ಮತದಾನ, ಮಾಧ್ಯಮ ಮತ್ತು ಚುನಾವಣಾ ಆಯೋಗ
ದೇಶದ ಮೂರನೇ ಹಂತದ ಮತ್ತು ಕರ್ನಾಟಕದ ಎರಡನೇ ಹಂತದ ಲೋಕಸಭಾ ಚುನಾವಣೆ ಈಗಷ್ಟೇ ಮುಗಿದಿದೆ. ಇನ್ನೂ ನಾಲ್ಕು ಹಂತಗಳಿದ್ದು ಜೂನ್ ನಾಲ್ಕರವರೆಗೆ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಉಸಿರು ಬಿಗಿಹಿಡಿದು ಕಾಯುವುದರ ಹೊರತು ಬೇರೇನೂ ಇಲ್ಲ. ಕರ್ನಾಟಕದಲ್ಲಿ ರೇವಣ್ಣ (ಸೀನಿಯರ್ ಮತ್ತು ಜೂನಿಯರ್) ಪ್ರಕರಣ ಹಾಸನ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ದೊಡ್ಡ ಪ್ರಮಾಣದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದೆ. ಹಾಸನದ ಅಥವಾ ಒಟ್ಟಾರೆ ಕರ್ನಾಟಕದ ಮೊದಲ ಹಂತದ (ದೇಶದಲ್ಲಿ ಎರಡನೇ ಹಂತದ) ಚುನಾವಣೆಯ ಮೇಲೆ ಇದು ಎಷ್ಟು ಪ್ರಭಾವ ಬೀರಿದೆ ಎಂದು ಹೇಳುವುದು ಕಷ್ಟ. ಏಕೆಂದರೆ ಜನರು (ವಿದ್ಯಾವಂತರು/ಅಕ್ಷರಸ್ಥರು-ಅವಿದ್ಯಾವಂತರು/ಅನಕ್ಷರಸ್ಥರು ಎಂಬ ಭೇದವಿಲ್ಲದೆ) ಸುದ್ದಿಗಳ, ವದಂತಿಗಳ ಆಧಾರದಲ್ಲಿ, ತಮ್ಮ ನಿರ್ಣಯವನ್ನು ಬದಲಿಸಿದ ಇತಿಹಾಸವಿಲ್ಲ. ಕ್ಷಣಿಕ ಲಾಭ ಇಲ್ಲವೇ ಲೋಲುಪತೆಗಾಗಿ ಮತ ಚಲಾಯಿಸುವವರೇ ಈ ದೇಶದ ಬಹುಮತ. ಕೆಲವೇ ಕೆಲ ಬುದ್ಧಿ (ಹೀನ) ಜೀವಿಗಳು ಮಾತ್ರ ತಮ್ಮಿಂದಾಗಿ ಲೋಕ ಬೆಳಗುತ್ತಿದೆಯೆಂಬ, ಮತ್ತು ತಾವು ಚುನಾವಣೆಯ ಗತಿಯನ್ನು ಬದಲಾಯಿಸುತ್ತಿದ್ದೇವೆಂಬ ಭ್ರಮೆಯಲ್ಲಿ ಸುದ್ದಿಯೆಬ್ಬಿಸುತ್ತಾರೆ, ಅಷ್ಟೇ.
ಈ ಬಾರಿಯ ಚುನಾವಣೆಯಲ್ಲಿ ವಸತಿ, ಉದ್ಯೋಗ, ಶಿಕ್ಷಣ, ಆರೋಗ್ಯ ಮುಂತಾದ ಮನುಷ್ಯನ ಮೂಲಭೂತ ಅಗತ್ಯಗಳ ಬಗ್ಗೆ, ಸಾಮಾಜಿಕ ಮುನ್ನಡೆಗೆ ಬೇಕಾದ ಮೌಲ್ಯಗಳ ಬಗ್ಗೆ, ಚರ್ಚೆ ನಡೆಯಲೇ ಇಲ್ಲ. ಆಳುವ ಸರಕಾರ ಅದರಲ್ಲೂ ಸರಕಾರದ ನಾವಿಕರಾದ ಪ್ರಧಾನಿ ಇದರಲ್ಲಿ ಮುಂಚೂಣಿಯಲ್ಲಿರಬೇಕಾಗಿತ್ತು. ಆದರೆ ಅವರು ತಾನು ಎಷ್ಟು ಸ್ಥಾನಾಕಾಂಕ್ಷಿಯೆಂಬುದನ್ನು ಹೇಳುತ್ತ ಹೋದರು; ಯಾವಾಗ ಅದು ಅವಾಸ್ತವವೆಂಬ ಅರಿವು ಬಂದಾಗ ಮತಧರ್ಮಗಳ ಹೆಸರಿನಲ್ಲಿ ದ್ವೇಷಭಾಷಣಗಳನ್ನು ಕಟ್ಟುತ್ತಲೇ ಹೋದರು. ಜನರನ್ನು ಪರಸ್ಪರ ಎತ್ತಿಕಟ್ಟುವುದು ಯಾವ ನಾಗರಿಕನಿಗೂ ಶೋಭೆ ತರದು. ಆದರೆ ಪ್ರಧಾನಿ ಚುನಾವಣೆಯ ಮೌಲ್ಯಗಳನ್ನು ತಿಪ್ಪೆಗೆಸೆದು ತಮ್ಮ ಅನುಯಾಯಿಗಳಿಗೆ ಭೀಕರ ಮಾದರಿಯಾದರು. ಈಗ ನಡೆಯುವ, ನಡೆದ ಚುನಾವಣೆಗಳಲ್ಲಿ ನೀವು ಯಾರೊಬ್ಬರ ಭಾಷಣಗಳನ್ನು ಕೇಳಿದರೂ ಎದುರಾಳಿಯನ್ನು ಹಳಿಯುವುದೊಂದೇ ತಮ್ಮ ಕರ್ತವ್ಯವೆಂದು ಭಾವಿಸಿ ಜನರಲ್ಲಿ ವಿಷಬೀಜವನ್ನು ಬಿತ್ತಿ ಅದನ್ನೇ ಬೆಳೆಯೆಂದು ಚಿತ್ರಿಸುತ್ತಾರೆ. ಅದು ಕಳೆಯೆಂದು ಗೊತ್ತಿದ್ದರೂ ಅದನ್ನೇ ತಾವು ಶಿರಸಾವಹಿಸಬೇಕಾದ ಪ್ರಸಾದವೆಂದು ಭಾವಿಸುವ ಮೂರ್ಖರೂ, ಧೂರ್ತರೂ ನಾಯಕ ನೊಂದಿಗಿರುವಾಗ ಮತ್ತು ಹತ್ತು ಬಾರಿ ಹೇಳಿದ ಸುಳ್ಳು ಸತ್ಯವೆಂದು ಸಾರ್ವಜನಿಕರೆದುರು ಮೆರವಣಿಗೆಗೊಂಡಾಗ, ಸತ್ಯ ಅಡಗುತ್ತದೆ.
ಗಣ್ಯರ ಮತದಾನದ ಚಿತ್ರಗಳು ಮಾಧ್ಯಮದಲ್ಲ್ ಸುದ್ದಿ ಮಾಡುತ್ತಿವೆ. ಮಾಧ್ಯಮಗಳು ಒಂದೆಡೆ ಮತದಾನದಲ್ಲಿ ಎಲ್ಲರೂ ಸಮಾನರು ಮತ್ತು ಮತದಾನವೆಂಬುದು ಪವಿತ್ರ ಕರ್ತವ್ಯವೆಂದು ಕರೆಕೊಡುವುದರ ಜೊತೆಗೇ ಗಣ್ಯರು, ಅತಿಗಣ್ಯರು ಮತಹಾಕುವುದರ ಭಾವಚಿತ್ರಗಳನ್ನು ಅದ್ದೂರಿಯಿಂದ ಪ್ರಕಟಿಸುತ್ತಿವೆ. ಇದೊಂದು ರೀತಿಯಲ್ಲಿ ಗಣ್ಯರಿಗೆ ನೀಡುವ ಪ್ರಚಾರ. ಮತನೀಡುವ ಪ್ರಭುಗಳೆಲ್ಲರೂ ಸಮಾನರೆಂದಾದರೆ ಅಭ್ಯರ್ಥಿಗಳನ್ನು, ಅವರ ಕುಟುಂಬದ ಸದಸ್ಯರನ್ನು, ರಾಜಕೀಯ ಪಕ್ಷಗಳ ಪ್ರಮುಖರನ್ನು ಹೀಗೆ ಮೆರವಣಿಗೆ ಮಾಡುವ ಅಗತ್ಯ ಮಾಧ್ಯಮಗಳಿಗಿದೆಯೇ? ಈ ಮೂಲಕ ಅವರು ಎಲ್ಲರೂ ಸಮಾನರು ಮತ್ತು ಕೆಲವರು ಹೆಚ್ಚು ಸಮಾನರು ಎಂಬ ಚಿತ್ರ-ಚಿತ್ರಣವನ್ನು ನೀಡುವುದಿಲ್ಲವೇ? ಎಂದು ಜನಸಾಮಾನ್ಯ ಓದುಗರಿಗೆ, ವೀಕ್ಷಕರಿಗೆ ಅನ್ನಿಸದಿರದು.
ಎಲ್ಲ ಮಾಧ್ಯಮಗಳಿಗೂ ತಮ್ಮ ಟಿಆರ್‌ಪಿ ಮೌಲ್ಯವನ್ನು ವೃದ್ಧಿಸಿಕೊಳ್ಳುವ ಹುಚ್ಚು. ಇದರಿಂದಾಗಿ ಮೌಲ್ಯವರ್ಧನೆಯಾಗದಿದ್ದರೂ ವ್ಯಾಪಾರ-ವ್ಯವಹಾರ ವರ್ಧನೆಯಾಗುವುದಂತೂ ಖಂಡಿತ. ಈಗಾಗಲೇ ರಾಜಕಾರಣ ಮತ್ತು ಮಾಧ್ಯಮಗಳ ನಡುವಣ ಅಪವಿತ್ರ ಮೈತ್ರಿಯ ಕುರಿತು ಸಾಕಷ್ಟು ಟೀಕೆಗಳಿವೆ. ಎಲ್ಲ ಮಾಧ್ಯಮಗಳಿಗೆ ಸಾರಾ ಸಗಟು ಒಂದೇ ಮಾನದಂಡವನ್ನು ಅನ್ವಯಿಸುವುದು ಸಾಧ್ಯವಿಲ್ಲ. ಮಾಧ್ಯಮಗಳು ರಾಜಕಾರಣಿಗಳನ್ನು ಓಲೈಸುವುದು ಪತ್ರಿಕಾಧರ್ಮವಂತೂ ಅಲ್ಲ; ಮತ್ತಿನ್ನೇನು?
ಸದ್ಯ ನಮ್ಮ ದೇಶದಲ್ಲಿ ಬಹುತೇಕ ಮಾಧ್ಯಮಗಳು ಸಗಟು ಖರೀದಿಗೊಳಗಾಗಿವೆ. ರಾಜಕಾರಣಿಗಳೇ ಆಳುವ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಯಾರೋ ಒಬ್ಬ ರವೀಶಕುಮಾರ್, ಕರಣ್ ಥಾಪರ್ ಹೊರತುಪಡಿಸಿದರೆ ಇತರರಿಗೆ ಹೊಟ್ಟೆಪಾಡಿಗಾಗಿ ಧಣಿಯ ಆಣತಿಯಂತೆ ಕರ್ತವ್ಯವನ್ನು ನಿರ್ವಹಿಸುವುದು ಅನಿವಾರ್ಯ. ಆದರೆ ಇದಕ್ಕಾಗಿ ಮಾಧ್ಯಮ ಮಿತ್ರರು ಜಿದ್ದಿಗಿಳಿದವರಂತೆ ದೊರೆಯನ್ನು ಮೆಚ್ಚಿಸಲು ಪ್ರಯತ್ನಿಸಬೇಕಿಲ್ಲ. ವಿರೋಧವು ಗೊತ್ತಾಗದಂತೆ ನಯವಾಗಿ ತನ್ನ ಕೊರಳನ್ನು ಸುತ್ತಿದ ಉರುಳಿನಿಂದ ಪಾರಾಗಬಹುದು. ಆದರೆ ವಸ್ತು ಸ್ಥಿತಿ ಹಾಗಿಲ್ಲ. ಮಾಧ್ಯಮಗಳಲ್ಲಿ ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುವವರು ತಾವು ಯಾವ ಪಕ್ಷದ ಪರವಾಗಿದ್ದೇವೆ ಮತ್ತು ಯಾವುದನ್ನು ಬೆಂಬಲಿಸುತ್ತಿದ್ದೇವೆ ಎಂಬುದನ್ನು ಬತ್ತಲೆಯಾಗಿ ಪ್ರದರ್ಶಿಸುತ್ತಾರೆ. ನ್ಯಾಯಾಲಯದ ವಿಚಾರಣೆಗಳಲ್ಲಿ ದಾರಿತೋರುವ ಪ್ರಶ್ನೆಗಳು (Leading questions) ಎಂದಿರುತ್ತವೆ. ಅವುಗಳಲ್ಲಿ ಉತ್ತರಿಸುವವನು ಹೀಗೆಯೇ ಉತ್ತರಿಸಬೇಕೆಂಬ ಸೂಚನೆ ಅಥವಾ ಪ್ರಭಾವವಿರುತ್ತದೆ. ಇವನ್ನು ಮುಖ್ಯ ವಿಚಾರಣೆಯಲ್ಲಿ ಕೇಳುವಂತಿಲ್ಲ. ಆದರೆ ನಮ್ಮ ಮಾಧ್ಯಮ ಮಿತ್ರರು ಅದನ್ನೇ ಬಂಡವಾಳವಾಗಿಸಿಕೊಂಡು ಜನಸಾಮಾನ್ಯ ಮತದಾರರನ್ನು ವಂಚಿಸುತ್ತಾರೆ. ಸಮಾನಶೀಲನೊಬ್ಬನಲ್ಲಿ ‘ಈ ಬಾರಿ ... ಪಕ್ಷದ ಅಭ್ಯರ್ಥಿ ಎಷ್ಟು ಮತಗಳಿಂದ ಗೆಲ್ಲುತ್ತಾರೆ?’ ಎಂಬ ಪ್ರಶ್ನೆಗೆ ಆತ ‘ಕನಿಷ್ಠ 2 ಲಕ್ಷ’ ಎಂದು ಹೇಳಿದನೆನ್ನಿ. ಅದನ್ನೇ ಪ್ರದರ್ಶಿಸಿ ನೋಡಿ, ಮತದಾರರು ಹೀಗೆ/ಹೇಗೆ ಹೇಳುತ್ತಿದ್ದಾರೆ ಎಂದು ಇತರ ಮತದಾರರನ್ನು ಪ್ರಭಾವಿಸುವ ವಿದ್ಯಮಾನ ಹೊಸದೇನಲ್ಲ. ಇಂತಹ ಪ್ರಶ್ನೆಗಳು ನಯವಂಚನೆಯ ಹೊಸರೂಪ; ಭ್ರಷ್ಟತನದ ಸಾಕಾರ.
ಕೆಲವೇ ಮಂದಿ ಮತ್ತೆಮತ್ತೆ ಮಾಧ್ಯಮಗಳ ಚರ್ಚೆಗಳಲ್ಲಿ ಭಾಗವಹಿಸುವುದನ್ನು ಕಾಣಬಹುದು. ಪಕ್ಷದ ವಕ್ತಾರರಾದರೆ ಸರಿ; ಅದು ಆಯಾಯ ಪಕ್ಷಗಳ ನಿರ್ಧಾರ. ಸಮರ್ಥರನ್ನೇ ಆಯ್ಕೆಮಾಡುವಾಗ ಪದೇಪದೇ ಅದೇ ವ್ಯಕ್ತಿ ಪ್ರದರ್ಶನಗೊಳ್ಳುವುದು ಅನಿವಾರ್ಯ. ಆದರೆ ಚಿಂತಕರೆಂದು, ವಿಶ್ಲೇಷಕರೆಂದು ಆಯ್ಕೆ ಮಾಡುವಾಗಲೂ ತಮಗೆ ಇಷ್ಟವಾದವರನ್ನು ಆಯ್ಕೆಮಾಡುತ್ತಾರೆಯೇ ವಿನಾ ಸ್ವತಂತ್ರ ಮತ್ತು ಪ್ರಭಾವಕ್ಕೊಳಗಾಗದ ನಿಷ್ಠುರಿಗಳನ್ನು, ಖಂಡಿತವಾದಿಗಳನ್ನು ಆಯ್ಕೆ ಮಾಡುವುದಿಲ್ಲ. ಹೀಗೆ ಕರೆಸಿಕೊಂಡು ಬಂದವರು ಯಾರಿಗೂ ಹಾನಿಯಾಗದಂತೆ, ತಮಗೂ ನಷ್ಟವಾಗದಂತೆ (ಹಾನಿ-ನಷ್ಟ ಇವೆಲ್ಲ ಆಗುವುದು ಸಮಾಜಕ್ಕೆ, ದೇಶಕ್ಕೆ!) ಚಿಂತಿಸಿ ವಿಶ್ಲೇಷಿಸುತ್ತಾರೆ. ಇದನ್ನು ಕುಳಿತು ಕೇಳಿದ/ನೋಡಿದ ಮತದಾರರು ತಮ್ಮ ನಿಲುವನ್ನು ಬದಲಾಯಿಸುತ್ತಾರೆಂದಲ್ಲ, ಆದರೆ ವಿವರಗಳನ್ನು ತಿಳಿಯದವರು ದಾರಿತಪ್ಪುವ ಸಾಧ್ಯತೆಗಳಿವೆ. ಪಕ್ಷಗಳ ವಕ್ತಾರರು ತಮ್ಮತಮ್ಮ ಪಕ್ಷಗಳ ನಿಲುವನ್ನು ಹೇಳಲೇ ಬೇಕಾದ್ದರಿಂದ ಹೇಳುತ್ತಾರೆ; ಆದರೆ ಇಲ್ಲೂ ಸಮರ್ಥವಾದ ವಾದವನ್ನು ಮಂಡಿಸದವರು ಓದುಗರೆದುರು/ವೀಕ್ಷಕರೆದುರು ಸೋಲುತ್ತಾರೆ.
ಮತದಾನದ ಮೂಲಕ ಫಲಿತಾಂಶ, ಆಯ್ಕೆಯ ಸಾಧ್ಯತೆಗಳು ನಿಗೂಢವಾಗಿರುವುದರಿಂದ ಮತದಾರರನ್ನು ಓಲೈಸುವ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಇದರಲ್ಲಿ ಹಣ, ಹೆಂಡ, ಉಚಿತ ಉಡುಗೊರೆಗಳು, ಜಾತಿ-ಮತ-ಧರ್ಮ ಇವೆಲ್ಲ ಪೂರಕ ಪ್ರಭಾವಗಳು. ಇವನ್ನು ನಿಷೇಧಿಸುವ ಕಾನೂನು ನಮ್ಮ ದೇಶದಲ್ಲಿ ಇಲ್ಲ. ಅಂತಹ ಕಾನೂನುಗಳನ್ನು ಮಾಡುವ ಇಚ್ಛಾಶಕ್ತಿಯ ಋಷಿಸಂತತಿಯೂ ನಮ್ಮಲ್ಲಿಲ್ಲ. ಎಲ್ಲ ಪಕ್ಷಗಳೂ ಈ ಒಂದು ವಿಚಾರದಲ್ಲಿ ಸರಿಸಮಾನರೇ. ಆದರೆ ಯಾವುದು ಹೆಚ್ಚು ಮಾರಕವೋ ಅಂತಹ ಕೆಲವು ವಿಧಾನಗಳನ್ನಾದರೂ ನಿಷೇಧಿಸಬೇಕಲ್ಲವೇ? ಅದೂ ಇಲ್ಲ.
ತಮ್ಮ ಬಗ್ಗೆ ಹೇಳುವುದಕ್ಕೇನೂ ಇರುವುದಿಲ್ಲವೆಂಬ ಅಂಶವೊಂದೇ ಶಾಶ್ವತ; ಉಳಿದದ್ದು ಗೌಣ. ಆದರೆ ಚುನಾವಣೆಯ ಸಂದರ್ಭದಲ್ಲಷ್ಟೇ ಸುದ್ದಿಯಾಗುವ ಚುನಾವಣಾ ಆಯೋಗವೆಂಬ ಸಾಂವಿಧಾನಿಕ ಸಂಸ್ಥೆ ಮಾಡುತ್ತಿರುವುದಾದರೂ ಏನು? ಈಗ ಅದನ್ನು ಮರೆತರೆ ಮತ್ತೊಂದು ಚುನಾವಣೆಯಲ್ಲಷ್ಟೇ ಅದು ನೆನಪಾಗುವ ವಿಚಾರ. ಭಾರತದ ಸಂವಿಧಾನದ ಮೂಲೋದ್ದೇಶಗಳಲ್ಲಿ ಸಾರ್ವತ್ರಿಕ ವಯಸ್ಕ ಮತದಾನವೂ ಒಂದು. ಪ್ರಜಾತಂತ್ರವನ್ನು ಉಳಿಸಿ ಬೆಳೆಸುವ ನೀರು, ಗೊಬ್ಬರ ಎಲ್ಲ ಅದೇ. ಅದನ್ನು ಸರಿಯಾಗಿ, ಕಾನೂನಾತ್ಮಕವಾಗಿ, ನ್ಯಾಯಯುತವಾಗಿ ನಡೆಸುವ ಹೊಣೆ ಅದರದ್ದು. ಬೇರೆ ಸಂದರ್ಭಗಳಲ್ಲಿ ಅದು ಅಪ್ರಸ್ತುತವೆಂದು ಕಂಡರೂ ಚುನಾವಣೆಯ ಮುಗಿಲು ಮೂಡಿದ ಕೂಡಲೇ ಅದಕ್ಕೆ ಎಲ್ಲಿಲ್ಲದ ಪ್ರಸ್ತುತತೆ, ಗೌರವ, ಅಧಿಕಾರ ಒದಗುತ್ತದೆ. ಕೊಡೆಯ ಹಾಗೆ. ಮಳೆ ಬಂದಾಗ ಅಥವಾ ಅತೀವ ಬಿಸಿಲಲ್ಲಷ್ಟೇ ಅದಕ್ಕೆ ಬೆಲೆ. ಆದರೂ ಅದು ಮನೆಯ ಮೂಲೆಯಲ್ಲಿರಬೇಕು. ಚಪ್ಪಲಿಗಿಂತಲೂ ಕಡೆ; ಆದರೆ ಇರುವುದು ಕೈಯಲ್ಲಿ ಮತ್ತು ತಲೆಯ ಮೇಲೆ ಅಥವಾ ಭೂತನರ್ತಕನಂತೆ. ಬೇರೆ ಸಂದರ್ಭಗಳಲ್ಲಿ ಕೂಲಿನಾಲಿ ಮಾಡಿ ತೀರ ಬಡತನದ ಬೇಗೆಯಲ್ಲಿರುವ ವ್ಯಕ್ತಿ ಭೂತಕಟ್ಟಿದ ಕೂಡಲೇ ದೈವವಾಗುತ್ತಾನೆ. ಆತ ಹೇಳಿದ್ದೇ ನಂಬಿದವರಿಗೆ ಇಂಬು. ಆದರೆ ಆತನ ಭಾವಾವೇಶದ ನಾಟಕದಲ್ಲಿ ನರ್ತನ, ಅಭಿನಯ, ಮಾತು ಅತಿಯಾದಾಗ ಆತನಿಗೂ ನಿಯಂತ್ರಕನೊಬ್ಬನಿರುತ್ತಾನೆ; ಇಲ್ಲದಿದ್ದರೆ ಇರಬೇಕು.
ಚುನಾವಣಾ ಆಯೋಗವು ಸಂವಿಧಾನದ 15ನೇ ಭಾಗದ ಅಂದರೆ ಮುಖ್ಯವಾಗಿ 324ನೇ ವಿಧಿಯಿಂದ 329ನೇ ವಿಧಿಯ ವರೆಗೆ ಅಸ್ತಿತ್ವವನ್ನು ಪಡೆದ, ಚಲಾವಣೆಗೊಂಡ ಸಂಸ್ಥೆೆ. ಇದು ಒಬ್ಬ ಮುಖ್ಯ ಚುನಾವಣಾ ಆಯುಕ್ತ ಮತ್ತು ರಾಷ್ಟ್ರಪತಿಗಳು ನಿಶ್ಚಯಿಸಿದ ಒಂದಕ್ಕಿಂತ ಹೆಚ್ಚು ಆಯುಕ್ತರನ್ನು ಹೊಂದಿದೆ. ಹೆಚ್ಚು ಆಯುಕ್ತರಿದ್ದಾಗ ಮುಖ್ಯ ಚುನಾವಣಾ ಆಯುಕ್ತರು ಅಧ್ಯಕ್ಷರಾಗುತ್ತಾರೆ. ಉಳಿದಂತೆ ಜನಪ್ರಾತಿನಿಧ್ಯ ಕಾಯ್ದೆಯನ್ವಯ ಪ್ರಕ್ರಿಯೆಗಳು ನಡೆಯುತ್ತವೆ. ಇದೊಂದು ಪವಿತ್ರವಾದ ಮತ್ತು ಅತ್ಯಂತ ಹೊಣೆಯುಕ್ತ ಕರ್ತವ್ಯ; ಅಧಿಕಾರವೂ ಸೇರಿದಂತೆ. ಜನ ನಂಬುವಂತೆ ಸತ್ಯಮಾರ್ಗದಲ್ಲಿ ದಕ್ಷತೆಯನ್ನು ಹೊಂದಿರಬೇಕಾದ್ದು, ನಿಷ್ಕಳಂಕವಾಗಿ ಚುನಾವಣೆಗಳು ನಡೆಯುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ. ಸರಕಾರ ನೇಮಿಸಿದ ತಕ್ಷಣ ಆಯುಕ್ತರಾಗಲೀ, ಆಯೋಗವಾಗಲೀ ಸರಕಾರದ ಏಜೆಂಟರಾಗುವುದಿಲ್ಲ. ಟಿ.ಎನ್. ಶೇಷನ್‌ರಂತಹ ಮಹಾನುಭಾವರು ಹೊತ್ತ ಸಿಂಹಾಸನ ಇದು.
ಆದರೆ ಇತ್ತೀಚೆಗೆ ಈ ಸಂಸ್ಥೆ ತನಗೂ ದೇಶಕ್ಕೂ ಅಪಚಾರಮಾಡುವುದನ್ನು ಕಾಣುತ್ತೇವೆ. ಸರಕಾರಕ್ಕೆ ಬೇಕಾದ ಅನುಕೂಲಗಳನ್ನು ಮಾಡಿಕೊಡುವುದೇ ತಮ್ಮ ಕರ್ತವ್ಯವೆಂಬಂತೆ ಮತ್ತು ತೀರ ಕಳಪೆ ಹಾಗೂ ಭ್ರಷ್ಟ ಸರಕಾರಿ ಅಧಿಕಾರಿಗಳಂತೆ ಆಯೋಗ ನಡೆದುಕೊಳ್ಳುವುದನ್ನು ಕಾಣುತ್ತೇವೆ. ಈಚೆಗೆ ಚಂಡಿಗಡದ ಮೇಯರ್ ಚುನಾವಣೆಯಲ್ಲಿ ಚುನಾವಣೆಯನ್ನು ಎಷ್ಟು ಭ್ರಷ್ಟಗೊಳಿಸಬಹುದು ಮತ್ತು ಅದನ್ನು ಸರಿಪಡಿಸಲು ಸರ್ವೋಚ್ಚ ನ್ಯಾಯಾಲಯವು ತನ್ನ ಅಧಿಕಾರವನ್ನು ಬಳಸಬೇಕಾಯಿತು ಎಂಬುದನ್ನು ಹತಾಶೆ/ನಿರಾಶೆಯಿಂದ ಕಂಡಿದ್ದೇವೆ. ಈ ಬಾರಿಯ ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಸರಕಾರಕ್ಕೆ ಅದರಲ್ಲೂ ಪ್ರಧಾನಿಯವರ ಪ್ರಚಾರಾನುಕೂಲಕ್ಕೆ ತಕ್ಕಂತೆ ನಿಗದಿಪಡಿಸಿದಂತಿತ್ತು. ಇಷ್ಟಾದರೂ ಜನತಂತ್ರವನ್ನು ರಕ್ಷಿಸಲು ಚುನಾವಣೆಯ ಹೊರತು ಅನ್ಯ ಮಾರ್ಗವಿಲ್ಲ ಎಂಬ ಕಾರಣಕ್ಕೆ ಪ್ರತಿಪಕ್ಷಗಳು ಚುನಾವಣೆಗೆ ಒಪ್ಪಿ ಭಾಗವಹಿಸದಂತಿತ್ತು. ಆದರೆ ಮಾದರಿ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸುವಲ್ಲಿ ಚುನಾವಣಾ ಆಯೋಗ ಪೂರ್ಣವಾಗಿ ವಿಫಲವಾಗಿದೆ. ಆಳುವವರಿಗೊಂದು, ಪ್ರತಿಪಕ್ಷಗಳಿಗೊಂದು ನ್ಯಾಯದ ತಕ್ಕಡಿಯನ್ನು ಹಿಡಿದಿದೆ. ಒಂದು ಚಿಕ್ಕ ಉದಾಹರಣೆಯೊಂದಿಗೆ ಚುನಾವಣಾ ಆಯೋಗಕ್ಕೆ ಹಿಡಿದ ಈ ಪಕ್ಷಪಾತದ ತುಕ್ಕನ್ನು ಹೇಳಬಹುದು. ಬಿಜೆಪಿಯು ಕರ್ನಾಟಕದ ಕಾಂಗ್ರೆಸ್ ಸರಕಾರ/ಪಕ್ಷದ ವಿರುದ್ಧ ಜಾಹೀರಾತಿನಲ್ಲಿ ಸ್ಪಷ್ಟವಾಗಿ ಮತೀಯ ಮತ್ತು ಮತಾಂಧ ಧೋರಣೆಗಳನ್ನು ಎತ್ತಿಹಿಡಿದಿದ್ದವು. ಈ ಕುರಿತ ದೂರಿಗೆ ಚುನಾವಣಾ ಆಯೋಗ ಸಾಕಷ್ಟು ವಿಳಂಬಿಸಿ ಕರ್ನಾಟಕದ ಚುನಾವಣೆಗಳು ಮುಗಿಯುವ ಹಂತದಲ್ಲಷ್ಟೇ ಅವನ್ನು ಹಿಂದೆಗೆದುಕೊಳ್ಳಬೇಕೆಂಬ ಆದೇಶವನ್ನು ಬಿಜೆಪಿಗೆ ಮಾಡಿತು. ಇಷ್ಟೇ ಅಲ್ಲ, ಮೋದಿಯ ವಿರುದ್ಧದ ದೂರುಗಳನ್ನು ಚಾಪೆಯಡಿಗೆ ಹಾಕಿ ಪ್ರತಿಪಕ್ಷಗಳ ವಿರುದ್ಧ ವಿಚಾರಣೆಯಿಲ್ಲದೆ ಕಠಿನ ಆದೇಶಗಳನ್ನು ಜಾರಿಗೊಳಿಸಿತು. ತೆಲಂಗಾಣದ ಬಿಆರ್‌ಎಸ್ ಪಕ್ಷದ ಧುರೀಣ ಚಂದ್ರಶೇಖರರಾವ್ ಅವರನ್ನು ಯಾವುದೇ ವಿಚಾರಣೆಯಿಲ್ಲದೆ ಎರಡು ದಿನಗಳ ಕಾಲ ಪ್ರಚಾರದಿಂದ ನಿಷೇಧಿಸಿತು. ಇಂತಹ ಪ್ರಕರಣಗಳು ಬೇಕಷ್ಟಿವೆ.
ಇವೆಲ್ಲ ಚುನಾವಣೆಯನ್ನು ಒಂದು ಪ್ರಹಸನವಾಗಿಸುತ್ತಿವೆ. ಆದರೂ ನಗಣ್ಯ ಜನಮಾನಸ ಇದನ್ನು ಸಮುದ್ರಮಥನವೆಂದು ಅರ್ಥಮಾಡಿಕೊಂಡು ಒಳ್ಳೆಯ ಸರಕಾರವನ್ನು ಸ್ಥಾಪಿಸುವತ್ತ ಒಯ್ದರೆ ದೇಶಕ್ಕೂ ಸುಖ; ದೇಶದ ಜನತೆಗೂ ಸುಖ. ಎಲ್ಲಕ್ಕಿಂತ ಹೆಚ್ಚಾಗಿ ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಪೂರಕ.