Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅನುಗಾಲ
  5. ಕಾನೂನಿನಲ್ಲಿ ಅನುವಾದದ ಸವಾಲುಗಳು

ಕಾನೂನಿನಲ್ಲಿ ಅನುವಾದದ ಸವಾಲುಗಳು

ಬಾಲಸುಬ್ರಹ್ಮಣ್ಯ ಕಂಜರ್ಪಣೆಬಾಲಸುಬ್ರಹ್ಮಣ್ಯ ಕಂಜರ್ಪಣೆ9 Jan 2025 10:01 AM IST
share
ಕಾನೂನಿನಲ್ಲಿ ಅನುವಾದದ ಸವಾಲುಗಳು
ನಮ್ಮ ಪದಗಳ ಬೇರಿರುವುದು ಪಶ್ಚಿಮದಲ್ಲಿ. ನಮ್ಮ ಕಾಯ್ದೆಗಳಲ್ಲಿ ಅಲ್ಲಿನ ರುಚಿಯೇ ಜಾಸ್ತಿ. ಕಾನೂನಿನ ಸೂತ್ರ, ನೀತಿ, ವಿಧಿ, ನಿಯಮ ಇವೆಲ್ಲಕ್ಕೂ ‘maxim’ ಎಂಬ ಒಂದೇ ಪದ ಮೂಲ. ನಾವು ‘Code’ ಎಂಬ ಪದಕ್ಕೆ ಸಂವಾದಿಯಾಗಿ ‘ಸಂಹಿತೆ’ ಎಂದು ಬಳಸುತ್ತೇವೆ. ಆದರೆ ‘Code’ ಎಂಬ ಪದಕ್ಕೆ ‘ಸಂಕೇತ’ ಎಂಬ ಅರ್ಥವೂ ಇದೆ. ನೀವೆಲ್ಲ ‘Code name God’ ಎಂಬ ಕೃತಿಯನ್ನು ಓದಿರಬಹುದು. ಇದನ್ನು ಅನುವಾದಿಸುವಾಗ ಕಾನೂನನ್ನಾಧರಿಸಿ ‘ಸಂಹಿತೆಯ ಹೆಸರು ದೇವರು’ ಎಂದು ಬರೆಯಲಾದೀತೇ?

ಕಾನೂನಿನಲ್ಲಿ ಅನುವಾದದ ಪ್ರಶ್ನೆ ಉದ್ಭವವಾದಾಗ ಕೆಲವು ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ. ಒಂದು: ಕಾನೂನು ಅರ್ಥವಾಗುವಂತಿರಬೇಕು. ಕಡಿಮೆ ಪದಗಳಲ್ಲಿ ಹೆಚ್ಚನ್ನು ಹೇಳಬೇಕು. ಅದಕ್ಕೆ ಹೊರಗಿನಿಂದ ಅರ್ಥ ಲಭ್ಯವಾಗುವಂತಿರಬಾರದು. ಅದು ಸ್ವಯಂಪೂರ್ಣವಾಗಿರಬೇಕು. ಯಾವಭಾಷೆಗೆ ಅನುವಾದಗೊಂಡರೂ ಕಾನೂನು ಅದೇ ಅರ್ಥವನ್ನು ಸ್ಫುರಿಸುವಂತಿರಬೇಕು. ಎರಡು: ಕಾನೂನಿನ ಅನುವಾದವು ಗಹನವಾದ ಮತ್ತು ಭಾಷೆಯ ಸೊಗಸನ್ನಷ್ಟೇ ಮಿತಿಗೊಳಿಸಿ ಗಮನಿಸಲಾಗದ ವಿಚಾರ. ಆದ್ದರಿಂದ ಅನುವಾದದ ಅನಿವಾರ್ಯವು ಮೂಲದ ಪದಗಳನ್ನೂ ಅನುವಾದದಲ್ಲಿ ಭಾವಸಂಗ್ರಹವಾದ ಪದಗಳನ್ನೂ ಬಯಸುತ್ತದೆ. ಮೂರು: ಕಾನೂನು ಒಂದು ಹಾದಿಯೇ ಹೊರತು ಕೊನೆಯಲ್ಲ. ಅದನ್ನು ಜಿಗುಟಾಗಿಸಿದಷ್ಟೂ ಅದು ಸಮಾಜದಿಂದ ದೂರ ಸರಿಯುತ್ತದೆ. ಅದನ್ನು ನಿಕಟಗೊಳಿಸಬೇಕಾದರೆ ಒಂದಿಷ್ಟು ಹೊಂದಾಣಿಕೆ ಅಗತ್ಯ. ಪ್ರಾಯಃ ಸಾಹಿತ್ಯ ಮತ್ತು ಇತರ ಸಂಕೀರ್ಣ ವಲಯಗಳ ವ್ಯತ್ಯಾಸ ಇದೇ ಇರಬಹುದೇನೋ?

ನಾವೆಷ್ಟೇ ದೊಡ್ಡವರಾದರೂ ಕಾನೂನು ನಮಗಿಂತ ಸ್ವಲ್ಪ ಹೆಚ್ಚು ಎತ್ತರದಲ್ಲಿರುತ್ತದೆ. ಇದು ತಿಳಿದುಕೊಂಡರೆ ಇನ್ನೆಲ್ಲ ಸಲೀಸು. ಕೊನೆಗೂ ಕಾನೂನು ಪಾಲನೆಯೇ ಮುಖ್ಯ. ಕಾನೂನು ಇರುವುದು ಯಾತಕ್ಕೆ? ನ್ಯಾಯಪಾಲನೆಗೆ. ನ್ಯಾಯವಿರುವುದೇತಕ್ಕೆ? ಸಾಮಾಜಿಕ ಶಿಸ್ತಿಗೆ. ಯಾವುದು ಸಾಮಾಜಿಕ ಶಿಸ್ತು? ಸಮಾಜದಲ್ಲಿ ನೆಲೆಗೊಳ್ಳಬೇಕಾದ ಮನುಷ್ಯ-ಮನುಷ್ಯ, ಮನುಷ್ಯ-ಸಮಾಜ ಮುಖಾಮುಖಿಯಾದಾಗ ನಿಷ್ಕರ್ಷೆಯಾಗುವ ವ್ಯವಸ್ಥೆ. ಈ ವ್ಯವಸ್ಥೆ ಯಾಕೆ? ಕಾಡಿನ ಸಂಸ್ಕೃತಿಗಿಂತ ನಾಡಿನ ಸಂಸ್ಕೃತಿ ಭಿನ್ನವಾಗಿರಬೇಕೆಂಬ ನಂಬಿಕೆಗೆ. ಇದೊಂದು ಥರ ಭಗವದ್ಗೀತೆಯಲ್ಲಿ ಬರುವ ‘ಸತ್ಸಂಗತ್ವೇ ನಿಸ್ಸಂಗತ್ವಂ, ನಿಸ್ಸಂಗತ್ವೇ ನಿರ್ಮೋಹತ್ವಂ, ನಿರ್ಮೋಹತ್ವೇ ನಿಶ್ಚಲತತ್ವಂ, ನಿಶ್ಚಲತತ್ವೇ ಜೀವನ್ಮುಕ್ತಿ!’ ಎಂಬ ಹಾಗೆ. ಒಂದು ದಿನ ನಿಲ್ಲುವ ಬದುಕು ವಿಕಾಸವಾಗುವ ಬಗೆ ಇದು. ಬದುಕಿದಷ್ಟು ದಿನ ನೆಲೆ. ನೆಲೆ ಕಳೆದುಕೊಂಡಾಗ ನೆಲ. ಆಧುನಿಕ ಜನಜೀವನವನ್ನು ಗಮನಿಸಿದರೆ ಇದೆಷ್ಟರ ಮಟ್ಟಿಗೆ ಆದರ್ಶ ಮತ್ತು ವಾಸ್ತವ ಎಂಬ ಆತಂಕ ಉದಿಸದೆ ಇರದು.

ಇದನ್ನು ಪೀಠಿಕಾ ವಾಕ್ಯವಾಗಿ ಹೇಳಬಹುದು; ಏಕೆಂದರೆ ನಮ್ಮ ಬದುಕೇ ಒಂದು ಅನುವಾದ. ಅದು ಅನುಕರಣೆ ಮತ್ತು ಅನುಸರಣೆಯಿಂದಲೇ ಆರಂಭವಾಗುತ್ತದೆ; ಮತ್ತು ಕೊನೆಗೊಳ್ಳುತ್ತದೆ. ಮೂಲ ಯಾವುದು? ಯಾರು ನೋಡಿದ್ದಾರೆ? ಗೊತ್ತಿಲ್ಲ. ಭೂತವೂ ಭವಿಷ್ಯವೂ ಊಹೆ. ವರ್ತಮಾನ ಮಾತ್ರ ವಾಸ್ತವ. ಅದನ್ನು ಆದರ್ಶವಾಗಿಸುವ ಬಗೆ ಪ್ರಾಮಾಣಿಕವಾದ ವಸ್ತುನಿಷ್ಠ ಅನುಕರಣೆಯಿಂದ, ಅನುಸರಣೆಯಿಂದ. ಮನುಷ್ಯನ ಬದುಕೇ ಹೀಗಿರುವಾಗ ಮನುಷ್ಯ ನಿರ್ಮಿಸಿದ ಭಾಷೆ, ಸಾಹಿತ್ಯ, ಕಲೆ, ಕ್ರೀಡೆ, ಸಂಸ್ಕೃತಿ ಮತ್ತು ಸಂಸ್ಕೃತಿಯ ಭಾಗವಾಗಿರುವ ನ್ಯಾಯ ಮತ್ತು ಅದರ ಕೂಸು ಕಾನೂನು ಬೇರೆಯಾಗಿರಲು ಹೇಗೆ ಸಾಧ್ಯ?

ಕಾನೂನಿಗೆ ಸ್ವಂತ ಆಕಾರ, ಆಕೃತಿ ಇಲ್ಲ. ಅದು ಭಾಷೆಯ ಅಂಗ. ಭಾಷೆಯಿಲ್ಲದಿದ್ದರೆ ಕಾನೂನು ಇಲ್ಲ. ನಾವಿಂದು ನಮ್ಮ ಆಧಾರವೆಂದು ಹೆಸರಿಸುವ ಸಂವಿಧಾನವು ಇವೆಲ್ಲದರ ತಾಯಿ. ಅದರ ಮಡಿಲಿನಿಂದ ನಾವು ಮೂರ್ತ ಕಾನೂನುಗಳನ್ನು ಸೃಷ್ಟಿಸುತ್ತೇವೆ. ಲಿಖಿತವಾದದ್ದು ತನ್ನ ಸೀಮೆಯನ್ನು ಮನುಷ್ಯರ ಮೂಲಕ ಗುರುತಿಸಿಕೊಳ್ಳುತ್ತದೆ. ಬ್ರಿಟನ್‌ನಲ್ಲಿ ಅಲಿಖಿತ ಸಂವಿಧಾನ. ಲಿಖಿತವಲ್ಲದ್ದು ಅಸೀಮಾ ಮತ್ತು ದೇಶ-ಕಾಲದ ಹೊಂದಾಣಿಕೆಗಾಗಿ ಬದಲಾಗುತ್ತದೆ. ಆದರೆ ಒಟ್ಟಾರೆ ಗಾತ್ರ-ಪಾತ್ರ ಭೌತಶಾಸ್ತ್ರದಲ್ಲಿ ಹೇಳುವ ‘ವಸ್ತು’ವಿನಂತೆ ಅಷ್ಟೇ ಇರುತ್ತದೆ. ಅದರಿಂದಾಚೆಗಿನದ್ದು ಅಮೂರ್ತ. ಇದಕ್ಕೆ ನಾವು ‘ಅಧ್ಯಾತ್ಮ’ ಎಂದು ಹೇಳುತ್ತೇವೆ. ಅರ್ಥವಾಗದ್ದು, ನಿಲುಕಿಗೆ ಸಿಕ್ಕದ್ದು, ಅವರ್ಣನೀಯ, ಅನಿರ್ವಚನೀಯ. ಸಂಕೇತದ ಮೂಲಕವಷ್ಟೇ ವಿವರಿಸಬಹುದಾದದ್ದು. ಅದಕ್ಕೊಂದು ಉಪಾಧಿ ಬೇಕು. ಕಟ್ಟಿಗೆಯಿಲ್ಲದೆ ಬೆಂಕಿ ಉರಿಯದು. ಅಂತಹ ಸಾಧನ ಬೇಕು. ಕಾಣದೆಯೂ ಪ್ರವಹಿಸುವ ವಿದ್ಯುತ್ತಿಗೂ ಒಂದು ತಂತಿ ಬೇಕು. ಬೆಳಕು, ಶಾಖ ಬರಲು ಒಂದು ಸಾಧನ ಬೇಕು. ಹೀಗೆ ಕಾನೂನಿಗೂ ಒಂದು ಭಾಷೆ. ಭಾಷೆ ಮಾಧ್ಯಮ ಮಾತ್ರ. ಭಾರತದ ಮುಖ್ಯ ನ್ಯಾಯಾಧೀಶರಾಗಿದ್ದ ಎನ್.ವಿ. ರಮಣ ಅವರು ‘‘ಕಾನೂನನ್ನು ರಚಿಸುವ ಮಂದಿಗೆ ಕಾನೂನಿನ ಮಹತ್ವ ಗೊತ್ತಿಲ್ಲದೆ, ಕಾನೂನನ್ನು ಗೌರವಿಸದವರಾದರೆ ಇಂತಹ ಗೊಂದಲದ ಕಾನೂನು ನಿರ್ಮಾಣವಾಗುತ್ತದೆ. ಅದಕ್ಕೊಂದು ಅರ್ಥ ಕಟ್ಟುವ ಶ್ರಮ ನಮ್ಮದಾಗುತ್ತದೆ’’ ಎಂದಿದ್ದರು.

ಕಾನೂನು ಅನಿವಾರ್ಯ. ಕಾನೂನಿಲ್ಲದೆ ನ್ಯಾಯ ದಕ್ಕದು, ಉಳಿಯದು. ಆದರೆ ಎಲ್ಲರ ಭಾಷೆ ಒಂದೇ ಅಲ್ಲವಲ್ಲ! ಒಂದು ದೇಶಕ್ಕೆ ಒಂದು ಭಾಷೆ ಎಂಬುದೂ ಸ್ವೀಕಾರಾರ್ಹವಲ್ಲ. ಎಲ್ಲ ಮಕ್ಕಳು ಒಂದೇ ರೀತಿ ನಗಲು, ಅಳಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಎಲ್ಲರೂ ಒಂದೇ ಭಾಷೆಯನ್ನಾಡಲು, ಪರಸ್ಪರ ಸಂವಹಿಸಲು ಸಾಧ್ಯವಿಲ್ಲ. ಆದರೆ ಕಾನೂನನ್ನು ಒಂದು ಹಿರಿತನದ ಭಾಷೆಯಲ್ಲಿ ರಚಿಸಬೇಕು. ನೂರೆಂಟು ಭಾಷೆಗಳಲ್ಲಿ ರಚಿಸಲಾಗದು. ಆದರೆ ಆಯಾಯ ಭಾಷೆಗಳಲ್ಲಿ ಜನರಿಗೆ, ಜನಮನಗಳಿಗೆ ತಲುಪಿಸಬೇಕಲ್ಲ! ಇದು ಅವರವರ ಭಾಷೆಯಿಂದ ಮಾತ್ರ ಸಾಧ್ಯ. ಇದಕ್ಕಾಗಿ ಮಾಡುವ ಭಾಷಾಪರಿವರ್ತನೆಯೇ ಅನುವಾದ ಅಥವಾ ಭಾಷಾಂತರ - ಟ್ರಾನ್ಸ್‌ಲೇಷನ್. ಇದು ಇಂಗ್ಲಿಷಿನ ‘ಟ್ರಾನ್ಸ್’ ಎಂಬ ಪದದಿಂದ ಉತ್ಪತ್ತಿಯಾಗಿದೆ. ‘ಟ್ರಾನ್ಸ್’ ಅಂದರೆ ಒಂದನ್ನು ದಾಟಿ ಇನ್ನೊಂದಕ್ಕೆ. ಅನ್ಯಮನಸ್ಕನಾಗಿರುವುದಕ್ಕೂ ನಾವು ಟ್ರಾನ್ಸ್ ಎನ್ನುತ್ತೇವೆ. ಅನೇಕ ಪಾತಳಿಗಳಿರುವ ಪದ ಇದು.

ಅನುವಾದ ಮಾಡುವವನು ಅನುವಾದಕ. ವಾದಕ ಎಂದರೆ ನುಡಿಸುವವನು ಎಂಬರ್ಥವಿದೆ. ಸಾಮಾನ್ಯವಾಗಿ ಹಾಡಿಗೆ ಸಾಥ್ ನೀಡುವ ವಾದನದ ಪಕ್ಕವಾದ್ಯಕ್ಕೆ ಈ ಪದವನ್ನು ಬಳಸುತ್ತಾರೆ. ಮೂಲ ಹಿರಿದು. ಅನುವಾದ ಕಿರಿದು. ಅನುವಾದಕ ಸೃಷ್ಟಿಕರ್ತನೂ ಹೌದು, ಪಾಲಕನೂ ಹೌದು. ಆದರೆ ಅನುವಾದದಲ್ಲಿ ಸಂಶಯ ಬಂದರೆ ಮೂಲವೇ ಆಧಾರ. ಮೂಲಾಧಾರ. ಮೂಲವೇ ಸತ್ಯ. ಇದನ್ನೇ ರೂಪಕದಲ್ಲಿ ಹೇಳುವುದಾದರೆ ಮೂಲ ಸತ್ಯ; ಅನುವಾದ ನಿಜ. ಸಾಂದರ್ಭಿಕವಾಗಿ ನಿಜ ಸುಳ್ಳಾಗಬಹುದು. ಸತ್ಯ ಹಾಗಾಗದು. ಅದು ಶಾಶ್ವತ.

ಅನುವಾದ ಆರಂಭವಾದಲ್ಲಿಂದಲೇ ಟ್ರಾನ್ಸ್‌ಲೇಷನ್, ಟ್ರಾನ್ಸ್ ಲಿಟರೇಷನ್ ಅಥವಾ ಟ್ರಾನ್ಸ್‌ಕ್ರಿಯೇಷನ್ ಎಂಬುದೂ ಆರಂಭವಾಗಿದೆ. ಇವು ಸೂಕ್ಷ್ಮ ವ್ಯತ್ಯಾಸವಿರುವ ಪದಗಳು. ಕನ್ನಡದಲ್ಲಿ ಹೇಳುವುದಾದರೆ ಸಂಗ್ರಹಾನುವಾದ, ಭಾವಾನುವಾದ, ರೂಪಾಂತರ ಇತ್ಯಾದಿ. ಆದರೆ ಕಾನೂನಿನಲ್ಲಿ ಇವಕ್ಕೆ ಅವಕಾಶವಿಲ್ಲ. ಸಮಾನಾರ್ಥ ನೀಡುವುದಕ್ಕೇ ಆದ್ಯತೆ. ಆಗಲೂ ಅನುವಾದಿತ ಭಾಷೆಯಲ್ಲಿ ಸಮಾನಪದವಿಲ್ಲವಾದರೆ ಮೂಲಪದವನ್ನು ಬಳಸುವುದಕ್ಕೇ ಅಳುಕಬಾರದು. ‘ಭಾಷಾಂತರ’ ಎಂಬ ಪದ ಯಾಕೋ ಸರಿ ಕಾಣಿಸುತ್ತಿಲ್ಲ. ಅದು ಭಾಷೆಗಳ ಅಂತರವನ್ನು ಸೂಚಿಸುತ್ತದೆಯೇ ಹೊರತು ಸೌಮ್ಯ ಸಾಮ್ಯವನ್ನಲ್ಲ, ಸಾಮರಸ್ಯವನ್ನಲ್ಲ. ಈ ಬಗ್ಗೆ ಪ್ರೊ. ಪ್ರಧಾನ್ ಗುರುದತ್ತ ಅವರು ಹೇಳಬಹುದು. ಅನುವಾದಕನಿಗೆ ಮತ್ತು ಅದನ್ನು ಯಾರಿಗೆ ಹೇಳುತ್ತಾರೋ ಅವರಿಗೂ ಭಾಷೆ ಮತ್ತು ಸಾಹಿತ್ಯದ ತಿಳಿವಳಿಕೆಯಿರಬೇಕು.

ಒಂದು ವಾಕ್ಯದೊಂದಿಗೆ ಇದನ್ನು ವಿವರಿಸುತ್ತೇನೆ: ಇದು ತಿಳಿವಿನ ಅಥವಾ ಅದರ ಅಭಾವದ ಸೂಚನೆಯಲ್ಲವೆಂದು ಮೊದಲೇ ಸ್ಪಷ್ಟಪಡಿಸುತ್ತೇನೆ. ‘I am in school’ ‘I am at school’ ಎಂಬ ಎರಡು ಪದಗಳ ವ್ಯತ್ಯಾಸಗಳನ್ನು ಗುರುತಿಸಿ. ಇಲ್ಲಿ ಯಾರಾದರೂ ಹೇಳಬಲ್ಲಿರಾ? ಮೊದಲನೆಯದು ಇಂಗ್ಲಿಷಿನಲ್ಲಿ ‘ನಾನು ಶಾಲೆಯಲ್ಲಿ ಓದುತ್ತೇನೆ’. ಎರಡನೆಯದು ‘ನಾನು ಶಾಲೆಯಲ್ಲಿ ಇದ್ದೇನೆ’. ಇದನ್ನು ಕನ್ನಡದಲ್ಲಿ ಬರೆದರೆ ಎರಡೂ ಪದಗಳನ್ನು ಒಂದೇ ರೀತಿ ಬರೆಯಬೇಕಾಗುತ್ತದೆ ಅಥವಾ ಇವುಗಳ ಅಂತರ ಗೊತ್ತಾಗದು.

ವಕೀಲರಿಗೆ ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸುವ ಮತ್ತು ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸುವ ನೈಪುಣ್ಯವಿದ್ದರೆ ಒಳ್ಳೆಯದು. ನಾವು ಕಕ್ಷಿದಾರರ, ನ್ಯಾಯಾಧೀಶರ ಮತ್ತು ಎದುರು ವಕೀಲರ ಹೀಗೆ ಎಲ್ಲರಿಗೆ ಅರ್ಥವಾಗುವಂತೆ ಹೇಳಬೇಕು. ನಮಗೆ ಅನುವಾದಿಸುವ ಕೆಲಸ ವೃತ್ತಿಯಲ್ಲಿ ನಿತ್ಯ ಎದುರಾಗುತ್ತದೆ.

ನಮ್ಮ ಪದಗಳ ಬೇರಿರುವುದು ಪಶ್ಚಿಮದಲ್ಲಿ. ನಮ್ಮ ಕಾಯ್ದೆಗಳಲ್ಲಿ ಅಲ್ಲಿನ ರುಚಿಯೇ ಜಾಸ್ತಿ. ಕಾನೂನಿನ ಸೂತ್ರ, ನೀತಿ, ವಿಧಿ, ನಿಯಮ ಇವೆಲ್ಲಕ್ಕೂ ‘maxim’ ಎಂಬ ಒಂದೇ ಪದ ಮೂಲ. ನಾವು ‘Code’ ಎಂಬ ಪದಕ್ಕೆ ಸಂವಾದಿಯಾಗಿ ‘ಸಂಹಿತೆ’ ಎಂದು ಬಳಸುತ್ತೇವೆ. ಆದರೆ ‘Code’ ಎಂಬ ಪದಕ್ಕೆ ‘ಸಂಕೇತ’ ಎಂಬ ಅರ್ಥವೂ ಇದೆ. ನೀವೆಲ್ಲ ‘Code name God’ ಎಂಬ ಕೃತಿಯನ್ನು ಓದಿರಬಹುದು. ಇದನ್ನು ಅನುವಾದಿಸುವಾಗ ಕಾನೂನನ್ನಾಧರಿಸಿ ‘ಸಂಹಿತೆಯ ಹೆಸರು ದೇವರು’ ಎಂದು ಬರೆಯಲಾದೀತೇ?

ನಮ್ಮ ಅನೇ ‘maxim’ಗಳು, ‘Doctrine’ (ಉಪದೇಶ, ಬೋಧನೆ, ಮತ, ಧರ್ಮ, ತತ್ವ ಎಂಬ ಹಲವು ಅರ್ಥಗಳಿರುವ ಪದಕ್ಕೆ ಕಾನೂನಿನಲ್ಲಿ ‘ತತ್ವ’ ಅಥವಾ ‘ಸಿದ್ಧಾಂತ’ ಎಂದಷ್ಟೇ ಹೇಳಬೇಕು.)ಗಳು ಇಂಗ್ಲಿಷಿನ ತಾಯಿ ಲ್ಯಾಟಿನ್ ಮೂಲದವು. ಲ್ಯಾಟಿನ್‌ನ ‘ಕಂಚಾರೋ’ ಇಂಗ್ಲಿಷಿನಲ್ಲಿ ‘ಕ್ಯಾನ್ಸರ್’ ಆಯಿತು; ಕನ್ನಡದಲ್ಲಿ ಅದು ‘ಏಡಿ ಹುಣ್ಣು’ ಆಗಿದೆಯಾದರೂ ಅದನ್ನು ಕ್ಯಾನ್ಸರ್ ಎಂದೇ ಹೇಳುವುದೇ ಸರಿ. ಆದ್ದರಿಂದ ಅವನ್ನು ‘adopt’ ಅಥವಾ ‘adapt’ ಮಾಡಿಕೊಳ್ಳುವುದು ಒಳ್ಳೆಯದು. ‘adopt’ ಎಂದಾಕ್ಷಣ ನಾವು ‘Hindu Adoption and Maintenance Act’ನಲ್ಲಿ ಬರುವ ‘adoption’ ಪದದ ಮೊರೆ/ಮರೆ ಹೋಗಬಾರದು. ಸಾಂದರ್ಭಿಕ ಅರ್ಥವನ್ನೇ ಹುಡುಕಬೇಕು.

ಇಂಗ್ಲಿಷಿನ/ಹಿಂದಿಯ ರಾಮಾಯಣ್ ಕನ್ನಡದಲ್ಲಿ ರಾಮಾಯಣ ಆಗುತ್ತದೆ. ಇಂಗ್ಲಿಷಿನ/ಹಿಂದಿಯ ಮಹಾಭಾರತ್ ಕನ್ನಡದಲ್ಲಿ ಮಹಾಭಾರತ ಆಗುತ್ತದೆ. ಈ ಸಣ್ಣ ವ್ಯತ್ಯಾಸಗಳನ್ನು ಗಮನಿಸಬೇಕು.

ಇನ್ನೊಂದು ಉದಾಹರಣೆ ನೀಡುತ್ತೇನೆ: ‘Encounter’ ಎಂಬ ಇಂಗ್ಲಿಷ್ ಪದಕ್ಕೆ ಸಾಹಿತ್ಯದಲ್ಲಿ ಮುಖಾಮುಖಿ ಎಂಬರ್ಥವಿದೆ. ಉದಾಹರಣೆಗೆ ‘cultural encounters’. ಆದರೆ ಕಾನೂನಿನಡಿ ‘Encounter’ ಎಂಬುದಕ್ಕೆ ಸಹಜವಾಗಿಯೇ ಪೊಲೀಸರಿಂದ ನಡೆಯುವ ಹತ್ಯೆ ಎಂದೇ ಅರ್ಥವಿಸಲಾಗುತ್ತದೆ.

ಕಾನೂನಿನಡಿ ಮರಣೋತ್ತರ ಪರಿಕ್ಷೆ ನಡೆಸುವಾಗ ಸಾವಿನ ಕಾರಣವನ್ನು ‘Death due to shock and haemorrhage as a result of multiple blunt injuries sustained’ ‘ಮೊಂಡು ಸಾಧನದಿಂದ ಆದ ಹಲ್ಲೆಯಿಂದ ಉಂಟಾದ ಅನೇಕ ಪೆಟ್ಟುಗಳ ಆಘಾತ ಮತ್ತು ರಕ್ತಸ್ರಾವದಿಂದ ಸಾವು ಸಂಭವಿಸಿದೆ’ ಎಂದು ಹೇಳಲಾಗುತ್ತದೆ. ಈಚೆಗೆ ಒಂದು ಕನ್ನಡ ಪತ್ರಿಕೆಯಲ್ಲಿ ಇಂತಹ ವರದಿಯನ್ನು ‘ವಿದ್ಯುತ್ ಶಾಕ್‌ನಿಂದಲೇ ರೇಣುಕಾಸ್ವಾಮಿಯ ಸಾವು!’ ಎಂದು ಬರೆಯಲಾಗಿತ್ತು. ಕಾನೂನಿನ ಮತ್ತು ಅಥವಾ ವೈದ್ಯಕೀಯದ ಪ್ರಾಥಮಿಕ ಅರಿವಿಲ್ಲದಿದ್ದರೆ ಹೀಗಾಗುತ್ತದೆ. ‘ವಿದ್ಯುತ್‌‘ ಎಂಬ ಪದ ಬಳಕೆಯಿಂದ ಸೇರಿದೆ.

ಕೆಲವು ಬಾರಿ ವಿರುದ್ಧಾರ್ಥವು ಬರುವುದೂ ಇದೆ. ಇಂಗ್ಲಿಷಿನಲ್ಲಿ ‘few’ ಅಂದರೆ ಶೂನ್ಯ ಮತ್ತು ‘a few’ ಅಂದರೆ ಕೆಲವು ಎಂದು ಅರ್ಥ. ಇದು ಗೊತ್ತಿಲ್ಲದಿದ್ದರೆ ‘There were few vehicles and men’ ಎಂಬುದನ್ನು ‘ಅಲ್ಲಿ ಕೆಲವು ವಾಹನಗಳು ಮತ್ತು ಜನರಿದ್ದರು’ ಎಂದು ದಾಖಲೆಯಾಗಿ ಅರ್ಥವೈಪರೀತ್ಯವಾಗುತ್ತದೆ. ನಿಮಗೆಲ್ಲ ಗೊತ್ತಿರುವ ‘hard’ ಮತ್ತು ‘hardly’ ಕೂಡಾ ಹೀಗೇ ವಿಪರ್ಯಾಸದಲ್ಲಿ ಕೊನೆಗೊಳ್ಳುತ್ತದೆ. ಸಾದಾ ಪದಗಳಾದ ‘ದೊಡ್ಡಪ್ಪ’, ‘ಚಿಕ್ಕಪ್ಪ’, ‘ಮಾವ’, ‘ಅತ್ತೆ’, ‘ದೊಡ್ಡಮ್ಮ’, ‘ಚಿಕ್ಕಮ್ಮ’ ಇವೆಲ್ಲ ಇಂಗ್ಲಿಷಿನಲ್ಲಿ ‘uncle’, ‘aunt’ ಎಂಬ ಎರಡು ಪದಗಳಡಿ ಅಡಗುತ್ತವೆ. ಸಂಬಂಧಗಳು ಕನ್ನಡದಂತಹ ಪೌರಾತ್ಯ, ಗ್ರಾಮೀಣ ಮತ್ತು ಸಾಂಪ್ರದಾಯಿಕ ಹಾಗೂ ಸಂಕೀರ್ಣವಾಗಿರುವ ಭಾಷೆಯಲ್ಲಿ ಇವಕ್ಕೆ ಪ್ರತ್ಯೇಕ ಆಕಾರ ನೀಡುವುದು ಅಗತ್ಯ. ಕೆಲವನ್ನು ಇಂಗ್ಲಿಷಿನಲ್ಲೇ ಹೇಳುವುದು ಸುಖ. ಬಲವಂತವಾಗಿ ಅನುವಾದಿಸಿದರೆ ಅವು ‘sತಿiಣಛಿh’ನ್ನು ‘ವಿದ್ಯುದಾಗಮನ ನಿರ್ಗಮನಯಂತ್ರ’ ಎಂದು ಹೇಳಿದಂತಾದೀತು. ಗೋಡೆಗೆ ಹೊಡೆದ ಮೊಳೆ ನಮ್ಮ ಪಾಲಿಗೆ ‘coat hanger’! ಆದ್ದರಿಂದ ರೈಲು ರೈಲೇ ಆಗಿರಲಿ, ಬಸ್ ಬಸ್ಸೇ ಆಗಲಿ. ವಿರುದ್ಧಾರ್ಥವನ್ನು ಭಾವದಲ್ಲಿ ನೀಡುವ ಪದಗಳನ್ನು ಬಳಸಬಾರದು. Ay, you know we must return good for evil, ಎಂದದ್ದಕ್ಕೆ That may be a mistake in translation ಎಂದರಂತೆ! The original is unfaithful to the translation ಎಂದವರೂ ಇದ್ದಾರೆ.

ಅನುವಾದದಲ್ಲಿ ಮೂಲ ಕಳೆದುಹೋಗಬಾರದು. ಕಾವ್ಯದ ಅನುವಾದಕ್ಕೆ ಒಬ್ಬ ವಿಮರ್ಶಕ ಹೇಳಿದರು: Poetry is what gets lost in translation! ಕಾನೂನಿನಲ್ಲೂ ಹೀಗೆಯೇ; ಅನುವಾದದಲ್ಲಿ ಕಾನೂನು, ನ್ಯಾಯ ಕಳೆದುಹೋಗಬಾರದು. ಇದು ಕಾವ್ಯಕ್ಕೆ ಮಾತ್ರವಲ್ಲ, ಕಾನೂನಿಗೂ ಅನ್ವಯಿಸುತ್ತದೆ. ಆಗ ಮಾತ್ರ ನ್ಯಾಯವಾದಿಗಳು ನ್ಯಾಯ ಪ್ರತಿಪಾದಕರಾಗಬಹುದು; ನ್ಯಾಯಾಧೀಶರು ನ್ಯಾಯದಾನಿಗಳಾಗಬಹುದು.

ಇದೆಲ್ಲ ಆಗಬೇಕಾದರೆ, ಇರಬೇಕಾದರೆ, ಕಾನೂನಿನ ನಿರ್ಮಾಪಕರು, ಪಾಲಕರು ಮತ್ತು ತೀರ್ಮಾನಿಸುವವರು ಒಳ್ಳೆಯ ಓದುಗರಾಗಿರಬೇಕು. ಇಲ್ಲವಾದರೆ ಅವರು ‘ನ್ಯಾಯಾಲಯ’ದ ಬದಲು ‘ನ್ಯಾಯಲಯ’ದ ಪೋಷಕರಾಗುತ್ತಾರೆ. ನಾನೀ ಪಾಲ್ಕೀವಾಲಾ ಒಳ್ಳೆಯ ವಕೀಲರಾಗಿದ್ದರು ಮಾತ್ರವಲ್ಲ, ಒಳ್ಳೆಯ ಭಾಷಣಗಾರರೂ ಉಪನ್ಯಾಸಕರೂ, ಲೇಖಕರೂ ಆಗಿದ್ದರು. ಅವರ ಭಾಷೆ ನ್ಯಾಯಾಲಯದ ಒಳಗಿಂದೂ ಹೌದು; ಹೊರಗಿನ ವಿಶಾಲ ಜಗತ್ತಿನದ್ದೂ ಹೌದು.

share
ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಬಾಲಸುಬ್ರಹ್ಮಣ್ಯ ಕಂಜರ್ಪಣೆ
Next Story
X