ಸಾಹಿತ್ಯ ಮತ್ತು ರಾಜಕಾರಣ
ಸಾಹಿತಿಗಳೂ ರಾಜಕಾರಣಿಗಳೇ ಎಂದು ಕರ್ನಾಟಕದ ಮಾನ್ಯ ಉಪಮುಖ್ಯಮಂತ್ರಿಗಳೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಮಾನ್ಯ ಡಿ.ಕೆ. ಶಿವಕುಮಾರ್ ಅಪ್ಪಣೆಕೊಡಿಸಿದ್ದಾರೆ. ಇದೇನೂ ಆಕಸ್ಮಿಕವಾದ ಮಾತೆಂದು ತಿಳಿಯಬೇಕಾಗಿಲ್ಲ. ಬದಲು ಅದು ರಾಜಕಾರಣಿಯೊಬ್ಬರು ಎಲ್ಲ ರಾಜಕಾರಣಿಗಳ ಪರವಾಗಿ ಪಟ್ಟ ಅಭಿಪ್ರಾಯವೆಂದು ತಿಳಿಯಬೇಕು. ಇತರರು ಹೇಳಿಲ್ಲ, ಇವರು ಹೇಳಿದರು, ಅಷ್ಟೇ ವ್ಯತ್ಯಾಸ.
ಸಾಹಿತ್ಯ ಮತ್ತು ರಾಜಕಾರಣ ಎಂಬ ವಿಶಾಲ ವಟವೃಕ್ಷದ ಕುರಿತು ಅನೇಕ ಕನ್ನಡ ಬರಹಗಾರರು ವಿಸ್ತಾರವಾದ ಲೇಖನಗಳನ್ನೋ, ಕೃತಿಗಳನ್ನೋ ಬರೆದಿದ್ದಾರೆ. ಹೀಗೆ ಬರೆದದ್ದಕ್ಕಿಂತಲೂ ಹೆಚ್ಚು ಪ್ರಭಾವಶಾಲಿ ಮಾತುಗಳನ್ನಾಡಿದ್ದಾರೆ. ತಕ್ಷಣಕ್ಕೆ ಲಂಕೇಶ್, ಚಂದ್ರಶೇಖರ ಪಾಟೀಲ, ಗಿರಡ್ಡಿ ಗೋವಿಂದರಾಜ, ಜಿ.ಕೆ. ಗೋವಿಂದ ರಾವ್, ಬರಗೂರು ರಾಮಚಂದ್ರಪ್ಪ ಮುಂತಾದ ಹಿರಿಯರ ನೆನಪಾಗುತ್ತದೆ. ಇವುಗಳನ್ನು ಸಾಹಿತ್ಯ ವರ್ತುಲ ಹಂಸಕ್ಷೀರ ನ್ಯಾಯದಂತೆ ತಮಗೆ ಬೇಕಾದದ್ದನ್ನು ಸ್ವೀಕರಿಸಿ ಅನನುಕೂಲವಾದ್ದನ್ನು ತಿರಸ್ಕರಿಸಿದೆ.
ಸಾಹಿತಿಗಳು ಅನಭಿಷಿಕ್ತ (ಅನಧಿಕೃತ?) ಜನಪ್ರತಿನಿಧಿಗಳು ಎಂದು ಕವಿಯೊಬ್ಬ ಹೇಳಿದ. ಅವನು ಯಾವ ಉದ್ದೇಶದಲ್ಲಿ ಹೇಳಿದನೆಂಬುದು ಇಲ್ಲಿ ಅಪ್ರಸ್ತುತ. ಆದರೆ ನಮ್ಮ ಅನೇಕ ಸಾಹಿತಿಗಳು ತಾವೇ ಜನತೆಯನ್ನೂ ಮತ್ತು ಜಗತ್ತನ್ನೂ ಮುನ್ನಡೆಸುವವರಂತೆ ಅಭಿವ್ಯಕ್ತಿಸುವುದುಂಟು. ಕೆಲವರು ಸಾಹಿತ್ಯದೊಳಗೇ ಬಿದ್ದು ಉರುಳುಸೇವೆ ನಡೆಸಿದರೆ ಇನ್ನು ಕೆಲವರು ಸಾಹಿತ್ಯಕ್ಕೆ ಪೂರಕವಾದ ಇತರ ಅಂಶಗಳತ್ತ ಕಣ್ಣು ಹಾಯಿಸುವುದುಂಟು. ಇನ್ನೂ ಕೆಲವರು ಸಾಹಿತ್ಯವು ಜನಹಿತಕ್ಕಾಗಿಯೇ ಇರುವುದರಿಂದ ಅಥವಾ ಇರಬೇಕಾದ್ದರಿಂದ ಜನಹಿತದ ರಾಜಕೀಯಕ್ಕೆ ಬೇಕಾದ ನಿಲುವುಗಳನ್ನು ತಳೆಯುತ್ತಾರೆ. ಇದನ್ನು ತಪ್ಪೆಂದು ಹೇಳಲಾಗದು. ಆದರೆ ಯಾವುದು ಸರಿ ಯಾವುದು ತಪ್ಪು ಎಂಬುದು ರಾಜಕಾರಣದ ಲೆಕ್ಕಾಚಾರದಲ್ಲಿ ಬಹುಮತದ ನಿರ್ಣಯವಾದ್ದರಿಂದ ಅದರ ನಿಖರತೆ ಸದಾ ಗುಮಾನಿಯಲ್ಲಿರುತ್ತದೆ. ಬಹುಮತದ ಅಭಿಪ್ರಾಯವು ಅಂತಿಮ ಸತ್ಯವಾಗಿರಬೇಕಾಗಿಲ್ಲವೆಂಬುದು ಸಾರ್ವಕಾಲಿಕ ಸತ್ಯ. ಉಳಿದದ್ದೆಲ್ಲ ಅಭಿಪ್ರಾಯಗಳು ಮಾತ್ರ. ಇವು ಕಾಲಾನುಸಾರ ಬದಲಾಗಬಹುದು. ಚಳಿಗಾಲದಲ್ಲಿ ಕಂಬಳಿ ಹೊದ್ದವರು ಬೇಸಿಗೆಯಲ್ಲೂ ಅದನ್ನೇ ಹೊದೆಯಲಾರರು.
ರಾಜಕಾರಣವು ಪ್ರಭಾವಿಸದ ಕ್ಷೇತ್ರವು ಯಾವುದೂ ಇಲ್ಲ. ಯಾವುದೇ ರಾಜಕಾರಣವು ತನ್ನನ್ನೊಪ್ಪಿದವರನ್ನು ಮಾತ್ರವಲ್ಲ, ಒಪ್ಪದವರನ್ನೂ ತನ್ನ ಕಕ್ಷೆಯಲ್ಲಿ ನಿಯಂತ್ರಿಸುತ್ತದೆ. ಇದು ರಾಜಸತ್ತೆಯಲ್ಲೂ ನಿಜ; ಪ್ರಜಾತಂತ್ರದಲ್ಲೂ ನಿಜ. ರಾಜನೇ ಕಾಲಕ್ಕೆ ಕಾರಣವೆಂದವರು ಅಜ್ಞಾನಿಗಳು ಎಂದು ನಂಬಬೇಕಾಗಿಲ್ಲ. ಕಾವ್ಯದಲ್ಲಿ ತನ್ನ ದೊರೆಯನ್ನು ನಾಯಕನನ್ನಾಗಿಸಿ ಹಾಡಿಹೊಗಳಿದ ಕವಿಯು ಅಧಿಕಾರ ಪ್ರಾಪ್ತಿಗೆ, ರಕ್ಷಣೆಗೆ ದೊರೆಯು ಎಸಗಿರಬಹುದಾದ (ಮನುಷ್ಯಸಹಜವಾಗಿಯೇ ಬಹುಪಾಲು ದೊರೆಗಳು ಕುಕೃತ್ಯಗಳನ್ನು ಎಸಗಿರಬಹುದು ಮತ್ತು ‘ಒಳ್ಳೆಯ ದೊರೆ’ ಎಂಬುದು ಒಂದು ಸಾಪೇಕ್ಷ ವರ್ಣನೆಯಲ್ಲದೆ ಪೂರ್ಣಚಿತ್ರಣವಲ್ಲ!) ಕೇಡುಗಳನ್ನು, ಕೃತ್ರಿಮಗಳನ್ನು, ಸಾಹಿತ್ಯದಲ್ಲಿ ಖಳನಾಯಕರಂತೆ ಚಿತ್ರಿಸಿರುವ ಪಾತ್ರಗಳಷ್ಟೇ ಎಸಗಿದ್ದಲ್ಲ. ಪ್ರಜಾಭಕ್ಷಣೆಯನ್ನು ಮಾಡಿದ ರಾಜನೊಬ್ಬ ತನ್ನ ಕಾಲದ ಕವಿಯನ್ನು ಚೆನ್ನಾಗಿಟ್ಟುಕೊಂಡರೆ ಈ ನಂಟಿನಿಂದಾಗಿ ಸಹಜವಾಗಿಯೇ ಆತ ಅದ್ಭುತ ರಮ್ಯ ನಾಯಕನಾಗಿ ಕಾವ್ಯದ ಪುಟಗಳಲ್ಲಿ ಅಂಟಿಕೊಳ್ಳುತ್ತಾನೆ. ನಾವು ಈ ಓದಿನಿಂದಾಗಿ ಒಳ್ಳೆಯ ಮತ್ತು ಕೆಟ್ಟ ಎಂಬ ಸ್ಪಷ್ಟ ವಿಭಜನೆಯನ್ನು ಮಾಡುತ್ತೇವೆಯೇ ಹೊರತು ಗೋಡೆ ಹತ್ತಿ ಅದರಾಚೆಗೇನಿದೆಯೆಂದು ಶೋಧಿಸುವುದಿಲ್ಲ. ಇದು ವರ್ತಮಾನದಲ್ಲಿ ವೈಭವವನ್ನು ಅನುಭವಿಸುವ ಮತ್ತು ಭವಿಷ್ಯದಲ್ಲೂ ಉಳಿಯಬಯಸುವ ಎಲ್ಲ ದೊರೆಗಳ ಸಾಧನೆಯೇ ಆಗಿದೆ. ರವಿ ಕಾಣದ್ದನ್ನು ಕವಿ ಕಾಣುತ್ತಾನಂತೆ. ಆದರೆ ಕವಿ ತಾನು ಕಂಡದ್ದನ್ನೆಲ್ಲ ಬೆಳಕಿಗೆ ತರುವುದಿಲ್ಲ. ನಿರ್ಜನವಾದಲ್ಲಿ ನಡೆದದ್ದು ಯಾರಿಗೂ ತಿಳಿದಿರುವುದಲ್ಲ ಬಿಡಿ; ಆದರೆ ರಾತ್ರಿಯಲ್ಲಿ, ಕತ್ತಲಿನಲ್ಲಿ ಏನು ನಡೆಯಿತು ಎಂಬುದನ್ನು ನೋಡಿದರೂ ಪ್ರಾಮಾಣಿಕವಾಗಿ ವಾಲ್ಮೀಕಿಯಾಗಲೀ, ವ್ಯಾಸರಾಗಲೀ, ಕಾಳಿದಾಸನಾಗಲೀ ಬರೆದಿದ್ದಾರೆಂಬ ಬಗ್ಗೆ ನನಗೆ ಸಂಶಯವಿದೆ. ದೊರೆತನಕ್ಕೆ ವಿರುದ್ಧವಾಗಿ ಬರೆದು ಉಳಿದವರಿದ್ದಾರೆಯೇ ನೋಡಿ!
ನಮಗಿಷ್ಟವಾದ್ದನ್ನು, ನಮ್ಮ ನಿಲುವಿಗೆ ಬದ್ಧವಾದ್ದನ್ನು ನಾವು ಇಷ್ಟಪಡುತ್ತೇವೆ. ಉಳಿದದ್ದನ್ನು ತ್ಯಾಜ್ಯವೆಂದು ತಿಳಿಯುತ್ತೇವೆ. ವಸ್ತುನಿಷ್ಠವೆಂಬ ಹೇಳಿಕೆಯಲ್ಲೇ ಒಂದು ಮೋಸವಿದೆ. ಯಾವ ವಸ್ತುವಿಗೂ ನಮ್ಮ ನಿಷ್ಠೆಯಿರುವುದಿಲ್ಲ. ಅದಕ್ಕೂ ನಮಗೂ ಇರುವ ತಾದಾತ್ಮತೆಯಲ್ಲಿ ನಮ್ಮ ಇಷ್ಟಾನಿಷ್ಟಗಳಿರುವುದರಿಂದ ನಮ್ಮ ವಸ್ತುನಿಷ್ಠೆಯು ಆ ಇಷ್ಟಾನಿಷ್ಟಗಳನ್ನವಲಂಬಿಸಿದೆ. ಅದಲ್ಲವಾದರೆ ನಮ್ಮ ಎಲ್ಲ ನಿರ್ಣಯಗಳೂ ನನ್ನನ್ನು ಒಪ್ಪುವ ಯಾರನ್ನೂ ನಾನು ಒಪ್ಪುವುದಿಲ್ಲ ಎಂಬಂತಿರುವ ಗ್ರೌಚೋಮಾರ್ಕ್ಸನ ತರ್ಕದಂತಿರಬಹುದು. ನಮಗೆ ಒಪ್ಪಿತವಾಗಬೇಕಾದರೆ ನಮ್ಮ ಮತ್ತು ಆ ವಸ್ತು/ವಿಚಾರ/ವ್ಯಕ್ತಿಯ ನಡುವೆ ಒಂದು ತಾದಾತ್ಮ್ಯವಿರಬೇಕಾಗುತ್ತದೆ. ಇದು ಅನೇಕಬಾರಿ ಪರಸ್ಪರ ಅನುಕೂಲವಾದ ವೇದಿಕೆಯನ್ನು ಸೃಷ್ಟಿಮಾಡುತ್ತದೆ. ವಿಮರ್ಶೆಯೆಂದರೆ ಇದೇ ಅಲ್ಲವೇ?
ಆಧುನಿಕ ಕಾಲಕ್ಕೆ ಸಾಹಿತಿ ಹೆಚ್ಚು ಜಾಣನಾಗುತ್ತಿದ್ದಾನೆ. ಹಿಂದೆಲ್ಲ ಸಾಹಿತಿಯೊಬ್ಬ ತನ್ನ ಮುಗ್ಧತನದಿಂದ ತನ್ನ ಪುಟ್ಟಪ್ರಪಂಚವನ್ನೇ ಜಗತ್ತಾಗಿಸಿ ಬರೆದರೆ ಈಗ ಸಾಹಿತಿಗಳು ಜಗತ್ತಿನಲ್ಲಿ ತಮಗೆ ಬೇಕಾದ ಚಿಂತನೆಗಳನ್ನು ಆರಿಸಿ ಅದಕ್ಕೆ ತಮಗನುಕೂಲವಾದ ಆಕಾರವನ್ನು ಕೊಟ್ಟು ಇಷ್ಟದೈವವಾಗಿಸಿ ಪೂಜಿಸುತ್ತಾರೆ. ಸಾಹಿತಿಗಳು ಎಡ-ಬಲ ಮುಂತಾದ ಪಂಥೀಯರಾದದ್ದು ಇದರಿಂದಾಗಿಯೇ. ನಾವು ಗಮನಿಸಬೇಕಾದದ್ದು ಸಾಮಾಜಿಕ ಓರೆಕೋರೆಗಳನ್ನು. ಅವನ್ನು ಸಾಪಾಟುಮಾಡಬಲ್ಲ ಭೇಷಜಗಳನ್ನು. ಆದರೆ ಇವು ನಮಗೆ ಅನುಕೂಲವಾಗುತ್ತದಾದರೆ ಈ ಓರೆಕೋರೆಗಳನ್ನೇ ಕಲಾತ್ಮಕವಾಗಿ ಅಭಿವ್ಯಕ್ತಿಸಿ ಸ್ವಕಾರ್ಯ, ಸ್ವಾಮಿಕಾರ್ಯಗಳನ್ನು ಸಾಧಿಸುವ ಮತ್ತು ಅದನ್ನೇ ಬದುಕಿನ ಸಿದ್ಧಿಯೆಂಬಂತೆ ತೋರಿಸಬಲ್ಲ ಸಾಹಿತಿಗಳು ಅನೇಕರಿದ್ದಾರೆ. ಜನಪ್ರಿಯತೆಯು ಪ್ರಚಾರಪ್ರಿಯತೆಯ ಭಾಗವಾಗಿ ವೇಗವಾಗಿ ಮುನ್ನುಗ್ಗುತ್ತಿದೆ. ಸಾಧನೆಗಳು ಜಾಹೀರಾತಿನಂತೆ ಬಿತ್ತರಗೊಳ್ಳುತ್ತವೆ. ಇಂದಿನ ಸಾಮಾಜಿಕ ಜಾಲತಾಣಗಳು ಸಾಂಪ್ರದಾಯಿಕ ಮಾಧ್ಯಮಗಳಾದ ಪತ್ರಿಕೆ, ಸಂಚಿಕೆಗಳನ್ನು ಹಿಂದಿಕ್ಕಿದ ಮೇಲೆ ಬರುವ ಅಭಿವ್ಯಕ್ತಿಗಳು ಸ್ವಕೇಂದ್ರಿತವಾಗಿರುತ್ತವೆ. ‘ನೋಡಿ ಇಲ್ಲೊಂದು ನೀವು ಓದಲೇಬೇಕಾದ ಕೃತಿಯಿದೆ. ಇದರಲ್ಲಿ ಅನೇಕ ಪದ್ಯಗಳೂ/ಕಥೆಗಳು, ಪ್ರಬಂಧಗಳು ಇವೆ. ಎಲ್ಲವೂ ಚೆನ್ನಾಗಿವೆ.’ ಎಂದು ಹೇಳಿದ ಮೇಲೆ ಅದರ ಹಂಸಗೀತೆಯಾಗಿ ಲಜ್ಜೆಯನ್ನು ತೊರೆದ ಈ ವಾಕ್ಯವಿರುತ್ತದೆ: ‘ಇದರಲ್ಲಿ ನನ್ನದು ಒಂದು ಪದ್ಯ/ಕಥೆ/ಲೇಖನವಿದೆ’.
ಆದರೆ ಈಗ ಕೆಲವು ದಶಕಗಳಿಂದ ಅಥವಾ ಒಂದು ಶತಮಾನಕ್ಕೂ ಮಿಕ್ಕಿದ ಕಾಲದಲ್ಲಿ ಸಾಹಿತಿ ಈ ಹಂತವನ್ನು ದಾಟಿದ್ದಾನೆ. ಈಗ ಆತ ರಾಜಕಾರಣದಲ್ಲಿ ಸಕ್ರಿಯ ಭಾಗಿ. ತಪ್ಪಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಸಾಹಿತಿಗಳು ದುಡಿದರು. ಆಗ ಅವರಿಗೆ ಪಂಪ-ರನ್ನರಿಗಿಂತ ಗಾಂಧಿ ಮುಖ್ಯರಾದರು. ಕಾವ್ಯಾರಾಧನೆಗಿಂತ ಸ್ವಾತಂತ್ರ್ಯ ಹೋರಾಟ ಮುಖ್ಯವಾಯಿತು. ಸ್ವಾತಂತ್ರ್ಯ ಸಿಕ್ಕಿದ ನಂತರ ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಅನೇಕರು ಭಾಗವಹಿಸಿದರು. 1970ರ ದಶಕದಲ್ಲಿ ತುರ್ತುಪರಿಸ್ಥಿತಿಯ ಕಾಲದಲ್ಲಿ ಬಹಳಷ್ಟು ಸಾಹಿತಿಗಳು ತಮ್ಮ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ವ್ಯವಸ್ಥೆಯ ವಿರುದ್ಧದ ಹೋರಾಟಕ್ಕೆ ಧುಮುಕಿದರು. ಹೊಸ ಆಡಳಿತಕ್ಕೆ ಬೇಕಾದ ವೇದಿಕೆಯನ್ನು ತಯಾರುಮಾಡಿಕೊಟ್ಟು ಮತ್ತೆ ತಮ್ಮ ಸ್ಥಾನಕ್ಕೆ ಮರಳಿದರು. ಆಡಳಿತವು ಅದೆಷ್ಟು ದಕ್ಷತೆಯಿಂದ ನಡೆಯಿತೋ ಅದು ಬೇರೆ ವಿಚಾರ. ಆದರೆ ಅದರಲ್ಲಿ ಸೃಜನಶೀಲ, ಸಂವೇದನಾಶೀಲ ಮನಸ್ಸುಗಳ ಪಾತ್ರವಿತ್ತು.
ಹೀಗೆ ಸಾಹಿತಿಗಳು ತಮ್ಮತಮ್ಮ ಕ್ಷೇತ್ರಗಳಿಗೆ ಮರಳುವುದು ಕಡಿಮೆಯಾದದ್ದು ಈ ತಲೆಮಾರಿನ ವಿಚಿತ್ರ. ಕಳೆದ ಕೆಲವು ವರ್ಷಗಳಿಂದ, ದಶಕಗಳಿಂದ, ಸಾಹಿತಿಗಳು ರಾಜಕೀಯವಾದ ನಿಶ್ಚಿತ ಒಲವನ್ನು ತಳೆದು ಅದರ ಲಾಭವನ್ನು, ಫಲವನ್ನು ಪಡೆಯಲು ಶಕ್ತರಾದರು. ರಾಜಕಾರಣವು ಒಂದು ಹೊಸಕಿಂಡಿಯನ್ನು ಸೃಷ್ಟಿಸಿದ್ದನ್ನು ಅನೇಕ ಸಾಹಿತಿಗಳು ಕಂಡರು. ಇದರ ಪರಿಣಾಮವೆಂದರೆ ಪ್ರತೀ ಚುನಾವಣೆಯೂ ಪ್ರತೀ ರಾಜಕೀಯ ಹೋರಾಟಗಳೂ, ಸ್ಪರ್ಧೆಗಳೂ ರಾಜಕೀಯ ಮೇಲಾಟದೊಂದಿಗೆ ಸಾಹಿತ್ಯದ ಮೇಲಾಟಕ್ಕೂ ಸಾಕ್ಷಿಯಾಯಿತು. ಇತ್ತೀಚೆಗೆ ದೇಶಾದ್ಯಂತ ಸಂವಿಧಾನ ರಕ್ಷಣೆಯ ಪಣತೊಟ್ಟ ಪ್ರಗತಿಪರತೆಯ ಹಿಂದೆ ಕೆಲವರಿಗಾದರೂ ರಾಜಕೀಯ ಲಾಭವಿದ್ದದ್ದು ಕಣ್ಣಿಗೆ ರಾಚುವಂತಿತ್ತು. ನಮ್ಮ ಮಠಾಧಿಪತಿಗಳಂತೆ ರಾಜಕಾರಣಿಗಳು ವೇದಿಕೆಯ ಮೊದಲಿನ ಸಾಲಿನಲ್ಲಿ ಕುಳಿತು ತಮ್ಮ ವಿಚಾರಪರತೆಯನ್ನು, ಸಾಹಿತ್ಯದ ಹಿರಿತನವನ್ನು ಕಂಗೊಳಿಸಲು ಕೆಲವರು ಮಾಡುತ್ತಿದ್ದ ಪ್ರಯತ್ನದಲ್ಲಿ ಅವರಿಗೆ ಮುಂದೆ ಉಜ್ಚಲ ಭವಿಷ್ಯವಿದೆಯೆಂಬುದು ಕಾಣಿಸುತ್ತಿತ್ತು.
ರಾಜಕಾರಣಿಗಳು ಹಿಂದೆಲ್ಲ ಸಾಹಿತಿ-ಚಿಂತಕರನ್ನು ತಮ್ಮ ಅಸ್ತ್ರಗಳಂತೆ ಬಳಸಿಕೊಳ್ಳುತ್ತಿದ್ದರು. ಅವರಿಂದ ಆಗಬೇಕಾದ ಕೆಲಸವಾದ ಮೇಲೆ ಅವರನ್ನು ನಿವೃತ್ತ ಅಧ್ಯಾಪಕರನ್ನು ನೋಡಿಕೊಂಡ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದರು. ಅಪರೂಪಕ್ಕೊಮ್ಮೆ ಅವರಿಗೆ ಗೌರವಾರ್ಪಣೆ, ನಾಲ್ಕು ಒಳ್ಳೆಯ ಮಾತು ಇಷ್ಟರಲ್ಲಿ ಎಂತಹ ರಾಜಕಾರಣಿಯಾದರೂ ಒಳ್ಳೆಯ ಶಿಷ್ಯ/ವಿದ್ಯಾರ್ಥಿಯಾಗಬಹುದಿತ್ತು. ಹಾಗೆಯೇ ನಮ್ಮ ಸಾಹಿತಿಗಳಿಗೆ ರಾಜಕಾರಣಿಗಳು ತನಗೆ ಹತ್ತಿರದವರು ಮತ್ತು ಸಿಕ್ಕಾಗ ಚೆನ್ನಾಗಿ ಮತ್ತು ನಮ್ರರಾಗಿ ಮಾತನಾಡುತ್ತಾರೆ ಎಂಬುದೇ ಹೆಮ್ಮೆಯ ಮಾತಾಗಿತ್ತು. ಈಗ ಹಾಗಲ್ಲ; ತಾನು ತನ್ನ ಸಾಹಿತ್ಯದ ದುಡಿಮೆಯಿಂದ ರಾಜಕಾರಣಿಗೆ ಪ್ರಯೋಜನ ಮಾಡಿಕೊಟ್ಟರೆ ತನಗೆ ಅದಕ್ಕೆ ಪ್ರತಿಯಾಗಿ ಏನಾದರೂ ಸಿಗಲೇಬೇಕು ಎಂಬ ಸೂಕ್ಷ್ಮತರ್ಕವು ಢಾಳಾಗಿ ಕಾಣಿಸುತ್ತದೆ. ಇದನ್ನು ಸಾಧಿಸಲು ಮತ್ತು ಸಿಕ್ಕ ಮೇಲೆ ಉಳಿಸಿಕೊಳ್ಳಲು ಹಾಗೂ ತಾವು ಈ ಉಪಕಾರವನ್ನು, ಋಣವನ್ನು ಮರೆತಿಲ್ಲ ಎಂಬುದನ್ನು ಸಾಕ್ಷೀಕರಿಸಲು ಬೇಕಾದ ಎಲ್ಲ ಶ್ರಮವನ್ನು ಹಾಕಲು ಸಾಹಿತಿಗಳು ಸಿದ್ಧ. ಇದರಿಂದಾಗಿ ಬಲಪಂಥೀಯ ಸರಕಾರ ಬಂದರೆ ಬಲಪಂಥೀಯ ಸಾಹಿತಿಗಳಿಗೆ, ಧಾರ್ಮಿಕ ಸರಕಾರ ಬಂದರೆ ಧಾರ್ಮಿಕರಿಗೆ, ಎಡಪಂಥೀಯ ಸರಕಾರ ಆಯ್ಕೆಯಾದರೆ ಎಡಪಂಥೀಯರಿಗೆ ಮತ್ತು ಇವೆರಡೂ ಇಲ್ಲದ ಎಡಬಿಡಂಗಿ ಅಧಿಕಾರ ಹಂಬಲದ ಸರಕಾರ ಬಂದರೆ ಈ ಪೈಕಿ ಯಾರಿಗೂ ಸ್ಥಾನ-ಮಾನ ಲಭಿಸುವುದು ಗ್ಯಾರಂಟಿಯೆಂಬಂತಾಗಿದೆ. ಸ್ಥಾನಕ್ಕೂ ಮಾನಕ್ಕೂ ಹೊಸ ಸೂತ್ರ ಸೃಷ್ಟಿಯಾಗಿದೆ.
ಅನ್ಯಾಯದ, ಮೂಲಭೂತವಾದದ ವಿರುದ್ಧ ಹೋರಾಡಿದವರು ಅನೇಕರಿದ್ದಾರೆ. ಆದರೆ ಅವರೆಲ್ಲ ಯುದ್ಧ ಮುಗಿದಾದ ಮೇಲೆ ಶಾಂತಿ ಬಯಸಿ ತಮ್ಮ ಆಯುಧಗಳಿಗೆ ವಿಶ್ರಾಂತಿ ನೀಡಿದ್ದಾರೆ. ಅಂಥವರಿಗೆ ಈ ಫಲ, ಲಾಭ ಸಿಕ್ಕದು. ಯುದ್ಧ ಮುಗಿದ ಮೇಲೆ ರಣರಂಗದಲ್ಲಿ ಅರಸುತ್ತ ಹೋಗುವವರಿಗೆ ಹೀಗೆ ಅಧಿಕಾರವೆಂಬ ಅನರ್ಘ್ಯ ರತ್ನಗಳು ಸಿಕ್ಕುತ್ತವೆ. ಆಡಳಿತ ಬೇರೆ; ಅದನ್ನು ಸಾಹಿತಿಯೂ ಸಾಧಿಸಬಹುದು. ಆದರ ಅಧಿಕಾರವೆಂಬ ಮೌಲ್ಯವೇ ಬೇರೆ. ಅದು ಸಾಹಿತಿ-ರಾಜಕಾರಣಿಗೆ ಮಾತ್ರ ದಕ್ಕುವಂಥದ್ದು.
ಸಾಹಿತ್ಯದೊಳಗೆ ಇಷ್ಟು ರಾಜಕಾರಣ ಅಡಗಿದೆಯೆಂಬುದು ಅನೇಕರಿಗೆ ಗೊತ್ತಿರಲಿಲ್ಲ. ಈಗ ಗೊತ್ತಾಗಿದೆ. ಇದನ್ನೇ ಶಿವಕುಮಾರ್ ಸಾಹಿತಿಗಳೂ ರಾಜಕಾರಣಿಗಳೇ ಎಂದು ಸರಳವಾಗಿ ಬಣ್ಣಹಚ್ಚದೆಯೇ ಹೇಳಿದ್ದಾರೆ. ರಾಜಕಾರಣಿಗಳಿಂದ ಶಾಲು ಹೊದಿಸಿಕೊಂಡು ಪೇಟ ಧರಿಸಿಕೊಂಡು, ಹಾರ ಹಾಕಿಸಿಕೊಂಡು ಸಾಹಿತಿ ಮೆರೆಯುವ ಕಾಲ ಈಗ ತಿರುವುಮುರುವಾಗಿದ್ದರೆ ಅದಕ್ಕೆ ಸಾಹಿತ್ಯಕ್ಕಿಂತ ರಾಜಕಾರಣವೇ ಕಾರಣವಾಗಿದೆ. ಹೀಗೆ ರಾಜಕಾರಣಿಗಳಾದವರಲ್ಲಿ ಯೋಗ್ಯರೂ ಇಲ್ಲ ಅಥವಾ ಇರಲಿಲ್ಲವೆಂದಲ್ಲ. ಆದರೆ ಎಲ್ಲರೂ ಕವಿಯೂ ರಾಜಕಾರಣಿಯೂ ಆಗಿದ್ದ ಹೊಚಿಮಿನ್‌ಗಳಲ್ಲವಲ್ಲ!