್ಕೆ ಹೆಮ್ಮೆ ಪಟ್ಟು ತಾನು ಅದಕ್ಕೆ (ಉಲ್ಲಂಘನೆಗೆ) ಬದ್ಧನಾಗಿದ್ದೇನೆಂಬ ರೀತಿಯಲ್ಲಿ ವರ್ತಿಸುವ ಇಂಥವರ ಬಳಿ ಸರ್ವಧರ್ಮ ಸಮಭಾವದ ನ್ಯಾಯ ಎಷ್ಟು ಸುರಕ್ಷಿತ? ಸಂವಿಧಾನವನ್ನು ಒಪ್ಪದಿರುವವರು ಈ ದೇಶದ ಪ್ರಜೆಗಳಾಗಿರಲು ಸಾಧ್ಯವಿಲ್ಲ. ವಿದೇಶೀಯರೂ ಭಾರತದ ನೆಲ/ನೆಲೆಯೊಳಗೆ ಭಾರತದ ಸಂವಿಧಾನಕ್ಕೆ ಬದ್ಧರಾಗಿರಬೇಕು. ಇಲ್ಲಿನ ಕಾನೂನನ್ನು ಗೌರವಿಸಬೇಕು, ಪಾಲಿಸಬೇಕು. ಏಕೆಂದರೆ ಇಲ್ಲಿನ ಕಾನೂನು ಇಲ್ಲಿನ ಸಂವಿಧಾನಕ್ಕನುಗುಣವಾಗಿದೆ. ಸಂವಿಧಾನಕ್ಕೆ ಚ್ಯುತಿ ಬರುವ ಯಾವುದೇ ಕಾನೂನೂ ಊರ್ಜಿತವಾಗುವುದಿಲ್ಲ.
ವಿಶೇಷವೆಂದರೆ ಈ ಬಗ್ಗೆ ಒಕ್ಕೂಟ ಸರಕಾರವು ತಲೆಕೆಡಿಸಿಕೊಂಡಿಲ್ಲ. ಏಕೆಂದರೆ ಮತೀಯತೆಯನ್ನು, ಸಂವಿಧಾನದ ಉಲ್ಲಂಘನೆಯನ್ನು ಪ್ರೋತ್ಸಾಹಿಸುತ್ತಿರುವುದು ಮಾತ್ರವಲ್ಲ, ಅದನ್ನು ತಮ್ಮ ‘ಇತರ’ರ ಮೂಲಕ ಪ್ರಚೋದಿಸುತ್ತಿರುವುದೂ ಅವರೇ. ಈ ನ್ಯಾಯಾಧೀಶರು ನೀಡಿದ ತೀರ್ಪುಗಳ ಪರಾಮರ್ಶೆಯಾಗಬೇಕಾಗಿದೆ. ಇವರ ಕೈಯಲ್ಲಿ ‘ಇತರರು’ ಎಷ್ಟು ಕ್ಷೇಮವೆಂದು ಚಿಂತಿಸಬೇಕಾಗಿದೆ. ಇವರ ಮಾತು ಅಲ್ಪಸಂಖ್ಯಾಕರ ವಿರುದ್ಧ ಬಹುಸಂಖ್ಯಾಕರನ್ನು ಪ್ರಚೋದಿಸುವ, ಗುಂಪುಹಲ್ಲೆಗೆ ದಾರಿಮಾಡಿಕೊಡುವ ಅಪರಾಧವಾಗಿದೆ; ದೇಶದ್ರೋಹವಾಗಿದೆ; ಮಾತ್ರವಲ್ಲ, ಸಂವಿಧಾನದ್ರೋಹವಾಗಿದೆ. ಸದ್ಯಕ್ಕೆ ಸಂವಿಧಾನದ್ರೋಹಕ್ಕೆ ಕಾನೂನಿನಲ್ಲಿ ಸರಿಯಾದ ನೀತಿನಿಯಮಾವಳಿಗಳಿಲ್ಲ. ಅದೊಂದು ಅಪರಾಧವೆಂದು ಬಿಂಬಿಸುವ ಕಾನೂನೇ ಇಲ್ಲ! ಇದ್ದಿದ್ದರೆ ಈ ನ್ಯಾಯಾಧೀಶರು ಈಗಾಗಲೇ ಮನೆಗೆ ತೆರಳುತ್ತಿದ್ದರು! ಇದರಿಂದಾಗಿ ಸದ್ಯಕ್ಕಂತೂ ಈ ನ್ಯಾಯಾಧೀಶ‘ನು’ ಸುರಕ್ಷಿತ ಕಕ್ಷೆೆಯಲ್ಲಿದ್ದಾ‘ನೆಂ’ದು ನಂಬಬೇಕಾಗಿದೆ.
ನ್ಯಾಯಾಲಯಗಳಾಗಬೇಕಾದ ಅಸ್ತಿತ್ವಗಳು ‘ನ್ಯಾಯಲಾಯ’ ಅಥವಾ ‘ನ್ಯಾಯಲಯ’ಗಳಾಗುವುದು ಹೀಗೆಯೇ. ಇಂತಹ ಹತ್ತಾರು ಘಟನೆಗಳನ್ನು ನಿತ್ಯ ನೋಡುತ್ತೇವೆ. ತರಂಗಾಂತರ, ಸ್ಥಾನಮಾನ ಬೇರೆಯಿರಬಹುದು; ಆಶಯ, ಅನುಷ್ಠಾನಗಳಂತೂ ಒಂದೇ.
ಸಂವಿಧಾನವನ್ನು 1949ರ ನವೆಂಬರ್ 26ರಂದು ಸ್ವೀಕರಿಸಲಾಯಿತು. ಇದನ್ನು ರಚಿಸಿದ ಸಂವಿಧಾನ ಸಮಿತಿಯು ಗುರಿ, ಆಶಯ, ಭಾಷೆ, ಆಚರಣೆ ಮುಂತಾದವುಗಳನ್ನು ಸೂಕ್ಷ್ಮವಾಗಿ ಗಮನಿಸಿದೆ. ಅದರ ಅಧ್ಯಕ್ಷರಾದ ಡಾ|ಅಂಬೇಡ್ಕರ್ ಈ ಕುರಿತು ಬಹಳಷ್ಟು ಅಧ್ಯಯನ ಮಾಡಿದ್ದರು. ಈ ಸಂವಿಧಾನವನ್ನು ರಾಷ್ಟ್ರದ ಅಧ್ಯಕ್ಷರೋ, ಪ್ರಧಾನಿಯೋ ಸಂಸತ್ತೋ ನೀಡಿದ್ದಲ್ಲ. ಇದನ್ನು ರಚಿಸಿ ಆತ್ಮಾರ್ಪಿತಗೊಳಿಸಿದವರು ‘ಭಾರತದ ಜನಗಳು’ ಅರ್ಥಾತ್ ಈ ದೇಶದ ಪ್ರಜೆಗಳು. ನಮಗೆ ನಾವೇ ಕೊಟ್ಟ ಈ ಸಂವಿಧಾನದ ಅನುಷ್ಠಾನಕ್ಕಾಗಿ ನಾವು ಸರಕಾರವನ್ನಿಟ್ಟುಕೊಂಡಿದ್ದೇವೆ. ರಾಷ್ಟ್ರಪತಿ, ಪ್ರಧಾನಿ ಮುಂತಾದ ರಾಷ್ಟ್ರಮಟ್ಟದಿಂದ ಗ್ರಾಮಮಟ್ಟದ ವರೆಗೆ ಇವರೆಲ್ಲ ನೌಕರರೇ. ಇವರ್ಯಾರೂ ಹೆಚ್ಚಲ್ಲ; ಪ್ರಜೆಗಳು ಕೀಳಲ್ಲ. ಆದರೆ ನಮ್ಮನ್ನಾಳುವವರು ಈ ದೇಶಕ್ಕೆ ರಾಜಕೀಯ ಮತ್ತು ಅಧಿಕಾರದ ಸ್ವಾತಂತ್ರ್ಯವಷ್ಟೇ ಸಿಕ್ಕಿದ್ದೆಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆಂಬುದೇ ಈ 75ರ ದುರದೃಷ್ಟ. ನಾವು ಮಾಡಿದ ಸಂವಿಧಾನ; ಜನಪ್ರತಿನಿಧಿಗಳಾದ ನಾವು ಅದನ್ನು ಏನು ಬೇಕಾದರೂ ಮಾಡಬಹುದು ಎಂಬ ಹುಚ್ಚು ಮತ್ತು ಧೂರ್ತ ನಿರ್ಣಯಕ್ಕೆ ಅಧಿಕಾರದಲ್ಲಿರುವವರು ತಪ್ಪು ತಿಳಿದಿದ್ದಾರೆ. ಇದನ್ನು ಊಹಿಸಿಯೇ ಸಂವಿಧಾನ ನಿರ್ಮಾಪಕರು ಜಾಗ್ರತೆ ವಹಿಸಿದ್ದು. ಶಿಲ್ಪಿ ಕೆತ್ತಿದ ದೇವರ ವಿಗ್ರಹವನ್ನು ನಾಶ ಮಾಡಲು ಅವನಿಗೆ ಅಧಿಕಾರವಿದೆಯೇ? ಅಥವಾ ಮಕ್ಕಳನ್ನು ಕೊಲ್ಲಲು, ಹಿಂಸಿಸಲು ಹೆತ್ತವರಿಗೆ ಹಕ್ಕಿದೆಯೇ? ಆದ್ದರಿಂದಲೇ ‘‘ವಿ ದಿ ಪೀಪಲ್ ಆಫ್ ಇಂಡಿಯಾ’’ ಅಥವಾ ‘‘ಭಾರತದ ಪ್ರಜೆಗಳಾದ ನಾವು’’ ಎಂಬ ಪ್ರಸ್ತಾವನೆಯ ಉಲ್ಲೇಖ.
ಈ ಬಗೆಯ ಅನಾಹುತವನ್ನು ಸಂವಿಧಾನ ಸಮಿತಿಯು ನಿರೀಕ್ಷಿಸಿದ್ದಿರಬಹುದು. ಅದಕ್ಕೇ ಅಂಬೇಡ್ಕರ್ ‘‘ನಾವು ದಾರಿಯನ್ನು ಹಾಕಿಕೊಡಬಹುದು; ಆದರೆ ಇದನ್ನು ಉಳಿಸಿಕೊಳ್ಳುವುದು, ಪಾಲಿಸುವುದು ಇದನ್ನು ಬಳಸುವ ಭವಿಷ್ಯದ ಪ್ರಜೆಗಳ ಕರ್ತವ್ಯ; ಅವರು ಹೊಣೆಯನ್ನು ಮರೆತರೆ ದೇಶಕ್ಕೆ ದುರಂತ ಕಾದಿದೆ’’ ಎಂಬರ್ಥದ ಮಾತುಗಳನ್ನಾಡಿದ್ದರು.
ಈಗ ಸಂವಿಧಾನ-75. ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ ದೇಶದ ಉಸಿರುಗಟ್ಟಿದೆ. ನಮ್ಮಲ್ಲಿ ಅನೇಕ ವೃದ್ಧರಿಗೆ ಒಂದು ರೀತಿಯ ವಿಚಿತ್ರ ಮರೆವು ಕಾಡುವುದುಂಟು. ಅವರಿಗೆ ತಮ್ಮ ಸುತ್ತ ಈಗ ಏನು ನಡೆಯುತ್ತದೆಯೆಂಬುದು ಮರೆತುಹೋಗುತ್ತದೆ; ಅಥವಾ ಅದರ ಪರಿವೆಯಿಲ್ಲ. ಆದರೆ ಹಲವು ದಶಕಗಳ ಹಿಂದಿನ ಸಂಗತಿಗಳನ್ನು ಕರಾರುವಾಕ್ಕಾಗಿ ಹೇಳಬಲ್ಲರು. ಇದು ‘ಆಯ್ದ ಮರೆವು’ ಅಲ್ಲ. ಅದೊಂದು ಕಾಯಿಲೆ. ಈಗ ನಮ್ಮ ಪ್ರಭುಗಳು 50 ವರ್ಷಗಳ ಹಿಂದಿನ ತುರ್ತುಪರಿಸ್ಥಿತಿಯನ್ನು ಸದಾ ಆರೋಪಿಸುತ್ತ ತಮ್ಮ ತಪ್ಪುನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೌದು; 1975 ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ. ಅದರ ವಿರುದ್ಧ ದೇಶದ ಪ್ರಜ್ಞಾವಂತ ಪ್ರಜೆಗಳು ಪ್ರತಿಭಟಿಸಿದರು. 1977ರಲ್ಲಿ ಅದನ್ನು ಆಗಿನ ಅದೇ ಸರಕಾರ ಹಿಂದೆಗೆದುಕೊಡಿತು. (ನೆನಪಿಡಬೇಕಾದ್ದೆಂದರೆ ಯಾರು ತಮ್ಮ ಸರ್ವಾಧಿಕಾರವನ್ನು ಬಳಸಿ ತುರ್ತುಪರಿಸ್ಥಿತಿಯನ್ನು ಘೋಷಿಸಿದರೋ ಅವರೇ ಅದನ್ನು ಹಿಂದೆಗೆದುಕೊಂಡದ್ದು; ಮತ್ತು ಚುನಾವಣೆಯನ್ನು ಘೋಷಿಸಿದ್ದು; ಯಾವ ಹೊಸ ಸರಕಾರವಲ್ಲ!) ಅಂದರೆ ಈ ಮಣ್ಣಿನ ಗುಣದಲ್ಲಿ ಪ್ರಜಾತಂತ್ರ ನೆಲೆಯೂರಿದೆ. ಬರಬಂದಾಗ ಒಣಗಿ ನಶಿಸಿದ ಗರಿಕೆ ಗಿಡ ಮಳೆಹನಿಯ ಸಿಂಚನದೊಂದಿಗೆ ಚಿಗುರಬಲ್ಲುದು. ನಮ್ಮ ಸಂವಿಧಾನದ ಬೇರುಗಳು ಅಷ್ಟು ಗಟ್ಟಿಯಾಗಿವೆ. ಸಂವಿಧಾನದ ಪ್ರಸ್ತಾವನೆ ಎಲ್ಲ ಸದಾಶಯಗಳಿಗೆ ಮಾರ್ಗದರ್ಶಿ; ದಾರಿದೀಪವಾಗಿ ಇದನ್ನು ಬಲವಾಗಿ ಸೂಚಿಸಿದೆ. ಅಲ್ಲೊಂದು ‘ದೃಢ ಸಂಕಲ್ಪ’ವಿದೆ. ಅದು ಅನೇಕ ತಿದ್ದುಪಡಿಗಳನ್ನು ಮಾಡಿಸಲ್ಪಟ್ಟಿತಾದರೂ ತನ್ನ ಮೂಲ ಆಶಯಗಳನ್ನು ತಿರುಚುವಂತಿಲ್ಲವೆಂದು ಸರ್ವೋಚ್ಚ ನ್ಯಾಯಾಲಯವು 1973ರ ‘ಕೇಶವಾನಂದ ಭಾರತೀ ಪ್ರಕರಣ’ದಲ್ಲಿ ತೀರ್ಪುನೀಡಿ ಸಂವಿಧಾನವನ್ನು ‘ಎತ್ತಿಹಿಡಿಯಿತು’ (‘ರಕ್ಷಿಸಿತು’ ಅಲ್ಲ!). ಹಾಗೆಯೇ 1977ರಲ್ಲಿ ಆದ ತಿದ್ದುಪಡಿಗಳ ಬಗ್ಗೆ 1982ರಲ್ಲಿ ‘ಡಿ.ಎಸ್.ನಕರ ಪ್ರಕರಣ’ದಲ್ಲಿ ವಿಶ್ಲೇಷಿಸಿತು.
ಭವ್ಯವಾದ ಪರಂಪರೆಯನ್ನು ಹೊಂದಿದರೂ ಅದನ್ನು ಅನುಭವಿಸುವ, ಮುಂದುವರಿಸುವ ವಿವೇಕವನ್ನು, ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ನಮ್ಮ ಅಗಾಧ ಶಕ್ತಿಯ ಅರಿವನ್ನು ನಾವು ಹೊಂದದಿದ್ದರೆ ಅಂಬೇಡ್ಕರ್‌ರಂತಹ ಮಹಾನುಭಾವರು ನೀಡಿದ ಸಂವಿಧಾನವು ಕುಸಿಯುವುದನ್ನು ನಾವಲ್ಲದಿದ್ದರೂ ಭವಿಷ್ಯದ ಪೀಳಿಗೆ ಸಾಕ್ಷೀಕರಿಸಬೇಕಾದೀತು.
ಭಾರತದ ಸಂವಿಧಾನಕ್ಕೆ ತಿದ್ದುಪಡಿಗಳನ್ನು ತರಲಾಗಿದೆ. ಇದಕ್ಕೆ ಸಂವಿಧಾನದ ಅನುಚ್ಛೇದ 368ರಲ್ಲಿ ಅವಕಾಶ, ಆಸ್ಪದ ನೀಡಲಾಗಿದೆ. ಅವುಗಳಲ್ಲನೇಕ ತಿದ್ದುಪಡಿಗಳು ನ್ಯಾಯಾಂಗದ ಸಂವಿಧಾನಬದ್ಧತೆಯ ಪರೀಕ್ಷೆಯಲ್ಲಿ ಉತ್ತೀರ್ಣವಾಗಿವೆ; ಇನ್ನು ಕೆಲವು ತಿದ್ದುಪಡಿಗಳು ಅನುತ್ತೀರ್ಣವಾಗಿವೆ. ಸಂವಿಧಾನದ 24, 25, 29ನೇ ತಿದ್ದುಪಡಿಗಳ ವಿರುದ್ಧ ಸಲ್ಲಿಸಿದ ಕೇಶವಾನಂದ ಭಾರತಿ ಪ್ರಕರಣದ ಅರ್ಜಿಯಲ್ಲಿ ಸಾಂವಿಧಾನಿಕ ತಿದ್ದುಪಡಿಗಳ ಹಾಗೂ ಸಂಸತ್ತಿನ ಅಧಿಕಾರದ ವ್ಯಾಪ್ತಿ ಮತ್ತು ಮಿತಿಯನ್ನು ಚರ್ಚಿಸುತ್ತ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠವು 24.04.1973ರಂದು ನೀಡಿದ ತೀರ್ಪು ಮಹತ್ವದ್ದು. ಪ್ರಾಯಃ ಅದು ಇಂದಿಗೂ ಸಂವಿಧಾನದ ಉಳಿವಿಗೆ ಕಾರಣವಾಗಿದೆ. ಮೂಲ ಆಶಯಗಳನ್ನು ಬದಿಗೊತ್ತಿ ತಂದ ತಿದ್ದುಪಡಿಗಳು ಸಂವಿಧಾನ ವಿರೋಧಿಯಾಗುತ್ತವೆಯೆಂದು ಈ ಪೀಠವು ಘೋಷಿಸಿತು. ಇತ್ತೀಚೆಗೆ ನಿವೃತ್ತಿಯಾಗುವ ಮುನ್ನ ಭಾರತದ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ಅವರು ಈ ತೀರ್ಪನ್ನು ಭಾರತದ ಧ್ರುವತಾರೆಯೆಂದು ಬಣ್ಣಿಸಿದರು.
ಸಂವಿಧಾನದ ಕುರಿತು 1976ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತಂದ 42ನೇ ತಿದ್ದುಪಡಿ ಮಹತ್ವದ್ದು. ಇದು 03.01.1977ರಿಂದ ಜಾರಿಯಾಯಿತು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬಂದಿದೆಯೆಂಬುದರ ಹೊರತಾಗಿ ಇದೊಂದು ಸ್ತುತ್ಯರ್ಹ ತಿದ್ದುಪಡಿ. ಇದರ ಮೂಲಕ ಸಂವಿಧಾನದ ಪ್ರಸ್ತಾವದಲ್ಲಿ ‘ಸಂಪೂರ್ಣ ಪ್ರಭುತ್ವ ಸಂಪನ್ನ ಲೋಕತಂತ್ರಾತ್ಮಕ’ ಎಂಬ ಪದಗಳಿಗೆ ಬದಲಾಗಿ ‘ಸಾರ್ವಭೌಮ ಸಮಾಜವಾದೀ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ’ ಹಾಗೆಯೇ ‘ಏಕತೆಯನ್ನೂ’ ಎಂಬುದಕ್ಕೆ ಬದಲಾಗಿ ‘ಏಕತೆಯನ್ನು ಮತ್ತು ಅಖಂಡತೆಯನ್ನು’ ಎಂಬ ಪದಗಳನ್ನು ತುಂಬಲಾಯಿತು. ಈ ಸೇರ್ಪಡೆಗಳ ಬಗ್ಗೆ ಅದರಲ್ಲೂ ‘ಸಮಾಜವಾದ’ ‘ಸರ್ವಧರ್ಮ’ ‘ಸಮಭಾವ’ ಮುಂತಾದ ಪದಗಳು ಕ್ರೋನಿ ಕ್ಯಾಪಿಟಲಿಸ್ಟ್ ಮತ್ತು ಮತೀಯ ಶಕ್ತಿಗಳ ಕಣ್ಣುಗಳನ್ನು ಆಗಲೇ ಕೆಂಪಾಗಿಸಿದ್ದವು.
(ಈ ತಿದ್ದುಪಡಿಯಲ್ಲಿ ಇತರ ಅನುಚ್ಛೇದಗಳ ಅದರಲ್ಲೂ ಮುಖ್ಯವಾಗಿ 4ನೇ ಭಾಗವಾಗಿ ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಗಿದೆ; ಇನ್ನೂ ಅನೇಕ ಅಂಶಗಳಿವೆ; ಅವು ಇಲ್ಲಿ ಪ್ರಸ್ತುತವಲ್ಲವೆಂಬ ಕಾರಣಕ್ಕೆ ಚರ್ಚಿಸಲಾಗಿಲ್ಲ.)
ಆದರೆ ಈ ಮಸೂದೆಯ ಒಂದೆಡೆ ಸಂವಿಧಾನದ ತಿದ್ದುಪಡಿಗೆ ಸಂಸತ್ತಿಗೆ ನೀಡಲಾದ ಅನಿರ್ಬಂಧಿತ ಅಧಿಕಾರವನ್ನು 1977ರಲ್ಲಿ ಪ್ರಶ್ನಿಸಲಾಯಿತು. ಸರ್ವೋಚ್ಚ ನ್ಯಾಯಾಲಯವು ಮಿನರ್ವ ಮಿಲ್ಸ್ ಪ್ರಕರಣದಲ್ಲಿ ದಿನಾಂಕ 31.07.1980ರಂದು ನೀಡಿದ ತೀರ್ಪಿನಲ್ಲಿ (ಕೇಶವಾನಂದ ಭಾರತಿ ಪ್ರಕರಣದ ತೀರ್ಪನ್ನು ಅನುಸರಿಸಿ) ಅಸಾಂವಿಧಾನಿಕವೆಂದು ರದ್ದುಗೊಳಿಸಿತು. ಅಲ್ಲಿ ಸರ್ವೋಚ್ಚ ನ್ಯಾಯಾಲಯವು:
‘‘ಇದು ಬರೀ ಭಾಷಾಶಾಸ್ತ್ರಕ್ಕೆ/ಜಿಜ್ಞಾಸೆಗೆ ಸಂಬಂಧಿಸಿದ ವಿಚಾರವಲ್ಲ. ನಮ್ಮ ಸಂವಿಧಾನದ ಆಕೃತಿಯು ಪ್ರಸ್ತಾವನೆಯಲ್ಲಿ ಘನೀಭವಿಸಿದ ತತ್ವಗಳ ಮೇಲೆ ನಿರ್ಮಿಸಿದ್ದಾಗಿದೆ. ನಮ್ಮನ್ನು ನಾವು ಒಂದು ಸಮಾಜವಾದಿ ರಾಜ್ಯವಾಗಿ ನಿರ್ಮಿಸಿ ಅದರೊಂದಿಗೆ ನಮ್ಮ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ನೀಡುವ ಹೊಣೆಯನ್ನು ಹೇರಿಕೊಂಡೆವು. ಇದಕ್ಕಾಗಿಯೇ ನಾಲ್ಕನೇ ಭಾಗದ ಮೂಲಕ ಸಾಮಾಜಿಕ ಗುರಿಯನ್ನು ಸಾಧಿಸಬಲ್ಲ ರಾಜ್ಯ ನೀತಿಯ ನಿರ್ದೇಶಕ ತತ್ವಗಳನ್ನು ತಲುಪಬಲ್ಲ ಅಂಶಗಳನ್ನು ಸೇರಿಸಿದೆವು.’’ ಎಂದಿತು.
ಇದೇ ತೀರ್ಪಿನಲ್ಲಿ ನ್ಯಾಯಮೂರ್ತಿ ಭಗವತಿಯವರು ತಮ್ಮ ಪ್ರತ್ಯೇಕ ತೀರ್ಪಿನಲ್ಲಿ:
‘‘ಸಂವಿಧಾನದ 1ನೇ ತಿದ್ದುಪಡಿಯ ಮಸೂದೆಯ ಬಗ್ಗೆ ಆಗಿನ ಪ್ರಧಾನ ಮಂತ್ರಿ ಜವಾಹರ ಲಾಲ್ ನೆಹರೂ ಅವರು ಉಲ್ಲೇಖಿಸಿದ ಅಂದರೆ, ರಾಜ್ಯ ನೀತಿಯ ನಿರ್ದೇಶಕ ತತ್ವಗಳನ್ನು ರೂಪಿಸಿರುವ ಉದ್ದೇಶವು ಸಮಾಜೋ-ಆರ್ಥಿಕ ಕ್ರಾಂತಿಯನ್ನು ತರುವುದು ಮತ್ತು ಕೆಲವೇ ಅದೃಷ್ಟಶಾಲಿಗಳಿಗೆ ಮಾತ್ರವಲ್ಲ, ಭಾರತದ ತುಂಬ ಇರುವ ಮಿಲಿಯಗಟ್ಟಲೆ ಜನರಿಗೂ ಸ್ವಾತಂತ್ರ್ಯದ ಫಲ ಮತ್ತು ಅಭಿವೃದ್ಧಿಯನ್ನು ಪಡೆಯುವಲ್ಲಿ ಭಾಗವಹಿಸುವ ಮತ್ತು ಮೂಲಭೂತ ಹಕ್ಕುಗಳನ್ನು ಚಲಾಯಿಸಬಲ್ಲ, ಎಲ್ಲರಿಗೂ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವು ಸಿಗುವುದೋ ಅಂತಹ ಒಂದು ಹೊಸ ಸಮಾಜೋ-ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸು ವುದು...’’ ಎಂದು ಉಲ್ಲೇಖಿಸಿದ್ದಾರೆ.
(ಈ ಪ್ರಕರಣದ ತೀರ್ಪಿ ನಲ್ಲಿ ನಮ್ಮ ಸಂವಿಧಾನದ ಪ್ರಸ್ತಾವನೆಯ ಇನ್ನೂ ಅನೇಕ ಉದಾತ್ತ ಅಂಶಗಳನ್ನು ಪ್ರಸ್ತಾವಿಸಲಾಗಿದೆ.)
ಇದಾದ ಮೇಲೆ ಡಿ.ಎಸ್.ನಕರ ಪ್ರಕರಣದಲ್ಲಿ 17.12.1982ರಂದು ಇನ್ನೊಂದು ಸಂವಿಧಾನ ಪೀಠವು ಈ ತಿದ್ದುಪಡಿಯಲ್ಲಿ ಘೋಷಿಸಲಾದ ಸಮಾನತೆಯ ಮೌಲ್ಯವನ್ನು ಎತ್ತಿಹಿಡಿಯಿತು. ಸಮಾಜವಾದಿ ಗಣರಾಜ್ಯವೆಂದರೇನೆಂದು ವಿವರಿಸಿತು. ಇದನ್ನು ಚರ್ಚಿಸುತ್ತ ನ್ಯಾಯಾಲಯವು-
‘‘ಸಮಾಜವಾದವೆಂಬ ಪದವು ಅತೀ ತಪ್ಪು ವ್ಯಾಖ್ಯಾನಕ್ಕೊಳಗಾದ ಪದ. ಮೌಲ್ಯಗಳು ಸಮಕಾಲೀನ ಸಮಾಜವಾದವನ್ನು ಶುದ್ಧ ಮತ್ತು ಸರಳವಾಗಿ ನಿರ್ಧರಿಸುತ್ತವೆ. ಅದರ ಎಲ್ಲ ಅಂಗಗಳ ಪರಿಚಯ ಮಾಡಿಕೊಳ್ಳುವುದು ಈ ಹಂತದಲ್ಲಿ ಅನಗತ್ಯ. ಸಮಾಜವಾದಿ ರಾಜ್ಯದ ಮುಖ್ಯ ಗುರಿಯೆಂದರೆ ಬದುಕಿನ ಗುಣಮಟ್ಟದಲ್ಲಿ ಆದಾಯ ಹಾಗೂ ಸ್ಥಾನಮಾನದ ಅಸಮಾನತೆಯನ್ನು ತೊಡೆದುಹಾಕುವುದು. ಸಮಾಜವಾದದ ಮೂಲಚೌಕಟ್ಟು ದುಡಿಯುವ ಜನತೆಗೆ ಗೌರವಪೂರ್ವಕವಾದ ಬದುಕಿನ ಗುಣಮಟ್ಟವನ್ನು ಒದಗಿಸುವುದು ಮತ್ತು ಮುಖ್ಯವಾಗಿ ತೊಟ್ಟಿಲಿನಿಂದ ಸಮಾಧಿಯವರೆಗೆ ರಕ್ಷಣೆಯನ್ನು ನೀಡುವುದೇ ಆಗಿದೆ. ಇತರ ಪರಿಕರಗಳೊಂದಿಗೆ ಇದು ಆರ್ಥಿಕ ಆಯಾಮದಲ್ಲಿ ಆರ್ಥಿಕ ಸಮಾನತೆ ಮತ್ತು ಆದಾಯದ ಸಮಾನ ಹಂಚಿಕೆಯ ಉದ್ದೇಶವನ್ನು ಹೊಂದಿದೆ. ಇದು ಮಾರ್ಕ್ಸ್‌ವಾದ ಮತ್ತು ಗಾಂಧೀವಾದದ ಮಿಶ್ರಣವಾಗಿ ಗಾಂಧೀಪ್ರಣೀತ ಸಮಾಜವಾದದ ಕಡೆಗೆ ವಾಲಿದೆ. ಮೊದಲ ಹಲವು ವರ್ಷಗಳಲ್ಲಿ ಸಮಾಜವಾದವು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಎಲ್ಲರಿಗೂ ಅವಕಾಶಗಳನ್ನು ನೀಡುವ ಉದ್ದೇಶವನ್ನು ಹೊಂದಿರುತ್ತದೆ. ಆರ್ಥಿಕ ಸವಲತ್ತುಗಳ ಅಭಾವದಿಂದಾಗಿ ಶಿಕ್ಷಣವನ್ನು ಹೊಂದುವ ಅವಕಾಶವನ್ನು ನಿರಾಕರಿಸಲಾಗದು.
ಆದ್ದರಿಂದ, ಸಾಮಾನ್ಯವಾಗಿ, ಒಂದು ಸಮಾಜವಾದಿ ರಾಜ್ಯವು ಪ್ರಾಥಮಿಕ ಹಂತದಿಂದ ಪಿಎಚ್.ಡಿ.ಯವರೆಗೆ ಉಚಿತ ಶಿಕ್ಷಣವನ್ನು ನೀಡಬಯಸುತ್ತದೆ; ಆದರೆ ಈ ಗುರಿಯು ಅಗತ್ಯ ಬೌದ್ಧಿಕ ಮಟ್ಟವನ್ನು ಹೊಂದಿದವನಿಗೆ ಸಿಗಬೇಕೇ ಹೊರತು ನಮ್ಮ ಸಮಾಜದಲ್ಲಿ ಕಾಣುವಂತೆ ಬಡ ಕುಟುಂಬದಿಂದ ಬಂದ ಬುದ್ಧಿವಂತ ಯುವಕನಿಗೆ ಹಣದ, ಅವಕಾಶದ ಅಭಾವದಿಂದ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಿಲ್ಲದ ಮತ್ತು ಶ್ರೀಮಂತ ತಂದೆಯ ದಡ್ಡ ಮಗನೋ ಮಗಳೋ ಶಿಕ್ಷಣವನ್ನು ಮುಂದುವರಿಸಿ ದೇಶದ ಕಸವನ್ನು ಹೆಚ್ಚಿಸುವ ಪರಿಸ್ಥಿತಿಯನ್ನಲ್ಲ. ... ಸಮಾಜವಾದದ ಕೆಲಸವು ಪಾಳೆಗಾರಿಕೆಯಿಂದ ಶೋಷಿತರಾದ ಗುಲಾಮ ಸಮಾಜವನ್ನು ಒಂದು ಪ್ರಖರ, ಹೃದಯಂಗಮವಾದ, ಸಮಾಜವಾದಿ ಕ್ಷೇಮಕರ ಸಮಾಜವನ್ನು ಕಟ್ಟುವ ದೀರ್ಘ ಯಾತ್ರೆಯಾಗಿದೆಯಾದರೂ ಈ ಪ್ರಯಾಣದಲ್ಲಿ ರಾಜ್ಯವು ಕೈಗೊಳ್ಳುವ ಕ್ರಮವು ಸಮಾಜವನ್ನು ಈ ಗುರಿಯತ್ತ ಮುನ್ನಡೆಸಬಲ್ಲ ನಿರ್ದೇಶನವನ್ನು ಹೊಂದಿ ಅದಕ್ಕನುಗುಣವಾದ ವ್ಯಾಖ್ಯೆಯನ್ನು ಹೊಂದಿರಬೇಕು.’’
ಮೇಲೆ ಹೇಳಿದ ಮಿನರ್ವ ಮಿಲ್ಸ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ ವಿವರಣೆಯನ್ನು ಇಲ್ಲೂ ಉಲ್ಲೇಖಿಸಲಾಗಿದೆ.
ಜನಹಿತಕ್ಕಾಗಿ ಇವೆಲ್ಲ ಮತ್ತೆ ಮತ್ತೆ ಮರುಕಳಿಸುತ್ತವೆ. ಏಕೆಂದರೆ ರಾಜಕೀಯ ನಾಯಕರು ಪ್ರಜೆಗಳ ಬಗ್ಗೆ, ದೇಶದ ಬಗ್ಗೆ ಚಿಂತಿಸುವುದು ಕಡಿಮೆ. ಅವರ ಆಸಕ್ತಿ ಏನಿದ್ದರೂ ತಮ್ಮ ಅಧಿಕಾರದ ಬಗ್ಗೆ ಮತ್ತು ಹೆಚ್ಚೆಂದರೆ ತಮ್ಮ ಪಕ್ಷದ ಅಧಿಕಾರದ ಬಗ್ಗೆ. ಇದಕ್ಕಾಗಿ ಸಂವಿಧಾನವನ್ನು ಹೇಗೆ ಮಣಿಸಬಹುದೆಂಬುದೇ ಅವರ ಚಿಂತೆ. ತಮ್ಮ ಅಧಿಕಾರ ಮತ್ತು ಸಂವಿಧಾನ ಮುಖಾಮುಖಿಯಾಗುವುದಾದರೆ ಅವರಿಗೆ ಸಂವಿಧಾನ ಅಳಿದರೂ ಪರವಾಗಿಲ್ಲ; ತಮ್ಮ ಅಧಿಕಾರ ಉಳಿಯಬೇಕು. ಸಂಸತ್ತೆಂದರೆ ರಾಜಕಾರಣಿಗಳು ಜನಪ್ರತಿನಿಧಿಗಳೆಂಬ ನೆಪದಿಂದ ಆಳುವ ವ್ಯೆಹವನ್ನು ಹೊಕ್ಕು ಅಲ್ಲಿ ತಮ್ಮಿಷ್ಟವನ್ನು ಬಹುಮತದ ಮೂಲಕ ಸಾಧಿಸುವ ಒಂದು ಕಾರಸ್ಥಾನವೆಂದಾಗಿದೆ. ಈ ಅಪಾಯದಿಂದ ದೇಶವನ್ನು, ಅದರ ಪ್ರಜೆಗಳನ್ನು ಉಳಿಸಿದ್ದು ಸಂವಿಧಾನ ಮತ್ತು ಅದರ ಅರ್ಥವನ್ನು ವ್ಯಾಖ್ಯಾನಿಸುವ ಹೊಣೆಯ ನ್ಯಾಯಾಂಗ. ಹೀಗಿದ್ದರೂ ಸಂಸತ್ತು ಸಾಕಷ್ಟು ಅಪಾಯವನ್ನು ತಂದೊಡ್ಡಿದೆ. ತನ್ನ ಇತ್ತೀಚೆಗಿನ ಅಸ್ಪಷ್ಟ ಮತ್ತು ಪರಸ್ಪರ ಹೊಂದಾಣಿಕೆಯಿಲ್ಲದ ತೀರ್ಪು ಮತ್ತು ನಿಲುವುಗಳಿಂದಾಗಿ ನ್ಯಾಯಾಂಗವು ಹಿಂದಿನಷ್ಟು ಅಂದರೆ ಕೇಶವಾನಂದ ಭಾರತಿ ಪ್ರಕರಣದ ಸಮಯದಲ್ಲಿ ತೋರಿಸಿದಷ್ಟು ಸಂವಿಧಾನಬದ್ಧತೆಯನ್ನು ಈಗ ಮತ್ತು ಮುಂದೆ ತೋರಿಸುತ್ತದೆಯೋ ಎಂಬುದರ ಮೇಲೆ ಸಂವಿಧಾನದ ಭವಿಷ್ಯವು ಅಡಗಿದೆ.
ಆದರೂ ಭವಿಷ್ಯದ ಹೊಳಪು ಕೆಲವು ಪ್ರಕರಣಗಳಲ್ಲಾದರೂ ಕಾಣಿಸುತ್ತಿದೆ: ಮುಝಫ್ಫರ್‌ನಗರದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಆತನ ಅಲ್ಪಸಂಖ್ಯಾಕ ಮತಕಾರಣವಾಗಿ ಅಧ್ಯಾಪಿಕೆಯೊಬ್ಬರು ಇತರ ವಿದ್ಯಾರ್ಥಿಗಳ ಮೂಲಕ ಥಳಿಸಿದ ಪ್ರಸಂಗವು ಸರ್ವೋಚ್ಚ ನ್ಯಾಯಾಲಯವನ್ನು ತಲುಪಿ ಈಚೆಗಷ್ಟೇ (ನವೆಂಬರ್ 2024) ಅದರಲ್ಲಿ ಸರ್ವೋಚ್ಚ ನ್ಯಾಯಾಲಯವು ‘‘ವಿದ್ಯಾರ್ಥಿಗಳಿಗೆ ಸಮಾನತೆ, ಸರ್ವಧರ್ಮಸಮಭಾವ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಹೇಳಿಕೊಡದಿದ್ದರೆ ಅದು ಗುಣಮಟ್ಟದ ಶಿಕ್ಷಣವಾಗದು’’ ಎಂದು ಎಚ್ಚರಿಸಬೇಕಾಯಿತು.
ಅಂತರ್ಜಾತೀಯ, ಅಂತರ್‌ಮತೀಯ ಪ್ರೀತಿಪ್ರೇಮಗಳ ಪ್ರಕರಣಗಳಂತೂ ನಿತ್ಯವರದಿಯಾಗುತ್ತವೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಕಾನೂನಿನ ಅನುಷ್ಠಾನದ ಹೊಣೆಹೊತ್ತವರಾಗಿ ಸಂವಿಧಾನದ ಮೂಲೋದ್ದೇಶಗಳನ್ನು ಈಡೇರಿಸಬೇಕು. ಆದರೆ ಅವರು ತಮ್ಮ ದೊರೆಗಳ ಆದೇಶದ ಮೇರೆಗೆ ಕಾನೂನು, ಸಂವಿಧಾನ ಎಲ್ಲವನ್ನೂ ವ್ಯಾಖ್ಯಾನಿಸುವ ಕುರಿಮಂದೆಯಾಗಿರುವುದೇ ಹೆಚ್ಚು. ಈಚೆಗಷ್ಟೇ ಮುಂಬೈ ಉಚ್ಚ ನ್ಯಾಯಾಲಯವು ಇಂತಹ ಒಂದು ಪ್ರಕರಣದಲ್ಲಿ ಅಮೆರಿಕದ ಕವಿ ಮಾಯಾ ಏಂಜೆಲೋವಿನ ಕಾವ್ಯದ ಸಾಲುಗಳನ್ನು ಉಲ್ಲೇಖಿಸಿ ‘‘ಪ್ರೀತಿಯು ಯಾವುದೇ ಗಡಿಗುರುತುಗಳನ್ನು ಮನ್ನಿಸುವುದಿಲ್ಲ’’ ಎಂದು ಹೇಳಿ ಸಂಬಂಧಿತ ಜೋಡಿಯನ್ನು ರಕ್ಷಿಸಲು ಅಗತ್ಯ ನಿರ್ದೇಶನವನ್ನು ನೀಡಿತು.
ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಸಮೂಹಸನ್ನಿಯಂತೆ ದೇಶವಿಡೀ ಬೆಂಕಿ ಉರಿಯುತ್ತಿರುವಾಗ ಮನೆಮನೆಗೂ ಅಗ್ನಿಶಾಮಕ ದಳವನ್ನು ಕಾವಲಿಡಲು ಸಾಧ್ಯವೇ? ನ್ಯಾಯಾಂಗವು ಎಲ್ಲಿಯ ವರೆಗೆ ಈ ಭಾರವನ್ನು ತಡೆದುಕೊಳ್ಳಬಲ್ಲುದು? ಅಲ್ಲೂ ಇರುವವರು ಯಕಶ್ಚಿತ್ ಮನುಷ್ಯರು. ಈಗಾಗಲೇ ಇರುವ ಕೆಲವಾರು ನಿದರ್ಶನಗಳನ್ನು ಗಮನಿಸಿದರೆ ನಿವೃತ್ತಿಯ ಬಳಿಕ ಸಿಗುವ, ಸಿಗಬಹುದಾದ ಆಮಿಷಗಳಿಗೆ ಬಲಿಯಾಗುವ ಅವಕಾಶಗಳು ಹೇರಳವಾಗಿವೆ. ಆದ್ದರಿಂದ ನಮಗೆ ಇಂತಹ ನಿರೀಕ್ಷೆಗಳನ್ನು ಹೊತ್ತ ನ್ಯಾಯಮೂರ್ತಿಗಳು ನಿರಾಶೆಯನ್ನು ತರುತ್ತಾರೆ. ನ್ಯಾಯಮೂರ್ತಿ ಮೊನ್ನೆಮೊನ್ನೆಯ ವರೆಗೂ ಕಣ್ಣುಮುಚ್ಚಿಕೊಂಡಿರುತ್ತಿತ್ತು. ಈಗ ಅದರ ಕಣ್ಣನ್ನು ತೆರೆಸಲಾಗಿದೆ. ಇದರಿಂದಾಗಿ ನ್ಯಾಯಮೂರ್ತಿಗಳಿಗೆ ದೇಶದಲ್ಲಿ ನಡೆಯುವ, ಆಚರಿಸುವ ಅಸಮಾನತೆ, ಮತೀಯತೆ, ಭ್ರಷ್ಟಾಚಾರ, ದ್ವೇಷಭಾಷೆ ಮುಂತಾದವು ಕಾಣಬೇಕೆಂಬ ಹಂಬಲ ನನಸಾಗುತ್ತದಾದರೂ ಇದು ಸಮೂಹ ಹಲ್ಲೆಯನ್ನು ಇನ್ನಷ್ಟು ಪ್ರಚೋದಿಸುವಂತಾಗಬಾರದು. ನವಿಲು ನಮ್ಮ ರಾಷ್ಟ್ರೀಯ ಪಕ್ಷಿ. ನಮ್ಮ ಸುತ್ತ ನಡೆಯುವ ಅಕ್ರಮ, ಅನ್ಯಾಯಗಳನ್ನು ನಮ್ಮ ವಿವೇಕ ಗಮನಿಸದಿದ್ದರೆ ನಾವು ಉಷ್ಟ್ರಪಕ್ಷಿಯನ್ನು ನವಿಲಿನ ಸ್ಥಾನದಲ್ಲಿ ತಂದಿಡುವ ಅಪಾಯವನ್ನು ಎದುರುಹಾಕಿಕೊಳ್ಳುವಂತಾದೀತು.
ನ್ಯಾಯಾಲಯ ನಿಂದನೆಯನ್ನು ಶಿಕ್ಷಿಸುವ ಕಾನೂನಿದೆ; ದೇಶದ್ರೋಹವನ್ನು ಶಿಕ್ಷಿಸುವ ಕಾನೂನಿದೆ. ಆದರೆ ಸಂವಿಧಾನವನ್ನು ಬೇಕಾಬಿಟ್ಟಿ ಟೀಕಿಸುವ, ನಿಂದಿಸುವವರಿಗೆ ಏನು ಶಿಕ್ಷೆ ಕಾದಿದೆ? ಸದ್ಯ ಏನೂ ಇಲ್ಲ.
ಇಂತಹ ಸಂದರ್ಭದಲ್ಲಿ ನಮಗೆ ನಾವೇ ಸಂವಿಧಾನವನ್ನು ನೀಡಿದರೂ ಅದನ್ನು ನಾವು ಉಳಿಸುವ ಸಾಮರ್ಥ್ಯವನ್ನು ಉಳಿಸಿಕೊಳ್ಳಲಾರೆವು; ಭವ್ಯವಾದ ಪರಂಪರೆಯನ್ನು ಹೊಂದಿದರೂ ಅದನ್ನು ಅನುಭವಿಸುವ, ಮುಂದುವರಿಸುವ ವಿವೇಕವನ್ನು, ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ನಮ್ಮ ಅಗಾಧ ಶಕ್ತಿಯ ಅರಿವನ್ನು, ನಾವು ಹೊಂದದಿದ್ದರೆ ಅಂಬೇಡ್ಕರ್‌ರಂತಹ ಮಹಾನುಭಾವರು ನೀಡಿದ ಸಂವಿಧಾನವು ಕುಸಿಯುವುದನ್ನು ನಾವಲ್ಲದಿದ್ದರೂ ಭವಿಷ್ಯದ ಪೀಳಿಗೆ ಸಾಕ್ಷೀಕರಿಸಬೇಕಾದೀತು. ಆರಂಭದಲ್ಲಿ ಉಲ್ಲೇಖಿಸಿದ ಅಲ್ಲಹಾಬಾದಿನ ನ್ಯಾಯಮೂರ್ತಿ ಯಾದವ್‌ರಂತಹವರು ಈ ದೇಶದ ಪ್ರಾತಿನಿಧಿಕ, ಸಾಂಕೇತಿಕ ನ್ಯಾಯಮೂರ್ತಿಯಾಗುವ ಆತಂಕದಿಂದ ಪಾರಾಗಲಾರೆವು. ಸಂವಿಧಾನವು ವಿಫಲವಾಗುವುದಿಲ್ಲ. ನಾವು ಅದನ್ನು ವಿಫಲಗೊಳಿಸುವಲ್ಲಿ ಸಫಲರಾಗಬಹುದು.