ಇಂದಿನ ಯುವಜನ ಮುಂದಿನ ...ಏನು?
ಬದುಕಿನಲ್ಲಿ ಹಳಸಲು ಉಕ್ತಿಗಳು ಬೇಕಾದಷ್ಟಿವೆ. ಅವು ಸರಿಯೋ, ಸತ್ಯವೋ ಎಂದು ಯೋಚಿಸುವ ಮುನ್ನವೇ ಅವು ವಿಶ್ವಪರ್ಯಟನೆ ಮಾಡಿ ತಮ್ಮನ್ನು ತಾವೇ ಭದ್ರಪೀಠಗಳಲ್ಲಿ ಪೀಠಭದ್ರಗೊಳಿಸಿರುತ್ತವೆ. ಅಲ್ಲಿಗೆ ಅವು ಶಾಶ್ವತ ಸತ್ಯಗಳಾಗಿ ಪರಿವರ್ತನೆಗೊಂಡಿರುತ್ತವೆ. ಅವನ್ನು ಅಲ್ಲಗಳೆಯದಿರುವುದಿರಲಿ, ಅವುಗಳ ಕೂದಲು ಕೊಂಕಿಸಲೂ ನಿಮಗೆ ಸಾಧ್ಯವಾಗುವುದಿಲ್ಲ.
‘ಇಂದಿನ ಮಕ್ಕಳೇ ಮುಂದಿನ ಜನಾಂಗ’, ‘ಇಂದಿನ ಯುವಜನರೇ ದೇಶದ ಭವಿಷ್ಯ’ ಮುಂತಾದವು ನಾವೆಲ್ಲ ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಬರೆದು, ಭಾಷಣ ಮಾಡಿ, ಚರ್ಚಾಗೋಷ್ಠಿಗಳಲ್ಲಿ ಕಂಠಶೋಷಣೆಮಾಡಿ ಸುಸ್ತುಹೊಡೆದ ವಚನಗಳು. ಕ್ಲೀಶೆಯಾಗುವಷ್ಟು ಬಾರಿ ಉರುಹೊಡೆದ ಸಂಸ್ಕೃತ ಉಕ್ತಿಗಳು - ‘ಕುಪುತ್ರೋ ಜಾಯೇತು ಕ್ವಚಿದಪಿ ಕುಮಾತಾ ನ ಭವತಿಃ’, ಅಥವಾ ‘ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್- ನ ಬ್ರೂಯಾತ್ ಸತ್ಯಮಪ್ರಿಯಂ’ ಇದೇ ಸಾಲಿಗೆ ಸೇರುತ್ತವೆ. ಹಾಗೆಯೇ ಭೌಗೋಳಿಕ ಪ್ರಪಂಚ, ಸಮಾಜವನ್ನು ಕೇಂದ್ರೀಕರಿಸಿ ಭಾರತೀಯರು/ಹಿಂದೂಗಳು/ಕನ್ನಡಿಗರು ‘ಸಹನಾಶೀಲರು’, ಹಾಗೆಯೇ ಕನ್ನಡಿಗರು ‘ಕುರಿತೋದಯುಂ ಕಾವ್ಯಪ್ರಯೋಗ ಪರಿಣತಮತಿಗಳ್’ (ಒಂದಾನೊಂದು ಕಾಲದಲ್ಲಿ ಇದು ಜಾನಪದರನ್ನುದ್ದೇಶಿಸಿ ಬರೆದ ಸತ್ಯವಿರಬಹುದು; ಆದರೆ ಇಂದಿನ ಸಾಮಾಜಿಕ ಜಾಲತಾಣದ ಸಾಹಿತ್ಯ ಸಂದರ್ಭದಲ್ಲಿ ಬಹಳಷ್ಟು ಶಿಷ್ಟ ‘ಕಾವ್ಯ’ ಹೀಗಿರಬಹುದೇನೋ ಅನ್ನಿಸುತ್ತದೆ) ಮುಂತಾದವುಗಳು. ಇರಲಿ, ನಾವು ಸಂಸ್ಕೃತವಲ್ಲದ ಜಗತ್ತಿನಲ್ಲಿ, ಸಮಾಜದಲ್ಲಿ ಬದುಕುತ್ತಿರುವುದರಿಂದ ಸಮಕಾಲೀನವೆಂದುಕೊಳ್ಳಬಹುದಾದ ಮೊದಲ ಎರಡು ಕನ್ನಡ ಉಕ್ತಿಗಳನ್ನು ಕೇಂದ್ರೀಕರಿಸಿ ಚರ್ಚಿಸೋಣ.
ಕ್ರಿಕೆಟ್ ಆಡಲು ಹೋಗುವವನು ಆಟವಾಡಲು ತನ್ನ ಸ್ವಾತಂತ್ರ್ಯಕ್ಕೆ ಎಷ್ಟೇ ಅಡ್ಡಿಯಾಗಲಿ, ತನ್ನ ಸುರಕ್ಷತೆಯೇ ಮುಖ್ಯವೆಂಬ ನಿಲುವನ್ನು ತಾಳುವುದು ಕಾಲಾತೀತ ನಿಯಮ. ಹಳೆಯ ತಲೆಮಾರಿನ ಬ್ರಾಡ್‌ಮನ್, ಬಿಡಿ ಕಳೆದ ತಲೆಮಾರಿನ ಸುನಿಲ್ ಗವಾಸ್ಕರ್‌ವರೆಗೂ ತಲೆಗೆ ಮತ್ತು ಮೈಗೆ ಶಿರಸ್ತ್ರಾಣ ಧರಿಸದೆ ಕ್ರಿಕೆಟ್ ಆಡುತ್ತಿದ್ದ ದಾಂಡಿಗರನ್ನು ನೋಡಿದ್ದೇವೆ. ‘ಬಡಿ’ ಸಂಸ್ಕೃತಿ ಆಗಲೂ ಇತ್ತು; ಈಗಲೂ ಇದೆ. ಆದರೆ ನಮ್ಮ ಜೀವರಕ್ಷಣೆ ಮುಖ್ಯ. ಬರಹದಲ್ಲೂ ಹಾಗೆಯೇ. ಜೀವವಲ್ಲದಿದ್ದರೂ ಮಾನ ಮುಖ್ಯ. (ಸಾಮಾಜಿಕ ಜಾಲತಾಣದ, ವಾಟ್ಸ್‌ಆ್ಯಪ್‌ನ ಈ ಯುಗದಲ್ಲಿ ಅಲ್ಲೂ ಜೀವಭಯವಿದ್ದೇ ಇದೆ!) ಅದರ ರಕ್ಷಣೆಗಾಗಿ ಯಾವುದೇ ಪ್ರಮೇಯವನ್ನು ಸರ್ವಜನಜನಿತವಾಗಿ ಹೇಳಲಾಗದು. ಸಿನೆಮಾವೊಂದು ಚೆನ್ನಾಗಿಲ್ಲ ಎಂದದ್ದಕ್ಕೆ ಕ್ರಿಮಿನಲ್ ದೂರು ಮತ್ತು ಬಂಧನದ ಜಗತ್ತಿನಲ್ಲಿ ನಾವಿದ್ದೇವೆಂಬದುನ್ನು ಮರೆಯಲಾಗದು. ‘ಫ್ಯಾಕ್ಟ್‌ಚೆಕ್’ ಎಂಬ ಸತ್ಯಾನ್ವೇಷಣೆಯ ಅಥವಾ ಆಳುವವರನ್ನು ತೀವ್ರವಾಗಿ ಟೀಕಿಸುವ ಜಿಜ್ಞಾಸುಗಳನ್ನಂತೂ ‘ಅರ್ಬನ್ ನಕ್ಸಲರು’ ಮತ್ತು ಕೆಲವೊಮ್ಮೆ ‘ದೇಶದ್ರೋಹಿಗಳು’ ಎಂದು ವರ್ಣಿಸಿ ಬಂಧಿಸುವ ಅಪರಪ್ರಯೋಗಕ್ಕೆ ಸಾಕ್ಷಾತ್ ಭಾರತ ಸರಕಾರವೇ ಹೊರಟಿದೆ!
ಅಪವಾದಗಳು ಇದ್ದೇ ಇರುತ್ತವೆ. ಆದ್ದರಿಂದ ಏನನ್ನಾದರೂ (ಅಂದರೆ ಏನಾದರೂ ಅಲ್ಲ!) ಹೇಳುವುದಾದರೆ ಯಾವುದೂ ಎಲ್ಲರಿಗೂ ಅನ್ವಯಿಸುವುದಿಲ್ಲವೆಂಬ ಯೋಜನೆ-ಯೋಜನೆಯೊಂದಿಗೇ ಹೇಳಬೇಕು. ಯುವಜನರೂ ಇದೇ ಮೌಲ್ಯಮಾಪನಕ್ಕೆ ಒಳಪಟ್ಟವರು.
ಪ್ರವಾಸಿತಾಣಗಳಲ್ಲಿ, ಮಾರುಕಟ್ಟೆಯ ಕಾಫಿ, ಊಟದ ಸ್ಥಾನಗಳಲ್ಲಿ ಮಾತ್ರವಲ್ಲ ರಸ್ತೆಗಳಲ್ಲಿಯೂ ಯುವಜನರ ಸಂಸ್ಕೃತಿ ಘನಘೋರವಾಗಿ ಪ್ರತಿಫಲಿಸುತ್ತದೆ. ಹಿಂದೆಲ್ಲಾ ಒಬ್ಬ ವ್ಯಕ್ತಿಯ ವೇಷಭೂಷಣವನ್ನು ನೋಡಿ ಆತನ ವೃತ್ತಿ-ವ್ಯಕ್ತಿತ್ವವನ್ನು ಊಹಿಸಬಹುದಿತ್ತು. ಅಧ್ಯಾಪಕರೆಂದರೆ ಸರಳವಾಗಿ, ಆದರೆ ಗಂಭೀರವಾಗಿ ಬಟ್ಟೆಧರಿಸುತ್ತಿದ್ದರು. ನೋಡಿದಾಗಲೇ ಇವರು ಬಹಳ ಮರ್ಯಾದಸ್ತರು ಎಂದು ಹೇಳುವಂತಿತ್ತು. ಬ್ಯಾಂಕು, ಮತ್ತಿತರ ಸಾರ್ವಜನಿಕ ಕಚೇರಿಯಲ್ಲಿರುವವರೂ ನ್ಯಾಯಾಧೀಶ, ವಕೀಲ, ವೈದ್ಯ ಮುಂತಾದ ಸಮಾಜೋಪಕಾರಿಯೆಂದುಕೊಳ್ಳುವ ವೃತ್ತಿಪರರೂ ಅವರೊಂದಿಗೆ ದುಡಿಯುವವರೂ ಗೌರವವಾಗಿ ಪಾಶ್ಚಾತ್ಯ ಇಲ್ಲವೇ ಪೌರಾತ್ಯ ಸಂಪ್ರದಾಯದ ಬಟ್ಟೆ ಹಾಕುತ್ತಿದ್ದರು. ಅವುಗಳಲ್ಲಿ ಒಂದು ರೀತಿಯ ಶಿಸ್ತು ಎದ್ದು ಕಾಣುತ್ತಿತ್ತು. ಕ್ರಿಕೆಟ್, ಟೆನಿಸ್ ಮತ್ತ್ತಿತರ ಕ್ರೀಡೆಗಳಲ್ಲಿ ಸಮವಸ್ತ್ರಗಳು ಯಾವುದೇ ಬಣ್ಣವಿರಲಿ ಸರಳವಾಗಿ, ಶುಭ್ರವಾಗಿ ಕಾಣುತ್ತಿದ್ದವು.
ಒಂದು ತಲೆಮಾರಿನಲ್ಲಿ ಎಷ್ಟೊಂದು ಬದಲಾವಣೆಯಯಾಗಿದೆಯೆಂದು ಹಿರಿಯರು ತಲೆತುರಿಸಿಕೊಳ್ಳುವುದನ್ನು ಕಾಣುತ್ತೇವೆ. ಆದರೆ ಕಳೆದ ತಲೆಮಾರಿನಲ್ಲೇ ಕೊಂಚ ಬದಲಾವಣೆಯಾಗಿತ್ತು. ಬುದ್ಧಿವಂತರೆನ್ನಿಸಿ ಕೊಂಡವರು, ಕಲಾವಿದರು, ತಾವು ಸಮಾಜದ ಮುಖ್ಯವಾಹಿನಿಗೆ ಸೇರಿದವರಲ್ಲವೆಂದೋ, ಸಮಾಜದಿಂದ ಭಿನ್ನವಾಗಿರಬೇಕೆಂದೋ ಯಾಕೆ ಅಂದುಕೊಂಡರೋ ಗೊತ್ತಿಲ್ಲ, ವೇಷಭೂಷಣ, ವರ್ತನೆ, ಹವ್ಯಾಸ, ಚಟ ಇವುಗಳಲ್ಲಿ ಗುಂಪಿನಿಂದ ಪ್ರತ್ಯೇಕಿಸಿಕೊಂಡರು. ಮುಂದಿನ ಜನಾಂಗದ ಪ್ರಮೇಯದಲ್ಲಿ ವಿಜ್ಞಾನಿಗಳು (ಬಕ್ಕತಲೆಯವರಲ್ಲದಿದ್ದರೆ) ವಿಪರೀತ ಮತ್ತು ಅಸ್ತವ್ಯಸ್ತ ತಲೆಕೂದಲು, ಗಡ್ಡ ಇವನ್ನು ತಮ್ಮ ವ್ಯಕ್ತಿತ್ವದ ಫಲಕವಾಗಿಸಿಕೊಂಡದ್ದುಂಟು. ಸರಕಾರೀ ಅಧಿಕಾರಿಗಳು ಮಾತ್ರ ಈಗಲೂ (ಅನಿವಾರ್ಯವಾಗಿ) ಬ್ರಿಟಷ್ ಬಳುವಳಿಯ ವೇಷ ತೊಡುತ್ತಾರೆ. ಅವರಲ್ಲೂ ತೀರ ಉನ್ನತ ಹುದ್ದೆಗೆ ಏರಿದವರು/ಸೇರಿದವರು ಸರಳತೆಯ ಹೆಸರಿನಲ್ಲಿ ವಿಚಿತ್ರ ವೇಷವನ್ನು ತೊಡುತ್ತಾರೆ. ಅದು ಉಡುಪೋ ತೊಡುಪೋ ತಿಳಿಯುವುದಿಲ್ಲ. ಅಧ್ಯಾಪಕರು, ವೈದ್ಯರು, ಅನಿವಾರ್ಯವಲ್ಲದ ಸಂದರ್ಭದಲ್ಲಿ ಸಾಮಾನ್ಯರಿಗಿಂತ ಸಾಮಾನ್ಯರಂತೆ ಕಾಣಬಹುದಾದ ತವಕದಲ್ಲಿ ಅಸ್ತವ್ಯಸ್ತ ವೇಷದಲ್ಲಿರುವುದುಂಟು. ನ್ಯಾಯಾಲಯಗಳಲ್ಲಿ ಕರಿಕೋಟಿನ ಸಮವಸ್ತ್ರ ಕಡ್ಡಾಯವಾಗಿರುವುದರಿಂದ ವಕೀಲರೇನೋ ಶಿಸ್ತಿನವರಂತೆ ಕಾಣಿಸುತ್ತಾರೆ. ಹೊರಗಿನ ಪ್ರಪಂಚ/ಸಮಾಜದಲ್ಲಿ ಅವರ ವರ್ತನೆಯೂ ಚರ್ಚೆಗೊಳಗಾಗುತ್ತಿದೆ. ಮನೆಯೊಳಗೆ ಧರಿಸುವ ಹವಾಯಿ ಪಾದರಕ್ಷೆಗಳನ್ನು ಧರಿಸಿ ಜೀನ್ಸ್‌ಪ್ಯಾಂಟ್-ಟೀಷರ್ಟ್ (ಈಚೆಗೆ ‘ಹಾಫ್‌ಪ್ಯಾಂಟ್’ ಅಥವಾ ‘ಬರ್ಮುಡಾ’) ಧರಿಸಿ ಪೂಜಾಸ್ಥಾನವೂ ಸೇರಿದಂತೆ ಎಲ್ಲೆಡೆ ಪಯಣಿಸುವ ಆಧುನಿಕರು ಇಂದಿನ ನಾಗರಿಕರು. ನಾವು ಏನೇ ಧರಿಸಿದರೂ ನೀವು ನಿಮ್ಮ ಮನೋನಿಯಂತ್ರಣವನ್ನು ಕಳೆದುಕೊಳ್ಳಬೇಡಿ ಎಂದು ಮಹಿಳಾ ವಿಮೋಚನಾ ಧುರೀಣರು ಹೇಳುವ ಹೊತ್ತಿಗೆ ಇದನ್ನು ನಿರ್ಲಕ್ಷಿಸಿದವರಂತೆ ನಡೆದುಕೊಳ್ಳುವ ಅನಾಗರಿಕ ಜಂತುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬತ್ತಲಾದರೂ ಬಯಲು ಸಿಕ್ಕುತ್ತಿಲ್ಲ. ಆದರೆ ಎಲ್ಲದಕ್ಕೂ ಪರರಿಗೆ ಪರೀಕ್ಷೆಯಾಗುವ ಹಂತದವರೆಗೆ ಮಿತಿಮೀರಬೇಡಿ ಎಂದು ಹೇಳುವವರಿಲ್ಲ. ಬಟ್ಟೆಗೆ ಬೀಳುವ ಕಲೆಗೆ ಹೆದರಿ ಜಾಗ್ರತೆಯಿರುವಂತೆ ನಡತೆಯ ಪರಿಧಿಯನ್ನು ಮಿತಿಗೊಳಿಸಬೇಕೆಂದು ಸಾಧುಸಂತರೂ ಹೇಳುವುದಿಲ್ಲ; ಇನ್ನು ಲೌಕಿಕರು ಏನು ಏಕೆ ಹೇಳುತ್ತಾರೆ?
ಶಿಷ್ಯಂಗೆ ವಂದಿಸಿ ಪಾಠ ಹೇಳುವ ಕಾಲವನ್ನು ಅಲ್ಲಮಪ್ರಭು ಎಂದೋ ಗುರುತಿಸಿದ್ದಾರೆೆ. ಆಚಾರವಿಲ್ಲದ ನಾಲಿಗೆಯ ಬಗ್ಗೆ, ಉದರವೈರಾಗ್ಯದ ಬಗ್ಗೆ ಪುರಂದರದಾಸರು ಹಾಡಿದ್ದಾರೆ. ಇಂದು ವಿದ್ಯಾರ್ಥಿಯ ಮೇಲೆ ಮುನಿಸಿಕೊಂಡ ಶಿಕ್ಷಕರ ಕುರಿತು ದೂರು ಹೇಳುವ ಕಾಲ ಬಂದಿದೆ. ಯಾರು ಸರಿ, ಯಾರು ತಪ್ಪು ಎಂಬುದು ಪ್ರಸ್ತುತವಲ್ಲ. ಬದಲಿಗೆ ಈ ಹಂತಕ್ಕೆ ಸಮಾಜವನ್ನು ಕೊಂಡೊಯ್ದ ಕಾಲವೈಚಿತ್ರ್ಯ ಯಾವುದು ಎಂಬ ಬಗ್ಗೆ ಸಂಶೋಧನೆ, ಅಧ್ಯಯನ ನಡೆಯಬೇಕಾಗಿದೆ. ವಯಸ್ಸಾಗುವುದು, ಪ್ರೌಢತೆ ಬರುವುದು ಪಕ್ವವಾಗುವುದಕ್ಕೆ. ಅಜ್ಞಾನ, ಅಹಂಕಾರವನ್ನು ವರ್ಧಿಸುವುದಕ್ಕಲ್ಲ.
ಶಿಕ್ಷಣವು ಮನುಷ್ಯನನ್ನು ನಾಗರಿಕನನ್ನಾಗಿ, ಸುಸಂಸ್ಕೃತನನ್ನಾಗಿ ಮಾಡುವುದೆಂಬ ನಂಬಿಕೆಯಿತ್ತು. ಒಂದು ಡಿಗ್ರಿ ಸಂಪಾದಿಸಿದರೆ ಅದು ಉದ್ಯೋಗಕ್ಕೆ ರಹದಾರಿ ಪಡೆದಂತೆ ಎಂದು ಆಶಿಸಲಾಗಿತ್ತು. ಆದರೆ ಡಿಗ್ರಿಗಳು ಉಷ್ಣತಾಮಾಪಕದಂತೆ ಏರುತ್ತಲೇ ಇದ್ದರೂ ವಿವೇಕ ಉದಿಸುವುದೇ ಇಲ್ಲ. ವಿಜ್ಞಾನಶಿಕ್ಷಣದಲ್ಲಿ ಆ್ಯಸಿಡ್, ಹರಿತವಾದ ಕೆಲವು ಉಪಕರಣಗಳು ಪ್ರಯೋಗಾಲಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಅವೀಗ ಶಾಲಾದಿನದ ಸೇಡಿನ ಪ್ರದರ್ಶನಕ್ಕೆ ಸುಲಭ ಸಾಧನಗಳಾಗುತ್ತಿವೆ. ಹಿಂದೆ ಶಾಲಾಕಾಲೇಜುಗಳಲ್ಲಿ ಧೂಮಪಾನವೇ ಮಹಾಪಾಪವೆಂದು ತಿಳಿವಳಿಕೆ ನೀಡಲಾಗುತ್ತಿತ್ತು. ಇಂದು ಅದನ್ನಷ್ಟೇ ಅಲ್ಲ, ಮದ್ಯಪಾನವನ್ನೂ ದಾಟಿ ಡ್ರಗ್‌ಸೇವನೆಯೆಂಬುದು ಪಠ್ಯಪುಸ್ತಕದ ಸ್ಥಾನವನ್ನು ಆಕ್ರಮಿಸುತ್ತಿದೆ. ಸಿನೆಮಾಗಳಲ್ಲಿ ಯಾವುದನ್ನು ಸೃಜನಶೀಲ ಮಸಾಲಾ ನಿರ್ದೇಶಕರು ಆವಿಷ್ಕರಿಸಿದರೋ ಅದೀಗ ಶಿಕ್ಷಣದ ಸೈತಾನಗಿರಿಯ ಪಠ್ಯವಾಗುತ್ತಿದೆ. ಯೇಸುವಿಗೆ ಮಾದರಿಯಾಗಿ ನಿಲ್ಲಬೇಕಾದವನು ಡ್ರಾಕುಲಾದ ಮಾದರಿಯಾಗುವುದು ಸುಲಭವಾಗುತ್ತಿದೆ.
ಇಂದಿನ ವ್ಯಾವಹಾರಿಕ ಜಗತ್ತನ್ನು ಮಾತ್ರವಲ್ಲ, ಧರ್ಮ, ಸಂಸ್ಕೃತಿಯ ಆವಾಸಸ್ಥಾನಗಳನ್ನು ಗಮನಿಸಿ. ಎಲ್ಲರೂ ಬೋಧಿಸುವವರೇ. ಸಂದೇಶಗಳು ಎಲ್ಲೆಲ್ಲೂ ಇವೆ. ಆದರೆ ಆಚರಣೆಗೆ ಬಲಿಪಶುಗಳು ಬೇಕಲ್ಲ! ಅದರ ಅಭಾವವಿದೆ. ಆಧುನಿಕ ಜಗತ್ತಿನಲ್ಲಿ ಒಳ್ಳೆಯ ನಡತೆಗೆ ಹೊಸ ವಿಧಾನಗಳಿಲ್ಲ. ಮೂರ್ತ ಬದುಕಿನ ಇತರ ಪಾತಳಿಗಳಲ್ಲಿ ಹೊಸಹೊಸ ಸಂಶೋಧನೆಗಳು ನಡೆದಂತೆಲ್ಲ ಹೊಸ ವೈಜ್ಞಾನಿಕ ತಳಿಗಳು ಸೃಷ್ಟಿಯಾದಂತೆಲ್ಲ ಅದೇ ಪ್ರಮಾಣದಲ್ಲಿ ಅಥವಾ ಅದನ್ನು ಮೀರಿಸುವ ಪ್ರಮಾಣದಲ್ಲಿ ಹೊಸ ತಲೆಮಾರಿನ ಕೆಡುಕುಗಳು ಉತ್ಪತ್ತಿಯಾಗುತ್ತಿವೆ. ‘ನಿರ್ಭಯಾ’ ಪ್ರಕರಣ ಸಮಸ್ತ/ಸಮಗ್ರ ವರ್ತಮಾನಕ್ಕೇ ಪಾಠವಾಗಬಹುದೆಂದು ತಿಳಿದವರು ಈಗ ಭ್ರಮನಿರಸನಿಗಳಾಗುತ್ತಿದ್ದಾರೆ. ಯಾವೊಬ್ಬ ಭಯೋತ್ಪಾದಕನಿಗೆ, ಕೇಡಿಗನಿಗೆ ಆದ, ಆಗಬಹುದಾದ ದಂಡನೆ ಭವಿಷ್ಯಕ್ಕೆ ಪಾಠ ಹೇಳಬಹುದೆಂದು ನಂಬಲಾರದ ಸ್ಥಿತಿ ಒದಗಿದೆ. ಈಗ ಕಾನೂನಿಗೆ ಮಾನ್ಯತೆಯಿಲ್ಲ. ಎಲ್ಲರೂ ಕಾನೂನಿನ ಪಾಲಕರಾಗಬೇಕೆಂಬ ನಂಬಿಕೆ ಸತ್ತು ಪ್ರತಿಯೊಬ್ಬನೂ ತನ್ನದೇ ಆದ ಮತ್ತು ತನಗೆ, ತನ್ನ ಬಳಗಕ್ಕೆ ಮತ್ತು ತಾನು ನಂಬಿದ ಸಿದ್ಧಾಂತಗಳಿಗೆ ಅನುಕೂಲವಾದ ಕಾನೂನಿನ ಪಾಲಕರಾಗುತ್ತಿದ್ದಾನೆ. ಭರವಸೆ ಮೂಡಬೇಕಾದ ತಾರುಣ್ಯದಲ್ಲಿ ಭಯಮೂಡಿಸುವ ಶಕ್ತಿ ಹೆಚ್ಚುತ್ತಿದೆ. ಶಾಲಾಕಾಲೇಜುಗಳು ಕೆಲವು ದಶಕಗಳಿಂದ ಅಲ್ಲಿನ ಸಾಂಸ್ಥಿಕ ಚುನಾವಣಾ ಸಮಯದಲ್ಲಿ ಶಕ್ತಿಪ್ರದರ್ಶನಗಳ ಆಖಾಡಗಳಾಗುತ್ತಿದ್ದು ಉಂಟು. ಈಗ ಅದು ಸಾರ್ವತ್ರಿಕ ಚುನಾವಣಾ ಕೇಂದ್ರವಾಗುತ್ತಿದೆ. ಶಿಕ್ಷಣಕೇಂದ್ರಗಳಿಗೆ ರಾಜಕಾರಣಿಗಳನ್ನು ಆಹ್ವಾನಿಸುವ ಪದ್ಧತಿ ಸರಿಯಲ್ಲವೆಂದಿದ್ದಾಗಲೂ ತಮ್ಮ ಅಗತ್ಯಗಳಿಗೆ ಆಹ್ವಾನಿಸಲಾಗುತ್ತಿತ್ತು. ಆದರೆ ಈಗ ರಾಜಕಾರಣಿಗಳ ಜಾಗದಲ್ಲಿ ರಾಜಕಾರಣ-ಪ್ರಾಯೋಜಿತ ರೌಡಿಗುಂಪುಗಳು ಪ್ರವೇಶಿಸಿ ತಕ್ಷಣದ ಶಿಕ್ಷಣರಂಗದ ಬದಲು ರಣರಂಗವನ್ನು ಸೃಷ್ಟಿಸುತ್ತಿವೆ. ದಿಲ್ಲಿಯ ಜೆಎನ್‌ಯುವಿನಲ್ಲಿ ಇಂತಹ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು. ವಿದ್ಯಾರ್ಥಿಗಳಿಗೆ, ಯುವಸಮುದಾಯಕ್ಕೆ ಒಳ್ಳೆಯ ಪಾಠ ಹೇಳುತ್ತಾರೆಂದು ನಂಬಲಾಗಿದ್ದ ಶಿಕ್ಷಕ ಸಮುದಾಯವು ತಮ್ಮ ಅನುಕೂಲ ಸಿದ್ಧಾಂತಗಳನ್ನು ಹೇರುವುದಕ್ಕೂ, ತಮ್ಮ ಅಗತ್ಯಗಳ ಪೂರೈಕೆಗೂ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಹೊಸ ಶೋಷಣಾಪ್ರಯೋಗ ಮಾಡುವುದನ್ನೂ ಕಾಣುತ್ತೇವೆ.
ರಾಜಕೀಯಕ್ಕೆ ತರುಣ ಸಮುದಾಯ ಹೋಗಬೇಕು, ನಿಜ. ಆದರೆ ಅದಕ್ಕೆ ಮೆಟ್ಟಿಲು ಹಿಂಸೆಯಲ್ಲ, ಗೂಂಡಾ ಪ್ರವೃತ್ತಿಯಲ್ಲ. ಮೊದಲು ತಲೆಬೆಳೆಸಿಕೊಂಡು ಆನಂತರ ಇತರ ಅನುಕೂಲಗಳ, ಕ್ಷೇತ್ರಗಳ ಕಡೆಗೆ ಗಮನ ಹರಿಸುವುದು ಒಳ್ಳೆಯ ನಾಗರಿಕತೆಯ ವಿಕಾಸದ ಸಮರ್ಥ, ಪರಿಣಾಮಕಾರೀ ಹೆಜ್ಜೆ. ಆದರೆ ಇಂದು ಆರ್ಥಿಕ ಬಲ, ತೋಳ್ಬಲ ಇವು ಎಳೆಯ ವಯಸ್ಸಿನಲ್ಲೇ ತರುಣರ ಮುಂದಿನ ಹಾದಿಯಾಗುತ್ತಿದೆ. ಅದರಲ್ಲೂ ನಮ್ಮ ರಾಜಕೀಯ ನಾಯಕರ, ಹಿರಿಯ ಅಧಿಕಾರಿಗಳ ನರ್ಸರಿಯಲ್ಲಿ ಬೆಳೆಯುವ ಮಕ್ಕಳು ಬಹಳ ಸಲ ಉದ್ಧಟತನದ ಸಾಕಾರ ಮತ್ತು ಪ್ರಮಾಣಿತ ಮೂರ್ತಿಗಳಾಗುತ್ತಾರೆ. ನಾಯಕರನ್ನು ಒಲಿಸಿಕೊಳ್ಳುವ ಸುಲಭಮಾರ್ಗವೆಂದರೆ ಅವರ ಮಕ್ಕಳನ್ನು ಓಲೈಸುವುದು. ಅವರಲ್ಲಿಲ್ಲದ ಜಾಣತನವನ್ನು ಅವರಿಗೆ ಆರೋಪಿಸುವುದು. ತಂದೆಯ ಚುನಾವಣೆಯಲ್ಲಿ ಭಾಷಣ ಮಾಡುವ ಮಗನು ತನ್ನ ತಂದೆಯ ವಯಸ್ಸಿನ ಪ್ರತಿಸ್ಪರ್ಧಿಗಳನ್ನು ವಾಚಾಮಗೋಚರ ಬೈಯುವುದನ್ನು ಕಾಣುತ್ತೇವೆ; ಕೇಳುತ್ತೇವೆ. ಅವರಿಗೆ ಒಳ್ಳೆಯ ಆದರ್ಶಗಳಿಲ್ಲದಿರುವಾಗ ಅವರು ಇತರರಿಗೆ ಆದರ್ಶಪ್ರಾಯರಾಗುತ್ತಾರೆಂದು ಹೇಗೆೆ ನಂಬಬೇಕು?
ಬಡತನ ಮತ್ತು ನಿರುದ್ಯೋಗ ಈ ನಿಟ್ಟಿನಲ್ಲಿ ಪಾಶವೀ ಕೃತ್ಯಗಳನ್ನು ಜೋಡಿಸಿಕೊಡುವ ತಂತ್ರವಾಗುತ್ತಿದೆ. ಹಣಮಾಡುವವರು ಒಳ್ಳೆಯ ದಾರಿಯನ್ನು ಹಿಡಿಯದಿದ್ದಾಗ ಎಳೆಯ ಮನಸ್ಸುಗಳು ಸುಲಭದ ದಾರಿಯನ್ನು ಹಿಡಿಯುವ ಸುಖೀಕನಸನ್ನು ಕಾಣುತ್ತಿವೆ. ಭಗವಂತನ ದ್ವಾರಪಾಲಕರಾದ ಜಯವಿಜಯರೇ ಮೋಕ್ಷಕ್ಕಾಗಿ ಮೂರುಜನ್ಮಗಳನ್ನು ಆರಿಸಿಕೊಂಡರಲ್ಲ! ದೇವರು ಅರ್ಥಾತ್ ಒಳ್ಳೆಯದರ ವೈರವಾದರೂ ಪರವಾಗಿಲ್ಲ ಬೇಗ ವಾಪಸಾಗೋಣವೆಂಬ ಹೆಬ್ಬಯಕೆ ಈಗ ವೈರಕ್ಕೆ ಸೀಮಿತವಾಗಿ ಸ್ವರ್ಗಕ್ಕೆ ವಾಪಾಸಾಗುವ ಹಪಾಹಪಿಯನ್ನು ಮರೆಸಬಲ್ಲ ಲೌಕಿಕಕ್ಕೆ ಮರಳಿದೆ. ಈಗ ಮೂರುಜನ್ಮಗಳು ಹೌದು; ಆದರೆ ಅವು ಮೋಕ್ಷಕ್ಕಲ್ಲ; ಬರೀ ಭಂಡಬದುಕಿಗೆ. ಅವರನ್ನು ಒಳ್ಳೆಯ ಧಾಮಕ್ಕೆ ಕರೆಸಬಲ್ಲ ಶಕ್ತಿ ದೇವರಿಗೂ ಇಲ್ಲದಾಗಿದೆ.
ನಾವು ಇಷ್ಟಪಡಲಿ, ಪಡದಿರಲಿ, ಇಂದಿನ ಮಕ್ಕಳು ಮುಂದಿನ ಜನಾಂಗ ಹೌದು; ಭವಿಷ್ಯವೂ ಹೌದು. ಆದರೆ ಅವರೇ ನಮ್ಮ ಭವಿಷ್ಯವೆಂದು ಹೇಳುವಾಗ ಎಂತಹ ಭವಿಷ್ಯ ಅವರನ್ನು ಕಾದಿದೆ ಮತ್ತು ಎಂತಹ ಭವಿಷ್ಯವನ್ನು ಅವರಿಗೆ ನಿರ್ಮಿಸಿಕೊಡಬೇಕೆಂದು ನಿರ್ಧರಿಸದಿದ್ದರೆ ಕಾಲವೇ ಅದಕ್ಕೆ ಉತ್ತರಕೊಡುತ್ತದೆ. ಅದು ಬದುಕನ್ನು ಅಣಕಿಸುವ ರೀತಿ ಬಹು ವಿಚಿತ್ರ. ಆ ವಿಚಿತ್ರಕ್ಕೆ ನಮಿಸುವುದು ಅನಿವಾರ್ಯವಾಗಬಹುದು.