ಸುಖ ಸಂಸಾರಕ್ಕೆ ಬ್ರಹ್ಮಚಾರಿಯ ಸಲಹೆಗಳು

ಸನ್ಯಾಸಿಯೊಬ್ಬ ಸಂಸಾರಿಗೆ ಸುಖಸಂಸಾರದ ಸೂತ್ರ ಹೇಳಿದರೆ ಅಚ್ಚರಿಪಡಬೇಕಾಗಿಲ್ಲ; ಈ ಸನ್ಯಾಸಿ ಪೂರ್ವದಲ್ಲಿ ಸಂಸಾರಿಯಾಗಿದ್ದಿರಬಹುದು ಎಂದು ಊಹಿಸಬಹುದು. ಆದರೆ ಬ್ರಹ್ಮಚಾರಿಯೆಂದು ಹೇಳಿಕೊಳ್ಳುವವನೊಬ್ಬ ಸಂಸಾರಿಗೆ ಸುಖಸಂಸಾರ ಹೂಡುವುದು, ಮಾಡುವುದು ಹೇಗೆಂದು ಹೇಳುವಂತಿದೆ ಪ್ರಧಾನಿಯವರ ಠೀವಿ. ತಾನು ಮಾಡದ್ದನ್ನು, ತಾನು ನೋಡದ್ದನ್ನು ಇನ್ನೊಬ್ಬರಿಗೆ ಹೇಳುವ ಕಲೆಯು ಹಾಸ್ಯಾಸ್ಪದವಾಗುತ್ತದೆಂಬ ಮತ್ತು ಜನರ ಸಂಶಯದ ಸೂಜಿ ತನ್ನನ್ನು ಇರಿಯಬಹುದೆಂಬ ಅರಿವು ಅವರಿಗಿಲ್ಲ. ಆದ್ದರಿಂದ ಈಗಿನ ಅವರ ನಿಲುವು ಸಹಜ; ಅದು ಮಹಾಭಾರತದ ಅಶ್ವತ್ಥಾಮನದ್ದೇ ಹೊರತು ಧರ್ಮರಾಜನದ್ದಲ್ಲ.
ಗೋದಿ ಮೀಡಿಯಾದ ಅವಾಂತರಗಳಿಂದಾಗಿ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲದಲ್ಲಿ ಸತ್ಯವಾದ ಸುದ್ದಿಯೂ ಅವಗಣನೆಗೆ ತುತ್ತಾಗುತ್ತಿದೆ. ಈಗೀಗ ಹಂಸಕ್ಷೀರ ನ್ಯಾಯದಲ್ಲೂ ಕೆಸರನ್ನು ಸವಿದು ಕ್ಷೀರವನ್ನೆಸೆಯುವ ಅನಿವಾರ್ಯತೆ ಸಮಾಜಕ್ಕೆ ಬಂದಿದೆ. ನಮ್ಮ ಪಾಡಿಗೆ ನಾವು ಎಂಬ ಹೊಸ ಸತ್ಯವನ್ನು ಕಂಡುಕೊಂಡ ವಿದ್ಯಾವಂತ, ಬುದ್ಧಿವಂತ ಅವಿವೇಕಿಗಳು ತಾವು ಯಾವುದಕ್ಕೂ ಇಲ್ಲವೆಂಬಂತೆ ನಿದ್ರೆಯ ಸೋಗು ಹಾಕಿ ಕೆಲವೊಮ್ಮೆ ಮುಸುಕು ಹಾಕಿ ಆತ್ಮರತಿಯಲ್ಲಿ ತೊಡಗಿ ನಟಸಾಮ್ರಾಟರಾಗುತ್ತಿದ್ದಾರೆ.
ಕೆಲವು ಸುದ್ದಿಗಳು ಕಾಡುತ್ತವೆ; ಅಥವಾ ಕಾಡಬೇಕು. ಡೊನಾಲ್ಡ್ ಟ್ರಂಪ್ ಎಂಬ ‘ವಿಶ್ವದ ಸರ್ಕಾರ್’ ಬೀದಿಯಲ್ಲಿ ಬೆಂಕಿ ಹಿಡಿದು ಅಡ್ಡಾಡುವ ಹುಚ್ಚರಂತೆ ಜಗತ್ತಿನ ಸ್ಥಿತಿಗತಿಗೇ ಬೆಂಕಿಯಿಡುವ ಹೊಸ ಸಾಹಸದಲ್ಲಿದ್ದಾರೆ. (ಏಕವಚನ ನಮ್ಮ ಸಭ್ಯತೆಯನ್ನು ಕುಂದಿಸುತ್ತದೆ!) ಚೀನಾ ಅಮೆರಿಕಕ್ಕೆ ಸೆಡ್ಡುಹೊಡೆದು ನಿಂತದ್ದರ ಪ್ರಭಾವದಿಂದಾಗಿ ಈ ಟಾರಿಫ್‌ನ ಯುದ್ಧದಲ್ಲಿ ಅಮೆರಿಕವನ್ನು ಕಂಗೆಡಿಸಿದೆ. ಚೀನಾದಿಂದ ಆಮದಾಗುವ ವಿದ್ಯುನ್ಮಾನ ಉಪಕರಣಗಳು, ಮೊಬೈಲ್ ಫೋನ್ ಮುಂತಾದ ಮನೆಬಳಕೆಯ ಆಧುನಿಕ ಉಪಕರಣಗಳ ಮೇಲಿನ ಟಾರಿಫನ್ನು ಟ್ರಂಪ್ ಹಿಂದೆ ಪಡೆಯಲೇಬೇಕಾಯಿತು. ಎದುರಾಳಿ ಯಾರೆಂದು ಅರಿತುಕೊಳ್ಳದೆ ಶಸ್ತ್ರ ಹಿಡಿದರೆ ಉತ್ತರಕುಮಾರನ ಪಾತ್ರ ಅನಾವರಣವಾಗಲೇಬೇಕಲ್ಲ!
ಕೆನಡಾ, ಯುರೋಪಿಯನ್ ಒಕ್ಕೂಟ, ಮಾತ್ರವಲ್ಲ, ಬ್ರಿಟನ್, ಜಪಾನ್ ಕೂಡಾ ಅಮೆರಿಕದ ‘ಟಾರಿಫ್’ನ ತಾರೀಫನ್ನು ಎದುರಿಸಲು ನಿರ್ಧರಿಸಿದೆ. ಆಫ್ರಿಕಾದ ಪುಟ್ಟ ದೇಶ ನಮೀಬಿಯಾದ ಅಧ್ಯಕ್ಷರು (ಆಕೆಯೂ ನಮ್ಮ ರಾಷ್ಟ್ರಪತಿಗಳಂತೆ ಮಹಿಳೆ!) ಇದನ್ನು ಪ್ರತಿಭಟಿಸಿ ಅಮೆರಿಕನ್ನರಿಗಿದ್ದ ವೀಸಾರಹಿತ ಪ್ರವೇಶವನ್ನು ನಿರ್ಬಂಧಿಸಿದರು. ಸಿಂಗಾಪುರದ ಪ್ರಧಾನಿ ಲಾರೆನ್ಸ್‌ವಾಂಗ್ ಚರಿತ್ರಾರ್ಹ ಭಾಷಣವನ್ನು ಮಾಡಿ ಬದಲಾಗುತ್ತಿರುವ ಜಾಗತಿಕ ಮಾದರಿಗಳನ್ನು ಗುರುತಿಸಿದರು. ಹಿಟ್ಲರನ ಕಾಲಕ್ಕೆ ವಿಸ್ತರಣಾದಾಹ ದೈಹಿಕ ಹಿಂಸೆ ಮುಖ್ಯವಾಗಿದ್ದರೆ ಈಗ ಆರ್ಥಿಕ ಮೇಲ್ಮೆಯ ದಾಹವು ಬೆಳೆಯುವ ದೇಶಗಳನ್ನು ನಾಶಮಾಡುವ ಹುನ್ನಾರದಲ್ಲಿದೆಯೆಂದು ಈ ಎಲ್ಲರೂ ಸಾರಿದರು. ಆದರೆ ಪ್ರವಾಸೋದ್ಯಮ ಮತ್ತು ತೈಲದಿಂದಲೇ ಬದುಕುವ ಕೆಲವು ಮಧ್ಯಪೂರ್ವ ದೇಶಗಳು ಇವು ತಮಗೆ ಸಂಬಂಧಿಸಿದ್ದಲ್ಲವೆಂದು ನಮ್ಮ ಕೆಲವು ಸಾಹಿತಿ-ಚಿಂತಕರ ಹಾಗೆ ಸುಮ್ಮನಿವೆ. ಅಪರೂಪಕ್ಕೊದಗಿದ ಮಿತ್ರನಂತೆ ರಶ್ಯ ಅಮೆರಿಕದೊಂದಿಗೆ ಹೊಸ ಸಂಬಂಧ ಬೆಳೆಸಲು, ಬಾಂಧವ್ಯ ನಡೆಸಲು ಸಿದ್ಧವಾಗಿದೆ. ಈ ನಂಟಿನ ಅಂಟುರೋಗದ ಕೊನೆ ಬಲ್ಲವರಾರು ಎಂದು ಕೇಳಬೇಕಾಗಿಲ್ಲ. ಜಗತ್ತನ್ನು ಅಸ್ತವ್ಯಸ್ತಗೊಳಿಸುವುದು ಆ ತಲ್ಲಣದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಪುತಿನ್ ಸಿದ್ಧರಿದ್ದಾರೆಂಬುದನ್ನು ಪ್ರದರ್ಶಿಸಿದರು. ಉಕ್ರೇನ್‌ನ ನಾಶಕ್ಕೆ ಅಮೆರಿಕ ಹಾಗೂ ರಶ್ಯ ಒಟ್ಟಾದರೆ, ಯುರೋಪಿಯನ್ ಒಕ್ಕೂಟ, ಬ್ರಿಟನ್ ಜೊತೆಗೆ ಚೀನಾ ಈಗ ಉಕ್ರೇನಿನ ಬೆಂಬಲಕ್ಕಿದೆ. ಒಟ್ಟಾರೆ ವಿಶ್ವದ ಲೆಕ್ಕಾಚಾರವು ತಲೆಕೆಳಗಾಗುತ್ತಿದೆ. ಬರಲಿರುವ ದಿನಗಳು ಕಠಿನವಾಗಿವೆ.
ಈ ಎಲ್ಲ ಬೆಳವಣಿಗೆಯ ನಡುವೆ ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಎಂದು ಅಮೆರಿಕದ ನೆಲದಲ್ಲಿ ಘೋಷಿಸಿದ ‘ವಿಶ್ವಗುರು’ ಭಾರತದ ಪ್ರಧಾನಿ ಮೋದಿಯವರು ತಕ್ಷಣದಲ್ಲೇ ಅಮೆರಿಕಕ್ಕೆ ರಫ್ತಾಗುವ ಎಲ್ಲಾ ಸಾಮಗ್ರಿಗಳ ಮೇಲಿದ್ದ ಸುಂಕವನ್ನು ಕಡಿಮೆಮಾಡಿದ್ದಾರೆ. ಆದರೆ ಟ್ರಂಪ್ ಎಲ್ಲರ ಅಲ್ಲ- ವಿಶ್ವಗುರುವಿನ ಎಲ್ಲ - ನಿರೀಕ್ಷೆಗಳನ್ನು ಮೀರಿ ಭಾರತಕ್ಕೆ ಅಗತ್ಯ ವಿನಾಯಿತಿ ನೀಡದೆ ಗುರುವಿಗೆ ತಿರುಮಂತ್ರಹಾಕಿದ್ದಾರೆ. ಅಮೆರಿಕದಲ್ಲಿರುವ ಭಾರತೀಯರಿಗೆ ತುದಿಗಾಲನ್ನು ಉಡುಗೊರೆ ನೀಡಿ ಅನೇಕರಿಗೆ ದೇಶತೊರೆಯಲು ಕ್ಷಣಗಣನೆಗೆ ಅವಕಾಶ ನೀಡಿದ್ದಾರೆ. ಆನಂತರದ ಈ ಆರ್ಥಿಕ ಬೆಳವಣಿಗೆಯಲ್ಲಿ ನಮ್ಮ ಪ್ರಧಾನಿ ಚಿಂತನಾಮಗ್ನರಾಗಿದ್ದಾರೆ.
ಮೌನವೆಂಬುದು ಈಗಾಗಲೇ ಅವರು ಮನಮೋಹನ್‌ರಿಗೆ ನೀಡಿದ ಬಿರುದಾದ್ದರಿಂದ ಮೋದಿಯವರು ಸುಮ್ಮನಿದ್ದರೆ ಅದನ್ನು ವಿವರಿಸುವ ಪದವು ಪದಕೋಶದಲ್ಲಿಲ್ಲ. ಚಿಂತಾಕ್ರಾಂತರೆಂಬ ಸ್ಥಿತಿ ಅವರಿಗೆ ಅನ್ವಯಿಸುವುದಿಲ್ಲ. ಪುಲ್ವಾಮಾ ಪ್ರಸಂಗದಲ್ಲಾಗಲೀ, ನೋಟು ಅಮಾನ್ಯೀಕರಣದಲ್ಲಾಗಲೀ, ಕೋವಿಡ್-19ರಲ್ಲಾಗಲೀ 145 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಕುಂಭಮೇಳದಲ್ಲಾಗಲೀ ಸತ್ತವರ ಸಂಖ್ಯೆಯ ಕುರಿತು ತಲೆಕೆಡಿಸಿಕೊಳ್ಳಲಿಲ್ಲ; ಚಿಂತಾಕ್ರಾಂತರಾಗಲಿಲ್ಲ. ಏಕೆಂದರೆ ಉಳಿದ ಸಂಖ್ಯೆಯೇ ವಿಶ್ವದಲ್ಲಿ ಭಾರತದ ಜನಸಂಖ್ಯೆಯನ್ನು ಮೊದಲಸ್ಥಾನದಲ್ಲಿಟ್ಟಿದೆ; ಪ್ರಧಾನಿಯನ್ನು ಅಗ್ರಪೂಜೆಗೆ ಸಿದ್ಧಪಡಿಸಿದೆ. ವಿದೇಶಾಂಗ ಸಚಿವ ಜೈಶಂಕರ್ ಪಾಪ, ಮೇಲುಬ್ಬಸಪಟ್ಟುಕೊಂಡು ಮೌನತಾಳಿ ತಲೆತುರಿಸಿಕೊಂಡು ಒಮ್ಮೊಮ್ಮೆ ಪ್ರಧಾನಿಯವರತ್ತ ದೀನದೃಷ್ಟಿ ಬೀರಿ ಉಗುರುಕಡಿಯುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ದೇಶದ ಪ್ರಧಾನಿ ಏನು ಮಾಡಬೇಕು? ರಶ್ಯ-ಉಕ್ರೇನ್ ಯುದ್ಧ ನಿಲ್ಲುವುದಿಲ್ಲ. ಅಮೆರಿಕದ ಟಾರಿಫ್ ನಿಲುಗಡೆಯಾಗುವುದಿಲ್ಲ. ಇರಾನ್-ಅಮೆರಿಕ ಬಿಕ್ಕಟ್ಟು ಮುಗಿಯುವ ಲಕ್ಷಣವಿಲ್ಲ. ಪಾಕಿಸ್ತಾನದ ವಿರುದ್ಧ ಹೇಳುವುದನ್ನೆಲ್ಲ ಹೇಳಿ ಮುಗಿದಿದೆ. ಬಾಂಗ್ಲಾ, ನೇಪಾಳ, ಭೂತಾನ್, ಮತ್ತಿತರ ನೆರೆ ದೇಶಗಳು ಭಾರತದ ತೆಕ್ಕೆಯಿಂದ ಜಾರಿ ಚೀನಾದ ಕಡೆ ಹೊರಳಿವೆ. ದೇಶದ ಆರ್ಥಿಕತೆ ಕೆಟ್ಟಿದೆ. ನಿರುದ್ಯೋಗ ನಿವಾರಣೆಗೆ, ಬೆಲೆಯೇರಿಕೆ ತಡೆಗೆ ಜನೌಷಧಿ ಪತ್ತೆಯಾಗಿಲ್ಲ. ಇರುವ ಒಂದೇ ಮಾರ್ಗವೆಂದರೆ ತಮ್ಮ ಪರಮ ಭಕ್ತರ ಆಸೆಕಂಗಳಿಗೆ ಹೊಸ ದೃಷ್ಟಿಯನ್ನು ನೀಡುವುದು ಅಂದರೆ ಮತೀಯವಾದ ಹೊಸ ಸರಕನ್ನು ಅನಾವರಣಗೊಳಿಸುವುದು. ಹಾಗಾಗಿ ಭಾರೀ ನಿರೀಕ್ಷೆಯ ‘ವಕ್ಫ್ ತಿದ್ದುಪಡಿ ಕಾಯ್ದೆ-2025’ ಜಾರಿಯಾಯಿತು. ಲೋಕಸಭೆಯಲ್ಲಿ 288-232 ಹಾಗೂ ರಾಜ್ಯಸಭೆಯಲ್ಲಿ 128-95 ಬಹುಮತದಲ್ಲಿ ಮಸೂದೆ ಅಂಗೀಕಾರವಾಯಿತು. ಹಿಂದುತ್ವದ ಕನಸು ನನಸಾಯಿತು; 145 ಕೋಟಿ ಭಾರತೀಯರ ಪ್ರಜಾಪ್ರಭುತ್ವವು ಗೆದ್ದಿತು. ನಮ್ಮ ಅನೇಕ ಹಿಂದೂ ಬಾಂಧವರಿಗೆ ಕಾಯ್ದೆ ಅರ್ಥವಾಗದಿದ್ದರೂ ತಮಗೇ ಸಾವಿರಾರು ಎಕರೆ ವಕ್ಫ್ ಆಸ್ತಿ ಸಿಕ್ಕಿದಷ್ಟು ಸಂತೋಷವಾಯಿತು.
ಮೊನ್ನೆ 14ನೇ ದಿನಾಂಕ ಸೋಮವಾರದಂದು ನಮ್ಮ ಪ್ರಧಾನಿ ಹರ್ಯಾಣದ ಹಿಸ್ಸಾರಿನಲ್ಲಿ ಮಾತನಾಡುತ್ತ ವಿಶೇಷ ಅಣಿಮುತ್ತೊಂದನ್ನು ಉದುರಿಸಿದರು. ಇತ್ತೀಚೆಗೆ ಸಂಸತ್ತಿನಲ್ಲಿ ಸ್ವೀಕೃತವಾಗಿ ರಾಷ್ಟ್ರಪತಿಯವರ ಸಹಿ ಪಡೆದ ‘ವಕ್ಫ್ ತಿದ್ದುಪಡಿ ಕಾಯ್ದೆ’ಯ ಸಂಬಂಧದ ಬಹಿರಂಗ ಭಾಷಣದಲ್ಲಿ ಪ್ರಧಾನಿ ವಕ್ಫ್ ಆಸ್ತಿಗಳ ಸದುಪಯೋಗವಾಗಿದ್ದರೆ ಮುಸ್ಲಿಮರು ಟೈರ್ ಪಂಕ್ಚರ್ ರಿಪೇರಿಯ ಕೆಲಸವನ್ನು ಮಾಡಬೇಕಾಗಿರಲಿಲ್ಲವೆಂದೂ ಅದು ಕೆಲವೇ ಭೂಮಾಫಿಯಾಗಳಿಗೆ ನೆರವಾಗಿದ್ದರಿಂದ ಉಳಿದವರು ಏನೂ ಪಡೆಯದಾದರು ಎಂದರು. ಇನ್ನು ಮುಂದೆ ವಕ್ಫ್ ಮಂಡಳಿಯು ಬುಡಕಟ್ಟು ಅಥವಾ ಪರಿಶಿಷ್ಟ ವರ್ಗದವರ ಆಸ್ತಿಗಳನ್ನು ಸ್ವಾಧೀನಪಡಿಸಲು ಸಾಧ್ಯವಿಲ್ಲವೆಂದು ಹೇಳಿದರು. ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ಮುಸ್ಲಿಮರ ಕುರಿತು ದಯೆಯಿದ್ದರೆ ಮುಸ್ಲಿಮರೊಬ್ಬರನ್ನು ಪಕ್ಷದ ಅಧ್ಯಕ್ಷರಾಗಿಸಬೇಕಿತ್ತು ಎಂದರು. ಇಂತಹ ಸಾಕಷ್ಟು ಸ್ವಾತಿಮುತ್ತುಗಳು ಅವರ ಬಗಲಲ್ಲಿದ್ದವು.
ಮೋದಿಯವರು ಈ ಮಾತನ್ನು ಹೇಳಿದರೆ ಅದೊಂದು ಅಯೋಗ್ಯ ಮಾತೆಂದು ಉಚ್ಚಿಷ್ಟವನ್ನು ಮೆಟ್ಟದೆ ದಾಟಿ ನಡೆದಂತೆ ಅಲಕ್ಷಿಸಬಹುದು. ಆದರೆ ದುರದೃಷ್ಟಕ್ಕೆ ಆ ಸಂದರ್ಭದಲ್ಲಿ ಅವರು ದೇಶದ ಪ್ರಧಾನಿಯಾಗಿದ್ದರು. ಒಂದು ದಶಕಕ್ಕೂ ಮೀರಿದ ಅಧಿಕಾರಾವಧಿಯಲ್ಲಿ ಅವರಿಗೆ ಅಲ್ಪಸಂಖ್ಯಾತ ಮುಸ್ಲಿಮರ ಕುರಿತು ಇಷ್ಟೊಂದು ದಯೆ ಬಂದದ್ದು ವಿಶೇಷವಾಗಿತ್ತು. ಅವರ ದಯೆಯಿಲ್ಲದಿದ್ದರೆ ಅದಾನಿ ಅಂಬಾನಿಯವರೂ ಟೈರ್ ಪಂಕ್ಚರ್ ರಿಪೇರಿ ಮಾಡುತ್ತಿದ್ದರೋ ಅಥವಾ ವಿಜಯ ಮಲ್ಯ, ನೀರವ್ ಮೋದಿ, ಮುಂತಾದವರಂತೆ ದೇಶಬಿಟ್ಟು ಓಡಿಹೋಗುತ್ತಿದ್ದರೇನೋ ಗೊತ್ತಿಲ್ಲ. ಕಾಮನಬಿಲ್ಲನ್ನು ಕೇಸರಿ ಬಣ್ಣದಲ್ಲಿ ಮುಳುಗಿಸುವ ವಿಭಜನಾ ತಂತ್ರದ ಮೂಲಕ ದೇಶ ಕಟ್ಟುವ ಅವರ ಕಾಯಕದಲ್ಲಿ ಇತರ ಅಲ್ಪಸಂಖ್ಯಾತರ ಕುರಿತು ಅವರ ಆಶೀರ್ವಾದ ಏನಿರುತ್ತದೆಯೋ ಎಂದು ಕಾದು ನೋಡಬೇಕು.
ಇದೇ ಸಂದರ್ಭದಲ್ಲಿ ಅವರೂ ಒಂದು ಮಾತು ಹೇಳಬೇಕಾಗಿತ್ತು. ಹಿಂದುತ್ವವಲ್ಲದಿದ್ದರೆ ತನ್ನಂತೆ ಹಿಂದೂಗಳೂ ಚಹಾ ಮಾರಬೇಕಾಗಿತ್ತು ಎಂಬುದೇ ಇದರ ತತ್ಸಮ ಉಕ್ತಿ. ಏಕೆಂದರೆ ಮೋದಿಯವರು ಪ್ರಧಾನಿಯಾದಂತೆ ಡಾ. ಝಾಕಿರ್ ಹುಸೇನ್, ಫಕ್ರುದ್ದೀನ್ ಅಲಿ ಅಹ್ಮದ್, ಎ.ಪಿ.ಜೆ. ಅಬ್ದುಲ್ ಕಲಾಂ ಮುಂತಾದ ಮುಸ್ಲಿಮರು ರಾಷ್ಟ್ರಪತಿಯಾಗಿದ್ದರು. ಹಿದಾಯತುಲ್ಲಾ, ಛಾಗ್ಲಾ ಮುಂತಾದವರು ಭಾರತದ ಮುಖ್ಯ ನ್ಯಾಯಾಧೀಶರಾಗಿದ್ದರು. ಈಚೆಗೆ ಅಯೋಧ್ಯೆಯ ರಾಮಜನ್ಮಭೂಮಿ ವಿವಾದದಲ್ಲಿ ಹಿಂದುತ್ವದ ಪರವಾಗಿ ತೀರ್ಪು ನೀಡಿದ ಜಾತ್ಯತೀತ ನ್ಯಾಯಮೂರ್ತಿ ಅಬ್ದುಲ್ ನಝೀರ್ ಮೋದಿಯವರ ಕೃಪೆಯಿಂದ ರಾಜ್ಯಪಾಲರಾದರು. ಕಬೀರ, ಶಿಶುನಾಳ ಶರೀಫ್ ಆಧ್ಯಾತ್ಮಿಕ ಸಾಧನೆಯ ಕವಿಗಳಾದರು. ಬಿಸ್ಮಿಲ್ಲಾ ಖಾನ್, ಝಾಕಿರ್ ಹುಸೇನ್ ಮುಂತಾದ ಅನೇಕರು ವಿಶ್ವಮಟ್ಟದ ಸಂಗೀತಗಾರರಾದರು. ನಮ್ಮ ಅಸಾಮಾನ್ಯ ಕ್ರೀಡಾಪಟುಗಳಲ್ಲಿ ಮುಸಲ್ಮಾನರೂ ಇದ್ದಾರೆ. ಈ ದೇಶದಲ್ಲಿರುವ ಅಸಂಖ್ಯ ಹಿಂದೂ-ಮುಸ್ಲಿಮರು ತಾವು ಟೈರ್ ಪಂಕ್ಚರ್ ರಿಪೇರಿ ಮಾಡುತ್ತಿದ್ದೇವೆಯೇ ಅಥವಾ ಚಹಾ ಮಾರುತ್ತಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಬಹುದಿತ್ತು.
ವಿಷಯವನ್ನು ಹೀಗೆ ಲೇವಡಿಯಲ್ಲೋ ವ್ಯಂಗ್ಯದಲ್ಲೋ ಬಗೆಹರಿಸು ವಂತಿಲ್ಲ. ಆದರೆ ಪ್ರಕರಣವೀಗ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಮುಂದಿನ ನಡವಳಿಕೆಗಳಿಗೆ ಕಾಯುವುದರ ಹೊರತು ಬೇರೆ ದಾರಿಯಿಲ್ಲ. ಅದೀಗ ಸಬ್ ಜ್ಯುಡೀಸ್. ಆದರೆ ಈ ಕಾಯ್ದೆಯ ಲಾಭಾಲಾಭಗಳನ್ನು ಚರ್ಚಿಸುವಾಗ ಪ್ರಧಾನಿಯವರು ಉದ್ದೇಶಪೂರ್ವಕವಾಗಿಯೇ ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆಂಬುದು ಗೊತ್ತಾಗುತ್ತದೆ. ತಮ್ಮ ಪಕ್ಷದಲ್ಲಿ ಒಂದೂ ಮುಸಲ್ಮಾನ ಸಂಸದನಿಲ್ಲದೆ, ತಮ್ಮ ಪಕ್ಷದಲ್ಲಿ ಒಬ್ಬ ಪ್ರಮುಖ ಮುಸಲ್ಮಾನರಿಲ್ಲದಿದ್ದರೂ, ಅಲ್ಪಸಂಖ್ಯಾತ ಮುಸಲ್ಮಾನರಿಗೆ ಈ ರೀತಿಯ ಮೂರು ನಾಮ ಹಾಕಿದರೂ ಅವರ ಔದಾರ್ಯವೆಷ್ಟಿದೆಯೆಂದರೆ ಮುಸಲ್ಮಾನರೊಬ್ಬರು ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂದು ಬಯಸುತ್ತಾರೆ. ಲೋಕಸಭೆಯ ಉಪಸಭಾಪತಿ ಸ್ಥಾನವು ಕಳೆದ ಒಂದು ದಶಕದಿಂದ ಖಾಲಿಯಿದ್ದರೂ ಅವರಿಗೆ ಒಬ್ಬ ಮುಸಲ್ಮಾನ ಸಂಸದನನ್ನು ಆ ಪೀಠಕ್ಕೇರಿಸುವ ಮನಸ್ಸು ಬರದಿದ್ದರೂ ತ್ಯಾಜ್ಯ ವಿಲೇವಾರಿಯ ಹಾಗೆ ಕಾಂಗ್ರೆಸಿನ ಅಲ್ಪಸಂಖ್ಯಾತ ಒಲವನ್ನು ಅವರು ಇಂತಹ ಷರತ್ತುಗಳನ್ನೊಡ್ಡಿ ಪರೀಕ್ಷಿಸುತ್ತಾರೆ. ಕಳೆದ ಒಂದು ದಶಕಕ್ಕೂ ಮೀರಿದ ಕೇಂದ್ರ ಆಡಳಿತದಲ್ಲಿ ಇನ್ನೊಬ್ಬ ಎ.ಪಿ.ಜೆ. ಕಲಾಂರನ್ನು ಅವರು ಹುಡುಕಿಲ್ಲ. ಅಯೋಧ್ಯೆಯ ತೀರ್ಪುಋಣಿ ಅಬ್ದುಲ್ ನಝೀರ್ ಅವರಿಗೆ ರಾಜ್ಯಪಾಲ ಹುದ್ದೆಯನ್ನು ಕಾರಣಸಹಿತ ಕರುಣಿಸಿದ್ದು ಬಿಟ್ಟರೆ ಅವರು ಮಾಡಿದ್ದು ಅಲ್ಪಸಂಖ್ಯಾತರಿಗಿದ್ದ ಸವಲತ್ತನ್ನು ಮತ್ತು ಅವರಿಗಿದ್ದ ಅಲ್ಪಸ್ವಲ್ಪ ಅಭಯವನ್ನೂ ತಮ್ಮ ಹಿಂದುತ್ವವಾದಿಗಳ ಮೂಲಕ ಕಿತ್ತುಕೊಂಡ ಪುಣ್ಯಕಾರ್ಯ.
ಸುಡುಬಿಸಿಲಿನ ಝಳದಲ್ಲಿ ಕಾಣುವುದೂ ಕಾಣದಾಗುವ ಪರಿಯೆಂದರೆ ಇದೇ. ದೇಶದ ಜನರು ಏನೂ ಕಾಣದಾಗಿದ್ದಾರೆ. ಸ್ವಿಸ್ ಬ್ಯಾಂಕಿನ ಹಣ ತಂದರೋ ಬಿಟ್ಟರೋ ಅಥವಾ 15 ಲಕ್ಷ ರೂ.ವನ್ನು ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ ಹಾಕುವ ಮಾತಿನ ಭರವಸೆಯನ್ನು ನೀಡಿದರೋ ಇಲ್ಲವೋ ಅದು ಸದ್ಯ ಅಪ್ರಸ್ತುತ. ಅವೆಲ್ಲವೂ ಚುನಾವಣಾ ಪ್ರಚಾರದ ವೈಖರಿಯೆಂಬುದು ಎಲ್ಲ ಪಕ್ಷಗಳ ನಡವಳಿಕೆಯಿಂದ ಗೊತ್ತಾಗುತ್ತದೆ. ಆದ್ದರಿಂದ ಅಮಿತ್ ಶಾ ಬಹಿರಂಗವಾಗಿಯೇ ಒಪ್ಪಿಕೊಂಡ ಅಂತಹ ಜುಮ್ಲಾಗಳನ್ನು ಒತ್ತಟ್ಟಿಗಿಡೋಣ. ಆದರೆ ಕಾಯ್ದೆಯೊಂದರ ಮೂಲಕ ಒಂದು ಮತದವರ ಹಕ್ಕನ್ನೇ ಚಿವುಟಿಹಾಕಿದ್ದನ್ನು ಅವರಿಗೊಪ್ಪಿಸುವ ಕಾರ್ಯದಲ್ಲಿ ಪ್ರಧಾನಿ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸನ್ನು ಗುರಿಯಾಗಿಸಿದ್ದು ಮತ್ತು ಕಾಂಗ್ರೆಸ್ ಈ ಕಾಯ್ದೆಯನ್ನು ಒಪ್ಪಬೇಕೆಂಬ ಆಗ್ರಹವು ಅವರಿಗೆ ಪ್ರಜಾಪ್ರಭುತ್ವದಲ್ಲಿರುವ ಅಪನಂಬಿಕೆಯನ್ನು ತೆರೆದಿಡುವುದು ಮಾತ್ರವಲ್ಲ, ಈ ಕಾಯ್ದೆಯನ್ನು ಕಾನೂನಿನ ಮೂಲಕ ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲವೆನ್ನುವಷ್ಟು ದಯನೀಯ ಪ್ರ(ತಿ)ಕ್ರಿಯೆಯಾಗಿದೆ. ಸರ್ವೋಚ್ಚ ನ್ಯಾಯಾಲಯವು ಕಾಯ್ದೆಯನ್ನು ಒಪ್ಪಿಕೊಂಡರೆ ಕಾಂಗ್ರೆಸ್ ಏನು ಮಾಡೀತು? ಹೋಗಲಿ, ಇತರ ಅನೇಕರು ಈ ಕಾಯ್ದೆಯನ್ನು ಪ್ರಶ್ನಿಸಿದ್ದಾರೆ; ಅವರ ಕುರಿತು ಪ್ರಧಾನಿ ಏನು ಹೇಳುತ್ತಾರೆ?
ಇದ್ಯಾವುದೂ ಪ್ರಧಾನಿಯ ಮುಂದೆ ಸವಾಲಾಗಿ ಉಳಿದಿಲ್ಲ. ಅವರಿಗೆ ತಲೆೆನೋವಾಗಿರುವುದು ಬಹಳಷ್ಟು ಹಿಂದೂಗಳು ಮತ್ತು ಮುಸಲ್ಮಾನರು ಮತ್ತು ಇತರ ಮತಧರ್ಮೀಯರು ಇನ್ನೂ ಈ ದೇಶವನ್ನು ಭಾರತವೆಂದು ಕಾಣುತ್ತಾರೆಯೇ ಹೊರತು ಹಿಂದೂ ಅಥವಾ ಇನ್ಯಾವುದೋ ಮತಧರ್ಮದ ದೇಶವೆಂದಲ್ಲ. ಬಹುಮತೀಯ ಹಿಂದೂ ಜನಾಂಗವನ್ನು ಅಲ್ಪಸಂಖ್ಯಾತರಿಂದ ಸಾಕಷ್ಟು ದೂರಮಾಡಿ ಮತೀಯ ಧ್ರುವೀಕರಣದಿಂದಷ್ಟೇ ಇಂದು ಅವರ ಪಕ್ಷವು ಅಧಿಕಾರದಲ್ಲುಳಿಯಬಲ್ಲುದು. ಜನರಿಗೆ ನಿಧಾನವಾಗಿಯಾದರೂ ಸತ್ಯ ಅರ್ಥವಾಗುತ್ತದೆ. ಅದನ್ನು 2024ರ ಲೋಕಸಭಾ ಚುನಾವಣೆ ಸಾಬೀತು ಮಾಡಿದೆ. ನಾಯ್ಡು-ನಿತೀಶ್‌ರ ಊರುಗೋಲುಗಳಿಲ್ಲದಿದ್ದರೆ ಮೋದಿಯೆಂಬ ಅವತಾರಪುರುಷ ಅಧಿಕಾರವನ್ನೇರುತ್ತಿರಲಿಲ್ಲ. ಇದು ಅವರ ಕೊನೆಯ ಇನಿಂಗ್ಸ್ ಎಂಬುದು ಅವರಿಗೂ ಗೊತ್ತಿದೆ. ಆದ್ದರಿಂದಲೇ ಅವರು ಹಿಂದಿಗಿಂತಲೂ ಹೆಚ್ಚು ಖಾರವಾಗಿ, ವೈಯಕ್ತಿಕವಾಗಿ, ವರ್ತಿಸುತ್ತಿದ್ದಾರೆ; ಮಾತನಾಡುತ್ತಿದ್ದಾರೆ. ಭಾರತದ ಹೊರಗಿನ ಪ್ರತಿಷ್ಠೆ ಈಗಾಗಲೇ ಮಣ್ಣುಪಾಲಾಗಿದೆ. ಭಾರತದ ಒಳಗೂ ಇದು ಪುನರಾವರ್ತಿಸುವ ಮೊದಲು ಬೆಳಕಿನ ಬದಲು ಬೆಂಕಿಯಾಗಿ ಬೆಳೆಯುತ್ತಿರುವ ಅವರು ಜನಮನದಲ್ಲಿ ಉಳಿಯಲಾರದ ತಳಮಳದಲ್ಲಿದ್ದಾರೆ. ಸನ್ಯಾಸಿಯೊಬ್ಬ ಸಂಸಾರಿಗೆ ಸುಖಸಂಸಾರದ ಸೂತ್ರ ಹೇಳಿದರೆ ಅಚ್ಚರಿಪಡಬೇಕಾಗಿಲ್ಲ; ಈ ಸನ್ಯಾಸಿ ಪೂರ್ವದಲ್ಲಿ ಸಂಸಾರಿಯಾಗಿದ್ದಿರಬಹುದು ಎಂದು ಊಹಿಸಬಹುದು. ಆದರೆ ಬ್ರಹ್ಮಚಾರಿಯೆಂದು ಹೇಳಿಕೊಳ್ಳುವವನೊಬ್ಬ ಸಂಸಾರಿಗೆ ಸುಖಸಂಸಾರ ಹೂಡುವುದು, ಮಾಡುವುದು ಹೇಗೆಂದು ಹೇಳುವಂತಿದೆ ಅವರ ಠೀವಿ. ತಾನು ಮಾಡದ್ದನ್ನು, ತಾನು ನೋಡದ್ದನ್ನು ಇನ್ನೊಬ್ಬರಿಗೆ ಹೇಳುವ ಕಲೆಯು ಹಾಸ್ಯಾಸ್ಪದವಾಗುತ್ತದೆಂಬ ಮತ್ತು ಜನರ ಸಂಶಯದ ಸೂಜಿ ತನ್ನನ್ನು ಇರಿಯಬಹುದೆಂಬ ಅರಿವು ಅವರಿಗಿಲ್ಲ. ಆದ್ದರಿಂದ ಈಗಿನ ಅವರ ನಿಲುವು ಸಹಜ; ಅದು ಮಹಾಭಾರತದ ಅಶ್ವತ್ಥಾಮನದ್ದೇ ಹೊರತು ಧರ್ಮರಾಜನದ್ದಲ್ಲ.