ಅಸಂಖ್ಯ ಅನುಭವಗಳಿಗೆ ಅಕ್ಷರದ ರೂಪ
ಈ ಹೊತ್ತಿನ ಹೊತ್ತಿಗೆ
- ಮೀನಾಕ್ಷಿ ಬಾಳಿ, ಕಲಬುರಗಿ
ಸುರಯ್ಯಾ ಬೇಗಂ ಎಲ್. ಹಾದಿಮನಿಯವರು ವೃತ್ತಿಯಿಂದ ಶಿಕ್ಷಕಿಯಾದರೂ ಪ್ರವೃತ್ತಿಯಿಂದ ಕವಯಿತ್ರಿ, ಕನ್ನಡ ಭಾಷೆಯ ಮೇಲೆ ಹಿಡಿತ ಹೊಂದಿರುವ ಅವರಿಗೆ ಕವಿತೆ ಅಂದರೆ ಜೀವ ಸಖ್ಯದ ನಂಟು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾಗಿ ಹಾಗೂ ಯಾದಗಿರಿ ಜಿಲ್ಲಾ ಸಮನ್ವಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಧಾವಂತದಲ್ಲಿಯೂ ಕಾವ್ಯವನ್ನು ಕಾಪಿಟ್ಟುಕೊಂಡು ಬಂದಿದ್ದಾರೆ ಎಂಬುದೇ ಖುಷಿಯ ಸಂಗತಿ.
ಸಂಸಾರ ಮತ್ತು ನೌಕರಿ ಎರಡೂ ತೂಗಿಸಿಕೊಂಡು ಹೋಗುವ ಅನಿವಾರ್ಯತೆಯಲ್ಲಿ ಅಸಂಖ್ಯ ಮಹಿಳೆಯರ ಸುಪ್ತ ಪ್ರತಿಭೆಯು ವ್ಯಕ್ತವಾಗುವ ಅವಕಾಶವಿಲ್ಲದೆ ಒಳಗೊಳಗೆ ಮುರುಟಿಯೇ ಹೋದದ್ದು ಉಂಟು. ಕೆಲವೊಂದು ಮಹಿಳೆಯರು ಮಾತ್ರ ಇಂಥ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಛಲ ಬಿಡದೆ ತಮ್ಮ ಪ್ರತಿಭೆಯನ್ನು ಸಾಯಲು ಬಿಡದೆ ಪೋಷಿಸಿಕೊಂಡು ಬರುತ್ತಿದ್ದಾರೆ. ಅಂಥವರ ಸಾಲಿನಲ್ಲಿ ಸುರಯ್ಯಾ ಎದ್ದು ಕಾಣಿಸುತ್ತಿದ್ದಾರೆ.
ಉತ್ತರ ಕರ್ನಾಟಕದ ಜೀವನದಿ ಭೀಮೆಯ ಒಡಲಲ್ಲಿ ಹರಡಿಕೊಂಡಿರುವ ದೇವಣಗಾಂವದ ಮಸಾರಿ ಮಣ್ಣಿನ ಘಮಲು ಅವರ ಕಾವ್ಯಗಳಲ್ಲಿ ಹರಡಿಕೊಂಡಿದೆ. ಬಾಳ ಬಟ್ಟೆಯಲ್ಲಿ ಎದುರಾಗುವ ಅಸಂಖ್ಯ ಅನುಭವಗಳಿಗೆ ಅಕ್ಷರದ ಆಕಾರ ಕೊಟ್ಟು ಕಾವ್ಯವಾಗಿಸುವ ಪ್ರಯತ್ನ ಮಾಡಿದ್ದಾರೆ. ಹೀಗೆ ಸಾಂದರ್ಭಿಕವಾಗಿ ಬರೆದ ಕವನಗಳನ್ನು ಸಂಕಲನದಲ್ಲಿ ಪೋಣಿಸಿ ಪ್ರಕಟಿಸುತ್ತಿದ್ದಾರೆ. ಹಲವಾರು ವಿಷಯಗಳು ಇಲ್ಲಿ ಎಡೆ ಪಡೆದುಕೊಂಡಿವೆ. ಜೀವನವನ್ನು ಅರ್ಥಪೂರ್ಣವಾಗಿಸುವ ಪ್ರೀತಿ, ಒಲವು, ಪ್ರಾಮಾಣಿಕತೆ, ಅಂತರಂಗ, ಬಹಿರಂಗ ಶುದ್ಧಿ, ಆತ್ಮಾವಲೋಕನ, ಭರವಸೆ ಇತ್ಯಾದಿಗಳನ್ನು ಕುರಿತು ತಮ್ಮದೇ ನಂಬಿಕೆಗಳನ್ನು ವ್ಯಕ್ತಿಸಿದ್ದಾರೆ. ಸುರಯ್ಯಾ ಅವರದು ಸಮದೃಷ್ಟಿ. ಹೀಗಾಗಿ ಎಲ್ಲೆಲ್ಲೂ ರುಜುಮಾರ್ಗವನ್ನು ಪುರಷ್ಕರಿಸುತ್ತಾರೆ. ಒಟ್ಟಾರೆಯಾಗಿ ಬರೆಯಬೇಕೆಂಬ ಅವರ ವಾಂಛೆೆಯು ಸಕಾರಾತ್ಮಕವಾದುದೇ. ಕಾವ್ಯ ಮನುಷ್ಯರನ್ನು ಮೃದುವಾಗಿಸುತ್ತದೆ. ಭಾವಜೀವಿಯಾಗಿಸುತ್ತದೆ. ಜೀವ ಪ್ರೀತಿ ಉಕ್ಕಿಸುತ್ತದೆ. ಈ ಎಲ್ಲವುಗಳು ಆವಿರ್ಭವಿಸದಿದ್ದರೆ ಕಾವ್ಯ ಕೇವಲ ಅಕ್ಷರದ ಸರ್ಕಸ್ ಆದೀತು. ಸುರಯ್ಯಾ ಅವರು ಭಾವಜೀವಿಯೂ ಹೌದು, ಹೀಗಾಗಿ ಅವರ ಕವಿತೆಗಳಲ್ಲಿ ಭಾವದೀಪ್ತಿ ಪ್ರತಿಫಲಿಸಿದೆ. ಮುಂದಿನ ದಿನಗಳಲ್ಲಿ ಅವರಿಂದ ಇನ್ನೂ ಉತ್ಕೃಷ್ಟವಾದ ಮತ್ತು ಸಮೃದ್ಧವಾದ ಕಾವ್ಯಭೀಮೆ ಹರಿದು ಬರಲಿ.