ಕಾಡು-ನಾಡಿನ ಸಂಘರ್ಷದ ಹಾಲಾಹಲ ‘ಕಾಲಾಪಾನಿ’
‘ಕಾಲಾ ಪಾನಿ’ ಎಂದಾಗ ತಕ್ಷಣ ಸ್ಮತಿ ಪಟಲದೆದುರು ಬ್ರಿಟಿಷರ ಕಾಲದ ‘ಕಪ್ಪು ನೀರಿನ ಶಿಕ್ಷೆ’ ಬಂದು ನಿಲ್ಲುತ್ತದೆ. ಜೊತೆ ಜೊತೆಗೇ ಪ್ರಿಯದರ್ಶನ್ ನಿರ್ದೇಶನದ, ಮೋಹನ್‌ಲಾಲ್ ಅಭಿನಯದ ‘ಕಾಲಾಪಾನಿ’ ಚಿತ್ರದ ತುಣುಕುಗಳೂ ಸರಿದು ಹೋಗುತ್ತವೆ. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ‘ಕಾಲಾಪಾನಿ’ ಮತ್ತೆ ಹೊಸದಾಗಿ ಹರಿದಿದೆ. ಅದೇ ಅಂಡಮಾನ್-ನಿಕೋಬಾರ್, ದಟ್ಟಕಾಡು, ಸುತ್ತುವರಿದ ನೀರು....ಇಡೀ ದ್ವೀಪವೇ ಜೈಲಾಗಿ ಪರಿವರ್ತನೆಗೊಂಡು ಇವುಗಳ ಮಧ್ಯೆ ದಿಗ್ಬಂಧನಕ್ಕೊಳಗಾದ ಲಕ್ಷಾಂತರ ಜನರು! ಸಮೀರ್ ಸಕ್ಸೇನಾ, ಅಮಿತ್ ಗೊಲಾನಿ ನಿರ್ದೇಶನದ ‘ಕಾಲಾಪಾನಿ’ ಸರಣಿ ಏಳು ಕಂತುಗಳನ್ನು ಒಳಗೊಂಡ ಥ್ರಿಲ್ಲರ್ ಕಥಾನಕ. ಕಾಡು-ಮನುಷ್ಯ, ನಾಗರಿಕತೆ-ಪ್ರಕೃತಿ, ನೀರು-ಭೂಮಿ, ಹಣ-ಮನುಷ್ಯತ್ವ ಇವುಗಳ ನಡುವಿನ ಸಂಘರ್ಷವನ್ನು ಈ ಏಳು ಕಂತುಗಳು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತವೆ.
ಅಂಡಮಾನ್ ನಿಕೋಬಾರ್ ಕುಖ್ಯಾತವಾಗಿರುವುದು ಅಲ್ಲಿನ ಪೋರ್ಟ್ ಬ್ಲೇರ್ ಜೈಲಿಗಾಗಿ. ಆದರೆ ಈ ಸರಣಿಯಲ್ಲಿ ನಿಗೂಢ ಸಾಂಕ್ರಾಮಿಕ ಕಾಯಿಲೆಯೊಂದು ಇಡೀ ದ್ವೀಪವನ್ನೇ ಜೈಲಾಗಿ ಪರಿವರ್ತಿಸುತ್ತದೆ. ಸಂಪೂರ್ಣ ದ್ವೀಪವನ್ನೇ ಸರಕಾರ ದಿಗ್ಬಂಧನದಲ್ಲಿಡುತ್ತದೆ. ಕಾರ್ಪೊರೇಟ್ ಉತ್ಸವದಲ್ಲಿ ಭಾಗಿಯಾಗಲು ಬಂದ ಸಾವಿರಾರು ಪ್ರವಾಸಿಗರು ಈ ದಿಗ್ಬಂಧನದಿಂದ ಪಾರಾಗಲು ನಡೆಸುವ ಹೋರಾಟವನ್ನು ಸರಣಿ ತೆರೆದಿಡುತ್ತಾ ಹೋಗುತ್ತದೆ. ಸರಣಿ ನೀರನ್ನು ಕೇಂದ್ರವಾಗಿಟ್ಟುಕೊಂಡಿದೆ. ಎಲ್ಲ ದಿಕ್ಕಿನಿಂದ ಆವರಿಸಿರುವ ನೀರು ಈ ದ್ವೀಪವೆಂಬ ಜೈಲಿನ ಮಹಾಗೋಡೆ. ಇದೇ ಸಂದರ್ಭದಲ್ಲಿ ದ್ವೀಪದ ಒಳಗೂ ನೀರು ಎನ್ನುವುದು ‘ಕಾಲ್-ಮೃತ್ಯು’ವಾಗಿ ಬದಲಾಗುತ್ತದೆ. ಕುಡಿಯುವ ನೀರೇ ಕಾಯಿಲೆ ಹರಡುವ ವಿಷವಾಗಿ ಪರಿವರ್ತನೆಗೊಂಡಿರುತ್ತದೆ. ನೀರಿನ ಮಧ್ಯದಲ್ಲೂ ನೀರಿಲ್ಲದೆ ಒದ್ದಾಡುವ ಸ್ಥಿತಿ. ಮನುಷ್ಯ ಸಂಬಂಧಗಳಿಗೆ ಪರೀಕ್ಷೆಯ ಕಾಲ. ಡಾ. ಸೌಧಾಮಿನಿ ಸಿಂಗ್(ಮೋನಾ ಸಿಂಗ್)ನಿಂದ ಬಿಚ್ಚಿಕೊಳ್ಳುವ ಕಾಯಿಲೆಯ ರಹಸ್ಯ ಸ್ವಾತಂತ್ರ್ಯ ಪೂರ್ವದ ಕಾಲದಿಂದ ಇಂದಿನ ವರೆಗಿನ ದ್ವೀಪದೊಳಗಿರುವ ಹತ್ತುಹಲವು ಸಂಘರ್ಷಗಳ ಘಟ್ಟಗಳನ್ನು ಹೇಳುತ್ತದೆ. ನಾಗರಿಕರು ಎನಿಸಿಕೊಂಡ ಜನರು ಇಲ್ಲಿನ ಕಾಡು ಮತ್ತು ಆದಿವಾಸಿಗಳ ಮೇಲೆ ನಡೆಸಿದ ಕ್ರೌರ್ಯಗಳನ್ನು ಜೊತೆ ಜೊತೆಯಾಗಿ ಬಿಚ್ಚಿಡುತ್ತದೆ.
ಲೆಫ್ಟಿನೆಂಟ್ ಜನರಲ್ ಝಿಬ್ರಾನ್ ಖಾದ್ರಿ(ಅಶುತೋಶ್ ಗೋವಾರಿಕರ್) ಯ ನೇತೃತ್ವದಲ್ಲಿ ವೈರಸ್ ವಿರುದ್ಧ ಆಡಳಿತ ಯುದ್ಧಕ್ಕಿಳಿದರೆ, ಬೇರೆ ಬೇರೆ ಜೋಡಿಗಳು ತಮ್ಮ ಜೀವವನ್ನು ಉಳಿಸಿಕೊಳ್ಳುವುದರ ಜೊತೆಗೆ ಬದುಕನ್ನು, ಸಂಬಂಧಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತವೆ. ಹಲವರು ವಿಫಲರಾಗಿ ಜೀವತೆರಬೇಕಾಗುತ್ತದೆ. ಕೆಲವರು ಈ ಪರೀಕ್ಷೆಯಲ್ಲಿ ಗೆಲ್ಲುತ್ತಾರೆ. ವೈರಸ್‌ನಷ್ಟೇ ವಿಷಕಾರಿಯಾಗಿರುವ ಭ್ರಷ್ಟಾಚಾರ, ಮನುಷ್ಯನ ಲಾಭಬಡುಕತನ ಇವೆಲ್ಲದರ ದುರಂತಗಳನ್ನು ಸರಣಿ ವೇಗವಾಗಿ ನಿರೂಪಿಸುತ್ತಾ ಸಾಗುತ್ತದೆ. ಮಾಡದ ತಪ್ಪಿಗಾಗಿ ಅಂಡಮಾನ್ ನಿಕೋಬಾರ್‌ನಲ್ಲಿ ಸಿಲುಕಿಕೊಳ್ಳುವ ಎಸಿಪಿ ಖೇತನ್ ಇಲ್ಲಿಂದ ಪಾರಾಗುವುದಕ್ಕಾಗಿಯೇ ಕಾರ್ಪೊರೇಟ್ ವ್ಯವಸ್ಥೆಯೊಂದಿಗೆ ಕೈ ಜೋಡಿಸಿಕೊಂಡವನು. ಬಾಲ್ಯದಿಂದಲೇ ನರ್ಸ್ ಆಗುವ ಕನಸು ಕಂಡ ಜ್ಯೋತ್ಸ್ನಾ ಡೇ ಆ ಭಗ್ನ ಕನಸುಗಳಿಂದ ಜರ್ಜರಿತಳಾಗಿ ಕೆಲವು ದಿನಗಳಿಗಾಗಿ ದ್ವೀಪಕ್ಕೆ ಬಂದವಳು, ತನ್ನ ಭೂತ-ವರ್ತಮಾನದ ನಡುವೆ ಸಿಲುಕಿಕೊಂಡಿ ರುವವಳು. ದುರ್ಬಲ ಮನಸ್ಸಿನ ತಂದೆ ಸಂತೋಷ್ ಪ್ರೀತಿ ಪಾತ್ರ ಪತ್ನಿಯನ್ನು ಕಳೆದುಕೊಂಡು, ಕೈ ತಪ್ಪಿದ ಮಕ್ಕಳಿಗಾಗಿ ದ್ವೀಪದಲ್ಲಿ ಅಲೆದಾಡುತ್ತಿರುವವನು. ಹೀಗೆ ತಂದೆ-ಮಗ, ಪತಿ-ಪತ್ನಿ, ಗೆಳೆಯ-ಗೆಳತಿ ಮೊದಲಾದ ಸಂಬಂಧಗಳ ಗಟ್ಟಿತನವನ್ನು ‘ಕಾಲಾಪಾನಿ’ ನಿಕಷಕ್ಕೆ ಒಡ್ಡುತ್ತಾ ಹೋಗುತ್ತದೆ.
ಆಧುನಿಕ ಲಾಲಸೆಯ ಬದುಕಿನಲ್ಲಿ ಮೈಮರೆತಿರುವ ನಾವೆಲ್ಲರೂ ಒಂದಲ್ಲ ಒಂದು ದಿನ ಈ ‘ಕಾಲಾಪಾನಿ’ಯ ದಿಗ್ಬಂಧನಕ್ಕೆ ಒಳಗಾಗುವ ಅಪಾಯದ ಕುರಿತಂತೆ ಸರಣಿ ಎಚ್ಚರಿಸುತ್ತದೆ. ಮನುಷ್ಯನ ಎಲ್ಲ ಸ್ವಾರ್ಥಗಳ ಮೇಲೆ ಪ್ರಕೃತಿ ಕಟ್ಟಕಡೆಗೆ ಜಯ ಸಾಧಿಸಿಯೇ ಸಾಧಿಸುತ್ತದೆ ಎನ್ನುವುದನ್ನೂ ಘೋಷಿಸುತ್ತದೆ. ಅಂಡಮಾನ್ ನಿಕೋಬಾರ್ ದ್ವೀಪದ ರುದ್ರರಮಣೀಯತೆಯನ್ನು ಕಟ್ಟಿಕೊಡುವಲ್ಲಿ ಛಾಯಾಗ್ರಹಣ ಯಶಸ್ವಿಯಾಗಿದೆ. ಕಾಡಿನ ನಿಗೂಢತೆ, ಮನುಷ್ಯನ ಆತಂಕ, ಭಯಗಳನ್ನು ಹಿಡಿದಿಡುವ ಸಂಗೀತ ಸರಣಿಯ ಲಯತಪ್ಪದಂತೆ ನೋಡಿಕೊಂಡಿದೆ.