ಲಕ್ಷ್ಮೀಶ ತೋಳ್ಪಾಡಿಯವರ ʼಭಾರತಯಾತ್ರೆʼ
ಲಕ್ಷ್ಮೀಶ ತೋಳ್ಪಾಡಿಯವರ ‘ಮಹಾಭಾರತ ಅನುಸಂಧಾನ- ಭಾರತಯಾತ್ರೆ’ ಕೃತಿಗೆ 2023ರ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಲಭಿಸಿದೆ. ಅಭಿನಂದನೆಗಳು.
ಈ ಕೃತಿಯ ಕೊನೆಯ ಅಧ್ಯಾಯವನ್ನು ಹೊರತುಪಡಿಸಿ ಉಳಿದವು ಕನ್ನಡ ದಿನಪತ್ರಿಕೆಯೊಂದರ ಸಾಪ್ತಾಹಿಕ ಸಾಹಿತ್ಯ ಸಂಚಿಕೆಯಲ್ಲಿ ಪಾಕ್ಷಿಕ ಧಾರಾವಾಹಿಯಾಗಿ ಪ್ರಕಟವಾಗಿದ್ದವು. ಸಾಕಷ್ಟು ಓದುಗರು ಅದನ್ನು ಸ್ವಾಗತಿಸಿದ್ದರು. ಬಳಿಕ ಅದು ಪುಸ್ತಕರೂಪದಲ್ಲಿ ಪ್ರಕಟವಾಯಿತು.
1952ರಲ್ಲಿ ಪ್ರಕಟವಾದ ಮಾಸ್ತಿಯವರ ಕನ್ನಡ ಕೃತಿ ‘ಭಾರತ ತೀರ್ಥ’ ಹಾಗೂ 1967ರಲ್ಲಿ ಪ್ರಕಟವಾದ ಇರಾವತಿ ಕರ್ವೆಯವರ ಮರಾಠಿ ಕೃತಿ ‘ಯುಗಾಂತ’(ಕನ್ನಡ ಅವತರಣಿಕೆ-1991: ಎಚ್.ಎಸ್.ಶಿವಪ್ರಕಾಶ) ವನ್ನು ಹೊರತುಪಡಿಸಿದರೆ ಈ ಹರವಿನ ಕೃತಿ ಬಂದಂತೆ ಕಾಣುವುದಿಲ್ಲ. ಪ್ರೊ. ಎ.ಎನ್. ಮೂರ್ತಿರಾವ್ ಅವರ ‘ಮಹಾಭಾರತದಲ್ಲಿ ಕೇಡು ಎಂಬುದರ ಸಮಸ್ಯೆ’ ಎಂಬ ಪುಟ್ಟ ಕೃತಿಯಲ್ಲಿ ಕೇಡು ಹೇಗೆ ಮಹಾಭಾರತದುದ್ದಕ್ಕೂ ತನ್ನ ಛಾಯೆಯನ್ನು ಬೀರಿದೆ ಎಂಬುದನ್ನು ಪರಿಶೀಲಿಸಲಾಗಿದೆ. ವೈದ್ಯಗುರು ಡಾ| ಎಂ.ಆರ್. ಭಟ್ ಅವರು 1954ರಷ್ಟು ಹಿಂದೆಯೇ ಬರೆದ ಚಾರಿತ್ರಿಕ ಮತ್ತು ವಾಸ್ತವದ ಶೋಧನೆಯ ‘ಭಾರತ ಗಾಂಭೀರ್ಯ’ವೆಂಬ ಕೃತಿಯೂ ಇದೆ. (ಇವರು ದೀರ್ಘಾಯು ಎಂಬ ಪತ್ರಿಕೆಯ ಸಂಪಾದಕರಾಗಿದ್ದವರು; ‘ಸಹಸ್ರಯೋಗ’ ಮತ್ತು ‘ಧನ್ವಂತರಿ ಸಂಹಿತಾ’ ಕೃತಿಗಳ ಅನುವಾದಕರು.) ಈ ಕೃತಿಗೆ ಮಂಜೇಶ್ವರ ಗೋವಿಂದ ಪೈಗಳ ಮುನ್ನುಡಿಯಿದ್ದು ಅವರೂ ಕೆಲವು ಒಳನೋಟಗಳನ್ನು ಬೀರಿದ್ದಾರೆ. ಈಚೆಗೆ ಎಸ್.ಆರ್. ರಾಮಸ್ವಾಮಿಯವರ ‘ವ್ಯಾಸನ ಬಿನ್ನಪ’ ಎಂಬ ಮಹಾಭಾರತಾವಲೋಕನ ಪ್ರಬಂಧಗಳು ಎಂಬ ಕೃತಿ ಪ್ರಕಟವಾಗಿದೆಯೆಂದು ಕೇಳಿದ್ದೇನೆ. ಅದಿನ್ನೂ ನನ್ನ ಓದಿಗೆ ಸಿಕ್ಕಿಲ್ಲ.
ಪುರಾಣಗಳ ಕುರಿತು ಗಂಭೀರವಾದ ಚರ್ಚೆ-ಅದರ ಲೌಕಿಕ ಮತ್ತು ಪಾರಮಾರ್ಥಿಕ ಎಲ್ಲೆಗಳ ಬಗ್ಗೆ ಆಧುನಿಕ ಸಾಹಿತ್ಯ-ಸಂಸ್ಕೃತಿಯಲ್ಲಿ ಬಹಳವಾಗಿ ನಡೆದಿದೆ. ಕನ್ನಡದಲ್ಲಿ ಮಾಸ್ತಿಯವರು 1938ರಷ್ಟು ಹಿಂದೆಯೇ ರಾಮಾಯಣದ ಕುರಿತು ‘ಆದಿಕವಿ ವಾಲ್ಮೀಕಿ’ ಎಂಬ ಕೃತಿಯನ್ನು ಬರೆದರು. ಆನಂತರ ‘ಭಾರತತೀರ್ಥ’ ಎಂಬ ಕೃತಿಯಲ್ಲಿ ಮಹಾಭಾರತದ ಸತ್ವ, ಸತ್ಯ ಮುಂತಾದ ವಿಚಾರಗಳ ಕುರಿತು ಸಾಂಸ್ಕೃತಿಕ ಶೋಧನೆಯನ್ನು ಮಾಡಿದ್ದಾರೆ. ಈ ಕೃತಿಯ ಮುನ್ನುಡಿಯಲ್ಲಿ ಅವರೇ ಹೇಳಿದಂತೆ ‘‘ಎರಡು ಸಂದರ್ಭದಲ್ಲಿಯೂ ನನ್ನ ಮನೋಧರ್ಮ ಒಂದೇ. ವಿಚಾರಯುಕ್ತವಾದ ಶ್ರದ್ಧೆ, ವಿಚಾರದಿಂದ ಹುಟ್ಟಿದ ಭಕ್ತಿ. ಇದೊಂದು ಮಧ್ಯಮಾರ್ಗ: ಅತಿ ಹಳಬರಿಗೆ ಅಶ್ರದ್ಧೆಯಂತೆ, ಅತಿ ಹೊಸಬರಿಗೆ ಅಂಧಶ್ರದ್ಧೆಯಂತೆ, ಕಾಣುವ ಒಂದು ನಿಲುವು. ಆದರೆ ನನಗೆ ತೋರುವ ಮಟ್ಟಿಗೆ ನಮ್ಮ ಜನಾಂಗದ ಮುಂಬರಿವಿಗೆ ಇದರ ಹೊರತು ಬೇರೆ ಮಾರ್ಗವಿಲ್ಲ. ಬೇರೆ ಯಾವ ನಿಲುವೂ ಇದರಷ್ಟು ಸಾಧಕವಲ್ಲ. ‘ಇತಿ ಶುಶ್ರುಮ ಧೀರಾಣಾಂ’ ಇದು ಎಲ್ಲ ಕಾಲದಲ್ಲೂ ಧರ್ಮದ ಶ್ರೇಷ್ಠ ಅನುಷ್ಠಾತರು ಒಪ್ಪಿ ಹಿಡಿದ ದಾರಿ, ನಂಬಿ ನಡೆದ ದಾರಿ.’’ ಅವರ ಬರಹದಲ್ಲಿ ಧರ್ಮದ ಕುರಿತು ಒತ್ತನ್ನು ಕಾಣಬಹುದು. ಮರಾಠಿ ಸಾಹಿತಿ ಇರಾವತಿ ಕರ್ವೆಯವರು 1967ರಲ್ಲಿ ಬರೆದ ‘ಯುಗಾಂತ’ (ಕನ್ನಡಾನುವಾದ: ಎಚ್.ಎಸ್.ಶಿವಪ್ರಕಾಶ) ಹೊಸ ರೂಪು ಮತ್ತು ಹುರುಪಿನೊಂದಿಗೆ ಮಹಾಭಾರತವನ್ನು ಚರ್ಚಿಸಿದೆ. ಕರ್ವೆಯವರಿಗೆ ‘ಮಹಾಭಾರತ ಎಂಬುದು ಘೋರ ಯುದ್ಧದಲ್ಲಿ ಮುಗಿದ ಒಂದು ಕುಟುಂಬದ ವ್ಯಾಜ್ಯದ ಕತೆಯನ್ನು ಸರಳವಾದ ಪದ್ಯರೂಪದಲ್ಲಿ ಹೇಳುವ ಒಂದು ಸಂಸ್ಕೃತ ಕೃತಿಯ ಹೆಸರು’. ಕರ್ವೆಯವರ ಪುಸ್ತಕ ಈ ಆಶಯವನ್ನೇ ಕಾಣಿಸಿದೆ. ಇದರ ಇಂಗ್ಲಿಷ್ ಆವೃತ್ತಿಯಲ್ಲಿ ಪ್ರತೀ ಅಧ್ಯಾಯದ ಆರಂಭದಲ್ಲಿ ಮಹಾಭಾರತಕ್ಕೆ ಸಂಬಂಧಿಸಿದ ಶಿಲ್ಪಚಿತ್ರ, ರೇಖಾಚಿತ್ರ ಬಳಸಲಾಯಿತು. ಈ ಕುರಿತು ಪ್ರಕಾಶಕರ ಮಾತುಗಳಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಪ್ರೊ.ಡಬ್ಲ್ಯು. ನಾರ್ಮನ್ ಬ್ರೌನ್ ಅವರ ‘‘ರಾಮಾಯಣವು ಅಸಂಖ್ಯ ದೇವಸ್ಥಾನಗಳಲ್ಲಿ ಕೆತ್ತನೆಯಾಗಿ, ಶಿಲ್ಪವಾಗಿ ಅಲಂಕರಿಸಿದರೆ ಮಹಾಭಾರತವು ಬಹಳ ವಿರಳವಾಗಿ ಆ ಸ್ಥಾನವನ್ನು ಪಡೆದಿದೆ’’ ಎಂಬ ಮಾತನ್ನು ಉಲ್ಲೇಖಿಸಲಾಗಿದೆ. ‘ವ್ಯಾಸಭಾರತ’ವೇ ದ್ವಾಪರಯುಗವೆಂದು ಹೇಳಲಾದ ಕಾಲ/ಯುಗದ ಆ ಕಥೆಯ ಮೊದಲ ಕೃತಿಯೆನ್ನುವಂತಿಲ್ಲ. ‘ಜಯ’ವೆಂಬ ಒಂದು ಕೃತಿ ಅದಕ್ಕಿಂತ ಮೊದಲೇ ಚಾಲ್ತಿಯಲ್ಲಿತ್ತು ಎಂಬ ಹೇಳಿಕೆಗಳಿವೆ. ಇದಕ್ಕೆ ವ್ಯಾಸಭಾರತದಲ್ಲೂ ಪುರಾವೆಗಳಿವೆ. ಇದನ್ನು ಕರ್ವೆಯವರೂ ಪುನರುಚ್ಚರಿಸಿದ್ದಾರೆ. ಮಾಸ್ತಿಯವರು ಈ ವಿಚಾರಕ್ಕೆ ಅಷ್ಟೇನೂ ಮಹತ್ವ ನೀಡಿಲ್ಲ. ಮೂರ್ತಿರಾಯರ ಕೃತಿಯಲ್ಲಿ ಇಷ್ಟು ಚರ್ಚೆಗೆ ವ್ಯವಧಾನವಿರಲಿಲ್ಲ. ಎ.ಎನ್. ಮೂರ್ತಿರಾಯರ ಪುಸ್ತಕದ ‘ಮಹಾಭಾರತದ ಪಾತ್ರಗಳಲ್ಲಿ ಹೆಚ್ಚುಕಡಿಮೆ ಎಲ್ಲರೂ ಒಂದಲ್ಲ ಒಂದು ಸಾರಿ, ಒಂದಲ್ಲ ಒಂದು ಸಂದರ್ಭದಲ್ಲಿ, ಕೇಡಿಗತನಕ್ಕೆ ಇಳಿಯುತ್ತಾರೆ’ ಎಂಬ ಭರತವಾಕ್ಯವೇ ಅವರ ಕೃತಿಯಲ್ಲಿ ಶೋಧಿಸಿದ ವಿಚಾರವನ್ನು ಹೇಳಿದೆ.
ಯಾವುದೇ ಬರಹವನ್ನು/ಬರಹಗಳನ್ನು ಬಿಡಿಬಿಡಿಯಾಗಿ ಓದುವುದಕ್ಕೂ, ಅವನ್ನು ಒಟ್ಟಾಗಿ ಪುಸ್ತಕರೂಪದಲ್ಲಿ ಓದುವುದಕ್ಕೂ ವ್ಯತ್ಯಾಸವಿದೆ. ಎಡವಿದಲ್ಲಿ, ಸಿಂಹಾವಲೋಕನದ ಅಗತ್ಯ ಬಿದ್ದಲ್ಲಿ, ಸ್ಪಷ್ಟತೆಗಾಗಿ, ಹಿಂದಿನದನ್ನು ಓದಬಹುದು. (ಲೇಖನಗಳನ್ನೂ ತೆಗೆದಿಟ್ಟುಕೊಂಡಾಗಲೂ ಇದು ಸಾಧ್ಯ. ಆದರೆ ಅಷ್ಟು ವ್ಯಕ್ತಿನಿಷ್ಠೆ, ಕೃತಿನಿಷ್ಠೆ ಇರಬೇಕಷ್ಟೇ!) ಕೃತಿಯನ್ನು ಈಗ-ಒಟ್ಟಾಗಿ ಓದುವಾಗ 14ನೇ ಅಧ್ಯಾಯ ‘ಮರುಕಳಿಕೆ-ಮರುಗಳಿಕೆ’ ಯ ನಂತರ ಕೃತಿಯ ಚಹರೆ ಮತ್ತು ನಿರೂಪಣಾ ವಿನ್ಯಾಸ ಬದಲಾದಂತೆ ಕಾಣಿಸುತ್ತದೆ. ಕೊನೆಯ ಅಧ್ಯಾಯ ‘ಶಾಂತಿಪರ್ವದ ಅಶಾಂತ ಸಂತ’ ಎಂಬ ಅಧ್ಯಾಯವು (ಆಕಸ್ಮಿಕವಾಗಿ ಅಡಿಗರ ‘ಶಾಂತವೇರಿಯ ಅಶಾಂತ ಸಂತ’ ಕವಿತೆ ನೆನಪಾಗುತ್ತಿದೆ!) ಆ ವರೆಗಿನ ಲೇಖನಗಳಿಗೆ ಒಂದು ತಾರ್ಕಿಕ ಮತ್ತು ತಾತ್ವಿಕ ಸಮಾರೋಪವನ್ನು ನೀಡುವ ಉದ್ದೇಶದಿಂದ ಬರೆದಂತಿದೆ.
ಲೇಖಕರ ಪರಿಚಯ, ಪೂರ್ವವೃತ್ತಾಂತ ಇವೆಲ್ಲ ಓದುಗನಿಗೆ, ವಿಮರ್ಶಕನಿಗೆ ಒಂದು ಪೂರ್ವಾಗ್ರಹವನ್ನು ಸೃಷ್ಟಿಸಬಲ್ಲುದು. ಅದಿಲ್ಲದೆ ಓದುವುದು ಒಂದರ್ಥದಲ್ಲಿ ಕೃತಿಯ ಜೊತೆ ನೇರ ಸಂಬಂಧವನ್ನು ಹೊಂದಿದಂತೆ. ಅದು ಏನನ್ನು ಕೊಟ್ಟಿತೋ ಅದೇ ನಿಜ; ನೈಜ. ಆದರೆ ಕೆಲವು ಬಾರಿ ಈ ಹಿನ್ನೆಲೆಯ ಪೂರ್ವಪರೀಕ್ಷೆ ಕೃತಿಗೆ ನ್ಯಾಯವನ್ನು ದೊರಕಿಸಿಕೊಡುವಲ್ಲಿ ನೆರವಾಗುವುದೂ ಉಂಟು. ತೋಳ್ಪಾಡಿಯವರು ಚಿಂತಕರು. ಸಂಸ್ಕೃತ ಮತ್ತು ಕನ್ನಡದಲ್ಲಿ ಸಾಕಷ್ಟು ವಿದ್ವತ್ತನ್ನು ಹೊಂದಿದವರು; ಮತ್ತು ಇಂಗ್ಲಿಷ್‌ನಲ್ಲೂ ಅನುಭವಿಗಳು. ಉತ್ತಮ ವಾಗ್ಮಿ. ಯಕ್ಷಗಾನ ತಾಳಮದ್ದಳೆಯ ರಸಯಾತ್ರಿ ಅರ್ಥಧಾರಿಗಳೂ ಹೌದು. (ಈಚೆಗೆ ಅವರು ಅರ್ಥ ಹೇಳಿದ್ದು ಕಡಿಮೆ.) ಪತ್ರಿಕೋದ್ಯಮದಲ್ಲೂ ದುಡಿದವರು. ಅವರು ಹಳೆಬೇರಿನ ಹೊಸಸೊಗಸು. ಹಾಗೆಂದು ಅವರು ಬರೆದದ್ದು ಅವರ ದೀರ್ಘ ಬದುಕಿಗೆ ಹೋಲಿಸಿದರೆ ಮಿತ. ಆದರೆೆ ಹೇಳಿದ್ದು ಅಮಿತ. ಈ ಹಿನ್ನೆಲೆ ಸಾಕು ಅವರನ್ನು ತಿಳಿಯುವುದಕ್ಕೆ; ಅವರ ಕೃತಿಯ ತಿಳಿಕೊಳದಲ್ಲಿಳಿದು ತಿಳಿಯುವುದಕ್ಕೆ.
ಕರಾವಳಿಯ ವಿದ್ವಾಂಸರೆಂದು ಜನಪ್ರಿಯರಾಗಿದ್ದ ತೋಳ್ಪಾಡಿಯವರು ಈಗ ಕನ್ನಡದ ಕೀರ್ತಿ. ಪ್ರಶಸ್ತಿಯ ಆನಂತರವೂ ಅವರ ಕುರಿತು, ಅವರ ಈ ಕೃತಿಯ ಕುರಿತು ನಿರೀಕ್ಷಿತ ಮಟ್ಟದಲ್ಲಿ ಕನ್ನಡ ವಿಮರ್ಶೆ ತೆರೆದುಕೊಳ್ಳಲಿಲ್ಲ. ‘ತರಂಗ’ದಲ್ಲಿ ಪ್ರಕಟವಾದ ಡಾ|ಜೋಶಿಯವರ ಒಂದು ಲೇಖನ, ‘ಮಯೂರ’ದಲ್ಲಿ ಪ್ರಕಟವಾದ ಸಂದರ್ಶನ ಇವೆರಡೇ ನನ್ನ ಗಮನಕ್ಕೆ ಬಂದದ್ದು. (ಪ್ರಶಸ್ತಿಯ ನಂತರವೇ ಪ್ರಚಾರಕ್ಕೆ ಬಂದ ಸಾಹಿತಿಗಳಲ್ಲಿ ತೋಳ್ಪಾಡಿಯವರು ಎರಡನೆಯವರೆಂದು ನನ್ನ ತರ್ಕ. ಮೊದಲನೆಯವರು ಶ್ರೀನಿವಾಸ ವೈದ್ಯರು. ಅವರ ‘ಹಳ್ಳ ಬಂತು ಹಳ್ಳ’ ಕಾದಂಬರಿ ಇಂತಹ ಪ್ರಶಸ್ತಿಯನ್ನು ಗಳಿಸಿತ್ತು. ಅದಕ್ಕೆ ಮೊದಲು ವೈದ್ಯರು ಹಾಸ್ಯಸಾಹಿತಿಯೆಂದೇ ಸೀಮಿತ ವರ್ತುಲದಲ್ಲಿ ಜನಪ್ರಿಯರು.)
ಪ್ರತಿಷ್ಠೆಯ ಪ್ರಶಸ್ತಿಯ ನಂತರ ಒಂದು ಕೃತಿಯ ಕುರಿತು ಹೆಚ್ಚು ಹೇಳಬೇಕಾಗಿಲ್ಲ. ಭಾರತಯಾತ್ರೆ ಮಹಾಭಾರತದ ಕಥನವಲ್ಲ. ಅದರ ಕ್ಷಕಿರಣ; ಅವರು ಹೆಸರಿಟ್ಟಂತೆ ‘ಅನುಸಂಧಾನ’. ತೋಳ್ಪಾಡಿಯವರು ಲೌಕಿಕ, ಧರ್ಮ ಮತ್ತು ಅಧ್ಯಾತ್ಮವನ್ನು ವಾಸ್ತವದ ನೆಲೆಯಲ್ಲಿ ಪರಿಶೀಲಿಸಬಲ್ಲವರು. ಅವರು ಗತ, ವರ್ತಮಾನ ಮತ್ತು ಭವಿಷ್ಯವನ್ನು ಏಕಕಾಲಕ್ಕೆ ಸಮೀಕರಿಸಬಲ್ಲರು. ಅವರು ಸಂಸ್ಕೃತ ಅಭ್ಯಾಸಿಯಾಗಿರುವುದರಿಂದ ಅವರಿಗೆ ಮಂತ್ರದಂತೆ ನಿರೂಪಿಸಲೂ ಗೊತ್ತು; ತೀರಾ ಸರಳವಾಗಿ ಮನುಷ್ಯನ ಗುಣಾವಗುಣಗಳನ್ನು ಸಂಶಯದಿಂದ ನೋಡಲೂ ಗೊತ್ತು. ಇಲ್ಲಿ ಬುದ್ಧ, ಬಸವಣ್ಣ, ಅಲ್ಲಮರೂ ಇದ್ದಾರೆ; ಅಂಬೇಡ್ಕರ್, ಕುವೆಂಪು, ಕರ್ವೆ, ಸುಕ್ತಂಕರ್‌ರಂತಹ ಆಧುನಿಕ ಚಿಂತಕರೂ ಇದ್ದಾರೆ. ಹಾಗೆಯೇ ಕಿರ್ಕೆಗಾರ್ಡ್, ವೆಂಡಿಡಾನಿಗರ್ ಕೂಡಾ ಉಲ್ಲೇಖಿತರು. ತೋಳ್ಪಾಡಿಯವರು ಪಂಪ, ರನ್ನ, ಕುಮಾರವ್ಯಾಸರನ್ನು ‘ನಮ್ಮ’ ಎಂಬ ಆತ್ಮೀಯತೆಯಿಂದ ಮತ್ತು ಹಿರಿತನದ ಗೌರವದಿಂದ ಕಂಡಿದ್ದಾರೆ! ತೋಳ್ಪಾಡಿಯವರಿಗೆ ಎಡ-ಬಲದ ಯಾವ ಸಿದ್ಧಾಂತಗಳೂ ಅಸ್ಪಶ್ಯವಲ್ಲ. ಅವನ್ನು ಮೆಚ್ಚಬೇಕಾದಲ್ಲಿ ಮೆಚ್ಚಿ, ಖಂಡಿಸಬೇಕಾದಲ್ಲಿ ಖಂಡಿಸುವಲ್ಲಿ ಅವರು ಯಾವ ಸಂಕೋಚವನ್ನೂ ತೋರುವುದಿಲ್ಲ.
ಕೃತಿಯ ವಿಸ್ತಾರವಾದ ಸಮೀಕ್ಷೆಗೆ ಇಲ್ಲಿ ವ್ಯವಧಾನವಿಲ್ಲ. ಆದರೆ ತೋಳ್ಪಾಡಿಯವರ ಉದ್ದೇಶವೇ ಮಹಾಭಾರತದ ಕಲ್ಪಿತ ವಾಸ್ತವವನ್ನು ಭಾವಸ್ತರಕ್ಕೆ ಒಯ್ಯುವುದು. ಒಯ್ದು ವಾಸ್ತವದಲ್ಲಿ ಕಾಣಲಾಗದ, ಕಾಣಲಾಗದೇ ಇದ್ದ ಸೂಕ್ಷ್ಮಗಳನ್ನು ಕಾಣಿಸುವುದು, ವನಪರ್ವದ ಯಕ್ಷಪ್ರಶ್ನೆಯಿಂದ ಜನಮೇಜಯನ ಸರ್ಪಯಾಗದ ಮೂಲಕ ಆದಿಪರ್ವಕ್ಕೆ ಓದುಗನನ್ನು ವಿವರವಾಗಿ ಒಯ್ಯುತ್ತಾರೆ. ಕಥೆಗಾಗಿ ಮಾತ್ರ ಈ ಕೃತಿಯನ್ನು ಓದಿದರೆ ಹಿಂದೂಮುಂದೂ ಚಲಿಸಿದಂತಾಗಿ ತಲೆಸುತ್ತು ಬರಬಹುದು. ಆದರೆ ಇದನ್ನು ಓದಬೇಕಾದ್ದೇ ವಿಚಾರಪರರಾಗಿ. ಶ್ರದ್ಧೆ, ಭಕ್ತಿಗೆ ಇಲ್ಲಿ ಪ್ರಾಧಾನ್ಯ ಕಡಿಮೆ. ಹಾಗೆ ನೋಡಿದರೆ ಪಂಪ, ರನ್ನ, ಕುಮಾರವ್ಯಾಸರು ಬಹಳಷ್ಟು ಪ್ರಾಶಸ್ತ್ಯ ನೀಡಿದ, ಭಾವೋದ್ರೇಕದ, ಯುದ್ಧದ ಭಾಗ/ಪರ್ವಗಳಿಗೆ ಇಲ್ಲಿ ಹೆಚ್ಚು ಅವಕಾಶವಿಲ್ಲ. ‘ಕಾಲಗತಿಯಲ್ಲಿ ಎಲ್ಲವೂ ಅಳಿಸಿಹೋಗುವ ದುರಂತವನ್ನು’ ನೋಡಲಾಗದ್ದು ವಿಶ್ವರೂಪದ ಸಂದರ್ಭದ ಅರ್ಜುನ ಮಾತ್ರವಲ್ಲ, ಮಹಾಭಾರತದ ವ್ಯಾಸರೂ ಹೌದು. ಈ ಮಾತನ್ನು ‘ಮಹಾಭಾರತವನ್ನು ಬರೆದ ಮೇಲೆ, ವ್ಯಾಸರಿಗೆ ಅದೊಂದು ಬಗೆಯ ವಿಷಣ್ಣತೆ ಕಾಡುತ್ತಿತ್ತು ಎಂಬ ತುಸು ವಿಲಕ್ಷಣವಾದ ಚಿಂತನೀಯವಾದ ಒಂದು ಮಾತನ್ನು ಕೇಳುತ್ತೇವೆ.’ ಎಂಬ ವಾಕ್ಯ ಸಮರ್ಥಿಸುತ್ತದೆ. ಮೊದಲನೆಯದು ನೋಡಲಾರದ, ನೋಡದ ವಿಷಣ್ಣತೆ; ಎರಡನೆಯದು ನೋಡಿದ ವಿಷಣ್ಣತೆ!
ಮಹಾಭಾರತವು ಭಾರತದ ಮಹಾಪುರಾಣಗಳಲ್ಲೊಂದು. ರಾಮಾಯಣ ಮತ್ತು ಭಾಗವತ ಇನ್ನೆರಡು. ರಾಮಾಯಣವು ಸರಳರೇಖೆಯಂತಿದ್ದರೆ, ಭಾಗವತವು ಒಂದು ಕನಸಿನ ಪಯಣ. ಭಾಗವತವೂ ಪಠನವಾದಷ್ಟು ಪೂಜ್ಯವಾಗಿಲ್ಲ. ಭಾಗವತವು ಭಕ್ತಜನರಿಗೆ ಸುಗ್ರಾಸ. ಅದು ಪುರಾಣಕಾಲದ ಭೂತ, ವರ್ತಮಾನ ಭವಿಷ್ಯವನ್ನು ಒಟ್ಟಾಗಿ ಭಕ್ತಿಯಿಂದ ಅನುಭವಿಸುವ ಕಥಾಪ್ರಪಂಚ. ನಮ್ಮ ಮತಾಚಾರ್ಯರಿಗೆ ಅನುಕೂಲಕರ ಭೂರಿಭೋಜನ. ಮಹಾಭಾರತದ ಕರ್ತೃ ವೇದವ್ಯಾಸರು. ಇವರೊಬ್ಬ ವೃತ್ತಿಪರ ಲೇಖಕ. ವೇದಗಳನ್ನೂ ಸಂಪಾದಿಸಿದವರು. ಅವರು ಭಾರತವ್ಯಾಸರಲ್ಲ, ವೇದವ್ಯಾಸರು. ಮಹಾಭಾರತದ ಆದಿಯಿಂದ ಅಂತ್ಯದವರೆಗೂ ವೀಕ್ಷಕ ವಿವರಣೆ ನೀಡಿದ್ದಲ್ಲದೆ ಅದರ ಯುಗಾಂತವಾದ ಮೇಲೆಯೂ ‘ಚಿರಂಜೀವಿ’ಯಾಗಿ ಉಳಿದವರು. ಇದೊಂದು ರೂಪಕವಾಗಿರಲಿಕ್ಕೂ ಸಾಕು. ಕೃತಿಯಿಂದಲೇ ಚಿರಂಜೀವಿಯಾಗುವವರಿಗೆ ಚಿರಂಜೀವತ್ವ ಯಾಕೆ? ತೋಳ್ಪಾಡಿಯವರು ‘ವ್ಯಾಸರು ಚಿರಂಜೀವಿಗಳಂತೆ ಚಿಂತಿಸುತ್ತಲೇ ಇದ್ದಾರೆ!’ ಎಂದು ವಿಷಾದಮಿಶ್ರಿತ ವ್ಯಂಗ್ಯದಿಂದ ಹೇಳುತ್ತಾರೆ.
ಮಹಾಭಾರತವು ದುರಂತ ಕಥನವೆಂಬುದರಲ್ಲಿ ತೋಳ್ಪಾಡಿಯವರಿಗೆ ಸಂಶಯವಿಲ್ಲ. ಅದು ಆಳುವವರದ್ದು, ಅರಸುಮನೆತನದವರದ್ದು. ಆರಂಭದಿಂದಲೇ ಬೇರುಗಳು ಅಲುಗಾಡುತ್ತಿದ್ದ ವಂಶ ಅದು. ಮಹಾಭಾರತವು ಸಂದಿಗೊಂದಿಯಲ್ಲಿ ಸುತ್ತಿ ಸುಳಿವ ರಸ್ತೆಯಂತೆ. ರಾಮಾಯಣವನ್ನು ಭಕ್ತಿಯಿಂದ ಧೇನಿಸಿದಂತೆ, ಧ್ಯಾನಿಸಿದಂತೆ ಮಹಾಭಾರತವನ್ನು ಪರಿಗಣಿಸಲು ಸಾಧ್ಯವಿಲ್ಲ. ಪ್ರಾಯಃ ಮಹಾಭಾರತದಷ್ಟು ನಮ್ಮ ಬದುಕಿಗೆ ಹತ್ತಿರವಾದ ಪುರಾಣ ಉಳಿದೆರಡೂ ಅಲ್ಲ. ಅದನ್ನು ವ್ಯಾಸರಿಗೆ ಸಾಮಾನ್ಯ ಜನರ ಕಥನವಾಗಿಸಬಹುದಿತ್ತೇನೋ? ಆದರೆ ಮನುಷ್ಯನ ಅಳಿವು-ಉಳಿವುಗಳ, ಸಿರಿವಂತಿಕೆಯ, ವಿಧಿಯ ಪಾರಮ್ಯವನ್ನು ಗುರುತಿಸಬೇಕಾದರೆ ಅದು ದೊಡ್ಡವರ ಕಥೆಯೇ ಆಗಬೇಕೇನೋ?
ರಸ್ತೆಯ ಮಧ್ಯೆ ವಿಭಜನ ಗುರುತು ಹಾಕಿದರೆ ನೀವು ಅದರ ಯಾವ ಬದಿಯಲ್ಲೂ ಹೋಗಬಹುದೆಂದು ಅರ್ಥವಲ್ಲ. ನಿಮ್ಮ ನಿಯಮ-ಅದು ಎಡವೋ ಬಲವೋ- ಅದನ್ನೇ ಅನುಸರಿಸಬೇಕು. ಹಾಗೆಯೇ ಲೇಖಕರು ಹೇಳುವ ಅನೇಕ ನಂಬಿಕೆಗಳನ್ನು ಕೃತಿಯೊಳಗೇ ಅಥವಾ ನಿಮ್ಮ ಮನಸ್ಸಿನೊಳಗೇ ಉಳಿಸಿಕೊಂಡರೆ ಚೆನ್ನ. ಇಲ್ಲವಾದರೆ ನಾಳೆ ಹಾವು ಎದುರಾದಾಗ ನೀವು ‘ಆಸ್ತೀಕ’ ಎನ್ನುವಿರಿ. ಹಾವು ತನ್ನ ಪಾಡಿಗೆ ತಾನು ಸರಿಯುತ್ತದೆಂದು ನೀವು ಮುಂದೆ ಸರಿಯುತ್ತೀರೋ! ಅದು ನಿಮ್ಮನ್ನು ಕಡಿಯದಿದ್ದರೆ ನಿಮ್ಮ ಅದೃಷ್ಟ! ಹಾಗೆಯೇ ಕೃತಿಯಿಂದ ಎಷ್ಟನ್ನು ಕೈಗೆತ್ತಿಕೊಳ್ಳಬೇಕೋ ಅಷ್ಟನ್ನು ಎತ್ತಿಕೊಂಡು ಉಳಿದದ್ದು ಕೃತಿಯ ಬಿಲದೊಳಗಿರುವುದೇ ವಾಸಿ; ಅದು ಅಲ್ಲಿಗೇ ಮರಳುವಷ್ಟು ವಿವೇಕವನ್ನು ಬಳಸಿ. ಪ್ರಶಸ್ತಿ ಬಂದಿದೆಯೆಂದು ನಿಮ್ಮ ವಸ್ತುನಿಷ್ಠೆಯನ್ನು ಕಡೆಗಣಿಸಿದರೆ ಅದು ಅಭಿನಂದನಾ ಭಾಷಣವಾದೀತೇ ಹೊರತು ವಿಮರ್ಶೆಯಾಗದು; ಸಮೀಕ್ಷೆಯೂ ಆಗದು. ಆದರೆ ತೋಳ್ಪಾಡಿಯವರ ಈ ಕೃತಿ ಪ್ರಶಸ್ತಿ ಬಂದದ್ದರಿಂದ ಶ್ರೇಷ್ಠವಲ್ಲ; ತಾನಾಗಿಯೇ ಶ್ರೇಷ್ಠ.
ಇಂಗ್ಲಿಷಿನಲ್ಲಿ deconstruction (ವಿರಚನವಾದ?) ಎಂಬ ಸಾಹಿತ್ಯವಾದವಿದೆ. ಕನ್ನಡದಲ್ಲಿ ‘ಕಟ್ಟುವುದು’, ‘ಮುರಿಯುವುದು’ ಎಂಬ ಭಾವವಿದೆ. ತೋಳ್ಪಾಡಿಯವರು ಮನುಷ್ಯನ-ಇಲ್ಲಿ ಓದುಗನವೂ ಹೌದು- ಕಲ್ಪನೆಯ ಸೌಧ ವಾಸ್ತವ ಪ್ರತಿಮೆಗಳ ಸಮ್ಮುಖದಲ್ಲಿ ಮುರಿದುಬೀಳುವಾಗ ಆಗುವ ದಿಗ್ಭ್ರಮೆಯನ್ನು ಸೂಚಿಸಿದ್ದಾರೆ. ‘‘ಇರುವುದರ’ ದರ್ಶನವಾದಾಗ ‘ಕಟ್ಟಿದ್ದು’ ಮುರಿದು ಬೀಳುತ್ತದೆ. ಮುರಿದು ಬೀಳುವುದು ಹೊರಗಿನ ಕಟ್ಟಡಗಳಲ್ಲ; ನಾವು. ನಮ್ಮೊಳಗೆ ಕಟ್ಟಿದ್ದು’’. ‘ಮಕ್ಕಳ ನೆತ್ತರಿನಲ್ಲಿ ಭೂಮಿತಾಯಿ ಜಳಕ’ ಎಂಬುದು ಇದರ ಸೂಚನಾ ಫಲಕ!
ದುರಂತಗಳು ಯಾವ ಪಾಠವನ್ನೂ ಯಶಸ್ವಿಯಾಗಿ ಕಲಿಸಿಲ್ಲವೆನ್ನುವುದೂ ಕಾವ್ಯಸತ್ಯವೂ ಹೌದು; ಕಾಲಸತ್ಯವೂ ಹೌದು. ವ್ಯಾಸರೇ ಇದನ್ನು ಮನಗಂಡವರು. ಇಂದಿನ ಕಾಲದಲ್ಲಿ ಮನುಷ್ಯ ಅತಿಯಾಗಿಯೇ ರಾಜಕೀಯ ಪ್ರಜ್ಞೆಯನ್ನು ಹೊಂದಿರುವಾಗ, ಸಂದ ರಾಜಕೀಯ ಆತನಿಗೆ ಏನೂ ಮಾರ್ಗದರ್ಶನ ನೀಡದಿದ್ದಾಗ, ರಥಯಾತ್ರೆಯೇ ಮುಖ್ಯವಾಗುತ್ತದೆ. ಅದು ದೇವರಿಗೂ ಅಷ್ಟೇ; ಧರ್ಮಕ್ಕೂ ಅಷ್ಟೇ. ಇಂತಹ ಸಂಧಿಕಾಲ ಮಾತ್ರ ಶಾಶ್ವತ. ನಡುವೆ ಟಾಲ್‌ಸ್ಟಾಯ್‌ಯ ಚಿಂತನೆಗಳಂತೆ ತೋಳ್ಪಾಡಿಯವರ ಕೃತಿಯೂ ಒಂದು ರಸಯಾತ್ರೆ. ಒಂದು ಕಡೆ ತೋಳ್ಪಾಡಿಯವರು ‘ಬಹಳ ವಿಚಾರಗಳನ್ನು ಮಾಡಿದ್ದಾರೆನ್ನುವುದು ನಿಜ. ನಾಗರಿಕತೆ ನಡೆದುಬಂದ ದಾರಿಯ ಚಿತ್ರವನ್ನು ನಿರುದ್ವಿಗ್ನವಾಗಿ ನೋಡಿದ್ದಾರೆನ್ನುವುದೂ ನಿಜ.’ ಎನ್ನುತ್ತಾರೆ. ಇದು ಅವರ ಕೃತಿಗೂ ಅನ್ವಯ.