ಕೊಲೆಗಿಲೆ ಮುಂತಾಗಿ....

ಕ್ರೌರ್ಯದಲ್ಲಿ ಪ್ರಜಾಸತ್ತೆಗೂ ರಾಜಸತ್ತೆಗೂ ಬಹಳ ವ್ಯತ್ಯಾಸವೇನಿಲ್ಲ. ಅಧಿಕಾರಕ್ಕೆ ಬೆದರಿಕೆ ಬಂದಾಗಲೆಲ್ಲ ಹಾಗೆ ಪ್ರತಿರೋಧ ಒಡ್ಡಿದವರನ್ನು ಯಾವುದಾದರೂ ಕಾನೂನಿನಡಿ ಸಿಲುಕಿಸುವುದು ಆಳುವವರ ಜಾಯಮಾನ. ಇದಕ್ಕೆ ಅಧಿಕಾರಿಗಳು ಸದಾ ತಮ್ಮ ಕಟ್ಟಪ್ಪತನವನ್ನು ಒತ್ತೆಯಿಡುತ್ತಾರೆ. ಭ್ರಷ್ಟಾಚಾರವೆಂಬುದು ಎಲ್ಲರೂ ಸ್ವೀಕರಿಸಿದ ಅನಿವಾರ್ಯತೆ. ಅಲ್ಲೋ ಇಲ್ಲೋ ನತದೃಷ್ಟ ಭ್ರಷ್ಟರಷ್ಟೇ ಸಿಕ್ಕಿಬೀಳುತ್ತಾರೆ. ಇತರರು ನಗುತ್ತಿರುತ್ತಾರೆ. ನಿಜಕ್ಕೂ ಪ್ರಾಮಾಣಿಕತೆಯ, ಪಾರದರ್ಶಕ ಆಡಳಿತದ ಮುಖ್ಯವಾಹಿನಿಗೆ ತರಬೇಕಾದದ್ದು ರಾಜಕಾರಣಿಗಳನ್ನು ಮತ್ತು ಸರಕಾರಿ ನೌಕರರನ್ನು!
ದೈನಂದಿನ ಮಾಧ್ಯಮಗಳಲ್ಲಿ ನೋಡಬರುವ, ಕೇಳಿಬರುವ, ಓದಬರುವ ಅತೀ ಹೆಚ್ಚು ಸುದ್ದಿ ರಾಜಕೀಯ ಮತ್ತು ಅಪರಾಧಗಳದ್ದು. ರಾಜಕೀಯ ಅಪರಾಧಗಳಂತೂ ಸುದ್ದಿಗಳಲ್ಲಿ ಬಹುಪ್ರಮುಖವಾಗುತ್ತವೆ. ಆದರೆ ಈಗೀಗ ಸರಕಾರದ ಅಧಿಕೃತರೆಂದುಕೊಂಡು ಬರುವ ವ್ಯಕ್ತಿಗಳು ಎಸಗುವ ಅಪರಾಧಗಳು ಹೆಚ್ಚುತ್ತಿವೆ. ಈ.ಡಿ. ಅಥವಾ ಸಿಬಿಐ ಅಥವಾ ಆದಾಯ ತೆರಿಗೆ ಅಧಿಕಾರಿಗಳೆಂದು ಹೇಳಿಕೊಂಡು ದಾಳಿಯಿಡುವ ಮತ್ತು ಲೂಟಿಮಾಡಿ ಪರಾರಿಯಾಗುವ ಘಟನೆಗಳು ಹೆಚ್ಚುತ್ತಲೇ ಇವೆ. ಇಂತಹ ಅಹಿತಕರ ಘಟನೆಗಳು ನಡೆದ ನಂತರ ಸಿನೆಮಾದಲ್ಲಿ ನಡೆಯುವ ಹಾಗೆ ಪೋಲಿಸರು ಯಥಾಪ್ರಕಾರ ಧಾವಿಸುತ್ತಾರೆ. ಬಹಳಷ್ಟು ಪ್ರಕರಣಗಳಲ್ಲಿ ಕೈಗೆ ಸಿಕ್ಕಿದ ಅಮಾಯಕರನ್ನು ಹಿಂಸಿಸಿ ಕೊನೆಗೆ ಆಕಸ್ಮಿಕವಾಗಿ ಅಪರಾಧಿಗಳು ಪತ್ತೆಯಾದರೆ ತಮ್ಮಿಂದ ಕೆಲವೊಂದು ಮಂದಿಗೆ ತೊಂದರೆಯಾದ ಬಗ್ಗೆ ಯಾವ ವಿಷಾದವನ್ನೂ ಹೇಳದೆ ಪ್ರಶಸ್ತಿ, ಪುರಸ್ಕಾರ, ಬಹುಮಾನ, ಪದೋನ್ನತಿಗಳನ್ನು ಪಡೆಯುವತ್ತ ತಮ್ಮ ದೃಷ್ಟಿಯನ್ನು ಬೀರುತ್ತಾರೆ. ಈ ಬಗ್ಗೆ ಸಾಕಷ್ಟು ಎಚ್ಚರಿಕೆಯ ಮಾತುಗಳು ಪ್ರಸಾರವಾಗುತ್ತಿವೆ. ಯಾರದೇ ಕರೆ ಬಂದರೆ ದಯವಿಟ್ಟು ಉತ್ತರಿಸದಿರಿ, ಸಮೀಪದ ಪೊಲೀಸರಿಗೆ ಇಲ್ಲವೇ ಸಹಾಯವಾಣಿಗೆ ತಿಳಿಸಿ ಎನ್ನುತ್ತಾರೆ. ಹೀಗೆ ಎಚ್ಚರಿಕೆ ನೀಡುವವರ ಅಧಿಕೃತತೆಯ ಬಗ್ಗೆ ಜನರಿಗೆ ವಿಶ್ವಾಸ ಮೂಡುವುದು ಹೇಗೆ? ಯಾವುದು ಅಸಲಿ, ಯಾವುದು ನಕಲಿ? ಸರಕಾರವು ಇಂತಹ ಅಪರಾಧಗಳನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳುವ ಬದಲು ಜನರಿಗೆ ಎಚ್ಚರಿಕೆ ನೀಡಿ ಈಗಾಗಲೇ ಮಲಿನಗೊಂಡ ತಮ್ಮ ಕೈಗಳನ್ನು ತೊಳೆದುಕೊಳ್ಳುವ ಸುಲಭದ ಹಾದಿಯನ್ನು ಕ್ರಮಿಸುತ್ತಿದೆ. ಇದರಿಂದಾಗಿ ಯಾವುದೇ ಅಕ್ರಮ, ಅಪರಾಧ ನಡೆದಾಗಲೂ ಸರಕಾರವು ‘ನಾವು ನಿಮಗೆ ಮುನ್ನೆಚ್ಚರಿಕೆಯನ್ನು ನೀಡಿದ್ದೇವಲ್ಲ!’ ಎಂಬ ರಕ್ಷಣಾತ್ಮಕ ಮಾತನ್ನು ಹೇಳಿ ಜಾರಿಕೊಳ್ಳಲು ಸಾಧ್ಯ. ಈಚೆಗೆ ಸೈಬರ್ ಅರೆಸ್ಟ್ ಎಂಬ ಹೊಸ ಅಕ್ರಮ ನಡೆಯುತ್ತಿದ್ದರೂ ಇದನ್ನು ನಿಯಂತ್ರಿಸಲು ಸರಕಾರ ಹೇಳಿಕೆಗಳು, ಬಿಟ್ಟಿ ಟೆಲಿಫೋನ್ ಕರೆಗಳು ಮುಂತಾದ ಕ್ರಮಗಳ ಹೊರತು ಬೇರೇನೂ ಮಾಡದೆ ಇರುವುದರಿಂದ ಅಪರಾಧಗಳು ನಡೆಯುತ್ತಲೇ ಇವೆ; ಏಕೆಂದರೆ ಸರಕಾರದ ಅಧಿಕೃತ ಏಜೆನ್ಸಿಗಳೂ ಇದನ್ನೇ ಅನಧಿಕೃತವಾಗಿ ಮಾಡುತ್ತಿವೆ. ಅವರಿಗೆ ರಾಜಕೀಯ ಪ್ರತಿಸ್ಪರ್ಧಿಗಳ ಬೆನ್ನುಹತ್ತುವುದೇ ದಿನಚರಿಯಾದಾಗ ಅದರ ಪ್ರಯೋಜನವನ್ನು ಸಮಾನಾಂತರ ಧೂರ್ತರು ಕೈಗೊಳ್ಳುವುದು ಅತ್ಯಂತ ಸಹಜವೇ ಆಗಿದೆ. ಅಧಿಕೃತ-ಅನಧಿಕೃತಗಳ ನಡುವಣ ಗುರುತಿನ ಗೆರೆ ಮಾಸಿಹೋಗುತ್ತದೆ. ಮೊನ್ನೆ ಮಂಗಳೂರು ಬಳಿ ಯಾವುದೋ ಬ್ಯಾಂಕ್ ದರೋಡೆಯಾಯಿತು, (ಪೊಲೀಸರಿಂದಾಗಿ ನಾವು ನಿದ್ರೆ ಮಾಡಬಹುದು ಎಂದು ಹೇಳಿದ ಸಭಾಪತಿ/ಶಾಸಕರ ಕ್ಷೇತ್ರದಲ್ಲೇ ಹೀಗಾದದ್ದನ್ನು ಗಮನಿಸಿದರೆ ಪೊಲೀಸರು ಬ್ಯಾಂಕಿನವರನ್ನು ನಿದ್ರೆಹೋಗಲು ಹೇಳಿರಬಹುದೇನೋ ಎಂದು ಹೇಳುವ ಹಾಗಿಲ್ಲ; ಅವರೆಲ್ಲರೂ ಎಚ್ಚರವಾಗಿದ್ದರು, ಆದರೆ ಸಿಸಿಟಿವಿ ನಿದ್ರೆಮಾಡಿತ್ತು ಎಂದು ವರದಿಗಳು ಹೇಳುತ್ತವೆ!) ಇನ್ನೊಂದೆಡೆ ಬೀದರ್‌ನಲ್ಲಿ ಎಟಿಎಮ್ ದರೋಡೆಯಾಗಿ ಒಬ್ಬ ಮೃತಪಟ್ಟ. ಮೈಸೂರಿನಲ್ಲಿ ದರೋಡೆಯ ಯತ್ನ ನಡೆಯಿತು. ಅದೃಷ್ಟಶಾಲಿ ಬಚಾವಾದರು! ಉತ್ತರಭಾರತದಲ್ಲಂತೂ ದರೋಡೆಗಳು ನಡೆಯದ ಜಾಗ, ದಿನ ಇಲ್ಲವೇ ಇಲ್ಲವೆಂಬಷ್ಟು ಅಪರೂಪ. ಇವೆಲ್ಲ ಮಾಧ್ಯಮಗಳಲ್ಲಿ ‘ಹಾಡಹಗಲೇ’ ನಡೆದ ದರೋಡೆ ಎಂದು ಪ್ರಸಾರವಾದವು. ಕಿಲಾಡಿ ಪ್ರಜೆಯೊಬ್ಬ ಸರಕಾರ, ಬ್ಯಾಂಕುಗಳು, ಅಧಿಕಾರಿಗಳು ಮಾಡುವ ದರೋಡೆ ಹಾಡಹಗಲೇ ನಡೆಯುತ್ತದೆ; ಇವಕ್ಕೆ ಬೇರೇನಾದರೂ ಶೀರ್ಷಿಕೆ ಕೊಡಿ ಎಂದ!
ಈಚೀಚೆಗೆ ಅಪರಾಧಗಳು ಹೆಚ್ಚುತ್ತಿವೆ ಎಂದರೆ ಅವು ಕಾಂಗ್ರೆಸ್ ಸರಕಾರದ ಸಮಯದಲ್ಲೇ ಇದ್ದವು ಎನ್ನುವುದು ಒಂದು ವರ್ಗದ ತರ್ಕ. ನೀವು ಸ್ವಾತಂತ್ರ್ಯಪೂರ್ವ ಭಾರತವನ್ನು ಗಮನಿಸಿದರೆ ರಜಾಕಾರರು, ಚಂಬಲ್ ದರೋಡೆಕೋರರು ಹೀಗೆ ಸಾಕಷ್ಟು ಅಪರಾಧ ಪ್ರಕರಣಗಳಿವೆ ಎನ್ನುತ್ತಾರೆ. ಬ್ರಿಟಿಷರೇನು ಕಡಿಮೆಯೇ? ಅವರೂ ಈ ದೇಶದ ಸಂಪತ್ತನ್ನು ಲೂಟಿ ಮಾಡಿದ್ದಾರೆ ಎಂದು ದೇಶೀಯ ಸ್ವಾತಂತ್ರ್ಯ ಪ್ರೇಮಿಗಳು ಹೇಳಿದರೆ ನವದೇಶಭಕ್ತರು ಅವರಿಗಿಂತಲೂ ಹೆಚ್ಚು ಲೂಟಿಮಾಡಿದವರು ಮುಸ್ಲಿಮ್ ಪರದೇಶಿಗಳು ಎಂದು ಲೆಕ್ಕಾಚಾರದ ಸವಾಲೆಸೆಯುತ್ತಾರೆ. ಇನ್ನೂ ಹಿಂದೆ ಹೋದರೆ ನಮಗೆ ಅಸಂಖ್ಯ ಅಪರಾಧಗಳ ತಖ್ತೆ ಸಿಗಬಹುದು. ಅಂಗುಲಿಮಾಲಾನ ಕಥೆ ರೋಚಕ. ಪುರಾಣಪ್ರೇಮಿಗಳು ಅಗೆದಗೆದು ಅಪರಾಧಗಳ ಕಥೆಗಳನ್ನು ಪಡೆದಾರು. ವಾಲ್ಮೀಕಿ ಬೇಡನಾಗಿದ್ದ; ಅನೇಕರನ್ನು ಕೊಂದ ಬಳಿಕ ಅಲ್ಲವೇ ಆತ ಆದಿಕವಿಯಾದದ್ದು? ಎಂದು ಹೇಳಿಯಾರು. ಹೀಗೆ ಅಪರಾಧಗಳ ಇತಿಹಾಸ ಅಪರಾಧಿಗಳದ್ದೂ ಆಗಿ ಒಳ್ಳೆಯ ಓದಾಗುವ ಸಾಧ್ಯತೆಯೇ ಹೆಚ್ಚು.
ಯಾವುದು ಅಪರಾಧ? ಯಾವುದು ಅಪರಾಧ ಅಲ್ಲ? ಯಾರು ಅಪರಾಧಿ? ಯಾರು ಅಪರಾಧಿ ಅಲ್ಲ?
ಮಣಿಪುರಕ್ಕೆ ಅಕ್ಷರಶಃ ಬೆಂಕಿ ಬಿತ್ತು. ಖಾಂಡವವನದಂತೆ ಹಸಿ, ಬಿಸಿ, ಒಣ ಎಲ್ಲವೂ ಉರಿಯಿತು. ಯಾರದ್ದೋ ಕ್ರೌರ್ಯದ ಹೊಟ್ಟೆ ತುಂಬಿತು. ಪ್ರಧಾನಿಗೆ ಮಣಿಪುರದ ವಿಮಾನ, ರೈಲು, ಬಸ್ಸು ಟಿಕೆಟೇ ಸಿಕ್ಕದೆ ಅವರು ಹೊಸದಿಲ್ಲಿಯಲ್ಲೇ ಉಳಿಯಬೇಕಾಯಿತು. ಆದರೆ ಅವರು ನಿರಾಶರಾಗದೆ ವಿದೇಶ ಪ್ರವಾಸಮಾಡಿ ಕಾಲಕಳೆದರು. ಅಲ್ಲೀಗ ಬೂದಿಯಿದೆ. ಅದನ್ನು ಹಣೆಗೆ ಹಚ್ಚಿಕೊಂಡ ಮಣಿಪುರದ ಮುಖ್ಯಮಂತ್ರಿ ಈಚೆಗೆ ತನ್ನಿಂದ ತಪ್ಪಾಗಿದೆ; ಅದನ್ನು ಮರೆಯಿರಿ ಮತ್ತು ಕ್ಷಮಿಸಿ ಎಂಬ ಹೇಳಿಕೆಯನ್ನು ನೀಡಿದರು. ತಾನು ದೈವಸಂಭೂತನಿರಬಹುದೆಂಬ, ಜೈವಿಕ ಪ್ರಕ್ರಿಯೆಯಲ್ಲಿ ಹುಟ್ಟಿರಲಿಕ್ಕಿಲ್ಲವೆಂಬ ಸಂಶಯವನ್ನು ಹೊಂದಿದ ಪ್ರಧಾನಿಯೂ ಹೇಗಿರಲಿಕ್ಕಿಲ್ಲ, ತಾನೂ ಮನುಷ್ಯನೇ, ತನ್ನಿಂದಲೂ ತಪ್ಪಾಗಿರಬಹುದು ಎಂಬ ವಿಷಾದವನ್ನು (ಅವರು ನೀಡಿದರೆನ್ನಲಾದ) ಸಂದರ್ಶನವೊಂದರಲ್ಲಿ ಹೇಳಿದರೆನ್ನಲಾದ ವರದಿಗಳು ಬಂದಿವೆ. ಹೀಗೆ ತಪ್ಪೆಸಗದೇ ಇರುವವರಿಗಿಂತ ತಪ್ಪೆಸಗಿ ಅದನ್ನು ಮರೆಯಿರಿ, ಕ್ಷಮಿಸಿ ಎಂಬ ಪಶ್ಚಾತ್ತಾಪ ವ್ಯಕ್ತಪಡಿಸಿದವರೇ ಹೆಚ್ಚು ಉದಾರಚರಿತರಾಗುತ್ತಾರೆ. ಆಗ ನಡೆದ ತಪ್ಪಿಗೆ ಬಲಿಯಾದವರಿಗೆ ನ್ಯಾಯ ಕೊಡುವವರು ಯಾರು? ಸತ್ತವರು ಮರೆತಾರು ಹಾಗೂ ಹೀಗೂ ಉಳಿದವರು? ಅಥವಾ ಒಡಹುಟ್ಟಿದವರನ್ನು, ನಿಕಟ ಬಂಧುಮಿತ್ರರನ್ನು ಕಳೆದುಕೊಂಡವರು? ಅಸಹಾಯಕರಾದರೆ ಸೇಡು ತೀರಿಸಿಕೊಳ್ಳಲಾರದವರಾದರೆ, ನ್ಯಾಯಪಡೆಯಲು ವಿಫಲರಾದರೆ, ತಮ್ಮ ಮನಸ್ಸಿನ ಅತೃಪ್ತಿಯನ್ನು, ಬೇಗೆಯನ್ನು, ನೋವನ್ನು ಒಳಗಿಟ್ಟುಕೊಂಡು ಅಪರಾಧಿಯನ್ನು/ಗಳನ್ನು ಕ್ಷಮಿಸುವುದು ಅನಿವಾರ್ಯ. ಇಂತಹ ಕ್ಷಮೆ ಕ್ಷಮೆಯಲ್ಲ; ಶಾಪ.
ಆದರೆ ಇವನ್ನು ಮಾಧ್ಯಮಗಳು ಸುದ್ದಿಯಾಗಿಸಿ ಉದಾತ್ತ ಹೃದಯಿಗಳಂತೆ, ಉದಾರಚರಿತರಂತೆ, ಮಹಾನುಭಾವರಂತೆ ಚಿತ್ರಿಸಿದವು. ತಪ್ಪನ್ನು ಒಪ್ಪಿಕೊಂಡರೆ ಶಿಕ್ಷೆಯಿಂದ ವಿನಾಯಿತಿ ಸಿಗುತ್ತದೆಂದಾದರೆ ಅಪರಾಧಿಗಳಲ್ಲಿ ನೂರಕ್ಕೆ ತೊಂಭತ್ತು ಮಂದಿ ಅಪರಾಧವನ್ನು ಒಪ್ಪಿಕೊಂಡಾರು. ಈ ದೇಶದ ದುರದೃಷ್ಟಕ್ಕೆ ಮತ್ತು ಮಣಿಪುರದ ಹಾಗೂ ಭಾರತದ ಸದ್ಯದ ದೊರೆಗಳು ಅದೃಷ್ಟಕ್ಕೆ ನ್ಯಾಯ ನಿರ್ಣಯ ನೀಡುವವರು ಅವರೇ. ಯಾರೂ ಅವರಿಗೇನು ಶಿಕ್ಷೆ ಎಂದು ನ್ಯಾಯಾಲಯದ ಕದ ತಟ್ಟಲಿಲ್ಲ. ಸ್ವಯಿಚ್ಛೆಯಿಂದ ಪ್ರಕರಣ ದಾಖಲಿಸಿಕೊಳ್ಳುವ ಕೇಂದ್ರ ತನಿಖಾಸಂಸ್ಥೆಗಳ್ಯಾವುವೂ ಕುಳಿತಲ್ಲಿಂದ (ಅಥವಾ ಮಲಗಿದಲ್ಲಿಂದ) ಮಿಸುಕಾಡಲಿಲ್ಲ. ಫಾದರ್ ಸ್ಟೇನ್ಸ್, ಜಿ.ಎನ್. ಸಾಯಿಬಾಬಾ ಮತ್ತೆ ಬರಲಾರರು. ಅವರ ಸಾವಿಗೆ ಕಾರಣರಾದವರು, ಅವರ ಸಾವನ್ನು ಸಂಭ್ರಮಿಸಿದವರು, ಮುಂದೊಂದು ದಿನ ಹೌದು ತಮ್ಮಿಂದ ತಪ್ಪಾಗಿದೆ ಎಂದರೂ ಫಲವಿಲ್ಲ. ಈ ಅಪರಾಧ ಮತ್ತು ಪಶ್ಚಾತ್ತಾಪಗಳ ತರ್ಕ ಅಗತ್ಯಗಳ, ಅನಿವಾರ್ಯಗಳ ಆಧಾರದಲ್ಲಿ ನಿರ್ಣಯವಾಗುವುದಿಲ್ಲ. ಬದಲಾಗಿ ಅನುಕೂಲಗಳ ಆಧಾರದಲ್ಲಿ ವ್ಯಕ್ತವಾಗುತ್ತವೆ.
ಅಪರಾಧಗಳ ನಿರೂಪಣೆ ಮತ್ತು ಶಿಕ್ಷೆ ಆಯಾಯ ಕಾಲದ ಶಾಸನಗಳ ಆಧಾರದಲ್ಲಿ ತೀರ್ಮಾನವಾಗುತ್ತದೆ. ಭಯೋತ್ಪಾದನೆ ಮತ್ತು ಹಿಂಸೆ ಜಾತ್ಯತೀತ. ಅಲ್ಲಿ ಮನುಷ್ಯ ಮಾಯವಾಗುತ್ತಾನೆ. ಮೃಗಗಳು ನಾಚುವಷ್ಟು ಮೃಗೀಯವಾಗಿ ಮನುಷ್ಯ ವರ್ತಿಸುತ್ತಾನೆ. ತೋಳರಾಜಕುಮಾರ ಎಂಬ ಕಥೆ ಇಂತಹವರಿಗೂ ಹೊಂದುತ್ತದೆ. ಇದಕ್ಕೆ ಹತ್ತಾರು ಕಾರಣಗಳಿದ್ದರೆ, ನೂರಾರು ನೆಪಗಳಿರುತ್ತವೆ. ಪ್ರಾಚೀನ ಇತಿಹಾಸದಲ್ಲೂ ಅಪರಾಧಗಳು ಆಡಳಿತದ ಮೂಲಕ ನಡೆಯುತ್ತಿದ್ದವು ಮತ್ತು ಅವುಗಳಿಗೆ ಶಾಸನದ ರಕ್ಷೆಯಿರುತ್ತಿತ್ತು. ನಾವಿಂದು ಪ್ರಥಮ ಸ್ವಾತಂತ್ರ್ಯ ಯುದ್ಧವೆಂದು ಬಣ್ಣಿಸುವ ೧೮೫೭ರ ಹೋರಾಟವನ್ನು ಬ್ರಿಟಿಷರು ‘ಸಿಪಾಯಿ ದಂಗೆ’ಯೆಂದು ಕರೆದರು. ಜಲಿಯಾನಾವಾಲಾಬಾಗ್ ಹಿಂಸಾಚಾರ ಬ್ರಿಟಿಷರ ಪಾಲಿಗೆ ಕಾನೂನಿನ ರಕ್ಷಣೆ. ಭಾರತೀಯರ ಪಾಲಿಗೆ ಹಿಂಸಾಚಾರ. ಸದ್ದಾಮ್ ಅಮೆರಿಕಕ್ಕಿಂತ ಶಕ್ತನಾಗಿರುತ್ತಿದ್ದರೆ ಅಮೆರಿಕದ ನಾಯಕರು ಸದ್ದಾಮ್‌ನ ಸ್ಥಿತಿಯನ್ನು ಎದುರಿಸಬೇಕಾಗಿತ್ತೇನೋ? ಬೇಟೆಗಾರ ಬರೆಯುವ ಇತಿಹಾಸದಲ್ಲಿ ಆತನೇ ನಾಯಕ; ಬಲಿಯಾಗುವ ಪ್ರಾಣಿಗಳೇ ಖಳನಾಯಕರಾಗಿರುತ್ತವೆ; ಹಲ್ಲೆಕೋರರಾಗುತ್ತವೆ. ಇತಿಹಾಸ ತಿರುಗಾಮುರುಗಾ ಆದಾಗ ಈ ತರ್ಕವೂ ಪಲ್ಲಟವಾಗಬಹುದು. ರಾಷ್ಟ್ರಗಳಲ್ಲಿ ರಕ್ತಸಿಕ್ತ ಅಥವಾ ರಕ್ತರಹಿತವಾಗಿ ಕ್ರಾಂತಿಯಾಗಿ ಅಧಿಕಾರ ಬದಲಾದಾಗ ನಾಯಕ ಖಳನಾಯಕನಾಗುತ್ತಾನೆ; ಖಳನಾಯಕನಾಗಿದ್ದವನು ನಾಯಕನಾಗುತ್ತಾನೆ. ಬಂಧನದಲ್ಲಿದ್ದವರನ್ನು ಏಕಾಏಕಿ ಬಿಡುಗಡೆ ಮಾಡಲಾಗುತ್ತದೆ; ನಿನ್ನೆಯ ವರೆಗೆ ಚಿನ್ನದ ಹರಿವಾಣದಲ್ಲಿ ಊಟಮಾಡುತ್ತಿದ್ದವನನ್ನು ಇಂದು ಘೋರ ನರಕಸ್ಥಿತಿಯನ್ನು ಕರುಣಿಸಬಲ್ಲ ಜೈಲಿಗೆ ನೂಕಲಾಗುತ್ತದೆ. ಸೇಡು ತೀವ್ರವಾದರೆ ನೇಣಿಗೆ ಹಾಕಲಾಗುತ್ತದೆ. ಆದರೆ ಕೆಲವು ಬಾರಿ ಇಂತಹ ಪಲ್ಲಟವಾಗದಿದ್ದರೂ ಕೆಲವರು ಖಾಯಂ ಖಳನಾಯಕರಾಗುವ ವ್ಯವಸ್ಥೆಯಿದೆ. ಶ್ರೀಮಂತರನ್ನು ಲೂಟಿಮಾಡಿ ರಾಬಿನ್‌ಹುಡ್ ಬಡವರಿಗೆ ಹಂಚುತ್ತಿದ್ದನಂತೆ. ಸರಿಯೋ ತಪ್ಪೋ ಅದೊಂದು ರೀತಿಯಲ್ಲಿ ಸಾಮಾಜಿಕ, ಆರ್ಥಿಕ ಸಮಾನತೆಯತ್ತ ನಡೆಯುವ ಹಾದಿ. ಆದರೆ ಪ್ರಜಾಸತ್ತೆಯ ಆಡಳಿತವು ತನ್ನ ಸುಖಕ್ಕೆ ಹಿಂಸೆಯನ್ನು ಅಸ್ತ್ರವಾಗಿಸಿ ಉಳಿದೆಡೆ ಅಹಿಂಸೆಯನ್ನು ಬೋಧಿಸುತ್ತದೆ. ನಕ್ಸಲರನ್ನು ಖಳನಾಯಕರನ್ನಾಗಿಸಿ ಎನ್‌ಕೌಂಟರ್ ಮಾಡಿದ್ದನ್ನು ಸಮರ್ಥನೆ ಮಾಡುವ ತರ್ಕದಲ್ಲಿ ಯಾವುದೇ ಆಳುವ ಪಕ್ಷದವರಲ್ಲಿ ವ್ಯತ್ಯಾಸವಿಲ್ಲ. ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಜೋರಾಗಿ ಮತ್ತು ವೇಗವಾಗಿ ನಡೆಯುತ್ತದೆ. ಆನಂತರ ಅವರ ವಿರುದ್ಧದ ಪ್ರಕರಣಗಳು ಮುಗಿಯುವ ಅಥವಾ ಹಿಂಪಡೆಯುವ ಹೊತ್ತಿಗೆ ಅವರೂ ಅವರ ಕುಟುಂಬಗಳೂ ನಿರ್ನಾಮವಾಗಿರುತ್ತವೆ. (ಬಹುತೇಕ ತೀರಾ ಬಡವರ ಮನೆಯವರೇ ನಕ್ಸಲರಾಗಿರುವುದು. ಅವರ ಕುರಿತು ಅನುಕಂಪ ಹೊಂದಿದವರನ್ನು ಅರ್ಬನ್ ನಕ್ಸಲರೆಂದು ಬಿಂಬಿಸಿ ಬಂಧನದಲ್ಲಿಡುವುದು ಎಲ್ಲ ಸರಕಾರಗಳ ವೇಳಾಪಟ್ಟಿಯಲ್ಲಿದೆ!)
ಕ್ರೌರ್ಯದಲ್ಲಿ ಪ್ರಜಾಸತ್ತೆಗೂ ರಾಜಸತ್ತೆಗೂ ಬಹಳ ವ್ಯತ್ಯಾಸವೇನಿಲ್ಲ. ಅಧಿಕಾರಕ್ಕೆ ಬೆದರಿಕೆ ಬಂದಾಗಲೆಲ್ಲ ಹಾಗೆ ಪ್ರತಿರೋಧ ಒಡ್ಡಿದವರನ್ನು ಯಾವುದಾದರೂ ಕಾನೂನಿನಡಿ ಸಿಲುಕಿಸುವುದು ಆಳುವವರ ಜಾಯಮಾನ. ಇದಕ್ಕೆ ಅಧಿಕಾರಿಗಳು ಸದಾ ತಮ್ಮ ಕಟ್ಟಪ್ಪತನವನ್ನು ಒತ್ತೆಯಿಡುತ್ತಾರೆ. ಭ್ರಷ್ಟಾಚಾರವೆಂಬುದು ಎಲ್ಲರೂ ಸ್ವೀಕರಿಸಿದ ಅನಿವಾರ್ಯತೆ. ಅಲ್ಲೋ ಇಲ್ಲೋ ನತದೃಷ್ಟ ಭ್ರಷ್ಟರಷ್ಟೇ ಸಿಕ್ಕಿಬೀಳುತ್ತಾರೆ. ಇತರರು ನಗುತ್ತಿರುತ್ತಾರೆ. ನಿಜಕ್ಕೂ ಪ್ರಾಮಾಣಿಕತೆಯ, ಪಾರದರ್ಶಕ ಆಡಳಿತದ ಮುಖ್ಯವಾಹಿನಿಗೆ ತರಬೇಕಾದದ್ದು ರಾಜಕಾರಣಿಗಳನ್ನು ಮತ್ತು ಸರಕಾರಿ ನೌಕರರನ್ನು!
ಈಚೆಗೆ ವಿದ್ಯುನ್ಮಾನ ಪರಿಣತಿ ಹೆಚ್ಚಾದ ಮೇಲೆ ಹೊಸಬಗೆಯ ಅಪರಾಧಗಳು ಹೆಚ್ಚುತ್ತಿವೆ. ಮಾಹಿತಿ ತಂತ್ರಜ್ಞಾನವೆಂಬ ಕಾಯ್ದೆಯು ಜಾರಿಯಾದ ಮೇಲೆ ಈ ಅಪರಾಧಗಳ ಕುರಿತು ತನಿಖೆ ನಡೆಸಬೇಕಾದ ಸರಕಾರಗಳು ತಾವೇ ಇದನ್ನು ದುರುಪಯೋಗಪಡಿಸಿಕೊಂಡು ಜನರನ್ನು ತೊಂದರೆಗೀಡುಮಾಡುತ್ತವೆ. ಉದ್ಯೋಗಸ್ಥಳಗಳಲ್ಲಿ ಸಮಾನ ಉದ್ಯೋಗ ಸಂಹಿತೆಯಿಂದಾಗಿ ಗಂಡು-ಹೆಣ್ಣು ಸಮಾನವಾಗಿ ಉದ್ಯೋಗದ ಹೊಣೆಯನ್ನು ಹೊರುವುದು ಸಹಜವಾಗಿದೆ. ಆದರೂ ಕೆಲವೊಂದು ಪ್ರಕೃತಿದತ್ತ ಜೈವಿಕ ವ್ಯತ್ಯಾಸಗಳ ಸಂದರ್ಭದಲ್ಲಿ ಸರಿಯಾದ ಪರಿಹಾರಾತ್ಮಕ ಯೋಜನೆಗಳಿಲ್ಲದಿದ್ದರೆ ಅತ್ಯಾಚಾರ ಮುಂತಾದ ಅಪರಾಧಗಳು ನಡೆಯುತ್ತಲೇ ಇರುತ್ತವೆ. ಇದರಿಂದ ರಕ್ಷಿಸಿಕೊಳ್ಳಲಾಗದ ಮಂದಿ ಪಲಾಯನ, ಆತ್ಮಹತ್ಯೆ ಮುಂತಾದ ಅನಿವಾರ್ಯಕ್ಕೆ ತೊಡಗುತ್ತಾರೆ. ಆದರೆ ಸರಕಾರದ ಮಾದರಿ ನೀತಿ ಸಂಹಿತೆಯನ್ನು ಅನುಸರಿಸುವ ಖೂಳಜಾಣರು ತಾವೂ ಅದೇ ಹಾದಿಯಲ್ಲಿ ನಡೆಯುತ್ತಾರೆ. ಈಗ ನಡೆಯುತ್ತಿರುವ ಅಪರಾಧಗಳು ಈ ರೀತಿಯವು. ಇಂಥಲ್ಲಿ ಅಪರಾಧದ ನಿರೂಪಣೆ ಮಾಡುವವರು ಯಾರು? ಉದ್ಯೋಗಿಗಳು ಎಷ್ಟೇ ಭ್ರಷ್ಟರಾಗಿದ್ದರೂ ಐಫೋನ್ ಹಿಡಿದು ಪಂಚತಾರಾ ಬದುಕನ್ನು ಪ್ರದರ್ಶಿಸಿ, ಭಾರೀ ಕಾರುಗಳಲ್ಲಿ ಸುತ್ತುತ್ತಿದ್ದರೆ ಮಹತ್ವಾಕಾಂಕ್ಷಿ ನಿರುದ್ಯೋಗಿಗಳು ತಾವೂ ಅಂತಹ ಸ್ಥಿತಿ ತಲುಪಬೇಕೆಂಬ ಅಭಿಯಾನದಲ್ಲಿ ತಮ್ಮ ಪರಿಣತಿಯನ್ನು ಪ್ರಯೋಗಿಸಿ ಎಂತಹ ಅಪರಾಧವನ್ನೂ ನಡೆಸಲು ಹೇಸರು. ಇದು ಸರಿಯೆಂದಲ್ಲ; ಆದರೆ ಒಂದು ತುಂಡು ರೊಟ್ಟಿಗಾಗಿ ಬಂಧಿಸಲ್ಪಟ್ಟು ಅಪರಾಧಿಯಾದ ‘ಲೇ ಮಿಸರೇಬಲ್ಸ್’ ಕೃತಿಯ ಪಾತ್ರ ಈ ಅಧ್ಯಯನದಲ್ಲಿ ಕಣ್ಣಿಗೆ ಕಟ್ಟಬಹುದು. ಇವುಗಳ ಮತ್ತು ಇಂಥವರ ಮಾನಸಿಕ ಸ್ಥಿತಿಯನ್ನು ಅಭ್ಯಸಿಸದೆ ಸರಿಯಿರುವವರು ದುಸ್ಥಿತಿಯಲ್ಲೇ ಉಳಿದು ವ್ಯವಸ್ಥೆಯ ಲಾಭಬಡುಕರು ಹೇಗೆ ಬೇಕಾದರೂ ಇರಬಹುದು ಎಂಬ ನಿರೂಪಣೆಯನ್ನು ಸಾಮಾಜಿಕ ಮಾನದಂಡವಾಗಿ ಸ್ವೀಕರಿಸಿದರೆ ಈ ಅಪರಾಧಗಳು ಮುಂದುವರಿಯಬಹುದು. ಬದಲಾಗಿ ಇವುಗಳ ಹಿಂದಿನ ಅಸಮತೋಲನ, ನಿರುದ್ಯೋಗ, ರಕ್ಷಣೆಯ ಅಭಾವ, ವ್ಯವಸ್ಥೆಯ ಭ್ರಷ್ಟತೆ ಮುಂತಾದವುಗಳನ್ನು ನ್ಯಾಯಯುತವಾಗಿ ಅಧ್ಯಯನ ಮಾಡಿ ಅನುಷ್ಠಾನಗೊಳಿಸಿದಲ್ಲಿ ಮನುಷ್ಯ ದೈವತ್ವಕ್ಕೇರದಿದ್ದರೂ ನೆಲದಿಂದ ಸ್ವಲ್ಪ ಮೇಲೇರಿ, ಈಗ ನಡೆಯುವ ಅಪರಾಧಗಳನ್ನು ನಿವಾರಿಸದಿದ್ದರೂ ಅವುಗಳ ಸಂಖ್ಯೆಯನ್ನು ಕಡಿಮೆಮಾಡಿ ಭೂಮಿಯನ್ನು ಮತ್ತು ಚಿಂತನಶೀಲ, ಸಂವೇದನಾಶೀಲ ಮನಸ್ಸುಗಳನ್ನು ಹಗುರಾಗಿಸಬಹುದೇನೋ?