ಮಾಧ್ಯಮ: ವಿಚಾರ-ವಿಕಾರ
ಗ್ರೀಸಿನ ಅಧ್ಯಕ್ಷರಾದ ಕ್ಯಾಥರಿನಾ ಸಕೆಲ್ಲರೊಪೌಲೋ ಅವರು ಶುಕ್ರವಾರ, 25/08/2023ರಂದು ಅಥೆನ್ಸಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಗ್ರೀಸಿನ ಎರಡನೇ ಅತ್ಯುಚ್ಚ ನಾಗರಿಕ ಪ್ರಶಸ್ತಿಯಾದ ‘ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್’ನ್ನು ನೀಡಿ ಗೌರವಿಸಿದರು. ಇದರ ಭಾವಚಿತ್ರವು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಭಾವಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಒಂದು ವಿಚಾರ ಮತ್ತು ವ್ಯತ್ಯಾಸ ಸ್ಪಷ್ಟವಾಗಬಹುದು: ಪ್ರಶಸ್ತಿ ನೀಡುವ ಗ್ರೀಸ್ ಅಧ್ಯಕ್ಷರು ಪ್ರಶಸ್ತಿ ಸ್ವೀಕರಿಸುವವರನ್ನು ನೋಡುತ್ತಿದ್ದಾರೆ; ಪ್ರಶಸ್ತಿ ಸ್ವೀಕರಿಸುವ ನಮ್ಮ ಪ್ರಧಾನಿ ಛಾಯಾಗ್ರಾಹಕನನ್ನು ನೋಡುತ್ತಿದ್ದಾರೆ.
ಇದೊಂದು ಸಾಂಕೇತಿಕ ಅರ್ಥವನ್ನು ನೀಡುವ ಚಿತ್ರ. ಪ್ರಚಾರಪ್ರಿಯರಿಗೂ ವಾಸ್ತವದ ನೆಲೆಯವರಿಗೂ ಇರುವ ವ್ಯತ್ಯಾಸವನ್ನು ಗುರುತಿಸಬಲ್ಲ ಹೆಜ್ಜೆ. ಆದರೆ ಪ್ರಚಾರ ಪ್ರಿಯರು ಇಷ್ಟರಲ್ಲೇ ತೃಪ್ತಿಪಡುವುದಿಲ್ಲ. ಸ್ವಲ್ಪ ಬಣ್ಣ, ಸ್ವಲ್ಪ ಸುಳ್ಳು ಇವನ್ನು ಬೆರೆಸಿ, ವಾಸ್ತವವನ್ನು ಮರೆಸಿ ಮೆರೆಯುತ್ತಾರೆ. ಈ ಪ್ರಸಂಗವನ್ನೇ ಗಮನಿಸಿ. ಮೋದಿಯವರಿಗೆ ನೀಡಿದ ಪ್ರಶಸ್ತಿಯು ಗ್ರೀಸಿನ ‘ಎರಡನೇ ಅತ್ಯುಚ್ಚ ಪ್ರಶಸ್ತಿ’. ಅಲ್ಲಿನ ಅತ್ಯುಚ್ಚ ಪ್ರಶಸ್ತಿಯೆಂದರೆ ‘ಆರ್ಡರ್ ಆಫ್ ದಿ ರೆಡೀಮರ್’. ಇದರಲ್ಲಿ ಅವಮಾನವೇನಿಲ್ಲ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚು ಮಾತ್ರವಲ್ಲ, ಪದಕವಿಲ್ಲದ ನಾಲ್ಕನೇ ಸ್ಥಾನವೂ ಪ್ರಶಸ್ತಿ ಸಮಾನ. ಅಲ್ಲಿಯ ವರೆಗೆ ತಲುಪಿದರಲ್ಲ! ಮಿಲ್ಖಾ ಸಿಂಗ್, ಪಿ.ಟಿ.ಉಷಾ ಇವರೆಲ್ಲ ಗಳಿಸಿದ್ದು ಇದನ್ನೇ. ಆದರೆ ಹೆಸರನ್ನೂ ಗಳಿಸಿದರು. ಭಾರತಕ್ಕೆ ಹೆಮ್ಮೆಯನ್ನು ತಂದರು.
ಇಂತಹ ಪ್ರಚಾರಪ್ರಿಯತೆಗೆ ಮಾಧ್ಯಮವು ಸಾಥ್ ನೀಡಬಾರದು. ಅವುಗಳ ಉದ್ದೇಶ, ಸಾರ್ಥಕತೆ ಪ್ರಸಾರದಲ್ಲೇ ಹೊರತು ಪ್ರಚಾರದಲ್ಲಲ್ಲ. ವಿದ್ಯುನ್ಮಾನ ಯುಗದಲ್ಲಿ ನಮ್ಮ ಬಹುತೇಕ ಮಾಧ್ಯಮಗಳು ತಮ್ಮ ನೈತಿಕತೆಯನ್ನೇ ಕಳೆದುಕೊಂಡಿವೆ. ಭಾರತದ ಪ್ರಧಾನಿಗೆ ಗ್ರೀಸಿನ ಪ್ರಶಸ್ತಿ ಗೌರವ ಸಿಕ್ಕಿದ ಪ್ರಸಂಗದಲ್ಲೂ ಹೀಗೇ ಆಯಿತು. ಸರಕಾರದ ಅದರಲ್ಲೂ ಪ್ರಧಾನಿ ಮತ್ತು ಅವರ ಹಿಂಬಾಲಕರ ಒಲವನ್ನು ಕಳೆದುಕೊಳ್ಳಲು ಸಿದ್ಧವಿಲ್ಲದ ಮಾಧ್ಯಮ ಗುಂಪುಗಳು ಅವರಿಗೆ ಸಿಕ್ಕಿದ ಪ್ರಶಸ್ತಿಯನ್ನು ಗ್ರೀಸಿನ ಅತ್ಯುಚ್ಚ ಪ್ರಶಸ್ತಿಯೆಂದೇ ವರದಿ ಮಾಡಿದವು. ಕಳೆದ 4 ದಶಕಗಳಲ್ಲಿ ಗ್ರೀಸನ್ನು ಸಂದರ್ಶಿಸಿದ ಮೊದಲ ಪ್ರಧಾನಿಯೆಂಬ ಹೆಗ್ಗಳಿಕೆ ಬೇರೆ. ಇದರಿಂದಾಗಿ ವಾಸ್ತವವನ್ನು ಹುಡುಕುವ, ಗ್ರಹಿಸುವ ಪ್ರಯತ್ನವನ್ನು ಮಾಡದೆಯೇ ಜನರ ಮುಂದೆ ತಪ್ಪು ಮಾಹಿತಿಯನ್ನು ನೀಡಿದವು. ಎಲ್ಲೋ ಒಂದೆರಡು ಪತ್ರಿಕೆಗಳು ಮಾತ್ರ ಸತ್ಯಮಾಹಿತಿಯನ್ನು ನೀಡಿದವು.
ಹೀಗೆ ಸುಳ್ಳು ಮಾಹಿತಿಯನ್ನು ನೀಡಲು ಕಾರಣವೇನು? ಮುಖ್ಯವಾಗಿ ಎರಡು ಕಾರಣಗಳನ್ನು ಹೇಳಬಹುದು: 1. ಮಾಹಿತಿಯ ಕೊರತೆ. 2.ಸುಳ್ಳೇ ಹೇಳುವ ಸಹಜ ಪ್ರವೃತ್ತಿ.
ಮೊದಲನೆಯದು ಇಂದಿನ ಬಹಳಷ್ಟು ಪತ್ರಕರ್ತರನ್ನು, ದೃಶ್ಯ ಮಾಧ್ಯಮದ ಮಾತುಬಾಕರನ್ನು ಕಾಡುತ್ತಿದೆ. ಇಂದು ಯಾರು ಬೇಕಾದರೂ ಮಾಧ್ಯಮದಲ್ಲಿ ಉದ್ಯೋಗ ಗಿಟ್ಟಿಸುವ ವಾತಾವರಣವಿದೆ. ಹಿಂದೆಲ್ಲ ಪ್ರಾಮಾಣಿಕವಾಗಿ ಸರಳವಾಗಿ ಬದುಕುವವರಷ್ಟೇ ಮಾಧ್ಯಮವನ್ನು ಪ್ರವೇಶಿಸುತ್ತಿದ್ದರು. ಅಲ್ಲಿ ಅನಾಕರ್ಷಕ ಮತ್ತು ಅನಿಶ್ಚಿತ ಭವಿಷ್ಯವಿರುತ್ತಿತ್ತು. ಒಂದು ರೀತಿಯ ಸನ್ಯಾಸ ಜೀವನವಿತ್ತು. ಪ್ರಭಾವಶಾಲಿ ಪತ್ರಕರ್ತರಿಗೆ ಒಳ್ಳೆಯ ಶಿಕ್ಷಕರಂತೆ ಸಮಾಜದಲ್ಲಿ ಗೌರವವಿರುತ್ತಿತ್ತು. ಅವರಿಗೆ ಸಂಬಳವೆಷ್ಟು, ಸವಲತ್ತುಗಳೇನು ಎಂದು ವಿಚಾರಿಸುವ ಪ್ರಮೇಯವಿರಲಿಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ಪತ್ರಿಕೋದ್ಯಮವೆಂಬ ಜ್ಞಾನಶಾಖೆ ಆರಂಭವಾದದ್ದೇ ಇಂತಹ ಸುಶಿಕ್ಷಿತರನ್ನು ಸಿದ್ಧಗೊಳಿಸುವುದಕ್ಕೆ. ‘ಪತ್ರಿಕೋದ್ಯಮ’ವೆಂಬ ಪದವು ಈ ಅಧ್ಯಯನ ಶಿಸ್ತಿಗೆ ಹೊಂದುತ್ತಿರಲಿಲ್ಲ. ಅಲ್ಲಿ ಕಲಿಯುವುದು, ಕಲಿಸುವುದು ಪತ್ರಿಕಾಧರ್ಮವನ್ನು. ಈ ಧರ್ಮದ ನಂಟು ಅವರಿಗೆ ಭವಿಷ್ಯದ ದಾರಿದೀಪವಾಗುತ್ತಿತ್ತು. ಹೀಗಂತ ಎಲ್ಲ ಪತ್ರಕರ್ತರೂ ಇಂತಹ ಪದವೀಧರರೇ ಆಗಿರಬೇಕಿರಲಿಲ್ಲ. ಕನಿಷ್ಠ ವಿದ್ಯಾರ್ಹತೆಯೊಂದಿಗೆ ಒಳ್ಳೆಯ ಬರಹಗಾರರನೇಕರು ಪತ್ರಕರ್ತರಾಗುವ ಆಸೆ ಮತ್ತು ಆಸಕ್ತಿಯಿಂದ ಪತ್ರಿಕಾಕ್ಷೇತ್ರವನ್ನು ಪ್ರವೇಶಿಸಿ ಸಾಕಷ್ಟು ಯಶಸ್ಸನ್ನು ಪಡೆದಿದ್ದರು.
ಆದರೆ ಬರಬರುತ್ತ ಪತ್ರಿಕೋದ್ಯಮವು ನೈಜ ಉದ್ಯಮವಾಗಲು ತೊಡಗಿತು. ರಾಜಕೀಯ, ಕೈಗಾರಿಕೆ, ವ್ಯವಹಾರ ಇವುಗಳ ಮುಖವಾಡವಾಗಿ ಪತ್ರಿಕೆಗಳು ಹೊರಬರಲು ಆರಂಭವಾದವು. ಮಾಲಕರ ಆಸಕ್ತಿ ಮತ್ತು ಧೋರಣೆಯನ್ನು ಪತ್ರಕರ್ತರು ಪ್ರತಿಬಿಂಬಿಸಲು ಸಿದ್ಧವಾದರು. ಜೊತೆಗೇ ಈ ವೃತ್ತಿಯಲ್ಲಿ ಉದ್ಯಮಿಗಳಾಗಬಹುದೆಂದೂ ಸಲೀಸಾಗಿ ಹಣ ಮತ್ತು ಪ್ರಸಿದ್ಧಿಯನ್ನು ಪತ್ರಕರ್ತರೂ ಅರಿತುಕೊಂಡರು. ಅಧಿಕಾರವನ್ನು ಬೆದರಿಸಲು ಅಂತಲ್ಲ ಅಧಿಕಾರವನ್ನು ಜಾಗೃತವಾಗಿಸಲು ಕಾವಲುಪಡೆಯಂತೆ ಕೆಲಸಮಾಡುವುದನ್ನು ಬಿಟ್ಟು ತಮಗಿಷ್ಟವಾದ್ದನ್ನು ಜನರ ಕೈಗೆ ದಕ್ಕಿಸುವ ವ್ಯೆಹವನ್ನು ರಚಿಸತೊಡಗಿದರು. ಸ್ವಲ್ಪ ಸಾಹಿತ್ಯ ಗೊತ್ತಿದ್ದರೆ ಸಾಕು, ಅವರು ಸಾಹಿತಿಗಳ ನಡುವೆಯೂ ಸ್ವಲ್ಪ ಹೆಚ್ಚಿನ ಸಮಾನತೆಯನ್ನು ಮಾತ್ರವಲ್ಲ ಪ್ರಾಮುಖ್ಯತೆಯನ್ನು ಪಡೆಯಲಾರಂಭಿಸಿದರು. ಅವರ ಕೈಯಲ್ಲಿರುವ ಪತ್ರಿಕೆಯು ಯಾರನ್ನು ಬೇಕಾದರೂ ನಾಯಕರನ್ನಾಗಿಸಬಹುದು ಮತ್ತು ಯಾರನ್ನು ಬೇಕಾದರೂ ಖಳನಾಯಕರನ್ನಾಗಿಸಬಹುದು ಎಂಬಂತಹ ವಾತಾವರಣವು ಮೂಡಿತು. ಕೆಲವರಂತೂ ರಾಜಕಾರಣಿಗಳು, ಉದ್ಯಮಿಗಳು ತಮ್ಮನ್ನು ಗಮನಿಸುವ, ಗೌರವಿಸುವ ರೀತಿಯನ್ನು ಆವಾಹಿಸಿಕೊಂಡು ತಾವು ಕಾನೂನಿಗಿಂತಲೂ ಮೇಲಿನವರೆಂಬಂತೆ ವರ್ತಿಸತೊಡಗಿದರು. ಕೆಲವೆಡೆ ನ್ಯಾಯಾಲಯಗಳು ಸೂಕ್ತ ಕ್ರಮವನ್ನು ನಡೆಸಿವೆಯಾದರೂ ಇನ್ನೂ ಅವರ ಪ್ರವೃತ್ತಿ ಒಂದು ತಲೆಮಾರಿನ ಹಿಂದೆ ಇದ್ದ ಸ್ಥಾನಕ್ಕೆ ಬದಲಾಗಿಲ್ಲ.
ಕಳೆದ ಒಂದು ದಶಕದಲ್ಲಿ ಪತ್ರಿಕೋದ್ಯಮದಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಈಗ ದೃಶ್ಯ/ವಿದ್ಯುನ್ಮಾನ ಮಾಧ್ಯಮಗಳ ಚಲಾವಣೆಯ ನಂತರ ಮಾಹಿತಿಯೂ ಇಲ್ಲ, ಶಿಕ್ಷಣವೂ ಇಲ್ಲ- ಬರಿಯ ಮನೋರಂಜನೆ ಮಾತ್ರ. ಹಿಂದೆಯೂ ಕೆಲವು ಬಾರಿ ಪ್ರಶ್ನಾರ್ಥಕ ಚಿಹ್ನೆಗಳೊಂದಿಗೆ ಕೆಲವು ಸುದ್ದಿಗಳು ಪ್ರಕಟವಾಗುತ್ತಿದ್ದವು. ಪ್ರಕಟವಾದ ಸುದ್ದಿಗಳೂ ಕೆಲವೊಮ್ಮೆ ಸುಳ್ಳೆಂದು ಆನಂತರ ಗೊತ್ತಾಗುತ್ತಿತ್ತು. ಇಂತಹ ಪ್ರಸಂಗಗಳು ಅಪರೂಪ ಮತ್ತು ಪತ್ರಿಕಾ ಧರ್ಮದ ಅಪವಾದಗಳಾಗಿರುತ್ತಿದ್ದವು. ಪಾರಂಪರಿಕವಾದ ‘ಸತ್ಯವೆಂಬುದೆ ಹರನು; ಹರನೆಂಬುದೇ ಸತ್ಯ’ ಎಂಬ ಕಾವ್ಯೋಕ್ತಿಯಲ್ಲಿ ಪತ್ರಕರ್ತರು ತಮಗನ್ವಯಿಸುವ ಮೊದಲರ್ಧವನ್ನು ಬಳಸಿಕೊಂಡು ತಮ್ಮ ಪತ್ರಿಕೆಯು ಪೀತ ಪ್ರವೃತ್ತವಾಗದಂತೆ ಜಾಗರೂಕತೆ ವಹಿಸುತ್ತಿದ್ದರು.
ಇಷ್ಟೇ ಆಗಿದ್ದರೂ ಸಮಾಜ ಹೇಗೋ ಕುಂಟುತ್ತ ಸಾಗಬಹುದಿತ್ತು. ಆದರೆ ಸುಳ್ಳಿನ ಮತ್ತು ಊಹೆಯ ಕಸರತ್ತು ಹೆಚ್ಚಾಗತೊಡಗಿದ್ದು ಸದ್ಯಕ್ಕೆ ನಡೆದ ಮಾಧ್ಯಮ ಕ್ರಾಂತಿ. ಆದರೆ ಅವುಗಳಿಗೆ ಮಾಧ್ಯಮಗಳು ಖಾತ್ರಿ ನೀಡುತ್ತಿರಲಿಲ್ಲ. ಈಗ ಹಾಗಲ್ಲ- ಏನು ಬೇಕಾದರೂ, ಹೇಗೆ ಬೇಕಾದರೂ ಬರೆಯೋಣ, ಪ್ರಸಾರ ಮಾಡೋಣ, ಅದು ಸುಳ್ಳೆಂದಾದಲ್ಲಿ ಒಂದು ಸಾಲಿನ ವಿಷಾದವನ್ನು ಪ್ರಕಟಿಸಿ ಸುಮ್ಮನಾಗೋಣ ಎಂಬ ನಿಲುವು ಮಾಧ್ಯಮಗಳದ್ದು. ಈಚೆಗೆ ಜಿಂಬಾಬ್ವೆಯ ಕ್ರಿಕೆಟ್ ಆಟಗಾರ ಹೀತ್ ಸ್ಟ್ರೀಕ್ ನಿಧನ ಹೊಂದಿದ ಬಗ್ಗೆ ವರದಿಯಾಯಿತು. ಮರುದಿನ ಅದು ಸುಳ್ಳೆಂದು ವರದಿಯಾಯಿತು. ಒಬ್ಬನ ಬದುಕನ್ನು ಕಮರಿಸುವ ವರದಿಯಲ್ಲೂ ಸತ್ಯಶೋಧನೆ ನಡೆಯದಿದ್ದರೆ ಪತ್ರಿಕೋದ್ಯಮದಲ್ಲಿ ಧರ್ಮದ ಪಾಲೆಷ್ಟು?
ಪ್ರಾಯಃ ಈ ಅಶುಭಾವಸರಕ್ಕೆ ಕಾರಣ ತಮ್ಮ ಮಾಧ್ಯಮದಿಂದ ಸುದ್ದಿ ಮೊದಲು ಪ್ರಸಾರವಾಗಬೇಕೆಂಬ ಆತುರ. ಇದನ್ನು ನಾವೇ ಮೊದಲಾಗಿ ಪ್ರಸಾರ ಮಾಡುತ್ತಿದ್ದೇವೆಂಬ ಪ್ರಚಾರ ಬೇರೆ ದೃಶ್ಯ ಮಾಧ್ಯಮಗಳಲ್ಲಿ ಬರತೊಡಗಿದೆ. ಒಂದು ಚಲನಚಿತ್ರವು ಯಾವುದಾದರೂ ಚಾನೆಲ್‌ನಲ್ಲಿ ಮೊದಲಿಗೆ ಬಂದರೆ ಅದನ್ನು ಹಾಕಿಕೊಳ್ಳಲಿ, ಏಕೆಂದರೆ ಅದಿರುವುದೇ ಮನರಂಜನೆಗೆ ಮತ್ತು ಅಲ್ಲಿ ಸಾಕಷ್ಟು ಪ್ರತಿಫಲ ದಕ್ಕಬೇಕಾದರೆ ಪ್ರಚಾರ ಬೇಕು. ಆದರೆ ಎಲ್ಲದರಲ್ಲೂ ಈ ಸ್ಪ್ರಿಂಟ್ ನಾಗಾಲೋಟ ನಡೆದರೆ ಆಗಬಹುದಾದ ಪರಿಣಾಮವನ್ನು ಅರ್ಥಮಾಡಿಕೊಳ್ಳದಿದ್ದರೆ ಅದು ಹೇಳುವವರ ಮತ್ತು ಕೇಳುವವರ ಪಾಲಿನ ದುರಂತ.
ಪತ್ರಕರ್ತರಿಗೆ ಅದರಲ್ಲೂ ವಿದ್ಯುನ್ಮಾನ ಮಾಧ್ಯಮಿಗಳಿಗೆ ಪ್ರಸಾರ ಮಾಡಬೇಕಾದ ಸುದ್ದಿಯ ಮಹತ್ವವೇ ಗೊತ್ತಿಲ್ಲದಂತಿದೆ. ತೀರಾ ಕಳಪೆ ಆಸಕ್ತಿಯ ವಿಚಾರಗಳನ್ನು ದಿನವಿಡೀ ಪ್ರಸಾರಮಾಡುವ ಹೊಸ ಫ್ಯಾಷನ್ ಬಂದಿದೆ. ಸಿನೆಮಾ ನಟ-ನಟಿಯರ ಖಾಸಗಿ ಬದುಕಿನ ವಿವರಗಳನ್ನು ರೋಚಕವಾಗಿ, ರೋಮಾಂಚಕಾರಿಯಾಗಿ ಪ್ರಕಟಿಸುವಾಗ ಇದರ ಮಹತ್ವವೇನೆಂಬುದನ್ನು ಅವರು ಗಮನಿಸುವುದೇ ಇಲ್ಲ. ಹಾಗೆಯೇ ಯಾವನೊಬ್ಬನ ದುರಂತ, ಸಾಂಸಾರಿಕ ದುಃಖದ ಸಂದರ್ಭದಲ್ಲಿ ಅವರನ್ನು ನಿಮಗೆ ನಿಮ್ಮ ಪತಿ/ಪತ್ನಿ, ಪುತ್ರ,/ಹೆತ್ತವರು ಅಗಲಿದ್ದು ದುಃಖವಾಗಿಲ್ಲವೇ? ಎಂದೆಲ್ಲ ತೀರಾ ದಡ್ಡತನದ ಪ್ರಶ್ನೆಗಳನ್ನು ಎಸೆಯುವಾಗ ನಮಗೂ ದುಃಖವಾಗುತ್ತದೆ. ಜೊತೆಗೇ ಈ ಮೂರ್ಖಪ್ರಶ್ನೆಯನ್ನು ಕೇಳಿದವನ ಬುದ್ಧಿಯ, ಪ್ರಜ್ಞೆಯ ಬಗ್ಗೆ ಸಂಶಯ ಹುಟ್ಟುತ್ತದೆ. ಬಹುತೇಕ ಮಾಧ್ಯಮಿಗಳಿಗೆ ಸಂವೇದನೆಯ ಬರಗಾಲ ಬಂದಂತಿದೆ.
ಮೊನ್ನೆ ನೀರಜ್ ಚೋಪ್ರಾ ವಿಶ್ವ ಕ್ರೀಡಾಕೂಟದ ಜಾವೆಲಿನ್ ತ್ರೋನಲ್ಲಿ ಮೊದಲ ಸ್ಥಾನ ಪಡೆದರು. ಪಾಕಿಸ್ತಾನಿಯೊಬ್ಬ ದ್ವಿತೀಯ ಸ್ಥಾನವನ್ನು ಪಡೆದರು. ಪ್ರಾಯಃ ಅವರಿಬ್ಬರಿಗೆ ಇಲ್ಲದ ವೈಮನಸ್ಸನ್ನು ನಮ್ಮ ಮಾಧ್ಯಮಗಳು ತರುವ ಪ್ರಯತ್ನವನ್ನು ಯಥಾನುಶಕ್ತಿ ಮಾಡಿದವು. ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸುದ್ದಿಯ ವರದಿಯಂತೆ ಮಾಧ್ಯಮಪ್ರಸಂಗಿಯೊಬ್ಬ ನೀರಜ್ ಚೋಪ್ರಾರ ತಾಯಿಗೆ ಅವರ ಮಗ ಪಾಕಿಸ್ತಾನಿಯೊಬ್ಬನನ್ನು ಹಿಂದಿಕ್ಕಿದ್ದರ ಬಗ್ಗೆ ಕೇಳಿದಾಗ ಆಕೆ ನವಿರಾಗಿ ಈ ಕೃತಕ ಗಡಿರೇಖೆಗಳು ಕ್ರೀಡೆಗೆ ವ್ಯಾಪಿಸಬಾರದೆಂಬ ಆಶಯವನ್ನೇ ಆತ ಗೆದ್ದಿದ್ದರೂ ತಾನು ಅಷ್ಟೇ ಸಂತಸ ಪಡುತ್ತಿದ್ದೆನೆಂದು ಹೇಳುವ ಮೂಲಕ ಸೂಚಿಸಿದರು. ಜಾವೆಲಿನ್ ತುದಿಗೆ ದ್ವೇಷವನ್ನು ಅಂಟಿಸುವ ಮಾಧ್ಯಮದ ಪ್ರಯತ್ನಕ್ಕೆ, ಪ್ರತಿಷ್ಠೆಗೆ ಭಂಗವಾಯಿತು.
ಒಟ್ಟಾರೆ ಪರಿಣಾಮದಲ್ಲಿ ಮಾರಕಶಕ್ತಿಯಾಗಬಲ್ಲ ದ್ವೇಷನಿರೂಪಣೆಯನ್ನು ಅನೇಕ ಮಾಧ್ಯಮಿಗಳು ಕರಗತಮಾಡಿಕೊಂಡಿದ್ದಾರೆ. ರಾಜಕೀಯವಾಗಿ ಯಾರಿಗೋ ಅನುಕೂಲವಾಗಬಲ್ಲ ವಾದಗಳನ್ನು ಅತ್ಯಂತ ಕ್ರೂರವಾಗಿ ನಿರೂಪಿಸಿ ಸೌಹಾರ್ದಯುತ ವಾತಾವರಣವನ್ನು ಹಾಳುಮಾಡಬಲ್ಲ ಪರಿಣತಿ ಅನೇಕರಿಗಿದೆ. ಅದಾಗಲೇ ದ್ವೇಷದ ಕಿಡಿಯು ಸೃಷ್ಟಿಯಾದದ್ದನ್ನು ನಿವಾರಿಸಲು, ತಣಿಸಲು ಪ್ರಯತ್ನಿಸಬೇಕಾದದ್ದು ತನ್ನ ಕರ್ತವ್ಯವೆಂಬುದನ್ನು ಮರೆತು ಅದನ್ನು ಇನ್ನಷ್ಟುಉರಿಸಲು ಬೇಕಾದ ಎಲ್ಲ ರೀತಿಯ ಚರ್ಚೆಯನ್ನು ನಮ್ಮ ಮಧ್ಯಮಗಳು ವೀಕ್ಷಕರಿಗೆ ಉಣಬಡಿಸುತ್ತವೆ. ಈ ನಿಟ್ಟಿನಲ್ಲಿ ಪತ್ರಿಕೆಗಳು ವಾಸಿಯೆನ್ನುವಂತೆಯೂ ಇಲ್ಲ. ಪತ್ರಿಕಾ ಸ್ವಾತಂತ್ರ್ಯದ ನೆಪದಲ್ಲಿ ಚಾರಿತ್ರ್ಯಹನನ ಈಗ ವಾಡಿಕೆಯಾಗಿದೆ. ಇದು ಅನೇಕರ ಜೀವಕ್ಕೆ ಕುತ್ತಾದ ಸಂದರ್ಭಗಳೂ ಇವೆ.
ಈ ನಡುವೆ ಪ್ರಾಮಾಣಿಕ ಪತ್ರಕರ್ತರು ಆಡಳಿತದ ಮುನಿಸಿಗೆ ಎರವಾಗಿ ಸಂಕಟಪಟ್ಟದ್ದನ್ನು, ಪಡುತ್ತಿರುವುದನ್ನು, ನಿತ್ಯ ನೋಡುತ್ತೇವೆ. ನಿಲುವನ್ನು ಧೈರ್ಯವಾಗಿ, ದಿಟ್ಟವಾಗಿ ಪ್ರದರ್ಶಿಸಿ, ಕಷ್ಟಪರಂಪರೆಯನ್ನೇ ಎಳೆದುಕೊಂಡದ್ದನ್ನೂ ಗಮನಿಸಬಹುದು. ರಾಜಕೀಯ ಉದ್ಯಮಿಗಳ ಕೈಯಲ್ಲಿ ಸಿಕ್ಕ ಪತ್ರಿಕೆಗಳಿಂದ, ಚಾನೆಲ್‌ಗಳಿಂದ ಅನೇಕ ಪ್ರಾಮಾಣಿಕರು ಬಿಟ್ಟುಬಂದದ್ದು ಕಳೆದ ಕೆಲವು ವರ್ಷಗಳಲ್ಲಿ ಎಲ್ಲರಿಗೂ ಗೊತ್ತಿದೆ. ಉಸಿರುಗಟ್ಟಿಸುವ ವಾತಾವರಣದಲ್ಲಿ ಬದುಕೆಂಬ ಬಡಿವಾರಕ್ಕೆ ನೇತುಕೊಂಡು ದ್ವಂದ್ವದಲ್ಲಿ ಯಾವುದು ಮುಖ್ಯವೆಂಬುದನ್ನು ಆರಿಸುವುದು ಕಷ್ಟಕರ. ಸರಕಾರದ, ಅಧಿಕಾರಸ್ಥರ ಪ್ರಭಾವ, ಒತ್ತಾಯದ ಮೇರೆಗೂ ಕೆಲವು ಮಾಧ್ಯಮಮಿತ್ರರು ತಮ್ಮ ಕೆಲಸವನ್ನು ಕಳೆದುಕೊಂಡದ್ದುಂಟು. ಹೀಗಾಗಿ ಕೆಲವರ ಕಾಯಕಪರಿಸ್ಥಿತಿ ಅವರ ನಿಲುವಿಗೆ ವಿರುದ್ಧವಾಗುವ ಸಾಧ್ಯತೆಗಳಿವೆ. ಸರಕಾರಿ ಉದ್ಯೋಗದಲ್ಲಿರುವವರು ನಿವೃತ್ತಿಯಾಗುವ ವರೆಗೆ ವಿಷಕಂಠರಂತೆ ಇರುವುದನ್ನೂ ಗಮನಿಸಿ ಹೋಲಿಸಬಹುದು. ಇದು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿರುವಾಗ, ಮಾಧ್ಯಮ ಮಿತ್ರರನ್ನಷ್ಟೇ ಆರಿಸಿ ದೂಷಿಸುವುದೂ ಸರಿಯೇ ಎಂಬ ಪ್ರಶ್ನೆ ಇನ್ನಷ್ಟು ಪ್ರಶ್ನೆಗಳನ್ನು ಹಾಕುತ್ತದೆಯೇ ಹೊರತು ಉತ್ತರಗಳನ್ನಲ್ಲ.
ಯಾವುದೇ ಪತ್ರಿಕೆಗೆ, ಇತರ ಮಾಧ್ಯಮಗಳಿಗೆ, ಸಾರ್ವಕಾಲಿಕ ಪ್ರಸ್ತುತತೆಯಿರುವುದಿಲ್ಲ. ವರ್ತಮಾನವನ್ನು ಪ್ರಸಾರಮಾಡುವವರು ವರ್ತಮಾನದಲ್ಲಷ್ಟೇ ಬದುಕಬೇಕಾಗಿದೆ. ಅವರನ್ನು ನೆನಪಿಡುವುದು ಅವರು ಬಿಟ್ಟುಹೋದ ಸಾಧನೆಗಳಿಗಾಗಿ; ನೆನಪುಗಳಿಗಾಗಿ. 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಂಗ್ಲಿಷ್ ಪತ್ರಿಕೆಯೊಂದು ಸಂಪಾದಕೀಯದ ಜಾಗದಲ್ಲಿ ಖಾಲಿಸ್ಥಳವನ್ನು ಪ್ರಕಟಿಸಿತ್ತು. ಅದೊಂದು ವಿನೂತನ ಪ್ರತಿಭಟನೆ. ಈಚೆಗೆ ಮಣಿಪುರದ ಹಿಂಸೆಯ ನಂತರ ಅಲ್ಲಿಗೆ ಭೇಟಿ ನೀಡದೆ ಮೌನಕ್ಕೆ ಶರಣಾಗಿ ಕೊನೆಗೆ ಅನಿವಾರ್ಯವಾಗಿ ಸಂಸತ್ತಿಗೆ ಬಂದು ಮಾತನಾಡಬೇಕಾದ ಸಂದರ್ಭದಲ್ಲಿ ಪ್ರಧಾನಿ ಮಾಡಿದ ಅಪ್ರಸ್ತುತ ಭಾಷಣವನ್ನು ಒಂದು ಇಂಗ್ಲಿಷ್ ಪತ್ರಿಕೆಯು ಫ್ರೆಂಚ್‌ಪದ ‘ಬ್ಲಾಃ-ಬ್ಲಾಃ-ಬ್ಲಾಃ’ (Blah-Blah-Blah) ಗಳನ್ನು ಸುದ್ದಿಯ ಬದಲು ಹಲವು ಕಾಲಮ್‌ಗಳಲ್ಲಿ ಪ್ರಕಟಿಸಿ ಟೀಕಿಸಿತ್ತು.
ಹುಟ್ಟು-ಸಾವಿನಂತಹ, ವಾರ್ಷಿಕವಾಗಿ ನಡೆಯುವ ಅದೇ ದಿನಾಚರಣೆಗಳ, ಉತ್ಸವಗಳ, ಸೃಜನೇತರ ವರದಿಗಳು ಪುಟ ತುಂಬಿಸಬಹುದೇ ಹೊರತು ವಿಚಾರಗಳನ್ನಲ್ಲ. ಮುಖಸ್ತುತಿಗೆ ಪತ್ರಿಕೆ ವೇದಿಕೆಯಲ್ಲ. ವಿಮರ್ಶೆಗಳು ಅಭಿನಂದನೆಯಂತಿರಬಾರದು. ವ್ಯಕ್ತಿಪೂಜೆ ಸಮಾಜಕ್ಕೆ ಒಳಿತಲ್ಲ. ಮನರಂಜನೆ ಅಶ್ಲೀಲತೆಗೆ, ಅಸಭ್ಯತೆಗೆ ದಾರಿಯಾಗಬಾರದು. ಇಂತಹ ನೂರೆಂಟು ಸೂತ್ರಗಳಿವೆ. ಅದು ಮಾಧ್ಯಮಕ್ಕೆ ಗೊತ್ತಿದೆ. ಮಾಧ್ಯಮಗಳು ಪ್ರಾಮಾಣಿಕವಾಗಿ ಮತ್ತು ನಿರ್ಭಯವಾಗಿ ದುಡಿಯುವುದಾದರೆ ಇಂದು ಎಂದಿಗಿಂತ ಒಳ್ಳೆಯ ವಾತಾವರಣವಿದೆ. ತಮ್ಮನ್ನು ಸದೆಬಡಿಯಲು ಸಮಾಜದ ಇತರ ರಂಗಗಳು ಪ್ರಯತ್ನಿಸಿದಷ್ಟೂ ಅವು ಮರುನೆಗೆದು ಚಿಮ್ಮಬೇಕು. ಸಮಾಜದ ಒಳ್ಳೆಯ ಭವಿಷ್ಯಕ್ಕೆ ಹರಿಕಾರರಾಗಬೇಕು. ಸಂವಿಧಾನದ ನಾಲ್ಕನೆಯ ಸ್ತಂಭವೆಂದು ಹೆಸರಿದ್ದರೆ ಸಾಲದು. ಅದನ್ನು ಅನ್ವರ್ಥಗೊಳಿಸಬೇಕು. ಆಗಷ್ಟೇ ಅದು ಮಾಧ್ಯಮ; ಇಲ್ಲವಾದರೆ ಅಧಮ.