ನ್ಯಾಯಾಲಯಗಳು-ಗೌರವ ಮತ್ತು ಭಯ
ನ್ಯಾಯಾಂಗ ಬೇರೆ; ನ್ಯಾಯಾಲಯಗಳು ಬೇರೆ. ಇದು ನ್ಯಾಯಾಂಗದ ಹೊರಗಿರುವವರು ಅದೆಷ್ಟೇ ವಿದ್ಯಾವಂತರಿರಲಿ, ಅರ್ಥಮಾಡಿಕೊಳ್ಳದ ವಿಚಾರ. ಕಾಯ್ದೆ, ವಕೀಲ ವೃತ್ತಿ, ಇವೆಲ್ಲವೂ ನ್ಯಾಯಾಂಗದ ವರ್ತುಲದೊಳಗಿರುವ ವಿಚಾರಗಳು. ಆದರೆ ಕಾನೂನಿನನ್ವಯ ನ್ಯಾಯ ನಿರ್ವಹಣೆಯ ದೊಡ್ಡ ಹೊರೆಯನ್ನು ಹೊರುವುದು ನ್ಯಾಯಾಲಯಗಳು.
ಭಾರತದ ಸಂವಿಧಾನವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳನ್ನು ಪ್ರತ್ಯೇಕವಾಗಿಸಿ ಅವರವರ ಕ್ಷೇತ್ರದಲ್ಲಿ ಅವ ರವರನ್ನು ಸಾರ್ವಭೌಮವಾಗಿಸಿದೆ. ಈ ತ್ರಿಮೂರ್ತಿಗಳನ್ನು ಸಲಹುವ ಆದಿಮಾಯೆಯೆಂದರೆ ನಮ್ಮ ಸಂವಿಧಾನ. ಪರಸ್ಪರರಿಗೆ ಅಡ್ಡಗಾಲಿಡದಂತಹ ವ್ಯವಸ್ಥೆ ಸಂವಿಧಾನದಲ್ಲಿದೆ. ಕೆಲವು ಬಾರಿ ಪರಸ್ಪರ ಮುಜುಗರವುಂಟು ಮಾಡುವ ಸನ್ನಿವೇಶಗಳು ಎದುರಾದರೂ ಅವನ್ನು ನಿಭಾಯಿಸಲು ಬೇಕಾದ ವಿವೇಕ ಸಂಬಂಧಪಟ್ಟವರಿಗಿರಬೇಕೆಂಬ ಅಪೇಕ್ಷೆ ಹಾಗೂ ಇದೆಯೆಂಬ ನಿರೀಕ್ಷೆ ಸಂವಿಧಾನದ ಹಿರಿಯರಿಗಿತ್ತು. ಆದರೆ ಶಿಕ್ಷಣವು ವಿವೇಕವನ್ನೊದಗಿಸದಿದ್ದರೆ ಮತ್ತು ಮನುಷ್ಯ ದೇಶದ ಬಗ್ಗೆ, ಭವಿಷ್ಯದ ಪೀಳಿಗೆಯ ಬಗ್ಗೆ ಚಿಂತಿಸದೆ, ಕ್ಷಣಿಕ ಸುಖವನ್ನು ಅನುಭವಿಸುವ ಇರಾದೆಯನ್ನು ಹೊಂದಿದರೆ ಆಗ ಈ ಅಪೇಕ್ಷೆ, ನಿರೀಕ್ಷೆಗಳೆಲ್ಲ ಸುಳ್ಳಾಗಬಲ್ಲವು.
ಶಾಸಕಾಂಗವು ತನ್ನ ದೈನೇಸಿ ಧೋರಣೆಯಿಂದಾಗಿ ಮಾನಹೀನವಾಗಿದೆ. ಸಂಸತ್ತೆಂದರೆ ಅದರಲ್ಲಿರುವ ಮಂದಿ. ಅವರ ನಡವಳಿಕೆ, ನಡೆನುಡಿಗಳಿಂದಾಗಿ, ಅದು ಅನಾಗರಿಕ ವರ್ತನೆಯ, ಅಧಿಕಾರ ಲಾಲಸೆಯ, ಇಸ್ಪೀಟು ಅಡ್ಡೆಯಂತಹ ಒಂದು ಕೇಂದ್ರವೆನಿಸಿದೆ. ಬಹುಮತವಿದ್ದರೆ ಏನೂ ಮಾಡಬಹುದೆಂಬ ರಾಜಕಾರಣದಿಂದಾಗಿ ಜನಪ್ರತಿನಿಧಿಗಳು ಧನಪ್ರತಿನಿಧಿಗಳಾಗಿದ್ದಾರೆ. ಕಾರ್ಯಾಂಗವೂ ತನ್ನ ಹಿರಿಮೆಯನ್ನು ಕಳೆದುಕೊಂಡಿದೆ. ಅದೀಗ ಒಡೆಯರ ಖಾಸಾ ಸೇವೆಯ ಗುಲಾಮಗಿರಿಯನ್ನು ಹೊತ್ತು ನಡೆಯುತ್ತಿದೆ. ಅಧಿಕಾರಿಗಳಂತೂ ನಿವೃತ್ತಿಯಾದನಂತರದ ಸೌಕರ್ಯಗಳ ಜೊತೆಗೆ ಇರುವ ಸ್ಥಾನವನ್ನು ಸಪಾಟುಗೊಳಿಸಲು ಯಾವ ಅನೀತಿಗೂ ಶರಣು ಹೋಗಲು ಸಿದ್ಧರಿದ್ದಾರೆ. ಸದ್ಯ ಈ ಎರಡೂ ಅಂಗಗಳ ಬಗ್ಗೆ ಕಡಿಮೆ ಹೇಳಿದಷ್ಟೂ ಒಳ್ಳೆಯದು.
ಇರುವ ಈ ಮೂರು ಅಂಗಗಳಲ್ಲಿ ಕನಿಷ್ಠ ಅಪವಾದಗಳನ್ನು ಹೊತ್ತು ತನ್ನ ಮಾನವನ್ನು ಉಳಿಸಿಕೊಂಡಿರುವುದು ನ್ಯಾಯಾಂಗವೇ. ಅಲ್ಲಲ್ಲಿ ಲೋಪದೋಷಗಳಿಲ್ಲವೆಂದಲ್ಲ. ಆದರೂ ಇತರರಿಂದ ಹಿಂಸೆ, ನೋವು ಅನುಭವಿಸಿದಾಗ ಪರಿಹಾರಕ್ಕಾಗಿ, ಶಮನಕ್ಕಾಗಿ ತಾಯಿಯ ಬಳಿ ಬರುವ ಮಗುವಿನಂತೆ ಒಳ್ಳೆಯವರೂ ಕೆಟ್ಟವರೂ ಕೊನೆಗೂ ಶರಣಾಗುವುದು ನ್ಯಾಯಾಲಯಗಳಿಗೆ. ಅಲ್ಲೇನಾದರೂ ತನ್ನ ನೋವಿಗೆ ಚಿಕಿತ್ಸೆ ಲಭಿಸಬಹುದು ಎಂಬ ಆಸೆ. ಇದರಲ್ಲಿ ಕಾನೂನಿನ ಪಾಲೆಷ್ಟು, ನ್ಯಾಯದ ಪಾಲೆಷ್ಟು ಎಂಬುದು ಅಧ್ಯಯನಯೋಗ್ಯ ವಿಚಾರ.
ಯಾವ ಸಮಾಜದಲ್ಲಿ ಸಂತ್ರಸ್ತರಿಗೆ ನ್ಯಾಯ ಲಭಿಸುವುದಿಲ್ಲವೋ ಅಲ್ಲಿ ಜನಹಿತ ಸಾಧ್ಯವಾಗುವುದಿಲ್ಲ. ಕೊನೆಗೂ ಕಾನೂನೆಂದರೆ ಜನಹಿತ. ಜನರಿಗೆ ಬೇಡದ ಕಾನೂನು ಇದ್ದೂ ಪ್ರಯೋಜನವಿಲ್ಲ. ಹೀಗೆ ಕಾನೂನು, ನ್ಯಾಯ, ಜನಹಿತ ಇವನ್ನು ತಕ್ಕಡಿಯಲ್ಲಿಟ್ಟು ತೂಕ ಮಾಡುವ ಹೊಣೆ ನ್ಯಾಯಾಲಯಗಳದ್ದು. ಆದರೆ ಅವು ಕಾನೂನನ್ನು ರಚಿಸುವುದಿಲ್ಲ. ಅವನ್ನು ಸಂವಿಧಾನಾತ್ಮಕವಾಗಿ ಅರ್ಥೈಸುತ್ತವೆ ಮಾತ್ರ. ಯಾವ ಕಾನೂನು ಸಂವಿಧಾನವಿರೋಧಿಯೋ, ಅದನ್ನು ನ್ಯಾಯಾಲಯಗಳು ರದ್ದುಮಾಡುತ್ತವೆಂಬ ಆಸೆ ಎಲ್ಲ ನಾಗರಿಕರಿಗೂ ಇದೆ.
ನಮ್ಮ ನ್ಯಾಯಾಂಗವೆನ್ನುವಾಗ ಅದು ಎಲ್ಲ ಹಂತದ ನ್ಯಾಯಾಲಯಗಳನ್ನು ಒಳಗೊಳ್ಳುತ್ತದೆ. ದೇಶಕ್ಕೊಂದು ಸರ್ವೋಚ್ಚ ನ್ಯಾಯಾಲಯ, ಎಲ್ಲ ರಾಜ್ಯಗಳಿಗೂ ಒಂದು ಉಚ್ಚ ನ್ಯಾಯಾಲಯ, ಜಿಲ್ಲಾ ಹಂತದಲ್ಲಿ ಇತರ ಅಧೀನ ನ್ಯಾಯಾಲಯಗಳು. ಇವಲ್ಲದೆ ನ್ಯಾಯ ಮಂಡಳಿಗಳು, ಮೇಲ್ಮನವಿ ಪ್ರಾಧಿಕಾರಗಳು, ಕಾರ್ಮಿಕ, ಗ್ರಾಹಕ, ಪರಿಸರ, ಹಣಕಾಸು ಸಂಸ್ಥೆಗಳು, ಮತ್ತಿತರ ವರ್ಗ-ವಿಚಾರಗಳಲ್ಲಿ ಉದ್ಭವವಾಗುವ ಸಮಸ್ಯೆಗಳಿಗೆ ನ್ಯಾಯ ನೀಡಲು ವಿಶೇಷ ಕಾನೂನುಗಳಡಿ ಸ್ಥಾಪಿಸಲ್ಪಟ್ಟ ನ್ಯಾಯಾಲಯಗಳು, ಅರೆ-ನ್ಯಾಯಿಕ ನ್ಯಾಯಾಲಯಗಳೂ ಇವೆ. ಈಗ ರಾಜಕಾರಣದ ಅಪರಾಧಗಳು ತೀವ್ರ ಹೆಚ್ಚಳಗೊಂಡದ್ದರಿಂದಾಗಿ ಅದಕ್ಕಾಗಿಯೇ ಪ್ರತ್ಯೇಕ ನ್ಯಾಯಾಲಯಗಳು ಸ್ಥಾಪಿಸಲ್ಪಟ್ಟಿವೆ. ಆದರೆ ಮುಖ್ಯವಾಗಿ ನ್ಯಾಯಾಲಯಗಳೆನ್ನುವಾಗ ಮನಸ್ಸಿಗೆ ಬರುವುದು ಸಿವಿಲ್, ಕ್ರಿಮಿನಲ್ ವಿಚಾರಣಾ ನ್ಯಾಯಾಲಯಗಳು, ಉಚ್ಚ-ಸರ್ವೋಚ್ಚ ನ್ಯಾಯಾಲಯಗಳು.
ನಮ್ಮ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳು ಅಭಿಲೇಖ ನ್ಯಾಯಾಲಯಗಳು. ಅವು ನೀಡುವ ತೀರ್ಪುಗಳು ಕಾನೂನಿಗೆ ಸರಿಯಾದವುಗಳು. ಸರ್ವೋಚ್ಚ ನ್ಯಾಯಾಲಯಕ್ಕಂತೂ ಪೂರ್ಣ ನ್ಯಾಯ ನಿರ್ವಹಣೆಗೆ ಸಂವಿಧಾನದ ೧೪೨ನೇ ವಿಧಿಯು ಬಹಳಷ್ಟು ಅವಕಾಶವನ್ನು ನೀಡಿದೆ. ಆದರೂ ಇಂತಹ ‘ಪೂರ್ಣ ನ್ಯಾಯ’ ಬಹಳಷ್ಟು ಜನರಿಗೆ ಮರೀಚಿಕೆಯಾಗಿದೆ.
ಹಾಗಾದರೆ ನಮ್ಮ ಶ್ರೀಸಾಮಾನ್ಯರಿಗೆ ನ್ಯಾಯಾಲಯಗಳು ಎಷ್ಟು ನ್ಯಾಯ ನೀಡುತ್ತವೆ? ಇದಕ್ಕೆ ಉತ್ತರ ಹೇಳುವುದು ಕಷ್ಟ. ನ್ಯಾಯಾಲಯಗಳು ಬಡವರಿಗಂತೂ ನ್ಯಾಯ ನೀಡುವ ತನ್ನ ಜಾಹೀರಾತಿನ ಹೊರತೂ ನ್ಯಾಯವನ್ನು ಅವರ ಕೈಗೆಟುಕದಷ್ಟು ಎತ್ತರದಲ್ಲಿ ಇಟ್ಟಂತಿದೆ. ಕೆಳಹಂತದ ನ್ಯಾಯಾಲಯಗಳಲ್ಲಿ ಕರ್ತವ್ಯ ಪ್ರಜ್ಞೆಗಿಂತ, ಅನುಕಂಪಕ್ಕಿಂತ ಹೆಚ್ಚಾಗಿ ಅಧಿಕಾರ ಪ್ರಜ್ಞೆಯು ಪ್ರೇರಣೆ ಮಾಡುವಂತಿದೆ.
ಯಾವುದೇ ವಿವಾದದ ಇತ್ಯರ್ಥಕ್ಕೆ ಜನರು ಆಶ್ರಯಿಸುವುದು ವಕೀಲರನ್ನು. ಅದೊಂದು ವೃತ್ತಿಯಾಗಿರುವುದರಿಂದ ಅಲ್ಲಿ ಸ್ಪರ್ಧೆ ಆರೋಗ್ಯಪೂರ್ಣವಾಗಿದ್ದರೆ ಎಲ್ಲವೂ ಸೊಗಸೇ. ಆದರೆ ಈ ಸ್ಪರ್ಧೆಯು ಅನೈತಿಕವಾದಾಗ ಅದು ಬಣ್ಣಗೇಡು. ಎಲ್ಲರೂ ಅಲ್ಲದಿದ್ದರೂ ಸಾಕಷ್ಟು ಮಂದಿ ನ್ಯಾಯಾಶ್ರಿತರು ವಕೀಲರ ಆಯ್ಕೆಯಲ್ಲಿ ಸೋಲುತ್ತಾರೆ. ಕೊನೆಮುಟ್ಟುವ ಹೊತ್ತಲ್ಲಿ ಆತ ಹತಾಶನಾಗುತ್ತಾನೆ. ಕೈ ಖಾಲಿಯೂ ಹೌದು.
ಇದಕ್ಕೆ ಕಾರಣವೆಂದರೆ ನ್ಯಾಯಾಲಯದ ಭಾಷೆ, ಪರಿಭಾಷೆ ಬೇರೆಯೇ. ತಲೆಸರಿಯಿದ್ದವನು ಹುಚ್ಚಾಸ್ಪತ್ರೆಗೆ ಹೋದರೆ ಆತನೂ ಹುಚ್ಚನಾಗಬಹುದು. ಹಾಗೆಯೇ ನ್ಯಾಯಾಲಯಕ್ಕೆ ಹೋದವರು ತಮ್ಮ ಭಾಷೆಗೂ ನ್ಯಾಯಾಲಯದ ಭಾಷೆಗೂ ಹೊಂದಾಣಿಕೆ ತಪ್ಪಿಹೋದಂತಿರುತ್ತಾರೆ. ನ್ಯಾಯಾಲಯಗಳು ಹೇಳಿದ್ದಕ್ಕೆ ವಿರೋಧ ವ್ಯಕ್ತಪಡಿಸಲು ಜನಸಾಮಾನ್ಯರಿಗೆ ಮಾತ್ರವಲ್ಲ, ವಿದ್ಯಾವಂತರಿಗೂ ಸಾಧ್ಯವಿಲ್ಲ. ಅಲ್ಲಿನ ವಿಚಿತ್ರ ವಾತಾವರಣದಲ್ಲಿ ವಕೀಲರೇ ಕಕ್ಷಿದಾರ ಕೈಹಿಡಿದು ಮುನ್ನಡೆಸಬೇಕು.
ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಮೂರ್ತಿಗಳು ಸಾಕಷ್ಟು ಅನುಭವವನ್ನು ಹೊಂದಿರುತ್ತಾರೆಂದು ಆಶಿಸಲಾಗುತ್ತದೆ. ಅನೇಕ ಬಾರಿ ಇದು ಸರಿಯಾಗಿರುತ್ತದೆ. ಕೆಲವೊಮ್ಮೆ ಅಲ್ಲಿ ಕುಳಿತವರೂ ವಿಕ್ಷಿಪ್ತರಂತೆ ವರ್ತಿಸುವುದುಂಟು. ಕೆಳಹಂತದ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ಆಯ್ಕೆ ಮಾಡುವಾಗ ಅವರಿಗೆ ಕಾನೂನಿನ ಮೇಲಿರುವ ಹಿಡಿತ, ಸಂವೇದನೆ ಇವನ್ನೆಲ್ಲ ಹುಡುಕಿ ಆಯ್ಕೆ ಮಾಡುವ ಕ್ರಮ ಪ್ರಚಲಿತವಿತ್ತು. ಅದಕ್ಕಾಗಿ ಒಂದಷ್ಟು ವರ್ಷಗಳ ಕಾಲ ನ್ಯಾಯಾಲಯಗಳಲ್ಲಿ ವೃತ್ತಿಮಾಡಿದವರ ಪೈಕಿಯೇ ಈ ಆಯ್ಕೆ ನಡೆಯುತ್ತಿತ್ತು. ಅದಕ್ಕೊಂದು ಪರೀಕ್ಷೆ, ಸಂದರ್ಶನ ಇವೆಲ್ಲ ನಡೆಯುತ್ತಿದ್ದವು. ಈಗಲೂ ನಡೆಯುತ್ತವೆ. ಆದರೆ ವೃತ್ತಿಯ ಅನುಭವವು ಬೇಕಿಲ್ಲ. ಹೊಸದಾಗಿ ಕಾನೂನು ಪದವಿ ಪಡೆದವರಿಗೂ ನ್ಯಾಯಾಧೀಶರಾಗಲು ಅವಕಾಶವನ್ನು ಕಲ್ಪಿಸಲಾಗಿದೆ. ಜ್ಞಾನ ಮತ್ತು ಅನುಭವ ಇವೆರಡೂ ಸಮ್ಮಿಳಿತವಾದರೆ ಮಾತ್ರ ಜನಹಿತ ಸಾಧ್ಯ. ಇಲ್ಲವಾದರೆ ಒಣಪದವಿಗಳಷ್ಟೇ ಆಯ್ಕೆಗೆ ಆಧಾರವಾದರೆ ಅದು ಎಷ್ಟು ನಿಷ್ಪಕ್ಷಪಾತವಾಗಿ, ದಕ್ಷವಾಗಿ, ಉಳಿಯಬಹುದೋ ಕಾಣೆ. ಎಲ್ಲರೂ ಹೀಗಿರುತ್ತಾರೆಂದಲ್ಲ. ಅದರ ಅನುಭವದ ಅಮೃತ ಲಭಿಸದವರು ಇನ್ನೊಬ್ಬರಿಗೆ ನೀಡಬಹುದಾದದ್ದು ಜ್ಞಾನಾಧಾರಿತ ಪಾಂಡಿತ್ಯವೇ ಹೊರತು ಅದೊಂದು ಸೇವೆಯಾಗಿ ಪರಿಣಮಿಸದು. ನೀರಿಗೆ ಇಳಿಯದೆ ಈಜಿನ ಬಗ್ಗೆ ಪಿಎಚ್‌ಡಿ ಮಾಡಬಹುದಾದರೂ ಅದು ನೀರಿನ ಆಪ್ತತೆಯಲ್ಲಿ ನೆನೆಯದು. ಇದರಿಂದಾಗಿ ನ್ಯಾಯಾಧೀಶರಾದವರ ಆಸಕ್ತಿ, ಗುರಿ ಇವು ಅರ್ಥವಾಗದು. ಅದೂ ಒಂದು ವೃತ್ತಿಪರ ಸೇವೆಯಾಗಬೇಕೇ ಹೊರತು ಉದ್ಯೋಗವಾಗುವುದು ಸಾಮಾಜಿಕ ಹಿತಕ್ಕೆ ಪೂರಕವಲ್ಲ.
ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳನ್ನು ಆಯ್ಕೆಮಾಡಲು ‘ಕೊಲಿಜಿಯಂ’ ಎಂಬ ಹಿರಿಯ ಸರ್ವೋಚ್ಚ ನ್ಯಾಯಾಧೀಶರ ಒಂದು ಸಮಿತಿಯಿರುತ್ತದೆ. ಇದು ಎಲ್ಲ ಸಂದರ್ಭಗಳಲ್ಲಿ ಪಾರದರ್ಶಕವಾಗಿರುತ್ತದೆಂದೇನೂ ಇಲ್ಲ. ಆದರೆ ಬಹುಪಾಲು ಯೋಗ್ಯರ ಆಯ್ಕೆಯಾಗುತ್ತದೆ. ಅಲ್ಲೂ ಪ್ರಭಾವ, ವೈಯಕ್ತಿಕ ಹಿತಾಸಕ್ತಿ ನಡೆಯಬಾರದೆಂದೇನೂ ಇಲ್ಲ. ಈ ನ್ಯಾಯಮೂರ್ತಿಗಳ ಪಟ್ಟಿಯನ್ನು ಪರಿಶೀಲಿಸಿದರೆ ಒಂದೇ ಕುಟುಂಬ, ವಂಶದ ವ್ಯಕ್ತಿಗಳು ಆಯ್ಕೆಯಾದದ್ದೂ ಇದೆ. ಅವರೆಲ್ಲ ಅಯೋಗ್ಯರೆಂದಲ್ಲ. ಆದರೆ ನ್ಯಾಯಾಲಯಗಳು ಹೇಳುವ ‘ನ್ಯಾಯ ನೀಡಿದರೆ ಸಾಲದು; ಅದು ಕಾನೂನಿನನ್ವಯವಿದ್ದರೆ ಸಾಲದು; ಅಲ್ಲಿ ನ್ಯಾಯದಾನವಾಗಿದೆಯೆಂಬುದು ಸಮಾಜಕ್ಕೆ ಗೊತ್ತಾಗಬೇಕು.’ ಮಾತು ಸಾಬೀತಾಗಬೇಕು. ಇದು ಆಯ್ಕೆಯಲ್ಲಿ ವಿಶೇಷ ಬಿಕ್ಕಟ್ಟುಗಳನ್ನು ಸೃಷ್ಟಿಸಿದಂತಿಲ್ಲ. ಆದರೆ ನ್ಯಾಯಮೂರ್ತಿ ಕುರೇಷಿ, ಮುರಳೀಧರ ಮುಂತಾದವರನ್ನು ಸರ್ವೋಚ್ಚ ನ್ಯಾಯಮೂರ್ತಿಗಳಾಗಿ ಆಯ್ಕೆಮಾಡದ್ದರ ಗುಟ್ಟು ಇನ್ನೂ ಬಹಿರಂಗವಾಗಿಲ್ಲವಾದರೂ ನ್ಯಾಯಮೂರ್ತಿಗಳಿಗೂ ರಾಜಕಾರಣಕ್ಕೂ ಏನೋ ಸಂಬಂಧ ಸೃಷ್ಟಿಯಾಗುತ್ತಿದೆಯೇ ಎಂಬ ಸಂಶಯ ಜನಸಾಮಾನ್ಯರಲ್ಲೂ ಮೂಡದಿರದು.
ಸಾಮಾನ್ಯ ವ್ಯಕ್ತಿ ನ್ಯಾಯಾಲಯವನ್ನು ಪ್ರವೇಶಿಸಿದಾಗ ಅಲ್ಲಿನ ಕೃತಕ ಗಾಂಭೀರ್ಯ, ಅವಾಸ್ತವ ಶಿಸ್ತು ಇವೆಲ್ಲ ಆತನಿಗೆ ತಮಾಷೆಯಾಗಿ ಕಾಣುವುದಿಲ್ಲ. ಬದಲಿಗೆ ಆತನಲ್ಲಿ ಒಂದು ವಿಹ್ವಲತೆಯನ್ನು, ಅಸಹಾಯಕತೆಯನ್ನು ಆ ಮೂಲಕ ಪರಾವಲಂಬನೆಯ ಅನಿವಾರ್ಯವನ್ನು ಸೃಷ್ಟಿಸಬಲ್ಲುದು. ಯಾವುದೇ ಶಿಸ್ತಿನ ಕೇಂದ್ರದಲ್ಲೂ ಇದು ಹೀಗೆಯೇ ಎಂದು ಹೇಳುವುದುಂಟು. ಆದರೆ ಈ ಪರಿಯ ಅಧಿಕಾರದ ಅಂತರ ಬೇರೆಕಡೆ ಕಾಣದು. ಸರಿಯೋ ತಪ್ಪೋ ಕೊನೇ ಪಕ್ಷ ರಾಜಕಾರಣಿಗಳೋ, ಅಧಿಕಾರಿಗಳೋ ನಿಮ್ಮ ನೆರವಿಗೆ ಬಂದಾರು. ನ್ಯಾಯಾಲಯಗಳಲ್ಲಿ ಈ ಸೌಕರ್ಯಗಳಿಲ್ಲ. ಆರೋಪಿಯಾಗಿ ಬಂದರಂತೂ ಆತನ ಬದುಕಿನ ಎಲ್ಲ ಯಶಸ್ಸೂ ಮಣ್ಣುಪಾಲಾದಂತೆ. ಅಲ್ಲಿ ಎಲ್ಲರ ದೃಷ್ಟಿ ತನ್ನೆಡೆಗೆ ಚಾಚುವ ಹಿಂಸೆ ಮಾತ್ರವಲ್ಲ, ಎಂಥವರೇ ಆಗಲಿ, ಇನ್ನೂ ಆರೋಪದ ಹಂತದಲ್ಲೇ ಇರುವ ಸಂದರ್ಭದಲ್ಲೂ ತಾನು ಅಪರಾಧಿಯೇ ಅನ್ನಿಸುವಂತಹ ಒಂದು ದುರ್ಭರ ವಾತಾವರಣ ಅಲ್ಲಿ ಸೃಷ್ಟಿಯಾಗುತ್ತದೆ. ಯಾವುದೋ ಕಾರಣಕ್ಕೆ ಹಾಜರಾಗಲು ತಪ್ಪಿದರೆ ಆತನ ಗೈರುಹಾಜರಿಯ ಅನಿವಾರ್ಯತೆಯನ್ನು ನ್ಯಾಯಾಲಯ ಊಹಿಸಿ ತಾನಾಗಿಯೇ ಆತನಿಗೆ ಇನ್ನೊಂದು ಅವಕಾಶವನ್ನು ನೀಡುವುದಿಲ್ಲ. ಬೇಕಾದರೆ ಆತನೇ ಮತ್ತೆ ಅರ್ಜಿಹಾಕಿ ತನ್ನ ಗೈರುಹಾಜರಿಯನ್ನು ಮನ್ನಿಸುವಂತೆ ಬೇಡಿಕೊಳ್ಳಬೇಕು. ಇದಕ್ಕೆ ಮಾನ್ಯತೆ ಸಿಗಬೇಕಾದರೆ ಆತನ ವಕೀಲರ ಸಹಾಯ ಬೇಕು. ಎಂತಹ ವಿಪರ್ಯಾಸವೆನ್ನಿಸಬೇಕು.
ಸಾಕ್ಷಿ ಹೇಳಲು ಬಂದರೂ ಕಾಯುವ ಕಷ್ಟ ಆ ತಿರುಪತಿ ತಿಮ್ಮಪ್ಪನಿಗೂ ಬೇಡ. ಕ್ಯೂವಿನಲ್ಲಿ ನಿಂತು ದೇವರ ದರ್ಶನವನ್ನು ಪಡೆಯುವುದೂ ಇದಕ್ಕಿಂತ ಉತ್ತಮವೆನ್ನಿಸುತ್ತದೆ. ಸಿಗಬೇಕಾದ ಗೌರವ ಸಿಗುವುದಿಲ್ಲ. ಯಾರೇ ಆದರೂ ನ್ಯಾಯಾಲಯದೆದುರು ಸಮಾನರು ಸರಿ. ಅವಮಾನದಲ್ಲೂ ಸರಿಯೇ? ಸಾಕ್ಷಿ ಹೇಳಲು ಬಂದವನೊಬ್ಬ ಅಪರಿಚಿತ ವಾತಾವರಣ, ಸಂದರ್ಭದಲ್ಲಿ ಹಾಸ್ಯಾಸ್ಪದವಾಗಿ ವರ್ತಿಸಿದರೆ ನ್ಯಾಯಾಲಯ ಆತನ ನೆರವಿಗೆ ಬರುವುದಿಲ್ಲವೆಂದಲ್ಲ; ಆದರೆ ದಿನದ ಜಂಜಡದ ಬಿಡುವಿಲ್ಲದ ಕೆಲಸದ ನಡುವೆ ಬಹುಪಾಲು ತಾಳ್ಮೆಗೆಟ್ಟು ಒದರುವುದೂ ಇದೆ. ಇದಿರಾಡಿದಿರೆಂದರೆ ನ್ಯಾಯಾಲಯ ನಿಂದನೆಯೆಂಬ ಬ್ರಹ್ಮಾಸ್ತ್ರವಿದೆ. ಅಧೀನ ನ್ಯಾಯಾಲಯಗಳಲ್ಲಿ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂಬ ಆಪಾದನೆಯ ಮೇಲೆ ಭದ್ರತಾ ಸಿಬ್ಬಂದಿಯ, ಪೊಲೀಸರ ವಶಕ್ಕೆ ಅಮಾಯಕರನ್ನು ನೀಡಿದ ಉದಾಹರಣೆಗಳೂ ಇವೆ. ತಪ್ಪಿತಸ್ಥರು ನ್ಯಾಯಾಧೀಶರ ಮೇಲೆ ರೇಗುವುದು, ಅವರ ಮೇಲೆರಗುವುದು ಇವೂ ಇವೆ. ನ್ಯಾಯಾಲಯಗಳಲ್ಲಿ ಅಶಾಂತ ವಾತಾವರಣವುಂಟಾದರೆ ನ್ಯಾಯಾಧೀಶರು ಹೇಗೆ ಪ್ರತಿಕ್ರಿಯಿಸಬೇಕು? ಒಟ್ಟಾರೆ ಒತ್ತಡದ ವಾತಾವರಣ.
ನ್ಯಾಯಾಧೀಶರು ಸುಖವಾಗಿ ಇದ್ದಾರೆಂದು ಭಾವಿಸಿದರೆ ಅದು ಭ್ರಮೆ. ಅವರು ಸದಾ ಒತ್ತಡದಲ್ಲೇ ಕೆಲಸ ಮಾಡುತ್ತಾರೆ. ಅವರಿಗೆ ಕೆಲಸದ ಮಾಪನವಿದೆ. ಇಷ್ಟು ಗುರಿಯನ್ನು ಸಾಧಿಸಬೇಕೆಂಬ ನಿಯಮವಿದೆ. ಖಾಸಗಿತನವಿದೆ. ಯಾರೊಂದಿಗೂ ಬೆರೆಯುವಂತಿಲ್ಲ. ನಿಮ್ಮೊಡನಿದ್ದೂ ನಿಮ್ಮಂತಾಗದ ಒಂಟಿತನ ಅವರದ್ದು. ಇದು ವಕೀಲರ, ಆರೋಪಿಗಳ, ಸಾಕ್ಷಿಗಳ, ಕಕ್ಷಿದಾರರ ಮತ್ತು ಇತರ ಮಂದಿಯ ಕುರಿತು ರೇಗುವಂತೆ ಒತ್ತಾಯಿಸುತ್ತವೆ. ಒಬ್ಬಂಟಿಯಾಗಿ ಸಂಚರಿಸಿದಾಗ ಎಲ್ಲಿ ಅಪಾಯವಾಗುತ್ತದೆಯೋ ಎಂಬ ಆತಂಕ. ನ್ಯಾಯಾಲಯದೊಳಗಿರುವ ಅಧಿಕಾರ ಈ ಕಿಚ್ಚಿಗೆ ಗಾಳಿಯಂತೆ, ಎಣ್ಣೆಯಂತೆ ಇನ್ನಷ್ಟು ಉರಿಯಲು ಸಹಾಯ ಮಾಡುತ್ತದೆ. ವಿಚಿತ್ರವಾದ ಸಂಬಂಧಗಳು ಸೃಷ್ಟಿಯಾಗುವುದು ಹೀಗೆಯೇ.
ಇಂತಹ ನೂರೆಂಟು ಸಂದರ್ಭಗಳಿವೆ. ಇವುಗಳನ್ನು ನ್ಯಾಯಾಲಯಗಳು ನಿಭಾಯಿಸಬೇಕಾದರೆ ಅವು ಜನರನ್ನು ಹತ್ತಿರಕ್ಕೆಳೆದುಕೊಳ್ಳಬೇಕು. ಚಳಿಯಾಗದಷ್ಟು ದೂರ, ಸುಡದಷ್ಟು ಹತ್ತಿರ ಬೆಂಕಿಯನ್ನು ಇಟ್ಟುಕೊಂಡಂತೆ ನ್ಯಾಯಾಲಯಗಳು ಮತ್ತು ಸಮಾಜವಿರಬೇಕಾಗುತ್ತದೆ. ರಾಜಕಾರಣದಿಂದ ದೂರವಿರಬೇಕಾದದ್ದು ಅತೀವ ಅಗತ್ಯ. ಆದರೆ ಕೆಲವೊಮ್ಮೆ ನ್ಯಾಯಾಧೀಶರೂ ಬೆಂಕಿಯ ಮೇಲಿಟ್ಟ ಬೆಣ್ಣೆಯಂತೆ ಕರಗಿದರೆ ಸರಿಯೋ ತಪ್ಪೋ ಅವರೂ ಮನುಷ್ಯರು ಎಂದು ತಿಳಿಯಬೇಕಾಗುತ್ತದೆ.
ಇವೆಲ್ಲವನ್ನು ನೋಡುವ ಸಾಮಾನ್ಯನೊಬ್ಬನಿಗೆ ನ್ಯಾಯಾಲಯದ ಕುರಿತು ಗೌರವಕ್ಕಿಂತ ಹೆಚ್ಚಾಗಿ ಭಯವುಂಟಾದೀತು. ಪುಸ್ತಕದಲ್ಲಿರುವ
ನೀತಿಗಳೆಲ್ಲ ವಾಸ್ತವ ಬದುಕಿನಲ್ಲಿ ಬಂದರೆ ಮಂದಿ ನ್ಯಾಯಾಲಯಗಳನ್ನು ಗೌರವಿಸುವುದು ಸಾಧ್ಯವಾದೀತೇನೋ? ಈಗಿರುವ ಪರಿಸ್ಥಿತಿಯಲ್ಲಿ ನ್ಯಾಯಾಲಯಗಳೇ ಪ್ರಜೆಗಳಿಗೆ ಶ್ರೀರಕ್ಷೆ. ಉಳಿದೆರಡು ಅಂಗಗಳೂ ಊನವಾಗಿರುವಾಗ ಸಂವಿಧಾನದ ಉಳಿವು ಅವುಗಳಿಂದ ಮಾತ್ರ ಸಾಧ್ಯ. ಅವುಗಳ ದೋಷಗಳ ಹೊರತಾಗಿಯೂ ನ್ಯಾಯಾಲಯಗಳನ್ನು ಗೌರವಿಸುವುದು ಅತೀ ಅಗತ್ಯ ಮಾತ್ರವಲ್ಲ, ಅನಿವಾರ್ಯ.